ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ನಗರ ಬಂದ್‌ ಯಶಸ್ವಿ

ಅಡಿಕೆ, ತೆಂಗು ಧಾರಣೆ ಕುಸಿತ ಖಂಡಿಸಿ ರೈತರಿಂದ ಪ್ರತಿಭಟನೆ
Last Updated 28 ಜೂನ್ 2016, 11:13 IST
ಅಕ್ಷರ ಗಾತ್ರ

ದಾವಣಗೆರೆ:  ಅಡಿಕೆ ಹಾಗೂ ತೆಂಗಿಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಅಡಿಕೆ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ದಾವಣಗೆರೆ ನಗರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರದಲ್ಲಿ ಬೆಳಿಗ್ಗೆಯಿಂದಲೇ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದವು. ಬಹುತೇಕ ಕಡೆ ಅಂಗಡಿ–ಮುಂಗಟ್ಟುಗಳು ಮುಚ್ಚಿದ್ದವು. ಆದರೆ, ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸಿದರು. ಆಟೊ ಸಂಚಾರ ಎಂದಿನಂತೆ ಸಾಗಿತ್ತು. ಕೆಲವು ಖಾಸಗಿ ಶಾಲೆಗಳನ್ನು ಹೊರತುಪಡಿಸಿದರೆ ಬಹುತೇಕ ಶಾಲೆ– ಕಾಲೇಜುಗಳು ಕಾರ್ಯನಿರ್ವಹಿಸಿದವು.

ಬೆಳಿಗ್ಗೆ 6 ಗಂಟೆ ಹೊತ್ತಿಗೆ ಕೆಎಸ್‌ಆರ್‌ಟಿಸಿ ಹೊಸ ಬಸ್‌ನಿಲ್ದಾಣದ ಬಳಿ ಸೇರಿದ ಕೆಲವು ರೈತರು ಬಸ್‌ ಸಂಚಾರವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ನಿಲ್ದಾಣದ ಎದುರು ಪಿ.ಬಿ. ರಸ್ತೆಯಲ್ಲಿ ಬೈಕ್‌ಗಳನ್ನು ನಿಲ್ಲಿಸಿ ವಾಹನ ಸಂಚಾರ ತಡೆದರು. ಕೆಲವು ರೈತರು ಹಸಿರು ಬಾವುಟ ಹಿಡಿದು ಬೈಕ್‌, ಟ್ರ್ಯಾಕ್ಸ್‌ನಲ್ಲಿ ನಗರದ ವಿವಿಧೆಡೆ ಸಂಚರಿಸಿ ಅಂಗಡಿ–ಮುಂಗಟ್ಟುಗಳನ್ನು ತೆರೆಯದಂತೆ ಮನವಿ ಮಾಡಿದರು. ಕೆಲವೆಡೆ ತೆರೆದಿದ್ದ ಅಂಗಡಿಗಳನ್ನೂ ಬಲವಂತವಾಗಿ ಮುಚ್ಚಿಸಿದರು. ಅನಾ ಹುತ ನಡೆದರೆ ಎಂದು ಹೆದರಿ ಕೆಲವರು ವ್ಯಾಪಾರಿಗಳು ಅಂಗಡಿಯ ಬಾಗಿಲು ತೆರೆಯದೇ ವಾಪಸ್ ತೆರಳಿದರು.

ಪಿ.ಬಿ. ರಸ್ತೆ, ಅಶೋಕ ರಸ್ತೆ, ಎ.ವಿ.ಕೆ ಕಾಲೇಜು ರಸ್ತೆ, ಮಂಡಿಪೇಟೆ, ಕೆ.ಆರ್‌. ಮಾರ್ಕೆಟ್‌ ಸೇರಿದಂತೆ ಬಹುತೇಕ ಅಂಗಡಿಗಳು ಮುಚ್ಚಿರುವುದು ಕಂಡು ಬಂತು. ಮಾರ್ಕೆಟ್‌ ಪ್ರದೇಶಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಮಾತ್ರ ಎಂದಿನಂತೆ ಹೂವು, ಹಣ್ಣು ಮಾರಾಟ ಮಾಡಿದರು. ಎಪಿಎಂಸಿಗೆ ಸೋಮವಾರ ರಜೆ ಆಗಿ ದ್ದರಿಂದ ತರಕಾರಿ ವ್ಯಾಪಾರವೂ ನಡೆಯಲಿಲ್ಲ. ಮಾರ್ಕೆಟ್‌ ಪ್ರದೇಶಗಳು ಬಿಕೋ ಎನ್ನುತ್ತಿದ್ದವು.

ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಆದರೆ, ಬಂದ್‌ ಹಿನ್ನೆಲೆ ಯಲ್ಲಿ ಜನರೇ ಕಚೇರಿಯತ್ತ ಸುಳಿಯಲಿಲ್ಲ. ಆಟೊ ಸಂಚಾರ ಸ್ಥಗಿತ ಗೊಳಿಸುವಂತೆ ರೈತರು ಮನವಿ ಮಾಡಿ ದರೂ ಕಿವಿಗೊಡದ ಚಾಲಕರು ಹೆಚ್ಚಿನ ಹಣ ಪಡೆದು ಪ್ರಯಾಣಿಕರನ್ನು ಕರೆದು ಕೊಂಡು ಹೋಗುತ್ತಿರುವುದು ಕಂಡು ಬಂತು.

ಪರದಾಡಿದ ಪ್ರಯಾಣಿಕರು:  ನಗರದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು. ಹೊರ ಊರುಗಳಿಂದ ಬಂದ ಬಸ್‌ಗಳು ರಿಂಗ್‌ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದವು. ಅಲ್ಲಿಂದ ಮನೆಗಳಿಗೆ ತೆರಳಲು ಆಟೊಗಳ ನೆರವು ಪಡೆಯಬೇಕಾಯಿತು. ಹಲವರು ಹೊರ ಊರಿಗೆ ಹೋಗಲಾಗದೇ ವಾಪಸ್‌ ಮನೆಯತ್ತ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ನಡೆದುಕೊಂಡು ಶಾಲಾ– ಕಾಲೇಜುಗಳಿಗೆ ತೆರಳುತ್ತಿರು ವುದು ಕಂಡು ಬಂತು. ಸಂಜೆ 4ರ ಬಳಿಕ ಹಲವು ವ್ಯಾಪಾರಿಗಳು ಅಂಗಡಿಗಳನ್ನು ತೆರೆದರು. ಬಸ್‌ ಸಂಚಾರ ಆರಂಭಗೊಂಡಿತು.

ದೆಹಲಿಯಲ್ಲೂ ಹೋರಾಟಕ್ಕೆ ಸಜ್ಜಾಗಿ: ಮುನಿಯಪ್ಪ
ದಾವಣಗೆರೆ: ‘ಕೇಂದ್ರ ಸರ್ಕಾರ ಆಮದು ನೀತಿಯನ್ನು ಬದಲಾಯಿಸಿ ಅಡಿಕೆ ಬೆಳೆಗೆ ಕನಿಷ್ಠ ₹ 40 ಸಾವಿರ ಬೆಲೆ ದೊರಕಿಸಿಕೊಡದಿದ್ದರೆ ದೆಹಲಿಯಲ್ಲೂ ಹೋರಾಟ ನಡೆಸಲು ಅಡಿಕೆ ಹೆಚ್ಚು ಬೆಳೆಯುವ 13 ಜಿಲ್ಲೆಗಳ ರೈತರು ಸಿದ್ಧರಾಗಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುನ್ನೂರು ಮುನಿಯಪ್ಪ ಕರೆ ನೀಡಿದರು.

ಹೊಸ ಬಸ್‌ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದು ಗಾಂಧಿ ವೃತ್ತದಲ್ಲಿ ಧರಣಿ ಕುಳಿತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಡಿಕೆಗೆ ₹ 90 ಸಾವಿರ ಬೆಲೆ ಬೇಕು ಎಂದು ನಾವು ಕೇಳುವುದಿಲ್ಲ. ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಬೆಲೆ ಸ್ಥಿರವಾಗಿರಲು ಆಮದು ನಿರ್ಬಂಧಿಸಿ, ರಫ್ತಿಗೆ ಉತ್ತೇಜನ ನೀಡಬೇಕು. ದಾವಣಗೆರೆ ಜಿಲ್ಲೆ ಒಂದರಲ್ಲೇ 5.84 ಲಕ್ಷ ಕ್ವಿಂಟಲ್‌ ಅಡಿಕೆ ಬೆಳೆಯಲಾಗುತ್ತಿದೆ. ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುವ ಮೂಲಕ ಬೆಳೆಗಾರರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆಯಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪರ್ಯಾಯ ಬೆಳೆ ಬೆಳೆಯುವಂತೆ ರೈತರಿಗೆ ಸಲಹೆ ನೀಡಿರುವ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ ಅವರು 100ಕ್ಕೂ ಹೆಚ್ಚು ಎಕರೆ ಅಡಿಕೆ ತೋಟವನ್ನು ಹೊಂದಿದ್ದಾರೆ. ಮೊದಲು ಅವರೇ ಪರ್ಯಾಯ ಬೆಳೆ ಬೆಳೆಯಲು ಆರಂಭಿಸಲಿ. ಆ ಬಳಿಕ ಸಣ್ಣ ರೈತರೂ ಪರ್ಯಾಯ ಬೆಳೆ ಬಗ್ಗೆ ಯೋಚಿಸುತ್ತಾರೆ. ದೆಹಲಿಗೆ ನಿಯೋಗ ಒಯ್ಯಲು ಅಡಿಕೆ ಬೆಳಗಾರರಿಗೆ ಆಹ್ವಾನ ನೀಡಿಲ್ಲ. ತಮಗೆ ಬೇಕಾದವರನ್ನು ಮಾತ್ರ ಕರೆದುಕೊಂಡು ಹೋಗುತ್ತಿದ್ದಾರೆ’ ಎಂದು ಮುನಿಯಪ್ಪ ತಿರುಗೇಟು ನೀಡಿದರು.

ರೈತ ಮುಖಂಡ ತೇಜಸ್ವಿ ಪಟೇಲ್‌, ‘ರೈತರ ಬೆಳೆಗೆ ಯೋಗ್ಯ ಬೆಲೆ ಸಿಗದಿರುವು ದರಿಂದ ಸಾಲಗಾರ ರಾಗುತ್ತಿದ್ದಾರೆ. ರೈತರು ಶ್ರೀಮಂತರಾದರೆ ತಮ್ಮ ಆಟ ನಡೆಯಲ್ಲ ಎಂಬ ಕಾರಣಕ್ಕೆ ಸರ್ಕಾರ ನಡೆಸುವ ರಾಜಕೀಯ ಮುಖಂಡರು ವೈಜ್ಞಾನಿಕ ಬೆಲೆ ಕೊಡಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌. ರಾಮೇಗೌಡ ಮಾತನಾಡಿದರು.

ಬಳಿಕ ಉಪವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಕ.ರ.ವೇ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಕನ್ನಡ ಸಮರ ಸೇನೆಯ ರಾಜ್ಯಾಧ್ಯಕ್ಷ ಸುರೇಶ್‌, ರೈತ ಮುಖಂಡ ರಾದ ಶೇಖರ ನಾಯ್ಕ, ಸೋಮಣ್ಣ, ಕೆ. ರಮೇಶ್‌ ಸತ್ತೂರ ಗೊಲ್ಲರಹಟ್ಟಿ, ಮಲ್ಲಶೆಟ್ಟಿಹಳ್ಳಿ ಹನುಮೇಶ   ಇದ್ದರು.

ದಲ್ಲಾಲರ ಸಂಘದ ಬೆಂಬಲ:  ಅಡಿಕೆ ಹಾಗೂ ತೆಂಗು ಬೆಳೆಗಾರರ ಹೋರಾಟಕ್ಕೆ ದಲ್ಲಾಲರ ಸಂಘದವರು ಅಧ್ಯಕ್ಷ ಜಿ.ಎಸ್‌. ಪರಮೇಶ್ವರ ಗೌಡ್ರ ನೇತೃತ್ವದಲ್ಲಿ ಬೆಂಬಲ ವ್ಯಕ್ತಪಡಿಸಿ ಸೋಮವಾರ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT