ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾದಿಯರು ಸುರಕ್ಷಿತ: ಚಾಂಡಿ

Last Updated 4 ಜುಲೈ 2014, 10:32 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಐಎಸ್ ಐಎಸ್ ಉಗ್ರರ ಹಿಡಿತದಲ್ಲಿರುವ ಇರಾಕ್ ನ ಯುದ್ಧ ಸಂತ್ರಸ್ತ ಟಿಕ್ರಿತ್ ನಗರದಲ್ಲಿ ಉಗ್ರರ ವಶದಲ್ಲಿರುವ ಭಾರತದ 46 ದಾದಿಯರು ಸುರಕ್ಷಿತವಾಗಿದ್ದಾರೆ. ಅವರನ್ನು ಅಲ್ಲಿಂದ ಸುರಕ್ಷಿತವಾಗಿ ತೆರವುಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ತಿಳಿಸಿದರು.

ದಾದಿಯರನ್ನು ಸಂರಕ್ಷಿಸುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಜತೆ ಮಾತುಕತೆ ನಡೆಸಿರುವ ಉಮ್ಮನ್ ಚಾಂಡಿ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾದಿಯರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆ. ದಾದಿಯರು ಸುರಕ್ಷಿತವಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಶ್ರಮಿಸುತ್ತಿದೆ ಎಂದು ವಿವರಿಸಿದರು.

ಸಂಕಷ್ಟದಲ್ಲಿ ಸಿಲುಕಿರುವ ದಾದಿಯರ ಕುರಿತು ಅಲ್ಲಿನ ಬೆಳವಣಿಗೆಗಳ ಮಾಹಿತಿಯನ್ನು ನಿರಂತರವಾಗಿ ಪಡೆಯುತ್ತಿದ್ದೇವೆ. ಭಾರತದ ವಿದೇಶಾಂಗ ಸಚಿವಾಲಯ, ರಾಜತಾಂತ್ರಿಕ ಹಾಗೂ ಹಿರಿಯ ಅಧಿಕಾರಿಗಳು ದಾದಿಯರನ್ನು ಸಂರಕ್ಷಿಸುವ ಗುರಿ ತಲುಪುವಲ್ಲಿ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮೋಸುಲ್ ನಗರಕ್ಕೆ: ಟಿಕ್ರಿತ್‌ನ ಆಸ್ಪತ್ರೆಯ ನೆಲ ಅಂತಸ್ತಿನಲ್ಲಿ ಆಶ್ರಯ ಪಡೆದಿದ್ದ 46 ದಾದಿಯರಿಗೆ ಅಲ್‌ ಖೈದಾ ಬೆಂಬಲಿತ ‘ಐಎಸ್ ಎಸ್‌ಎಲ್’ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಲೆವೆಂಟ್)  ಉಗ್ರರು ಬೆದರಿಕೆ ಹಾಕಿ ಅಲ್ಲಿಂದ ತೆರವುಗೊಳಿಸಿದ್ದರು.

ಉಗ್ರರು ಅವರನ್ನು ಮೋಸುಲ್ ನಗರಕ್ಕೆ ಕರೆದುಕೊಂಡು ಹೋಗುತ್ತಿ­ದ್ದಾರೆ ಎಂದು ಗುರುವಾರ ತಡರಾತ್ರಿ ಬಂದ ಅಧಿಕೃತ ಮೂಲಗಳು ತಿಳಿಸಿದ್ದವು.

‘ಇರಾಕ್‌ನಲ್ಲಿರುವ ಕೇರಳ ಮೂಲದ ಶುಶ್ರೂಷಕರೊಬ್ಬರು ದಾದಿ­ಯ­ರೊಂದಿಗೆ ನಿರಂತರ ಸಂಪರ್ಕ­ದಲ್ಲಿದ್ದಾರೆ. ಆ ಶುಶ್ರೂಷಕ ತಿಳಿಸಿರುವ ಪ್ರಕಾರ, ದಾದಿಯರ ಜತೆ ಇರುವ ನಾಲ್ವರು ಉಗ್ರರು ಪ್ರಯಾಣದ ಮಧ್ಯೆ ಆಹಾರ ಮತ್ತು ನೀರು ಪೂರೈಸುತ್ತಿದ್ದಾರೆ’ ಎಂದು ಉಮ್ಮನ್ ಚಾಂಡಿ ಅವರ ಆಪ್ತ ಮೂಲಗಳು ತಿಳಿಸಿದ್ದವು.

‘ಐಎಸ್‌ಐಎಲ್‌ ಉಗ್ರರು ಬೆದರಿಕೆ ಹಾಕಿ ಶುಶ್ರೂಷಕಿ­ಯರನ್ನು ಬಸ್‌ಗೆ ಹತ್ತಿಸಿ ಅಜ್ಞಾತ ಸ್ಥಳಕ್ಕೆ ಸಾಗಿಸಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಸುದ್ದಿಗೋಷ್ಠಿ­ಯಲ್ಲಿ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟಪಡಿ­ಸಿದ್ದರು.

‘ದಾದಿಯರೊಂದಿಗೆ ಗುರುವಾರ ಮಾತ­ನಾಡಿದ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಹಿರಿಯ ಸಹಾಯಕರು ಮಾತನಾಡಿ, ‘ಉಗ್ರರು ದಾದಿಯರಿಗೆ ಆಸ್ಪತ್ರೆಯಿಂದ ಹೊರಡು­ವಂತೆ ಬೆದರಿಕೆ ಹಾಕಿ ಎರಡು ಬಸ್‌ಗಳಲ್ಲಿ ಅವರನ್ನು ಕರೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದ್ದರು.

‘ದಾದಿಯರು ಒತ್ತೆಗೆ ಸಿಲುಕಿರುವ ಪ್ರದೇಶವು ಇರಾಕ್ ಸರ್ಕಾರದ ನಿಯಂತ್ರಣ­ದಲ್ಲಿ ಇಲ್ಲ. ಮಾನವೀಯ ಸಂಘಟನೆಗಳ ಕಾರ್ಯಕರ್ತರಿಗೆ ದಾದಿಯರಿದ್ದ ಪ್ರದೇಶವನ್ನು ತಲುಪಲು ಕೂಡ ಸಾಧ್ಯವಾಗಿಲ್ಲ. ಸಚಿವಾಲಯವು ಕೇರಳ ಮುಖ್ಯಮಂತ್ರಿ ಹಾಗೂ ಸಂಬಂ­ಧಿಸಿದ ಇತರರೊಂದಿಗೆ ಸತತ ಸಂಪರ್ಕ­ದಲ್ಲಿದೆ. ದಾದಿಯರಿಗೆ ಈಗ ಉಗ್ರರ ಆಣತಿಯಂತೆಯೇ ತೆರಳುವಂತೆ ಸೂಚಿ­ಸ­ಲಾಗಿದೆ’ ಎಂದೂ ವಿವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT