ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆ ಬೆಳೆ ರಕ್ಷಿಸಿ

Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ರಾಯಚೂರು ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆಗೆ ದುಂಡಾಣು ರೋಗ ಕಾಣಿಸಿಕೊಂಡಿದೆ. ಈ ಸಂಗತಿಯೇ ಆತಂಕ ಹುಟ್ಟಿಸುತ್ತದೆ. ಈ ರೋಗ ಹೊಸದಲ್ಲ. ದಾಳಿಂಬೆ ಹೆಚ್ಚಾಗಿ ಬೆಳೆಯುವ ಉತ್ತರ ಕರ್ನಾಟಕದ ಹಾಗೂ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ರೈತರು ಕಳೆದ ಒಂದು ದಶಕದ ಅವಧಿಯಲ್ಲಿ ದುಂಡಾಣು ರೋಗದಿಂದ ಸಾಕಷ್ಟು ನಷ್ಟ ಅನುಭವಿಸಿ­ದ್ದಾರೆ. ಅನುಭವಗಳಿಂದ ಪಾಠ ಕಲಿತಿದ್ದಾರೆ.

ಇತ್ತೀಚೆಗೆ ರಾಯಚೂರು ಸಮೀಪದ ಕಡಗಂ ದೊಡ್ಡಿ ಎಂಬ ಗ್ರಾಮದ ರೈತರೊಬ್ಬರು ರೋಗ ನಿಯಂತ್ರಣಕ್ಕೆ ಬಾರದೆ ಎಂಟು ಎಕರೆಯಲ್ಲಿ ಬೆಳೆದಿದ್ದ 3000ಕ್ಕೂ ಹೆಚ್ಚು ದಾಳಿಂಬೆ ಗಿಡ­ಗಳನ್ನು ಕಡಿದು ಸುಟ್ಟು ಹಾಕಿದ್ದಾರೆ. ಈ ಪ್ರಕರಣ ರೈತನ ಹತಾಶೆ, ಅಸಹಾಯಕತೆಗೆ ಹಿಡಿದ ಕನ್ನಡಿ.

ದಾಳಿಂಬೆ ಮಾತ್ರವಲ್ಲ, ಅನೇಕ ಬೆಳೆಗಳಿಗೆ ಬರುವ ವಿಚಿತ್ರ ರೋಗಗಳನ್ನು ನಿಯಂತ್ರಿಸಲು ಸಾಕಷ್ಟು ಹಣ ಖರ್ಚು ಮಾಡಿ ಸೋತ ರೈತರು ಆತ್ಮಹತ್ಯೆಗೆ ಶರಣಾದ ಪ್ರಕರಣಗಳಿಗೆ ಲೆಕ್ಕವಿಲ್ಲ. ಇಷ್ಟಾದರೂ ರೋಗಗಳ ನಿಯಂತ್ರಣಕ್ಕೆ ರೈತರಿಗೆ ನೆರವಾಗುವ ಒಂದು ವ್ಯವಸ್ಥೆ ಇಲ್ಲ. ಕೃಷಿ, ತೋಟಗಾರಿಕೆ ಇಲಾಖೆಗಳು, ವಿಶ್ವವಿದ್ಯಾಲಯಗಳ ತಜ್ಞರು ರೈತರ ನೆರವಿಗೆ ತಕ್ಷಣ ಧಾವಿಸುತ್ತಿಲ್ಲ. ಕಂಗೆಟ್ಟ ರೈತರು ತಮಗೆ ತೋಚಿದ ಕ್ರಮಗಳನ್ನು ಕೈಗೊಂಡು ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಈ ಬೆಳವಣಿಗೆ ದುರದೃಷ್ಟಕರ.

ಜಾಗತೀಕರಣದ ನಂತರ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ವಿದೇಶಿ ಬೇಡಿಕೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಬೆಳೆಯುವ ದ್ರಾಕ್ಷಿ, ಮಾವು, ದಾಳಿಂಬೆ ಮತ್ತಿತರ ಹಣ್ಣುಗಳಿಗೆ ಅನೇಕ ದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಸಾವಿರಾರು ರೈತರು ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟು ಹಣ್ಣು, ತರಕಾರಿಗಳನ್ನು ಬೆಳೆದು ಲಾಭ ಗಳಿಸುತ್ತಿದ್ದಾರೆ.

ಇಂತಹ ಯಶಸ್ವಿ ರೈತರನ್ನು ಮಾದರಿಯಾಗಿ­ಟ್ಟು­ಕೊಂಡು ಹಣ್ಣು ಬೆಳೆಯಲು  ಮುನ್ನುಗ್ಗುವ ಸಾಮಾನ್ಯ ರೈತರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ವಿಫಲರಾಗಿ ನಷ್ಟಕ್ಕೆ ತುತ್ತಾಗುತ್ತಾರೆ. ರಾಷ್ಟ್ರೀಯ ತೋಟಗಾರಿಕೆ ಮಂಡಳಿ ಅಸ್ತಿತ್ವಕ್ಕೆ ಬಂದ ಮೇಲೆ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ.

ಈಗ ರೈತರಿಗೆ ಬ್ಯಾಂಕು­ಗಳಿಂದ ಸಾಲ ಹಾಗೂ ಸರ್ಕಾರದಿಂದ ಸಹಾಯ ಧನ ಸಿಗುತ್ತಿದೆ. ಆದರೆ ರೋಗ ನಿಯಂತ್ರಣದ ವಿಷಯದಲ್ಲಿ ಸಕಾಲಿಕ ನೆರವು ಅಷ್ಟಾಗಿ ಸಿಗುತ್ತಿಲ್ಲ ಎಂದು ದೂರು ಇದ್ದೇ ಇದೆ.  ದುಂಡಾಣು ರೋಗ ತಗುಲಿದ ಮೇಲೆ ಅದನ್ನು ನಿಯಂತ್ರಣ ಮಾಡುವುದು ಕಷ್ಟ ಎಂಬುದು ಗೊತ್ತಿಲ್ಲದ ರೈತರಿಗೆ ನಷ್ಟ ತಪ್ಪಿದ್ದಲ್ಲ. ಹೊಸದಾಗಿ ದಾಳಿಂಬೆ ಬೆಳೆಯುವ ರೈತರಿಗೆ ಪ್ರತಿ ಹಂತದಲ್ಲೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕುರಿತು ತಿಳಿವಳಿಕೆ ನೀಡುವ ವ್ಯವಸ್ಥೆ ಇರಬೇಕು.

ಜೊತೆಗೆ ರೋಗ ನಿಯಂತ್ರಣಕ್ಕೆ ಸಾವಯವ ಪದ್ಧತಿ ಸೇರಿದಂತೆ ಅನ್ಯ ಮಾರ್ಗಗಳನ್ನೂ ಅನ್ವೇಷಿಸಬೇಕು. ಈ ವಿಷಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಮತ್ತು ವಿಶ್ವವಿದ್ಯಾಲಯಗಳ ಪಾತ್ರ ದೊಡ್ಡದು. ಗುಣ ಮಟ್ಟದ ದಾಳಿಂಬೆ ಬೆಳೆಯುವ ಪ್ರದೇಶದ ರೈತರಿಗೆ ಹೆಚ್ಚಿನ ತಾಂತ್ರಿಕ ನೆರವು ಸಿಗಬೇಕು. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಆಸಕ್ತಿ ತೋರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT