ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ನೀರು ಶುದ್ಧಿ ಮತ್ತೆ ಬಳಸಿ ಬುದ್ದಿ..

Last Updated 1 ಜುಲೈ 2014, 19:30 IST
ಅಕ್ಷರ ಗಾತ್ರ

ಈಗಂತೂ ಉದ್ಯಾನ ನಗರಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಎಲ್ಲೆಲ್ಲೂ ಕಸ, ತ್ಯಾಜ್ಯದ ಸಮಸ್ಯೆಯದ್ದೇ ಸದ್ದು, ಸುದ್ದಿ.
ಬೆಂಗಳೂರಿನ ಕಸವನ್ನು ತಂದೂ ತಂದೂ ತಮ್ಮ ಹಳ್ಳಿಯ ಬಳಿ ಸುರಿದು ದೊಡ್ಡ ಗುಡ್ಡವನ್ನೇ ಸೃಷ್ಟಿಸಿ ರೋಗಗಳು ಹರಡುವುದಕ್ಕೆ ಕಾರಣವಾಗಿರುವುದಕ್ಕಾಗಿ ಮಂಡೂರಿನ ಜನತೆ ಅನ್ನಾಹಾರ ತೊರೆದು ಪ್ರತಿಭಟನೆಯನ್ನೇ ನಡೆಸಿದರು.

ಮೈಸೂರಿನಲ್ಲಿಯೂ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡದೇ ನಗರದ ಹೊರವಲಯದಲ್ಲಿ ಸುಮ್ಮನೆ ಸುರಿಯಲಾಗುತ್ತಿದೆ. ಇಲ್ಲಿಯೂ ಸಹ ಮುಂದೊಂದು ದಿನ ಮಂಡೂರಿನವರಂತೆ ಪ್ರತಿಭಟನೆ ವ್ಯಕ್ತವಾದಾಗಲೇ ಸ್ಥಳೀಯ ಆಡಳಿತ ಎಚ್ಚರಗೊಳ್ಳುತ್ತದೆಯೇನೋ?

ಇದೆಲ್ಲ ಘನ ತ್ಯಾಜ್ಯದ ಸಮಸ್ಯೆಯಾಯಿತು. ನಗರ, ಹಳ್ಳಿ ಎನ್ನದೆ ಪ್ರತಿ ಮನೆಯಿಂದಲೂ ದ್ರವ ತ್ಯಾಜ್ಯವೂ ನಿತ್ಯ ಹೊರಬೀಳುತ್ತಲೇ ಇರುತ್ತದೆ.  ಆದರೆ, ಇದು ಒಳಚರಂಡಿ ಮಾರ್ಗದಲ್ಲಿ ಹರಿದು ಹೋಗುವುದರಿಂದ ನಗರದೊಳಗೆ ಅಷ್ಟು ಸಮಸ್ಯೆ ಹುಟ್ಟುಹಾಕದು. ಆದರೆ, ನಗರದ ಆಚೆಗಂತೂ ಎಲ್ಲಾದರೂ ಒಂದೆಡೆ ಕೊಳಚೆ ಗುಂಡಿಯನ್ನು ನಿರ್ಮಿಸಿಯೇ ಇರುತ್ತದೆ.

ಅಡುಗೆ ಕೋಣೆ, ಸ್ನಾನದ ಮನೆ, ಅಂಗಳ ಸ್ವಚ್ಛಗೊಳಿಸಿದಾಗ, ಕಾರು, ಬೈಕ್‌ಗಳನ್ನು ತೊಳೆದಾಗಲೆಲ್ಲಾ ಸಾಕಷ್ಟು ಮಲಿನ ನೀರು ಮನೆಯಿಂದ ಹೊರಬೀಳುತ್ತದೆ. ಇಷ್ಟೊಂದು ನೀರು ವ್ಯರ್ಥ್ಯವಾಗಿ ಚರಂಡಿ ಸೇರಿ ಹರಿದುಹೋಗುವುದಕ್ಎ ಬಿಡದೇ ಮರು ಬಳಕೆ ಮಾಡಿಕೊಳ್ಳಲು ಏನಾದರೂ ಪರ್ಯಾಯಾ ಮಾರ್ಗ ಇದೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಡುಕುತ್ತಾ ಹೊರಟಾಗ ಕಂಡಿದ್ದು, ಮನೆಯ ಗಲೀಜು ನೀರನ್ನು ಶುದ್ದೀಕರಿಸಿ ಮನೆಯಲ್ಲೇ ಮರುಬಳಕೆ ಮಾಡುವ ಪರಿಸರ ಸ್ನೇಹಿ ವ್ಯವಸ್ಥೆಯೊಂದು ಮೈಸೂರಿನಲ್ಲಿ ಬಳಕೆಯಲ್ಲಿರುವುದು ಕಂಡುಬಂದಿತು.

‘ಬಚ್ಚಲ ನೀರು ತಿಳಿಯಾದರೇನು ಫಲ’ ಎಂಬ ಮಾತನ್ನು ಸುಳ್ಳಾಗಿಸುವ ಪ್ರಯತ್ನವೊಂದು ಮೈಸೂರು ನಗರದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ. ಮನೆಯಿಂದ ಹೊರಗೆ ಹರಿಯುವ ಅಶುದ್ಧ ನೀರನ್ನು ಮನೆಯಲ್ಲೇ ಶುದ್ಧೀಕರಿಸಿ ಮರುಬಳಕೆ ಮಾಡಲಾಗುತ್ತಿದೆ.

‘ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸ್ವಯಂ ಸೇವಾ ಸಂಸ್ಥೆ’ (ಆರ್ಎಲ್‌ಎಚ್‌ಪಿ) ಬೆಂಗಳೂರಿನ  ‘ಸಿಡಿಡಿ’ ಸಂಸ್ಥೆ ನೆರವಿನೊಂದಿಗೆ ಮೈಸೂರಿನ ರೂಪಾನಗರದಲ್ಲಿ ಸುಮಾರು 240 ಮನೆಗಳಿಗೆ ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಮರುಬಳಕೆಯ ವ್ಯವಸ್ಥೆಯನ್ನು ಅಳವಡಿಸಿದೆ. ಇದನ್ನು ಕಳೆದ 9 ವರ್ಷಗಳಿಂದಲೂ ನಿರ್ವಹಿಸಿಕೊಂಡು ಬರುತ್ತಿದೆ. ಈಗ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (ಮೂಡಾ) ಚಿತ್ತವೂ ಇದರತ್ತ ಹರಿದಿದೆ.
‘ಡಿವ್ಯಾಟ್ಸ್‌’ (DEWATS) ಎಂದು ಕರೆಯಲಾಗುವ ತ್ಯಾಜ್ಯ ನೀರು ಶುದ್ಧೀಕರಣದ ಈ ವಿಶಿಷ್ಟ ತಂತ್ರಜ್ಞಾನಕ್ಕೆ ವಿದ್ಯುತ್ ಅಗತ್ಯವಿಲ್ಲ. ನೀರನ್ನು ಶುದ್ಧೀಕರಿಸುವ ಸಲುವಾಗಿ ಯಾವುದೇ ರಾಸಾಯನಿಕವನ್ನೂ ಇಲ್ಲಿ ಬಳಸಲಾಗುವುದಿಲ್ಲ.

ಏನಿದು ಡಿವ್ಯಾಟ್ಸ್‌?
ಮೂಲತಃ ಜರ್ಮನಿಯಲ್ಲಿ ಹುಟ್ಟುಪಡೆದ ಈ ತಂತ್ರಜ್ಞಾನವನ್ನು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬಳಸಲಾಗುತ್ತಿದೆ. ಇದು ರಾಸಾಯನಿಕ ರಹಿತವಾಗಿದ್ದು, ನೈಸರ್ಗಿಕ ವಿಧಾನದಿಂದಲೇ ನೀರನ್ನು ಶುದ್ಧೀಕರಿಸಲಾಗುತ್ತದೆ. ಇದು ಪರಿಸರಕ್ಕೆ ಪೂರಕವಾಗಿದ್ದು, ಮಾಲಿನ್ಯ ಅಂಶ ಇದರಲ್ಲಿಲ್ಲ. ಅಲ್ಲದೇ ಇದರಲ್ಲಿ ಬಳಸಲಾಗುವ ಉಪಕರಣಗಳು ದೀರ್ಘಕಾಲ ಬಾಳಿಕೆ ಬರುವಂತಹವು.

ಕಾರ್ಯಾಚರಣೆ ಹೇಗೆ?
ಇದು ಪ್ರಮುಖವಾಗಿ ನಾಲ್ಕು ಹಂತದಲ್ಲಿ ನೀರನ್ನು ಶುದ್ಧೀಕರಿಸುತ್ತದೆ.
1. ಸೆಟ್ಲರ್/ಸೆಪ್ಟಿಕ್ ತೊಟ್ಟಿ: ಇದು ಮಲಿನ ನೀರಿನ ಪ್ರಾಥಮಿಕ ಚಿಕಿತ್ಸೆಯ ಹಂತ. ತ್ಯಾಜ್ಯ ನೀರು ಮೊದಲಿಗೆ ಈ ತೊಟ್ಟಿಯಲ್ಲಿ ಸಂಗ್ರಹಗೊಳ್ಳುತ್ತದೆ. ಸಂಗ್ರಹಗೊಂಡ ನೀರಿನಲ್ಲಿ ಇರುವ ಘನ ಪದಾರ್ಥಗಳು ತಳದಲ್ಲಿ ಶೇಖರಣೆಯಾಗುತ್ತವೆ. ನಂತರ ನೀರು ತಿಳಿಗೊಂಡು ಮುಂದಿನ ಭಾಗಕ್ಕೆ ಹರಿಯುತ್ತದೆ. 

2. ಬಫಲ್ ರಿಯಾಕ್ಟರ್: ಸೆಪ್ಟಿಕ್ ತೊಟ್ಟಿಯಿಂದ ತಿಳಿಗೊಂಡ ನೀರು ಈ ರಿಯಾಕ್ಟರ್‌ಗೆ ಬಂದು ಸೇರುತ್ತದೆ. ಇಲ್ಲಿ ವಿಶಿಷ್ಟ ವಿನ್ಯಾಸದಲ್ಲಿ ಕಟ್ಟಿರುವ ಕೋಣೆಗಳ

ಮೂಲಕ ನೀರು ಹಾದು ಹೋಗುತ್ತದೆ. ಕೊನೆಯ ಕೋಣೆಯ ಮೂಲಕ ನೀರು ಹೊರಬಂದಾಗ ತೇಲುವ ಕಶ್ಮಲಗಳೆಲ್ಲವೂ ಹೊರ ಹೋಗಿ ನೀರು ಇನ್ನಷ್ಟು ಶುದ್ಧಗೊಳ್ಳುತ್ತದೆ. ಅಲ್ಲದೇ, ಅನೆರೋಬಿಕ್ ಫಿಲ್ಟರ್‌ ಅಳವಡಿಸಿರುವುದರಿಂದ ನೀರು ಇನ್ನಷ್ಟು ತಿಳಿಯಾಗುತ್ತದೆ. ಇದು ಮಲಿನ ನೀರಿಗೆ ನೀಡಲಾಗುವ ದ್ವಿತೀಯ ಹಂತದ ಚಿಕಿತ್ಸೆ.

3. ಪ್ಲಾಟೆಂಟ್ ಗ್ರಾವೆಲ್ ಫಿಲ್ಟರ್: ರಿಯಾಕ್ಟರ್‌ನಿಂದ ಹೊರಬರುವ ನೀರು ನೇರ ಇಲ್ಲಿಗೆ ಬರುತ್ತದೆ. ಇದರಲ್ಲಿರುವ ಸಣ್ಣ ಮರಳು ಹಾಗೂ ಕಲ್ಲುಗಳ ಮೂಲಕ ನೀರು ಹಾದು ಹೋಗಿ ಇನ್ನಷ್ಟು ಶುದ್ಧಗೊಳ್ಳುತ್ತದೆ. ಮರಳಿನ ಮೇಲೆ ಸಸ್ಯಗಳನ್ನು ಬೆಳೆಸಿರುವುದರಿಂದ ನೀರಿಗೆ ಆಮ್ಲಜನಕವೂ ಪೂರೈಕೆಯಾಗುತ್ತದೆ. ಮತ್ತೊಂದೆಡೆ ಸಸ್ಯಗಳು ನೀರಿನ ಕಲ್ಮಶಗಳನ್ನೂ ಹೀರಿಕೊಂಡು ಮಲೀನ ನೀರನ್ನು ಮತ್ತಷ್ಟು ಶುದ್ಧಿೀಕರಿಸುತ್ತದೆ.

4. ಪಾಲಿಷಿಂಗ್ ಪಾಂಡ್: ಗ್ರಾವೆಲ್ ಫಿಲ್ಟರ್‌ನಿಂದ ಹೊರಬರುವ ನೀರು ಇಲ್ಲಿ ಸಂಗ್ರಹಗೊಳ್ಳುತ್ತದೆ. ಇದು ಮಲಿನವಿಲ್ಲದಂತಹ ನೀರಾಗಿದ್ದು, ಮರುಬಳಕೆಗೆ ಯೋಗ್ಯವಾಗಿರುತ್ತದೆ.

ತೋಟಗಾರಿಕೆ, ವ್ಯವಸಾಯ, ಶೌಚಾಲಯಗಳಲ್ಲಿ ಮಲವನ್ನು ಹೊರದೂಡಲು ಸಂಸ್ಕರಣೆಗೊಂಡ ಈ ನೀರನ್ನು ಬಳಸಬಹುದಾಗಿದೆ.

ಮುಡಾ ಆಸಕ್ತಿ
ಮೈಸೂರು ನಗರದ ಜನಸಂಖ್ಯೆ 12 ಲಕ್ಷವನ್ನೂ ಮೀರಿ ನಾಗಾಲೋಟದಲ್ಲಿ ಹೆಚ್ಚುತ್ತಾ ಸಾಗಿದೆ. ನಗರದ ಉತ್ತರ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಮಾತ್ರ ಮಲಿನ ನೀರು ಶುದ್ಧೀಕರಣ ಘಟಕಗಳಿವೆ. ಪೂರ್ವ, ಪಶ್ಚಿಮ ಭಾಗದಲ್ಲಿ ಇಲ್ಲ. ಇದನ್ನು ಮನಗಂಡಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಈ ತಂತ್ರಜ್ಞಾನ ಕುರಿತು ಆಸಕ್ತಿ ತೋರಿಸಿದೆ. 2014–15ನೇ ಸಾಲಿನ ಆಯವ್ಯಯದಲ್ಲಿ ಇದಕ್ಕೆಂದೇ ರೂ.1 ಕೋಟಿಯನ್ನು ತೆಗೆದಿರಿಸಿದೆ. ಮೈಸೂರಿನ ವಸಂತನಗರ ಬಡಾವಣೆಯಲ್ಲಿ ಇದೇ ವ್ಯವಸ್ಥೆ ಅಳವಡಿಸಿ ಮಲಿನ ನೀರನ್ನು ಶುದ್ಧೀಕರಿಸಿ ಉದ್ಯಾನಗಳಿಗೆ ಪೂರೈಸುವ ಉದ್ದೇಶವಿದೆ. ಇದರಿಂದ ಉದ್ಯಾನಗಳಿಗೆ ಸದ್ಯ ಬಳಕೆ ಮಾಡಲಾಗುತ್ತಿರುವ ನೀರಿನ ಪ್ರಮಾಣ ಕಡಿಮೆ ಆಗಲಿದೆ ಎಂಬುದು ಮುಡಾದ ಲೆಕ್ಕಾಚಾರ.

ರೂ25,000ರಿಂದ 50,000 ವೆಚ್ಚ

‘ಈ ತ್ಯಾಜ್ಯ ನೀರು ಶುದ್ಧೀಕರಣ ವ್ಯವಸ್ಥೆಗೆ ಇಷ್ಟೇ ವೆಚ್ಚ ಆಗುತ್ತದೆ ಎಂದು ಮೊದಲೇ ಹೇಳಲು ಆಗದು. ಒಂದು ಸಣ್ಣ ಮನೆಗೆ ರೂ25,000ದಿಂದ 50,000ದವರೆಗೂ ವೆಚ್ಚ ಆಗಬಹುದು. ಮನೆ/ಕಟ್ಟಡದಿಂದ ಹೊರಬರುವ ಮಲಿನ ನೀರಿನ ಪ್ರಮಾಣದ ಮೇಲೆ ನೀರು ಶುದ್ಧೀಕರಣ ವ್ಯವಸ್ಥೆಗೆ ತಗಲುವ

ವೆಚ್ಚವನ್ನು ನಿರ್ಧರಿಸಬಹುದು. ಸಮುದಾಯ ಹಾಗೂ ವೈಯಕ್ತಿಕ ಬಳಕೆಗೂ ಈ ಸರಳ ವ್ಯವಸ್ಥೆ ಅಳವಡಿಸಿಕೊಳ್ಳಬಹುದು’.

‘ಗ್ರೇ ವಾಟರ್ ಹಾಗೂ ಬ್ಲಾಕ್ ವಾಟರ್ ಎಂದು ಮಲಿನ ನೀರನ್ನು ಪ್ರತ್ಯೇಕಿಸುತ್ತೇವೆ. ಶೌಚಾಲಯದಿಂದ ಹೊರಬರುವಂತಹುದು ಬ್ಲಾಕ್ ವಾಟರ್‌. ಇದನ್ನು ಶುದ್ಧೀಕರಿಸುವುದಕ್ಕೆ ಪೋಸ್ಟ್ ಟ್ರೀಟ್‌ಮೆಂಟ್ ಬೇಕೇ ಬೇಕು. ಉಳಿದಂತೆ ಕೈಕಾಲು ತೊಳೆಯುವುದಕ್ಕೆ, ಅಡುಗೆ ಕೋಣೆ, ಸ್ನಾನದ ಮನೆಯಿಂದ ಹೊರಬೀಳುವ ನೀರನ್ನು ಗ್ರೇ ವಾಟರ್ ಎಂದು ಪರಿಗಣಿಸಿ ಇದನ್ನು ಶುದ್ಧೀಕರಿಸಿ ತೋಟಗಾರಿಕೆಗೆ ಬಳಸಬಹುದಾಗಿದೆ.
–ರಾಜೇಶ್‌ ಪೈ ನಿರ್ದೇಶಕರು, ಸಿಡಿಡಿ ಸಂಸ್ಥೆ
ಮೊ: 9900050800

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT