ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದನದ ಸಮಸ್ಯೆ: ಬೇಕಿದೆ ಪರಿಹಾರ

ಚರ್ಚೆ
Last Updated 19 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ಹಾಲು ಕೊಡದ ದನ ಮತ್ತು ಹೋರಿ ಕರುವನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಸಮಸ್ಯೆಗೆ ಪರಿಹಾರ ದೊರೆತೀತು...

ದನ ಇತ್ತೀಚಿನ ದಿನಗಳಲ್ಲಿ ಬಿರುಸಿನ ಚರ್ಚೆಗೆ ಒಳಗಾಗಿದೆ. ಒಂದು ವರ್ಗಕ್ಕೆ ದನದ ಮಾಂಸವು ಆಹಾರ ಮತ್ತು ಆದಾಯದ ಮಾರ್ಗವಾಗಿದ್ದರೆ, ಇನ್ನೊಂದು ವರ್ಗ ಅದನ್ನು ಪೂಜನೀಯ ಸ್ಥಾನದಲ್ಲಿ ನೋಡುತ್ತಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಇದು ಗಂಭೀರ ವಿಚಾರವಾಗಿ ಬದಲಾಗದಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಮೂಡುಬಿದಿರೆಯಲ್ಲಿ ಯುವಕನೊಬ್ಬನ ಕೊಲೆಗೆ ಜಾನುವಾರನ್ನು ಕಸಾಯಿಖಾನೆಗೆ ಒಯ್ಯದಂತೆ ತಡೆದುದೇ ಕಾರಣ ಎನ್ನುವ ಪ್ರತಿಪಾದನೆಯೂ ನಡೆದಿದೆ. ಏನೇ ಇದ್ದರೂ ಇಲ್ಲಿ ಅವ್ಯಾಹತವಾಗಿ ಜಾನುವಾರುಗಳ ಸಾಗಣೆ ನಡೆಯುತ್ತಿದೆ, ಅದನ್ನು ತಡೆಯುವ ಕೆಲವರ ಪ್ರಯತ್ನದಿಂದ ಸಂಘರ್ಷ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೆ ಸ್ಪಷ್ಟ ನಿಲುವು ತಳೆಯಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.

ದಕ್ಷಿಣ ಕನ್ನಡ ಜಿಲ್ಲೆ ಹೈನುಗಾರಿಕೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಜಮೀನಿಲ್ಲದವರೂ ಸ್ವಸಹಾಯ ಸಂಘಗಳ ಮೂಲಕ ದನ ಸಾಕಿ ಹೈನುಗಾರಿಕೆಯ ದಾಖಲೆಗೆ ಗರಿ ಸೇರಿಸುತ್ತಿದ್ದಾರೆ. ರಬ್ಬರ್ ಕೃಷಿಯ ವಿಸ್ತರಣೆ ಪರಿಣಾಮ ದನಗಳಿಗೆ ಮೇಯಲು ಸಹಜಾರಣ್ಯಗಳಾಗಲಿ, ಗೋಮಾಳಗಳಾಗಲಿ ಹುಡುಕಿದರೂ ಸಿಗದು. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿ ಎಲ್ಲಿಂದಲೋ ಮೇವು ತಂದುಹಾಕಿ ಹಾಲು ಕೊಡುವಷ್ಟು ದಿನವೂ ದನವನ್ನು ಮಮತೆಯಿಂದ ಸಾಕಬಹುದು. ಆದರೆ ಹಾಲು ಕೊಡಲಾಗದ ದನವನ್ನು ಸಾಕಬೇಕಿದ್ದರೆ ದಿನಕ್ಕೆ ಕನಿಷ್ಠ ನೂರು ರೂಪಾಯಿ ಬೇಕು.

ಹಾಗೆಯೇ ಗಂಡು ಕರು ಜನಿಸಿದರೆ ಗಾಡಿಗೆ ಕಟ್ಟುವವರಿಲ್ಲ. ಹೊಲದ ಉಳುಮೆಗೆ ಬಳಸುವವರಿಲ್ಲ. ಅಂದು ಜನಿಸಿದ ಕರು ಕೂಡ ಹತ್ತು ಲೀಟರ್ ಹಾಲು ಕುಡಿದು ಅರಗಿಸಿಕೊಳ್ಳಬಲ್ಲದು. ಲೆಕ್ಕಾಚಾರ ಹಾಕಿ ಹೈನುಗಾರಿಕೆ ಮಾಡಿ ಲಾಭದ ಗಣಿತ ಮಾಡುವ ಯಾವನೇ ಜಾಣ ಹೈನುಗಾರ ಕೂಡ ಹೋರಿ ಕರುವನ್ನು ಒಂದೆರಡು ದಿನಕ್ಕಿಂತ ಹೆಚ್ಚು ಸಮಯ ಇರಿಸಿಕೊಳ್ಳುವುದಿಲ್ಲ. ಬರಡಾದ ಆಕಳಿಗೆ ದಿನಕ್ಕೆ ನೂರು ರೂಪಾಯಿ ಖರ್ಚು ಮಾಡುತ್ತಿದ್ದರೆ ವರ್ಷದ ಕೊನೆಗೆ ಎಷ್ಟಾಗುತ್ತದೆ ಎಂದು ಲೆಕ್ಕ ನೋಡುವ ಮೊದಲೇ ದನವನ್ನು ದಾಟಿಸಿಬಿಡಲು ಯೋಚಿಸುತ್ತಾನೆ. ದನ ಕೊಟ್ಟಿಗೆಯಲ್ಲಿ ಸತ್ತುಹೋದರೆ ಹೊಂಡ ತೆಗೆದು ಅದನ್ನು ಹೂಳಲಿಕ್ಕೆ ತಗಲುವ ವೆಚ್ಚ ನೂರರ ಮೊತ್ತದಲ್ಲಿರುವುದಿಲ್ಲ, ಸಾವಿರ ದಾಟುತ್ತದೆ. ಹೀಗಾಗಿ ನಿರುಪಯುಕ್ತ ದನವನ್ನು ಸಿಕ್ಕಿದ ಬೆಲೆಗೆ ವ್ಯಾಪಾರಿಗಳಿಗೆ ಹೈನುಗಾರನೇ ಕೊಡುತ್ತಾನೆ.

ಇಂಥ ದನಗಳನ್ನು ಕೊಳ್ಳುವವನು ಖಂಡಿತವಾಗಿ ಗೋಪೂಜಕನಲ್ಲ. ಆತ ಐನೂರು ಕೊಟ್ಟು ಖರೀದಿಸುವ ದನವನ್ನು ಸಾಗಿಸುವ ವಿಧಾನದಲ್ಲಿಯೂ ಅವನ ದಯಾಳುತನ ವ್ಯಕ್ತವಾಗುವುದಿಲ್ಲ. ಕೊಲ್ಲುವ ಕ್ರಮದಲ್ಲಿಯೂ ಅವನ ಕಣ್ಣುಗಳಲ್ಲಿ ಆರ್ದ್ರತೆ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಮಾಂಸ ತಿನ್ನುವವರಂತೂ ಸತ್ತ ಪ್ರಾಣಿಗಾಗಿ ದುಃಖಿಸುವವರಲ್ಲ. ಇಲ್ಲಿ ಹೈನುಗಾರ ಮಾರುತ್ತಾನೆ, ವ್ಯಾಪಾರಿ ಕೊಲ್ಲುತ್ತಾನೆ, ಗ್ರಾಹಕ ತಿನ್ನುತ್ತಾನೆ. ಮಧ್ಯವರ್ತಿಯೊಬ್ಬ ಗೋವಧೆ ಮಾಡಬಾರದು ಎನ್ನುತ್ತಾನೆ.

ಸಂಘರ್ಷಕ್ಕೆ ಕಾರಣವಾದ ಈ ಪ್ರಶ್ನೆ ಮೊದಲು ಇತ್ಯರ್ಥವಾಗಬೇಕಾದುದು ದನ ಸಾಕುವವನ ನೆಲೆಯಲ್ಲಿ. ಹಾಲು ಕೊಡದ ದನ ಮತ್ತು ಹೋರಿ ಕರುವನ್ನು ಸಾಕಲು ಅವನಿಗೆ ಆಗುವುದಿಲ್ಲ. ಇದನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಆತ ದನವನ್ನು ಕಟುಕರಿಗೆ ಕೊಡುವುದಿಲ್ಲ. ಗುಜರಾತಿನಲ್ಲಿ ಸರ್ಕಾರವೇ ಇಂತಹ ಪಶುಗಳನ್ನು ಸಾಕುವ ಸೇವಾ ಕೇಂದ್ರಗಳನ್ನು ತೆರೆದಿದೆ. ನಿರುಪಯುಕ್ತ ಜಾನುವಾರುಗಳಿಗೆ ಆಶ್ರಯ ನೀಡಿ, ಹುಲ್ಲು, ನೀರು ಕೊಟ್ಟು ಸಲಹುತ್ತಿದೆ. ಖಾಸಗಿ ಸೇವಾ ಕೇಂದ್ರಗಳೂ ಅಲ್ಲಿವೆ. ಆದರೆ ಕರ್ನಾಟಕದಲ್ಲಿ ಕೆಲವು ಮಠಗಳಲ್ಲಿ ದೇಸಿ ದನಗಳನ್ನು ಒಂದಿಷ್ಟು ಸೇರಿಸಿ ಸಾಕುವ ಗೋಶಾಲೆಗಳಿವೆಯಾದರೂ ಬೃಹತ್ ಪ್ರಮಾಣದಲ್ಲಿ ಹೈನುಗಾರಿಕೆ ಮಾಡುತ್ತಿರುವ ಪ್ರತಿಯೊಬ್ಬನ ಕೊಟ್ಟಿಗೆಯಲ್ಲಿ ಬೇಡವೆನಿಸುವ ಜಾನುವಾರುಗಳಿಗೂ ಅದು ಬಾಗಿಲು ತೆರೆಯುವುದು ಕನಸಿನ ಮಾತು.

ಇಲ್ಲಿ ಹೈನು ಕ್ರಾಂತಿ ಬೇಡವೆಂದಾದರೆ ಖರ್ಚಿನ ಹಾಲಿಗೆ ಮಾತ್ರ ಒಂದು ದನ ಸಾಕುವ ರೂಢಿ ಆರಂಭಿಸಬಹುದು. ಆಗ ದನ ಮಾರಾಟದ ಭರಾಟೆ ತಗ್ಗುತ್ತದೆ. ಇಲ್ಲವಾದರೆ ದನ ಕೊಳ್ಳುವುದನ್ನು ಅಪರಾಧ ದೃಷ್ಟಿಯಿಂದ ನೋಡಿದಷ್ಟೇ ಸಮಾನವಾಗಿ ದನ ಮಾರಾಟ ಮಾಡುವವನನ್ನೂ ನೋಡಬೇಕು. ಅದು ಕೂಡ ಕಾನೂನುಬಾಹಿರ ಕೃತ್ಯವಾಗಬೇಕು. ಒಂದೊಮ್ಮೆ ಇಲ್ಲಿ ಗೋಹತ್ಯಾ ನಿಷೇಧ ಕಾನೂನಾಗಿ ಜಾರಿಗೆ ಬಂದಾಗ ಬರಡು ಆಕಳನ್ನು ಕೊಳ್ಳುವವರು ಇಲ್ಲವಾಗಬಹುದು. ಆದರೆ ಹೈನುಗಾರಿಕೆಯ ಲೆಕ್ಕಾಚಾರವನ್ನು ಅಲ್ಲೋಲ ಕಲ್ಲೋಲಗೊಳಿಸುವ ಹೋರಿ ಕರು ಮತ್ತು ನಿರುಪಯುಕ್ತ ದನಗಳ ಪೋಷಣೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಹೀಗಾದಾಗ ಕಳ್ಳ ವ್ಯಾಪಾರ ನಡೆಯುತ್ತದೆ ಅಥವಾ ಹೈನುಗಾರಿಕೆ ಮಾಡಬಾರದೆಂಬ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ.

ಇದರೊಂದಿಗೆ ವಾಟ್ಸ್ ಆ್ಯಪ್‌ನಂತಹ ಮಾಧ್ಯಮಗಳಲ್ಲಿ ಗೋಹತ್ಯೆಯ ಪರ, ವಿರೋಧಿ ಸಂದೇಶಗಳ ರವಾನೆ ಈ ಪರಿಸ್ಥಿತಿಯ ಬೆಂಕಿಗೆ ತುಪ್ಪ ಹೊಯ್ಯುತ್ತಲೇ ಇದೆ. ಋಗ್ವೇದ ಕಾಲದಲ್ಲಿ ಗೋಮಾಂಸ ಭಕ್ಷಣೆ ಮಾಡುತ್ತಿದ್ದುದನ್ನು, ಸ್ಮೃತಿಗಳಲ್ಲಿ ಅದಕ್ಕೆ ಪುಷ್ಟಿಯಿರುವುದನ್ನು ಕೂಡ ಕೆಲವರು ಉಲ್ಲೇಖಿಸುತ್ತಿದ್ದಾರೆ. ಆದರೆ ಯುಗಧರ್ಮದ ಮಾತು ಹೇಳುವುದಾದರೆ, ಆ ಕಾಲದಲ್ಲಿ ಇದನ್ನು ಆಚರಿಸಿರಬಹುದು. ದ್ವಾಪರ ಯುಗದಲ್ಲಿ ನಿಯೋಗ ಪದ್ಧತಿಯಿಂದ ಮಕ್ಕಳನ್ನು ಪಡೆಯುತ್ತಿದ್ದರು. ಆನಂತರದ ದಿನಗಳಲ್ಲಿ ಇದರ ಬಗೆಗೆ ನಡೆದ ವಿಮರ್ಶೆಗಳು ನಿಷೇಧವನ್ನು ಶಾಸ್ತ್ರಬದ್ಧಗೊಳಿಸಿರಬಹುದು.

ರೈತನಿಗೆ ಹಾಲು ಕೊಟ್ಟು, ಹೊಲವನ್ನು ಉತ್ತು, ಆಹಾರದ ಮಾರ್ಗಗಳನ್ನು ತೋರಿಸುವ ಎತ್ತನ್ನಾಗಲೀ ದನವನ್ನಾಗಲೀ ಹಿಂಸೆಯಿಲ್ಲದ ಪೂಜನೀಯ ಸ್ಥಾನದಲ್ಲಿ ಕಾಪಾಡಿಕೊಳ್ಳುವುದು ಎಂದಿಗೂ ಸಾಧ್ಯವಾಗಿರಲಿಲ್ಲ. ಗಾಡಿಗೆ ಕಟ್ಟಿ ಹೇರು ಎಳೆಯುವುದು, ಹೊಲದಲ್ಲಿ ನೊಗ ಹೊತ್ತು ಮಣ್ಣು ಹದಗೊಳಿಸುವುದೂ ದಯಾಭಾವದಿಂದಲೇ ನೋಡುವುದಾದರೆ ಆಕ್ಷೇಪಾರ್ಹವೇ. ಕೊನೆಗೂ ಅದೇ ರೈತ ತನ್ನ ಬದುಕಿಗೆ ನೆರವಾಗಲು ಜೀವನವಿಡೀ ಶ್ರಮಿಸಿದ ಎತ್ತಿಗೆ ಶಕ್ತಿಯಿಲ್ಲದ ಕಾಲ ಬಂದಾಗ, ಅದನ್ನು ಹೂಳಲು ಆಗುವ ಖರ್ಚನ್ನು ಲೆಕ್ಕ ಹಾಕಿ ಕಟುಕನಿಗೆ ದಾಟಿಸಿ ಜಾಣತನ ಪ್ರದರ್ಶಿಸುವುದು ನ್ಯಾಯಸಮ್ಮತ ಆಗುತ್ತದೆಯೆ?

ಒಂದೊಮ್ಮೆ ಇಲ್ಲಿ ಗೋಹತ್ಯೆ ನಿಷೇಧವೇ ಆದರೆ ಹೀಗೆ ಜಾಣತನ ಪ್ರದರ್ಶಿಸುವ ರೈತ ಅಥವಾ ಹೈನುಗಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲು ಸರ್ಕಾರವಾಗಲೀ, ಸ್ವಯಂ ಸೇವಾ ಸಂಸ್ಥೆಗಳಾಗಲೀ ನಿರ್ದಿಷ್ಟ ಕಾರ್ಯಕ್ರಮದ ರೂಪುರೇಷೆ ತಯಾರಿಸಿ ಕೊಟ್ಟರೆ ರೈತರೂ ಬದುಕಬಹುದು, ದನವೂ ಬದುಕಬಹುದು, ಸಂಘರ್ಷವೂ ತಪ್ಪಬಹುದು. ಕೊಡುವವರು ನಮ್ಮೊಳಗೆಯೇ ಇರುವಾಗ ಮೊದಲು ಬೇಕಾಗಿರುವುದು ಅವರ ಸಮಸ್ಯೆಗೆ ತಕ್ಕ ಉತ್ತರ ಅಲ್ಲವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT