ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕುಸ್ತಿ; ಕಾಟೆ ಕೇಸರಿ, ಮಲ್ಲಪ್ಪ ಕಂಠೀರವ

Last Updated 2 ಅಕ್ಟೋಬರ್ 2014, 7:12 IST
ಅಕ್ಷರ ಗಾತ್ರ

ಮೈಸೂರು: ದಾವಣಗೆರೆಯ ಕಾರ್ತಿಕ್ ಕಾಟೆ ಬುಧವಾರ ರಾತ್ರಿ ಸತತ ಎರಡನೇ ಬಾರಿ ‘ದಸರಾ ಕೇಸರಿ’ ಪ್ರಶಸ್ತಿ ಗೆದ್ದಾಗ, ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ನೂರಾರು ಕುಸ್ತಿಪ್ರೇಮಿಗಳ ಝೇಂಕಾರ ಪ್ರತಿಧ್ವನಿಸಿತು.

ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಬುಧವಾರ ರಾತ್ರಿ ನಡೆದ ರಾಜ್ಯಮಟ್ಟದ 74 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಕಾರ್ತಿಕ್ ಕಾಟೆ ಅವರು ಬಸವರಾಜ್ ಮಮದಾಪುರ ಅವರನ್ನು ಸೋಲಿಸಿದರು. ರಾತ್ರಿ 8.30ಕ್ಕೆ ಆರಂಭವಾದ ಪಂದ್ಯವನ್ನು ವೀಕ್ಷಿಸಲು ಸೇರಿದ್ದ  ಪ್ರೇಕ್ಷಕರ ‘ನೆಚ್ಚಿನ ಮಲ್ಲ’ ಕಾಟೆ ನಿರಾಸೆಗೊಳಿಸಲಿಲ್ಲ. ಕಳೆದ ಬಾರಿಯೂ ರೋಚಕ ಕುಸ್ತಿಯಲ್ಲಿ ಬಾಗಲಕೋಟೆ ಜಿಲ್ಲೆಯ ಚಿಮ್ಮಡದ ಬಸವರಾಜ್ ಮಮದಾಪುರ ಅವರನ್ನು ಸೋಲಿಸಿದ್ದ ಕಾಟೆ, ಈ ಬಾರಿಯೂ ತಮ್ಮ ಪ್ರಾಬಲ್ಯ ಮೆರೆದರು. ಪಂದ್ಯದ ನಿಗದಿತ 30 ನಿಮಿಷಗಳ ಅವಧಿಯಲ್ಲಿ ಕಾಟೆ ಆಕ್ರಮಣವನ್ನು ಸಮರ್ಥವಾಗಿ ನಿಭಾಯಿಸಿದ ಮಮದಾಪುರ ಸೋಲೊಪ್ಪಲಿಲ್ಲ. ಇದರಿಂದ ಕುಸ್ತಿ ಸಮವಾಯಿತು.

ನಂತರ ಪಾಯಿಂಟ್ ಕುಸ್ತಿ ನಿಯಮದ (ಫಿಲಾ ನಿಯಮಾವಳಿ) ಪ್ರಕಾರ ಮೂರು ನಿಮಿಷಗಳ ಅವಧಿ­ಯನ್ನು ನೀಡಲಾಯಿತು. ಆದರೆ, ಎರಡೇ ನಿಮಿಷಗಳಲ್ಲಿ ಕಾರ್ತಿಕ್ ಕಾಟೆ ಮಿಂಚಿನ ವೇಗದಲ್ಲಿ ಬಸವರಾಜಗೆ ಮುಗಿಲು ತೋರಿಸಿದರು. ಪ್ರೇಕ್ಷರ ಗ್ಯಾಲರಿಯಲ್ಲಿ ವಿಜಯಘೋಷ ಮೊಳಗಿದರೆ, ಕಾರ್ತಿಕ್ ಕಾಟೆ ಅಖಾಡದ ತುಂಬ ಜಿಗಿದಾಡಿ, ಪಲ್ಟಿ ಹೊಡೆದು ಹರ್ಷಿಸಿದರು. ಅವರಿಗೆ 1 ಕೆಜಿ ತೂಕದ ಬೆಳ್ಳಿಗದೆ ಮತ್ತು ₨ 12 ಸಾವಿರ ನೀಡಲಾಯಿತು. ಮೂಲತಃ ರಾಣೇಬೆನ್ನೂರಿನವರಾದ ಕಾರ್ತಿಕ್ ಕಾಟೆ ಮೊದಲು ಕರಾಟೆಪಟುವಾ­ಗಿ­ದ್ದರು. ತಂದೆ ಗುತ್ತೆಪ್ಪ ಅವರ ಒತ್ತಾಸೆಯಂತೆ ಕಳೆದ ನಾಲ್ಕು ವರ್ಷಗಳಿಂದ ದಾವಣಗೆರೆಯ ಕ್ರೀಡಾ ನಿಲಯದಲ್ಲಿ ಕುಸ್ತಿ ತರಬೇತಿ ಪಡೆಯುತ್ತಿದ್ದಾರೆ.

ಮಲ್ಲಪ್ಪ ಪಾಟೀಲಗೆ ಕಂಠೀರವ: 74 ಕೆಜಿ ಮೇಲಿನವರ ವಿಭಾಗದಲ್ಲಿ ಗೆದ್ದ ಜಮಖಂಡಿಯ ಮಲ್ಲಪ್ಪ ಪಾಟೀಲ ಅವರು ದಸರಾ ಕಂಠೀರವ ಗೌರವಕ್ಕೆ ಪಾತ್ರರಾದರು. ಅವರು 1.25 ಕೆಜಿ ಬೆಳ್ಳಿಗದೆ ಮತ್ತು ₨ 15 ಸಾವಿರ ಪ್ರಶಸ್ತಿ ಪಡೆದುಕೊಂಡರು.

ಸಂಜೆ ನಡೆದ ಕುಸ್ತಿಯಲ್ಲಿ ಮಲ್ಲಪ್ಪ ಪಾಟೀಲ ಅವರು  ಸಿದ್ಧನಾಥ್ ಮಾನೆ ಅವರ ವಿರುದ್ಧ ಮೇಲುಗೈ ಸಾಧಿಸಿದರು. ಮೊದಲ 15 ನಿಮಿಷ ನಡೆದ ಕುಸ್ತಿಯಲ್ಲಿ ಮಲ್ಲಪ್ಪ ಪಾಟೀಲ ಅವರೇ ಪ್ರಾಬಲ್ಯ ಸಾಧಿಸಿದ್ದರು. ಆದರೆ, ಸಿದ್ಧಪ್ಪ ಮಾನೆ ಕಾಲಿನ ಸ್ನಾಯುಸೆಳೆತದಿಂದಾಗಿ ಪಂದ್ಯದಿಂದ ಹಿಂದೆ ಸರಿದರು. ಮಲ್ಲಪ್ಪ ಪಾಟೀಲ ವಿಜಯಿಯಾದರು.

ದಸರಾ ಕುಮಾರ ವಿಜೇತ ಸತೀಶ ಫಡತಾರೆಗೆ ಮುಕ್ಕಾಲು ಕೆಜಿ ಬೆಳ್ಳಿಗದೆ ಮತ್ತು ₨ 10 ಸಾವಿರ ಹಾಗೂ ದಸರಾ ಕಿಶೋರ ವಿಜೇತ ಎಂ. ನಾಗರಾಜುಗೆ ಅರ್ಧ ಕೆಜಿ ಬೆಳ್ಳಿಗದೆ ಮತ್ತು ₨ 7.5 ಸಾವಿರ ನಗದು ನೀಡಲಾಯಿತು.

ಲಕ್ಷ್ಮೀಗೆ ಪ್ರಶಸ್ತಿ
ಮೂಡುಬಿದರೆಯ ಆಳ್ವಾಸ್ ಕಾಲೇಜಿನ ಲಕ್ಷ್ಮೀ ರೇಡೆಕರ್ ಅವರು ಸಂಜೆ ನಡೆದ ಅಖಿಲ ಭಾರತ ಆಹ್ವಾನಿತ ಮಹಿಳೆಯರ ಕುಸ್ತಿ ಸ್ಪರ್ಧೆಯ 48 ಕೆಜಿ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಲಕ್ಷ್ಮೀ ರೇಡೆಕರ್ ಅವರು ಗದುಗಿನ ಬಶೀರಾ ವಿರುದ್ಧ ಜಯಿಸಿದರು.

69 ಕೆಜಿ ವಿಭಾಗದಲ್ಲಿ ಕೇರಳದ ಅಂಜುಮೋಳ್ ಜೋಸೆಫ್ ಬೆಳಗಾವಿಯ ಐಶ್ವರ್ಯಾ ದಳವಾಯಿ ವಿರುದ್ಧ ಗೆದ್ದರು. ಕೇರಳದ ಸ್ಟಿಯಾ ಮತ್ತು ಆಳ್ವಾಸ್‌ನ ನಾಗರತ್ನ ಸಿದ್ದಿ ತೃತೀಯ ಸ್ಥಾನ ಪಡೆದರು.

ವಿಳಂಬ
ಮಧ್ಯಾಹ್ನ 3 ಗಂಟೆಯಿಂದಲೇ ಆರಂಭವಾಗಬೇಕಿದ್ದ ಮಹಿಳೆಯರ ರಾಷ್ಟ್ರಮಟ್ಟದ ಕುಸ್ತಿ ಫೈನಲ್ ಮತ್ತು ದಸರಾ ಕಂಠೀರವ ಮತ್ತು ಕೇಸರಿ ಪ್ರಶಸ್ತಿಗಳ ಫೈನಲ್ ಪಂದ್ಯಗಳು ನಡೆದದ್ದು ಸಂಜೆ 7ರ ನಂತರ. ಮಹಿಳೆಯರ ಕುಸ್ತಿಗಳು ಮುಗಿದು ರಾತ್ರಿ 8 ಗಂಟೆಯ ನಂತರ ದಸರಾ ಕಂಠೀರವ ಕುಸ್ತಿ ಆರಂಭವಾದಾಗ ಬಹಳಷ್ಟು ಪ್ರೇಕ್ಷಕರು ಮೈದಾನದಿಂದ ಹೊರನಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT