ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಗೃಹ ಪ್ರವೇಶ

ಮುಕ್ತ ಛಂದ
Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ದಲಿತರು ಗೃಹ ಪ್ರವೇಶ ಮಾಡುವುದಿಲ್ಲವೇ?
ಮಾಡುತ್ತಾರೆ. ಅವರ ಮನೆಯಲ್ಲಿ ಮಾತ್ರ. ಆದರೆ ಇತರರ ಮನೆಗೆ ಅವರ ಪ್ರವೇಶ ಅಷ್ಟೇ ಸಹಜವಾಗಿ ನಡೆಯುತ್ತದೆಯೇ ಎಂಬ ಪ್ರಶ್ನೆಯನ್ನು ಕೇಳಿದರೆ ಅವರು ಸುಮ್ಮನೇ ನಗುತ್ತಾರೆ. ಅದು ನಕಾರಾತ್ಮಕವಾದ ವಿಷಾದ ನಗು.
ದೇಶದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿ ದಶಕಗಳು ಉರುಳಿವೆ. ಆದರೆ ಬೇರೆ ಬೇರೆ ರೂಪಗಳಲ್ಲಿ ಅದು ದಲಿತರ ಬೆನ್ನಿಗೆ ಬೇತಾಳನಂತೆ ನೇತಾಡಿಕೊಂಡಿದೆ. ಅಸ್ಪೃಶ್ಯತೆ ಆಚರಣೆ ಅಪರಾಧ ಎಂದು ಕಾನೂನು ಇದ್ದರೂ ಅದರ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ.

ದಲಿತರು ಈಗಲೂ ಹಲವು ದೇವಾಲಯದೊಳಕ್ಕೆ ಹೆಜ್ಜೆ ಇಡುವುದಿಲ್ಲ. ಹೊರಗೆ ನಿಂತೇ ಹಣ್ಣು, ಕಾಯಿ ಕೊಟ್ಟು ಕೈ ಮುಗಿಯುತ್ತಾರೆ. ಮೇಲ್ಜಾತಿ ಎನ್ನಿಸಿಕೊಂಡವರ ಮನೆಯಾಚೆಗೇ ನಿಲ್ಲುತ್ತಾರೆ. ಮೊದಲಿನ ದಯನೀಯ ಸಾಮಾಜಿಕ ಸ್ಥಿತಿ ಏನೂ ಇಲ್ಲ. ಆದರೂ ಅವರು ಸದಾ ಹೊರಗೆ ನಿಂತವರೇ.

ದಲಿತ ಚಳವಳಿಯ ತವರಾದ ಕೋಲಾರ ಜಿಲ್ಲೆಯಲ್ಲೇ ಇಂಥ ದೃಶ್ಯಗಳು ಈಗಲೂ ಇವೆ. ಜಿಲ್ಲೆಯ ಯಾವುದೇ ಹಳ್ಳಿಯಲ್ಲಿ ಇಣುಕಿದರೂ ಇಂಥ ಆಚರಣೆಗಳು ಕಣ್ಣಿಗೆ ಬೀಳುತ್ತವೆ. ಒಳಗೆ ಬನ್ನಿ ಎಂದು ಕರೆದವರ ಮನೆಗೂ ದಲಿತರು ಹೋಗಲು ಹಿಂಜರಿಯುತ್ತಾರೆ. ಒಳಗೆ ಬನ್ನಿ ಎಂದು ಹೇಳದ ಮನೆಯ ಮುಂದೆ ಅವರಿಗೆ ನಿಲ್ಲುವುದು ಬೇಕಾಗಿಲ್ಲ.

ಇಂಥ ಸನ್ನಿವೇಶದಲ್ಲೇ ಮುಳಬಾಗಲು ನಿವಾಸಿಯಾದ ಡಾ.ಜಿ.ಶಿವಪ್ಪ ತಮ್ಮ ತಂದೆ ಗಟ್ಟಪ್ಪಸ್ವಾಮಿಯವರ 7ನೇ ವರ್ಷದ ಪುಣ್ಯತಿಥಿಯ ದಿನ ಮುಳಬಾಗಲು ತಾಲ್ಲೂಕಿನ ಎಂ. ಗೊಲ್ಲಹಳ್ಳಿಯ ತಮ್ಮ ಮನೆಯೊಳಕ್ಕೆ ಸುತ್ತಮುತ್ತಲಿನ ಒಂಬತ್ತು ಹಳ್ಳಿಗಳ ದಲಿತರನ್ನು ಕರೆದು, ತತ್ವಪದ ಗಾಯನ ಕಾರ್ಯಕ್ರಮ ನಡೆಸಿದ್ದರು. ‘ಬದಲಾವಣೆ ನಿನ್ನಿಂದಲೇ ಆಗಲಿ. ನಿನ್ನ ಮನೆಯಿಂದಲೇ ಆಗಲಿ’ ಎಂಬ ನಾಣ್ಣುಡಿಯಂತೆ ನಡೆದುಕೊಂಡ ಅವರು, ಕೋಲಾರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರು.

ಇಂಥದ್ದೊಂದು ಕಾರ್ಯಕ್ರಮವನ್ನು ನಡೆಸಲೇಬೇಕು ಎಂದು ಅವರು ಯಾವತ್ತೂ ಅಂದುಕೊಂಡಿರಲಿಲ್ಲ. ಆದರೆ ಅದಕ್ಕೆ ಪ್ರೇರಣೆಯಾಗಿದ್ದು ಮಾತ್ರ ಒಂದು ದೇವಸ್ಥಾನದ ಭೇಟಿ. ಕೆಲವು ತಿಂಗಳ ಹಿಂದೆ, ಶಿಡ್ಲಘಟ್ಟ ತಾಲ್ಲೂಕಿನ ಬ್ಯಾಟರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ದಲಿತ ಯುವಕನೊಬ್ಬ ಹೊರಗಿನಿಂದಲೇ ನಿಂತು ಕೈ ಮುಗಿಯುತ್ತಿದ್ದ. ಆದರೆ ಒಳಗೆ ಬರಲು ಒಪ್ಪಲಿಲ್ಲ. ‘ದೇವಾಲಯಕ್ಕೆ ದಲಿತರು ಬರಬಾರದು ಎಂಬ ನಿಯಮವೇನೂ ಇಲ್ಲ, ಬನ್ನಿ’ ಎಂದರೂ ಆತ ಬರಲಿಲ್ಲ. ‘ಮೊದಲಿನಿಂದಲೂ ಇಲ್ಲೇ ಇದ್ದೇನೆ. ಒಳಗೆ ಬರಲು ಇಷ್ಟವಿಲ್ಲ’ ಎಂದು ಹೇಳಿದ.

ಅದೊಂದು ವಿಚಿತ್ರ, ಸಂಕೀರ್ಣ ಸನ್ನಿವೇಶ. ‘ದೇವಾಲಯಕ್ಕೆ ಬರಬಾರದು ಎಂದು ಹೇಳಿಲ್ಲ’ ಎಂದು ಪೂಜಾರಿ ಹೇಳಿದರು. ಆ ಯುವಕನ ದಲಿತ ಗೆಳೆಯರು ದೇವಾಲಯದೊಳಗೆ ಬಂದು ಕುಳಿತಿದ್ದರು. ಆದರೆ ಆ ಯುವಕ ಮಾತ್ರ ಬರಲೇ ಇಲ್ಲ. ಇದನ್ನು ಸುಧಾರಿಸುವುದು ಹೇಗೆ ಎಂಬುದು ಅಂದು ಮೊಳೆತ ಪ್ರಶ್ನೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಸಲುವಾಗಿಯೇ ಶಿವಪ್ಪ ತಮ್ಮ ತಂದೆಯ ತಿಥಿಯ ದಿನವನ್ನು ಆಯ್ಕೆ ಮಾಡಿಕೊಂಡರು.

ಈಗ ಆ ಪ್ರಯತ್ನಕ್ಕೊಂದು ಹೆಸರನ್ನು ಅವರೇ ಇಟ್ಟಿದ್ದಾರೆ. ಅದು ‘ದಲಿತರ ಗೃಹಪ್ರವೇಶ’. ದಲಿತರನ್ನು ಮೇಲ್ಜಾತಿಯ ಮನೆಗಳ ಒಳಕ್ಕೆ ಕರೆತರುವುದು. ಮೇಲ್ಜಾತಿಯವರಲ್ಲಿ ಮತ್ತು ದಲಿತರಲ್ಲಿ ಮನೆ ಮಾಡಿರುವ ಅಸ್ಪೃಶ್ಯತೆಯ ಮನೋಭಾವವನ್ನು ದೂರಗೊಳಿಸುವ ಸಾಂಕೇತಿಕ ಪ್ರಯತ್ನ ಅದು.

ಸುಧಾರಣಾವಾದಿ ನೆಲೆಯ ಕ್ರಾಂತಿಕಾರಕವಾದ ಪ್ರಯತ್ನ ಎಂಬ ಹೊಗಳಿಕೆಯನ್ನು ಹಲವರಿಂದ, ಅದರಲ್ಲೂ ದಲಿತ ಮುಖಂಡರಿಂದ ಪಡೆದಿರುವ ಅವರ ಈ ಪ್ರಯತ್ನವನ್ನು ಸ್ವಾಗತಿಸಿ ಮಾತನಾಡುವ ಮೇಲ್ಜಾತಿಯ ಬಹಳಷ್ಟು ಜನ ಮಾತ್ರ ಮನೆಯೊಳಕ್ಕೆ ದಲಿತರನ್ನು ಬಿಟ್ಟುಕೊಳ್ಳಲು ಸಿದ್ಧರಿಲ್ಲ ಎಂಬುದು ವಿಪರ್ಯಾಸ.

ದಲಿತರು ಅಯೋಗ್ಯರೇ?
ಮನೆ ಒಳಗಿನ ಒಡನಾಟಕ್ಕೆ ದಲಿತರು ಅಯೋಗ್ಯರು ಎಂಬ ಅಭಿಪ್ರಾಯ ಈಗಲೂ ಮೇಲ್ಜಾತಿಯವರಲ್ಲಿ ದಟ್ಟವಾಗಿಯೇ ಇದೆ. ಅದಕ್ಕೊಂದು ತೀಕ್ಷ್ಣವಾದ ಉದಾಹರಣೆಯನ್ನು ನೀಡುವುದಾದರೆ, ಶಿವಪ್ಪನವರ ಪ್ರಯತ್ನದ ಕುರಿತು ಉಪನ್ಯಾಸಕರೊಬ್ಬರು ‘ನೀವು ಮಾಡುತ್ತಿರುವುದು ದಲಿತರ ಗೃಹಪ್ರವೇಶವಲ್ಲ. ಬದಲಿಗೆ ಗ್ರಹ ಪ್ರವೇಶ’ ಎಂದು ಹೇಳಿದರಂತೆ! ಕಾರ್ಯಕ್ರಮದ ಉದ್ದೇಶ ಮತ್ತು ಪರಿಣಾಮಗಳ ಕುರಿತ ಕಲ್ಪಿತ ವ್ಯಂಗ್ಯವೇ ಅಲ್ಲಿ ಪ್ರಧಾನ.

ಸ್ವತಃ ಸೌಮ್ಯ ಸ್ವಭಾವದವರಾದ ಶಿವಪ್ಪ ಸೌಮ್ಯತೆಯ ಮೂಲಕವೇ ಗೃಹಪ್ರವೇಶ ಕಾರ್ಯಕ್ರಮಗಳನ್ನು ಹಳ್ಳಿಗಳಲ್ಲಿ ಏರ್ಪಡಿಸುತ್ತಿದ್ದಾರೆ. ದಲಿತರನ್ನು ಮನೆಯೊಳಕ್ಕೆ ಕರೆಯುವ ಆಸಕ್ತರ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ ಕರೆ ಮಾಡುತ್ತಾರೆ. ‘ನಿಮ್ಮದೇ ಹಳ್ಳಿಯ ದಲಿತರನ್ನು ನಿಮ್ಮ ಮನೆಗೆ ಕರೆಯುವುದಾದರೆ ನಾವು ಬಂದು ಕಾರ್ಯಕ್ರಮವನ್ನು ಆಯೋಜಿಸುತ್ತೇವೆ’. ಇದು ಅವರ ಒಂದೇ ಸಾಲಿನ ಮನವಿ. ಸ್ಪಂದಿಸಿದರೆ ಮುಂದಿನ ನಡೆ. ಇಲ್ಲದಿದ್ದರೆ ಮತ್ತೊಬ್ಬರಿಗೆ ಕರೆ.

ಜಾತಿ ಪದ್ಧತಿಯನ್ನು ಅತ್ಯುಗ್ರವಾಗಿ ವಿರೋಧಿಸದೆಯೇ ಇಂಥ, ಕಂಡೂ ಕಾಣದಂಥ ಅಸ್ಪೃಶ್ಯ ಆಚರಣೆಯನ್ನು ಸುಧಾರಿಸಲು ಸಾಧ್ಯ ಎಂದು ನಂಬುವ ಗುಂಪಿಗೆ ಸೇರಿದವರು ಶಿವಪ್ಪ. ಆದರೆ, ಗೃಹಪ್ರವೇಶಕ್ಕೆ ಸಹಕರಿಸಲು ಮನಸ್ಸಿಲ್ಲದವರು ಮಾತ್ರ, ಜಾತಿ ಪದ್ಧತಿಯನ್ನು ಪರೋಕ್ಷವಾಗಿ ಮುಂದೊಡ್ಡುತ್ತಾ ಅಸ್ಪೃಶ್ಯತೆಯ ಆಚರಣೆಯನ್ನು ಮಾತಾಡದೆಯೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಜಾತಿ ಪದ್ಧತಿಯೂ ಇರಬೇಕು. ಅಸ್ಪೃಶ್ಯತೆಯೂ ಇರಬೇಕು.

ಆಗಸ್ಟ್ 24ರಂದು ಮುಳಬಾಗಲಿನ ಆವಣಿ ಗ್ರಾಮದಲ್ಲಿ ಏರ್ಪಾಡಾಗಿದ್ದ ದಲಿತರ ಗೃಹಪ್ರವೇಶಕ್ಕೆ ಒಪ್ಪಿಗೆ ನೀಡಿದ್ದ ಹಿಂದುಳಿದ ವರ್ಗದ ಜಾತಿಗೆ ಸೇರಿದವರೊಬ್ಬರು, ಶಿವಪ್ಪ ಮತ್ತು ತಂಡ ತೆರಳಿದಾಗ ಮನೆಗೆ ಬೀಗ ಹಾಕಿದ್ದರು! ಶಿವಪ್ಪ ಅವರೇನೂ ಬೇಸರಿಸಿಕೊಳ್ಳಲಿಲ್ಲ. ಮತ್ತೊಬ್ಬರ ಮನೆಗೆ ದಲಿತರನ್ನು ಕರೆದೊಯ್ದರು.

ಅಸಮಾನತೆಯ ತಳಹದಿಯ ಮೇಲೆ ಭದ್ರವಾಗಿ ನಿಂತಿರುವ ಭಾರತೀಯ ಸಮಾಜದ ಒಂದು ಮೂಲೆಯಲ್ಲಿರುವ ಮುಳಬಾಗಲಿನ ಹಳ್ಳಿಗಳಲ್ಲಿ ಆರಂಭವಾಗಿರುವ ದಲಿತರ ಗೃಹಪ್ರವೇಶಕ್ಕೆ ಸಾಮಾಜಿಕ ಅನುಮೋದನೆ ಅಷ್ಟು ಸುಲಭಕ್ಕೆ ದೊರೆಯುವುದಿಲ್ಲ ಎಂಬ ಸನ್ನಿವೇಶವೇ ಇದೆ. ಆದರೆ ಶಿವಪ್ಪ ಮತ್ತು ಅವರೊಂದಿಗೆ ಕೈಜೋಡಿಸಿ ಹೆಜ್ಜೆ ಹಾಕುತ್ತಿರುವ ಮುಖಂಡರು, ಕಲಾವಿದರು ಆಶಾವಾದಿಗಳಾಗಿದ್ದಾರೆ ಎಂಬುದೇ ವಿಶೇಷ.

‘ಒಳಗೆ ಬರುವ’ ಮಾತು...
ಎಂ.ಗೊಲ್ಲಹಳ್ಳಿಯಲ್ಲಿ ಆಗಸ್ಟ್ 15ರಂದು ಶಿಕ್ಷಕ ಎನ್. ಜಗನ್ನಾಥ್‌ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಳಬಾಗಲು ತಾಲ್ಲೂಕಿನವರೇ ಆದ, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ಒಂದು ಮಾತನ್ನು ಹೇಳಿದ್ದರು: ‘ದಲಿತರನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವುದು ದೊಡ್ಡ ಸಂಗತಿ ಏನಲ್ಲ. ಅದೊಂದು ಸಾಂಕೇತಿಕ ಕ್ರಿಯೆ ಅಷ್ಟೇ. ಅದನ್ನೂ ಮೀರಿ ದಲಿತರನ್ನು ಇಡೀ ಸಮಾಜವು ತನ್ನ ಮನದೊಳಕ್ಕೆ ಬಿಟ್ಟುಕೊಳ್ಳಬೇಕಾಗಿದೆ’. ಆದರೆ, ಮನೆ ಪ್ರವೇಶಕ್ಕೇ ಒಲ್ಲದ ಮಂದಿ ಮನದ ಪ್ರವೇಶಕ್ಕೆ ಒಪ್ಪುತ್ತಾರೆಯೇ?

ಅದೇ ಕಾರ್ಯಕ್ರಮದಲ್ಲಿ ಗಣ್ಯರು ಭಾಷಣ ಮಾಡುತ್ತಿದ್ದ ವೇಳೆ, ಅದನ್ನು ಕೇಳಿಸಿಕೊಂಡು ವರದಿ ಮಾಡಲೆಂದು ಲ್ಯಾಪ್‌ಟಾಪ್‌ ತೆರೆದು ಶಿವಪ್ಪನವರ ಮನೆಯಲ್ಲಿ ಕುಳಿತಿದ್ದ ನನ್ನನ್ನು ಹೊರಗೆ ನಿಂತು ಕಿಟಕಿಯಿಂದ ಕುತೂಹಲದ ಕಣ್ಣಲ್ಲಿ ನೋಡುತ್ತಿದ್ದ ಕೆಲವು ಶಾಲಾ ಬಾಲಕರನ್ನು ‘ಒಳಗೆ ಬರ್ರೋ’ ಎಂದು ಕರೆದೆ. ಅವರು ಅಲ್ಲಿಂದಲೇ ‘ಮೇಮು ಲೋಪಲಕಿ ರಾ ಕೂಡದು’ (ನಾವು ಒಳಗೆ ಬರಕೂಡದು) ಎಂದು ಹೇಳಿ ಅಲ್ಲೇ ಉಳಿದರು. ಬಲವಂತ ಮಾಡಿದ್ದಕ್ಕೆ ಒಳಗೆ ಬಂದು ಕುಳಿತರು. ಆ ಮಕ್ಕಳಲ್ಲಿ ‘ಲೋಪಲಕಿ ರಾವೊಚ್ಚು’ (ಒಳಗೆ ಬರಬಹುದು) ಎಂಬ ಭಾವನೆ ಮೂಡಿಸುವುದು ಯಾವಾಗ ಮತ್ತು ಹೇಗೆ ಎಂಬುದೇ ಸದ್ಯದ ಬಹಳ ಮುಖ್ಯವಾದ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT