ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥರಾವರಿ ನೀರಾವರಿ

Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ಟೆರೇಸ್ ಗಾರ್ಡನ್ ದಿನೇ ದಿನೇ ಜನಪ್ರಿಯವಾಗುತ್ತಿದೆ. ಆದರೆ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಇಂಥ ಸಮಯದಲ್ಲಿ ಕಡಿಮೆ ನೀರು ಬಳಸಿ ಗಿಡಗಳನ್ನು ಬೆಳೆಸಲು ಸಾಧ್ಯ. 30 ವರ್ಷಗಳ ಹಿಂದೆಯೇ ಡಾ. ಗುರುಪಾದ ದಂಡಗಿಯವರು ಇದನ್ನು ತೋರಿಸಿಕೊಟ್ಟಿದ್ದರು.

ಧಾರವಾಡದ ಈ ವಿಜ್ಞಾನಿ, ಪರಿಸರಸ್ನೇಹಿ, ಕುಟುಂಬಸ್ನೇಹಿ, ನೆರೆಹೊರೆಸ್ನೇಹಿ ವಿಧಾನಗಳನ್ನು ಆವಿಷ್ಕರಿಸಿದ್ದರು. ಕುಟುಂಬಸ್ನೇಹಿಯೆಂದರೆ- ಮನೆಯಲ್ಲಿ ನಾವಿಲ್ಲದಿದ್ದಾಗ ನೀರುಣಿಸುವ ವಿಧಾನ. ನೆರೆಹೊರೆಸ್ನೇಹಿ ಎಂದರೆ- ನಮ್ಮ ಮನೆಯ ತ್ಯಾಜ್ಯನೀರು, ಕಸಗಳು ಪಕ್ಕದವರಿಗೆ ಹಿಂಸೆಯಾಗದಂತೆ ಮರುಬಳಸುವ ವಿಧಾನ.

ವೈವಿಧ್ಯ ಪದ್ಧತಿ
ಗಿಡಗಳಿಗೆ ನೀರುಣಿಸುವುದರಲ್ಲೂ ವೈವಿಧ್ಯ ಪದ್ಧತಿಗಳಿವೆ. ಅವುಗಳತ್ತ ಒಂದು ನೋಟ ಹರಿಸೋಣ.

ಗಡಿಗೆ ಪದ್ಧತಿ: ಹೊಲಗಳಲ್ಲಿ ಚಿಕ್ಕು, ಮಾವು, ಹಲಸು ಮುಂತಾದ ಹಣ್ಣಿನ ಗಿಡಗಳನ್ನು ನೆಟ್ಟಾಗ ಮೂರು ವರ್ಷಬೇಸಿಗೆಯಲ್ಲಿ ನೀರು ನೀಡಬೇಕಾಗುತ್ತದೆ. ಅದಕ್ಕಾಗಿ ಪ್ರತಿದಿನ ನೀರು ಹೊತ್ತು ತರಲಾಗದು. ಸಸಿಗಳ ಬುಡದಲ್ಲಿ ತಳದಲ್ಲೊಂದು ರಂಧ್ರವಿರುವ ಮಣ್ಣಿನ ಗಡಿಗೆಯೊಂದನ್ನು ಒಂದು ಇಂಚಿನಷ್ಟು ಹುಗಿದಿಡುವುದು, ಅದಕ್ಕೆ ನೀರು ತುಂಬುವುದು. ಆಗ ಮಣ್ಣು ನೀರನ್ನು ಹೀರಿಕೊಳ್ಳತೊಡಗುತ್ತದೆ. ನೀರು ಖಾಲಿಯಾದಂತೆ ತುಂಬುತ್ತಿದ್ದರಾಯಿತು. ಹೀಗೆ ನಾಲ್ಕು ದಿನಗಳಿಗೋ, ಎಂಟು ದಿನಗಳಿಗೋ ನೀರು ನೀಡುವ ಪದ್ಧತಿಯಿಂದ ಸಸಿ ಬೆಳೆಸಲು ಸುಲಭ ವಿಧಾನ.

ಹೂಜಿಹನಿ ಪದ್ಧತಿ: ಗಡಿಗೆ ಮಾಡಿಸುವಾಗಲೇ ಅರ್ಧ ಇಂಚಿನ ಬಿಳಿ ಪೈಪ್ ಕೂರುವಂತೆ ರಂಧ್ರ ಮಾಡಿಸಿ ಪೈಪನ್ನು ಕೂರಿಸಿ. ಅದರ ಒಳಗೊಂದು ಕಪ್ಪು ಪೈಪ್ ಬಿಗಿಯಾಗಿ ಕೂರುವಂತೆ ಜೋಡಿಸಿ. ಕಪ್ಪು ಪೈಪಿನ ತುದಿಯಲ್ಲಿ ನೀರುಹನಿ ನಿಯಂತ್ರಕಗಳನ್ನು ಅಳವಡಿಸಿ ಅಥವಾ ಅದಕ್ಕೊಂದು ಎಂಡ್ ಕ್ಯಾಪ್ ಹಾಕಿ. ಎಂಡ್‌ಕ್ಯಾಪಿಗೆ ದಪ್ಪ ಸೂಜಿ ಅಥವಾ ದಬ್ಬಣ ಕಾಯಿಸಿ ರಂಧ್ರಮಾಡಿ. ಚಿಕ್ಕ ಸಸಿಗಳಿಗೆ ದಿನಕ್ಕೆ ಮೂರು ಲೀಟರ್ ನೀರು ಸಾಕು. 21 ಲೀಟರ್ ನೀರು ಹಿಡಿಸುವ ಹೂಜಿಯನ್ನು ಇಟ್ಟರೆ ಏಳು ದಿನಗಳವರೆಗೆ ಸಸಿಗಳಿಗೆ ಅದು ನೀರೂಡಿಸುತ್ತಲೇ ಇರುತ್ತದೆ. ತೇವಾಂಶ ಹೆಚ್ಚು ಕಾಲ ಇರಲು ಸಸಿಗಳ ಬುಡದಲ್ಲಿ ದಪ್ಪನಾಗಿ ಕಾಂಪೋಸ್ಟ್ ಹಾಸಿರಬೇಕು.

ಒಸರು ನೀರಾವರಿ: ಒಂದು ಲೀಟರ್ ನೀರಿನ ಬಾಟಲಿ ತೆಗೆದುಕೊಳ್ಳಿ. ಅದರ ಮುಚ್ಚಳಕ್ಕೆ ಸ್ವಲ್ಪ ದೊಡ್ಡ ರಂಧ್ರ ಗಳನ್ನು ಮಾಡಿ. ಬಾಟಲಿಗೆ ನೀರು ತುಂಬಿ ಮುಚ್ಚಳ ಮುಚ್ಚಿರಿ. ಕುಂಡಗಳ ತುದಿಯಲ್ಲಿ ಮುಚ್ಚಳದ ಕೆಳಗೆ ಮಾಡಿ ಒಂದೂವರೆ ಇಂಚು ಆಳಕ್ಕೆ ಮಣ್ಣಿನಲ್ಲಿ ಹುಗಿಯಿರಿ. ಇದನ್ನು ನೆಲದಲ್ಲಿನ ಗಿಡಗಳಿಗೂ ಮಾಡಬಹುದು. ಮುಚ್ಚಳದಲ್ಲಿರುವ ರಂಧ್ರಗಳ ಮೂಲಕ ಮಣ್ಣು ನಿಧಾನವಾಗಿ ನೀರನ್ನು ಎಳೆದುಕೊಳ್ಳುತ್ತಿರುತ್ತದೆ. ನೀರು ಎಷ್ಟು ಗಂಟೆಗೆ ಖಾಲಿಯಾಯಿತು ಎಂದು ಗಮನಿಸಿ ಅವಶ್ಯಕತೆಗೆ ಅನುಗುಣವಾಗಿ ರಂಧ್ರಗಳನ್ನು ಹೆಚ್ಚಿಸಿ.

ಡ್ರಿಪ್ ನೀರಾವರಿ: ಪ್ಲಾಸ್ಟಿಕ್ ಬಾಟಲಿ ಅಥವಾ ಡ್ರಿಪ್ ಬಾಟಲಿಯ ಮುಚ್ಚಳದ ಮಧ್ಯೆ ಒಂದು ರಂಧ್ರ ಮಾಡಿ. ಸೆಣಬಿನ (ಸುತಳಿ) ದಾರವನ್ನು ಗಂಟು ಹಾಕಿ ಬಾಟಲಿಯ ಒಳಕ್ಕೆ ಸೇರಿಸಿ ಹೊರಗೆ ಇಳಿಬಿಡಿ. ಬಾಟಲಿಗೆ ನೀರು ತುಂಬಿ ಗಿಡದ ಪಕ್ಕ ನೇತುಹಾಕಿ. ಸೆಣಬಿನ ದಾರದ ಹೊರಗಿನ ಉದ್ದವನ್ನು ಸರಿಪಡಿಸುವುದರ ಮೂಲಕ ನೀರು ಗಿಡಕ್ಕೆ ಅಗತ್ಯವಿರುವಷ್ಟು ಬೀಳುವಂತೆ ಮಾಡಬಹುದು.

ಟ್ಯೂಬ್‌ಲೈಟ್ ಡ್ರಿಪ್: ಹಾಳಾದ ಟ್ಯೂಬ್‌ಲೈಟ್ ತೆಗೆದುಕೊಳ್ಳಿ. ಒಂದು ದಿಕ್ಕಿನಲ್ಲಿ ಬಾಯಿ ಬಿಡಿಸಿ. ಬಿಡಿಸಿದ ಬಾಯಿ ಮೇಲಿರುವಂತೆ ನೆಲಕ್ಕೆ ಹುಗಿಯಿರಿ. ಅದರ ಪಕ್ಕ ಬಳ್ಳಿಬೆಳೆಸಿರಿ. ಅದಕ್ಕೆ ನೀರು ತುಂಬಿ. ಡ್ರಿಪ್ ನೀರಾವರಿಗೆ ಬಳಸುವ ಪೈಪ್‌ನ ಒಂದು ತುದಿಯನ್ನು ಟ್ಯೂಬ್‌ಲೈಟ್‌ನ ತಳದವರೆಗೂ ಹಾಕಿ. ಮತ್ತೊಂದು ತುದಿಯನ್ನು ಗಿಡದ ಬುಡಕ್ಕೆ ಇಡಿ. ನೀರು ನಿಯಂತ್ರಕವನ್ನು ಡ್ರಿಪ್ ಪೈಪ್‌ಗೆ ಅಳವಡಿಸಿ. ಬಳ್ಳಿಗಳು ಟ್ಯೂಬ್‌ಲೈಟ್ ಬಳಸಿ ‌ ಮೇಲೇರುತ್ತವೆ. ನೀರು ಬೇಕಾದಷ್ಟೇ ಬುಡಕ್ಕೆ ಸಿಗುತ್ತಿರುತ್ತದೆ.

ಟ್ಯೂಬ್‌ಲೈಟ್ ಒಸರು: ಒಂದೊಮ್ಮೆ ಟ್ಯೂಬ್‌ಲೈಟ್ ಕೊಳವೆಯ ಎರಡೂ ಕಡೆ ಬಾಯಿ ತೆರೆದಿದ್ದರೆ ಒಂದು ಬಾಯಿಗೆ ತೆಂಗಿನ ನಾರನ್ನು ಬಿಗಿಯಾಗಿ ತುರುಕಿ ಮುಚ್ಚಿರಿ. ಗಿಡಗಳ ಪಕ್ಕ ನೆಲಕ್ಕೆ ತಾಗುವಂತೆ ಇಟ್ಟು ಪಕ್ಕದಲ್ಲಿ ಗೂಟ ನಿಲ್ಲಿಸಿ ಟ್ಯೂಬ್‌ಲೈಟನ್ನು ಕಟ್ಟಬೇಕು. ತೆರೆದಿರುವ ಬಾಯಿಗೆ ನೀರು ತುಂಬಿದರಾಯಿತು. ನೀರು ಹನಿ ಹನಿಯಾಗಿ ಇಳಿಯುತ್ತಿರುತ್ತದೆ. ಈ ವಿಧಾನವನ್ನು ಎರಡು ಲೀಟರ್ ನೀರಿನ ಬಾಟಲಿ ಬಳಸಿಯೂ ಮಾಡಬಹುದು. ಬಾಟಲಿಯ ಬಿರಡೆ ಭಾಗಕ್ಕೆ ತೆಂಗಿನನಾರನ್ನು ಬಿಗಿಯಾಗಿ ಮುಚ್ಚಿರಿ. ತಳಭಾಗವನ್ನು ಕತ್ತರಿಸಿ ಬಿರಡೆಯ ಭಾಗ ಮಣ್ಣಿಗೆ ತಾಗುವಂತೆ ಮಾಡಿ. ಗಿಡಕ್ಕೆ ಅಥವಾ ಗಿಡದ ಪಕ್ಕದ ಗೂಟಕ್ಕೆ ಕಟ್ಟಿರಿ. ಮೇಲಿನಿಂದ ನೀರು ತುಂಬಿರಿ.

ತುಂತುರು ಸಿಂಪಡಣೆ: ಎರಡು ಲೀಟರ್ ನೀರಿನ ಬಾಟಲಿಯ ತಳಭಾಗದಲ್ಲಿ ನಾಲ್ಕು ಉಬ್ಬುಗಳಿರುತ್ತವೆ. ಅವುಗಳಿಗೆ ದಬ್ಬಣ ಹಾಕಿ ಎರಡೆರಡು ರಂಧ್ರಗಳನ್ನು ಮಾಡಿರಿ. ಬಕೆಟ್‌ನಲ್ಲಿ ಮುಳುಗಿಸಿ ನೀರು ತುಂಬಿಸಿ ಮುಚ್ಚಳ ಹಾಕಿರಿ. ರಂಧ್ರಗಳಿಂದ ನೀರು ಹೊರಬರುವುದಿಲ್ಲ. ಗಿಡಗಳ ಬುಡಕ್ಕೆ ಒಯ್ದು ಬಾಟಲಿಯನ್ನು ಒತ್ತಿರಿ. ಕಾರಂಜಿಯಂತೆ ನೀರು ಚಿಮ್ಮುತ್ತದೆ. ಇದರಿಂದ ಎಷ್ಟು ಅಗತ್ಯವೋ ಅಷ್ಟೇ ನೀರನ್ನು ಗಿಡಗಳಿಗೆ ನೀಡಲು ಸಾಧ್ಯ. ಇವಿಷ್ಟೇ ಅಲ್ಲದೇ, ಶೋಧಿಸುತ್ತಾ ಹೋದರೆ ನೀವೇ ಸಾಕಷ್ಟು ಹೊಸತನ್ನು ಹುಡುಕಲು ಸಾಧ್ಯ. ತ್ಯಾಜ್ಯ ವಿಲೇವಾರಿ ಹಾಗೂ ನೀರುಳಿತಾಯ ಎರಡೂ ಒಮ್ಮೆಲೇ ಆಗುತ್ತದೆ. ಇದೆಲ್ಲಾ ಮಾಡಿ ವ್ಯರ್ಥವಾದ ಬಾಟಲಿಯಲ್ಲಿ ಚಿಕ್ಕ ಸಸಿಗಳನ್ನು ಬೆಳೆಸಲು ಸಾಧ್ಯ.

ಪ್ರತಿ ನೀರಾವರಿ ಪದ್ಧತಿ ಅಳವಡಿಸಿದ ಮೇಲೆ ನೀರು ಹರಿಯುವ ವೇಗ, ಸಮಯವನ್ನು ದಾಖಲಿಸಿರಿ. ಗಿಡಗಳ ಬೆಳವಣಿಗೆ ಗಮನಿಸಿರಿ. ಇದರಿಂದ ಗಿಡಗಳಿಗೆ ನೀರು ಎಷ್ಟು ಬೇಕು, ಯಾವ ರೀತಿ ಸೂಕ್ತ, ದ್ರವಗೊಬ್ಬರದ ಬಳಕೆ-ಹೀಗೆ ಏನೆಲ್ಲಾ ರೀತಿಗಳನ್ನು ಅಳವಡಿಸಲು ಉಪಯುಕ್ತ. ನಿಮ್ಮ ಕೈತೋಟಕ್ಕೆ ನಿಮ್ಮದೇ ಪದ್ಧತಿ ರೂಢಿಸಬಹುದು.

ನಲ್ಲಿಯಲ್ಲಿ ಕೈತೊಳೆಯ ಹೊರಟಿರಾ?
ನಲ್ಲಿಯಲ್ಲಿ ಕೈತೊಳೆದುಕೊಳ್ಳಲು ಹೊರಟಿದ್ದೀರಾ? ಒಂದು ನಿಮಿಷ ತಾಳಿ. ನೀವೆಷ್ಟು ನೀರು ಖರ್ಚು ಮಾಡುತ್ತಿದ್ದೀರಿ ಎಂಬುದನ್ನು ವಿವರಿಸುವೆ. ನಿಮ್ಮಲ್ಲಿ ಹಳೆಯ ಸ್ಪ್ರೇಯರ್ ಇದೆಯಾ? ಇಲ್ಲದಿದ್ದರೆ ಹೀಗೆ ಮಾಡಿ: ಒಂದು ಲೀಟರ್ ಬಾಟಲಿಯ ಬಿರಡೆಗೆ ಕೊಕ್ಕರೆ ಕತ್ತಿನ ಕೊಳವೆ ಜೋಡಿಸಿ. ನೀರು ತುಂಬಿಸಿ. ಬಾಟಲಿಯನ್ನು ಒತ್ತಿದರೆ ಒಮ್ಮೆಗೇ ಐದು ಮಿಲಿಲೀಟರ್ ನೀರು ಬರುತ್ತದೆ. ಮಣ್ಣು ಹೋಗಲಿಲ್ಲವೇ? ಎರಡೇಕೆ ಹತ್ತು ಸಾರಿ ಒತ್ತಿ. ಕೈಯ ಕೊಳೆ ಹೋಗುವವರಿಗೂ ಒತ್ತಿ.

ಎಷ್ಟು ನೀರು ಖರ್ಚಾಯಿತು ನೋಡಿ.  ನೀರು ಖರ್ಚಾಗಿರುವುದು ಹೆಚ್ಚೆಂದರೆ 100 ಮಿಲಿ ಲೀಟರ್ ಅಷ್ಟೇ. ಆದರೆ ಹಾಗೆಯೇ ನಲ್ಲಿಯಲ್ಲಿ ನೀರು ಬಿಟ್ಟಿದ್ದರೆ ಅಷ್ಟೇ ವೇಳೆಯಲ್ಲಿ ಕನಿಷ್ಠ ಒಂದು ಲೀಟರ್ ನೀರು ವ್ಯರ್ಥವಾಗುತ್ತಿತ್ತು. ಅಂದರೆ ಕನಿಷ್ಠ 10 ಜನರಿಗೆ ಆಗುವಷ್ಟು ನೀರು ನೀವೊಬ್ಬರೇ ಖರ್ಚು ಮಾಡುತ್ತಿರಿ ಎಂದಾಯಿತು. ನೀರು ದುಬಾರಿಯಾಗಿ ಅದು ಸಿಗದ ಪರಿಸ್ಥಿತಿ ಎದುರಾಗುವ ಮೊದಲೇ ಎಚ್ಚೆತ್ತುಕೊಂಡರೆ ಪಶ್ಚಾತ್ತಾಪ ಪಡುವುದು ತಪ್ಪುತ್ತದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT