ಯಲಹಂಕ: ಜಕ್ಕೂರು ಪ್ಲೈಯಿಂಗ್ ಕ್ಲಬ್‌ನಿಂದ (ಬಳ್ಳಾರಿ ಮುಖ್ಯರಸ್ತೆ) ಹೆಗ್ಗಡೆನಗರದ ಕಡೆಗೆ ತೆರಳುವ ಜೋಡಿರಸ್ತೆಯಲ್ಲಿ ಜಕ್ಕೂರು ಗ್ರಾಮದ ಬಿಜಿಎಸ್ ಬಡಾವಣೆ ಸಮೀಪದಲ್ಲಿ ತ್ಯಾಜ್ಯ ತುಂಬಿದ ಬಿಬಿಎಂಪಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ದುರ್ವಾಸನೆ ಹರ ಡಿರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಈ ಜೋಡಿ ರಸ್ತೆಯು ಬಳ್ಳಾರಿ ಮುಖ್ಯರಸ್ತೆಯಿಂದ ಜಕ್ಕೂರು, ಹೆಗ್ಗಡೆ ನಗರ, ಕ್ಯಾಲಸನಹಳ್ಳಿ ಮಾರ್ಗವಾಗಿ ಬಿಳೇಶಿವಾಲೆವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ.
‘ಕೆಲವು ದಿನಗಳಿಂದ ಈ ರಸ್ತೆಯಲ್ಲಿ ತ್ಯಾಜ್ಯ ತುಂಬಿದ ಬಿಬಿಎಂಪಿ ಲಾರಿಗ ಳನ್ನು ನಿಲ್ಲಿಸಲಾಗುತ್ತಿದೆ. ಲಾರಿಯಿಂದ ಸುರಿಯುತ್ತಿರುವ ಮಲಿನ ನೀರು ರಸ್ತೆಯುದ್ದಕ್ಕೂ ಒಂದು ಕಿಲೋಮೀಟರ್ ದೂರದವರೆಗೆ ಹರಿದುಕೊಂಡು ಹೋಗಿರುವುದರಿಂದ ಈ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಿದೆ’ ಎಂದು ಸ್ಥಳೀಯ ನಿವಾಸಿ ಸೋಮಶೇಖರ್ ದೂರಿದರು.
‘ಸುತ್ತಮುತ್ತಲ ಬಡಾವಣೆಗಳ ನೂರಾರು ಜನರು ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಯುವಿಹಾರಕ್ಕಾಗಿ ಈ ರಸ್ತೆಯ ಮೂಲಕವೇ ಹಾದುಹೋಗಬೇಕಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಲಾರಿಯಿಂದ ನಿರಂತರವಾಗಿ ಮಲಿನ ನೀರು ಸುರಿಯುತ್ತಿರುವುದರ ಜೊತೆಗೆ ಲಾರಿಯ ಸುತ್ತಲೂ ಬಿದ್ದಿರುವ ತ್ಯಾಜ್ಯವಸ್ತುಗಳನ್ನು ತಿನ್ನಲು ಬರುವ ನಾಯಿಗಳ ಹಿಂಡು, ತ್ಯಾಜ್ಯವನ್ನು ರಸ್ತೆಯ ಮೇಲೆಲ್ಲಾ ಎಳೆದಾಡಿ, ರಸ್ತೆಯ ಅಂದವೇ ಕೆಟ್ಟಿದೆ’ ಎಂದು ದೂರಿದರು.