ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷ ಆಡಳಿತಗಾರ: ಶಶಾಂಕ್‌ ಮನೋಹರ್‌

ವ್ಯಕ್ತಿ
Last Updated 14 ನವೆಂಬರ್ 2015, 19:49 IST
ಅಕ್ಷರ ಗಾತ್ರ

2004–05ರಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳಲೇಬೇಕು. ನಾಗಪುರದಲ್ಲಿ ಟೆಸ್ಟ್‌ ಆಡಲು ಆಸ್ಟ್ರೇಲಿಯಾ ತಂಡ ಬಂದಿತ್ತು. ಆಗ ಭಾರತ ತಂಡದ ನಾಯಕರಾಗಿದ್ದವರು ಸೌರವ್‌ ಗಂಗೂಲಿ. ಪಿಚ್‌ ಅನ್ನು ವೇಗಿಗಳಿಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿತ್ತು. ಸ್ಪಿನ್ನರ್‌ಗಳಿಗೆ ನೆರವು ನೀಡುವ ಪಿಚ್‌ ತಯಾರಿಸಿ ಎಂದು ಗಂಗೂಲಿ ಹಟ ಹಿಡಿದಿದ್ದರು. ಆದರೆ, ಆಗ ವಿದರ್ಭ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರಾಗಿದ್ದ ಶಶಾಂಕ್‌ ಮನೋಹರ್‌ ಅದಕ್ಕೆ ಒಪ್ಪಲಿಲ್ಲ. ಬೇಸರಗೊಂಡ ಗಂಗೂಲಿ ಅನಾರೋಗ್ಯದ ನೆಪವೊಡ್ಡಿ ಆ ಪಂದ್ಯದಲ್ಲಿ ಆಡಲೇ ಇಲ್ಲ. ಭಾರತ ಸೋಲು ಕಂಡಿತ್ತು.

ಈ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಟೀಕೆಗೆ ಗುರಿಯಾಗಿದ್ದ ಶಶಾಂಕ್‌ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದರು. ಆಗ ಬಿಸಿಸಿಐ ಚುಕ್ಕಾಣಿ ಹಿಡಿದಿದ್ದವರು ಶರದ್‌ ಪವಾರ್‌– ಶಶಾಂಕ್‌ ಬಣದ ಎದುರಾಳಿ ಜಗಮೋಹನ್‌ ದಾಲ್ಮಿಯಾ!

ದಾಲ್ಮಿಯಾ ಅವರ ನಿಧನದಿಂದ ತೆರವಾದ ಅಧ್ಯಕ್ಷ ಸ್ಥಾನವನ್ನು ಈಗ ಅಲಂಕರಿಸಿರುವ ಶಶಾಂಕ್‌ ದೃಢ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನಿಸ್ಸೀಮರು. ಒಂದು ತಿಂಗಳಲ್ಲಿ ತೆಗೆದುಕೊಂಡಿರುವ ದಿಟ್ಟ ನಿರ್ಧಾರಗಳೇ ಅದಕ್ಕೆ ಉದಾಹರಣೆ. ಶ್ರೀಮಂತ ಕ್ರಿಕೆಟ್‌ ಮಂಡಳಿ ಎನಿಸಿರುವ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ತನ್ನ ಹೆಸರನ್ನು ಕೆಡಿಸಿಕೊಂಡಿರುವುದು ಗೊತ್ತೇ ಇದೆ. ಐಪಿಎಲ್‌ನಲ್ಲಿನ ಭ್ರಷ್ಟಾಚಾರ ಹಾಗೂ ಹಿಂದಿನ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಅವರ ಹಟಮಾರಿ ಧೋರಣೆಯಿಂದ ಮಂಡಳಿಯ ವರ್ಚಸ್ಸಿಗೆ ಧಕ್ಕೆಯಾಗಿದೆ. ಇಂಥ ಸಂದರ್ಭದಲ್ಲಿ ಸ್ವಚ್ಛ, ವೃತ್ತಿಪರ ಹಾಗೂ ಪಾರದರ್ಶಕ ಆಡಳಿತ ನೀಡುವ ಭರವಸೆಯೊಂದಿಗೆ ಚುಕ್ಕಾಣಿ ಹಿಡಿದಿರುವ ಶಶಾಂಕ್, ಕೆಲವೇ ದಿನಗಳಲ್ಲಿ ಮಂಡಳಿಗೆ ಮೇಜರ್‌ ಸರ್ಜರಿ ಮಾಡಿದ್ದಾರೆ.

ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಿಂದ ಅಂಟಿರುವ ಕೊಳೆ ತೊಳೆಯುವ ಪ್ರಯತ್ನದ ಜೊತೆಗೆ ಹಿತಾಸಕ್ತಿ ಸಂಘರ್ಷದಲ್ಲಿ ತೊಡಗಿರುವವರನ್ನು ನಿಧಾನವಾಗಿ ಮಂಡಳಿಯಿಂದ ಹೊರದಬ್ಬುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಮಂಡಳಿಯ ವಾರ್ಷಿಕ ಸಭೆಯಲ್ಲಿ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದ ರೋಜರ್‌ ಬಿನ್ನಿ, ರವಿಶಾಸ್ತ್ರಿ ಹಾಗೂ ಅನಿಲ್ ಕುಂಬ್ಳೆ ಅವರನ್ನು ಮಂಡಳಿಯ ವಿವಿಧ ಜವಾಬ್ದಾರಿಗಳಿಂದ ಕೈಬಿಟ್ಟಿದ್ದು ಅದಕ್ಕೊಂದು ಉದಾಹರಣೆ. ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್‌ ಅವರನ್ನು ವಜಾ ಮಾಡಿರುವ ಶಶಾಂಕ್‌ ಈಗ ಅಂತರ ರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ಐಸಿಸಿ) ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಇಷ್ಟು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಿಳಾ ಕ್ರಿಕೆಟಿಗರಿಗೆ ಹಲವು ಯೋಜನೆ ಪ್ರಕಟಿಸಿದ್ದಾರೆ. ಹಿರಿಯ ಕ್ರಿಕೆಟಿಗರ ಪಿಂಚಣಿ ಹೆಚ್ಚಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಓಂಬುಡ್ಸ್‌ಮನ್‌ ನೇಮಕದ ಜೊತೆ ಅನೇಕ ಸುಧಾರಣಾ ಕ್ರಮಗಳನ್ನು ತಂದಿದ್ದಾರೆ.

‘ಬಿಸಿಸಿಐ ಈಗ ಸಂಕಷ್ಟ ಕಾಲದಲ್ಲಿದೆ. ಹಾಗಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ. ಮಂಡಳಿಯ ಗೌರವ ಹಾಗೂ ಸ್ವಾಯತ್ತೆಯನ್ನು ಕಾಪಾಡಿಕೊಳ್ಳಲು ಎಲ್ಲ ಸದಸ್ಯರು ಸಹಕರಿಸಬೇಕು. ಜನರಲ್ಲಿ ನಂಬಿಕೆ ಮೂಡಿಸುವ ಜರೂರತ್ತಿದೆ’ ಎಂದು ಅವರು ಮನವಿ ಮಾಡಿದ್ದಾರೆ.

ವೃತ್ತಿಯಲ್ಲಿ ವಕೀಲರಾಗಿರುವ ಶಶಾಂಕ್‌ ದಕ್ಷ ಆಡಳಿತಗಾರ. ನಾಗಪುರ ಮೂಲದ ಇವರು 1996ರಲ್ಲಿ ವಿದರ್ಭ ಕ್ರಿಕೆಟ್‌ ಸಂಸ್ಥೆಯ (ವಿಸಿಎ) ಅಧ್ಯಕ್ಷರಾಗುವ ಮೂಲಕ ಕ್ರಿಕೆಟ್‌ ಆಡಳಿತಕ್ಕೆ ಪ್ರವೇಶ ಮಾಡಿದ್ದರು. ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಬಲ ರಾಜಕಾರಣಿ ಪವಾರ್‌ ಬೆಂಬಲವೂ ಇವರಿಗಿದೆ. 2008ರಿಂದ 2011ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಒಳ್ಳೆಯ ಕೆಲಸಗಳನ್ನೇ ಮಾಡಿದ್ದಾರೆ. ಮಂಡಳಿಯ ಆದಾಯ ಹೆಚ್ಚಿಸಿದರು. ಆ ಸಂದರ್ಭದಲ್ಲಿ ಭಾರತ ಟೆಸ್ಟ್‌ ತಂಡ ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿತ್ತು. 2011ರ ಏಕದಿನ ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆಗಿತ್ತು. ಐಪಿಎಲ್‌ ಶುರುವಾಗಿದ್ದೇ ಇವರ ಆಡಳಿತಾವಧಿಯಲ್ಲಿ ಎನ್ನುವುದು ವಿಶೇಷ.

ಯಾವುದೇ ಹಗರಣದಲ್ಲಿ ಸಿಲುಕದ ಶುದ್ಧ ಹಸ್ತದ ಆಡಳಿತಗಾರ ಶಶಾಂಕ್‌, ಮಂಡಳಿಯು ಸಮಸ್ಯೆಗೆ ಸಿಲುಕಿದಾಗ ಅಧಿಕಾರದಲ್ಲಿರದಿದ್ದರೂ ಉಪಯುಕ್ತ ಸಲಹೆ ನೀಡಿ ಮುಜುಗರದಿಂದ ಪಾರು ಮಾಡಿದ್ದುಂಟು. ಕೊಚ್ಚಿ ಐಪಿಎಲ್ ತಂಡದ ಭವಿಷ್ಯ ನಿರ್ಧಾರ ಸಂಬಂಧ ಇವರು ಬಿಸಿಸಿಐಗೆ ಕಾನೂನು ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಭಾರತ ತಂಡದ ಪ್ರಾಯೋಜಕತ್ವ ಹಾಗೂ ಐಪಿಎಲ್ ಸಂಬಂಧ ಬಿಸಿಸಿಐ ಮತ್ತು ಸಹಾರಾ ಸಮೂಹದ ನಡುವೆ ಉದ್ಭವಿಸಿದ್ದ ಬಿಕ್ಕಟ್ಟನ್ನು ಶಮನಗೊಳಿಸಲು ನೆರವಾಗಿದ್ದರು. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಶ್ರೀನಿವಾಸನ್‌ ವಿರುದ್ಧ ಮೊದಲು ಧ್ವನಿ ಎತ್ತಿದ್ದೇ ಶಶಾಂಕ್. ಲಲಿತ್‌ ಮೋದಿ ವಜಾಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ಬಿಸಿಸಿಐನ ಕೆಲ ನಿಯಮಗಳಿಗೆ ತುರ್ತಾಗಿ ತಿದ್ದುಪಡಿ ತರಬೇಕಾಗಿದೆ. ಪ್ರಮುಖವಾಗಿ ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶವೇ ಇರಕೂಡದು. ಮಂಡಳಿಗೆ ಸಂಬಂಧಿಸಿದ ಎಲ್ಲರೂ ಈ ಬಗ್ಗೆ ಮಾಹಿತಿ ನೀಡಲೇಬೇಕು. ತಳಮಟ್ಟದಿಂದಲೇ ಭ್ರಷ್ಟಾಚಾರ ನಿರ್ಮೂಲನೆಗೆ ನನ್ನ ಮೊದಲ ಆದ್ಯತೆ’ ಎಂದು ಅವರು ಘೋಷಿಸಿದ್ದಾರೆ. ‘ಕ್ರಿಕೆಟಿಗ ಸ್ಟುವರ್ಟ್‌ ಬಿನ್ನಿ ಭವಿಷ್ಯಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ತಂದೆ ರೋಜರ್‌ ಬಿನ್ನಿ ಅವರನ್ನು ಆಯ್ಕೆ ಸಮಿತಿಯಿಂದ ಕೈಬಿಡಲಾಗಿದೆ. ತಂದೆಯಿಂದಾಗಿ ತಂಡದಲ್ಲಿ ಸ್ಥಾನ ಸಿಕ್ಕಿದೆ ಎಂದು ಯಾರೂ ದೂರಬಾರದು. ಚೆನ್ನಾಗಿ ಆಡುವ ಆಟಗಾರನಿಗೆ ಅನ್ಯಾಯವಾಗಬಾರದು’ ಎಂಬುದು ಶಶಾಂಕ್‌ ಸಮರ್ಥನೆ. ಮಂಡಳಿಯ ವಿವಿಧ ಸಮಿತಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಬಗ್ಗೆಯೂ ಮಾತನಾಡಿದ್ದಾರೆ. ಈಗ 20ಕ್ಕೂ ಅಧಿಕ ಸಮಿತಿಗಳಿವೆ. ಹಿಂದಿನ ಮಾರುಕಟ್ಟೆ ಸಮಿತಿಯೊಂದರಲ್ಲೇ 29 ಮಂದಿ ಇದ್ದರು. ಒಂದು ಸಭೆಗೆ ಹಾಜರಾದರೆ ತಲಾ 25 ಸಾವಿರ ರೂಪಾಯಿ ಭತ್ಯೆ ನೀಡಲಾಗುತ್ತದೆ. 

ಶಶಾಂಕ್‌ ಅವರ ಕುಟುಂಬದ ಹೆಚ್ಚಿನವರು ವಕೀಲರು. ಇವರ ಪತ್ನಿ ಹೆಸರು ವರ್ಷಾ ಮನೋಹರ್‌. ಪುತ್ರ ಅದ್ವೈತ್‌ ಮನೋಹರ್‌ ಕೂಡ ವಕೀಲ. ಇವರೀಗ ವಿಸಿಎ ಉಪಾಧ್ಯಕ್ಷರಾಗಿದ್ದಾರೆ. ಸಹೋದರ ಸುನಿಲ್ ಮನೋಹರ್ ಅವರು ದೇವೇಂದ್ರ ಫಡಣವೀಸ್‌ ಸರ್ಕಾರದಲ್ಲಿ ಕೆಲ ತಿಂಗಳು ಅಡ್ವೊಕೇಟ್‌ ಜನರಲ್‌ ಆಗಿದ್ದರು. ತಂದೆ ವಿ.ಆರ್‌.ಮನೋಹರ್ ಕೂಡ ಹಿಂದೆ ಮಹಾರಾಷ್ಟ್ರ ಸರ್ಕಾರದಲ್ಲಿ ಅಡ್ವೊಕೇಟ್‌ ಜನರಲ್‌ ಆಗಿ ಸೇವೆ ಸಲ್ಲಿಸಿದವರು.

ಅಷ್ಟೇ ಅಲ್ಲ; ಒಮ್ಮೆ ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಕಂಡಿದ್ದರು. ವಿ.ಆರ್‌.ಮನೋಹರ್‌ ವಿಸಿಎ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಾಗ ಸಂಸ್ಥೆಯ ಬ್ಯಾಂಕ್‌ ಬ್ಯಾಲೆನ್ಸ್‌ 587 ರೂಪಾಯಿ. ಆದರೆ, ಪುತ್ರ ಶಶಾಂಕ್‌ ಅವರು ತಮ್ಮ ಆಡಳಿತಾವಧಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗಪುರದಲ್ಲಿ ಕ್ರೀಡಾಂಗಣವನ್ನೇ ನಿರ್ಮಿಸಿದರು. ಅಷ್ಟೇ ಅಲ್ಲ; ಟೆಸ್ಟ್‌ ನಡೆಸಲು ಕಾರಣರಾದರು.

ಶಶಾಂಕ್ ಅವರಿಗೆ ಮೊಬೈಲ್ ಹಾಗೂ ವಾಚ್‌ ಎಂದರೆ ಅಲರ್ಜಿ. 2008ರಲ್ಲಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಔತಣಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದರು. ಕೆಟ್ಟದ್ದನ್ನು ವಿರೋಧಿಸಲು ಯಾವತ್ತೂ ಹಿಂದೆ ಸರಿದವರಲ್ಲ. 58 ವರ್ಷ ವಯಸ್ಸಿನ ಶಶಾಂಕ್ ಇಟ್ಟಿರುವ ಆರಂಭಿಕ ಹೆಜ್ಜೆಗಳು ಭರವಸೆ ಮೂಡಿಸಿರುವುದು ನಿಜ. ಕೆಲವೇ ತಿಂಗಳಲ್ಲಿ ಭಾರತದಲ್ಲಿಯೇ ಟ್ವೆಂಟಿ–20 ವಿಶ್ವಕಪ್‌ ಆರಂಭವಾಗಲಿದೆ. ಒಂದೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಎಲ್ಲರನ್ನೂ ಸಂಭಾಳಿಸಿಕೊಂಡು ಹೇಗೆ ಮುನ್ನಡೆಯುತ್ತಾರೆ ಎಂಬುದು ಕುತೂಹಲಕಾರಿ. ಏಕೆಂದರೆ ಬಿಸಿಸಿಐ ಅಧ್ಯಕ್ಷ ಗದ್ದುಗೆ ಸದಾ ಮುಳ್ಳಿನ ಹಾಸಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT