ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಚಿಂತನೆ: ಮಾತಷ್ಟೇ ಸಾಲದು

Last Updated 30 ಜೂನ್ 2015, 19:30 IST
ಅಕ್ಷರ ಗಾತ್ರ

ವಡ್ಡಗೆರೆ ನಾಗರಾಜಯ್ಯ ಅವರು (ಸಂಗತ, ಜೂನ್‌ 30) ಪ್ರಸ್ತಾಪಿಸಿರುವ ವಿಚಾರಗಳು ಖಂಡಿತಾ ವಿಚಾರಾರ್ಹ. ನಾವೆಲ್ಲ ಪ್ರತಿ ವರ್ಷ ದಲಿತ ಚಳವಳಿ- ಚಿಂತನೆಯ ಸಂದರ್ಭಗಳಲ್ಲಿ ಅಂಬೇಡ್ಕರ್ ಅವರ ವಿಚಾರ ಮತ್ತು ಹೋರಾಟಗಳ ಬಗ್ಗೆ ಆಪ್ಯಾಯಮಾನವಾಗಿ ಮಾತನಾಡುತ್ತೇವೆ. ಇಂಥ ಮಾತುಗಳನ್ನು ಕಳೆದ 60 ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ಆದರೆ ಹಲವು ಸಮಸ್ಯೆಗಳು ನಮ್ಮ ನಿರೀಕ್ಷೆಗೆ ಅನುಗುಣವಾಗಿ ಬಗೆಹರಿದಿಲ್ಲ. ಕೆಲವು ಸಮಸ್ಯೆಗಳು ಇನ್ನಷ್ಟು ಉಲ್ಬಣಿಸಿವೆ. ಯಾಕೆ ಹೀಗೆ ಎಂದರೆ ಉತ್ತರ ಸ್ಪಷ್ಟ.

ಅಂಬೇಡ್ಕರ್ ಅವರ ವಿಚಾರ ಮತ್ತು ಹೋರಾಟವನ್ನು ಆಚರಣೆಯ ರೂಪದಲ್ಲಿ ಮುಂದುವರಿಸುವ ಬದಲು ಮಾತನಾಡುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ಇದರಿಂದಾಗಿಯೇ ಇಂದು ಅನೇಕರು ಒಪ್ಪಿರುವಂತೆ ‘ಸಾವಿರಾರು ವರ್ಷಗಳ ಅಸಮಾನತೆಯನ್ನು ಹೋಗಲಾಡಿಸಲು ಕಳೆದ ಮುಕ್ಕಾಲು ಶತಮಾನದ ವ್ಯವಸ್ಥಿತ ಹೋರಾಟ ಹಾಗೂ ಕಾನೂನಿನ ಬೆಂಬಲಗಳು ಇದ್ದಾಗ್ಯೂ ದಲಿತರ ಸ್ಥಿತಿ ಇನ್ನೂ ಹಾಗೇ ಇದೆ’.

ಅಂಬೇಡ್ಕರ್ ಅವರ ವಿಚಾರ ಮತ್ತು ಹೋರಾಟಗಳಿಗೆ ಇಂದು ಒಮ್ಮೆಲೇ ಈ ಸ್ಥಿತಿ ಬಂದೊದಗಿದೆ ಎಂದು ಹೇಳುವಂತಿಲ್ಲ. ಅಂಬೇಡ್ಕರ್ ಬದುಕಿದ್ದ ಕಾಲಕ್ಕಾಗಲೇ ಅವರ ವಿಚಾರ ಮತ್ತು ಹೋರಾಟಗಳಿಗೆ ವಿನಾಶದ ಪರ್ವ  ಆರಂಭವಾಗಿದ್ದಂತೆ ಕಾಣುತ್ತದೆ. ಇದಕ್ಕೆ ಸ್ಪಷ್ಟ ನಿದರ್ಶನವಾಗಿ ಅವರು ತಮ್ಮ ಕೊನೆಯ ಕಾಲದಲ್ಲಿ ಹೇಳಿದ್ದ ಸಂದೇಶ ರೂಪದ ಈ ವಿಚಾರಗಳೇ ಸಾಕ್ಷಿ:

1. ನಾನು ನನ್ನ ಗುರಿ ತಲುಪಲು ಸಾಧ್ಯವಾಗಲಿಲ್ಲ;  ಅದನ್ನು ಮುಂದುವರಿಸಲು ಬೇಕಾದ ವಯಸ್ಸು ಮತ್ತು ಆರೋಗ್ಯ ನನ್ನ ಬಳಿ ಇಲ್ಲವಲ್ಲ ಎಂಬ ನಿರಾಸೆ. 
2. ನನ್ನ ಹೋರಾಟದ ಫಲವಾಗಿ ದಕ್ಕಿದ ಕೆಲವಾದರೂ ಫಲಗಳನ್ನು ಪಡೆದು ಸುಖ ಪಡುತ್ತಿರುವ ಫಲಾನುಭವಿಗಳಿಗೆ ತಮ್ಮ ಹಿಂದಿರುವ ಜನರ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ಅವರು ಹಾದಿತಪ್ಪಿದ ಅಯೋಗ್ಯರಾಗಿದ್ದಾರೆ.
3. ನನ್ನ ನಂತರ ಚಳವಳಿಯನ್ನು ಮುನ್ನಡೆಸುತ್ತಾರೆ ಎಂದುಕೊಂಡಿದ್ದ ವ್ಯಕ್ತಿಗಳು ಈ ಬಗ್ಗೆ ಕಾಳಜಿ ವಹಿಸದೆ  ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ.
4. ನಾನು ಬಹಳ ಕಷ್ಟಪಟ್ಟು ಕಟ್ಟಿದ ಚಳವಳಿಯನ್ನು ಸಮರ್ಥವಾಗಿ ಮುನ್ನಡೆಸಲು ಸಾಧ್ಯವಾಗದಿದ್ದರೆ ಅದನ್ನು ಹಿಂದಕ್ಕೆ ತಳ್ಳಬಾರದೆಂಬುದನ್ನು ನನ್ನ ಜನ ತಿಳಿಯಬೇಕು.

ಇಂತಹ ಸ್ವ-ಹಿತಾಸಕ್ತಿ, ಅಧಿಕಾರ ಲಾಲಸೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಗುಣ  ಮೊದಲಾದವು ಅಂದಿನಿಂದ ಇಂದಿನವರೆಗೂ  ತನ್ನ ಬಾಹುಗಳನ್ನು ಇನ್ನಷ್ಟು ಉದ್ದಕ್ಕೆ ಚಾಚಿರುವುದನ್ನು ಕಾಣುತ್ತಿದ್ದೇವೆ. ಅಂದು ಅಂಬೇಡ್ಕರ್ ದಲಿತರ ಉದ್ಧಾರಕ್ಕೆ ಅಗತ್ಯವೆಂದಿದ್ದ ಮಾರ್ಗೋಪಾಯಗಳು ಇಂದು ಭ್ರಷ್ಟಗೊಂಡಿವೆ. ಮುಖ್ಯವಾಗಿ ಶಿಕ್ಷಣ, ಹೋರಾಟ ಮತ್ತು ಸಂಸದೀಯ ರಾಜಕಾರಣವನ್ನು ಅಂಬೇಡ್ಕರ್ ದಲಿತರ ವಿಮುಕ್ತಿಗೆ ಸಮರ್ಥ ಸಾಧನಗಳೆಂದು ತಿಳಿದೇ ಈ ಬಗ್ಗೆ ತಮ್ಮ ಜೀವನದುದ್ದಕ್ಕೂ ಹೋರಾಡಿ ಒಂದು ಹಂತದ ಪರಿಣಾಮವನ್ನು ಉಂಟು ಮಾಡಿದ್ದರು. ಆದರೆ ಇಂದು ಇವುಗಳ ಸ್ಥಿತಿ ಏನಾಗಿದೆ?

ಪಾರಂಪರಿಕವಾಗಿ ಶಿಕ್ಷಣದಿಂದ ವಂಚಿತರಾದ ಶೋಷಿತ ಸಮುದಾಯಗಳಿಗೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನದ ಮೂಲಕ ದತ್ತವಾದ ಶಿಕ್ಷಣದ ಹಕ್ಕಿಗೆ ತೆರೆದುಕೊಳ್ಳುತ್ತಿರುವಾಗಲೇ ಅನೇಕ ಸವಾಲು ಮತ್ತು ಸಮಸ್ಯೆಗಳು ಎದುರಾಗಿವೆ. ಶಿಕ್ಷಣದಲ್ಲಿ ಖಾಸಗೀಕರಣದ ದುಷ್ಪರಿಣಾಮಗಳನ್ನು ಅನುಭವಿಸುವಂತಾಗಿದೆ. ಶಿಕ್ಷಣ ಕ್ಷೇತ್ರ ಕೆಲವು ಉದ್ಯಮಪತಿಗಳು ಹಾಗೂ ರಾಜಕಾರಣಿಗಳ ಕೈವಶವಾಗಿದೆ.

ಹಾಗಾಗಿಯೆ ಇಂದು ಹಣವಿದ್ದವರಿಗೆ ಮಾತ್ರ ಶಿಕ್ಷಣ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಮೇಲ್ಚಲನೆ ಪಡೆದ ದಲಿತ ಶಿಕ್ಷಣೋದ್ಯಮಿಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲೂ ದಲಿತರಿಗೆ ಸಮಾನತೆಯಿಲ್ಲ ಎಂಬುದು ಈ ಕಾಲದ ಒಂದು ವ್ಯಂಗ್ಯವೇ ಸರಿ. ಸರ್ಕಾರಿ ಶಾಲೆಗಳ ಮೂಲಕ ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ನೀಡುತ್ತೇವೆಂದು ಹೇಳುತ್ತಲೇ ಉಪಯೋಗಕ್ಕೆ ಬಾರದ ಶಿಕ್ಷಣವನ್ನು ನೀಡಲಾಗುತ್ತಿದೆ. ಆದರೆ ಇಲ್ಲೆಲ್ಲ ಗುಣಾತ್ಮಕ ಶಿಕ್ಷಣ ಸಿಗದೆ, ಶಿಕ್ಷಣದಿಂದ ಪಡೆಯಬೇಕಾಗಿದ್ದ ಅವಶ್ಯ ಜ್ಞಾನವೂ ದೊರೆಯದೆ ಕೇವಲ ಅಕ್ಷರಸ್ಥ ಅತಂತ್ರರಾಗಿದ್ದಾರೆ. ಶಿಕ್ಷಣ ಇಲಾಖೆಯು ಆರ್‌ಟಿಇ ಜಾರಿಗೆ ತಂದರೂ ಶಿಕ್ಷಣದಲ್ಲಿ ಸಮಾನತೆ ತರಲು ಸಾಧ್ಯವಾಗಿಲ್ಲ.

ಸಂಸದೀಯ ವ್ಯವಸ್ಥೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಉದ್ಧಾರಕ್ಕೆ ತಾವೇ ಕಾರಣರಾಗುವುದು ಉತ್ತಮ ಎಂಬುದು ಅಂಬೇಡ್ಕರ್ ಅವರೇ ಶೋಧಿಸಿಕೊಂಡ ಸತ್ಯ. ಆದರೆ ಆ ವ್ಯವಸ್ಥೆಯಲ್ಲಿ ಪಾಲ್ಗೊಂಡರೂ ನಿರೀಕ್ಷಿತ ಫಲಿತಾಂಶ ಹೋಗಲಿ, ಅದಕ್ಕೆ ತದ್ವಿರುದ್ಧ ಬೆಳವಣಿಗೆಗಳು ನಡೆದಿವೆ. ಉದಾ: ಇಂದಿನ ಸಂಸದೀಯ ರಾಜಕಾರಣದಲ್ಲಿ ಯಾವುದೇ ಪಕ್ಷ ದಲಿತರೊಬ್ಬರಿಗೆ ಟಿಕೆಟ್ ನೀಡಿದರೆ ಅದು ಸಾಧನೆ, ಅವರು ಅಲ್ಲಿಂದ ಗೆದ್ದು ಬಂದರೆ ಮಹಾನ್ ಸಾಧನೆ, ಸಚಿವ ಸ್ಥಾನ ನೀಡಿದರೆ ಮಹಾನ್ ಮಹಾನ್ ಸಾಧನೆ. ದಲಿತರೊಬ್ಬರು ಚುನಾವಣೆಯಲ್ಲಿ ಗೆದ್ದು ಮಂತ್ರಿಯಾದರೆ ನಾವು ದಲಿತರ ಉದ್ಧಾರಕರು ಎಂದು ಎಲ್ಲ ಪಕ್ಷಗಳು ಬಿಂಬಿಸಿಕೊಳ್ಳುತ್ತವೆ.

ದುರಂತವೆಂದರೆ ಸ್ವತಃ ಆ ದಲಿತ ರಾಜಕಾರಣಿಯಿಂದಲೇ ತಮ್ಮ ಪಕ್ಷ ಎಷ್ಟು ದಲಿತ ಪರವಾಗಿದೆ ಎಂದು ಹೇಳಿಕೆ ಕೊಡಿಸುತ್ತಾರೆ. ಒಟ್ಟಾರೆ ಇಲ್ಲಿಗೆ ದಲಿತರ ಉದ್ಧಾರದ ಕಥೆ ಮುಗಿಯಿತು. ಅಲ್ಲಿಂದ ಮುಂದೆ ನಿಜವಾಗಿ ಉದ್ಧಾರವಾಗಲು ಮಾಡಬೇಕಿದ್ದ ಕೆಲಸಗಳು ಹಳೆಯ ಕಾನೂನಿನ ನೆರಳಲ್ಲಿ ಹೆಸರಿಗಷ್ಟೇ ನಡೆಯುತ್ತವೆ. ಈ ಒಬ್ಬ ಮಂತ್ರಿಯಿಂದ ಇಡೀ ಸಮುದಾಯವನ್ನು ನಿಯಂತ್ರಿಸುವ ಅಪಾಯಕಾರಿ ಸಂದರ್ಭಗಳನ್ನು ಎಲ್ಲ ರಾಜ್ಯಗಳಲ್ಲೂ ಕಾಣುತ್ತಿದ್ದೇವೆ. ಇನ್ನೂ ಅಪಾಯಕಾರಿ ಸಂಗತಿಗಳೆಂದರೆ ಮಠಕ್ಕೆ ಹಣ ನೀಡಿದರೆ, ಆ ಸಮುದಾಯದ ಪುಣ್ಯಪುರುಷರ ದಿನವನ್ನು ಸರ್ಕಾರಿ ದಿನಾಚರಣೆಯಾಗಿ ಘೋಷಿಸಿದರೆ, ತಮ್ಮ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೊ ನೇತು ಹಾಕಿದರೆ ಇವೆಲ್ಲವೂ ಸಮುದಾಯದ ಉದ್ಧಾರದ ಕೆಲಸಗಳು!

ಎಲ್ಲ ಬಗೆಯ ಶೋಷಿತರಿಗೆ ಹೋರಾಟವೇ ಮುಕ್ತಿಯ ಹಾದಿ. ಹೋರಾಟಕ್ಕೆ ಸಂಘಟನೆಗಳು ಬಹುಮುಖ್ಯ. ಈ  ಹಿನ್ನೆಲೆಯಲ್ಲಿ ಹುಟ್ಟಿಕೊಂಡು ಕಾರ್ಯ ನಿರ್ವಹಿಸುವ ಸಂಘಟನೆಗಳು ಕೆಲವು ಸಾಮಾನ್ಯ ಕಾರಣಗಳಿಂದ ವಿಘಟನೆಗೊಂಡು ಶಕ್ತಿ ಕಳೆದುಕೊಂಡಿವೆ, ಇಲ್ಲ ವಿನಾಶದ ಅಂಚಿಗೆ ಸರಿದಿವೆ. ಕೆಲವೇ ಕೆಲವರ ಸ್ವಹಿತಾಸಕ್ತಿ, ಅಧಿಕಾರ ಲೋಭ, ಹೋರಾಟಗಳನ್ನು ಉಪಜೀವನ ಮಾಡಿಕೊಳ್ಳುವ ಗುಣಗಳಿಂದ ಹೋರಾಟ ದುರ್ಬಲಗೊಳ್ಳುತ್ತದೆ. 

ಕಾರಣಗಳೇನೇ ಇದ್ದರೂ ಸಂಘಟನೆಗಳು ಹುಟ್ಟಿಕೊಂಡ ಹಿಂದಿರುವ ಮೂಲ ಉದ್ದೇಶಗಳು ಈಡೇರಲಿಲ್ಲ ಎಂಬುದು ವಾಸ್ತವ. ಹಾಗಾಗಿ ಇಂದು ಅನೇಕ ಸಂಘಟನೆಗಳಿಗೆ ಜಾತಿ ನಾಶವೇ/ ನಿರ್ಮಾಣವೇ? ಜಾತಿಯಾಧಾರಿತ ಸಂಘಗಳನ್ನು ಕಟ್ಟಿ ಜಾತಿ ನಿರ್ಮೂಲನೆ ಮಾಡಬಹುದೆ? ಎಲ್ಲವನ್ನು ಜಾತಿಯಿಂದ ಗ್ರಹಿಸುವ ನಮ್ಮಿಂದ ಜಾತಿ ಹೇಗೆ ನಾಶವಾಗುತ್ತದೆ? ಜಾತಿ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದೇವೆಯೆ? ನಮ್ಮ ನಿಜವಾದ ಶತ್ರು ಯಾರು? ನಾವು ಹೋರಾಡುತ್ತಿರುವವರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇದೆಯೇ ಎಂಬ ಬಗ್ಗೆ ಸ್ಪಷ್ಟತೆ ಇದ್ದಂತಿಲ್ಲ.

ಹಾಗಾಗಿ ಸಂಘಟನೆಗಳ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಇದರ ದುಷ್ಪರಿಣಾಮವೆಂದರೆ, ಸಾಮಾನ್ಯ ದಲಿತರು ತಮ್ಮನ್ನು ಉದ್ಧರಿಸುತ್ತೇವೆಂದು ಬಂದ ಯಾವುದೇ ವ್ಯಕ್ತಿ, ಸಂಘ-ಸಂಸ್ಥೆ, ಪಕ್ಷವನ್ನು, ಕೊನೆಗೆ ಸಂವಿಧಾನವನ್ನೂ ನಂಬಲಾರದ ಸ್ಥಿತಿ ತಲುಪಿದ್ದಾರೆ. ಈ ಎಲ್ಲ ಕಾರಣಗಳಿಂದ ಅಂಬೇಡ್ಕರ್‌ ಎಂಬ ರಕ್ಷಾ ಕವಚವನ್ನು ಹರಿತಗೊಳಿಸಬೇಕಿದೆ. ಅಂಬೇಡ್ಕರ್ ವಾದವನ್ನು ದಲಿತರ ಹೋರಾಟಕ್ಕೆ ಮಾರ್ಗದರ್ಶಿಯಾಗುವಂತೆ ತುರ್ತಾಗಿ ಪುನರ್ ನಿರ್ಮಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT