ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ವಿಮೋಚನೆ ಎಡ -ಬಲ

Last Updated 16 ಜುಲೈ 2011, 19:30 IST
ಅಕ್ಷರ ಗಾತ್ರ

ಮಾಲೀಕನಾಗುವುದೇ  ಮೋಕ್ಷಕ್ಕೆ ದಾರಿ
ಮುಖ್ಯವಾಹಿನಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಅಂಕಣಕಾರನ ಸ್ಥಾನವನ್ನು ಪಡೆದ ಮೊದಲ ದಲಿತ ಚಿಂತಕ. ದಲಿತ ವಿಮೋಚನೆಯ ಕುರಿತ ಆಲೋಚನೆಗಳನ್ನು ತಲೆಕೆಳಗು ಮಾಡಿದ ಚಿಂತಕ ಮುಂತಾದ ವಿಶೇಷಣಗಳೊಂದಿಗೆ ಗುರುತಿಸಿಕೊಳ್ಳುವ ಚಂದ್ರಭಾನ್ ಪ್ರಸಾದ್ ದಲಿತ ವಿಮೋಚನಾ ಚಳವಳಿಗಳ ಬಲ ಮಗ್ಗುಲಿನಲ್ಲಿರುವ ಚಿಂತಕ. ನವ ಉದಾರವಾದಿ ಜಾಗತೀಕರಣ ಕಲ್ಪಿಸುವ `ಸಮಾನ ಅವಕಾಶ~ ದಲಿತ ವಿಮೋಚನೆಯ ಅತ್ಯುತ್ತಮ ಹಾದಿ ಎಂದು ನಂಬಿರುವ ಚಂದ್ರಭಾನ್ ಪ್ರಸಾದ್ ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ. ತಂದೆ-ತಾಯಿ ಅನಕ್ಷರಸ್ಥರು. ಆದರೆ ಆರ್ಥಿಕವಾಗಿ ಬಲವಾಗಿದ್ದ ಕುಟುಂಬ. ದಿಲ್ಲಿಯ ಜವಹರಲಾಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಚಂದ್ರಭಾನ್ ಅಲ್ಲಿಯೇ ಪಿಎಚ್.ಡಿಗಾಗಿ ನೋಂದಾಯಿಸಿಕೊಂಡರೂ ಅದನ್ನು ಪೂರ್ಣಗೊಳಿಸಲಿಲ್ಲ. ಅವರೇ ಹೇಳಿಕೊಳ್ಳುವಂತೆ ಸ್ವತಃ ಮಾನವಶಾಸ್ತ್ರ ಮತ್ತು ಸಾಮಾಜಿಕ ಮನಃಶಾಸ್ತ್ರದ ಅಧ್ಯಯನ ನಡೆಸಿದವರು.
 
ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ (ಡಿಕ್ಕಿ) ಪರಿಕಲ್ಪನೆಯ ಜನಕರಾದ ಅವರು ದೇಶವ್ಯಾಪಿಯಾಗಿ ದಲಿತ ಉದ್ಯಮಿಗಳನ್ನು ಗುರುತಿಸಿ ಸಂಘಟಿಸುವ ಕೆಲಸದಲ್ಲಿ ತೊಡಗಿದ್ದಾರೆ. ಇದರ ಭಾಗವಾಗಿಯೇ ಬೆಂಗಳೂರಿಗೂ ಬಂದಿದ್ದ ಚಂದ್ರಭಾನ್, ದಲಿತ ವಿಮೋಚನೆಯ `ಭಿನ್ನ ಹಾದಿ~ಯ ಕುರಿತು ತಮ್ಮ ಅನಿಸಿಕೆಗಳನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡರು. ಅದರ ಆಯ್ದ ಭಾಗಗಳು ಇಲ್ಲಿವೆ.

ನವ ಉದಾರವಾದೀ ಕಾಲಘಟ್ಟದ ಬಂಡವಾಳಶಾಹಿಯ ಮೂಲ ನೆಲಗಟ್ಟೇ ಬಡವರನ್ನು ಹೊರಗಿಡುವಂಥದ್ದು. ಹಾಗಿರುವಾಗ `ದಲಿತ ಬಂಡವಾಳ~ದಿಂದ ದಲಿತ ವಿಮೋಚನೆಯ ಗುರಿಯನ್ನು ತಲುಪುವುದಕ್ಕೆ ಹೇಗೆ ಸಾಧ್ಯ?
ತೊಂಬತ್ತರ ದಶಕದ ನಂತರದ ಬಂಡವಾಳಶಾಹಿಯ ಸ್ವರೂಪ ಅದಕ್ಕೂ ಹಿಂದಿನ ಬಂಡವಾಳಶಾಹಿಯ ಸ್ವರೂಪಕ್ಕಿಂತ ಭಿನ್ನವಾಗಿದೆ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ತೊಂಬತ್ತರ ದಶಕದ ಹಿಂದಿನ ಬಂಡವಾಳಶಾಹಿ ಕೂಡಾ ದಲಿತರ ಮಟ್ಟಿಗೆ ವಿಮೋಚನಾತ್ಮಕವಾಗಿಯೇ ಇತ್ತು. ಏಕೆಂದರೆ ಬಂಡವಾಳಶಾಹಿ ಯಾವತ್ತೂ ಮತ-ಧರ್ಮವನ್ನು ಆಧಾರವಾಗಿಟ್ಟುಕೊಂಡಿರಲಿಲ್ಲ. ಕಾರ್ಲ್ ಮಾರ್ಕ್ಸ್ ಹೇಳಿದ್ದೂ ಇದನ್ನೇ. ಆದರೆ ಬಂಡವಾಳಶಾಹಿಯೊಳಗೂ ತೊಂದರೆಗಳಿದ್ದವು. ಆದರೆ ಇವು ಊಳಿಗಮಾನ್ಯ ವ್ಯವಸ್ಥೆಯ ತೊಂದರೆಗಳಿಗಿಂತ ಹೆಚ್ಚು ಸಹ್ಯ.
 
ಬಂಡವಾಳಶಾಹಿ ವ್ಯವಸ್ಥೆಯನ್ನು ವಿರೋಧಿಸುವ ಅನೇಕ ಬುದ್ಧಿಜೀವಿಗಳು ಊಳಿಗಮಾನ್ಯ ಕೌಟುಂಬಿಕ ಹಿನ್ನೆಲೆಯವರು. ಅವರು ಯಾವತ್ತೂ ನೌಕರರಾಗಿರಲಿಲ್ಲ. ಅವರು ಯಾವಾಗಲೂ ಮಾಲೀಕರಾಗಿದ್ದವರು. ಆದರೆ ಬಂಡವಾಳಶಾಹಿ ವ್ಯವಸ್ಥೆ ಬಂದಾಗ ಮಾಲೀಕರ ಸಂಖ್ಯೆ ಕಡಿಮೆಯಾಗಿ ನೌಕರರ ಸಂಖ್ಯೆ ಹೆಚ್ಚಾಯಿತು.

ಬಂಡವಾಳ ವ್ಯವಸ್ಥೆಯನ್ನು ವಿರೋಧಿಸುವ ಅರ್ಥಶಾಸ್ತ್ರದ ಪ್ರೊಫೆಸರ್ ಕೂಡಾ ಒಬ್ಬ ನೌಕರನೇ. ಆದರೆ ಅವನ ಕೌಟುಂಬಿಕ ಹಿನ್ನೆಲೆ ಮಾಲೀಕರದ್ದು. ನೌಕರಿಯನ್ನು ಕೊಡುವ ಮಾಲೀಕತ್ವದ ಹಿನ್ನೆಲೆಯಿಂದ ಬಂದವನು ನೌಕರನಾದಾಗ ಸಹಜವಾಗಿಯೇ ಅವನನ್ನು ನೌಕರನನ್ನಾಗಿಸಿದ ಬಂಡವಾಳ ವ್ಯವಸ್ಥೆಯನ್ನು ವಿರೋಧಿಸುತ್ತಾನೆ. ನನ್ನ ಎಡಪಂಥೀಯ ಗೆಳೆಯರನೇಕರ ಸ್ಥಿತಿ ಇದುವೇ.

ಆದರೆ ಇದು ದಲಿತರ ವಿಮೋಚನೆಗೆ ಹೇಗೆ ನೆರವಾಗುತ್ತದೆ ಎಂಬುದು ಸ್ಪಷ್ಟವಾಗಲಿಲ್ಲ?
ನಾನು ಅದನ್ನೇ ವಿವರಿಸಲು ಪ್ರಯತ್ನಿಸುತ್ತಿದ್ದೇನೆ. ಇಲ್ಲಿಯ ತನಕ ನಾನು ಹೇಳಿದ್ದು ತೊಂಬತ್ತರ ದಶಕಕ್ಕೆ ಮೊದಲಿದ್ದ ಬಂಡವಾಳ ವ್ಯವಸ್ಥೆ ಮತ್ತು ಅದಕ್ಕಿದ್ದ ವಿರೋಧದ ಕಾರಣಗಳು. ತೊಂಬತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆ ವಿಶ್ವವ್ಯಾಪಿಯಾಗಿ ಆರ್ಥಿಕ ಕ್ಷೇತ್ರದಲ್ಲೂ ಒಂದು ಪ್ರಜಾಪ್ರಭುತ್ವದ ಸ್ಥಾಪನೆಗೆ ಕಾರಣವಾಯಿತು. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ವಾಹನವೊಂದರ ತಯಾರಿಕೆಯ ಪ್ರಕ್ರಿಯೆ. ಮೊದಲು ಟ್ರಕ್ ತಯಾರಿಸುತ್ತಿದ್ದ ಕಂಪೆನಿಗಳು ಟೈರ್‌ಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ತಮ್ಮ ಫ್ಯಾಕ್ಟರಿಯಲ್ಲಿಯೇ ತಯಾರಿಸುತ್ತಿದ್ದವು.

ಜಾಗತೀಕರಣ ಹುಟ್ಟು ಹಾಕಿದ ಸ್ಪರ್ಧೆಯಿಂದಾಗಿ ಎಲ್ಲರೂ ವೆಚ್ಚವನ್ನು ಕಡಿತಗೊಳಿಸಲೇಬೇಕಾಯಿತು. ಉದ್ಯಮದಲ್ಲಿ ಉಳಿದುಕೊಳ್ಳುವುದಕ್ಕಾಗಿ ಎಲ್ಲರೂ ಕಡಿಮೆ ಖರ್ಚಿನ ಉತ್ಪಾದನಾ ವಿಧಾನಗಳನ್ನು ಅನುಸರಿಸಲು ತೊಡಗಿದರು. ಅಂದರೆ ಒಂದು ದೊಡ್ಡ ಫ್ಯಾಕ್ಟರಿಯಲ್ಲಿ ಎಲ್ಲಾ ಬಿಡಿ ಭಾಗಗಳನ್ನು ತಯಾರಿಸುವ ಬದಲಿಗೆ ಅನೇಕ ಸಣ್ಣ ತಯಾರಕರು ಬಿಡಿಭಾಗಗಳನ್ನು ತಯಾರಿಸುವ ಪ್ರಕ್ರಿಯೆ ಆರಂಭಗೊಂಡಿತು. ಇದು ಮೊದಲು ಅಮೆರಿಕದಲ್ಲಿ ಆರಂಭಗೊಂಡಿತು.
 
ಒಂದೇ ಫ್ಯಾಕ್ಟರಿಯಲ್ಲಿ ಸಾವಿರ ಯಂತ್ರಗಳು ಮತ್ತು ಅದನ್ನು ನಿರ್ವಹಿಸಲು ಸಾವಿರ ಜನರನ್ನು ಇಟ್ಟುಕೊಳ್ಳುವುದೆಂದರೆ ಬಹುದೊಡ್ಡ ಜಾಗ, ಕಾರ್ಮಿಕರನ್ನು ನಿರ್ವಹಿಸಲು ಒಂದು ನಿರ್ವಹಣಾ ವ್ಯವಸ್ಥೆ ಎಲ್ಲವೂ ಬೇಕು. ಅದರ ಬದಲಿಗೆ ಒಂದು ಯಂತ್ರವನ್ನು ಒಬ್ಬಾತ ಮನೆಯಲ್ಲೇ ಇಟ್ಟುಕೊಂಡು ಬಿಡಿಭಾಗವೊಂದನ್ನು ತಯಾರಿಸುವುದಾದರೆ ನಿರ್ವಹಣೆಯ ಖರ್ಚಿಲ್ಲದೆಯೇ ಉತ್ಪನ್ನ ತಯಾರಾಗುತ್ತದೆ.

ನನ್ನ ದಲಿತ ಗೆಳೆಯನೊಬ್ಬ ಮುಂಬೈಯಲ್ಲಿ ಟಾಟಾ ಸಂಸ್ಥೆಯ ಕಾರಿನ ಕೆಲವು ಬಿಡಿಭಾಗಗಳನ್ನು ತಯಾರಿಸುವ ಕಾರ್ಖಾನೆಯ ಮಾಲೀಕ. ಆತನ ವಾರ್ಷಿಕ ವ್ಯವಹಾರ ಹಲವು ಕೋಟಿ. ನಾನು ಅವನನ್ನು ಕೆಲವು ಬಿಡಿಭಾಗಗಳನ್ನು ಟಾಟಾದವರ ಕಾರಿಗೆ ಒದಗಿಸುವುದರಲ್ಲಿ ನಿನಗ್ಯಾವ ಸಂತೃಪ್ತಿ ಇದೆ ಎಂದು ಕೇಳಿದೆ. ಆತ ಕೊಟ್ಟ ಉತ್ತರ ಹೀಗಿತ್ತು- `ನಾನೊಂದು ಕಾರನ್ನು ಯಾವತ್ತೂ ಉತ್ಪಾದಿಸಲು ಸಾಧ್ಯವಿರಲಿಲ್ಲ. ಆದರೆ ಈಗ ನಾನು ಟಾಟಾದ ಕಾರುಗಳನ್ನು ತೋರಿಸಿ ಇದರಲ್ಲಿ ನಾನು ತಯಾರಿಸಿದ ಬಿಡಿಭಾಗಗಳಿವೆ ಎಂದು ಹೆಮ್ಮೆಯಿಂದ ಹೇಳಬಹುದು~.

ಅಂದರೆ ಒಂದು ಟಾಟಾ ಕಾರಿನ ಘಟಕ ಇದೆಯೆಂದರೆ ಅದಕ್ಕೆ ಬಿಡಿಭಾಗಗಳನ್ನು ಪೂರೈಸುವ ನೂರಾರು ಘಟಕಗಳು ಇರುತ್ತವೆ ಎಂದರ್ಥ. ಇದರ ಮೂಲಕ ಟಾಟಾ ಸಂಸ್ಥೆಗೆ ಅದರ ಉತ್ಪನ್ನದ ಮೇಲಿದ್ದ ಏಕಸ್ವಾಮ್ಯ ಇಲ್ಲವಾಗಿದೆ.
 
ಅನೇಕ ಸಣ್ಣ ಉತ್ಪಾದಕರೂ ಈ ಉತ್ಪನ್ನದ ಪಾಲುದಾರರಾಗುತ್ತಾರೆ. ಕಿರ್ಲೋಸ್ಕರ್‌ನಲ್ಲಿ ಕೆಲಸ ಮಾಡುತ್ತಿದ್ದ ಸದಾಮತೆ ತಾವು ನಿವೃತ್ತರಾಗುವಾಗ ಹಣದ ಬದಲಿಗೆ ಯಂತ್ರಗಳನ್ನು ಪಡೆದುಕೊಂಡು ಹೊರಬಂದು ತಮ್ಮದೇ ಕಂಪೆನಿ ಸ್ಥಾಪಿಸಿದರು.
 
ಈಗ ಅವರು ಕಿರ್ಲೋಸ್ಕರ್ ಪಂಪ್‌ಗಳಿಗೆ ಬಿಡಿಭಾಗಗಳನ್ನು ಪೂರೈಸುವ ಕಾರ್ಖಾನೆಯ ಮಾಲೀಕರು. ಅವರ ವಾರ್ಷಿಕ ವಹಿವಾಟು20 ಕೋಟಿ ರೂಪಾಯಿಗಳದ್ದು. ಅವರ ಪೂರೈಕೆದಾರರ ಸಂಖ್ಯೆಯೇ 20.
 
ಅವರಲ್ಲಿ ಹದಿನೈದು ಮಂದಿ ದಲಿತರು. ಈ ಪ್ರಕ್ರಿಯೆಯಲ್ಲಿ ಸದಾಮತೆ ನೌಕರನ ಹಂತದಿಂದ ನೌಕರಿ ನೀಡುವ ಹಂತಕ್ಕೆ ಹೋದರು. ಜೊತೆಗೆ ನೌಕರಿ ನೀಡುವ ಇನ್ನಷ್ಟು ಪೂರೈಕೆದಾರರಿಗೆ ಅವಕಾಶ ಕಲ್ಪಿಸಿದರು.

ಇದು ಹೊಸ ಅರ್ಥವ್ಯವಸ್ಥೆಯ ಪರಿಣಾಮ. ಇದು ಸಾಮರ್ಥ್ಯವಿರುವ ಎಲ್ಲರಿಗೂ ಅವಕಾಶ ಕಲ್ಪಿಸುತ್ತಿದೆ. ದಲಿತರೂ ಇದನ್ನೂ ಬಳಸಿಕೊಳ್ಳಲು ಯಾವ ಅಡ್ಡಿಗಳೂ ಇಲ್ಲಿಲ್ಲ.

ದಲಿತ ವಿಮೋಚನೆ ಇಷ್ಟು ಸರಳವಾಗಿದ್ದರೆ ಬಂಡವಾಳದ ಪರಿಕಲ್ಪನೆಗೆ ಇಷ್ಟೊಂದು ವಿರೋಧವಿರುತ್ತೇ?
`ದಲಿತ ಬಂಡವಾಳ~ ಪರಿಕಲ್ಪನೆಯನ್ನು ವಿರೋಧಿಸುವವರ ಮನಸ್ಸಿನಲ್ಲಿ ದಲಿತರು ಉತ್ತಮ ಕೆಲಸಗಾರರೇ ಹೊರತು ನೌಕರಿಯನ್ನು ನೀಡಬಲ್ಲವರಲ್ಲ ಎಂಬ ಪೂರ್ವಗ್ರಹಿಕೆಯಿದೆ. ಪರಿಣಾಮವಾಗಿ `ಬಂಡವಾಳ~ದ ಪರಿಕಲ್ಪನೆಯನ್ನು ಅವರು ವಿರೋಧಿಸುತ್ತಾರೆ. ನನ್ನ ದೃಷ್ಟಿಯಲ್ಲಿ ದಲಿತರು ಈ ಸಿದ್ಧಮಾದರಿಯಿಂದ ಹೊರಬಂದರೆ ತಮ್ಮ ವಿಮೋಚನೆಯ ಹಾದಿಯನ್ನು ಕಂಡುಕೊಳ್ಳುತ್ತಾರೆ. ಜಾತಿಯ ಗೋಡೆಗಳನ್ನು ದಾಟದೇ ಇದ್ದರೆ ದಲಿತರ ವಿಮೋಚನೆಯು ಸಾಧ್ಯವಿಲ್ಲ. ಅದನ್ನು ದಾಟುವುದಕ್ಕೆ ಇರುವ ಅತ್ಯುತ್ತಮ ಹಾದಿಯೆಂದರೆ ನೌಕರರಾಗದೆ ನೌಕರಿಯನ್ನು ನೀಡುವ ಮಾಲೀಕರಾಗುವುದು. ಈಗಾಗಲೇ ಉದ್ಯಮಿಗಳಾಗಿ ಯಶಸ್ವಿಯಾಗಿರುವ ದಲಿತರು ಜಾತಿಯ ಗೋಡೆಯನ್ನು ಒಡೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಯಾರೂ ಅವರನ್ನು ಜಾತಿಯ ಕಾರಣಕ್ಕಾಗಿ ಹೀಗಳೆವ ಧೈರ್ಯ ಮಾಡುವುದಿಲ್ಲ. ನಾವು `ಡಿಕ್ಕಿ~ಯ ಹೊಸ ಘಟಕಗಳಿಗಾಗಿ ಉದ್ಯಮಿಗಳನ್ನು ಹುಡುಕುತ್ತಾ ಹೊರಟಾಗ ಸಾವಿರಾರು ಕೋಟಿ ರೂಪಾಯಿಗಳ ವಾರ್ಷಿಕ ವ್ಯವಹಾರ ನಡೆಸುವ ಅನೇಕ ಉದ್ಯಮಿಗಳು ಸಿಕ್ಕರು. ಇವರೆಲ್ಲಾ ತಥಾಕಥಿತ ಮೇಲು ಜಾತಿಗಳವರಿಗೇ ನೌಕರಿ ನೀಡುವ ಸ್ಥಿತಿಯಲ್ಲಿದ್ದಾರೆ. ಒಮ್ಮೆ ದಲಿತರು ಈ ಹಂತಕ್ಕೇರಿದರೆ ಜಾತಿ ಆಧಾರಿತ ಅಸಮಾನತೆಗಳಿಗೆ ಅವಕಾಶವೇ ಇರುವುದಿಲ್ಲ. ಅಲ್ಲಿ ಜಾತಿಯ ನೆಲೆಗಟ್ಟೇ ಕುಸಿಯುತ್ತದೆ. ಇದು ನಿಜವಾದ ಬದಲಾವಣೆ. ಇದನ್ನು ಹೊಸ ಬಂಡವಾಳ ವ್ಯವಸ್ಥೆ ಸಾಧ್ಯ ಮಾಡುತ್ತಿದೆ. ತೆಳ್ಳಗಿನ ಬಟ್ಟೆ ಧರಿಸಿ ಜನಿವಾರ ಕಾಣುವಂತೆ ಇದ್ದರೆ ಅದನ್ನು ನೋಡಿದಾತ `ಪಂಡಿತ್‌ಜೀ ಪ್ರಣಾಮ್~ ಎನ್ನುವ ಸ್ಥಿತಿ ಇತ್ತು. ಈಗ ಸೂಟ್ ಧರಿಸಿ ಕಾಣಿಸಿಕೊಂಡರೆ ಅದೇ ಗೌರವದಲ್ಲಿ ಗುರುತಿಸುವ ಸ್ಥಿತಿ ಇದೆ.

ಶಿಕ್ಷಣವೇ ವಾಣಿಜ್ಯೀಕರಣಗೊಂಡು ಇಂಗ್ಲಿಷ್ ಶಿಕ್ಷಣವೆಂಬುದು ಸಾಮಾಜಿಕ ವಿಭಜನೆಯ ಮೂಲವಾಗುತ್ತಿರುವ ಹೊತ್ತಿನಲ್ಲಿ ಇಂಗ್ಲಿಷ್ ಅನ್ನು ವಿಮೋಚನೆಯ ಮಾರ್ಗವನ್ನಾಗಿ ನೀವು ಪ್ರತಿಪಾದಿಸುತ್ತಿದ್ದೀರಿ. ಇದೂ ಒಂದು ರೀತಿಯಲ್ಲಿ ಸರಳೀಕೃತ ಗ್ರಹಿಕೆಯಲ್ಲವೇ...?
ಇಂಗ್ಲಿಷ್ ಎಂಬುದು ಕೇವಲ ಭಾಷೆಯಲ್ಲ. ಅದೊಂದು ಸಂಸ್ಕೃತಿ. ಇಂಗ್ಲಿಷ್ ಕಲಿಯುವುದೆಂದರೆ ಹೊಸತೊಂದು ಸಂಸ್ಕೃತಿಯೊಂದನ್ನು ಮೈಗೂಡಿಸಿಕೊಳ್ಳುವ ಕ್ರಿಯೆ. ದಲಿತರ ಈಗಿನ ಸಂಸ್ಕೃತಿ ಎಂಬುದು ಊಳಿಗಮಾನ್ಯ ವ್ಯವಸ್ಥೆ ಅವರ ಮೇಲೆ ಹೇರಿರುವ ಒಂದು ವ್ಯವಸ್ಥೆ. ಅದನ್ನು ದಾಟಿ ಹೊರಬರುವುದಕ್ಕೆ ಇಂಗ್ಲಿಷ್ ಒಂದು ಮಾರ್ಗ.

ಮಾತೃಭಾಷೆಯಲ್ಲಿ ಕಲಿಕೆ ಜ್ಞಾನವೃದ್ಧಿಗೆ ಸಹಕಾರಿ ಎಂದು ಭಾಷಾತಜ್ಞರು, ಶಿಕ್ಷಣ ತಜ್ಞರು ಹೇಳುತ್ತಾರಲ್ಲವೇ?
ದಲಿತರ ಮಾತೃಭಾಷೆಗಳಾಗಿರುವುದು ಉಪಭಾಷೆಗಳೇ ಹೊರತು ಈ ತಥಾಕಥಿತ ತಜ್ಞರು ಹೇಳುವ ಭಾಷೆಗಳಲ್ಲ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಇಲ್ಲಿ ಶಿಕ್ಷಣ ಮಾಧ್ಯಮವಾಗಿ ಬಳಕೆಯಾಗುವ ಕನ್ನಡದ ಸ್ವರೂಪದಲ್ಲಿ ದಲಿತರ ಭಾಷೆಯಿಲ್ಲ. ಅವರ ಮಾತೃಭಾಷೆಯಾಗಿರುವುದು ಕನ್ನಡದ ಒಂದು ಉಪಭಾಷೆ. ಆ ದೃಷ್ಟಿಯಲ್ಲಿ ನೋಡಿದರೆ ಅವರಿಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುತ್ತಿಲ್ಲ. ಯಾವುದೇ ಸಂದರ್ಭದಲ್ಲೂ ತಮ್ಮದಲ್ಲದ ಭಾಷೆಯಲ್ಲೇ ಶಿಕ್ಷಣ ಪಡೆಯಬೇಕಾಗಿರುವುದರಿಂದ ಇಂಗ್ಲಿಷ್‌ನಲ್ಲಿ ಪಡೆಯುವುದೇ ಸೂಕ್ತವಲ್ಲವೇ? ಇನ್ನು ಮಾತೃ ಭಾಷೆಯೇ ಬೇಕೆಂದು ವಾದಿಸುವ ಮೇಲ್ವರ್ಗದ ಬುದ್ಧಿಜೀವಿಗಳು ತಮ್ಮ ಮಕ್ಕಳಿಗೆ ಕನ್ನಡದಲ್ಲಿಯೇ ಕಲಿಸಲಿ. ಕನ್ನಡವನ್ನಷ್ಟೇ ಕಲಿಯುವವರಿಗೂ ಕೆಲಸಗಳಿವೆ. ಕಚೇರಿಗಳಲ್ಲಿ ಜವಾನರ ಕೆಲಸ, ಸೆಕ್ಯುರಿಟಿ ಗಾರ್ಡ್ ಕೆಲಸ ಇಂಥವುಗಳಿಗೂ ಜನ ಬೇಕು ತಾನೇ. ಅದನ್ನು ಅವರು ಮಾಡಲಿ. ದಲಿತರು ಇಂಗ್ಲಿಷ್ ಕಲಿತು ಅವರನ್ನು ಕೆಲಸಕ್ಕಿಟ್ಟುಕೊಳ್ಳಲಿ.

ಬಂಡವಾಳದ ಮಾತು ಅಮಾನವೀಯ

ಜಾತಿ, ವರ್ಗ, ಜಾಗತೀಕರಣ ಮತ್ತು ರಾಜಕಾರಣದ ಕುರಿತಂತೆ ಬರೆಯುತ್ತಿರುವ ಸಮಕಾಲೀನ ಚಿಂತಕರ ಸಾಲಿನಲ್ಲಿ ಡಾ. ಆನಂದ್ ತೇಲ್‌ತುಂಬ್ಡೆ ಅವರದ್ದು ಪ್ರಮುಖ ಹೆಸರು. ಮಹಾರಾಷ್ಟ್ರದ ವಿದರ್ಭ ಪ್ರದೇಶದ ಭೂರಹಿತ ದಲಿತ ಕುಟುಂಬದಲ್ಲಿ ಹುಟ್ಟಿದ ಆನಂದ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ವ್ಯವಹಾರಾಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದವರು.

ಪೆಟ್ರೋನೆಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದ ಆನಂದ್ ಅವರ ಚಿಂತನೆ ಕೇವಲ ಬರೆಹಗಳಿಗಷ್ಟೇ ಸೀಮಿತವಾಗಿಲ್ಲ. ಹಲವು ನಾಗರಿಕ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಅವರಿಗೆ ಜಾತಿಯ ಆಧುನಿಕ ಸ್ವರೂಪವನ್ನು ಜಗತ್ತಿಗೆ ಅನಾವರಣಗೊಳಿಸಿ ತೋರಿಸಿದ ಹೆಗ್ಗಳಿಕೆಯೂ ಇದೆ. ಹಲವು ಜಾಗತಿಕ ಮನ್ನಣೆಯುಳ್ಳ ವಿದ್ವತ್ಪತ್ರಿಕೆಗಳಿಗೆ ನಿಯತವಾಗಿ ಬರೆಯುವ ಆನಂದ್ ತೇಲ್‌ತುಂಬ್ಡೆ `ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ~ಗೆ ಬರೆಯುತ್ತಿದ್ದ `ಮಾರ್ಜಿನ್ ಸ್ಪೀಕ್~ ಅಂಕಣ ವಿದ್ವತ್‌ವಲಯದಲ್ಲಿ ಬಹಳ ಪರಿಚಿತ. ಹಲವು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕ, ವಿದ್ವತ್ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿರುವ ಆನಂದ್ `ದಲಿತ ಬಂಡವಾಳ ಶಾಹಿ~ ಪರಿಕಲ್ಪನೆಯನ್ನು ಪ್ರತಿಪಾದಿಸುವವರಿಗೆ `ದಲಿತ~ ಮತ್ತು `ಬಂಡವಾಳ~ ಎಂಬ ಪರಿಕಲ್ಪನೆಗಳ ಕುರಿತ ಪ್ರಾಥಮಿಕ ಜ್ಞಾನವೇ ಇಲ್ಲ ಎನ್ನುತ್ತಾರೆ.

ಈ ಕುರಿತಂತೆ `ಪ್ರಜಾವಾಣಿ~ಯ ಪ್ರಶ್ನಾವಳಿಗೆ ಇ-ಮೇಲ್ ಮೂಲಕ ಅವರು ನೀಡಿದ ಉತ್ತರಗಳು ಇಲ್ಲಿವೆ.

ನೀವೇ ಪ್ರತಿಪಾದಿಸಿರುವಂತೆ ಈಗ ಜಾತಿ ಎಂಬುದು ಅದರ ಆಚರಣಾತ್ಮಕ ಸ್ವರೂಪವನ್ನು ಕಳೆದುಕೊಂಡಿದೆ. ಇದರ ಜೊತೆಗೆ ಜಾಗತೀಕರಣ ಔದ್ಯಮಿಕ ಸ್ಪರ್ಧೆಗೆ ಸಮಾನ ಭೂಮಿಕೆಯನ್ನು ಸೃಷ್ಟಿಸಿರುವುದನ್ನು ನೋಡಿದರೆ `ದಲಿತ ಬಂಡವಾಳ~ ಪರಿಕಲ್ಪನೆ ದಲಿತರ ವಿಮೋಚನೆಗೆ ಉತ್ತಮ ಮಾರ್ಗ ಎನಿಸುವುದಿಲ್ಲವೇ?
ಜಾಗತೀಕರಣ ಎಂಬುದು ಬಂಡವಾಳಶಾಹಿ ವ್ಯವಸ್ಥೆಯ ನರಭಕ್ಷಕ ಹಂತ. `ಬಲವಂತವಾಗಿ ಕಸಿದುಕೊಂಡು ತನ್ನ ಸಂಗ್ರಹವನ್ನು ಹೆಚ್ಚಿಸಿಕೊಳ್ಳುವ ಪ್ರಕ್ರಿಯೆ~ ಎಂದು ನಾನಿದನ್ನು ಕರೆಯುತ್ತೇನೆ. ಈ ದೃಷ್ಟಿಯಲ್ಲಿ ನೋಡಿದರೆ ಜಾಗತೀಕರಣೋತ್ತರ ಬಂಡವಾಳಶಾಹಿ ವ್ಯವಸ್ಥೆ ಏನೆಂದು ತಿಳಿಯುತ್ತದೆ. ಹಾಗೆಯೇ ಜಾತಿ ಆಚರಣಾತ್ಮಕವಾಗಿಲ್ಲ ಎಂದರೆ ಜಾತಿ ವ್ಯವಸ್ಥೆಯ ಕೆಲವು ಗುಣ-ಲಕ್ಷಣಗಳು ಹಿಂದಿನಂತೆ ಇಲ್ಲ ಎಂದರ್ಥವೇ ಹೊರತು ಅದು ತನ್ನ ಊಳಿಗಮಾನ್ಯ ಗುಣವನ್ನು ಬಿಟ್ಟುಕೊಟ್ಟಿದೆ ಎಂದಲ್ಲ. ಭಾರತದ ಸಂದರ್ಭದಲ್ಲಂತೂ `ಬಂಡವಾಳಶಾಹಿ~, `ಊಳಿಗಮಾನ್ಯ ವ್ಯವಸ್ಥೆ~ಯಂಥ ಪಾರಿಭಾಷಿಕಗಳು ವಾಸ್ತವವನ್ನು ವಿವರಿಸುವುದಿಲ್ಲ.

ಇವರೆಡರ ಸಂಕರದಿಂದ ಉಂಟಾಗಿರುವ ಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಒಂದೊಂದು ಸಂದರ್ಭದಲ್ಲಿ ಒಂದೊಂದರ ಪಾಲು ಹೆಚ್ಚಿರುವ ಸ್ಥಿತಿ ಇಲ್ಲಿದೆ. ಹಾಗೆ ಮಾಡುವುದೂ ಕೂಡಾ ನಿಮ್ಮ ಪ್ರಶ್ನೆಯ ಮಟ್ಟಿಗೆ ಪ್ರಸ್ತುತವಾಗುವುದಿಲ್ಲ.

ಅಂದರೆ ಜಾಗತೀಕರಣ ಒಂದು ಸಮಾನ ಅವಕಾಶಗಳ ಭೂಮಿಕೆ ಸೃಷ್ಟಿಸಿಲ್ಲ ಎನ್ನುತ್ತೀರಾ?
ಎಲ್ಲರಿಗೂ ಅವಕಾಶಗಳಿವೆ ಎಂದು ಯೋಚಿಸುವುದಾದರೆ ಈ ಬಗೆಯ ಅವಕಾಶಗಳು ಯಾವತ್ತೂ ಇತ್ತು. ಅದು ಜಾಗತೀಕರಣದ ಫಲಿತಾಂಶ ಮಾತ್ರ ಅಲ್ಲ. ನಾವು ಈ ಅವಕಾಶಗಳನ್ನು ಕಂಡುಕೊಳ್ಳಲು ಹೊರಟಾಗಲೆಲ್ಲಾ ಅದು ನಮಗೆ ಕಾಣಿಸಿದೆ. ಇಡೀ ದಲಿತ ಚಳವಳಿಗೆ ಹೀಗೆ ದೊರೆತ ಅವಕಾಶಗಳನ್ನು ಬಳಸಿಕೊಂಡಿದ್ದರ ಪರಿಣಾಮ.

ಆದರೆ `ದಲಿತ ಬಂಡವಾಳ~ ಎಂದರೆ ಶತ್ರುವಿನ ಐಡಿಯಾಲಜಿಯನ್ನೇ ನಿಮ್ಮ ವಿಮೋಚನೆಯ ದಾರಿಯೆಂದು ಭಾವಿಸಿ ಅದನ್ನು ಆಲಿಂಗಿಸಿಕೊಳ್ಳಹೊರಡುವುದು. ತಮ್ಮನ್ನು ಶೋಷಿಸಲು ಹುಟ್ಟಿಕೊಂಡಿರುವ ವ್ಯವಸ್ಥೆಯ ವಿರುದ್ಧ ಹೋರಾಡುವುದರ ಬದಲಿಗೆ ಅದು ಅವಕಾಶಗಳನ್ನು ಸೃಷ್ಟಿಸಿದೆ ಎಂದು ಭ್ರಮಿಸಿ ಅದನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸೋಲಿಸುತ್ತೇವೆ ಎನ್ನುವುದು ಜನರನ್ನು ಮೂರ್ಖರನ್ನಾಗಿಸುವ ಕ್ರಿಯೆ.

`ದಲಿತ ಬಂಡವಾಳ~ ಪರಿಕಲ್ಪನೆಯನ್ನು ವಿಮೋಚನೆಯ ಮಾರ್ಗವಾಗಿ ಅವರು ಸೂಚಿಸುತ್ತಿರುವುದು ಯಾರಿಗೆ ಎಂದು ಅರೆಕ್ಷಣ ಯೋಚಿಸಿ. ಶೇಕಡಾ 90ರಷ್ಟು ದಲಿತರಿಗೆ ಈ `ಅವಕಾಶಗಳು~ ಕೇವಲ ಕನ್ನಡಿಯೊಳಗಿನ ಗಂಟು. ಅವರಿಗೆ ನಿತ್ಯದ ಬದುಕಿಗೆ ಬೇಕಾಗಿರುವುದೇ ಇಲ್ಲ. ಅವರನ್ನು ನೀವು `ಬಂಡವಾಳಶಾಹಿಗಳಾಗಿ~ ಎನ್ನುವುದು ಕ್ರೌರ್ಯವಲ್ಲದೆ ಮತ್ತೇನು?

ಅಂದರೆ ದಲಿತರು ಅವಕಾಶಗಳನ್ನು ಬಳಸಿಕೊಳ್ಳಲು ಸಮರ್ಥರಲ್ಲ ಎಂದೇ?
ಒಬ್ಬ ಬಂಡವಾಳಿಗನಾಗಬೇಕು ಎಂದಾದರೆ ಅವನಲ್ಲಿ ಬಂಡವಾಳವಿರಬೇಕು. ಅದು ದಲಿತರಲ್ಲಿ ಇದೆಯೇ? ರಸ್ತೆ ಬದಿಯ ಚಮ್ಮಾರನನ್ನು ನೀವು ಬಂಡವಾಳಿಗನೆಂದು ಕರೆಯುವುದಾದರೆ ಸರಿ. ಹಾಗಾದರೆ ದಲಿತರಲ್ಲಿ ಈಗಾಗಲೇ ಶೇಕಡಾ 26ರಷ್ಟು ಬಂಡವಾಳಿಗರಿದ್ದಾರೆ. ಅವರ `ಬಂಡವಾಳಶಾಹಿತ್ವ~ ಅವರ ನಿತ್ಯದ ಖರ್ಚಿಗೆ ಬೇಕಾಗಿರುವುದನ್ನೂ ಹುಟ್ಟಿಸುತ್ತಿಲ್ಲ. ಇನ್ನು ಜಾಗತೀಕರಣ ಸೃಷ್ಟಿಸಿರುವ ಸ್ಪರ್ಧಾತ್ಮಕ ವಾತಾವರಣವನ್ನು ಬಳಸಿಕೊಂಡು ವ್ಯವಸ್ಥೆಯನ್ನು ಸೋಲಿಸಬೇಕು ಎಂದಾದರೆ ಅದಕ್ಕೆ ದಲಿತರಲ್ಲಿ ಇರುವ ಸಾಮರ್ಥ್ಯ ಯಾವುದು. ಅವರ ಹಸಿವು? ಅವರ ಅಪೂರ್ಣ ಶಿಕ್ಷಣ ಅಥವಾ ಅನಕ್ಷರತೆ? ಅಥವಾ ಅವರ ಅಪೌಷ್ಟಿಕತೆ? ಇವುಗಳಲ್ಲಿ ಯಾವುದನ್ನು ದಲಿತರ ಸಾಮರ್ಥ್ಯ ಎಂದು ಕರೆಯುವುದು. ದಲಿತರ ಬಳಿ ಬಂಡವಾಳದ ಭಾಷೆಯಲ್ಲಿ ಮಾತನಾಡುವುದೇ ಅಮಾನವೀಯ.

`ದಲಿತ ಬಂಡವಾಳ~ ಎಂಬುದೊಂದು ಅಪಕಲ್ಪನೆಯೇ?
ವೈಯಕ್ತಿಕವಾಗಿ ನನಗೆ ದಲಿತರನ್ನು ಬಂಡವಾಳಿಗರನ್ನಾಗಿ ನೋಡುವುದಕ್ಕೆ ಯಾವ ಸಮಸ್ಯೆಯೂ ಇಲ್ಲ. ಹಾಗೆ ನೋಡಿದರೆ ಹಲವರು ಬಹಳ ಹಿಂದಿನಿಂದಲೇ ಬಂಡವಾಳಿಗರಾಗಿದ್ದರು. ಕೆಲವು ದಲಿತರು ವಸಾಹತುಶಾಹಿಯ ಕಾಲಘಟ್ಟದಲ್ಲೂ ವಿವರಣಾತೀತವಾಗಿ ಬಹಳ ಶ್ರೀಮಂತರಾಗಿದ್ದರು. ಆದರೆ ಅದು ದಲಿತರ ಸಾಮುದಾಯಿಕ ಸ್ಥಿತಿಯ ಮೇಲೆ ಯಾವ ಧನಾತ್ಮಕ ಪರಿಣಾಮವನ್ನೂ ಬೀರಿರಲಿಲ್ಲ.

ಇನ್ನು ದಲಿತರ ಸಾಮರ್ಥ್ಯದ ಪ್ರಶ್ನೆಯನ್ನು ಎತ್ತುವುದಾದರೆ ಅದನ್ನೊಂದು ಸವಕಲು ವಾದ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ವಸಾಹತುಶಾಹಿ ಮತ್ತು ಅದಕ್ಕೂ ಹಿಂದಿನ ಕಾಲಘಟ್ಟದಲ್ಲೂ ಯಶಸ್ವೀ ದಲಿತ ಉದ್ಯಮಿಗಳಿದ್ದರು.

ಹಲವರು ಹೊಸ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದರೆ ಇನ್ನು ಹಲವರು ತಮ್ಮ ಕುಲಕಸುಬುಗಳನ್ನೇ ಆಧುನೀಕರಿಸಿ ಉದ್ಯಮಿಗಳಾಗಿದ್ದ ಉದಾಹರಣೆಗಳಿವೆ. ಈ ಬಗೆಯಲ್ಲಿ ವ್ಯವಸ್ಥೆಯೊಳಗಿನ ಅವಕಾಶಗಳನ್ನು ಬಳಸಿಕೊಂಡಿದ್ದರ ಪರಿಣಾಮವಾಗಿಯೇ `ದಲಿತ ಚಳವಳಿ~ಯೂ ಜನ್ಮ ತಳೆಯಿತು. ಹಾಗೆಂದು ಇಂಥ ಯಶಸ್ಸುಗಳಷ್ಟೇ ಒಂದು ಸಮುದಾಯದ ಅಭೀಪ್ಸೆ ಎಂಬಂತೆ ಪ್ರತಿಬಿಂಬಿಸುವುದು ಸ್ವಲ್ಪ ಅತಿ. ಅಥವಾ ಒಂದು ಸಂಚಿನ ಭಾಗ ಎಂದು ಹೇಳಬೇಕಾಗುತ್ತದೆ.

ಜಾಗತೀಕರಣವೂ ದಲಿತರನ್ನು ಉದ್ಧರಿಸಿದೆ ಎಂದು ಹೇಳುವ ಅಪೇಕ್ಷೆ ಪ್ರಭುತ್ವಕ್ಕಿದೆ. ಹಾಗೆಯೇ ಪ್ರಭುತ್ವದಿಂದ ಲಾಭ ಪಡೆಯುವ ಉದ್ದೇಶದಿಂದ ಪ್ರಭುತ್ವದ ನೀತಿಗಳ ಗುಣಗಾನ ಮಾಡುವ ದಲಿತ ಬುದ್ಧಿಜೀವಿಗಳೂ ಇದ್ದಾರೆ. ಒಬ್ಬ ದಲಿತ ತನ್ನ ವೈಯಕ್ತಿಕ ಸಾಮರ್ಥ್ಯದಿಂದ ದೊಡ್ಡ ಅಧಿಕಾರಿಯಾಗಬಹುದು. ಹಾಗೆಯೇ ಮತ್ತೊಬ್ಬ ಅಥವಾ ಮತ್ತೇನಕರು ದೊಡ್ಡ ಬಂಡವಾಳ ಹೂಡುವ ಉದ್ಯಮಿಗಳೂ ಆಗಬಹುದು. ಆದರೆ ದಲಿತ ವಿಮೋಚನೆಯ ಯೋಜನೆಯಲ್ಲಿ ಇವರಾರಿಗೂ ಮಹತ್ವದ ಪಾತ್ರವಿರುವುದಿಲ್ಲ.

ಅದು ಸಾಧ್ಯವಾಗುವುದು ಸಾಮಾಜಿಕ ಬದಲಾವಣೆಯಿಂದ ಮಾತ್ರ. ಈಗ `ದಲಿತ ಬಂಡವಾಳ~ವನ್ನು  ದಲಿತ ವಿಮೋಚನೆಯ ಪರಿಕಲ್ಪನೆಯೆಂಬಂತೆ ಪ್ರಚಾರ ಮಾಡುತ್ತಿರುವ ಯಾವೊಬ್ಬರಿಗೂ `ದಲಿತ~ ಮತ್ತು `ಬಂಡವಾಳ~ ಎಂಬ ಪರಿಕಲ್ಪನೆಗಳ ಕುರಿತಂತೆ ಪ್ರಾಥಮಿಕ ಜ್ಞಾನವೂ ಇಲ್ಲ ಎಂಬುದಂತೂ ಸತ್ಯ. ನಾನು ಬೃಹತ್ ಬಂಡವಾಳಶಾಹಿ ಸಂಸ್ಥೆಯೊಂದರ ಮುಖ್ಯಸ್ಥನಾಗಿದ್ದವನು. ಇವರೆಲ್ಲರಿಗಿಂತ ಚೆನ್ನಾಗಿ ನಾನು ಬಂಡವಾಳ ಎಂದರೆ ಏನು ಮತ್ತು ಅದರ ಪರಿಣಾಮವೇನು ಎಂಬುದರ ಕುರಿತಂತೆ ಅಧಿಕಾರಯುತವಾಗಿ ಹೇಳಬಲ್ಲೆ.

ಇಂಗ್ಲಿಷ್ ಭಾಷೆಯ ಮೇಲೆ ಪ್ರಭುತ್ವ ಸಾಧಿಸುವುದು ದಲಿತ ವಿಮೋಚನೆಯ ಹಾದಿಯಲ್ಲಿ ಒಂದು ಪ್ರಮುಖ ಹೆಜ್ಜೆ ಎನ್ನುವ ವಾದದ ಕುರಿತಂತೆ ತಮ್ಮ ಅಭಿಪ್ರಾಯವೇನು?
ವರ್ತಮಾನದ ಪರಿಸ್ಥಿತಿಯಲ್ಲಿ ಇಂಗ್ಲಿಷನ್ನು ವಿರೋಧಿಸುವುದಕ್ಕೆ ನನಗೆ ಯಾವ ಕಾರಣಗಳೂ ಇಲ್ಲ. ಅದೊಂದು ಶ್ರೀಮಂತ ಭಾಷೆ. ಒಂದು ರೀತಿಯಲ್ಲಿ ವಿಶ್ವಭಾಷೆಯೂ ಹೌದು. ಹಾಗೆಯೇ ಇದು ವಿದ್ವತ್ತಿನ ಭಾಷೆಯೆಂಬುದೂ ನಿಜವೇ.

ದಲಿತರೂ ಇದನ್ನು ಕಲಿಯುವುದು ಪ್ರಭುತ್ವ ಸಾಧಿಸುವುದು ಒಳ್ಳೆಯದೇ. ಆದರೆ ಮತ್ತೆ ಇದು ಒಂದು ಸಕಾರಾತ್ಮಕ ಚಿಂತನೆ ಮಾತ್ರವಾಗಿ ಉಳಿಯುತ್ತದೆ. ಇಂಗ್ಲಿಷ್ ಕಲಿಯುವುದು ತಮಗೆ ಅವಕಾಶಗಳ ಬಾಗಿಲನ್ನು ತೆರೆಯುತ್ತದೆ ಎಂಬುದು ದಲಿತರಿಗೆ ಗೊತ್ತಿಲ್ಲವೇ? ವೃತ್ತಿ ಶಿಕ್ಷಣ  ಪಡೆದರೆ ತಮಗೆ ಒಳ್ಳೆಯ ಉದ್ಯೋಗ ದೊರೆಯುತ್ತದೆ ಎಂಬುದು ದಲಿತರಿಗೆ ಗೊತ್ತಿಲ್ಲವೇ? ಇವೆಲ್ಲವೂ ಅವರಿಗೆ ಗೊತ್ತು. ಆದರೆ ಅವರ ಬದುಕಿನ ವಾಸ್ತವಗಳು ಇಂಥ ಅರಿವಿದ್ದರೂ ಅದನ್ನು ಸಾಧಿಸದಂತೆ ತಡೆಯುತ್ತಿವೆ. ಪರಿಣಾಮವಾಗಿ ಶೇಕಡಾ 70ರಷ್ಟು ದಲಿತರು ಪ್ರಾದೇಶಿಕ ಮಾಧ್ಯಮದಲ್ಲಿ ಮಾನವಿಕ ವಿಷಯಗಳನ್ನು ಕಲಿಯುವುದಕ್ಕೆ ಸೀಮಿತರಾಗಿಬಿಡುತ್ತಾರೆ. ಇಂದು ಜಾಗತೀಕರಣ ಜನರಿಂದ ಕಿತ್ತುಕೊಂಡಿರುವ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಎಲ್ಲೆಡೆಯೂ ದೊರೆತರಷ್ಟೇ ಈ ಸಮಸ್ಯೆಯ ಪರಿಹಾರ ಸಾಧ್ಯ.

ಇಂಗ್ಲಿಷ್ ಎಂದರೆ ಒಂದು ಸಂಸ್ಕೃತಿ. ಅದನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ದಲಿತರು ತಮ್ಮ ಮೇಲೆ ಹೇರಲಾಗಿರುವ ಊಳಿಗಮಾನ್ಯ ಸಂಸ್ಕೃತಿಯನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಇಂಗ್ಲಿಷ್ ದೇವಿಯ ಆರಾಧನೆ ಅಗತ್ಯ ಎಂಬ ವಾದವಿದೆಯಲ್ಲಾ?
ನಿಮ್ಮ ಶೈಕ್ಷಣಿಕ ನೆಲೆಗಟ್ಟು ಭದ್ರವಾಗಿದ್ದರೆ ಯಾವ ಭಾಷೆಯ ಮೇಲೂ ಯಾವ ಹಂತದಲ್ಲೂ ಪ್ರಭುತ್ವ ಸಾಧಿಸಬಹುದು. ಸಂಸ್ಕೃತಿ ಅದರ ಹಿಂದೆಯೇ ಬರುತ್ತದೆ. ಅದು ಬಿಟ್ಟು ಕುದುರೆಯ ಮುಂದೆ ಗಾಡಿಯನ್ನು ಕಟ್ಟುವ ಪ್ರಯತ್ನಗಳಿಂದ ಯಾವ ಪ್ರಯೋಜನವೂ ಇಲ್ಲ. ಇಂಗ್ಲಿಷ್ ದೇವಿಯ ಆರಾಧನೆ ದಲಿತ ವಿಮೋಚನೆಯ ಹಾದಿ ಎಂಬುದು ಮೂರ್ಖತನದ ಪರಮಾವಧಿ.

`ಬಹುಜನ ಸಮಾಜ~ ರಾಜಕಾರಣ ದಲಿತರ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಎಷ್ಟು ಪರಿಣಾಮಕಾರಿ?
`ಬಹುಜನ~ ಎಂಬುದು ಒಂದಷ್ಟು ಜಾತಿಗಳ ತತ್‌ಕ್ಷಣದ ಅಗತ್ಯಗಳ ಒಟ್ಟುಗೂಡುವಿಕೆಯೇ ಆದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಈ `ಬಹುಜನ~ ಕಲ್ಪನೆ ಸಮಾನ ಸಮಸ್ಯೆಗಳ ವರ್ಗವೊಂದರ ಒಟ್ಟುಗೂಡುವಿಕೆಯಾದರೆ ಕೇವಲ ದಲಿತರ ಸಮಸ್ಯೆಗಳನ್ನಷ್ಟೇ ಅಲ್ಲ ಎಲ್ಲರ ಸಮಸ್ಯೆಗಳನ್ನೂ ಪರಿಹರಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT