ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಏಷ್ಯಾ ಕೊಕ್ಕೊದಲ್ಲಿ ಕನ್ನಡಿಗ ಮುನೀರ್‌ ಮಿಂಚು

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಕೊಕ್ಕೊ ಸಾಕಷ್ಟು ಜನಪ್ರಿಯ ಕ್ರೀಡೆ. ಟೆಲಿವಿಷನ್‌ ಮೂಲಕ ಜನರನ್ನು ತಲುಪುವ ಅವಕಾಶಗಳು ಈ ಕ್ರೀಡೆಗೆ ಸದ್ಯದ ಮಟ್ಟಿಗೆ ಬಲು ಕಡಿಮೆ. ಹೀಗಾಗಿ ಕ್ರಿಕೆಟ್‌, ಪ್ರೊ ಕಬಡ್ಡಿ, ಫುಟ್‌ಬಾಲ್‌ನಷ್ಟು ಜನಮನ್ನಣೆ ಇಲ್ಲ. ಆದರೂ ಹಳ್ಳಿ ಹಳ್ಳಿಗಳಲ್ಲಿ ಕೊಕ್ಕೊ ಪರಿಚಿತ. ರಾಜ್ಯ ಮಟ್ಟದ ಶಾಲಾ ಕ್ರೀಡಾ ಕೂಟಗಳಲ್ಲಿ ಈ ಕ್ರೀಡೆ ಜನಜನಿತ.

ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಕರ್ನಾಟಕ ದಶಕಗಳಿಂದಲೂ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಪಶ್ಚಿಮ ಬಂಗಾಳಗಳಂತಹ ಪ್ರಬಲ ತಂಡಗಳ ವಿರುದ್ಧ ಗಮನಾರ್ಹ ಸಾಮರ್ಥ್ಯ ತೋರುತ್ತಲೇ ಬಂದಿದೆ.

ವರ್ಷದ ಹಿಂದೆ ತುಮಕೂರಿನಲ್ಲಿ ಫೆಡರೇಷನ್‌ ಕಪ್‌ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ ನಡೆದಿದ್ದಾಗ, ಕರ್ನಾಟಕ ಪ್ರಶಸ್ತಿ ಗೆದ್ದಿತ್ತು. ಆ  ಟೂರ್ನಿಯಲ್ಲಿ ಭದ್ರಾವತಿಯ ಮುನೀರ್‌ ಬಾಷಾ ‘ಅತ್ಯುತ್ತಮ ಆಲ್‌ ರೌಂಡರ್’ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮುನೀರ್‌, ಕರ್ನಾಟಕ ಕಂಡ ಅತ್ಯುತ್ತಮ ಕೊಕ್ಕೊ ಆಟಗಾರರಲ್ಲಿ ಒಬ್ಬರು. ಗುವಾಹಟಿಯಲ್ಲಿ ಎರಡು ತಿಂಗಳ ಹಿಂದೆ ನಡೆದಿದ್ದ ದಕ್ಷಿಣ ಏಷ್ಯಾ ಫೆಡರೇಷನ್‌ ಕ್ರೀಡಾ ಕೂಟದಲ್ಲಿ ಇದೇ ಮೊದಲ ಬಾರಿಗೆ ಕೊಕ್ಕೊ ಕ್ರೀಡೆಯನ್ನು ಸೇರಿಸಲಾಗಿತ್ತು. ಆ ಕೂಟದಲ್ಲಿ ಭಾರತ ತಂಡ ಅತ್ಯುತ್ತಮವಾಗಿ ಆಡಿತ್ತು. ಈ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಏಕೈಕ ಕನ್ನಡಿಗ ಮುನೀರ್‌.

ಗುವಾಹಟಿಯಲ್ಲಿ ನೇಪಾಳ ಮತ್ತು ಶ್ರೀಲಂಕಾ ವಿರುದ್ಧ ಸುಲಭವಾಗಿ ಗೆದ್ದ ಭಾರತ ತಂಡ, ನಿರ್ಣಾಯಕ ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳನ್ನೂ ನಿರಾಯಾಸವಾಗಿ ಸೋಲಿಸಿತ್ತು. ಆ ಎಲ್ಲಾ ಪಂದ್ಯಗಳಲ್ಲಿಯೂ ಮುನೀರ್‌ ಮಿಂಚಿದ್ದರು.

ಇವರು ಮೂಲತಃ ಭದ್ರಾವತಿಯ ಹೊಸಮನೆ ಬಡಾವಣೆಯವರು. ಹೊಸಮನೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಓದುತ್ತಾ, ಆಡುತ್ತಾ ಬೆಳೆದವರು. ಅಲ್ಲಿ ಹಿರಿಯ ಆಟಗಾರರು ಆಡುತ್ತಿರುವುದನ್ನು ನೋಡುತ್ತಲೇ ಕೊಕ್ಕೊ ತಂತ್ರಗಳನ್ನು ಮೈಗೂಡಿಸಿಕೊಂಡ ಮುನೀರ್‌, ಶಾಲಾ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡರು.

ಅಲ್ಲಿರುವ ಸರ್‌ ಎಂ.ವಿ. ಯೂತ್‌ ಸ್ಪೋರ್ಟ್ಸ್‌ ಕ್ಲಬ್‌ನ ಹಿರಿಯ ಆಟಗಾರರಾದ ಪ್ರದೀಪ್‌, ಶ್ರೀನಿವಾಸ್‌, ವಿನೋದ್‌, ಷಣ್ಮಗಂ ಮುಂತಾದವರು ಮುನೀರ್‌ಗೆ ಎಲ್ಲಾ ರೀತಿಯ ನೆರವು ನೀಡಿದರು. ಜತೆಗೆ ಕೋಚ್‌ ವಿಶ್ವಾಸ್‌ ಅವರ ತರಬೇತಿ ಮುನೀರ್‌ ಆತ್ಮವಿಶ್ವಾಸ ಹೆಚ್ಚಿಸಿತು. ಪ್ರೌಢಶಾಲೆಯಲ್ಲಿ ತಿಮ್ಮಪ್ಪ ಮಾಸ್ಟರ್‌ ಕೂಡಾ ಮುನೀರ್‌ಗೆ ಆಟದ ಉತ್ತಮ ತಂತ್ರಗಳನ್ನು ಹೇಳಿಕೊಟ್ಟರು.

ಕರ್ನಾಟಕ ತಂಡ ದಶಕದ ಹಿಂದೆ ರಾಷ್ಟ್ರೀಯ ಶಾಲಾ ಕ್ರೀಡಾ ಕೂಟದಲ್ಲಿ ಶ್ರೇಷ್ಠ ಸಾಧನೆ ಮಾಡಿತ್ತು. ಆಗಲೇ ಮುನೀರ್‌ ಕೊಕ್ಕೊ ವಲಯದ ಗಮನ ಸೆಳೆದಿದ್ದರು. ಇವರು ಎಸೆಸ್ಸೆಲ್ಸಿಯಲ್ಲಿದ್ದಾಗ ಪಟಿಯಾಲದಲ್ಲಿ ನಡೆದಿದ್ದ ರಾಷ್ಟ್ರೀಯ ಸಬ್‌ಜೂನಿಯರ್‌ ಫೆಡರೇಷನ್‌ ಕಪ್‌ ಕೂಟದಲ್ಲಿ ಕರ್ನಾಟಕ ಪ್ರಶಸ್ತಿ ಗೆದ್ದಿತ್ತು. ಟೂರ್ನಿಯಲ್ಲಿ ಅತ್ಯುತ್ತಮವಾಗಿ ಆಡಿದ್ದ ಮುನೀರ್‌ ಟೂರ್ನಿಯಲ್ಲಿ ಅತ್ಯುತ್ತಮ ಸಾಧಕನಿಗೆ ನೀಡುವ ‘ಭಾರತ್‌ ಪ್ರಶಸ್ತಿ’ ಪಡೆದಿದ್ದರು.

ಪದವಿ ಪೂರ್ವ ಕಾಲೇಜುಗಳ ಮಟ್ಟದ ರಾಷ್ಟ್ರೀಯ ಕ್ರೀಡಾಕೂಟ ದೆಹಲಿಯಲ್ಲಿ ನಡೆದಿದ್ದಾಗ, ಇವರು ಆಡಿದ್ದ ಕರ್ನಾಟಕ ತಂಡ ಪ್ರಶಸ್ತಿ ಗೆದ್ದಿತ್ತು. ಆಗ ದೆಹಲಿ ಮತ್ತು ಆಂಧ್ರ ಪ್ರದೇಶ ತಂಡಗಳು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ್ದವು.

ಮನೆಯಲ್ಲಿ ತೀವ್ರವಾದ ಆರ್ಥಿಕ ಸಮಸ್ಯೆಯಿಂದಾಗಿ ಇವರು ಪಿಯೂಸಿ ನಂತರ ಶಿಕ್ಷಣವನ್ನು ಮೊಟಕುಗೊಳಿಸಿ, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಐದು ವರ್ಷ ಉರುಳಿ ಹೋಯಿತು. ಒಂದು ದಿನ ಕೋಚ್‌ ವಿಶ್ವಾಸ್‌ ಇವರನ್ನು ತುಮಕೂರಿನಲ್ಲಿ ನಡೆದಿದ್ದ ರಾಜ್ಯ ತಂಡದ ಶಿಬಿರಕ್ಕೆ ಕರೆದೊಯ್ದರು. ಅಲ್ಲಿ ಇವರ ಸಾಮರ್ಥ್ಯವನ್ನು ಗಮನಿಸಿದ ಆಯ್ಕಮಂಡಳಿ ರಾಜ್ಯ ತಂಡಕ್ಕೆ ಆಯ್ಕೆ ಮಾಡಿತು. ಅಲ್ಲಿಯೇ ನಡೆದ ಫಡರೇಷನ್‌ ಕಪ್‌ ರಾಷ್ಟ್ರೀಯ ಕೂಟದಲ್ಲಿ ಮುನೀರ್‌ ಅತ್ಯುತ್ತಮ ಆಲ್‌ರೌಂಡರ್‌ ಪ್ರಶಸ್ತಿ ಪಡೆದರು.

ನಂತರ ಗೋವಾದಲ್ಲಿ ನಡೆದ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮೂರನೇ ಸ್ಥಾನ ಗಳಿಸಿತು. ರಾಜ್ಯ ತಂಡದಲ್ಲಿ ಮುನೀರ್‌ ಮಿಂಚಿದ್ದರು. ಹೋದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮೂರನೇ ಸ್ಥಾನ ಗಳಿಸಿತ್ತು. ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ರಾಜ್ಯ ತಂಡ ಕಂಚು ಗೆದ್ದಿತ್ತು. ಎರಡೂ ಕಡೆ ಮುನೀರ್‌ ಆಟ ಗಮನ ಸೆಳೆದಿತ್ತು. ಈ ನಡುವೆ ಐದು ವರ್ಷಗಳ ನಂತರ ಶಿಕ್ಷಣ ಮುಂದುವರಿಸುವ ಆಸಕ್ತಿಯಿಂದ ಇವರು ಭದ್ರಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದರು. ಈಗ ಎರಡನೇ ವರ್ಷದ ಪದವಿ ತರಗತಿಯಲ್ಲಿದ್ದಾರೆ. ಅಂತರ ವಾರ್ಸಿಟಿ ಕೊಕ್ಕೊ ಟೂರ್ನಿಯಲ್ಲಿ ಒಮ್ಮೆ ಕುವೆಂಪು ವಿ.ವಿ.ಯನ್ನೂ ಪ್ರತಿನಿಧಿಸಿದ್ದಾರೆ.

ಫೆಬ್ರುವರಿಯಲ್ಲಿ ಗುವಾಹಟಿಯಲ್ಲಿ ನಡೆದಿದ್ದ ದಕ್ಷಿಣ ಏಷ್ಯಾ ಫೆಡರೇಷನ್‌ ಕ್ರೀಡಾಕೂಟದಲ್ಲಿ ಮುನೀರ್‌ ಭಾರತ ತಂಡದ ಉಪನಾಯಕರಾಗಿದ್ದರು. ಇದು ಕನ್ನಡಿಗರ ಹೆಗ್ಗಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT