ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾಕ್ಕೆ ₹ 4 ಕೋಟಿ ವೆಚ್ಚ

ಸರಳ, ಸಾಂಪ್ರದಾಯಿಕ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ
Last Updated 2 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ಬರ ಹಾಗೂ ಸರಣಿ ರೈತರ ಆತ್ಮಹತ್ಯೆಗಳಿಂದ ಈ ಬಾರಿ ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ’ ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಸರ್ಕಾರ ನಿರ್ಧರಿಸಿದೆ. ಹೀಗಾಗಿ ₹ 4 ಕೋಟಿ ಅಂದಾಜು ವೆಚ್ಚದಲ್ಲಿ ದಸರಾ ಮಹೋತ್ಸವ ಪೂರ್ಣಗೊಳ್ಳಲಿದೆ.

ಇದು ರಸ್ತೆ ದುರಸ್ತಿ ಹಾಗೂ ಇತರ ಕಾಮಗಾರಿಗಳಿಂದ ಹೊರತಾಗಿದೆ. ಕಾಮಗಾರಿಗಳನ್ನು ಮಹಾನಗರ ಪಾಲಿಕೆಯು ನಿರ್ವಹಿಸಲಿದೆ. ದಸರಾ ಮಹೋತ್ಸವ ಉದ್ಘಾಟನೆ, ಜಂಬೂಸವಾರಿ ಮೆರವಣಿಗೆ, ಅಂದು ಸಂಜೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತು, ಕ್ರೀಡೆ, ರೈತ ದಸರಾ, ಅರಮನೆ ಮುಂದೆ ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನದಲ್ಲಿ ಲಲಿತಕಲೆ ಹಾಗೂ ಕರಕುಶಲ ಕಲೆ ಪ್ರದರ್ಶನ, ಪ್ರಚಾರ ಹಾಗೂ ಫಲಪುಷ್ಪ ಪ್ರದರ್ಶನ ಸಲುವಾಗಿ ₹ 4 ಕೋಟಿ ವೆಚ್ಚವೆಂದು ಅಂದಾಜಿಸಲಾಗಿದೆ.

ಕಳೆದ ಬಾರಿಯ ಯುವ ದಸರಾಕ್ಕೇ ₹  4 ಕೋಟಿ ವೆಚ್ಚವಾಗಿತ್ತು. ಆದರೆ, ಈ ಬಾರಿ ಯುವ ದಸರಾ, ಮಹಿಳಾ ದಸರಾ ನಡೆಯುವುದಿಲ್ಲ. ಜತೆಗೆ, ಮೈಸೂರು ಜಿಲ್ಲೆಯ ತಾಲ್ಲೂಕುಗಳಲ್ಲಿ ರೈತ ದಸರಾ ಹೆಸರಲ್ಲಿ ನಡೆಯುತ್ತಿದ್ದ ವಿವಿಧ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ. ಪಕ್ಕದ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಗೆ ವಿಸ್ತರಣೆಗೊಂಡಿದ್ದ ದಸರಾ ಚಟುವಟಿಕೆಗಳಿಗೂ ಈ ಬಾರಿ ಖೋತಾ ಬೀಳಲಿದೆ.

ಆದರೆ, ದಸರಾ ಮಹೋತ್ಸವದ ಆಕರ್ಷಣೆಯಾದ ಜಂಬೂಸವಾರಿಯು ಅರ್ಜುನ ನೇತೃತ್ವದಲ್ಲಿ ನಡೆಯಲಿದೆ.  ಈ ಸಂಬಂಧ ಮೊದಲ ತಂಡದ ಗಜಪಡೆಯು ಸೆ. 4ರಂದು ನಗರದ ಅರಣ್ಯ ಭವನಕ್ಕೆ ಬರಲಿದೆ. ಎರಡು ದಿನಗಳವರೆಗೆ ಅರಣ್ಯ ಭವನದಲ್ಲಿ ಆರೈಕೆಯಾದ ನಂತರ ಸೆ. 7ರಂದು ಅರಮನೆ ಪ್ರವೇಶಿಸಲಿವೆ. ಅಂದು ವಾದ್ಯಗಳ ಸಮೇತ ಸ್ವಾಗತಿಸಲಾಗುತ್ತದೆ. ನಂತರ ಅರಣ್ಯ ಇಲಾಖೆಗೆ ಅರಮನೆ ಮಂಡಳಿಯು ತಾಂಬೂಲ ನೀಡುವುದರ ಮೂಲಕ ಗಜಪಡೆಯನ್ನು ಬರಮಾಡಿಕೊಳ್ಳಲಾಗುವುದು.

ಆಮೇಲೆ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳಿಗೆ ಪಾತ್ರೆ, ಬಟ್ಟೆ ಹಾಗೂ ಹಾಸಿಗೆಯನ್ನು ಜಿಲ್ಲಾಡಳಿತ ವಿತರಿಸಲಿದೆ. ಈ ಸಂಬಂಧ ಕಾವಾಡಿಗಳು ಮತ್ತು ಮಾವುತರ ಕುಟುಂಬಗಳಿಗೆ ಅರಮನೆ ಆವರಣದಲ್ಲಿ ಶೆಡ್‌ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ.

‘12 ಆನೆಗಳು ಬರುತ್ತಿವೆ. ಅವುಗಳನ್ನು ನೋಡಿಕೊಳ್ಳುವ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳಿಗೆ  ಒಟ್ಟು 30–35 ಶೆಡ್‌ ನಿರ್ಮಿಸಲಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲಾ ಕರಿಕಾಳನ್‌ ತಿಳಿಸಿದರು.

‘17 ವರ್ಷಗಳಿಂದ ಅರ್ಜುನನ ಒಡನಾಟದಲ್ಲಿರುವ ದೊಡ್ಡಮಾಸ್ತಿ ನಿವೃತ್ತರಾಗಿದ್ದಾರೆ. ಆದರೆ, ಈ ಬಾರಿಯೂ ಅಂಬಾರಿ ಹೊರಲಿರುವ ಅರ್ಜುನನನ್ನು ನಿರ್ವಹಿಸಲು ಅವರು ವಿಶೇಷ ಮಾವುತರಾಗಿ ಬರಲಿದ್ದಾರೆ’ ಎಂದು ಕಮಲಾ ಹೇಳಿದರು.

10 ಉಪಸಮಿತಿಗಳು:  2014ರ ದಸರಾ ಮಹೋತ್ಸವಕ್ಕೆ ₹ 13 ಕೋಟಿ, 2013ರಲ್ಲಿ ₹ 9.5 ಕೋಟಿ ವೆಚ್ಚ ಮಾಡಲಾಗಿತ್ತು. ಈ ಬಾರಿ ₹ 4 ಕೋಟಿಗೆ ಸೀಮಿತಗೊಳಿಸಿರುವುದರಿಂದ ಸರಳ ದಸರಾಕ್ಕೆ ಮುನ್ನುಡಿಯಾಗಿ 10 ಉಪಸಮಿತಿಗಳು ಮಾತ್ರ ರಚನೆಗೊಳ್ಳಲಿವೆ. ಕಳೆದ ವರ್ಷ 20 ಉಪಸಮಿತಿಗಳಿದ್ದವು.

‘ಸರಳ ದಸರಾ ಎಂದರೆ ಪ್ರವಾಸಿಗರು ನಿರಾಸೆಗೊಳ್ಳಬೇಕಿಲ್ಲ. ಮೈಸೂರಿನ ಪಾರಂಪರಿಕ ಕಟ್ಟಡಗಳು, ವೃತ್ತಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗುತ್ತಿತ್ತು. ಈ ಬಾರಿ ಜಂಬೂಸವಾರಿ ಸಾಗುವ ರಾಜಮಾರ್ಗವನ್ನು ಮಾತ್ರ ಅಲಂಕರಿಸಲಾಗುತ್ತದೆ’ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್.
*
ಸರಳಾ ದಸರಾ ಇರುತ್ತದೆ ನಿಜ. ಆದರೆ, ಸಂಪ್ರದಾಯ ಉಳಿಸಿಕೊಂಡು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.  ದಸರಾ ಮಹೋತ್ಸವದ ಸೌಂದರ್ಯಕ್ಕೆ ಕುಂದುಂಟಾಗುವುದಿಲ್ಲ.
- ವಿ. ಶ್ರೀನಿವಾಸಪ್ರಸಾದ್,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT