ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ಕಂಡಂತೆ ‘ಐರಾವತ’

Last Updated 1 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಐರಾವತ’ ಸಿನಿಮಾದ ವಿಶೇಷಗಳೇನು? ನಾಯಕ ನಟ ದರ್ಶನ್ ಅವರ ಮಾತುಗಳಲ್ಲೇ ಕೇಳಿ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ಬಹುವಾಗಿ ನಿರೀಕ್ಷೆ ಮೂಡಿಸಿದ್ದ ಚಿತ್ರ ‘ಐರಾವತ’ ನಿನ್ನೆ (ಅ.1) ತೆರೆಗೆ ಬಂದಿದೆ. ಬೇರಾವ ಸಿನಿಮಾಗಳನ್ನೂ ಒಪ್ಪಿಕೊಳ್ಳದೇ ‘ಐರಾವತ’ಕ್ಕಾಗಿಯೇ ತಮ್ಮ ಪೂರ್ಣ ಸಮಯವನ್ನು ಮೀಸಲಿಟ್ಟಿದ್ದರಿಂದ ಸ್ವತಃ ದರ್ಶನ್ ಅವರೂ ಎದುರು ನೋಡುತ್ತಿದ್ದ ಚಿತ್ರವಿದು.

‘ಅಂಬರೀಶ’ ನಂತರ ಬಿಡುಗಡೆಯಾಗುತ್ತಿದೆ ಮತ್ತು ‘ಅಯ್ಯ’ ನಂತರ ದರ್ಶನ್ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೂ ‘ಐರಾವತ’ ಮಹತ್ವದ್ದು. ಈ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ದರ್ಶನ್ ಆಡಿದ ಮಾತುಗಳು ಅವರದೇ ದಾಟಿಯಲ್ಲಿ...

ಎ.ಪಿ. ಅರ್ಜುನ್ ಬಂದು ನನಗೆ ಕಥೆ ಹೇಳುವಲ್ಲಿಂದ ‘ಐರಾವತ’ ಪ್ರಕ್ರಿಯೆ ಶುರುವಾಯಿತು. ‘ಐರಾವತ’ ಬಿಳಿ ಆನೆಯಿದ್ದಂತೆ. ಆರಂಭದಲ್ಲಿ ಸಾಮಾನ್ಯ ಬಜೆಟ್‌ನಲ್ಲೇ ಚಿತ್ರ ಮಾಡೋಣ ಎಂದುಕೊಂಡಿದ್ದು. ಆದರೆ ‘ಐರಾವತ’ ಹೆಸರು ಪಡೆದುಕೊಳ್ಳುವಲ್ಲಿಂದಲೇ ಖರ್ಚು ದೊಡ್ಡದಾಗುತ್ತ ಬಂತು. ಆಗಲೇ ಗೊತ್ತಾಯಿತು, ಇದು ತುಂಬಾ ದೊಡ್ಡ ಬಿಳಿ ಆನೆ, ಇದನ್ನು ಸಾಕುವುದು ಕಷ್ಟವಿದೆ ಎಂದು. ಹಾಗಂತ ಸಿನಿಮಾದ ಬೇಕು–ಬೇಡ ವಿಚಾರದಲ್ಲಿ ಏನನ್ನೂ ಕಡಿಮೆ ಮಾಡಿಲ್ಲ. ನಿರ್ಮಾಪಕ ಸಂದೇಶ್ ನಾಗರಾಜ್ ಕಳೆದ 23 ಸಿನಿಮಾಗಳಲ್ಲಿ ಮಾಡಿರುವ ಹಣವೆಲ್ಲವನ್ನೂ ತಂದು ಈ ಚಿತ್ರಕ್ಕೆ ಹಾಕಿದ್ದಾರೆ.

ಸಂದೇಶ್ ನಾಗರಾಜ್ ಅವರು ನನ್ನ ‘ಪ್ರಿನ್ಸ್’ ಚಿತ್ರವನ್ನು ನಿರ್ಮಿಸಿದ್ದರು. ಆ ಸಿನಿಮಾದಿಂದ ತನಗೇನು ನಷ್ಟ ಆಗಿಲ್ಲ ಎಂದು ಅವರು ಹೇಳುತ್ತಾರಾದರೂ, ನಿಜವಾಗಿ ಆ ಚಿತ್ರದಲ್ಲಿ ಅವರಿಗೆ ನಷ್ಟವಾಗಿದೆ. ಆ ಸಿನಿಮಾ ಸಂದರ್ಭದಲ್ಲೇ ಅವರಿಗೆ, ನಿಮ್ಮ ನಿರ್ಮಾಣದಲ್ಲಿ ಕಡಿಮೆ ಬಜೆಟ್‌ನಲ್ಲಿ ಮತ್ತೊಂದು ಒಳ್ಳೆಯ ಸಿನಿಮಾ ಮಾಡೋಣ ಎಂದಿದ್ದೆ. ಆ ಮಾತಿನಂತೆ ‘ಐರಾವತ’ ಸೆಟ್ಟೇರಿತು. ಆದರೀಗ ಬಜೆಟ್ ಲೆಕ್ಕಾಚಾರ ಉಲ್ಟಾ ಆಗಿದೆ. ನಿರ್ಮಾಪಕರು ಹೇಳುವಂತೆ ಇದು ಕನ್ನಡದ ಅತಿ ಹೆಚ್ಚು ಬಜೆಟ್‌ನ ಚಿತ್ರ.

ಈ ಸಿನಿಮಾವನ್ನು ಜನ ಯಾಕೆ ನೋಡಬೇಕು ಎಂದು ಕೇಳಿದರೆ ನನ್ನ ಉತ್ತರ, ಇಂದು ಪೊಲೀಸ್ ವ್ಯವಸ್ಥೆ ಹೇಗಿದೆ, ಅದು ಹೇಗಿರಬೇಕು ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಕೃಷಿಕರ ಕುರಿತ ಕಾಳಜಿಯೂ ಇದೆ. ರೈತರ ಬವಣೆ ನೀಗಿಸಲು ಸರ್ಕಾರ ಏನು ಮಾಡಬಹುದು ಎಂದೂ ಹೇಳಲು ಯತ್ನಿಸಿದ್ದೇವೆ. ಉದಾಹರಣೆ ಹೇಳಬಹುದಾದರೆ, ನಾನೊಬ್ಬ ಹಾಲು ಮಾರುವವ. ಈಗಲೂ ನಾನು ಹಾಲು ಮಾರುತ್ತೇನೆ. ಇಂದು ಮಾರುಕಟ್ಟೆಯಲ್ಲಿ ಒಂದು ಲೀಟರ್ ಹಾಲಿಗೆ ಮೂವತ್ತರಿಂದ ಮೂವತ್ತೈದು ರೂಪಾಯಿ ಇದೆ. ಆದರೆ ರೈತರಿಂದ ಹಾಲನ್ನು ಕೊಳ್ಳುವ ಸಂಸ್ಥೆಗಳು ಬರೀ ಇಪ್ಪತ್ತು–ಇಪ್ಪತ್ತೊಂದು ರೂಪಾಯಿಗೆ ಖರೀದಿಸುತ್ತವೆ. ಅಂದರೆ ರೈತರಿಗೆ ಬರಬೇಕಾದ ಹಣ ಇನ್ನೆಲ್ಲೋ ಸೋರಿಕೆ ಆಗುತ್ತಿದೆ. ಅದು ಮಧ್ಯವರ್ತಿಗಳಿಗೆ ಹೋಗುತ್ತದೆ. ಇದು ನನ್ನ ಅನುಭವಕ್ಕೂ ಬಂದಿದೆ.

ಇಂಥ ಪರಿಸ್ಥಿತಿಯನ್ನು ಸರಿ ದಾರಿಗೆ ತರಬೇಕಾದವರಾರೂ ಕೇರ್ ಮಾಡುತ್ತಿಲ್ಲ. ಇದಕ್ಕೆಲ್ಲ ಪರಿಹಾರ ಏನು ಎಂಬುದನ್ನೂ ಚಿತ್ರದಲ್ಲಿ ಸ್ವಲ್ಪ ಸ್ವಲ್ಪ ತೋರಿಸಿದ್ದೇವೆ. ಹಾಗಂತ ತತ್ವ, ಉಪದೇಶ ಹೇಳಲು ಹೋಗಿಲ್ಲ. ‘ಐರಾವತ’ ಪಕ್ಕಾ ಕಮರ್ಷಿಯಲ್ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಚಿತ್ರದುದ್ದಕ್ಕೂ ಪ್ರೇಕ್ಷಕರಿಗೆ ಹತ್ತಿರವಾಗುವ ಒಳ್ಳೊಳ್ಳೆಯ ಸಂಭಾಷಣೆಗಳಿವೆ. ಟ್ರೇಲರ್‌ನಲ್ಲಿ ಕಂಡಿದ್ದು ಚಿಕ್ಕ ಸ್ಯಾಂಪಲ್ ಮಾತ್ರ. ಇಷ್ಟು ಬಿಟ್ಟು ಸಿನಿಮಾ ಹಾಗಿದೆ, ಹೀಗಿದೆ, ಏನೋ ಅದ್ಭುತ ಮಾಡಿದ್ದೀವಿ ಎಂದೆಲ್ಲ ಹೇಳುವುದಿಲ್ಲ. ಮೊದಲ ಪ್ರದರ್ಶನದಲ್ಲೇ ಅಭಿಮಾನಿಗಳಿಗೆ ಎಲ್ಲ ತಿಳಿದುಬಿಡುತ್ತದೆ.

ಇನ್ನು ಸಿನಿಮಾ ತಂಡದಲ್ಲಿ ಗಲಾಟೆ, ಹೊಡೆದಾಟಗಳಾಯ್ತು ಎಂದೆಲ್ಲ ಸುದ್ದಿ ಬಂತು. ಸಣ್ಣ ಪುಟ್ಟ ಗಲಾಟೆಗಳಾದವು, ಹೊಡೆದಾಟಗಳೇನೂ ಆಗಿಲ್ಲ. ಅದೇನೇ ಆಗಿದ್ದರೂ ಸಿನಿಮಾ ವಿಚಾರವಾಗಿಯೇ ಹೊರತು ವೈಯಕ್ತಿಕವಾಗಿ ಅಲ್ಲ. ನಾನೂ ಒಂದೂವರೆ ವರ್ಷದಿಂದ ಬೇರೆ ಸಿನಿಮಾ ಮಾಡೋಕೆ ಹೋಗಿಲ್ಲ. ನನಗೂ ಚಿತ್ರ ಬೇಗ ಮುಗಿಯಲಿ ಎಂಬ ನಿರೀಕ್ಷೆ ಇತ್ತು. ಆದರೆ ಇನ್ನು ಮಾತ್ರ ವರ್ಷಕ್ಕೆ ಎರಡು ಸಿನಿಮಾ ಮಾಡಲೇ ಬೇಕು ಎಂದುಕೊಂಡದ್ದೇನೆ.

ನಿರ್ಮಾಪಕ ಸಂದೇಶ್ ಬಗ್ಗೆ ಹೇಳಲೇ ಬೇಕು. ನನ್ನ ದೇಹಕ್ಕೆ ಈ ಆಕಾರ ಬರುವುದು ಮತ್ತು ಅದನ್ನು ಇಡೀ ಚಿತ್ರದುದ್ದಕ್ಕೂ ಕಾಯ್ದುಕೊಂಡು ಬರುವುದು ಸುಲಭವಾಗಿರಲಿಲ್ಲ. ಸಂದೇಶ್ ನನ್ನನ್ನು ಸಾಕಿದರು ಎಂದೇ ಹೇಳಬೇಕು. ಈ ದೇಹದಾರ್ಢ್ಯಕ್ಕೆ ಅಗತ್ಯವಿದ್ದ ಎಲ್ಲ ಅವಶ್ಯಕತೆಗಳನ್ನು ಅವರು ಒದಗಿಸಿದರು. ಇದರಲ್ಲಿ ನನ್ನ ಶ್ರಮ ಇದ್ದದ್ದು ನಿತ್ಯ ಮಾಡುವ ಎರಡು ಗಂಟೆ ವರ್ಕೌಟ್ ಮಾತ್ರ. ನಿರ್ಮಾಪಕನಾದವನಿಗೆ ಸಿನಿಮಾದ ಮೇಲೆ ಎಷ್ಟು ಅಕ್ಕರೆ ಇರಬೇಕೋ, ಅಷ್ಟನ್ನೂ ಇಟ್ಟುಕೊಂಡವರು ಸಂದೇಶ್. ಸಿನಿಮಾದಲ್ಲಿ ಅಭಿಮಾನಿಗಳು ದರ್ಶನ್ ಮೈಕಟ್ಟು ನೋಡಿ ಶಿಳ್ಳೆ ಹೊಡೆದರೆ ಅದರ ಶಹಬ್ಬಾಸ್‌ಗಿರಿ ದೊರೆಯಬೇಕಾದ್ದು ನಿರ್ಮಾಪಕರಿಗೆ.

ಈಗಾಗಲೇ ಸಿನಿಮಾಗೆ ಖರ್ಚು ಮಾಡಿದ ಹಣ ಕೈಗೆ ಬಂದಿದೆ ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ. ಸಂತೋಷವಾಗಿದೆ. ಚಿತ್ರ ಇನ್ನೂ ಹೆಚ್ಚು ಹಣ ಮಾಡಲಿ ಎಂಬುದು ನನ್ನ ಆಶಯ. ಕರ್ನಾಟಕದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಬೆಳಿಗ್ಗೆ ಆರು ಗಂಟೆಗೇ ಪ್ರದರ್ಶನ ಶುರುವಾಗುತ್ತದೆ. ಹಿಂದಿದ್ದ ಶತದಿನೋತ್ಸವ ಸಂಭ್ರಮದ ದಿನಗಳೆಲ್ಲ ಈಗ ಮುಗಿದಿವೆ. ಈಗೇನಿದ್ದರೂ ಇರೋ ಬರೋ ಚಿತ್ರಮಂದಿರಗಳಲ್ಲೆಲ್ಲ ಸಿನಿಮಾ ತೋರಿಸಿ ಮೂರು ವಾರಗಳಲ್ಲಿ ಹಣ ಬಾಚಿಕೊಳ್ಳಬೇಕು. ಇಂದಿನ ಪರಿಸ್ಥಿತಿಯೇ ಹಾಗಾಗಿದೆ. ಎಷ್ಟಾದರೂ ಇದೊಂದು ಉದ್ಯಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT