ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯ ಕಲಿಕೆಗೆ...

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಅಂಕಗಳನ್ನು ಆಧರಿಸಿದ ಪರೀಕ್ಷೆಗಳು ವಿದ್ಯಾರ್ಥಿಯ ಬುದ್ಧಿಮತ್ತೆಯ ಸೂಚಕವಲ್ಲ ಎಂಬ ಮಾತನ್ನು ಮತ್ತೆ ಮತ್ತೆ ಕೇಳುತ್ತಲೇ ಇರುತ್ತೇವೆ. ಆದರೆ ಪಾಸ್ ಕ್ಲಾಸ್ ಅಂಕಗಳನ್ನು ಹಿಡಿದುಕೊಂಡು ಯಾವ ಕಾಲೇಜಿಗೆ ಹೋದರೂ ಸೀಟೊಂದನ್ನು ದಯಪಾಲಿಸಲು ಯಾರೂ ಮನಸ್ಸು ಮಾಡುವುದಿಲ್ಲ. ಪರಿಕಲ್ಪನೆಯ ಮಟ್ಟದಲ್ಲಿ ಅಂಕಗಳನ್ನು ಆಧರಿಸಿದ ಸೀಟು ಹಂಚಿಕೆಯನ್ನು ಎಲ್ಲರೂ ಸರಿಯಲ್ಲ ಎನ್ನುತ್ತಾರೆ. ಆದರೆ ಅದಕ್ಕೆ ಪರ್ಯಾಯದ ಹುಡುಕಾಟ ನಡೆದಿರುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ.

ಪರಿಣಾಮವಾಗಿ ಕಡಿಮೆ ಅಂಕ ಪಡೆದು ತನಗಿಷ್ಟ ಇರುವುದನ್ನು ಕಲಿಯಬೇಕು ಎಂದು ಹೊರಡುವವರಿಗೆ ನಿರಾಶೆ ಖಂಡಿತ. ಉಳ್ಳವರಾದರೆ ಸೀಟು ಖರೀದಿಸಬಹುದು, ಇಲ್ಲದೇ ಇರುವವರು ಏನು ಮಾಡಬೇಕು? ಇದಕ್ಕೆ ಸುಲಭದ ದಾರಿ ಇಲ್ಲ. ಆದರೆ ಕಷ್ಟದ ದಾರಿಯನ್ನು ಹೇಗೆ ತುಳಿಯಬಹುದು ಎಂಬುದಕ್ಕೆ ವಿಜ್ಞಾನ ಮತ್ತು ಮಾನವಿಕ ವಿಭಾಗದ ಇಬ್ಬರು ತಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ.


ಶ್ರದ್ಧೆಯೇ ವಿಜ್ಞಾನದ ಗುರು!
ಸಾಮಾನ್ಯವಾಗಿ ಶಿಕ್ಷಣ ಎಂದರೆ ಶಾಲಾ ಕಾಲೇಜುಗಳಿಗೆ ಹೋಗಿ ಓದುವುದು ಎನ್ನುವುದು ನಮ್ಮ ನಂಬಿಕೆ. ಆದರೆ ಅದರ ಹೊರತಾಗಿ ಕೆಲವು ವಿದ್ಯೆಗಳಿರುತ್ತವೆ. ಉದಾಹರಣೆಗೆ ಸಂಗೀತ, ಮಾರ್ಷಲ್‌ ಆರ್ಟ್‌, ಕಳರಿಯಂತಹ, ಗುರುಗಳ ಬಳಿ ಹೋಗಿ ಕಲಿಯುವಂಥ ವಿದ್ಯೆಗಳೂ ಇವೆ.

ವಿಜ್ಞಾನದಲ್ಲಿಯೂ ಸಾಕಷ್ಟು ಜನ ಅಂಥ ಪರಂಪರೆಯನ್ನು ಇಟ್ಟುಕೊಂಡಿರುವ ಗುರುಗಳು ಇದ್ದಾರೆ. ಅದು ಹೆಚ್ಚು ಜನರಿಗೆ ಗೊತ್ತಿಲ್ಲ. ಗುರುಗಳು ಎಂದರೆ ಹಳೆಕಾಲದ ಗುರುಕುಲ ಪದ್ಧತಿ ಅಂತಲ್ಲ. ಆದರೆ ನಿಜವಾಗಿ ವಿಜ್ಞಾನದಲ್ಲಿ ಆಸಕ್ತಿ ಇರುವವರು ನನ್ನ ಬಳಿ ಬಂದರೆ ಅವರಿಗೆ ಹೇಳಿಕೊಡುತ್ತೇನೆ ಎನ್ನುವ ಪರಿಣತರು ಇದ್ದಾರೆ.

ವಿಜ್ಞಾನದಲ್ಲಿ ಆಸಕ್ತಿ ಇರುವ, ಆದರೆ ಶಾಲಾ ಕಲಿಕೆಯಿಂದ ವಿಮುಖರಾದ ವಿದ್ಯಾರ್ಥಿಗಳು ಅಂಥ ಪರಿಣತರನ್ನು ಭೇಟಿ ಮಾಡಬೇಕು. ನಾನು ಭೌತಶಾಸ್ತ್ರ ಉಪನ್ಯಾಸಕನಾಗಿರುವುದರಿಂದ ಆ ವಿಷಯವನ್ನೇ ಮುಂದಿಟ್ಟುಕೊಂಡು ಮಾತನಾಡುತ್ತೇನೆ.

ವಿಜ್ಞಾನದಲ್ಲಿ ಮುಖ್ಯವಾಗಿ ಎರಡು ವಿಷಯ ಬರುತ್ತವೆ. ಒಂದು ಪ್ರಯೋಗಾತ್ಮಕ (ಎಕ್ಸ್‌ಪೆರಿಮೆಂಟಲ್‌ ಸೈನ್ಸ್‌) ವಿಜ್ಞಾನ, ಮತ್ತೊಂದು ಸೈದ್ಧಾಂತಿಕ ವಿಜ್ಞಾನ (ಥಿಯರಿಟಿಕಲ್‌ ಸೈನ್ಸ್‌). ಈ ಎರಡರಲ್ಲೂ ಸಾಕಷ್ಟು ಸಾಧನೆ ಮಾಡಿರುವ ಗುರುಗಳು ಇದ್ದಾರೆ. ಅವರಿಗೆ ಈ ಅಂಕಗಳಾಗಲಿ, ಹಣವಾಗಲಿ ಮುಖ್ಯವಾಗಿರುವುದಿಲ್ಲ. ಯಾರು ಬಂದರೂ ಹೇಳಿಕೊಡುತ್ತೇನೆ ಎಂಬ ಮನೋಭಾವದವರು ಅವರು. ಅಂಥವರನ್ನು ಹುಡುಕಬೇಕು.

ಅದು ಸ್ವಲ್ಪ ಕಷ್ಟದ ಕೆಲಸವೇ. ಆದರೆ ಯಾವುದೇ ವಿಷಯವನ್ನು ಕಲಿತುಕೊಳ್ಳಬೇಕು ಎಂಬ ಆಸಕ್ತಿ ಬಂದಾಗ ಆ ಕಷ್ಟಗಳು ಅಷ್ಟು ಮುಖ್ಯವಾಗುವುದಿಲ್ಲ. ವಿಷಯದಲ್ಲಿನ ಶ್ರದ್ಧೆ ಮತ್ತು ಅದನ್ನು ಕಲಿಸಿಕೊಡುವ ಗುರು ಎರಡೇ ಮುಖ್ಯವಾಗುತ್ತವೆ. ಶ್ರದ್ಧೆ ನಿಮ್ಮಲ್ಲಿದ್ದರೆ ಗುರುವನ್ನು ಪತ್ತೆಹಚ್ಚಬೇಕು. ಇನ್ನೊಂದು ದಾರಿಯಿದೆ. ಭೌತವಿಜ್ಞಾನ ಕಲಿತುಕೊಳ್ಳಲು ಸಾಕಷ್ಟು ಒಳ್ಳೆಯ ಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದೂ ಅಷ್ಟೇ, ಯಾರ್‍ಯಾರ ಬಳಿಯೋ ಹೋಗಿ ಕೇಳಿದರೆ ಆಗುವುದಿಲ್ಲ.

ಆ ವಿಷಯದಲ್ಲಿ ಸಾಕಷ್ಟು ಜ್ಞಾನ ಹೊಂದಿರುವವರ ಬಳಿ ಹೋಗಿ ಯಾವ ಪುಸ್ತಕವನ್ನು ಓದಿದರೆ ಭೌತಶಾಸ್ತ್ರ ಕಲಿತುಕೊಳ್ಳಬಹುದು ಎಂದು ಕೇಳಿ, ಒಂದಿಷ್ಟು ಪುಸ್ತಕಗಳ ಪಟ್ಟಿ ಮಾಡಿಕೊಳ್ಳಬೇಕು. ನಂತರ ಆ ಪುಸ್ತಕಗಳನ್ನು ಮೊದಲ ಪುಟದಿಂದ ಹಿಡಿದು ಕೊನೆಯ ಪುಟದವರೆಗೂ ಗಂಭೀರ ಅಧ್ಯಯನ ಮಾಡುತ್ತಾ ಹೋಗಿ.

ಮಾರುಕಟ್ಟೆಯಲ್ಲಿ ಬೇಕಾದಷ್ಟು ಪುಸ್ತಕಗಳಿವೆ. ‘ಈ ಪುಸ್ತಕ ಓದಿ’ ಎಂದು ಸಲಹೆ ನೀಡುವವರೂ ಬೇಕಾದಷ್ಟು ಜನರು ಸಿಗುತ್ತಾರೆ. ಸಮಸ್ಯೆ ಏನು ಎಂದರೆ ಮಾರುಕಟ್ಟೆಯಲ್ಲಿ ಸಿಗುವ ಬಹಳಷ್ಟು ಪುಸ್ತಕಗಳಲ್ಲಿ ತುಂಬ ತಪ್ಪುಗಳಿರುತ್ತವೆ ಮತ್ತು ಕೆಟ್ಟದಾಗಿರುತ್ತವೆ. ಅವುಗಳನ್ನು ಎಷ್ಟು ಕಾಲ ಓದಿದರೂ ಏನೂ ಪ್ರಯೋಜನ ಇಲ್ಲ. ಸರಿಯಾದ ಮಾಹಿತಿ ಇರುವ ಪುಸ್ತಕಗಳನ್ನೇ ಎಚ್ಚರಿಕೆಯಿಂದ ಆರಿಸಿ ಅಧ್ಯಯನ ಮಾಡಬೇಕು.

ಉದಾಹರಣೆಗೆ ಲ್ಯಾಂಡ್ಯೂ ಆ್ಯಂಡ್‌ ಲೈಫ್‌ಶಿಟ್ಜ್‌ (L.D. Landau & E.M. Lifshitz) ಪುಸ್ತಕ ಸರಣಿ.  ಭೌತಶಾಸ್ತ್ರದಲ್ಲಿ ವೇದ ಇದ್ದ ಹಾಗೆ ಅದು. ಆದರೆ ಪಿಯುಸಿ ಓದಿದ ವಿದ್ಯಾರ್ಥಿಗಳಿಗೆ ಅದನ್ನು ಓದಿ ಅರಗಿಸಿಕೊಳ್ಳುವುದು ಕಷ್ಟ. ಅಂಥವರು  ಹ್ಯಾಲಿಡೇ ಮತ್ತು  ರೆಸ್ನಿಕ್‌ (Halliday And Resnick) ಅವರು ಭೌತಶಾಸ್ತ್ರದ ಮೇಲೆ ಬರೆದ ಪುಸ್ತಕವನ್ನು ಓದಬಹುದು. ಕಥೆಯ ಥರ ವಿಜ್ಞಾನವನ್ನು ಹೇಳಿಕೊಡುವ ಪುಸ್ತಕ ಇದು.

ವಿಜ್ಞಾನ ಜಗತ್ತಿನಲ್ಲಿಯೂ ಇದಕ್ಕೆ ಸಾಕಷ್ಟು ಗೌರವ ಇದೆ. ಹಾಗಂತ ಇದೇನೂ ಸುಲಭದ ಪುಸ್ತಕದ ಅಲ್ಲ. ಪರಿಶ್ರಮ ಪಡಲೇಬೇಕು. ಇನ್ನೊಂದು ಪುಸ್ತಕ ರಿಚರ್ಡ್‌ ಫೈನ್ಮನ್ ಅವರು ಬರೆದ ‘ಲೆಕ್ಚರ್ಸ್‌ ಆನ್‌ ಫಿಜಿಕ್ಸ್‌’. ಇದು ಸ್ವಲ್ಪ ಕಷ್ಟ ಅನಿಸಬಹುದು. ಆದರೆ ಪರಿಶ್ರಮವಹಿಸಿದರೆ ಖಂಡಿತ ಓದಬಹುದು. ಮೂರು ಸಂಪುಟಗಳಿವೆ.

ಭೌತಶಾಸ್ತ್ರದ ಬಗ್ಗೆ ಅಪಾರ ಆಸಕ್ತಿ ಇದ್ದೂ ಅಂಕಗಳು ಕಡಿಮೆ ಬಂದ ವಿದ್ಯಾರ್ಥಿಗಳು ಈ ಇಬ್ಬರ ಪುಸ್ತಕಗಳನ್ನು ಓದಿದರೆ ಖಂಡಿತ ಒಂದು ದಾರಿ ಕಾಣುತ್ತದೆ. ಭೌತಶಾಸ್ತ್ರದಲ್ಲಿರುವಂತೆಯೇ ಉಳಿದ ವಿಜ್ಞಾನದ ಪ್ರಕಾರಗಳಲ್ಲಿಯೂ ಕೂಡ ಇಂಥ ಗುರುಗಳು ಪುಸ್ತಕಗಳು ಇದ್ದೇ ಇರುತ್ತವೆ. ಅವುಗಳನ್ನು ಕಂಡುಕೊಳ್ಳಬೇಕು.

ಅಂದಹಾಗೆ, ಇಂದು ಶಾಲಾ ಕಾಲೇಜುಗಳಲ್ಲಿ ಕಲಿಸುವ ಭೌತಶಾಸ್ತ್ರ ನಿಜವಾದ ಭೌತಶಾಸ್ತ್ರವೇ ಅಲ್ಲ. ಅಲ್ಲಿ ಉಪಯೋಗಿಸುವಂತಹ ಪುಸ್ತಕಗಳೂ ತಪ್ಪು ಪುಸ್ತಕಗಳು. ಅದರಲ್ಲಿ ಸಾಕಷ್ಟು ತಾರ್ತಿಕ–ತಾತ್ವಿಕ ತಪ್ಪುಗಳಿವೆ. ಅಂಥ ಪುಸ್ತಕಗಳನ್ನಿಟ್ಟುಕೊಂಡು ಪಾಠ ಮಾಡಲಾಗುತ್ತಿದೆ. ಅಂಥ ಪುಸ್ತಕಗಳನ್ನು ಓದಿ ಕಡಿಮೆ ಅಂಕಗಳನ್ನು ತೆಗೆದುಕೊಂಡರೆ ಪಶ್ಚಾತ್ತಾಪ ಪಡಬೇಕಾಗಿಲ್ಲ. ಒಳ್ಳೆಯದೇ ಆಯ್ತು ಅಂದುಕೊಳ್ಳಬೇಕಷ್ಟೆ.

ಶ್ರದ್ಧೆ ಮತ್ತು ಆಸಕ್ತಿ ಇದ್ದರೆ ಭೌತಶಾಸ್ತ್ರ ಕಲಿತುಕೊಳ್ಳುವುದಕ್ಕೆ ಸಾಧ್ಯವಿದೆ. ಅದಕ್ಕೆ ಕನಿಷ್ಠ ಐದರಿಂದ ಏಳು ವರ್ಷ ಶ್ರದ್ಧೆಯಿಂದ ಅಧ್ಯಯನ ಮಾಡಬೇಕು. ನಿಧಾನ ಪ್ರಕ್ರಿಯೆ ಅದು. ಆದರೆ ಅದಕ್ಕೆ ಖಂಡಿತವಾಗಲೂ ದಾರಿಗಳಿವೆ ಮತ್ತು ಆ ದಾರಿಯಲ್ಲಿ ಹೋದರೆ ಶಾಲಾ ಶಿಕ್ಷಣಕ್ಕಿಂತ ಬಹಳ ಮುಂದಕ್ಕೆ ಸರಿಯಾದ ದಾರಿಯಲ್ಲಿ ಹೋಗಲಿಕ್ಕೆ ಸಾಧ್ಯವಿದೆ.

ಆದರೆ ಈ ಪಾಂಡಿತ್ಯದ ನಂತರ ಆ ಕ್ಷೇತ್ರದಲ್ಲಿ ಸಂಶೋಧನೆ ಮಾಡಬೇಕು, ಲೇಖನಗಳನ್ನು ಪ್ರಕಟಿಸಬೇಕು ಎಂಬ ಆಸಕ್ತಿ ಇದ್ದರೆ ಮತ್ತೆ ಪದವಿಯ ಪ್ರಶ್ನೆ ಬರುತ್ತದೆ. ಅದಕ್ಕೆ ಖಾಸಗಿಯಾಗಿ ಪರೀಕ್ಷೆ ಬರೆದು ಪದವಿ ಗಳಿಸಿಕೊಳ್ಳುವುದು ಒಳ್ಳೆಯದು. ಪೂರ್ತಿ ಕಾಲೇಜಿಗೆ ಹೋಗದೆಯೇ ವಿಜ್ಞಾನ ಕಲಿತುಕೊಳ್ಳುತ್ತೇನೆ ಎಂಬುದು ತೀರಾ ಅಸಾಧ್ಯವಲ್ಲದಿದ್ದರೂ ಕಷ್ಟ ಸಾಧ್ಯ.

ಒಂದು ಮಟ್ಟದವರೆಗೆ ವಿಜ್ಞಾನವನ್ನು ಕಲಿತುಕೊಂಡ ಮೇಲೆ ಖಾಸಗಿಯಾಗಿ ಪರೀಕ್ಷೆ ಬರೆದು ಪಾಸು ಮಾಡುವುದು ಅಂತಹ ಕಷ್ಟ ಅಲ್ಲವೇ ಅಲ್ಲ. ಈಗ ಬೇಕಾದಷ್ಟು ಮುಕ್ತ ವಿಶ್ವವಿದ್ಯಾಲಯಗಳಿವೆ. ಹಾಗೆ ಮಾಡಿಕೊಂಡರೆ ನಿಮ್ಮ ಬಳಿ ಪಾಂಡಿತ್ಯ ಮತ್ತು ಪದವಿ ಎರಡೂ ಇರುತ್ತದೆ. ಆದರೆ ಇದು ಸುಲಭದ ದಾರಿಯಂತೂ ಅಲ್ಲ.
–ಕೆ.ಟಿ. ಸತ್ಯಜಿತ್‌
(ಕೊಯಮತ್ತೂರಿನ ಅಮೃತಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು)


***
ಆಸಕ್ತಿ ಇದ್ದವರಿಗೆ ಅವಕಾಶಗಳ ಆಕಾಶ

ನಮ್ಮಲ್ಲಿ ಎರಡು ರೀತಿಯ ಮಿಥ್ಯೆಗಳಿವೆ. ಮೊದಲನೆಯದು– ವಿಜ್ಞಾನ ವಿಷಯ ತೆಗೆದುಕೊಂಡರೆ, ಅದರಲ್ಲಿ ನಿರ್ದಿಷ್ಟ ವಿಷಯವನ್ನು ಅಭ್ಯಸಿಸಿದರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದು ಎಂಬುದು. ಅತ್ಯುತ್ತಮ ಎನ್ನಲಾಗುವ ಕೆಲವು ಕಾಲೇಜುಗಳಲ್ಲಿ ಅಭ್ಯಸಿಸಿದರೆ ಮಾತ್ರ ಯಶಸ್ಸು ಸಿಗುತ್ತದೆ ಎಂಬುದು ಇನ್ನೊಂದು. ನಿಜಕ್ಕೂ ಇವೆರಡೂ ಮಿಥ್‌ಗಳಷ್ಟೆ.

ಈಗ ಇರುವ ವ್ಯವಸ್ಥೆಯಲ್ಲಿ ಕಡಿಮೆ ಅಂಕ ಪಡೆದುಕೊಂಡ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯ ಕಾಲೇಜುಗಳಿಗೆ ಸೇರಿಕೊಳ್ಳಲು ಸಾಧ್ಯವಿಲ್ಲ. ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳಲ್ಲಿ ಪಿಯುಸಿಯಲ್ಲಿ ಗಳಿಸಿದ ಅಂಕ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕ ಎರಡನ್ನೂ ಪರಿಗಣಿಸಿ ಪ್ರವೇಶ ನೀಡಲಾಗುತ್ತದೆ. ಅವೆರಡರಲ್ಲಿಯೂ ಕಡಿಮೆ ಅಂಕ ಬಂದರೆ ಒಳ್ಳೆಯ ಕಾಲೇಜುಗಳಲ್ಲಿ ಸೀಟು ಸಿಗುವುದು ಕಷ್ಟವಾಗುತ್ತದೆ.

ಇನ್ನು ಬಿ.ಎ–ಬಿಎಸ್ಸಿ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎನ್ನುವವರಿಗೆ ಹಾಗೆ ಇರುವುದಿಲ್ಲ. ಅವರಿಗೆ ಪಿಯುಸಿಯಲ್ಲಿ ಪಡೆದುಕೊಂಡ ಅಂಕಗಳ ಮೇಲೆಯೇ ಪ್ರವೇಶ ನೀಡಲಾಗುತ್ತದೆ. ಆದ್ದರಿಂದ ಕಡಿಮೆ ಅಂಕದ ಸಮಸ್ಯೆ ಜಾಸ್ತಿ ಎದುರಿಸುವುದು ಈ ವಿದ್ಯಾರ್ಥಿಗಳೇ. ಐಐಟಿ, ಐಐಎಂಎಗಳಂತಹ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ತುಂಬ ಕಡಿಮೆ ಇರುತ್ತದೆ. ಆದಕಾರಣ ಕಡಿಮೆ ಅಂಕ ಬಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಎರಡು–ಮೂರನೇ ಶ್ರೇಣಿಯ ಕಾಲೇಜುಗಳಿಗೆ ಸೇರಿಕೊಳ್ಳಬೇಕಾಗುತ್ತದೆ.

ಇದರಿಂದ ಅನೇಕರಿಗೆ ನಿರಾಸೆಯಾಗಿಬಿಡುತ್ತದೆ. ಆದರೆ ಮೊದಲನೇ ಶ್ರೇಣಿಯ ಕಾಲೇಜುಗಳಲ್ಲಿ ಸೀಟು ಸಿಗದೇ ಹೋದರೆ ದೊಡ್ಡ ಮಟ್ಟದಲ್ಲಿ ನಿರಾಶರಾಗಬೇಕಾದ ಅಗತ್ಯ ಇಲ್ಲ. ನಿಜವಾದ ಆಸಕ್ತಿ ಇದ್ದರೆ ಸಾಮಾನ್ಯ ಕಾಲೇಜುಗಳಲ್ಲಿ ಓದಿ ಕೂಡ ಯಶಸ್ಸು ಗಳಿಸಬಹುದು. ಹಾಗೆ ಕಡಿಮೆ ಅಂಕ ಗಳಿಸಿ, ಮೊದಲ ಶ್ರೇಣಿಯ ಕಾಲೇಜುಗಳಲ್ಲಿ ಸೀಟು ಸಿಗದೆ ಸಾಧಾರಣ ಕಾಲೇಜು ಸೇರಿಕೊಂಡು ಸಾಧನೆ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ.

ಮೊದಲ ಶ್ರೇಣಿಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ಉದ್ಯೋಗದಲ್ಲಿ ಹೇಗೆ ಯಶಸ್ವಿಯಾಗಬೇಕು, ಹೇಗೆ ಸಾಧಿಸಬೇಕು ಎಂಬುದನ್ನೆಲ್ಲ ಕಲಿಸುತ್ತಾರೆ ಅಂತೇನಿಲ್ಲ.

ಅಲ್ಲಿ ಪ್ರವೇಶಾತಿ ನೀಡುವ ಹಂತದಲ್ಲಿಯೇ ತುಂಬ ಕಠಿಣ ಪರೀಕ್ಷೆಗಳನ್ನು ನಡೆಸಿ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳನ್ನು ಮಾತ್ರ ತೆಗೆದುಕೊಂಡಿರುತ್ತಾರೆ. ಅಂಥ ವಿದ್ಯಾರ್ಥಿಗಳು ಅವರ ಪ್ರತಿಭೆಯ ಬಲದಿಂದಲೇ ಮುಂದಿನ ಜೀವನದಲ್ಲಿ ಯಶಸ್ವಿಯಾಗುತ್ತಾರೆಯೇ ವಿನಾ ಆ ಕಾಲೇಜಿನಲ್ಲಿ ಕಲಿತಿದ್ದಕ್ಕೇ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಹೇಳಲಿಕ್ಕೆ ಆಗುವುದಿಲ್ಲ.

ಆದಕಾರಣ ಸಾಮಾನ್ಯವಾದ ಪ್ರಾಥಮಿಕ ಸೌಲಭ್ಯಗಳಿರುವ ಕಾಲೇಜಿಗೆ ಹೋದರೂ ಕೂಡ ಆಸಕ್ತಿ ಇರುವ ವಿಷಯದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಇನ್ನು ವ್ಯವಸ್ಥೆಯ ದೃಷ್ಟಿಯಿಂದ ಹೇಳುವುದಾದರೆ, ನಮ್ಮ ಉನ್ನತ ಶಿಕ್ಷಣ ಹೇಗಿದೆ ಅಂದರೆ– ಎಲ್ಲ ಕಾಲೇಜುಗಳನ್ನು ಒಂದೇ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ನಾವು ಹೆಚ್ಚು ಚಿಂತಿಸಿಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚು ಮಾಡಬೇಕು ಎಂದು ಒಂದಿಷ್ಟು ಐಐಟಿಗಳನ್ನು ಐಐಎಂಎಗಳನ್ನು ಸ್ಥಾಪಿಸಿದೆವು.

ಯಾವುದೋ ಒಂದೆರಡು ಸಂಸ್ಥೆಗಳನ್ನು ತುಂಬ ಶ್ರೇಷ್ಠ ದರ್ಜೆಗೇರಿಸುವುದು, ಅದರಿಂದ ಬರುವ ಪ್ರಸಿದ್ಧಿಯಲ್ಲೇ ಮುಳುಗಿ ಉಳಿದ ಸಂಸ್ಥೆಗಳನ್ನು ಹಾಗೆಯೇ ಬಿಟ್ಟುಬಿಡುವುದು ನಮ್ಮಲ್ಲಿ ಸಹಜ ಎನ್ನುವಂತಾಗಿದೆ. ಸಾಮಾನ್ಯ ಕಾಲೇಜುಗಳ ಪರಿಸ್ಥಿತಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ನಮಗೆ ಐಐಟಿ ಇದೆ. ಸರ್ಕಾರಿ ಲಾ ಕಾಲೇಜುಗಳಿಗೆ ತುಂಬಕೆಟ್ಟ ಹೆಸರಿದೆ. ಆದರೆ ನಮ್ಮಲ್ಲಿ ನ್ಯಾಷನಲ್‌ ಲಾ ಸ್ಕೂಲ್‌ಗಳಿವೆ ಎಂಬ ಸಮಾಧಾನದಲ್ಲಿ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಇದರಿಂದ ಏನಾಗಿದೆ ಅಂದರೆ, ಕಡಿಮೆ ಮಾರ್ಕ್ಸ್‌ಗಳಿರುವ ವಿದ್ಯಾರ್ಥಿಗಳಷ್ಟೇ ಅಲ್ಲ, ತುಂಬ ಒಳ್ಳೆಯ ಮಾರ್ಕ್ಸ್‌ಗಳಿರುವವರಿಗೂ ಒಳ್ಳೆಯ ಕಾಲೇಜಿನಲ್ಲಿ ಓದಲಾಗದ ಸಮಸ್ಯೆ ಕಾಡುತ್ತದೆ. ನೂರಕ್ಕೆ ತೊಂಬತ್ತು ಅಂಕಗಳಿಸಿ ಪ್ರಥಮ ಶ್ರೇಣಿ ಕಾಲೇಜುಗಳಲ್ಲಿ ಸೀಟು ಸಿಗದ ವಿದ್ಯಾರ್ಥಿಗೂ ಅದೇ ಸಮಸ್ಯೆ ಇರುತ್ತದೆ.

ಯಾಕೆಂದರೆ ನಮ್ಮಲ್ಲಿ ಪ್ರಥಮ ಶ್ರೇಣಿಯ ಕಾಲೇಜುಗಳ ಸಂಖ್ಯೆ ತುಂಬ ಕಡಿಮೆ ಇದೆ. ಎರಡು– ಮೂರನೇ ಶ್ರೇಣಿಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಹಂತದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾದರೆ ಈ ಸಮಸ್ಯೆ ಬರುವುದಿಲ್ಲ.

ನಾವು ಒಳ್ಳೆಯ ಅಂಕ ಗಳಿಸಿದವರ ವಿಷಯ ಮಾತ್ರ ಮಾತನಾಡುತ್ತೇವೆ. ಕಡಿಮೆ ಅಂಕ ಗಳಿಸಿದವರ ವಿಷಯ ಮಾತನಾಡುವುದಿಲ್ಲ. ಅವರು ಶಿಕ್ಷಣ ನಿಲ್ಲಿಸಬೇಕಾ? ಉನ್ನತ ಶಿಕ್ಷಣ ಪಡೆದುಕೊಳ್ಳಬೇಕಾ? ಕಡಿಮೆ ಅಂಕ ಗಳಿಸಿದವರು ಕಲಾ ವಿಭಾಗಕ್ಕೆ ಸೇರಿಕೊಳ್ಳಬಹುದು ಎಂಬುದೊಂದು ನಂಬಿಕೆ ಇದೆ. ಆದರೆ ಕಲಾ ವಿಭಾಗದಲ್ಲಿಯೂ ಪ್ರವೇಶ ಸಿಗದಷ್ಟು ಕಡಿಮೆ ಅಂಕ ಪಡೆದುಕೊಂಡವರೂ ಇರುತ್ತಾರೆ.

ಅವರು ಉನ್ನತ ಶಿಕ್ಷಣಕ್ಕೆ ಅರ್ಹರಲ್ಲವೇ? ಉನ್ನತ ಶಿಕ್ಷಣಕ್ಕೆ ಅರ್ಹತೆ ಹೇಗೆ ಬರುತ್ತದೆ? ಅದು ಕಾಲೇಜುಗಳಲ್ಲಿನ ಸೀಟುಗಳನ್ನು ಅವಲಂಬಿಸಿದೆಯಾ ಅಥವಾ ವಿದ್ಯಾರ್ಥಿಯ ಅಂಕ–ಉತ್ತೀರ್ಣತೆಯನ್ನು ಅವಲಂಬಿಸಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರ ಇಲ್ಲ.

ಐಐಟಿ, ಐಐಎಂಎ, ಯಾವ್ಯಾವುದೋ ತರಬೇತಿ ಕೋರ್ಸ್‌ಗಳು ಇವೆಲ್ಲವೂ ಇರುವುದು ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು. ಹಾಗಾದರೆ ಅನುತ್ತೀರ್ಣರಾದವರ ಕಥೆ ಏನು? ಅವರನ್ನು ಗಮನದಲ್ಲಿಟ್ಟುಕೊಂಡು ಏನು ಮಾಡುತ್ತಿದ್ದೇವೆ? ಅನುತ್ತೀರ್ಣರಾದವರಿಗೆ ಮಾರ್ಗದರ್ಶನ ನೀಡುವುದು ಖಾಸಗಿಯಾಗಿ ಅಲ್ಲಿ ಇಲ್ಲಿ ನಡೆಯುತ್ತಿದೆ. ಆದರೆ ಸರ್ಕಾರದ ಕಡೆಯಿಂದ ಅವರ ಕುರಿತಾಗಿ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ? ಅವರ ಸಂಖ್ಯೆಯೂ ದೊಡ್ಡದಿರುತ್ತದಲ್ಲ.

ಮರುಪರೀಕ್ಷೆಯ ಅವಕಾಶವೊಂದು ಬಿಟ್ಟರೆ ಅವರಿಗೆ ಯಾವ ರೀತಿಯ ಮಾರ್ಗದರ್ಶನವೂ ಸಿಗುವುದಿಲ್ಲ. ಇವೆಲ್ಲವನ್ನೂ ಹೊರತುಪಡಿಸಿ ಹೇಳುವುದಾದರೆ ಅನುತ್ತೀರ್ಣರಾದವರಿಗೂ ಸಾಕಷ್ಟು ದಾರಿಗಳಿವೆ. ಅವರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡುವ ಸಂಸ್ಥೆಗಳಿವೆ. ವಿದ್ಯಾರ್ಥಿಗಳಿಗೆ ಆಸಕ್ತಿ ಇರಬೇಕು.

ಈ ಕ್ಷೇತ್ರದಲ್ಲಿ ನಾನು ಪರಿಣತಿ ಸಾಧಿಸಬಲ್ಲೆ ಎಂಬ ಸ್ಪಷ್ಟತೆ ಮತ್ತು ಆಸಕ್ತಿ ಇದ್ದರೆ ಯಾವ ಸಂಸ್ಥೆಯಲ್ಲಿ ಕಲಿತುಕೊಳ್ಳುತ್ತಾರೆ. ಅದು ಮಾನ್ಯತೆಯನ್ನು ಪಡೆದಿದೆಯೋ ಇಲ್ಲವೋ ಎನ್ನುವುದೆಲ್ಲ ಗೌಣವಾಗುತ್ತದೆ.

ಆದ್ದರಿಂದ ಒಳ್ಳೆಯ ಕಾಲೇಜಲ್ಲಿ ಸೀಟು ಸಿಗಲಿಲ್ಲ ಎನ್ನುವುದು ಖಂಡಿತ ನಿರಾಶರಾಗಬೇಕಾದ ಅಗತ್ಯ ಇಲ್ಲ. ಆಸಕ್ತಿ ಒಂದಿದ್ದರೆ ಯಶಸ್ಸು ಗಳಿಸಲಿಕ್ಕೆ ಊಹಿಸಲಿಕ್ಕೂ ಸಾಧ್ಯವಿಲ್ಲದಷ್ಟು ದಾರಿಗಳಿವೆ. ಅವುಗಳನ್ನು ಕಂಡುಕೊಳ್ಳಬೇಕಷ್ಟೆ.
–ನಾರಾಯಣ ಎ.
(ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT