ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಕುಸ್ತಿ ಚೋಟಾ ಪೈಲ್ವಾನರ ಸವಾಲು

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕ್ಯಾತಮಾರನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ ಪವನ್. ಅವರ ತಂದೆ ಮಾಡುವ ಗಾರೆ ಕೆಲಸದಿಂದಲೇ ಸಂಸಾರದ ರಥ ಸಾಗಬೇಕು. ಹಣ್ಣು, ಹಂಪಲು, ಬೆಣ್ಣೆ, ತುಪ್ಪ ಇತ್ಯಾದಿಗಳು ಕುಟುಂಬದ ಪಾಲಿಗೆ ‘ಐಷಾರಾಮಿ’ ಪದಗಳು. ಆದರೆ, ಪ್ರತಿನಿತ್ಯ ಗರಡಿಮನೆಯಲ್ಲಿ ಸಾಮು, ದಂಡೆ, ಬಸ್ಕಿ ಹೊಡೆಯುತ್ತ ಕುಸ್ತಿ ಅಂಕಣದಲ್ಲಿ ಮಿಂಚುವ ಕನಸು ಕಟ್ಟುತ್ತಾನೆ ಪವನ್.

ಕ್ಯಾತಮಾರನಹಳ್ಳಿಯ ಹತ್ತೂ ಜನಗಳ ಗರಡಿಮನೆಯಲ್ಲಿ ಈಗ ಪವನ್ ಜೊತೆಗೆ ಅಭ್ಯಾಸ ಮಾಡುತ್ತಿರುವ ಕಾರ್ತಿಕ್, ಸಚಿನ್, ಮಲ್ಲೇಶ್ ಸೇರಿದಂತೆ ಹತ್ತು ಮಕ್ಕಳ ಕಥೆಯೂ ಇದೆ. ಆದರೆ, ಇವರಿಗೆ ಕುಸ್ತಿಯೆಂದರೆ ಅಚ್ಚುಮೆಚ್ಚು. ಕೆಲವೇ ನಿಮಿಷಗಳ ಕಾಲ ಅಖಾಡದಲ್ಲಿದ್ದರೂ ಸರಿಯೇ ನೋಡುಗರಿಂದ ಚಪ್ಪಾಳೆ ಗಿಟ್ಟಿಸಬೇಕು ಎಂಬ ಹಂಬಲ ಇವರದ್ದು.

ದೇವರಾಜ ಮೊಹಲ್ಲಾದ ಆನೆ ಸರೂಟ್ ಬೀದಿಯಲ್ಲಿರುವ ಮಾಯಣ್ಣನವರ ಹತ್ತೂ ಜನಗಳ ಗರಡಿ. ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ   ಶಕ್ತಿ ರಮೇಶ್‌ಗೆ ಶಾಲೆಯಲ್ಲಿ ಈಗ ಅರ್ಧ ವಾರ್ಷಿಕ ಪರೀಕ್ಷೆಯ ಸಮಯ. ಆದರೂ, ಪ್ರತಿ ನಿತ್ಯ ಸಂಜೆ ಲಂಗೋಟಿ ಕಟ್ಟಿ, ಮಟ್ಟಿಗೆ ಧುಮುಕುವುದನ್ನು ಮಾತ್ರ ಬಿಟ್ಟಿಲ್ಲ. ಮೈಸೂರು ಕುಸ್ತಿ ಇತಿಹಾಸದ ಸುಪ್ರಸಿದ್ಧ ಪೈಲ್ವಾನ್ ರುದ್ರ ಮೂಗ ಅವರ ಮೊಮ್ಮಗ ಶಕ್ತಿ, ತನ್ನ ಗೆಳೆಯರೊಂದಿಗೆ ಕಳೆದ ಮೂರು ವರ್ಷಗಳಿಂದಲೂ ಕುಸ್ತಿ ಅಭ್ಯಾಸ ಮಾಡುತ್ತಿದ್ದಾನೆ. ಪ್ರತಿ ವರ್ಷ ದಸರಾ ಕುಸ್ತಿ ಸೇರಿದಂತೆ, ಶಾಲಾ ಟೂರ್ನಿಗಳಲ್ಲಿಯೂ ಮಿಂಚುತ್ತಿದ್ದಾನೆ. ಅವನೊಂದಿಗೆ ಚೇತನ್ (8ನೇ ತರಗತಿ), ರಕ್ಷಿತ್, ಸುಮಂತ್, ಪವನ್ ಕೂಡ ತರಬೇತಿ ಪಡೆಯುತ್ತಿದ್ದಾರೆ.

ಈ ಎರಡೂ ಉದಾಹರಣೆಗಳನ್ನು ನೋಡಿದಾಗ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಬೇರೆ. ಆದರೆ, ಕ್ಯಾತಮಾರನಹಳ್ಳಿಯ ಹುಡುಗರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿದ್ದಾರೆ. ಇನ್ನೊಂದು ಕಡೆ ಮಕ್ಕಳು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಇವರಿಬ್ಬರಿಗೂ ಬಾಲ್ಯಸಹಜವಾದ ಚಾಕೋಲೆಟ್, ಐಸ್‌ಕ್ರೀಮ್, ಟೆಲಿವಿಷನ್‌, ವಿಡಿಯೋ ಗೇಮ್ಸ್‌, ಕ್ರಿಕೆಟ್‌ ಆಕರ್ಷಣೆಗಳು ಇವೆ. ಆದರೂ ಇವರು ಮಣ್ಣಿನ ಅಖಾಡದಿಂದ ಹಿಂದೆ ಸರಿಯುತ್ತಿಲ್ಲ.

ಸುಮಾರು 8ರಿಂದ 16 ವರ್ಷದೊಳಗಿನವರ ಇಂತಹ ‘ಚೋಟಾ ಪೈಲ್ವಾನ’ರ ದಂಡು ದಸರಾ ಮಹೋತ್ಸವದ ಕುಸ್ತಿ ಟೂರ್ನಿಯಲ್ಲಿ ಮಿಂಚಲು ಸಿದ್ಧತೆ ನಡೆಸುತ್ತಿದೆ. ಮೈಸೂರು ನಗರ ಮತ್ತು ಗ್ರಾಮಾಂತರ ವಿಭಾಗಗಳಲ್ಲಿರುವ ಗರಡಿಮನೆಗಳಲ್ಲಿ ಈಗ ಈ ವಯೋಮಿತಿಯ ಸುಮಾರು 40ಕ್ಕೂ ಹೆಚ್ಚು ಮಕ್ಕಳು ತಮ್ಮ ಎಳೆಯ ದೇಹಗಳನ್ನು ದಂಡಿಸುತ್ತ ತೊಡೆ ತಟ್ಟುತ್ತಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಹಲವು ಗರಡಿಗಳಲ್ಲಿ ಎಳೆವಯಸ್ಸಿನ ಮಕ್ಕಳು ತಾಲೀಮು ನಡೆಸುತ್ತಿದ್ದಾರೆ.

ನಾಡಕುಸ್ತಿಯಲ್ಲಿ ಭವಿಷ್ಯವಿಲ್ಲದಿದ್ದರೂ, ಮನೆಯಲ್ಲಿ ಬಡತನವಿದ್ದರೂ ಮಕ್ಕಳು ಕುಸ್ತಿಗೆ ಬರಲು ಕಾರಣ ಅವರ ಕುಟುಂಬದ ಹಿನ್ನೆಲೆಯೇ ಎನ್ನಬಹುದು. ಬಹುತೇಕ ಮಂದಿಯ ತಂದೆ, ಅಜ್ಜ, ಮುತ್ತಾತಂದಿರು ಕುಸ್ತಿಪಟುಗಳು. ಆಧುನಿಕ ಯುಗದಲ್ಲಿ ಗರಡಿಮನೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ಆದರೂ ನಾಡಕುಸ್ತಿ ಕಲೆ ನಶಿಸಲು ಬಿಡುವುದಿಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ.

ಕ್ಯಾತಮಾರನಹಳ್ಳಿಯಲ್ಲಿ ಒಂದು ಕಾಲದಲ್ಲಿ ಮನೆಗೆ ಇಬ್ಬರು ಪೈಲ್ವಾನರು ಇದ್ದೇ ಇರುತ್ತಿದ್ದರು. ಕೃಷಿ, ಕೂಲಿಯನ್ನೇ ನೆಚ್ಚಿಕೊಂಡ ಹೆಚ್ಚು ಕುಟುಂಬಗಳು ಇಲ್ಲಿವೆ.

‘ಮಕ್ಕಳಿಗೆ ಆಸಕ್ತಿ ಇದೆ. ನಮ್ಮ ಗರಡಿಯಿಂದ ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಚಂದ್ರಶೇಖರ ಚಿನ್ನ ಅವರು ಮ್ಯಾಟ್‌ ಕುಸ್ತಿಯ ತರಬೇತಿಯನ್ನೂ ನೀಡುತ್ತಿದ್ದಾರೆ. ನಮ್ಮ ಕೈಯಲ್ಲಿ ಆದಷ್ಟು ಸಹಾಯ, ಮಾರ್ಗದರ್ಶನ ನೀಡುತ್ತಿದ್ದೇವೆ. ಗರಡಿಮನೆ, ಕುಸ್ತಿ ಕಲೆ ಉಳಿಯಬೇಕು. ಆದ್ದರಿಂದ ಊರಿನ ಹಿರಿಯರ ಸಹಾಯದಿಂದ ನಿತ್ಯವೂ ತರಬೇತಿ ನೀಡುತ್ತಿದ್ದೇವೆ. ಮೈಸೂರು ದಸರಾದಲ್ಲಿ ನಮ್ಮ ಹುಡುಗರೂ ಮಿಂಚಬೇಕು. ಪ್ರಶಸ್ತಿ ಗೆದ್ದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಬೇಕು. ಮೈಸೂರಿಗೆ ಕೀರ್ತಿ ತರಬೇಕು ಎಂಬುದೇ ನಮ್ಮ ಗುರಿ. ಮೊನ್ನೆ ಜೋಡಿ ಕಟ್ಟುವಾಗ ನಮ್ಮ ಮಕ್ಕಳಿಗೂ ಸಮಬಲದ ಜೋಡಿ ಸಿಕ್ಕಿವೆ’ ಎಂದು ಚೋಟಾ ಪೈಲ್ವಾನರಿಗೆ ತರಬೇತಿ ನೀಡುವ ಪೈಲ್ವಾನ್ ಬಸವರಾಜ್ ಹೇಳುತ್ತಾರೆ.

ತಮಗೆ ಇರುವ ಇತಿಮಿತಿಗಳಲ್ಲಿಯೇ ಮಕ್ಕಳು ಕುಸ್ತಿ ಅಭ್ಯಾಸಕ್ಕೆ ಬರುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ನೀಡುತ್ತಿರುವ ಬಿಸಿಯೂಟದಿಂದಲೂ ಅವರಿಗೆ ಸ್ವಲ್ಪಮಟ್ಟಿನ ಸಹಾಯವಾಗಿದೆ. ಆದರೆ, ವಿಶೇಷವಾಗಿ ಅವರನ್ನು ತಯಾರು ಮಾಡಲು ಬೇಕಾದ ಸೌಲಭ್ಯಗಳ ಕೊರತೆ ಇದೆ. ಇದರಿಂದಾಗಿ ಮೈಸೂರು ಮಣ್ಣಿನ ಕುಸ್ತಿಗೆ ಅಥವಾ ಜಿಲ್ಲಾಮಟ್ಟದ ಶಾಲಾ ಕುಸ್ತಿಗೆ ಮಾತ್ರ ಅವರು ಸೀಮಿತರಾಗುತ್ತಿದ್ದಾರೆ.

‘ನಮ್ಮ ವಂಶದಲ್ಲಿ ಎಲ್ಲರೂ ಕುಸ್ತಿಪಟುಗಳು. ಆ ಹವ್ಯಾಸ ಮುಂದುವರೆಸಬೇಕು ಎಂದುಕೊಂಡೇ ಮಗನನ್ನೂ ತರಬೇತುಗೊಳಿಸುತ್ತಿದ್ದೇನೆ. ನನ್ನ ತಂದೆ, ತಮ್ಮ ಮತ್ತು ನಾನು ಕುಸ್ತಿ ಮಾಡಿದ್ದೇವೆ. ಮುಂದೆ ಅದರಿಂದ ಏನು ಸಿಗುತ್ತದೋ ಇಲ್ಲವೋ. ಆದರೆ, ಗಟ್ಟಿಮುಟ್ಟಾದ ಶರೀರ, ನಮ್ಮ ಸಂಸ್ಕೃತಿಯ ಸಂಸ್ಕಾರ ಸಿಗುವುದು ಖಚಿತ. ಆದ್ದರಿಂದ ಮಗನಿಗೂ ಕಲಿಸುತ್ತಿದ್ದೇನೆ’ ಎಂದು ರುದ್ರ ಮೂಗ ಅವರ ಪುತ್ರ ರಮೇಶ್ ಹೇಳುತ್ತಾರೆ.

ಬಾಲಕಿಯರೂ ಮುಂದೆ
ಗಂಡು ಮಕ್ಕಳು ಇಲ್ಲದ ಮಾಜಿ ಪೈಲ್ವಾನರೂ ಸಂಪ್ರದಾಯ ಮೀರಿ ನಿಂತು ತಮ್ಮ ಪುತ್ರಿಯರನ್ನೇ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿಪಟುಗಳನ್ನಾಗಿ ರೂಪಿಸಿದ್ದಾರೆ. ಹಿನಕಲ್ ವೆಂಕಟೇಶ್ ಅವರ ಮಗಳು ರಾಣಿ ರಾಷ್ಟ್ರಮಟ್ಟದ ಕುಸ್ತಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಹರಿಯಾಣ, ದೆಹಲಿ,, ಚೆನ್ನೈಗಳಲ್ಲಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾಗವಹಿಸಿದ್ದರು. 2009ರಲ್ಲಿ 51 ಕೆಜಿ ವಿಭಾಗದಲ್ಲಿ ರಾಷ್ಟ್ರೀಯ ಟೂರ್ನಿಯಲ್ಲಿ ಬೆಳ್ಳಿ ಪದಕ ಸಾಧನೆ ಮಾಡಿದ್ದರು. ಇದೀಗ ಅವರು ಬೇರೆ ಬಾಲಕಿಯರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.
‘ಕುಸ್ತಿಯನ್ನು ಆತ್ಮರಕ್ಷಣೆಯ ಕಲೆಯನ್ನಾಗಿಯೂ ಕಲಿಯಬಹುದು. ಇದರಿಂದ ಆರೋಗ್ಯ, ದೇಹದಾರ್ಢ್ಯದ ಜೊತೆಗೆ ಉದ್ಯೋಗ, ವಿದ್ಯಾಭ್ಯಾಸದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ’ ಎಂದು ರಾಣಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT