ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಸಮಸ್ಯೆಗೆ ‘ಶೂನ್ಯ ತ್ಯಾ ಜ್ಯ ಸಾಗಣೆ’ ಮದ್ದು

ಸಂಜಯನಗರದಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೆ ಸಿದ್ಧತೆ
Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯ ಅಡುಗೆಮನೆಯಲ್ಲಿ ಉತ್ಪತ್ತಿ­ಯಾ­ಗುವ ಹಸಿ ತ್ಯಾಜ್ಯದ ಜತೆಗೆ  ಇತರೆ ಒಣ ಕಸವನ್ನು ಬಿಬಿಎಂಪಿ ವಾಹನಕ್ಕೆ ನೀಡದೆ ಅಥವಾ ಮನೆ­ಯಿಂದಾಚೆ ರಸ್ತೆಗೆಸೆಯದೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವೇ?

ಇದು ಸಾಧ್ಯ ಎನ್ನುತ್ತಾರೆ ಈ ನಿಟ್ಟಿನಲ್ಲಿ ‘ಶೂನ್ಯ ತ್ಯಾಜ್ಯ ಸಾಗಣೆ’  ಎಂಬ ವಿಭಿನ್ನ ಪರಿ­ಕಲ್ಪನೆ­­ಯೊಂದನ್ನು ರೂಪಿಸಿರುವ ಸಂಜಯ­ನಗರದ ನಿವಾಸಿಗಳು.

‘ಸ್ಥಳೀಯ ಆಮ್‌ಆದ್ಮಿ ಪಕ್ಷದ ಸದಸ್ಯರ ಕಲ್ಪನೆಯ ಕೂಸಾದ ಈ ಯೋಜನೆಗೆ  ಸಾರ್ವ­ಜನಿಕರ ಸಹಕಾರದಲ್ಲಿ ಮಹಾತ್ಮಾ ಗಾಂಧೀಜಿ­ಯವರ ಜನ್ಮದಿನವಾದ ಅಕ್ಟೋಬರ್‌ 2ರಂದು ಸಂಜಯನಗರದಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ’ ಎನ್ನುತ್ತಾರೆ ರೂವಾರಿಗಳಲ್ಲಿ ಒಬ್ಬರಾದ ವೇಣುಗೋಪಾಲ್ ಅಯ್ಯಂಗಾರ್.

‘ಮಂಡೂರಿನಲ್ಲಿ ತ್ಯಾಜ್ಯ ಸೃಷ್ಟಿಸಿರುವ ನರಕ ಸದೃಶ್ಯ ಚಿತ್ರಣ ಕಂಡಾಗ  ಇದನ್ನು ಯಾವ ರೀತಿ ನಿಯಂತ್ರಣ ಮಾಡಬಹುದೆಂದು ಸಮಾನ­ಮನ­ಸ್ಕರ ಜತೆ ಚರ್ಚಿಸಿದಾಗ ಹೊಳೆದದ್ದೆ ಈ ಯೋಜನೆ’ ಎನ್ನುತ್ತಾರೆ ಆಮ್‌ಆದ್ಮಿ ಪಕ್ಷದ ಸದಸ್ಯ­ರಾದ ವೇಣುಗೋಪಾಲ್.
‘ನಿತ್ಯ ಮನೆಯೊಂದರಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ­ದಲ್ಲಿ ಸುಮಾರು ಶೇ 50ಕ್ಕೂ ಅಧಿಕ ಪ್ರಮಾ­ಣದ ಹಸಿ ತ್ಯಾಜ್ಯವಿರುತ್ತದೆ. ಇದನ್ನು ಮಿಕ್ಸಿಗೆ ಹಾಕಿ ದ್ರಾವಣ ಮಾಡಿ, ಮನೆಯ ಮುಂದಿ­ರುವ ಕೈತೋಟ ಅಥವಾ ಉದ್ಯಾನ­ದಲ್ಲಿ­ರುವ ಗಿಡಗಳಿಗೆ ಹಾಕಬಹುದು. ಇಲ್ಲವೆ, ಕೈತೋಟ, ಉದ್ಯಾನ ಇಲ್ಲದವರು ಅಂಗಳದಲ್ಲಿ ಮಣ್ಣಿ­ರುವ ಜಾಗೆಯಲ್ಲಿ ಸಣ್ಣ ಗುಂಡಿ ತೆಗೆದು ಸುರಿಯ­ಬಹುದು. ಇದೂ ಬೇಡ ಎನ್ನುವವರು ತ್ಯಾಜ್ಯ ನೀರಿನ ಜತೆಗೆ ಸುರಿದರಾಯಿತು ತ್ಯಾಜ್ಯ ಸಮಸ್ಯೆ ಅರ್ಧ ಬಗೆಹರಿದಂತೆ’ ಎಂದು ಹೇಳುತ್ತಾರೆ.

‘ಒಣ ತ್ಯಾಜ್ಯದಲ್ಲಿ ಮುಖ್ಯವಾಗಿರುವ  ಪೇಪರ್‌ ಮತ್ತು ಪ್ಲ್ಯಾಸ್ಟಿಕ್‌ ವಸ್ತುಗಳನ್ನು ಸ್ಥಳೀಯವಾಗಿರುವ ರದ್ದಿ ಪೇಪರ್‌ ವ್ಯಾಪಾ­ರ­ಸ್ಥರು ಮತ್ತು ಚಿಂದಿ ಆಯುವವರ ಸಹಕಾರ­ದೊಂ­ದಿಗೆ ನಿಯಮಿತವಾಗಿ ಸಂಗ್ರಹಿಸ­ಲಾಗು­ತ್ತದೆ. ಈ ನಿಟ್ಟಿನಲ್ಲಿ ನಾವು ಕೆಲ ವ್ಯಕ್ತಿಗಳನ್ನು ಗುರ್ತಿಸಿ ಅವರಿಗೆ ಸಮವಸ್ತ್ರ ನೀಡಿ, ತ್ಯಾಜ್ಯ ಸಂಗ್ರ­ಹಿಸುವ ವಿಧಾನವನ್ನು ವಿವರಿಸಿದ್ದೇವೆ. ಸ್ಯಾನಿಟರಿ ಪ್ಯಾಡ್‌ ಮತ್ತು ಗ್ಲಾಸ್‌ನಂತಹ ಇತರ ತ್ಯಾಜ್ಯ­ಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವ ತಂತ್ರ­ಜ್ಞಾನ­ವನ್ನು ಮುಂಬರುವ ದಿನಗಳಲ್ಲಿ ಜಾರಿಗೆ ತರುವ ಚಿಂತನೆ ಇದೆ. ಶೂನ್ಯ ತ್ಯಾಜ್ಯ ಸಾಗಣೆ ಪದ್ದತಿ­ಯನ್ನು ಈಗಾಗಲೇ ನಮ್ಮ ಮನೆಯಲ್ಲಿ ಅಳ­ವಡಿಸಿ­ಕೊಂಡು ಯಶಸ್ಸು ಕಂಡಿದ್ದೇನೆ’ ಎಂದರು ವೇಣುಗೋಪಾಲ್.

‘ನಾವು ಈ ಯೋಜನೆಯನ್ನು ಪ್ರಾಯೋಗಿಕ­ವಾಗಿ ಸಂಜಯನಗರದ 18, 19 ಮತ್ತು 20ನೇ ವಾರ್ಡ್‌ನಲ್ಲಿ ಜಾರಿಗೆ ತರುತ್ತಿ­ದ್ದೇವೆ. ಇದಕ್ಕೆ ಸ್ಥಳೀಯ ನಾಗರಿಕರು ನೀಡಲು ಮುಂದೆ ಬಂದಿ­ದ್ದಾರೆ. ಈ ಕುರಿತಂತೆ ಸ್ಥಳೀಯ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಛಾಯಾಚಿತ್ರಗಳ ಮೂಲಕ ಅರಿವೂ ಮೂಡಿಸುವ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ’ ಎನ್ನುತ್ತಾರೆ ಈ ಯೋಜನೆಯ ಸ್ವಯಂ ಸೇವಕರಲ್ಲಿ ಒಬ್ಬರಾದ ಶಿಕ್ಷಕಿ ಉಷಾ ಸಂಪತ್‌ಕುಮಾರ್‌.

‘ಸಂಜಯನಗರದ ತ್ಯಾಜ್ಯ ಸಾಗಣೆ ಕನಿಷ್ಠ­ಮಟ್ಟಕ್ಕೆ ತರಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ ಹಮ್ಮಿ­ಕೊಳ್ಳಲಾಗಿದೆ. ಜತೆಗೆ ನಾಗರಿಕರಲ್ಲಿ ಸುತ್ತ­ಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅರಿವೂ ಮೂಡಿಸುವ ಉದ್ದೇಶ ಇದರ ಹಿಂದಿದೆ. ಈ ಯೋಜನೆಯಲ್ಲಿ ಮೂವತ್ತು ಜನರ ಸ್ವಯಂ­ಸೇವ­ಕರ ತಂಡ ಕಾರ್ಯನಿರ್ವಹಿಸುತ್ತಿದೆ’ ಎನ್ನು­ತ್ತಾರೆ ವೃತ್ತಿಯಿಂದ ಟೆಕ್ಕಿಯಾಗಿರುವ ಸ್ಥಳೀಯ ನಿವಾಸಿ ವಿಜ್ಞಾನಗೌಡ.

‘ಅಡಾಪ್ಟ್‌ ಬ್ಲ್ಯಾಕ್‌ ಸ್ಪಾಟ್‌’ ಎಂಬ ಮತ್ತೊಂದು ಅಭಿಯಾನದಡಿ ಸಂಜಯನಗರ ಮತ್ತು ಡಾಲರ್ಸ್‌ ಕಾಲೋನಿಯಲ್ಲಿ ಐದು ತ್ಯಾಜ್ಯ ಸಂಗ್ರಹ ಸ್ಥಳಗಳನ್ನು ಸ್ಥಳೀಯ ಕಾರ್ಯ­ಕರ್ತರು ದತ್ತು ತೆಗೆದುಕೊಂಡು ಅವುಗಳಲ್ಲಿ ಕಸ ಸುರಿಯ­ದಂತೆ ನಿಗಾ ಇಡುತ್ತಿದ್ದಾರೆ. ಜತೆಗೆ, ಸ್ಥಳೀಯ ವ್ಯಾಪಾರಿ ಮಳಿಗೆಗಳಲ್ಲಿ 40 ಮೈಕ್ರಾನ್‌­ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಬಳಕೆ ಮಾಡ­ದಂತೆ ಅರಿವು ಮೂಡಿಸುವ ಕಾರ್ಯ­ಕ್ರಮದ ರೂಪ­ರೇಷೆಯನ್ನು ಸಿದ್ಧಪಡಿಸಲಾಗಿದೆ’ ಎಂದು ಅವರು ತಿಳಿಸಿದರು.

‘ನಮ್ಮ ಕಾರ್ಯಕ್ರಮಗಳಿಗೆ ಬಿಬಿಎಂಪಿ ಉತ್ತಮ ಸಹಕಾರ ನೀಡುತ್ತಿದೆ. ಈ ಯೋಜನೆ ಯಶಸ್ವಿಯಾದರೆ ಇಡೀ ನಗರದಲ್ಲಿ ಜಾರಿ­ಗೊಳಿಸುವ ಯೋಚನೆ ಇದೆ. ಸ್ವಯಂ ಸೇವಕರಾಗಿ ನಮ್ಮೊಂದಿಗೆ   ಕೈಜೋಡಿಸಲು ಬಯಸುವ ಆಸಕ್ತರು vignan.n@hotmail.comಗೆ ಮೇಲ್‌ ಕಳುಹಿಸಬಹುದು’ ಎನ್ನುತ್ತಾರೆ ವಿಜ್ಞಾನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT