ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂತ ವೈದ್ಯರಿಗೆ ಉದ್ಯೋಗದ ಭಾಗ್ಯವಿದೆಯೇ?

Last Updated 11 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ‘ದಂತ ಭಾಗ್ಯ’ ಯೋಜನೆ ಜಾರಿಗೊಳಿಸಿದೆ. ಇದು ನಿಜಕ್ಕೂ ಉತ್ತಮ ಕಾರ್ಯಕ್ರಮ. ಆದರೆ ಈ ಯೋಜನೆ ಕಾರ್ಯಗತಗೊಳಿಸಲು ಹೊರಟರೆ ಅದಕ್ಕೆ ಸಾಕಾಗುವಷ್ಟು  ವೈದ್ಯರಿಲ್ಲ. 2011ರ ಜನ­ಗಣತಿಯ ಪ್ರಕಾರ, ಕರ್ನಾಟಕದ ಜನಸಂಖ್ಯೆ 6.11 ಕೋಟಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ದಂತ ವೈದ್ಯರ ಸಂಖ್ಯೆ 300  ದಾಟುವುದಿಲ್ಲ.

ಅಂದರೆ ಸುಮಾರು ಪ್ರತಿ 2 ಲಕ್ಷ ಜನರಿಗೆ ಒಬ್ಬ ದಂತ ವೈದ್ಯ. ಇದಲ್ಲದೆ ಸುಮಾರು 8,000 ದಂತ­ವೈದ್ಯರಿರಬಹುದು, ಅವರಲ್ಲಿ ಕೇವಲ ಅರ್ಧ­ದಷ್ಟು ವೈದ್ಯರು ಇದೇ ವೃತ್ತಿಯಲ್ಲಿ ಮುಂದುವರೆ­ಯುತ್ತಿದ್ದಾರೆ.  ಉಳಿದವರು ಬಿಪಿಒ ಮೊದಲಾದ ಕಡೆಗಳಲ್ಲಿ ಕೆಲಸ ಮಾಡುವ ಅನಿವಾರ್ಯ ಒದಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ನಿಯಮದಂತೆ ಪ್ರತಿ 2,000 ಜನರಿಗೆ ಒಬ್ಬರು ದಂತವೈದ್ಯರು ಇರ­ಬೇಕು. ಅದೂ ಹೋಗಲಿ, 20,000 ಜನರಿಗಾ­ದರೂ ಒಬ್ಬರು ದಂತ ವೈದ್ಯರು ಬೇಡವೆ? ಕರ್ನಾ­ಟ­ಕದಲ್ಲಿ ದೇಶದಲ್ಲೇ ಹೆಚ್ಚು ದಂತ ವೈದ್ಯ ಕಾಲೇ­ಜು­ಗಳಿವೆ. ಪ್ರತಿ ವರ್ಷ 2000 ದಂತ ವೈದ್ಯರು ಪದವಿ ಪಡೆದು ಹೊರ ಬರುತ್ತಿದ್ದಾರೆ. ಆದರೆ ಇವ­ರೆಲ್ಲ ನಿಜಕ್ಕೂ ನಿರುದ್ಯೋಗಿಗಳಾಗಿ ಖಾಲಿ ಕುಳಿತಿ­ದ್ದಾರೆ ಅಥವಾ ಇಷ್ಟು ವಿದ್ಯಾಭ್ಯಾಸ ಮಾಡಿದ ಮೇಲೆ ಜೀವನೋಪಾಯಕ್ಕೆಂದು ಬೇರೆ ಕ್ಷೇತ್ರಗಳ ಕಡೆಗೆ ಹೊರಳಿಕೊಂಡಿದ್ದಾರೆ.

ಪದವೀಧರರಾದ ದಂತ ವೈದ್ಯರು ಸೇವೆ ಮಾಡಲು ಸಿದ್ಧರಿದ್ದರೂ ಸರ್ಕಾರ ಅವರಿಗೆ ಕೆಲಸ­ವನ್ನೇ ನೀಡುತ್ತಿಲ್ಲ. ಇಡೀ ರಾಜ್ಯದ ಸರ್ಕಾರಿ ಸೇವೆಗೆ  ಕನಿಷ್ಠ 1,000 ದಂತ ವೈದ್ಯರಾ­ದರೂ ಬೇಕಾ­ಗುತ್ತದೆ. ಎಲ್ಲಾ ಊರುಗಳಲ್ಲೂ ಸಮು­ದಾಯ  ಆರೋಗ್ಯ ಕೇಂದ್ರ­ಗಳಲ್ಲೂ ಇವರ ಅವಶ್ಯಕತೆ­ಯಿದೆ. ಆದರೆ ದಂತ ವೈದ್ಯರ ನೇಮಕಾ­ತಿಯೇ ನಡೆದಿಲ್ಲ.

ಇದು ಈಗಿನ ವಿಚಾರವಲ್ಲ. ಕಳೆದ 20 ವರ್ಷಗ­ಳಿಂದಲೂ ದಂತ ವೈದ್ಯರ ನೇಮಕಾತಿ­ಯಾಗಲೀ, ಕಾಯಂ ಹುದ್ದೆ­ಗಳಾಗಲೀ ಸೃಷ್ಟಿ­ಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವವರೂ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಪಡೆದಿದ್ದಾರೆ. ಈ ಧೋರಣೆಯಿಂದ ನಿಜವಾಗಿ ಸಂಕಷ್ಟಕ್ಕೆ ಈಡಾ­ಗಿರುವವರು ಬಡ– ಮಧ್ಯಮ ವರ್ಗದ ರೋಗಿ­­ಗಳು.

ಏಕೆಂದರೆ ಓದುವಾಗ ಶುಲ್ಕಕ್ಕೆಂದು ಲಕ್ಷಗಟ್ಟಲೆ ಹಣ ಖರ್ಚುಮಾಡಿ ಪದವಿ ಪಡೆದು ದಂತ ವೈದ್ಯರಾದವರು ಖಾಸಗಿ ಕ್ಲಿನಿಕ್‌ ಪ್ರಾರಂಭಿ­ಸಲು ಮತ್ತೆ ಲಕ್ಷಾಂತರ ರೂಪಾಯಿಗಳ ಬಂಡ­ವಾಳ ಹೂಡಬೇಕು. ಏಕೆಂದರೆ ದಂತ ವೈದ್ಯಕೀಯ ಚಿಕಿತ್ಸೆಗೆ ಬಳಸುವ ಪರಿಕರ, ಉಪಕರಣಗಳು ಬಹಳ ದುಬಾರಿ. ದಂತ ವೈದ್ಯ ತಾನು ಮೊದಲೇ ಖರ್ಚು ಮಾಡಿರುವ, ಹೂಡಿರುವ ಹಣವನ್ನು  ಜನ­ರಿಂದ ವಸೂಲು ಮಾಡುತ್ತಾನೆ.

ಪರಿಸ್ಥಿತಿ ಹೀಗಿದ್ದರೂ ಶ್ರೀಮಂತರು ಹೇಗಾದರೂ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಬಡವರು ಮತ್ತು ಮಧ್ಯಮ ವರ್ಗದ ರೋಗಿಗಳು ಈ ದುಬಾರಿ ಖಾಸಗಿ ಚಿಕಿತ್ಸೆ ಪಡೆಯಲಾಗದೇ ಸುಮ್ಮನಿದ್ದು ಬಿಡುತ್ತಾರೆ. ಅಂಥವರು ದಂತ ಚಿಕಿತ್ಸೆಯಿಂದ ವಂಚಿ­ತರಾಗುತ್ತಾರೆ. ಆದರೆ ಸುಮ್ಮನಿರಲೂ ಆಗದೇ, ಚಿಕಿತ್ಸೆ ಪಡೆದುಕೊಳ್ಳಲೂ ಆಗದೇ ಮೊದಲ ಹಂತದಲ್ಲಿ ಮಾತ್ರೆ, ಇಂಜೆಕ್ಷನ್‌ ಪಡೆದು ಹಲ್ಲಿನ ಸಮಸ್ಯೆಗೆ ತಾತ್ಕಾಲಿಕ ಶಮನ ಪಡೆಯು­ತ್ತಾರೆ, ಆದರೆ ಕಾಲಕಳೆದಂತೆ ಹಲ್ಲುಗಳು ತೀರಾ ಹಾಳಾ­ದಾಗ,  ವಿಧಿಯಿಲ್ಲದೆ 8–10ನೇ ವಯ­ಸ್ಸಿಗೆ 3–4 ಹಲ್ಲುಗಳನ್ನು ತೆಗೆಸಬೇಕಾಗು­ತ್ತದೆ.

ಆರೋಗ್ಯ ಸಚಿ­ವರು ಈ ವಿಚಾರದ ಬಗ್ಗೆ ತೀವ್ರ­ವಾಗಿ ಗಮನಿ­ಸ­ಬೇಕಾದ ಅಗತ್ಯವಿದೆ. ದಂತ ಚಿಕಿತ್ಸೆ ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಬೇಕಾದ ಚಿಕಿತ್ಸೆ­ಯಾಗಿದೆ. ಇದರ ಜೊತೆಗೆ ಫ್ಲೋರೈಡ್‌ ಸಮಸ್ಯೆ ಕರ್ನಾ­ಟಕದ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದೆ.  ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲು  ದಂತ ವೈದ್ಯರಿಂದ ಮಾತ್ರ ಸಾಧ್ಯ. ಆರೋಗ್ಯ ಇಲಾಖೆಯು ದಂತ ವೈದ್ಯರ ಸೇವೆ ಬಳಸಿಕೊಂಡು ಬಡ ರೋಗಿ­ಗ­ಳಿಗೂ ಹಾಗೂ ವೈದ್ಯರಿಗೂ ಉಪಕಾರ ಮಾಡಬೇಕು.

ದಂತ ವೈದ್ಯರಾಗಲು ಓದಿ ಪದವಿ ಗಳಿಸಿಬಿಟ್ಟರೆ ಅವರಿಗೆ ಮುಂದಿನ ವಿದ್ಯಾಭ್ಯಾಸವಾಗಲೀ, ಬೇರೆ ಉದ್ಯೋಗಗಳಿಗಾಗಲೀ ಯಾವುದಕ್ಕೂ ಹೆಚ್ಚಿನ ದಾರಿ­ಗಳೇ ಇಲ್ಲ. ಏಕೆಂದರೆ  ಐಎಎಸ್‌, ಕೆಎಎಸ್‌ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ­ಗಳಲ್ಲೂ ದಂತ ವೈದ್ಯಕೀಯ ಅಧ್ಯಯನದ ಒಂದು ಐಚ್ಛಿಕ ವಿಷಯವೇ (optional) ಇಲ್ಲ. ಇದ­ರಿಂದ ದಂತ ವೈದ್ಯ ಕೋರ್ಸ್‌ ಓದಿ ಈ ಪರೀಕ್ಷೆಗಳನ್ನು ಎದು
ರಿ­ಸುವವರು ಅನಿವಾರ್ಯವಾಗಿ ಬೇರೆ ವಿಷಯ ಆಯ್ಕೆ ಮಾಡಿಕೊಳ್ಳಬೇಕು. 

ಆ ಹೊಸ ವಿಷಯ­ಗಳ ಗಂಧ–ಗಾಳಿಯೇ ಇಲ್ಲದ ಕಾರಣ, ಅದರಲ್ಲೂ ಯಶಸ್ವಿಯಾಗಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ದಂತ ವೈದ್ಯರ ಪರಿಸ್ಥಿತಿ­ಯನ್ನು ಅರಿಯಬೇಕಿದೆ. ಹೇಳಿಕೊಳ್ಳಲು ವೈದ್ಯರಾ­ದರೂ ಗ್ರಾಮಾಂತರ ಪ್ರದೇಶದಲ್ಲಿನ ಖಾಸಗಿ ಕ್ಲಿನಿಕ್ಕಿನ ದಂತ ವೈದ್ಯರ ಮಾಸಿಕ ದುಡಿಮೆ ₨ 10,000 ದಾಟದಂತಹ ದೈನೇಸಿ ಸ್ಥಿತಿಯಿದೆ. ನಗರದಲ್ಲಿನ ದಂತ ವೈದ್ಯರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ದಂತ ವೈದ್ಯರ ನೇಮಕಾತಿಗೆ ಸರ್ಕಾರ ಒಲವು ತೋರಬೇಕಿದೆ. ಇದರಿಂದ ಜನರಿಗೆ ನಿಜಕ್ಕೂ ಈ ದಂತ ವೈದ್ಯರ  ವತಿಯಿಂದ ಉತ್ತಮ ಚಿಕಿತ್ಸೆ ದೊರಕಿ ಬಾಯಿಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆ­ಯನ್ನು  ಪ್ರಾರಂಭದಲ್ಲೇ ಗುರುತಿಸಿ ಒದಗ­ಬಹುದಾದ ಮುಂದಿನ ಸಮಸ್ಯೆಗಳನ್ನು ತಡೆಗಟ್ಟ­ಬಹುದು. ಸ್ವಂತ ಕ್ಲಿನಿಕ್‌ ಮಾಡಿ ದುಡಿಮೆ ಮಾಡ­ಲಾಗದೆ ಕ್ಲಿನಿಕ್‌ ಮುಚ್ಚಿದ ದಂತ ವೈದ್ಯರ ನೂರಾರು ಉದಾಹರಣೆಗಳಿವೆ. 

ಬೇರೆ ಓದಿಗೂ ಹೋಗಲಾಗದೆ, ದುಡಿಮೆಯೂ ಸಾಗದೆ, ಸರ್ಕಾರಿ ಕೆಲಸವೂ ದೊರಕದೆ ದಂತ ವೈದ್ಯರಂತೂ ಹೈರಾಣಾಗಿದ್ದಾರೆ. ಮುಂದೇನು ಎಂಬ ಭವಿಷ್ಯದ ಚಿಂತೆಯಿಂದ ದಿನ ತಳ್ಳುತ್ತಿದ್ದಾರೆ. ಆತ್ಮವಿಶ್ವಾಸವೇ ಉಡುಗಿ ಹೋಗಿರುವ ನತದೃಷ್ಟ ದಂತ ವೈದ್ಯರಿಗೆ ಉದ್ಯೋಗಭಾಗ್ಯ ಕೊಟ್ಟು ಅಭಯ ನೀಡಬೇಕಾದ ಅವಶ್ಯಕತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT