ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಪತ್ಯವೆಂಬ ಕಾಮನಬಿಲ್ಲಿನ ಎರಡು ತುದಿಗಳು

ಪಿಸುಗುಡುವ ಚಿತ್ರಪಟ | ಸಮೀರ್‌ ರಾಯಚೂರು
Last Updated 13 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನನ್ನ ಪಾಲಿಗೆ ಛಾಯಾಗ್ರಹಣ ಎನ್ನುವುದು ಬೆಳವಣಿಗೆಯ ಅಭಿವ್ಯಕ್ತಿ. ಇಲ್ಲಿ ನನ್ನ ವ್ಯಕ್ತಿತ್ವ ಬೆಳೆಯುತ್ತಿದೆ. ಅದು ಬೆಳೆದಂತೆ ನನ್ನ ಛಾಯಾಗ್ರಹಣವೂ ಭಿನ್ನ ದಿಕ್ಕುಗಳನ್ನು ಪಡೆದುಕೊಳ್ಳುತ್ತಿದೆ. ಬದುಕನ್ನು ನಾನು ಅರ್ಥೈಸಿಕೊಳ್ಳುವ ದಾರಿ, ನನ್ನ ಫೋಟೊಗ್ರಫಿಯನ್ನೂ ಮಾಗಿಸುತ್ತಿದೆ. ಇದು ಪರಸ್ಪರ ಬೆಳೆಯುವ ಪ್ರಕ್ರಿಯೆ. ಫೋಟೊಗ್ರಫಿಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾ ಹೋದಂತೆಲ್ಲ ಅದನ್ನು ನೋಡುವ ದೃಷ್ಟಿಕೋನವೂ ಬದಲಾಗುತ್ತದೆ.

ಇಪ್ಪತ್ತು ಬೇರೆ ಬೇರೆ ವಸ್ತುಗಳ ಚಿತ್ರಗಳು ನಿಮ್ಮಲ್ಲಿ ಯಾವುದೇ ಸಂವೇದನೆ ಹುಟ್ಟಿಸದೇ ಹೋಗಬಹುದು. ಆದರೆ ಒಂದೇ ವಸ್ತುವಿನ ಇಪ್ಪತ್ತು ಭಿನ್ನ ಚಿತ್ರಗಳು ನಿಮಗೆ ಒಂದು ಕಥೆಯನ್ನು ಒರೆಯುತ್ತಿರುತ್ತದೆ. ಅದೊಂದು ಪ್ರಯಾಣ. ಅದಕ್ಕಾಗಿ ನೀವು ಆ ವಸ್ತು–ವಿಷಯದ ಜತೆ ತುಂಬ ಕಾಲ ಸಮಯ ಕಳೆಯಬೇಕಾಗುತ್ತದೆ. ಆ ವಿಷಯವನ್ನು ಅರ್ಥೈಸಿಕೊಂಡು ಅದರ ಮೂಲಕ ಏನನ್ನು ಅಭಿವ್ಯಕ್ತಿಪಡಿಸಬಹುದು ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. ನಿರ್ದಿಷ್ಟ ವಿಷಯದೊಟ್ಟಿಗೆ ಒಂದಿಷ್ಟು ಸಮಯ ಕಳೆದಾಗ– ಮತ್ತೆ ಮತ್ತೆ ಎಡೆತಾಕಿದಾಗ ಮಾತ್ರ ನಿಜವಾದ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಇಲ್ಲಿನ ಚಿತ್ರಗಳು ನನ್ನ ಸ್ನೇಹಿತನ ಮದುವೆಯ ಸಂದರ್ಭದಲ್ಲಿ ತೆಗೆದಿದ್ದು. ಆದರೆ ಮದುವೆಯ ಆಚರಣೆಯ ಯಾವ ಚಿತ್ರಗಳೂ ಈ ಸರಣಿಯಲ್ಲಿಲ್ಲ. ಸಾಮಾನ್ಯವಾಗಿ ಮದುವೆಯ ಛಾಯಾಚಿತ್ರಗಳನ್ನು ಆ ಮದುವೆ ಕಾರ್ಯಕ್ರಮಗಳು ನಡೆಯವ ಎರಡೋ ಮೂರೋ ದಿನಗಳ ಕಾಲ ಮಾಡಲಾಗುತ್ತದೆ. ಆದರೆ ಈ ಮೂರು ದಿನಗಳಲ್ಲಿ ನಾವು ಹಿಡಿಯುವ ಚಿತ್ರಗಳು ತುಂಬ ಮೇಲು ಮೇಲಿನ ಚಹರೆಗಳು ಎಂದು ನನಗನಿಸುತ್ತದೆ. ಆ ಆಚರಣೆಗಳು, ವಿಧಿ–ವಿಧಾನಗಳು, ಜನರು, ಗದ್ದಲಗಳ ನಡುವೆ ‘ಮದುವೆ’ ಎಂಬ ವ್ಯವಸ್ಥೆಯ ನೈಜ ಆತ್ಮ ಎಲ್ಲೋ ತಪ್ಪಿಹೋಗಿರುತ್ತದೆ.

ನಿಜವಾದ ಮದುವೆ ಪ್ರಕ್ರಿಯೆ ನಡೆಯುವುದು ಆ ಮೂರು ದಿನಗಳಿಗಿಂತ ಮೊದಲು ಮತ್ತು ನಂತರದಲ್ಲಿಯೇ. ಈ ಸಮಯದಲ್ಲಿಯೇ ‘ಸಹಬಾಳ್ವೆ’ ಆರಂಭಿಸುವ ಜೀವಗಳು ಪರಸ್ಪರ ಅರ್ಥಮಾಡಿಕೊಳ್ಳುವುದು. ಎರಡು ಭಿನ್ನ ದಾರಿಗಳು ಅರಿತುಕೊಂಡು ವಿಲೀನಗೊಳ್ಳುವ ಈ ಪ್ರಕ್ರಿಯೆಯನ್ನು ಗ್ರಹಿಸುವುದು ನನ್ನ ಈ ಚಿತ್ರಸರಣಿಯ ಒಂದು ಉದ್ದೇಶ.

ಚೆನ್ನೈನ ಈ ಸ್ನೇಹಿತ ನನಗೆ ಹತ್ತಕ್ಕಿಂತ ಹೆಚ್ಚು ವರ್ಷಗಳಿಂದ ಪರಿಚಿತ. ತುಂಬ ಆಪ್ತ ಕೂಡ ಹೌದು. ಈ ಆತ್ಮೀಯತೆ ಅವನ ಜತೆಗಷ್ಟೇ ಅಲ್ಲ, ಇಡೀ ಕುಟುಂಬದೊಂದಿಗೆ ನನಗೆ ತುಂಬ ಸಲಿಗೆ ಇದೆ. ಇದು ನನಗೆ ತುಂಬ ಅನುಕೂಲವಾಯಿತು. ಈ ಚಿತ್ರಸರಣಿಯಲ್ಲಿ ನನಗೆ ಅಯಾಚಿತವಾಗಿ ಇನ್ನೊಂದು ಅವಕಾಶವೂ ದೊರಕಿತು. ನನ್ನ ಸ್ನೇಹಿತನ ಮನೆಯಲ್ಲಿ ಮೂರು ತಲೆಮಾರಿನವರು ವಾಸವಾಗಿದ್ದಾರೆ. ಅಜ್ಜ–ಅಜ್ಜಿ, ಅಪ್ಪ–ಅಮ್ಮ ಮತ್ತು ಸ್ನೇಹಿತ ಮತ್ತವನ ಸಂಗಾತಿ. ಈ ಮೂರು ತಲೆಮಾರುಗಳನ್ನೂ ಹತ್ತಿರದಿಂದ ನೋಡುವ, ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿಯುವ ಅವಕಾಶ ನನ್ನದಾಯಿತು.

ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಾ ಹೋದಂತೆ ನನಗೆ ಇದರ ಎರಡು ಧ್ರುವಗಳು ತೆರೆದುಕೊಳ್ಳುತ್ತಾ ಹೋದವು– ಭಿನ್ನ ವಯೋಮಾನದ ಎರಡು ಜೋಡಿಗಳ ಮೂಲಕ. ಮೊದಲನೆಯ ಜೋಡಿ ಅಜ್ಜ–ಅಜ್ಜಿ, ಎರಡನೆಯದು ನನ್ನ ಸ್ನೇಹಿತ ಮತ್ತವನ ಸಂಗಾತಿ. ದಾಂಪತ್ಯ ಎನ್ನುವ ಪಯಣದ ಎರಡು ತುದಿಗಳಂತೆ ಈ ಜೋಡಿಗಳು ನನಗೆ ಕಾಣಿಸಿದವು. ಈ ಎರಡು ವಿರುದ್ಧ ದ್ರುವಗಳ ಸಂಬಂಧವನ್ನು ಗ್ರಹಿಸುವುದೇ ನನ್ನ ಚಿತ್ರಸರಣಿಯ ಪ್ರಮುಖ ಕೇಂದ್ರವಾಗಿತ್ತು.

ಮದುವೆಗೂ ಮುನ್ನವೇ ಸ್ನೇಹಿತನ ಸಂಗಾತಿ ಅವನ ಮನೆಯಲ್ಲಿ ಬಂದಿದ್ದಳು. ಆ ಕುಟುಂಬದ ತಂದೆ–ತಾಯಿ, ಅಜ್ಜ–ಅಜ್ಜಿ ಎಲ್ಲರೂ ಆಕೆಯನ್ನು ಒಪ್ಪಿಕೊಂಡು ತುಂಬ ಸಂತೋಷದಿಂದಲೇ ಸ್ವೀಕರಿಸಿದ್ದರು. ಇದು ಕೂಡ ನನ್ನನ್ನು ಸೆಳೆಯಿತು. ನಾನು ಅವರ ಮದುವೆಗೂ ಹೋಗಿದ್ದೆ. ಆದರೆ ಅಲ್ಲಿನ ಗದ್ದಲದಲ್ಲಿ ನೈಜ ಚಿತ್ರ ಸಿಕ್ಕುವುದಿಲ್ಲ ಅನಿಸಿತು. ಆದ್ದರಿಂದ ನಾನು ಉದ್ದೇಶಪೂರ್ವಕವಾಗಿ ಮದುವೆಯ ಫೋಟೊಗಳನ್ನು ತೆಗೆಯಲಿಲ್ಲ. ಸ್ನೇಹಿತನ ಮದುವೆಯನ್ನು ನೇರವಾಗಿ ಸೆರೆಹಿಡಿಯುವುದು ನನ್ನ ಉದ್ದೇಶ ಆಗಿರಲಿಲ್ಲ. ಬದಲಾಗಿ ಆ ಜೀವಗಳ ಬದುಕಿನ ಸಾಂಗತ್ಯದ ಕ್ಷಣಗಳ ಶೋಧನೆ ನನ್ನ ಮುಖ್ಯ ಕಾಳಜಿಯಾಗಿತ್ತು.

ನವಜೋಡಿಗಳು ಅವರದ್ದೇ ಆದ ಬಣ್ಣದ ಜಗತ್ತಿನಲ್ಲಿ ಬದುಕುತ್ತಿರುತ್ತಾರೆ. ಫನ್‌, ಮೊಬೈಲ್‌, ಹಾಡು, ರೊಮ್ಯಾಂಟಿಕ್‌ ಕ್ಷಣಗಳು– ಹೀಗೆ ಅವರ ಬದುಕು ರಂಗುರಂಗಾಗಿರುತ್ತದೆ. ಅದೇ ಹಿರಿಯ ದಂಪತಿ ಜಗತ್ತು ಬೇರೆಯದೇ ಆದದ್ದು. ಅಗತ್ಯ ಮಾತ್ರೆಗಳು, ಆರೋಗ್ಯ ಸಮಸ್ಯೆಗಳ ಕುರಿತ ಕಾಳಜಿ, ಪರಸ್ಪರ ಆತುಕೊಂಡು ಭದ್ರತಾ ವಲಯವನ್ನು ರೂಪಿಸಿಕೊಳ್ಳುವುದರಲ್ಲಿ ಅವರ ಗಮನವಿರುತ್ತದೆ. ಇದೊಂದು ರೀತಿಯಲ್ಲಿ ಒಂದೇ ಕಾಮನಬಿಲ್ಲಿನ ಎರಡು ವಿರುದ್ಧ ಅಂಚುಗಳನ್ನು ಹಿಡಿಯುವ ಪ್ರಯತ್ನ.

ಈ ಚಿತ್ರಗಳನ್ನು ತೆಗೆಯಲು ನಾನು ಕೆನನ್ EOS 6D ಕ್ಯಾಮೆರಾ ಹಾಗೂ 35 ಎಂಎಂ ಲೆನ್ಸ್‌ (1.4. ಅಪರ್ಚರ್) ಬಳಸಿರುವೆ. ಈ ಎಲ್ಲ ಛಾಯಾಚಿತ್ರಗಳಲ್ಲಿಯೂ ನೈಜ ಭಾವವನ್ನು ಸೆರೆಹಿಡಿಯಲು ಯತ್ನಿಸಿದ್ದೇನೆ. ಇದನ್ನು ನಾನು ‘ಕ್ಯಾಂಡಿಡ್‌’ ಎಂದು ಕರೆಯಲು ಇಷ್ಟಪಡುವುದಿಲ್ಲ. ಯಾಕೆಂದರೆ ‘ಕ್ಯಾಂಡಿಡ್’ ಅಂದಾಕ್ಷಣ ಮದುವೆ ಛಾಯಾಗ್ರಹಣ ಮನಸ್ಸಿಗೆ ಬಂದುಬಿಡುತ್ತದೆ. ಆದರೆ ಇವು ಆ ಥರದ ‘ಕ್ಯಾಂಡಿಡ್’ ಅಲ್ಲ, ಬದಲಿಗೆ ನೈಸರ್ಗಿಕ ಚಿತ್ರಗಳು. ಎಲ್ಲ ಚಿತ್ರಗಳಲ್ಲಿಯ ಭಾವಗಳಲ್ಲಿ ಆ ನೈಸರ್ಗಿಕ ಸಹಜತೆ ಇದೆ. ಕ್ಯಾಮೆರಾ ಎದುರಿಗೆ ಕೃತಕವಾಗಿ ನಟಿಸುವುದು ನನಗೆ ಬೇಕಿರಲಿಲ್ಲ. ಆದ್ದರಿಂದ ಅವರು ಹೇಗಿರುತ್ತಾರೋ ಹಾಗೆಯೇ ಸೆರೆಹಿಡಿದೆ.

ಈ ಚಿತ್ರಸರಣಿಯ ಸಾಂಗತ್ಯದಲ್ಲಿ ಕಂಡುಕೊಂಡು ಮತ್ತೊಂದು ವಿಷಯ ಹೇಳಬೇಕು. ನಾನು ಗಮನಿಸಿದಂತೆ ನನ್ನ ಸ್ನೇಹಿತನ ಬದುಕಿನಲ್ಲಿ ಮದುವೆಯಿಂದ ಹೆಚ್ಚಿನ ವ್ಯತ್ಯಾಸವೇನೂ ಆಗಿಲ್ಲ. ಮದುವೆಯ ಮೊದಲು ಹೇಗಿದ್ದರೋ ನಂತರವೂ ಹಾಗೆಯೇ ಇದ್ದಾರೆ. ಇಂದಿನ ಆಧುನಿಕ ಸಂದರ್ಭದಲ್ಲಿ ‘ಮದುವೆ’ಯ ಸ್ಥಾನ ಏನು? ಅದು ನಮ್ಮ ಬದುಕಿನ ಮೇಲೆ ಬೀರುವ ಪರಿಣಾಮ ಏನು? ಈ ಪ್ರಶ್ನೆಗಳನ್ನಿಟ್ಟುಕೊಂಡು ನನ್ನ ಅನೇಕ ವಿವಾಹಿತ ಸ್ನೇಹಿತರನ್ನು ಮಾತನಾಡಿಸಿದ್ದೇನೆ. ಬಹುಶಃ ಮುಂದಿನ ಪೀಳಿಗೆಯ ಕೆಲವರಿಗೆ ‘ವಿವಾಹ’ ಎನ್ನುವುದು ಅನಗತ್ಯ ಎನಿಸಬಹುದು. ಯಾಕೆಂದರೆ ಇಂದು ಸಮಾಜ ಹೇಳುತ್ತದೆ ಎಂಬ ಕಾರಣಕ್ಕೆ ಮದುವೆಯಾಗುವವರು ಬಹಳ ಜನರಿದ್ದಾರೆ. ಅದನ್ನು ಬಿಟ್ಟರೆ ಮದುವೆ ಬದುಕಿನಲ್ಲಿ ಅಂಥದ್ದೇನೂ ಮಹತ್ವದ ವಿಷಯ ಅಲ್ಲ ಎಂದು ಅವರಿಗೆ ಅನಿಸಿಬಿಡಬಹುದು.

ನಾನು ಗೆಳೆಯನ ಮನೆಯಲ್ಲಿ ಉಳಿದುಕೊಂಡು ಚಿತ್ರಗಳನ್ನು ತೆಗೆದುಬಂದ ಒಂದು ತಿಂಗಳ ನಂತರ ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಸ್ನೇಹಿತನ ಅಜ್ಜಿ ತೀರಿಕೊಂಡರು. ಆ ಸಾವನ್ನು ಹೇಗೆ ಗ್ರಹಿಸಬೇಕೋ ನನಗೆ ಇನ್ನೂ ತಿಳಿಯುತ್ತಿಲ್ಲ. ಮುಂದಿನ ಸಲ ನಾನು ಅಲ್ಲಿಗೆ ಹೋದಾಗ ನಾನು ಕೇವಲ ಸ್ನೇಹಿತನ ಅಜ್ಜನ ಫೋಟೊವನ್ನಷ್ಟೇ ತೆಗೆಯಲು ಸಾಧ್ಯ ಎಂಬ ವಾಸ್ತವವನ್ನು ಅರಗಿಸಿಕೊಳ್ಳಬೇಕಿದೆ.

ಇದು ಇನ್ನೂ ನಡೆಯುತ್ತಲೇ ಇರುವ ಪ್ರಾಜೆಕ್ಟ್‌. ಸ್ನೇಹಿತನ ಮದುವೆ ಆಗಿದ್ದು ಕಳೆದ ಡಿಸೆಂಬರ್‌ನಲ್ಲಿ. ಅದಕ್ಕೂ ಒಂದೂವರೆ ತಿಂಗಳ ಮುನ್ನ ಒಂದು ವಾರ ಚಿತ್ರ ತೆಗೆಯುವ ಕಾರಣಕ್ಕೆ ನಾನು ಅಲ್ಲಿದ್ದೆ. ಹಾಗೆಯೇ ಇನ್ನು ಕೆಲವು ದಿನಗಳನ್ನು ಬಿಟ್ಟು ಮತ್ತೆ ಹೋಗಿ ಫೋಟೊಶೂಟ್‌ ಮಾಡಬೇಕಿದೆ. ನನ್ನ ಈ ಚಿತ್ರಸರಣಿಯೊಟ್ಟಿಗಿನ ಪ್ರಯಾಣ ಎಲ್ಲಿಗೆ ಕೊಂಡೊಯ್ಯುವುದೋ, ಅದರ ಯಾವ್ಯಾವ ತಿರುವುಗಳಲ್ಲಿ ಯಾವ್ಯಾವ ಅಚ್ಚರಿಗಳು ಕಾದಿವೆಯೂ ಎಂಬ ಕುತೂಹಲದಲ್ಲಿಯೇ ಕಾಯುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT