ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಮನಿತರ ದನಿ ನಾದಿನ್‌ ಗಾರ್ಡಿಮರ್‌

Last Updated 19 ಜುಲೈ 2014, 19:30 IST
ಅಕ್ಷರ ಗಾತ್ರ

‘ಅಧಿಕಾರದ ವಿಷಯ ಬಂದಾಗ ತಾಯಿಯ ಗರ್ಭದ ಹೊರಗಿರುವ ಯಾರೊಬ್ಬರೂ ಮುಗ್ಧರಲ್ಲ ಎಂಬುದು ನನಗೆ ಅರ್ಥವಾಗಿದೆ’
ಅಧಿಕಾರದ ಮದ ಹಾಗೂ ಅದು ಹುಟ್ಟುಹಾಕುವ ಭ್ರಷ್ಟಾಚಾರದ ಕುರಿತು ದಕ್ಷಿಣ ಆಫ್ರಿಕಾದ ಸಾಹಿತಿ, ವರ್ಣಭೇದ ನೀತಿಯ ಕಡು ವಿರೋಧಿ, ನೊಬೆಲ್‌ ಪುರಸ್ಕೃತೆ ನಾದಿನ್‌ ಗಾರ್ಡಿಮರ್ ಹೇಳಿರುವ ಮಾತು ಇದು.

ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ನಡೆದ ಹೋರಾಟದ ಭಾಗವೇ ಆಗಿರುವ ನಾದಿನ್‌ ಗಾರ್ಡಿಮರ್, ತುಂಬು ಜೀವನ ನಡೆಸಿ 90ರ ಇಳಿವಯಸ್ಸಿನಲ್ಲಿ ನಿಧನರಾದಾಗ (ಜುಲೈ 13) ಜನಾಂಗೀಯ ತಾರತಮ್ಯದ ವಿರುದ್ಧ ಕೂಗೆತ್ತಿದ್ದ ದೊಡ್ಡ ದೀಪವೊಂದು ನಂದಿಹೋದಂತೆ ಭಾಸವಾಯಿತು.

15 ಕಾದಂಬರಿಗಳು, 21ಕ್ಕೂ ಹೆಚ್ಚು ಕಥಾ ಸಂಕಲನಗಳು, ಹಲವು ಪ್ರಬಂಧಗಳು, ಕೃತಿಗಳನ್ನು ಸಂಪಾದಿಸಿರುವ ನಾದಿನ್‌ ಅವರನ್ನು ಸಾಹಿತಿಗಿಂತ ಹೆಚ್ಚಾಗಿ ಹೋರಾಟಗಾರ್ತಿಯಾಗಿಯೇ ಜಗತ್ತು ಗುರುತಿಸುತ್ತದೆ.

ತಮ್ಮ ಸಮಕಾಲೀನರಾಗಿದ್ದ ದಕ್ಷಿಣ ಆಫ್ರಿಕಾ ಗಾಂಧಿ ನೆಲ್ಸನ್‌ ಮಂಡೇಲಾ ಅವರನ್ನು ನಾದಿನ್‌ ಬಹುವಾಗಿಯೇ  ಪ್ರಭಾವಿಸಿದ್ದರು.
ವರ್ಣಭೇದ ನೀತಿಯಿಂದ ಶೋಷಣೆಗೆ ಒಳಗಾಗಿದ್ದ ಕಪ್ಪುಜನರ ಬಗ್ಗೆ ನಾದಿನ್‌ ಬರೆದಿದ್ದ ಹಲವು ಪುಸ್ತಕಗಳನ್ನು ಬಿಳಿಯರ ಸರ್ಕಾರ ನಿಷೇಧಕ್ಕೆ ಒಳಪಡಿಸಿತ್ತು.

ಮಂಡೇಲಾ ಜೈಲಿನಲ್ಲಿದ್ದಾಗ ಇದೇ ಪುಸ್ತಕಗಳು ಅವರಿಗೆ ಸ್ಫೂರ್ತಿಯಾಗಿದ್ದವು. ಜೈಲಿನಲ್ಲಿದ್ದಾಗ ಮಂಡೇಲಾ ಬರೆದಿದ್ದ ಲೇಖನಗಳನ್ನು ಲಂಡನ್‌ನಲ್ಲಿ ಗುಟ್ಟಾಗಿ ಪ್ರಕಟಿಸುವಲ್ಲಿ ಸಹ ನಾದಿನ್‌ ಪಾತ್ರವಿತ್ತು.1990ರಲ್ಲಿ ನೆಲ್ಸನ್‌ ಮಂಡೇಲಾ ಜೈಲಿನಿಂದ ಹೊರಬಂದಾಗ ಮೊದಲು ಭೇಟಿಯಾಗಬಯಸಿದ ವ್ಯಕ್ತಿಗಳಲ್ಲಿ ನಾದಿನ್‌ ಸಹ ಒಬ್ಬರಾಗಿದ್ದರು.

ಖಾಸಗಿ ಬದುಕು
ನಾದಿನ್‌ ಮೂಲತಃ ಯುರೋಪ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ವಲಸೆ ಬಂದ ಯಹೂದಿ ಕುಟುಂಬಕ್ಕೆ ಸೇರಿದವರು. ಆಕೆಯ ತಂದೆ ಇಸಿಡೊರ್‌ ಗಾರ್ಡಿಮರ್‌ ವೃತ್ತಿಯಲ್ಲಿ ಕೈಗಡಿಯಾರ ತಯಾರಕರು. ರಷ್ಯಾದ ಝಾರ್‌ ದೊರೆಗಳ ಹಿಡಿತದಲ್ಲಿದ್ದ ಈಗಿನ ಲಿಥುವೇನಿಯಾಕ್ಕೆ ಸೇರಿದವರು. ತಾಯಿ ಹನ್ನಾ ಲಂಡನ್‌ನವರು.

ನಾದಿನ್‌ ಹುಟ್ಟಿದ್ದು ಟ್ರಾನ್ಸ್‌ವಾಲ್‌ ಸಮೀಪದ ಗಣಿಗಳ ಪಟ್ಟಣ ಸ್ಪ್ರಿಂಗ್ಸ್‌ನಲ್ಲಿ. ಸ್ವತಃ ನಿರಾಶ್ರಿತರಾದರೂ ಆಕೆಯ ತಂದೆಗೆ ಕಪ್ಪುಜನರ ಸಂಕಷ್ಟಗಳ ಬಗ್ಗೆ ಸಹಾನುಭೂತಿ ಇರಲಿಲ್ಲ. ಆದರೆ, ಕಪ್ಪುಜನರ ಬಡತನ ಹಾಗೂ ಅವರ ಶೋಷಿತ ಜೀವನವನ್ನು ಹತ್ತಿರದಿಂದ ಕಂಡ ಅಮ್ಮ ಹನ್ನಾ,  ಕಪ್ಪುಜನರ ಮಕ್ಕಳಿಗಾಗಿ ಬಾಲವಾಡಿಯೊಂದನ್ನು ತೆರೆದಿದ್ದರು.

ಒಮ್ಮೆ ಇವರ ಮನೆಕೆಲಸದವರ (ಕರಿಯರು) ಕೊಠಡಿಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು, ಅವರ ಪತ್ರಗಳು, ದಿನಚರಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಎದ್ದುಕಾಣುತ್ತಿದ್ದ ಜನಾಂಗೀಯ ತಾರತಮ್ಯ ಹಾಗೂ ಆರ್ಥಿಕ ಅಸಮಾನತೆಯ ಬಗ್ಗೆ ಪುಟ್ಟ ನಾದಿನ್‌ಗೆ ನಿಧಾನಕ್ಕೆ ಅರಿವಾಗತೊಡಗಿತ್ತು. ನಾದಿನ್‌ ಅಮ್ಮ ಹನ್ನಾಗೆ ತನ್ನ ಮಗಳು ದೈಹಿಕವಾಗಿ ದುರ್ಬಲಳು ಎಂಬ ಭಾವನೆಯಿತ್ತು. ಜ್ವರ ಬಂದ ಕಾರಣಕ್ಕೆ ಶಾಲೆಯಿಂದ ಬಿಡಿಸಿಬಿಟ್ಟರು. ಮನೆಪಾಠದ ಮೂಲಕ ಓದು ಮುಂದುವರಿಸಬೇಕಾಯಿತು.

ಬಾಲ್ಯಸಹಜ ಚಟುವಟಿಕೆಯಿಂದ ದೂರವಿದ್ದ ಏಕಾಂಗಿ ನಾದಿನ್‌, ಪುಸ್ತಕಗಳ ನಂಟು ಬೆಳೆಸಿಕೊಂಡರು. ಚಿಕ್ಕ ವಯಸ್ಸಿನಲ್ಲೇ ಭಾವನೆಗಳನ್ನು ಬರಹದಲ್ಲಿ ಇಳಿಸತೊಡಗಿದರು. 1937ರಲ್ಲಿ ಇನ್ನೂ 14 ವರ್ಷದವರಿದ್ದಾಗ ಅವರ ಮೊದಲ ಕಥೆ  (ಮಕ್ಕಳ ಕಥೆ) ಪ್ರಕಟವಾಯಿತು.

ಪದವಿ ಪೂರೈಸದೇ ವಿಶ್ವವಿದ್ಯಾಲಯದಿಂದ ಹೊರಬಿದ್ದ ನಾದಿನ್‌ 1948ರಲ್ಲಿ ಸ್ಪ್ರಿಂಗ್ಸ್‌ನಿಂದ ಜೋಹಾನ್ಸ್‌ಬರ್ಗ್‌ಗೆ ಸ್ಥಳಾಂತರಗೊಂಡರು. ಬೋಧನಾ ಕಾರ್ಯದಲ್ಲಿ ತೊಡಗಿಕೊಂಡು ಬರಹ ಕೃಷಿ ಮುಂದುವರಿಸಿದರು. ಅಲ್ಲಿಂದ ಮುಂದೆ ಜೋಹಾನ್ಸ್‌ಬರ್ಗ್‌ ಅವರ ಕರ್ಮಭೂಮಿಯಾಯಿತು.

1949ರಲ್ಲಿ ಸ್ಥಳೀಯ ದಂತವೈದ್ಯ ಗೆರಾಲ್ಡ್‌ ಗಾವ್ರನ್‌ ಅವರನ್ನು ನಾದಿನ್‌ ವರಿಸಿದರು. 1950ರಲ್ಲಿ ಈ ದಂಪತಿಗೆ ಒರಿಯನ್‌ ಎಂಬ ಪುತ್ರಿಯೂ ಜನಿಸಿದಳು. ಆದರೆ, ಬಹುಕಾಲ ಬಾಳದ ಈ ದಾಂಪತ್ಯ ಮೂರು ವರ್ಷದೊಳಗೆ ವಿಚ್ಛೇದನದಲ್ಲಿ ಅಂತ್ಯವಾಯಿತು.
1954ರಲ್ಲಿ ಕಲಾಕೃತಿಗಳ ಡೀಲರ್‌ ಆಗಿದ್ದ ರೇನ್‌ಹೋಲ್ಡ್‌ ಕ್ಯಾಸಿರರ್‌ ಎಂಬ ಗಣ್ಯ ವ್ಯಕ್ತಿಯನ್ನು ನಾದಿನ್‌ ಮದುವೆಯಾದರು. 2001ರಲ್ಲಿ ವೃದ್ಧಾಪ್ಯ ಸಂಬಂಧಿ ಕಾಯಿಲೆಯಿಂದ ಕ್ಯಾಸಿರರ್‌ ನಿಧನರಾಗುವವರೆಗೆ ಪ್ರೀತಿ ತುಂಬಿದ ತುಂಬು ದಾಂಪತ್ಯವನ್ನು ನಾದಿನ್‌ ಅನುಭವಿಸಿದರು. 1955ರಲ್ಲಿ ಈ ದಂಪತಿಗೆ ಜನಿಸಿದ್ದ ಹ್ಯೂಗೊ ನ್ಯೂಯಾರ್ಕ್‌ನಲ್ಲಿ ಚಿತ್ರ ನಿರ್ಮಾಪಕರಾಗಿದ್ದಾರೆ.

ಹೋರಾಟದ ಹಾದಿ
1960ರಲ್ಲಿ ಟ್ರಾನ್ಸ್‌ವಾಲ್‌ ಸಮೀಪದ ಶಾರ್ಪ್‌ವಿಲ್ಲೆಯಲ್ಲಿ ಸರ್ಕಾರದ ಕರಾಳ ಕಾನೂನಿನ ವಿರುದ್ಧದ ಪ್ರತಿಭಟಿಸುತ್ತಿದ್ದ 5000ಕ್ಕೂ ಹೆಚ್ಚು ಕರಿಯರ ಮೇಲೆ ಪೊಲೀಸರು ಗೋಲಿಬಾರ್‌ ನಡೆಸಿದರು. ಈ ಹತ್ಯಾಕಾಂಡದಲ್ಲಿ 69 ಜನ ಮುಗ್ಧರು ಪ್ರಾಣ ಕಳೆದುಕೊಂಡರು. ಲೇಖಕಿ ನಾದಿನ್‌ ಹೋರಾಟಗಾರ್ತಿ ಯಾಗಿ ರೂಪಾಂತರಗೊಳ್ಳಲು ಈ ಘಟನೆ ಪ್ರೇರಣೆಯಾಯಿತು.

ಸ್ಥಳೀಯ ಕಪ್ಪುಜನರ ನೋವು ಅವರ ಬರಹಗಳಲ್ಲಿ ಕಾಣತೊಡಗಿತು. ಪರಿಣಾಮ, ಅವರ ‘ದಿ ಲೇಟ್‌ ಬೂರ್ಜ್ವಾಸ್‌ ವರ್ಲ್ಡ್‌’, ‘ಅ ವರ್ಲ್ಡ್‌ ಆಫ್‌ ಸ್ಟ್ರೆಂಜರ್ಸ್‌’, ‘ಬರ್ಗರ್ಸ್‌ ಡಾಟರ್‌’ ಮತ್ತು ‘ಜುಲೈಸ್‌ ಪೀಪಲ್‌’ ಕೃತಿಗಳ ಮೇಲೆ ದಕ್ಷಿಣ ಆಫ್ರಿಕಾ ಸರ್ಕಾರ ನಿಷೇಧ ಹೇರಿತ್ತು.
ಆಫ್ರಿಕನ್‌ ನ್ಯಾಷನಲ್‌ ಕಾಂಗ್ರೆಸ್‌ ಅಕ್ರಮ ಸಂಘಟನೆ ಎಂದು ಸರ್ಕಾರ ಘೋಷಿಸಿದ್ದರೂ ಅದರ ಸಕ್ರಿಯ ಸದಸ್ಯೆಯಾಗಿ ಅದು ಏರ್ಪಡಿಸುವ ಪ್ರತಿಭಟನೆಗಳಲ್ಲಿ ನಾದಿನ್‌ ಸದಾ ಭಾಗಿಯಾಗುತ್ತಿದ್ದರು. 

ವರ್ಣಭೇದ ನೀತಿಯ ವಿರುದ್ಧ ಮಾತ್ರವಲ್ಲದೇ, ದಕ್ಷಿಣ ಆಫ್ರಿಕಾ ಸರ್ಕಾರ ಮಾಧ್ಯಮಗಳ ಮೇಲೆ, ಕಲಾ ಪ್ರದರ್ಶನಗಳ ಮೇಲೆ, ಸಾಹಿತ್ಯ ಚಟುವಟಿಕೆಗಳ ಮೇಲೆ ಹೇರಿದ್ದ ನಿರ್ಬಂಧಗಳನ್ನು ಪ್ರಶ್ನಿಸತೊಡಗಿದರು. ಜಾಗತಿಕ ವೇದಿಕೆಗಳಲ್ಲಿ ದಕ್ಷಿಣ ಆಫ್ರಿಕಾದ ಕರಾಳ ರಾಜಕೀಯ ಸನ್ನಿವೇಶದ ಚಿತ್ರಣ ನೀಡತೊಡಗಿದರು.

ಇತ್ತೀಚಿನ ವರ್ಷಗಳಲ್ಲಿ ಪ್ರಜಾಸತ್ತಾತ್ಮಕ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದರು. ಎಚ್‌ಐವಿ/ಏಡ್ಸ್‌ ಅಭಿಯಾನದಲ್ಲೂ ತೊಡಗಿಕೊಂಡಿದ್ದರು.

1974ರಲ್ಲಿ ಅವರ ‘ದಿ ಕನ್ಸರ್ವೇಷನಿಸ್ಟ್‌’ ಕೃತಿಗೆ ಬೂಕರ್‌ ಪ್ರಶಸ್ತಿ ಬಂತು. 1991ರಲ್ಲಿ ನೊಬೆಲ್‌ ಪ್ರಶಸ್ತಿ ಅರಸಿಕೊಂಡು ಬಂತು. ನೊಬೆಲ್‌ ಪ್ರಶಸ್ತಿ ನೀಡುವಾಗ ತಮ್ಮ ಉತ್ಕೃಷ್ಟ ಸಾಹಿತ್ಯದಿಂದ ಮಾನವ ಕುಲಕ್ಕೆ ಬಹುದೊಡ್ಡ ಉಪಕಾರ ಮಾಡಿದ ಮಹಿಳೆ ಎಂದು ಅವರನ್ನು ಬಣ್ಣಿಸಲಾಗಿತ್ತು. ನಾದಿನ್ ಗಾರ್ಡಿಮರ್‌ ವಿಚಾರದಲ್ಲಿ ಈ ಹೇಳಿಕೆ  ಉತ್ಪ್ರೇಕ್ಷೆಯೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT