ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯವಿಲ್ಲಿ ಆದಾಯದ ಮೂಲ!

Last Updated 25 ಮೇ 2015, 19:30 IST
ಅಕ್ಷರ ಗಾತ್ರ

‘ಕಸ ಎಲ್ಲೆಂದರಲ್ಲಿ ಚೆಲ್ಲಾಡುತ್ತದೆ. ಗಬ್ಬು ವಾಸನೆ ನಾರುತ್ತಿದ್ದು, ನೊಣ, ಸೊಳ್ಳೆಗಳ ಹಾವಳಿ ಮಿತಿ ಮೀರಿದೆ...’ ಇತ್ಯಾದಿ ದೂರುಗಳು ನಗರ, ಪಟ್ಟಣ ಪ್ರದೇಶಗಳಲ್ಲಿ ಸಾಮಾನ್ಯ. ಇಂತಹ ಸಮಸ್ಯೆಗೆ ಇತಿಶ್ರೀ ಹಾಡಲು ಶ್ರೀರಂಗ ಪಟ್ಟಣ ಪುರಸಭೆ ಕಸವನ್ನು ರಸವನ್ನಾಗಿ ಪರಿವರ್ತಿಸಿ ತ್ಯಾಜ್ಯವನ್ನೂ ಆದಾಯ ಮೂಲ ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ದಿನ ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ, ಅದನ್ನು ಜರಡಿ ಹಿಡಿದು ರಸವತ್ತಾದ ಕಾಂಪೋಸ್ಟ್‌ ಗೊಬ್ಬರ ತಯಾರಿಸಲಾಗುತ್ತಿದೆ. ತ್ಯಾಜ್ಯದಿಂದ ಪ್ಲಾಸ್ಟಿಕ್‌, ಗಾಜು ಹಾಗೂ ಕಬ್ಬಿಣದ ವಸ್ತುಗಳನ್ನು ಬೇರ್ಪಡಿಸಲಾಗುತ್ತದೆ. ಕೊಳೆಯಬಹುದಾದ ಕಸವನ್ನು ಎರೆಹುಳು ಗೊಬ್ಬರ ಘಟಕಕ್ಕೆ ಹಾಕಿ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಲಾಗುತ್ತದೆ.

ಫಲವತ್ತತೆ ಹೆಚ್ಚಿಸುವ ಸಲುವಾಗಿ ಗೊಬ್ಬರದ ಗುಂಡಿಗೆ ಎಂಜೈನ್‌ ಸಲ್ಯೂಷನ್‌ (ಜೀವಾಣು ಗೊಬ್ಬರ) ದ್ರಾವಣ ಸೇರಿಸಲಾಗು ತ್ತದೆ. 15 ದಿನಗಳ ನಂತರ ಅಲ್ಲಿಂದ ತೆಗೆದ ಕಳಿ ಗೊಬ್ಬರವನ್ನು ಜರಡಿ ಯಂತ್ರಕ್ಕೆ ಹಾಕಿ ಪುಡಿ ಗೊಬ್ಬರವನ್ನು ಬೇರ್ಪಡಿಸುವ ಪ್ರಕ್ರಿಯೆ ನಡೆಯುತ್ತದೆ. ಜರಡಿಯಾಡಿದ ಗೊಬ್ಬರದಿಂದ ವಿಂಗಡಿಸಿ ಉಳಿಯುವ ತ್ಯಾಜ್ಯವನ್ನು ಮತ್ತೆ ನುರಿಸಿ ಪುಡಿ ಮಾಡಲಾಗುತ್ತದೆ. ಹೀಗೆ ಸಿಗುವ ಲಘು ಪೋಷಕಾಂಶಯುಕ್ತ ರಸವತ್ತಾದ ಗೊಬ್ಬರವನ್ನು ಪ್ಯಾಕಿಂಗ್‌ ಮಾಡಿದರೆ ಮುಗಿಯಿತು; ಮಾರಾಟಕ್ಕೆ ಸಿದ್ಧವಾದಂತೆಯೇ.
ಗೊಬ್ಬರದ ಗುಡ್ಡೆಯಿಂದ ಬೇರ್ಪಡಿಸಿದ ಪ್ಲಾಸ್ಟಿಕ್‌ ವಸ್ತುಗಳನ್ನು ಬಂಡಲ್‌ಗಳಾಗಿ ಕಟ್ಟಿ 2 ರೂಪಾಯಿಗೆ ಒಂದು ಕೆ.ಜಿಯಂತೆ ಮಾರಾಟ ಮಾಡಲಾಗುತ್ತಿದೆ. ಡಾಂಬರು ತಯಾರಿಕಾ ಘಟಕವಾದ ಬೆಂಗಳೂರಿನ ಕೆ.ಕೆ ಪ್ಲಾಸ್ಟಿಕ್‌ ಸಂಸ್ಥೆ ಇಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಖರೀದಿಸುತ್ತಿದೆ. ಗಾಜು ಮತ್ತು ಕಬ್ಬಿಣದ ಚೂರುಗಳನ್ನೂ ಮಾರಾಟ ಮಾಡಲಾಗುತ್ತಿದೆ. ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕೆಲಸ ಶುರುವಾಗಿ 6 ತಿಂಗಳು ಕಳೆದಿದೆ. ಅಂದಿನಿಂದ ಪಟ್ಟಣದಲ್ಲಿ ತ್ಯಾಜ್ಯ ಚೆಲ್ಲಾಡುತ್ತದೆ ಎಂಬ ಅಪಸ್ವರ ನಾಗರಿಕರಿಂದ ಕೇಳಿ ಬಂದಿಲ್ಲ.

ದಿನಕ್ಕೆ ಒಂದು ಮೆಟ್ರಿಕ್‌ ಟನ್‌ ಗೊಬ್ಬರ
ಅಂದಂದಿನ ತ್ಯಾಜ್ಯವನ್ನೇ ಅವತ್ತೇ ಸಂಗ್ರಹಿಸಿ ಊರ ಹೊರಗೆ ₨50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸುರಿಯಲಾಗುತ್ತಿದೆ. ಬೀದಿ, ಚರಂಡಿ ಹಾಗೂ ಮನೆಗಳಿಂದ ಸಂಗ್ರಹಿಸಿದ ಹಸಿ ತ್ಯಾಜ್ಯವನ್ನು ಇಲ್ಲಿ ಶೇಖರಿಸಲಾಗುತ್ತದೆ. ಸಂಗ್ರಹಿಸಿದ ತ್ಯಾಜ್ಯವನ್ನು ಬೇರ್ಪ ಡಿಸಿ, ಕೊಳೆ ಗುಂಡಿಗೆ ಸುರಿದು, ಜರಡಿಯಾಡಿ ಚೀಲಕ್ಕೆ ತುಂಬುವವರೆಗಿನ ಕೆಲಸಕ್ಕೆ 10 ಮಂದಿ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಸದ್ಯ ದಿನವೊಂದಕ್ಕೆ ಒಂದು ಮೆಟ್ರಿಕ್‌ ಟನ್‌ ಗೊಬ್ಬರ ತಯಾರಾಗುತ್ತಿದೆ.

‘ಈ ಗೊಬ್ಬರದಲ್ಲಿ ಸಾರಜನಕ, ರಂಜಕ ಹಾಗೂ ಪೊಟ್ಯಾಷ್‌ ಅಂಶಗಳು ಸಮೃದ್ಧವಾಗಿವೆ. ಈ ಗೊಬ್ಬರ ಹಾಕಿದ ಭೂಮಿಗೆ ಹೆಚ್ಚು ರಸಗೊಬ್ಬರ ಬೇಕಾಗುವುದಿಲ್ಲ. ತೋಟದ ಬೆಳೆಗಳಾದ ತೆಂಗು, ಅಡಿಕೆ, ಮಾವು, ಸಪೋಟ, ದಾಳಿಂಬೆ, ಸೀಬೆ, ಬಾಳೆ ಗಿಡಗಳಿಗೆ ಇದು ಅತ್ಯುತ್ತಮ ಗೊಬ್ಬರ ಎಂದು ಮೈಸೂರಿನ ಶ್ರೀ ಲ್ಯಾಬ್‌್ಸ  ಪ್ರಯೋಗಾಲಯ ವರದಿ ನೀಡಿದೆ’ ಎನ್ನುತ್ತಾರೆ  ಪುರಸಭೆಯ ಪರಿಸರ ಎಂಜಿನಿಯರ್‌ ರೂಪಾ.

ಸಂಗಮ
ತ್ಯಾಜ್ಯದಿಂದ ತಯಾರಿಸುತ್ತಿರುವ ಫಲವತ್ತಾದ ಕಾಂಪೋಸ್ಟ್‌ ಗೊಬ್ಬರಕ್ಕೆ ಪುರಸಭೆ ಆಡಳಿತ ಮಂಡಳಿ ‘ಸಂಗಮ’ ಎಂದು ಹೆಸರಿಟ್ಟಿದೆ. 30 ಕೆ.ಜಿ ಸಂಗ್ರಹ ಸಾಮರ್ಥ್ಯದ ಚೀಲಗಳಲ್ಲಿ ಸಂಗಮ ಗೊಬ್ಬರವನ್ನು ತುಂಬಿ ಮಾರಾಟ ಮಾಡಲಾಗು ತ್ತಿದೆ. ಚೀಲದ ಒಳಗೆ ಗಾಳಿ ಹೋಗದಂತೆ ವೈಜ್ಞಾನಿಕವಾಗಿ ತುಂಬಿ ಇಡುವುದರಿಂದ ಅದರ ಗುಣಮಟ್ಟ 3 ತಿಂಗಳ ವರೆಗೆ ಹಾಗೇ ಉಳಿಯುತ್ತದೆ. ಈ ಕಾಂಪೋಸ್ಟ್‌ ಗೊಬ್ಬರ ಖರೀದಿಸಿದವರು ಅದನ್ನು ಭೂಮಿಗೆ ಸೇರಿಸುವವರೆಗೆ ಪ್ರಖರವಾದ ಬಿಸಿಲು ಬೀಳದಂತೆ ಎಚ್ಚರ ವಹಿಸಬೇಕು ಎಂಬ ಸಲಹೆ ರೂಪಾ ಅವರದ್ದು.

ಹೆಚ್ಚಿದ ಬೇಡಿಕೆ
ಸುತ್ತಮುತ್ತಲಿನ ಗ್ರಾಮಗಳಲ್ಲಿ ಪುರಸಭೆ ಉತ್ಪಾದಿಸುವ ‘ಸಂಗಮ’ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ‘ಕೃಷಿಗೆ ಮಾತ್ರವಲ್ಲದೆ ಸರ್ಕಾರಿ ಕಚೇರಿ, ಐಷಾರಾಮಿ ಹೋಟೆಲ್‌ ಹಾಗೂ ಮನೆಗಳ ಮುಂದೆ ಲಾನ್‌ ಮತ್ತು ಆಲಂಕಾರಿಕ ಗಿಡ ಹೊಂದಿರುವವರಿಂದಲೂ ಈ ಗೊಬ್ಬರಕ್ಕೆ ಬೇಡಿಕೆ ಬರುತ್ತಿದೆ. ಆದರೆ ಬೇಡಿಕೆ ಇರುವಷ್ಟು ಗೊಬ್ಬರ ಪೂರೈಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಹಾಗಾಗಿ ಒಂದು ಮೆಟ್ರಿಕ್‌ ಟನ್‌ ಸಾಮರ್ಥ್ಯದ ಗೊಬ್ಬರದ ಘಟಕವನ್ನು 5 ಮೆಟ್ರಿಕ್‌ ಟನ್‌ ಉತ್ಪಾದನಾ ಸಾಮರ್ಥ್ಯದ ಘಟಕವನ್ನಾಗಿ ವಿಸ್ತರಿಸುವ ಯೋಜನೆ ಇದೆ. ಈ ವಿಷಯವನ್ನು ಮುಂದೆ ನಡೆಯುವ ಪುರಸಭೆ ಆಡಳಿತ ಮಂಡಳಿಯ ಸಭೆಯಲ್ಲಿ ಉದ್ದೇಶಿತ ಯೋಜನೆಗೆ ಒಪ್ಪಿಗೆ ಪಡೆಯಲಾಗುವುದು’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ.

ಲಕ್ಷ ಲಕ್ಷ ಆದಾಯ
6 ತಿಂಗಳ ಹಿಂದೆ ಪಟ್ಟಣದ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ವಿಲೇವಾರಿ ಮಾಡುವುದೇ ದುಸ್ತರವಾಗಿತ್ತು. ಎರಡು ಶೆಡ್‌ ನಿರ್ಮಿಸಿ, ಯಂತ್ರಗಳ ಸಹಾಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಲು ಶುರು ಮಾಡಿದ ನಂತರ ತ್ಯಾಜ್ಯ ಸಂಸ್ಕರಣೆಯ ಕಾರ್ಯ ಬಹಳ ಸುಲಭವಾಗಿದೆ; ಪುರಸಭೆಗೆ ಆದಾಯವೂ ಬರುತ್ತಿದೆ. ದಿನವೊಂದಕ್ಕೆ ಒಂದು ಮೆಟ್ರಿಕ್‌ ಟನ್‌ಗಿಂತಲೂ ಹೆಚ್ಚು ಕಾಂಪೋಸ್ಟ್‌ ಗೊಬ್ಬರ ಉತ್ಪಾದಿಸಲಾಗುತ್ತಿದೆ. ಸದ್ಯ ಒಂದು ತಿಂಗಳಿಗೆ 30 ಟನ್‌ ಗೊಬ್ಬರ ಸಿಗುತ್ತಿದ್ದು, ₨ 60 ಸಾವಿರ ಆದಾಯ ಬರುತ್ತಿದೆ. ಈ ಗೊಬ್ಬರ ಘಟಕದಿಂದ ವರ್ಷಕ್ಕೆ ₨ 7 ಲಕ್ಷ ಆದಾಯ ಅಂದಾಜಿಸಲಾಗಿದೆ. ಘಟಕವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಮಾಸಿಕ ₨ 3 ಲಕ್ಷ ಆದಾಯ ಪಡೆಯುವ ಗುರಿ ನಮ್ಮದು’ ಎಂದು ರಾಜಣ್ಣ ಹೇಳುತ್ತಾರೆ. ಸಂಪರ್ಕಕ್ಕೆ ಮೊ: 94803 62679.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT