ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಗಳಿಂದ ನಲುಗಿದ ಟರ್ಕಿ ಐಎಸ್ ವಿರೋಧ ತೀವ್ರವಾಗಲಿ

Last Updated 1 ಜುಲೈ 2016, 19:30 IST
ಅಕ್ಷರ ಗಾತ್ರ

ಇತ್ತೀಚಿನ ಒಂದೆರಡು ವರ್ಷಗಳಲ್ಲಿ  ಟರ್ಕಿ ಅನೇಕ ಭಯೋತ್ಪಾದನಾ  ದಾಳಿಗಳನ್ನು ಎದುರಿಸಿದೆ. ಕಳೆದ ಒಂದೇ ವರ್ಷದಲ್ಲಿ 16 ಭಯೋತ್ಪಾದನಾ ದಾಳಿಗಳನ್ನು ರಾಷ್ಟ್ರ ಕಂಡಿದೆ.  ಈಗ ಮಂಗಳವಾರ ರಾತ್ರಿ ಟರ್ಕಿಯ ಇಸ್ತಾಂಬುಲ್ ವಿಮಾನ ನಿಲ್ದಾಣದ ಮೇಲೆ  ನಡೆದ ಉಗ್ರರ ದಾಳಿ, ಟರ್ಕಿ ಎದುರಿಸುತ್ತಿರುವ ಅಪಾಯಕಾರಿ ಸ್ಥಿತಿಯನ್ನು ಮತ್ತೊಮ್ಮೆ ನೆನಪಿಸಿದೆ. ಟರ್ಕಿಯ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ನೀಡುವಂತಹದ್ದು ಇದು.  ರಾಷ್ಟ್ರದ ವರಮಾನಕ್ಕೆ ಇದರಿಂದ ಭಾರಿ ಹೊಡೆತ ಬೀಳುತ್ತದೆ. ರಷ್ಯಾ ಜೊತೆಗಿನ ಸಂಘರ್ಷದಿಂದ ಈಗಾಗಲೇ ಟರ್ಕಿ ಪ್ರವಾಸೋದ್ಯಮಕ್ಕೆ ಹಾನಿಯಾಗಿದೆ.

ಏಕೆಂದರೆ ತನ್ನ ಪ್ರಜೆಗಳು ರಜೆ ಕಳೆಯಲು ಟರ್ಕಿಗೆ ಹೋಗುವುದನ್ನು ರಷ್ಯಾ  ಈವರೆಗೆ ನಿಷೇಧಿಸಿತ್ತು.   ಈಗಷ್ಟೇ ಅದು ಆ ನಿಷೇಧ ಹಿಂತೆಗೆದುಕೊಂಡಿದೆ. ಕಳೆದ ವರ್ಷ ರಷ್ಯನ್ ಯುದ್ಧ ವಿಮಾನವನ್ನು ಟರ್ಕಿ ಯುದ್ಧ ವಿಮಾನ ಹೊಡೆದುರುಳಿಸಿದ್ದಕ್ಕೆ ಸಂಬಂಧಿಸಿದಂತೆ ಟರ್ಕಿ ಅಧ್ಯಕ್ಷ  ಎರ್ಡೋಗನ್ ಅವರು ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪತ್ರ ಬರೆದು ಕ್ಷಮೆ ಯಾಚಿಸಿದ ನಂತರ ಈ ಬೆಳವಣಿಗೆಯಾಗಿದೆ. ಭಯೋತ್ಪಾದನೆ, ನಿರಾಶ್ರಿತರ ಹರಿವು ಹಾಗೂ  ರಾಜಕೀಯ ತಳಮಳಗಳನ್ನು ಟರ್ಕಿ  ಅನುಭವಿಸುತ್ತಿದೆ. ಆದರೆ  ಐಎಸ್ ವಿರುದ್ಧ  ಹೆಚ್ಚು ತೀವ್ರವಾಗಿ ಕ್ರಮ ಕೈಗೊಳ್ಳಲು ಇಸ್ತಾಂಬುಲ್ ವಿಮಾನ ನಿಲ್ದಾಣದಲ್ಲಿನ ರಕ್ತಪಾತ ಎಚ್ಚರಿಕೆ ಗಂಟೆಯಾಗಬೇಕು.  ಈ  ಭಯೋತ್ಪಾದನಾ ದಾಳಿಯಲ್ಲಿ 42 ಜನರು ಸತ್ತು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇಸ್ತಾಂಬುಲ್ ನಗರದ ಮೇಲೆ ನಡೆಯುತ್ತಿರುವ ನಾಲ್ಕನೇ ದಾಳಿ ಇದು. ಯಾವ ತಂಡವೂ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಆದರೆ  ಈ ದಾಳಿಯ ವಿಧಾನ ನೋಡಿದರೆ ಇದು ಇಸ್ಲಾಮಿಕ್ ಸ್ಟೇಟ್  (ಐಎಸ್) ಕೃತ್ಯ ಎಂದು ಹೇಳಲಾಗುತ್ತಿದೆ. ನಗರ ಕೇಂದ್ರಿತ ಕಾರ್ಯಾಚರಣೆಯ ಅತ್ಯಾಧುನಿಕತೆಯನ್ನು ಈ ದಾಳಿ ಪ್ರದರ್ಶಿಸಿದೆ. ಈ ಬಗೆಯ ಭಯೋತ್ಪಾದನೆ ಸಾಧ್ಯತೆಯ ಬಗ್ಗೆ ಪಾಶ್ಚಿಮಾತ್ಯ ಭದ್ರತಾ ಸಂಸ್ಥೆಗಳು ಹಿಂದಿನಿಂದಲೂ ಆತಂಕ ವ್ಯಕ್ತಪಡಿಸುತ್ತಲೇ ಬಂದಿವೆ.

ಇರಾಕ್ ಹಾಗೂ ಸಿರಿಯಾಗಳಲ್ಲಿ ಅನೇಕ ನೆಲೆಗಳನ್ನು ಕಳೆದುಕೊಂಡ ನಂತರ ಐಎಸ್ ಉಗ್ರರಲ್ಲಿ ಕುಸಿಯುತ್ತಿರುವ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಈ ದಾಳಿ ಹೊಂದಿರಬಹುದು ಎನ್ನಲಾಗಿದೆ. ತೀರಾ ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಒತ್ತಡ ಅಧಿಕವಾದಾಗ   ಐಎಸ್ ವಿರುದ್ಧದ ನಿಲುವನ್ನು ಟರ್ಕಿ ತಾಳಿದೆ.  ಟರ್ಕಿ ಅಧ್ಯಕ್ಷ ಎರ್ಡೋಗನ್ ಅವರು ಪ್ರತಿಪಾದಿಸಿಕೊಂಡು ಬಂದ ಸಿರಿಯಾ ನೀತಿ, ಪಶ್ಚಿಮ ಏಷ್ಯಾದಲ್ಲಿ ಉಗ್ರರಿಗೆ ಅನುಕೂಲ ಮಾಡಿಕೊಟ್ಟಿದೆ ಎಂಬುದು ವಿಷಾದನೀಯ.

ವಾಸ್ತವವಾಗಿ ಸಿರಿಯಾ ಅಧ್ಯಕ್ಷ  ಬಷರ್ ಅಲ್ ಅಸ್ಸಾದ್ ಪದಚ್ಯುತಿ ಟರ್ಕಿಯ ಆದ್ಯತೆಯಾಗಿತ್ತು.   ಸಿರಿಯಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಸ್ಸಾದ್‌ರ ಪ್ರತಿಸ್ಪರ್ಧಿಗಳ ಜೊತೆ ಟರ್ಕಿ ಒಂದಾಗಿದೆ. ಐಎಸ್ ಸೇರಿದಂತೆ  ಅಸ್ಸಾದ್‌ರ ಅನೇಕ ವಿರೋಧಿ ಗುಂಪುಗಳಿಗೆ ಟರ್ಕಿ ಪರೋಕ್ಷ ಬೆಂಬಲ ನೀಡಿದೆ.  ಕುರ್ದರಿಗೆ  ತೀವ್ರ ವಿರೋಧಿಗಳಾಗಿದ್ದಾರೆಂದು ಐಎಸ್‌ಗೆ ಟರ್ಕಿ ಬೆಂಬಲ ನೀಡಿಕೊಂಡು ಬಂದಿದೆ.

ಟರ್ಕಿಯ ಸರ್ಕಾರಿ ಪಡೆಗಳ ಜೊತೆಗೆ ಕಾದಾಟದಲ್ಲಿ ತೊಡಗಿರುವ ಕುರ್ದ್ ಉಗ್ರರನ್ನು  ದುರ್ಬಲಗೊಳಿಸಲು ಐಎಸ್‌ನಲ್ಲಿ ಅವಕಾಶವಿರುವುದಾಗಿ ಟರ್ಕಿ ಭಾವಿಸಿದ್ದು ಈಗ ಅದಕ್ಕೇ ತಿರುಗುಬಾಣವಾಗಿ ಪರಿಣಮಿಸಿದೆ.  ಕುರ್ದ್‌ರನ್ನು ನಿಯಂತ್ರಿಸುವ ಭರದಲ್ಲಿ ಐಎಸ್ ಬೆದರಿಕೆಯನ್ನು   ಟರ್ಕಿ  ಕಡೆಗಣಿಸಿತು. ಐಎಸ್ ನಿಯಂತ್ರಿಸುವ ಅಂತರರಾಷ್ಟ್ರೀಯ ಯತ್ನಗಳಿಗೆ ಹೆಚ್ಚಿನ ಸಹಕಾರವನ್ನೂ ನೀಡಲಿಲ್ಲ. ಆದರೆ ಇಂತಹ ಅಲ್ಪಾವಧಿ ನೀತಿಗಳು ದೀರ್ಘಾವಧಿಯಲ್ಲಿ ಅಪಾಯಕಾರಿ ಎಂಬುದನ್ನು ಟರ್ಕಿ ಈಗಲಾದರೂ ಮನಗಾಣಲಿ.  ಐಎಸ್ ನಿಯಂತ್ರಿಸುವ ಪ್ರಯತ್ನಗಳಲ್ಲಿ ಟರ್ಕಿ ಹೆಚ್ಚು ಕಠಿಣವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT