ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗ (ಜುಹ್ದ್)

Last Updated 29 ಜುಲೈ 2015, 19:30 IST
ಅಕ್ಷರ ಗಾತ್ರ

‘ಲೌಕಿಕ ಮೋಹದ ತ್ಯಾಗ ಮನೋಭಾವನೆಯ ಮನುಷ್ಯನನ್ನು ಕಂಡಾಗ ಅವನ ಬಳಿ ಹೋಗಿ ಅವನ ಮಾತುಗಳನ್ನು ಕೇಳಿ, ಯಾಕೆಂದರೆ ಅವನಲ್ಲಿ ವಿವೇಕ, ಅನುಭವ, ಜ್ಞಾನ ತುಂಬಿರುತ್ತದೆ’ ಎಂದು ಪೈಗಂಬರರ ಹೇಳಿಕೆ ಇದೆ.

ತ್ಯಾಗದ ಸಂಬಂಧದಲ್ಲಿ ಸೂಫಿಗಳಲ್ಲಿ ಎರಡು ರೀತಿಯ ಅಭಿಪ್ರಾಯಗಳಿವೆ. ಒಂದನೆಯದು ಅಲ್ಲಾಹ ನಿಷೇಧಿಸಿದ ವಸ್ತುಗಳು ಮತ್ತು ವಿಷಯಗಳನ್ನು ತ್ಯಾಗ ಮಾಡುವುದು, ಇದು ಮೊದಲ ಅಗತ್ಯ. ಯಾಕೆಂದರೆ ನ್ಯಾಯ ಸಮ್ಮತವಾದುದನ್ನು ಹೊಂದಿರುವುದಕ್ಕೆ ಅಲ್ಲಾಹನ ಅನುಮತಿ ಇರುತ್ತದೆ. ದೇವರು ಒಬ್ಬಾತನಿಗೆ ನ್ಯಾಯಸಮ್ಮತವಾದ ರೀತಿಯಲ್ಲಿ ಸಂಪತ್ತನ್ನುಕರುಣಿಸಿದ್ದರೆ ಮತ್ತು ಇದಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮೂಲಕ ಅವನು ತೋರಿಸಿದ ಮಾರ್ಗದಲ್ಲಿ ವ್ಯಯಿಸುತ್ತಿದ್ದಾನೆಂದಲ್ಲಿ ಅದನ್ನು ತ್ಯಾಗ ಮಾಡಬೇಕಾಗಿಲ್ಲ.

ಯಾಕೆಂದರೆ ಅವನ ಅನುಮತಿಯಂತೆ ನಡೆದುಕೊಂಡಿದ್ದಾನೆ. ಇನ್ನೊಂದು ಅಭಿಪ್ರಾಯವೆಂದರೆ ನಿಷೇಧಿಸಲ್ಪಟ್ಟ ಮಾರ್ಗದಲ್ಲಿ ಗಳಿಸಿದ್ದನ್ನು ತ್ಯಾಗ ಮಾಡಲೇಬೇಕಾದದ್ದು ಅವನ ಕರ್ತವ್ಯ. ನ್ಯಾಯಸಮ್ಮತವಾಗಿ ಗಳಿಸಿದ್ದನ್ನು ತ್ಯಾಗ ಮಾಡುವುದು ಸದ್ಗುಣ. ಒಬ್ಬಾತನಿಗೆ ದೇವರು ಕನಿಷ್ಠ ಸಂಪತ್ತನ್ನು ಮಾತ್ರ ದಯಪಾಲಿಸಿದ್ದರೆ, ತನ್ನ ಪರಿಸ್ಥಿತಿಯನ್ನು ತಾಳ್ಮೆಯಿಂದ ಸಂಭಾಳಿಸಿಕೊಂಡಿದ್ದು ತನಗೆ ನೀಡಿದುದಕ್ಕಷ್ಟಕ್ಕೆ ತೃಪ್ತಿಪಟ್ಟುಕೊಂಡು ಕೃತಜ್ಞನಾಗಿರುವುದು, ಇನ್ನಷ್ಟು ಮತ್ತಷ್ಟು ಬೇಕೆಂದು ಆಸೆಪಡುವುದಕ್ಕಿಂತ ಉತ್ತಮವಾದದ್ದು.

ಲೋಕದಲ್ಲಿ ತನ್ನ ಅಗತ್ಯಕ್ಕಿಂತ ಹೆಚ್ಚಿಗೆ ಇರುವುದನ್ನು ಮನುಷ್ಯ ತ್ಯಾಗಮಾಡುವುದನ್ನು ಅಲ್ಲಾಹ ಮೆಚ್ಚುತ್ತಾನೆ. `ಹೇಳಿರಿ! ಲೋಕದಲ್ಲಿ ಸುಖಪಡುವುದಕ್ಕೆ ಸ್ವಲ್ಪ ಮಾತ್ರ ಸಾಕು. ಪಾರಮಾರ್ಥಿಕದಲ್ಲಿ ಅತ್ಯುತ್ತಮವಾದುದು ದೊರೆಯಲಿದೆ ದೇವರ ಮೇಲೆ ಭಯವಿಟ್ಟುಕೊಂಡವರಿಗೆ  ಎನ್ನುತ್ತಾನೆ ಅವನು ಕುರಾನ್ 4:77ರಲ್ಲಿ.

ಕೆಲವು ಪ್ರಾಜ್ಞರ ಆಭಿಪ್ರಾಯದಂತೆ, ಓರ್ವ ತನ್ನ ಗಳಿಕೆಯನ್ನುಅಲ್ಲಾಹನ ಇಚ್ಛೆಗೆ ವಿಧೇಯನಾಗಿ ಖರ್ಚು ಮಾಡುತ್ತಾನೋ, ತಾಳ್ಮೆಯನ್ನು ಹೊಂದಿರುತ್ತಾನೋ, ಸಂಕಷ್ಟದಲ್ಲಿದ್ದಾಗಲೂ ಅಲ್ಲಾಹನ ನಿಯಮದ ವಿರೋಧಿಯಾಗದೆ ನೇರ ಮಾರ್ಗದಲ್ಲಿರುತ್ತಾನೋ ಅವನು ತನ್ನ ಪ್ರಾಮಾಣಿಕ ಗಳಿಕೆಯನ್ನು ತ್ಯಾಗಮಾಡುವುದಕ್ಕೆ ಅರ್ಹನು. ಅಗತ್ಯಕ್ಕಿಂತ ಹೆಚ್ಚಿನದೇನನ್ನೂ ಯಾಚಿಸದೆ ದೇವರು ತನಗೆ ನೀಡಿದುದರಿಂದ ತೃಪ್ತಿಪಟ್ಟುಕೊಂಡು, ಅವನಿಗೆ ಕೃತಜ್ಞನಾಗಿರುವುದು ಸೂಕ್ತವಾದುದಾಗಿದೆ.

ಅಬೂ ಸುಲೈಮಾನ್ ಅದ್ದರಾನಿ ಹೇಳುತ್ತಾರೆ, ‘ಉಣ್ಣೆಯ ಬಟ್ಟೆಯನ್ನು ತೊಡುವುದು (ಸೂಫಿಗಳು ತೊಡುವ ಕಡಿಮೆ ಬೆಲೆಯ ಬಟ್ಟೆ) ತ್ಯಾಗದ ಸಂಕೇತಗಳಲ್ಲಿ ಒಂದು. ಸೂಫಿಯೊಬ್ಬನಿಗೆ ಅತ್ಯಂತ ಹೆಚ್ಚು ಬೆಲೆಯ ಬಟ್ಟೆಯನ್ನುತೊಡುವ ಅವಕಾಶವಿದ್ದರೂ ತ್ಯಜಿಸಿ, ಕನಿಷ್ಟ ಬೆಲೆಯ ಉಣ್ಣೆಯ ಬಟ್ಟೆಯನ್ನು ತೊಡುತ್ತಾನೆ’. ಸೂಫಿಯಾನ್ ಅತ್ತೌರಿ ಹೇಳುತ್ತಾರೆ, ‘ಜಗದ ಮೋಹವ ತ್ಯಜಿಸುವುದೆಂದರೆ ಆಸೆಗಳ ತ್ಯಾಗವೇ ಆಗಿದೆ. ಉತ್ತಮ ಆಹಾರವನ್ನು
ತ್ಯಜಿಸಿ, ಅತ್ಯಂತ ನಿಕೃಷ್ಟವಾದ ಬಟ್ಟೆಯನ್ನು ತೊಡುವುದು ಇತ್ಯಾದಿ’. ‘ದೇವರು ತನ್ನ ವಲಿ ಅಥವಾ ಸ್ನೇಹಿತರ(ಸಂತ) ಹೃದಯದಿಂದ ಜಗತ್ತಿನ
ಮೋಹವನ್ನು ಸಂಪೂರ್ಣವಾಗಿ ತೆಗೆದುಹಾಕಿರುತ್ತಾನೆ. ಯಾಕೆಂದರೆ ಅವರಿಗೆ ಇದರ ಅನುಮತಿಯನ್ನು ನೀಡಿಲ್ಲ’ ಎನ್ನುತ್ತಾರೆ ಸಂತ ಸರೀ ಅಲ್ ಸಖತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT