ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾಗೆ ಕೋಚ್ ಕಾರ್ಖಾನೆ ಕೊಡುಗೆ

Last Updated 23 ಜುಲೈ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ಟೋಬರ್‌ ವೇಳೆಗೆ ಯಾದಗಿರಿಯಲ್ಲಿ ರೈಲ್ವೆ ಬೋಗಿ ಕಾರ್ಖಾನೆ ಉದ್ಘಾಟನೆಯಾಗಲಿದೆ’ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು.
ಯಶವಂತಪುರದಲ್ಲಿ ಶನಿವಾರ  ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಈ ಬಾರಿ ಮೈಸೂರಿನ ದಸರಾ ಸಡಗರವಾದರೆ, ಯಾದಗಿರಿಯಲ್ಲಿ ಕಾರ್ಖಾನೆ ಉದ್ಘಾಟಿಸಿ ಸಂಭ್ರಮಿಸೋಣ. ಹೊಸ ಕಾರ್ಖಾನೆ ಉದ್ಘಾಟನೆಯಿಂದ ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರೈಲ್ವೆ ಇಲಾಖೆಯಿಂದ ಪ್ರತಿವರ್ಷವೂ ಕರ್ನಾಟಕಕ್ಕೆ ಸಿಗುವ ಅನುದಾನ ಹೆಚ್ಚುತ್ತಿದೆ. 2012–13ರಲ್ಲಿ ₹683 ಕೋಟಿಗಳಷ್ಟಿದ್ದ ಅನುದಾನ, 2016–17ರಲ್ಲಿ ₹2,779 ಕೋಟಿಗೆ ತಲುಪಿದೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಲಿದೆ’ ಎಂದರು.

‘6 ರಿಂದ 8 ತಿಂಗಳಲ್ಲಿ ಗುಂತಕಲ್‍–ವಾಡಿ ನಡುವಣ ಮಾರ್ಗದ ವಿದ್ಯುದ್ದೀಕರಣ ಮುಗಿಯಲಿದೆ. ಪುಣೆ ಮಾರ್ಗದಲ್ಲೂ ಕಾಮಗಾರಿ ನಡೆಯುತ್ತಿದೆ.  ಕಲ್ಬುರ್ಗಿ–ವಾಡಿ ನಡುವಣ ಕೆಲಸವೂ ಸಾಗಿದೆ. ಇವು ಪೂರ್ಣಗೊಂಡರೆ, ಮುಂಬೈನಿಂದ ಬೆಂಗಳೂರು ವರೆಗಿನ ಮಾರ್ಗ ಸಂಪೂರ್ಣ  ವಿದ್ಯುದ್ದೀಕರಣಗೊಂಡಂತೆ ಆಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.

ಬೆಂಗಳೂರು–ಮೈಸೂರು ನಡುವೆ ಟಾಲ್ಗೊ ರೈಲು: ಬೆಂಗಳೂರು–ಮೈಸೂರು ನಡುವೆ ಮುಂದಿನ ದಿನಗಳಲ್ಲಿ ಟಾಲ್ಗೊ ರೈಲು ಓಡಲಿದೆ ಎಂದು ಸಚಿವ ಪ್ರಭು ಸುಳಿವು ನೀಡಿದರು.

‘ಟಿಲ್ಟಿಂಗ್ ರೈಲಿನ ಪ್ರಯೋಗಾರ್ಥ ಪರೀಕ್ಷೆಯನ್ನು ಇತ್ತೀಚೆಗೆ ಮಥುರಾ ಹಾಗೂ ಪಲ್ವಾಲ್ ನಡುವೆ ನಡೆಸಲಾಗಿದೆ. ಪ್ರತಿ ಗಂಟೆಗೆ 180 ಕಿ. ಮೀ ವೇಗ ಮಿತಿಯಲ್ಲಿ ಎರಡನೇ ಹಂತದ ಪರೀಕ್ಷೆಯನ್ನು ಅದು ಯಶಸ್ವಿಯಾಗಿ ಪೂರೈಸಿದೆ. ಮುಂದಿನ ಕೆಲ ದಿನಗಳಲ್ಲಿ ಮುಂಬೈ ಹಾಗೂ ದೆಹಲಿ ಮಾರ್ಗದಲ್ಲಿ ಈ ಇದರ ಪರೀಕ್ಷೆ ನಡೆಯಲಿದೆ. ಇದು ಯಶಸ್ವಿಯಾದರೆ, ಭವಿಷ್ಯದಲ್ಲಿ ಬೇರೆ ಕಡೆಗೂ ಅದರ ಸೇವೆಯನ್ನು ವಿಸ್ತರಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಸ್ಪೇನ್‌ ಕಂಪೆನಿ ಟಾಲ್ಗೊ ನಿರ್ಮಿಸಿರುವ ಈ ರೈಲು, ಈಗಿರುವ ಕಂಬಿಗಳ ಮೇಲೆಯೇ ಓಡಾಟ ನಡೆಸಲಿದ್ದು, ಇದು ಅಗ್ಗದ ತಂತ್ರಜ್ಞಾನವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮೊದಲು ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ, ‘ಬೆಂಗಳೂರು–ಮೈಸೂರು ನಡುವೆ ಟಾಲ್ಗೊ ರೈಲು, ಸಬ್‌ ಅರ್ಬನ್‌ ರೈಲು ಹಾಗೂ ಕಲ್ಬುರ್ಗಿಯಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ನಿರ್ಮಾಣ ಮಾಡಬೇಕು’ ಎಂದು ಗಮನ ಸೆಳೆದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ  ಮಾತನಾಡಿ, ‘ಮಂಗಳೂರಿಗೆ ನಿತ್ಯ ನೂರಾರು ಬಸ್‌ಗಳು ಓಡಾಡುತ್ತವೆ. ರಾಜ್ಯದ ಈ ಬಂದರು ನಗರಿಗೆ ಒಂದೇ ರೈಲಿದೆ. ಇನ್ನೊಂದು ರೈಲು ಬಜೆಟ್‌ನಲ್ಲಿ  ಘೋಷಣೆಯಾಗಿದೆ. ಅದು ಜಾರಿಯಾಗಬೇಕು’ ಎಂದು ಸಚಿವ ಪ್ರಭು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ ಪ್ರಭು, ‘ಉಪನಗರ ರೈಲು ಯೋಜನೆ ಕುರಿತು ಚರ್ಚಿಸಲು ದೆಹಲಿಗೆ ಬರುವಂತೆ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಆಹ್ವಾನ ನೀಡಿದ್ದೇನೆ’ ಎಂದರು.

‘ಸದಾನಂದ ಗೌಡ ಅವರು ಪ್ರಸ್ತಾಪಿಸಿದ ರೈಲಿನ ಕುರಿತು ಇನ್ನೆರಡು ವಾರಗಳಲ್ಲಿ ಸಭೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.

ಎಸ್ಕಲೇಟರ್‌ ಲೋಕಾರ್ಪಣೆ
ಬೆಂಗಳೂರು: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಮೂರನೇ ಪ್ರವೇಶ ದ್ವಾರ, ಎಸ್ಕಲೇಟರ್‌, ಕೆಲ ಮಾರ್ಗಗಳ ದ್ವಿಪಥೀಕರಣ, ವಿದ್ಯುದ್ದೀಕರಣ ಸೇರಿದಂತೆ ಹಲವು ಸೌಲಭ್ಯಗಳನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಶನಿವಾರ ಲೋಕಾರ್ಪಣೆ ಮಾಡಿದರು.

ನಿತ್ಯ 55ಸಾವಿರ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿರುವ ಯಶವಂತಪುರ ನಿಲ್ದಾಣದಲ್ಲಿ ಒಟ್ಟು ಆರು ಪ್ಲಾಟ್‌ ಫಾರ್ಮ್‌ಗಳಿದ್ದು, ಎರಡೇ ಪ್ರವೇಶ ದ್ವಾರಗಳಿದ್ದವು (ಒಂದು ಹಾಗೂ  6ನೇ ಪ್ಲಾಟ್‌ಫಾರ್ಮ್‌ನಲ್ಲಿ). ಜತೆಗೆ ಸ್ಕೈವಾಕ್‌ಗೆ ಹತ್ತಿ ಇಳಿಯಲು ಎಸ್ಕಲೇಟರ್‌ ಕೂಡ ಇರಲಿಲ್ಲ.

ಪ್ರವೇಶದ್ವಾರ, ಹಜಾರ, ಎಸ್ಕಲೇಟರ್‌:  ನೈರುತ್ಯ ರೈಲ್ವೆ ಹಾಗೂ ರೈಲ್ವೆ ವಿದ್ಯುದ್ದೀಕರಣ ಸಚಿವಾಲಯವು ಒಟ್ಟಾಗಿ ಈ ಸೌಲಭ್ಯಗಳನ್ನು  ₹3.65 ಕೋಟಿ ವೆಚ್ಚದಲ್ಲಿ ನಿರ್ಮಿಸಿವೆ.

ಸಂಚಾರ ದಟ್ಟಣೆ ತಗ್ಗಿಸುವ ಗುರಿಯೊಂದಿಗೆ ನಿರ್ಮಿಸಲಾದ ಹೊಸ ಪ್ರವೇಶ ದ್ವಾರ, ನಿಲ್ದಾಣದ 1ನೇ ಪ್ಲಾಟ್‌ ಫಾರ್ಮ್‌ನಲ್ಲಿದೆ. ಅದಕ್ಕೆ ಸಂಪರ್ಕಿಸಲು 10 ಮೀ ಅಗಲದ ಹೊಸ ರಸ್ತೆ, ಪಾದಚಾರಿ ಮಾರ್ಗ ಮಾಡಲಾಗಿದೆ. ಮೊಗಸಾಲೆಯು  60 ಮೀಟರ್‌ ಉದ್ದವಿದ್ದು, 10 ಮೀಟರ್ ಅಗಲವಾಗಿದೆ.ಪ್ರಯಾಣಿಕರ ಓಡಾಟ, ಲಗೇಜ್‌ ಸಾಗಣೆ ಮತ್ತು ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಹತ್ತುವ ಹಾಗೂ ಇಳಿಯುವ ಎರಡು ಎಸ್ಕಲೇಟರ್‌ಗಳು,  ಪ್ರತಿ ನಿಮಿಷಕ್ಕೆ 100 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.

ವಿದ್ಯುದೀಕರಣ, ದ್ವಿಪಥೀಕರಣ: ಯಶವಂತಪುರ–ಯಲಹಂಕ ನಡುವಣ  12.10 ಕಿ.ಮೀ ಮಾರ್ಗವನ್ನು ₹ 94.93 ಕೋಟಿ ವೆಚ್ಚದಲ್ಲಿ ನೈರುತ್ಯ ರೈಲ್ವೆ ಹಾಗೂ ರೈಲ್ವೆ ವಿದ್ಯುದೀಕರಣ ಸಚಿವಾಲಯವು ವಿದ್ಯುದೀಕರಣ ಹಾಗೂ ದ್ವಿಪಥೀಕರಣಗೊಳಿಸಿವೆ.

ಚನ್ನಸಂದ್ರ–ಯಲಹಂಕ ನಡುವಣ  12.90 ಕಿ.ಮೀ ಮಾರ್ಗವನ್ನು ₹107.67 ಕೋಟಿ ವೆಚ್ಚದಲ್ಲಿ ನೈರುತ್ಯ ರೈಲ್ವೆ ಹಾಗೂ ರೈಲ್ವೆ ವಿದ್ಯುದೀಕರಣ ಸಚಿವಾಲಯ ಒಟ್ಟಾಗಿ ವಿದ್ಯುದೀಕರಣ ಹಾಗೂ ದ್ವಿಪಥೀಕರಣ ಮಾಡಿವೆ.

ವಿದ್ಯುದೀಕರಣ: ಯಲಹಂಕ–ಧರ್ಮಾವರಂ ನಡುವಣ 211 ಕಿ.ಮೀ ಮಾರ್ಗವನ್ನು ರೈಲು ವಿಕಾಸ ನಿಗಮವು ₹160.9 ಕೋಟಿ ವೆಚ್ಚದಲ್ಲಿ ಏಕಪಥ ವಿದ್ಯುದೀಕರಣವನ್ನು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT