ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಕಾಯುತ್ತಿರುವ ಸಂಬಂಧಿಗಳು

ನೇಪಾಳ ಭೂಕಂಪ: ಪ್ರವಾಸಕ್ಕೆ ತೆರಳಿದ್ದ ಬೆಂಗಳೂರು ವಾಸಿಗಳು ಸುರಕ್ಷಿತ, ಆತಂಕ ದೂರ
Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೇಪಾಳ ಪ್ರವಾಸದಲ್ಲಿರುವ ನಗರ ವಾಸಿಗಳು ಸುರಕ್ಷಿತವಾಗಿದ್ದಾರೆ. ಆದರೆ, ಭೂಕಂಪನದ ಭೀಕರತೆ  ದೃಶ್ಯಗಳು ಅವರ ಕುಟುಂಬ ಸದಸ್ಯರನ್ನು ಬೆಚ್ಚಿ ಬೀಳಿಸಿದೆ.

ಸಂಬಂಧಿಗಳ ಮೊಬೈಲ್‌ ಸಂಪರ್ಕ ಸಾಧ್ಯವಾಗದೆ ಆತಂಕಗೊಂಡಿದ್ದವರು, ಕೊನೆಗೂ ‘ನಮ್ಮವರೆಲ್ಲ ಸುರಕ್ಷಿತವಾ ಗಿದ್ದಾರೆ’ ಎಂಬ ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

ಬಸವನಗುಡಿ ನಿವಾಸಿ ಧವಳಗಿರಿ, ಪತ್ನಿ ಅಶ್ವಿನಿ, ಸಂಬಂಧಿ ಆನಂದ್ ಹಾಗೂ ಅವರ ಪತ್ನಿ ಏ.16ರಂದು ‘ಚೈತನ್ಯ ಟ್ರಾವೆಲ್ಸ್‌’ ಮೂಲಕ ಕಠ್ಮಂಡು ಪ್ರವಾಸ ಹೋಗಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಅವರು ಕುಟುಂಬ ಸದಸ್ಯರಿಗೆ ಕರೆ ಮಾಡಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ.

‘ಭೂಕಂಪನದ ಸುದ್ದಿ ತಿಳಿಯುತ್ತಿದ್ದಂತೆಯೇ ಭಾವನಿಗೆ ಕರೆ ಮಾಡಿದೆ. ಆದರೆ, ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು.  ಗಾಬರಿಯಾಗಿ ಕೂಡಲೇ ಟ್ರಾವೆಲ್ಸ್‌ಗೆ ತೆರಳಿದೆ. ಆದರೆ ಅವರಿಗೂ ಯಾವುದೇ ಮಾಹಿತಿ ಇರಲಿಲ್ಲ. ಮಧ್ಯಾಹ್ನ 1 ಗಂಟೆಗೆ ಅವರೇ ಕರೆ ಮಾಡಿ, ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿದಾಗ ನಿಟ್ಟುಸಿರು ಬಿಟ್ಟೆವು’ ಎಂದು ಧವಳಗಿರಿ ಅವರ ಭಾಮೈದ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಮಮೂರ್ತಿನಗರದ ಸೋಲಾರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಟಿ.ರಾಜಾರಾವ್ ಅವರು ಕೆಲಸದ ನಿಮಿತ್ತ ಮಾ.31ರಂದು ನೇಪಾಳಕ್ಕೆ ಹೋಗಿದ್ದು, ಅವರೂ ಸುರಕ್ಷಿತವಾಗಿದ್ದಾರೆ.

‘ಸುದ್ದಿ ವಾಹಿನಿಗಳಿಂದ ಭೂಕಂಪನದ ವಿಷಯ ಗೊತ್ತಾಯಿತು. ಪತಿ ಸಂಪರ್ಕಕ್ಕೆ ಸಿಗದಿದ್ದಾಗ ದಿಕ್ಕು ತೋಚದಂತಾಯಿತು. ಪೊಲೀಸ್ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿ ಪತಿ ಬಗ್ಗೆ ವಿಚಾರಿಸಿದೆ. ಅವರಿಗೂ ಮಾಹಿತಿ ಇರಲಿಲ್ಲ. ಮಧ್ಯಾಹ್ನ 3.15ಕ್ಕೆ ಪತಿಯೇ ಕರೆ ಮಾಡಿ, ಕುಂದರಿಗಲ್ ಪ್ರದೇಶದಲ್ಲಿ ಸುರಕ್ಷಿತವಾಗಿದ್ದೇನೆ. 2–3 ದಿನಗಳಲ್ಲಿ ವಾಪಸ್ ಬರುತ್ತೇನೆ ಎಂದರು. ಹೋದ ಜೀವ ಮರಳಿ ಬಂದಂತಾಯಿತು’ ಎಂದು ರಾಜಾರಾಮ್ ಅವರ ಪತ್ನಿ ಪ್ರೀತಿ ಹೇಳಿದರು.

40 ಮಂದಿ ಸುರಕ್ಷಿತ: ಬೆಂಗಳೂರು, ತುಮಕೂರು, ದಾವಣಗೆರೆ ಹಾಗೂ ಆಂಧ್ರಪ್ರದೇಶದ 40ಮಂದಿ ಬನಶಂಕರಿ ಎರಡನೇ ಹಂತದ ‘ಪತಂಜಲಿ ಟ್ರಾವೆಲ್ಸ್‌’ ಮೂಲಕ ಏ.20ರಂದು ನೇಪಾಳ ಪ್ರವಾಸ ಹೋಗಿದ್ದಾರೆ.

‘ಎಲ್ಲರೂ ಕಠ್ಮಂಡುವಿನ ಪಶುಪತಿ ಪ್ಲಾಜಾದಲ್ಲಿ ಉಳಿದುಕೊಂಡಿದ್ದು, ಸುರಕ್ಷಿತವಾಗಿದ್ದೇವೆ. ಭಾನುವಾರ ಬೆಳಿಗ್ಗೆ ಇಲ್ಲಿಂದ ವಾಪಸ್ ಹೊರಡುತ್ತೇವೆ’ ಎಂದು ಟ್ರಾವೆಲ್ಸ್‌ ಪ್ರಧಾನ ವ್ಯವಸ್ಥಾಪಕ ಮಹೇಶ್ ತಿಳಿಸಿದರು.

‘ಬೆಳಿಗ್ಗೆ 11 ಗಂಟೆಗೆ ತಾಯಿ ಗೌರಮ್ಮ ಅವರಿಗೆ ಕರೆ ಮಾಡಿ ಹತ್ತು ನಿಮಿಷ ಮಾತನಾಡಿದ್ದೆ. ಪ್ರಯಾಣದಿಂದ ಸುಸ್ತಾಗಿದ್ದ ತಾಯಿಗೆ  ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹೀಗಾಗಿ ಅವರು ಪ್ರವಾಸಿ ತಾಣಗಳ ವೀಕ್ಷಣೆಗೆ ಹೋಗಿರಲಿಲ್ಲ. ಕರೆ ಸ್ಥಗಿತಗೊಳಿಸಿದ ಸ್ವಲ್ಪ ಸಮಯದಲ್ಲೇ ಭೂಕಂಪನವಾದ ಸುದ್ದಿ ತಿಳಿಯಿತು’ ಎಂದು ದಾವಣಗೆರೆಯ ಮಧುಮಿತ ವಿವರಿಸಿದರು.

‘ಗಾಬರಿಯಿಂದ ಪುನಃ ತಾಯಿಗೆ  ದೂರವಾಣಿ ಕರೆ ಮಾಡಿದೆ. ತಾನು ತಂಗಿರುವ ಕಟ್ಟಡ ಸ್ವಲ್ಪ ಅಲುಗಾಡಿದಂತೆ ಅನುಭವವಾಯಿತು.  ಯಾವುದೇ ಅನಾಹುತವಾಗಿಲ್ಲ ಎಂದು ಅವರು ಹೇಳಿದಾಗ ಧೈರ್ಯ ಬಂತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT