ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ತಂಡದ ಶುಭಾರಂಭ

ಭಾರತ–ದಕ್ಷಿಣ ಆಫ್ರಿಕಾ ಟ್ವೆಂಟಿ–20 ಪಂದ್ಯ; ರೋಹಿತ್ ಶರ್ಮಾ ಶತಕ ವ್ಯರ್ಥ
Last Updated 2 ಅಕ್ಟೋಬರ್ 2015, 19:38 IST
ಅಕ್ಷರ ಗಾತ್ರ

ಧರ್ಮಶಾಲಾ: ಜೀನ್ ಪಾಲ್ ಡುಮಿನಿ ಮತ್ತು ಎಬಿ ಡಿವಿಲಿಯರ್ಸ್ ಅವರ ಅರ್ಧಶತಕಗಳು ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕಾರಣವಾದವು. ಆದರೆ, ಭಾರತ ಸವಾಲಿನ ಮೊತ್ತ ಕಲೆ ಹಾಕಲು ಕಾರಣರಾಗಿದ್ದ ರೋಹಿತ್ ಶರ್ಮಾ ಅವರ ಸ್ಫೋಟಕ ಶತಕವು ವ್ಯರ್ಥವಾಯಿತು. 

ಧರ್ಮಶಾಲಾದ ಸುಂದರವಾದ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ  ನಡೆದ ‘ಫ್ರೀಡಮ್ ಕಪ್’ ಸರಣಿಯ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್‌ಗಳಿಂದ ಗೆದ್ದಿತು.

ಟಾಸ್ ಸೋತು ಬ್ಯಾಟಿಂಗ್‌ ಪಡೆದ ಭಾರತ ತಂಡವು ರೋಹಿತ್ ಶರ್ಮಾ  (106; 66ಎ, 12ಬೌಂ, 5ಸಿ) ಅವರ ಅಮೋಘ ಶತಕದಿಂದ 5 ವಿಕೆಟ್‌ ಕಳೆದುಕೊಂಡು 199 ರನ್ ಗಳಿಸಿತ್ತು. ಆದರೆ, ಕೇವಲ 3 ವಿಕೆಟ್‌ ಕಳೆದುಕೊಂಡ ಪ್ರವಾಸಿ ಬಳಗವು  ಇನ್ನು ಎರಡು ಎಸೆತಗಳು ಬಾಕಿಯಿರುವಂತೆಯೇ ಗೆಲುವಿನ ನಗೆ ಬೀರಿತು.

ಅದಕ್ಕೆ ಕಾರಣವಾಗಿದ್ದು ಆರಂಭಿಕ ಜೋಡಿ ಹಾಶಿಮ್‌ ಅಮ್ಲಾ (36; 24ಎ, 5ಬೌಂ) ಮತ್ತು ಎಬಿ ಡಿವಿಲಿಯರ್ಸ್ (51; 32ಎ,7ಬೌಂ, 1ಸಿ) ಅವರು ಹಾಕಿದ 77 ರನ್‌ಗಳ ಭದ್ರ ಬುನಾದಿ. ಪ್ರತಿ ಓವರ್‌ಗೆ ಸರಾಸರಿ 11 ರನ್‌ ಗಳಿಸಿದ ಇವರಿಬ್ಬರೂ ಭಾರತದ ಬೌಲರ್‌ಗಳ ಬೆವರಿಳಿಸಿದರು.  ಭುವನೇಶ್ವರ್ ಕುಮಾರ್ ಮತ್ತು ಆರ್. ಅಶ್ವಿನ್ ಅವರ ಚುರುಕಿನ ಪ್ರಯತ್ನದಿಂದಾಗಿ ಆಮ್ಲಾ ರನೌಟ್ ಆದರು.

ತಂಡವು ನೂರರ ಗಡಿ ದಾಟಲು ಇನ್ನೂ ಏಳು ರನ್ ಬೇಕಿದ್ದ ಸಂದರ್ಭದಲ್ಲಿ ಡಿವಿಲಿಯರ್ಸ್ ಅವರು ಅಶ್ವಿನ್ ಹಾಕಿದ ಸ್ಪಿನ್‌ಗೆ ಬೀಟ್ ಆದರು. ಚೆಂಡು ಸ್ಟಂಪ್‌ ಎಗರಿಸಿತು. ಆಗ ಭಾರತದ ಪಾಳಯದಲ್ಲಿ ಸಂತಸದ ಹೊನಲು ಹರಿಯಿತು. ಗ್ಯಾಲರಿ ತುಂಬಿದ್ದ ಪ್ರೇಕ್ಷಕರ ವಿಜಯೋತ್ಸಾಹ ಹಿಮಾಲಯದ ತಪ್ಪಲಿನಲ್ಲಿ ಪ್ರತಿಧ್ವನಿಸಿತು.

ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕನ್ನಡಿಗ, ಎಡಗೈ ಮಧ್ಯಮವೇಗಿ ಶ್ರೀನಾಥ್ ಅರವಿಂದ್ ದಕ್ಷಿಣ ಆಫ್ರಿಕಾ ತಂಡದ  ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕ್ಲೀನ್‌ಬೌಲ್ಡ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಇದಾದ ನಂತರ ಸಡಗರಪಡುವ ಅವಕಾಶವನ್ನೇ ಡುಮಿನಿ (68; 34ಎ, 1ಬೌಂ, 7ಸಿ) ಮತ್ತು ಫರ್ಹಾನ್ ಬೆಹ್ರಾಡೀನ್ (23ಎ, 4ಬೌಂ, 1ಸಿ) ನೀಡಲಿಲ್ಲ. ಎಲ್ಲ ಬೌಲರ್‌ಗಳ ಮೇಲೂ ದಂಡೆತ್ತಿ ಹೋದರು. ಎಡಗೈ ಬ್ಯಾಟ್ಸ್‌ಮನ್ ಡುಮಿನಿ ಹೊಡೆದ ಏಳು ಸಿಕ್ಸರ್‌ಗಳು ಆತಿಥೇಯರ ಗೆಲುವಿನ ಅವಕಾಶಗಳನ್ನು ಮೈದಾನದಿಂದ ಹೊತ್ತೊಯ್ದವು.

ಅರವಿಂದ್‌ಗೆ ಕೊನೆಯ ಓವರ್: ಪಂದ್ಯದ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವಿಗೆ ಹತ್ತು ರನ್ ಗಳಿಸಬೇಕಿತ್ತು. ಆಗ ನಾಯಕ ಮಹೇಂದ್ರಸಿಂಗ್ ದೋನಿ ಪದಾರ್ಪಣೆ ಆಟಗಾರ ಅರವಿಂದ್ ಕೈಗೆ ಚೆಂಡು ನೀಡಿ ಅಚ್ಚರಿ ಮೂಡಿಸಿದರು.

ಅವರ ಮೊದಲ ಎಸೆತದಲ್ಲಿ ಬೆಹ್ರಾಡೀನ್ ಒಂದು ರನ್ ಪಡೆದರು. ಅವರು ಎರಡನೇ ಬಾರಿ ಪ್ರಯೋಗಿಸಿದ ಯಾರ್ಕರ್‌ ಅನ್ನು ಆಫ್‌ಸೈಡ್‌ಗೆ ಹೊಡೆದ ಡುಮಿನಿ ಎರಡು ರನ್ ಗಳಿಸಿದರು. ಆದರೆ, ಮೂರನೇ ಎಸೆತದಲ್ಲಿ ಯಾರ್ಕರ್ ಹಾಕುವ ಯತ್ನ ವಿಫಲವಾ
ಯಿತು. ಫುಲ್‌ಟಾಸ್ ಆದ ಚೆಂಡನ್ನು ಡುಮಿನಿ ಡೀಪ್‌ಮಿಡ್‌ವಿಕೆಟ್‌ಗೆ ಸಿಕ್ಸರ್‌ ಎತ್ತಿದರು.   ಅಲ್ಲಿಗೆ ಭಾರತದ ಗೆಲುವಿನ ಆಸೆಗೆ ತೆರೆ ಬಿತ್ತು. ಮರು ಎಸೆತದಲ್ಲಿ ಡುಮಿನಿ ಒಂದು ರನ್ ಗಳಿಸಿ ಸಂಭ್ರಮಿಸಿದರು.

ರೋಹಿತ್ ಮಿಂಚು: ಟಾಸ್ ಸೋತು ಬ್ಯಾಟಿಂಗ್ ಪಡೆದ ಭಾರತ ತಂಡಕ್ಕೆ ಆರಂಭದಲ್ಲಿಯೇ ಆಘಾತ ಕಾದಿತ್ತು. ನಾಲ್ಕನೇ ಓವರ್‌ನಲ್ಲಿ ಶಿಖರ್ ಧವನ್ (3 ರನ್) ರನ್‌ಔಟ್ ಆಗಿ ಮರಳಿದರು. ಆದರೆ, ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತಮ್ಮ ಫಾರ್ಮ್ ಕಂಡುಕೊಂಡರು. ಅವರಿಗೆ ವಿರಾಟ್ ಕೊಹ್ಲಿ ಉತ್ತಮ ಬೆಂಬಲ ನೀಡಿದರು.

ವೇಗಿ ಅಬಾಟ್ ಎಸೆತಗಳನ್ನು ಲೀಲಾಜಾಲವಾಗಿ ಎದುರಿಸಿದ ಮುಂಬೈ ಆಟಗಾರ ರೋಹಿತ್ ಶರ್ಮಾ ಶತಕದತ್ತ ದಾಪುಗಾಲಿಟ್ಟರು. ಎಲ್ಲ ಬೌಲರ್‌ಗಳ ಎಸೆತಗಳಿಗೂ ಬೌಂಡರಿ, ಸಿಕ್ಸರ್‌ಗಳ ಉತ್ತರವನ್ನೇ ನೀಡಿದರು. ಅವರು 97 ರನ್ ಗಳಿಸಿದ್ದಾಗ ಸಿಕ್ಸರ್ ಮೂಲಕವೇ ಶತಕದ ಗಡಿ ದಾಟಿದ್ದು ವಿಶೇಷ. ಆ ಮೂಲಕ ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳಲ್ಲಿ ಶತಕ ಬಾರಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಗೌರವ ಪಡೆದರು. 2010ರಲ್ಲಿ ಸುರೇಶ್ ರೈನಾ ಅವರು ದಕ್ಷಿಣ ಆಫ್ರಿಕಾದಲ್ಲಿ ಈ ಸಾಧನೆ ಮಾಡಿದ್ದರು.

ಅವರಿಂದ ಅತಿ ಹೆಚ್ಚು ದಂಡನೆಗೆ ಒಳಗಾಗಿದ್ದ ಅಬಾಟ್ ಅವರೇ ರೋಹಿತ್ ವಿಕೆಟ್ ಪಡೆದರು. ಹದಿನಾರನೇ ಓವರ್‌ನಲ್ಲಿ ಅವರು ಮೋರಿಸ್‌ಗೆ ಕ್ಯಾಚ್‌ ಕೊಟ್ಟರು.

ವಿರಾಟ್ ಕೊಹ್ಲಿ (43ರನ್), ಸುರೇಶ್ ರೈನಾ (13), ಮಹೇಂದ್ರಸಿಂಗ್ ದೋನಿ (ಔಟಾಗದೆ 20) ತಮ್ಮ ಕಾಣಿಕೆ ನೀಡಿದರು. ಆದರೆ, ಬ್ಯಾಟಿಂಗ್‌ಗೆ ಹೆಚ್ಚು ಸಹಕಾರ ನೀಡಿದ ಪಿಚ್‌ನಲ್ಲಿ ಆತಿಥೇಯ ಬೌಲರ್‌ಗಳು ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದು ಸೋಲಿಗೆ ಕಾರಣವಾಯಿತು.

‘ಎರಡೂ ತಂಡಗಳು 200 ರನ್ ಗಳಿಸಿದ ಪಂದ್ಯ ಇದು. ಎಂತಹ ಅದ್ಭುತವಾದ ಅನುಭವ ಇದು. ರೋಹಿತ್ ಶರ್ಮಾ ಆಟವಂತೂ ಅಮೋಘವಾಗಿತ್ತು. ಅದೃಷ್ಟ ನಮ್ಮ ಪರವಾಗಿತ್ತು. ಅಲ್ಲದೇ ಆರಂಭದಲ್ಲಿ ಡಿವಿಲಿಯರ್ಸ್ ಮತ್ತು ಹಾಶಿಮ್‌ ಹಾಕಿದ್ದ ಭದ್ರಬು
ನಾದಿ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿತ್ತು. ಅದರೊಂದಿಗೆ ಬೆಹ್ರಾಡೀನ್ ಉತ್ತಮ ಬೆಂಬಲ ನೀಡಿದರು. ಬೌಲರ್‌ಗಳಿಗೆ ಈ ಪಿಚ್ ಸವಾಲಿನದಾಗಿತ್ತು’ ಎಂದು ಜೆ.ಪಿ. ಡುಮಿನಿ ಪಂದ್ಯದ ನಂತರ ಹೇಳಿದರು.

ಸ್ಕೋರು ವಿವರ

ಭಾರತ 5 ಕ್ಕೆ 199   (20 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ಸಿ ಮೋರಿಸ್ ಬಿ ಕೈಲ್ ಅಬಾಟ್  106
ಶಿಖರ್ ಧವನ್ ರನ್‌ಔಟ್ (ಡಿ ಲೇಂಜ್/ಡಿವಿಲಿಯರ್ಸ್)  03
ವಿರಾಟ್ ಕೊಹ್ಲಿ ಸಿ ಜೆ.ಪಿ. ಡುಮಿನಿ ಬಿ ಕೈಲ್ ಅಬಾಟ್  43
ಸುರೇಶ್ ರೈನಾ ಎಲ್‌ಬಿಡಬ್ಲ್ಯು ಬಿ ಕ್ರಿಸ್ ಮೋರಿಸ್  14
ಮಹೇಂದ್ರಸಿಂಗ್ ದೋನಿ ಔಟಾಗದೆ  20
ಅಂಬಟಿ ರಾಯುಡು ರನ್‌ಔಟ್ (ಅಮ್ಲಾ/ಮೋರಿಸ್)  00
ಅಕ್ಷರ್ ಪಟೇಲ್ ಔಟಾಗದೆ  02

ಇತರೆ: (ಲೆಗ್‌ಬೈ 2, ವೈಡ್ 8, ನೋಬಾಲ್ 1)  11

ವಿಕೆಟ್‌ ಪತನ: 1–22 (ಧವನ್; 3.1), 2–160 (ಕೊಹ್ಲಿ; 15.3), 3–162 (ಶರ್ಮಾ;15.6), 4–184 (ರೈನಾ;18,3), 5–184 (ರಾಯುಡು; 18.4)

ಬೌಲಿಂಗ್‌: ಕೈಲ್ ಅಬಾಟ್ 4–0–29–2, ಕಗಿಸೊ ರಬಾಡಾ 4–0–32–0 (ವೈಡ್ 2), ಎಂ. ಡಿ ಲೇಂಜ್ 4–0–47–0 (ನೋಬಾಲ್ 1, ವೈಡ್2), ಕ್ರಿಸ್ ಮೋರಿಸ್ 4–0–46–1 (ವೈಡ್1), ಇಮ್ರಾನ್ ತಾಹೀರ್ (3–0–35–0 (ವೈಡ್ 1), ಜೆ.ಪಿ. ಡುಮಿನಿ 1–0–8–0
 

ದಕ್ಷಿಣ ಆಫ್ರಿಕಾ 3ಕ್ಕೆ 200  (19.4 ಓವರ್‌ಗಳಲ್ಲಿ)
ಹಾಶಿಮ್‌ ಆಮ್ಲಾ ರನ್‌ಔಟ್ (ಭುವನೇಶ್ವರ್‌ಕುಮಾರ್/ ಅಶ್ವಿನ್)  36
ಎ.ಬಿ. ಡಿವಿಲಿಯರ್ಸ್ ಬಿ ಆರ್. ಅಶ್ವಿನ್  51
ಫಾಫ್ ಡು ಪ್ಲೆಸಿಸ್ ಬಿ ಎಸ್. ಅರವಿಂದ್  04
ಜೆ.ಪಿ. ಡುಮಿನಿ  ಔಟಾಗದೆ  68
ಫರ್ಹಾನ್ ಬೆಹ್ರಾಡೀನ್‌ ಔಟಾಗದೆ  32
ಇತರೆ: (ಲೆಗ್‌ಬೈ 5, ವೈಡ್ 4)   09

ವಿಕೆಟ್‌ ಪತನ: 1–77 (ಆಮ್ಲಾ; 7.4), 2–93 (ಡಿವಿಲಿಯರ್ಸ್ ; 9.5), 3–95 (ಡುಪ್ಲೆಸಿಸ್ ; 10.3),

ಬೌಲಿಂಗ್‌: ಭುವನೇಶ್ವರ್ ಕುಮಾರ್ 4–0–40–0 (ವೈಡ್‌1), ಎಸ್. ಅರವಿಂದ್ 3.4–0–44–1, ಮೋಹಿತ್ ಶರ್ಮಾ 4–0–40–0 (ವೈಡ್ 1), ಅಕ್ಷರ್ ಪಟೇಲ್ 4–0–45–0 (ವೈಡ್‌1), ಆರ್. ಅಶ್ವಿನ್ 4–0–26–1 (ವೈಡ್ 1)

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 7 ವಿಕೆಟ್‌ ಗೆಲುವು ಹಾಗೂ ಸರಣಿಯಲ್ಲಿ 1–0 ಮುನ್ನಡೆ

ಪಂದ್ಯಶ್ರೇಷ್ಠ: ಜೆ.ಪಿ ಡುಮಿನಿ (ದಕ್ಷಿಣ ಆಫ್ರಿಕಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT