ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರ್ಶನಿಕ ಬಸವಣ್ಣ ಯಾರ ಅನುಯಾಯಿಯೂ ಅಲ್ಲ

Last Updated 21 ಜನವರಿ 2015, 19:30 IST
ಅಕ್ಷರ ಗಾತ್ರ

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮೂರು ಹಂತಗಳನ್ನು ಗುರುತಿಸಬ­ಹುದು.
1) ಸನ್ಯಾಸಿಗಳು: ಸಾಂಸಾರಿಕ ತಾಪ­ತ್ರಯ­ಗಳಿಂದ ಬೆಂದು, ನೊಂದು,  ಸರ್ವಸಂಗ ಪರಿತ್ಯಾಗಿ­ಯಾದ­ವರು. ಏಕಾಂತ­ವಾಸ ಇವರ ಪರಮೋತ್ಕೃಷ್ಟ ಸಾಧನೆ. ಕಂದಮೂಲಾದಿಗಳು ಇವರ ಸೇವನೆ. ಗ್ರಂಥ ರಚನೆ ಮತ್ತು ಬೋಧನೆ ಅಷ್ಟಕ್ಕಷ್ಟೆ. ಹಟಯೋಗಿಗಳು. ಅತಿಮಾನುಷ ಶಕ್ತಿ­ಯನ್ನು ತಮ್ಮದನ್ನಾಗಿಸಲು ಒಂಟಿಕಾಲಲ್ಲಿ ನಿಂತು ತಪಸ್ಸು ಮಾಡುವುದು, ರೆಪ್ಪೆಯನ್ನು ಮಿಟುಕಿಸದೆ ಸೂರ್ಯನನ್ನು ನೋಡುತ್ತ ಕೂಡ್ರುವುದು, ಹಸಿವು ತೃಷೆಯನ್ನು ನಿಯಂತ್ರಿಸುವುದು, ಉದ್ದುದ್ದ ಜಟೆಯನ್ನು ಬಿಡುವುದು, ನದಿ­ಯಲ್ಲೋ, ಸಮುದ್ರದಲ್ಲೋ ಅನೇಕ ಗಂಟೆಗಳ­ವರೆಗೆ ಕಣ್ಮುಚ್ಚಿ ಧ್ಯಾನ ಮಾಡುವುದು, ಪ್ರಾಣಾ­ಯಾಮದಲ್ಲಿ ತೊಡಗುವುದು, ತಮಗೆ ಪ್ರಿಯ­ವಾದ ಉಗ್ರ ವ್ರತವನ್ನು ಆಚರಿಸುವುದು ಇವರ ಖಯಾಲಿ.

ಇವರ ಕಠಿಣತರವಾದ ವ್ರತದ ಉದ್ದೇಶವೇನೆಂದರೆ, ಸರ್ವಸಂಗ ಪರಿತ್ಯಾಗ ಮಾಡಿದ ನಂತರದಲ್ಲಿ ತಮ್ಮ ಬದುಕಿನ ವಿಧಾ­ನವು ಸಂಪೂರ್ಣ ಬದಲಾಗಿದೆ. ತಾವು ಮೊದಲಿ­ನಂತೆ ಮಾಮೂಲಿ ಅಲ್ಲ. ಈಗ ಕಠೋರ ಯೋಗಿ­ಗಳಾಗಿದ್ದೇವೆಂದು ತೋರಿಸಿಕೊಳ್ಳು­ವುದು.
ಇವರು ಋಷಿಗಳೂ ಅಹುದು, ಮುನಿಗಳೂ ಅಹುದು. ಇಟ್ಟರೆ ವರ, ಕೊಟ್ಟರೆ ಶಾಪ. ಇವರು ಕಾಲಾನಂತರದಲ್ಲಿ ಪವಾಡ ಪುರುಷರಂತೆ ಬಿಂಬಿ­ತ­ರಾಗುತ್ತಾರೆ. ಎಲ್ಲ ಸಮುದಾಯದವರೂ  ಇವ­ರಿಗೆ ನಡೆದುಕೊಳ್ಳಲು ಆರಂಭಿಸುತ್ತಾರೆ. ಸ್ತುತಿ­ಸುವವರು ಈ ಪರಂಪರೆಗೆ ನಡೆದುಕೊಳ್ಳು­ತ್ತಾರೆ. ಈ ಸನ್ಯಾಸಿಗಳಲ್ಲಿ ಕೆಲವರು ಅವ­ಧೂ­ತರು, ಕೆಲವರು ಆರೂಢ ಪರಂಪರೆಗೆ ಸೇರಿದವರು.

2)ಗುರುಗಳು: -ನಿರ್ದಿಷ್ಟ ಪರಂಪರೆಗೆ ಸೇರಿದ­ವರು. ಇವರಿಗೆ ತಮ್ಮದೇ ಆದ ಸಂಪ್ರದಾಯಗಳು ಇರುತ್ತವೆ. ಇವರು ವೇದ, ಆಗಮ ಇತ್ಯಾದಿ ದರ್ಶನ ಶಾಸ್ತ್ರಗಳ ಪಾರಂಗತರು. ಸಂಸ್ಕೃತ ಭಾಷಾ ಪ್ರವೀಣರು. ಮಡಿವಂತಿಕೆಯು ಇವರ ಪ್ರಮುಖ ಆಚರಣೆ. ನಿರ್ದಿಷ್ಟ ಸಮಯದಲ್ಲಿ ಮಾತ್ರ ಆಹಾರಾದಿಗಳ ಸೇವನೆ ಮಾಡುತ್ತಾರೆ. ನಿರ್ದಿಷ್ಟವಾದ ಗುರುಕುಲದಲ್ಲಿ ಇವರ ವ್ಯಾಸಂಗ. ಇವರು ಸ್ಪೃಶ್ಯ–ಅಸ್ಪೃಶ್ಯ ಭಾವನೆ­ಯನ್ನು ಪಾಲಿ­ಸು­ವವರು.

ಜಪ-, ತಪ, ಅನು­ಷ್ಠಾನದಲ್ಲಿ ನಿಷ್ಣಾತರು. ಅಸ್ಖಲಿತ ವಾಣಿಯಿಂದ ಜನಮೆಚ್ಚುಗೆ ಪಡೆಯುವ ವಿಧಾನ ಇವರದ್ದು. ನಿರರ್ಗಳವಾಗಿ ಅಧ್ಯಾತ್ಮ ಪ್ರವಚನಗಳನ್ನು ನೀಡುತ್ತಾರೆ. ಇವರು ವಾಗ್ಮಿ­ಗಳು. ಉತ್ಸವಾದಿಗ­ಳಿಂದ ಕೀರ್ತಿ-ಪ್ರತಿಷ್ಠೆಯನ್ನು ನಿರೀಕ್ಷಿಸುವವರು. ದೀಕ್ಷೆ, ಉಪನಯನಾದಿಗಳಿಂದ ತಮ್ಮ ಶಿಷ್ಯ ಪರಂಪರೆಯನ್ನು ಮುಂದುವರಿಸು­ವರು. ಗುರು­ವೃಂದವು ಸಮಾಜದಲ್ಲಿ ಸ್ವಾಮಿಗ­ಳೆಂದು ಗುರು­ತಿಸಿಕೊಂಡು ಬಂದವರಾಗಿರುತ್ತಾರೆ.

ಗುರುಗಳ ಮತ್ತು ಸ್ವಾಮಿಗಳ ವ್ರತಾಚರಣೆಗಳು ಭಾಗಶಃ ಒಂದೇ ಆಗಿರುತ್ತವೆ. ಇವರಲ್ಲಿ ಸಂಸಾರಿಗಳೂ ಇದ್ದಾರೆ, ನಿಸ್ಸಂಸಾರಿಗಳೂ ಇದ್ದಾರೆ. ಇವರಲ್ಲಿ ಗುರುವರ್ಗ, ಪುತ್ರವರ್ಗ ಮತ್ತು ವಿರಕ್ತವರ್ಗಗ­ಳೆಂಬ ಪ್ರಭೇದಗಳಿವೆ. ಪರಜಾತಿಯವರು ಇವ­ರಿಗೆ ನಡೆದುಕೊಳ್ಳುವ­ವರಾದರೂ ಹೆಚ್ಚಾಗಿ ಸ್ವಜಾತಿಯವರೇ ಇವರ ಭಕ್ತರು. ಗುರು­ವರ್ಗ­ದವರಿಗೆ ವೀರಭದ್ರ ಮತ್ತು ಶಿವನೇ ದೈವ. ಸ್ಥಾವರಾರಾಧನೆಗೆ ಒಲಿದಿರುವ ಇವರು ಶಿವೋ­ಪಾಸನೆ ಮಾಡುವರು.

‘ಸಿದ್ಧಾಂತ ಶಿಖಾಮಣಿ’ ಇವರ ಧಾರ್ಮಿಕ ಗ್ರಂಥ. ವೈದಿಕ ಪರಂಪರೆಯ ಸ್ವಾಮಿಗಳಿಗೆ ಕೃಷ್ಣನೇ ಆರಾಧ್ಯ­ದೈವ. ಇವರಿಗೆ ಹರಿಸರ್ವೋತ್ತಮ. ‘ಭಗವ­ದ್ಗೀತೆ’, ‘ರಾಮಾ­ಯಣ’ ಮತ್ತು ‘ಮಹಾಭಾರತ’ ಇವರ ಪ್ರಮುಖ ಗ್ರಂಥಗಳು. ವಿರಕ್ತವರ್ಗ­ದವ­ರೆಂದು ಗುರುತಿಸಿಕೊಳ್ಳುವವರಿಗೆ ಅಲ್ಲಮ, ಮರು­ಳಸಿದ್ಧ, ತೋಂಟದ ಸಿದ್ಧಲಿಂಗ ಮೊದಲಾದ ಅನು­ಭಾವಿ­ಗಳು ಆದರ್ಶಪ್ರಿಯರು. ೧೨ನೇ ಶತ­ಮಾನ­ಕ್ಕಿಂತ ಮುನ್ನ ಧಾರ್ಮಿಕ ಸಮಾನತೆ ಇರಲಿಲ್ಲ.

ಲಿಂಗ ಸಮಾನತೆಯೂ ಇರಲಿಲ್ಲ. ಅದಕ್ಕಾಗಿ ಅಂದಿನ ಅನುಭವ ಮಂಟಪವು ಅಂಗದಮೇಲೆ ಇಷ್ಟಲಿಂಗ­ವನ್ನು ಕಟ್ಟುವ ಪರಂಪರೆಯನ್ನು ಆರಂಭಿಸಿತು. ಶಿವಲಿಂಗವು (ಸ್ಥಾವರ) ಶಿವೋಪಾ­ಸ­ಕ­ರಿಗೆಲ್ಲ ಉಪಾ­ಸನಾವಸ್ತು. ಶರಣ ಪರಂಪ­ರೆಯ­ವರಿಗೆ ಇಷ್ಟಲಿಂಗವು ಶಿವಯೋಗ ಸಾಧನ. ಶಿವಾ­ನುಭವದಲ್ಲಿ ಬರುವ ಶರೀರಕ್ಕೆ ಸಂಬಂಧಿ­ಸಿದ ನವಲಿಂಗಗಳ ಆರಾಧನೆ.

(ಆಚಾರಲಿಂಗ, ಗುರು­ಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದ­ಲಿಂಗ, ನಿಷ್ಕಲಲಿಂಗ, ನಿಶ್ಶೂನ್ಯಲಿಂಗ, ಪ್ರಾಣಲಿಂಗ ಮತ್ತು ನಿರಂಜನ­ಲಿಂಗ ಇವೇ ನವಲಿಂಗಗಳು). ವಚನ­ಗಳೇ ಇವರ ಸಂವಿಧಾನ. ಸ್ಥಾವರ ಆರಾಧನೆಗಿಂತ ‘ಕಾಯವೇ ಕೈಲಾಸ’ ಮತ್ತು ‘ಕಾಯಕವೇ ಕೈಲಾಸ’ ಎಂಬ ಉದಾತ್ತ ತತ್ತ್ವ.

ಕಾಯಕವೇ ಕೈಲಾಸ ಎಂಬ ನುಡಿಯಲ್ಲಿ ಆಧ್ಯಾತ್ಮಿಕತೆ ಇದೆ. ಬಸವಣ್ಣ­ನವರ ವಚನ ಇಂತಿದೆ:
ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ.
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.
‘ಕಾಯಕವೇ ಕೈಲಾಸ’ ಎಂಬ ವಾಣಿಯಲ್ಲಿ ಕಾರ್ಯತತ್ಪರತೆ ಇದೆ. ಬದುಕಿಗೆ ಎರಡೂ ಬೇಕು.

3)ದಾರ್ಶನಿಕರು: ಸನ್ಯಾಸಿಗಳೂ ಅಲ್ಲದ ಗುರು (ಸ್ವಾಮಿ)ಗಳೂ ಅಲ್ಲದ ಪರಂಪರೆಯೆಂದರೆ, ದಾರ್ಶನಿಕ ಪರಂಪರೆ. ಭಕ್ತಿ-, ಜ್ಞಾನ,- ಕ್ರಿಯೆಗಳು ಇವರ ಬದುಕಿನ ತಳಹದಿ. ಸತಿವಿಡಿದು ನಿರ್ವಾ­­ಣಸತಿಯನ್ನು ಕಾಣುವ ಬಸವಣ್ಣನವರು, ಸಂಸಾರವನ್ನು ತ್ಯಜಿಸಿ ಅರಮನೆಯ ವಿಲಾಸವನ್ನು ತಿರಸ್ಕರಿಸಿ ಮಹಾಜ್ಞಾನಿಯಾದ ಗೌತಮ, ಸಕ­ಲೈಶ್ವರ್ಯವನ್ನು ತ್ಯಾಗಮಾಡಿ ಅಹಿಂಸಾಮೂರ್ತಿ­ಯಾದ ಮಹಾವೀರರು, ಜಾತಿ­ವ್ಯವಸ್ಥೆ ವಿರುದ್ಧ ಸಿಡಿದೆದ್ದ ಸಂತ ಕಬೀರ, ರಾಮಾನು­ಜಾಚಾರ್ಯ, ಮಧ್ವಾಚಾರ್ಯರು, ಸಮರ್ಥ­ ರಾಮ­ದಾಸ, ಕನಕ­ದಾಸ, ಪುರಂದರದಾಸ, ವಾಲ್ಮೀಕಿ, ಗುರು­ನಾನಕ, ಬಂದೇನವಾಜ್, ಕಲಬುರ್ಗಿಯ ಶರಣ ಬಸವೇಶ್ವರರು, ರಾಷ್ಟ್ರಪಿತ ಗಾಂಧೀಜಿ, ಜಾಗತಿಕ ಪ್ರೀತಿಯನ್ನು ತೋರಿದ ಏಸುಕ್ರಿಸ್ತ, ಕರ್ತವ್ಯಪ್ರಜ್ಞೆ­ಯನ್ನು ಎಚ್ಚರಿಸಿದ ಪ್ರವಾದಿ ಪೈಗಂಬರ, ಭಾರ­ತೀಯ ತತ್ತ್ವಜ್ಞಾನದ ವಿವೇಕಾನಂದ ಮೊದಲಾ­ದವರು ದಾರ್ಶನಿಕ ಪರಂಪರೆಗೆ ಸೇರಿದವರು.

ಆಧ್ಯಾತ್ಮಿಕ ಜಿಜ್ಞಾಸೆ­ಯೊಂದಿಗೆ ಸಾಮಾಜಿಕ ಪರಿವರ್ತನೆ ಇವರ ಮೂಲ ಧ್ಯೇಯ. ಸಮಾನತೆ, ಮಾನವೀಯತೆ ಹಾಗೂ ವೈಚಾರಿಕತೆ ಇವರ ತತ್ತ್ವಗಳು. ಸಮಾಜ ಸುಧಾರಣೆಗಾಗಿ ಕ್ರಾಂತಿ. ಕ್ರಾಂತಿಯ ಮುಖಾಂತರ ಶಾಂತಿ. ಅರಾಜಕತೆ, ಅಸ್ಪೃಶ್ಯತೆ, ಅಮಾನವೀಯತೆ, ಕ್ರೌರ್ಯ ಮತ್ತು ಮೌಢ್ಯತೆ ವಿರುದ್ಧ ಇವರ ಸಮರ. ಸಾಮಾಜಿಕ ನ್ಯಾಯ­ದೊಂದಿಗೆ ಸಮಸಮಾಜ ರಚನೆಯೇ ಇವರ ಆತ್ಯಂತಿಕ ಗುರಿ.

ಇವರು ಎಸಗಿದ, ಎಸಗುವ, ಸಮಾಜಮುಖಿ ಕಾರ್ಯಗಳು  ಸನ್ಯಾಸತ್ವ ಮತ್ತು ಗುರುತ್ವಕ್ಕಿಂತ ದೊಡ್ಡವು. ಸನ್ಯಾಸತ್ವದಲ್ಲಿನ ಹಟ, ಒಳಿತನ್ನು ಎಸಗುವ ಛಲ ಮತ್ತು ಗುರುತ್ವವು ಬೋಧಿಸುವ ಆಧ್ಯಾತ್ಮಿಕ ಜಿಜ್ಞಾಸೆಯೊಂದಿಗೆ ದಾರ್ಶನಿಕರಲ್ಲಿ ಪರಿವರ್ತನಮುಖಿ ಪ್ರಯೋಗಗಳು. ದಾರ್ಶನಿಕರ ವ್ಯಾಪ್ತಿಯು ದೇಶ-ಭಾಷೆಗಳನ್ನು ಮೀರಿದುದಾ­ಗಿದ್ದು, ಕೋಟಿಗಟ್ಟಲೆ ಅನುಯಾಯಿಗಳು ಅವರ ತತ್ವಾದರ್ಶವನ್ನು ಹಿಂಬಾಲಿಸುತ್ತಾರೆ.

ಬಸವಣ್ಣನ­ವರು ಒಬ್ಬ ಮಹಾನ್ ದಾರ್ಶನಿಕರು, ಪರಿ­ವರ್ತಕರು. ಅವರ ಸಿದ್ಧಾಂತವನ್ನು ಪಾಲಿಸುವ ಅನುಯಾಯಿಗಳ ಸಂಖ್ಯೆ ಅಗಣಿತ. ಅವರು ಮಾಡಿದ ಮಾನವೀಯ ಪ್ರಯೋಗಗಳು ಸಾರ್ವ­ಕಾಲಿಕ. ಬಸವಣ್ಣ ಯಾರ ಅನುಯಾಯಿಯೂ ಅಲ್ಲ; ನಾವೆಲ್ಲರೂ ಅವರ ಅನುಯಾಯಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT