ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವೂದ್ ಸೆರೆಗೆ ರಾಜನ್ ಬಂಧನ ನೆರವಾದೀತೆ?

ಪಾಕಿಸ್ತಾನದಲ್ಲಿ ದಾವೂದ್‌: ಭಾರತದ ಬೇಹುಗಾರಿಕೆ ಸಂಸ್ಥೆಗಳ ಬಳಿ ಸಾಕ್ಷ್ಯ * ಛೋಟಾ ಶಕೀಲ್ ಬಂಧನಕ್ಕೆ ಭಾರತದ ಅಧಿಕಾರಿಗಳು ತೀವ್ರ ಪ್ರಯತ್ನ
Last Updated 27 ಅಕ್ಟೋಬರ್ 2015, 20:14 IST
ಅಕ್ಷರ ಗಾತ್ರ

ನವದೆಹಲಿ: ಇಂಡೊನೇಷ್ಯಾದಲ್ಲಿ ಛೋಟಾ ರಾಜನ್‌ ಬಂಧನವಾದ ನಂತರ ಆತನ ಒಂದು ಕಾಲದ ನಾಯಕನಾಗಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ಬಂಧನಕ್ಕೆ ಭಾರತದ ಅಧಿಕಾರಿಗಳು ತೀವ್ರ ಪ್ರಯತ್ನ ನಡೆಸುವ ಸಾಧ್ಯತೆಗಳಿವೆ.

ಕಾಳ ಸಂತೆಯಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡುತ್ತ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದ ರಾಜನ್, ನಂತರ ದಾವೂದ್ ತಂಡಕ್ಕೆ ಸೇರಿಕೊಂಡು ದೊಡ್ಡ ದೊಡ್ಡ ಅಪರಾಧಗಳನ್ನು ಎಸಗಿದ.

ನಂತರದ ದಿನಗಳಲ್ಲಿ ದಾವೂದ್ ತಂಡದ ಜನತೆ ಭಿನ್ನಾಭಿಪ್ರಾಯ ಮೂಡಿ ಪ್ರಾಣ ಭಯದಿಂದ ಆಸ್ಟ್ರೇಲಿಯಾಕ್ಕೆ ಪರಾರಿಯಾದ. ಈಗ ಆತ ಸೆರೆ ಸಿಕ್ಕಿರುವುದರಿಂದ ಗುಪ್ತಚರ ಸಂಸ್ಥೆಗಳು ದಾವೂದ್ ಮತ್ತು ಛೋಟಾ ಶಕೀಲ್ ಬಂಧನಕ್ಕೆ ವಿಶೇಷ ಕಾರ್ಯಚರಣೆ ನಡೆಸುವ ಸಾಧ್ಯತೆಗಳು ಇವೆ.

ದಾವೂದ್ ಮತ್ತು ಶಕೀಲ್ ಐಎಸ್ಐ ರಕ್ಷಣೆಯಲ್ಲಿ ಕರಾಚಿಯಲ್ಲಿ ಇರುವ ಬಗ್ಗೆ ಸಾಕ್ಷಾಧಾರಗಳನ್ನು ಭಾರತದ ಗುಪ್ತಚರ ಇಲಾಖೆ ಪಾಕಿಸ್ತಾನ ಸರ್ಕಾರಕ್ಕೆ ಒದಗಿಸಿ, ಅವರನ್ನು ಹಸ್ತಾಂತರಿಸುವಂತೆ ಮನವಿ ಮಾಡುತ್ತಲೇ ಇದೆ. ಆದರೆ ಪಾಕಿಸ್ತಾನ ಸರ್ಕಾರ, ಭಾರತಕ್ಕೆ ಬೇಕಾಗಿರುವ ಪಾತಕಿಗಳು ಇಲ್ಲಿ ಆಶ್ರಯ ಪಡೆದಿಲ್ಲ ಎಂದು ಹೇಳುತ್ತಲೇ ಬಂದಿದೆ.

ದಾವೂದ್ ಬಳಸುವ 12 ವಿಳಾಸಗಳು, ಬಿಲ್ವಾಲ ಭುಟ್ಟೊ ನಿವಾಸದ ಬಳಿ ದಾವೂದ್ ಆಸ್ತಿ ಖರೀದಿಸಿರುವ ವಿವರಗಳನ್ನು ಒಳಗೊಂಡ ದಾಖಲೆಗಳನ್ನು ಭಾರತದ ಗುಪ್ತಚರ ಇಲಾಖೆ ಸಿದ್ಧಪಡಿಸಿಕೊಂಡಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ರದ್ದಾಗಿದ್ದರಿಂದ ಈ ದಾಖಲೆಗಳನ್ನು ಇದುವರೆಗೆ ಪಾಕಿಸ್ತಾನಕ್ಕೆ ನೀಡಲು ಸಾಧ್ಯವಾಗಿಲ್ಲ.

ಭೂಗತ ಪಾತಕಿಗಳ ಗ್ಯಾಂಗ್ ಮಧ್ಯೆ ಮೂಡಿದ ಭಿನ್ನಾಭಿಪ್ರಾಯದಿಂದ ಮಾಹಿತಿ ಸೋರಿಕೆಯಾಗಿ ಆಸ್ಟ್ರೇಲಿಯಾ ಪೊಲೀಸರಿಗೆ ಸುಳಿವು ದೊರೆತಿದ್ದ ರಿಂದಲೇ ರಾಜನ್ ಬಂಧನವಾಗಿದೆ ಎನ್ನಲಾಗಿದೆ. ರಾಜನ್, ನಕಲಿ ಹೆಸರಿನಲ್ಲಿ  ಇಂಡೊನೇಷ್ಯಾಕ್ಕೆ ತೆರಳಲಿರುವ ವಿಚಾರದ ಬಗ್ಗೆ ಆಸ್ಟ್ರೇಲಿಯಾ ಫೆಡರಲ್ ಪೊಲೀಸರು ಭಾರತದ ಅಧಿಕಾರಿಗಳ ಜತೆ ಚರ್ಚಿಸಿದ್ದರು. ಗುಪ್ತಚರ ಇಲಾಖೆಯ ರಾಜನ್ ಗ್ಯಾಂಗ್ ಬಳಸಿಕೊಂಡು 2005 ರಲ್ಲಿ ದಾವೂದ್‌ನನ್ನು ಮುಗಿಸಲು ಯತ್ನಿಸಿತ್ತು ಎಂಬ ವಿಚಾರವನ್ನು  ವಿಕಿಲೀಕ್ಸ್ ಇತ್ತೀಚೆಗೆ ಬಹಿರಂಗಪಡಿಸಿತ್ತು.

ದೆಹಲಿಯ ಚಾಣಕ್ಯಪುರಿಯಲ್ಲಿ ಮುಂಬೈ ಪೊಲೀಸರು ಶಾರ್ಪ್ ಶೂಟರ್ ಒಬ್ಬನನ್ನು ಬಂಧಿಸಿದ್ದರಿಂದ ಗುಪ್ತಚರ ಇಲಾಖೆಯ ಯೋಜನೆ ವಿಫಲವಾಯಿತು.

ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಗಿರುವ ಅಜಿತ್ ದೋಭಾಲ್   ಆಗ ಗುಪ್ತಚರ ಇಲಾಖೆಯ ನಿರ್ದೇಶಕರಾ ಗಿದ್ದರು ಮತ್ತು ಶಾರ್ಪ್ ಶೂಟರ್ ಜತೆ ಕಾರಿನಲ್ಲಿ ಇದ್ದರು ಎಂಬ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಛೋಟಾ ರಾಜನ್ ಬಂಧನವು ದಾವೂದ್ ಮತ್ತು ಶಕೀಲ್ ಬಂಧನಕ್ಕೆ ಬಲೆ ಬೀಸಲು ಅನುಕೂಲವಾಗುವ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ನಲ್ಲಿ ಮಂಡ್ಯ ವಿಳಾಸ
ನವದೆಹಲಿ:
ಇಂಡೊನೇಷ್ಯಾದ ಬಾಲಿ ದ್ವೀಪದ ವಿಮಾನ ನಿಲ್ದಾಣದಲ್ಲಿ ಭಾನುವಾರ ಪೊಲೀಸರ ಬಲೆಗೆ ಬಿದ್ದ  ಛೋಟಾ ರಾಜನ್‌ ಪಾಸ್‌ಪೋರ್ಟ್‌ನಲ್ಲಿ   ಕರ್ನಾಟಕದ ಮಂಡ್ಯ ವಿಳಾಸ ಇರುವುದು ಪತ್ತೆಯಾಗಿದೆ.

ಮೋಹನ್‌ ಕುಮಾರ್‌ ಎಂಬ ಹೆಸರಿನಲ್ಲಿ ಪಾಸ್‌ಪೋರ್ಟ್ ಪಡೆದಿದ್ದು  ಅದಕ್ಕಾಗಿ ಆತ ಮಂಡ್ಯ ವಿಳಾಸ ನೀಡಿದ್ದಾನೆ ಎನ್ನಲಾಗಿದೆ. 2008ರ ಜುಲೈ 8ರಂದು ಸಿಡ್ನಿಯಲ್ಲಿ (ಜಿ9273860) ಪಾಸ್‌ಪೋರ್ಟ್‌ ನೀಡಲಾಗಿದ್ದು 10 ವರ್ಷ ಅವಧಿ ಹೊಂದಿದೆ. ಆತನಿಂದ ವಶಪಡಿಸಿಕೊಳ್ಳಲಾದ ಪಾಸ್‌ಪೋರ್ಟ್‌ ನಕಲಿ ಎಂಬುವುದು ಇನ್ನೂ ಖಚಿತವಾಗಿಲ್ಲ. ಹಾಗಾದರೆ ಸಿಡ್ನಿಯಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಈ ಪಾಸ್‌ಪೋರ್ಟ್‌ ಹೇಗೆ ನೀಡಿತು ಎಂಬ ಪ್ರಶ್ನೆ ಎದುರಾಗಿದೆ.

ರಾಜನ್- ಮಲೇಷ್ಯಾ, ಕಾಂಬೋಡಿಯಾ, ಆಸ್ಟ್ರೇಲಿಯಾಗಳ ಮಧ್ಯೆ ಓಡಾಡಿಕೊಂಡಿದ್ದ. ಆದರೆ, ದಾವೂದ್‌ ಗುಂಪಿನ ಛೋಟಾ ಶಕೀಲ್‌ ಸಹಚರರು ತನ್ನನ್ನು ಹತ್ಯೆ ಮಾಡಲು ಹೊಂಚು ಹಾಕಿದ್ದಾರೆ ಎಂಬ ಖಚಿತ ಮಾಹಿತಿ ನಂತರ ಓಡಾಟ ಕಡಿಮೆ ಮಾಡಿದ್ದ. ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ ಆತ ವಾಸವಾಗಿದ್ದ.

ಗೊಂದಲಕ್ಕೆ ಕಾರಣವಾದ ಪಾಸ್‌ಪೋರ್ಟ್‌: ರಾಜನ್‌ ಪಾಸ್‌ಪೋರ್ಟ್‌ನಲ್ಲಿ ಕರ್ನಾಟಕದ ಮಂಡ್ಯ ವಿಳಾಸವಿದ್ದ ಕಾರಣ ಮೊದಲು ಆತನ ಬಂಧನದ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಇಂಡೊನೇಷ್ಯಾದಲ್ಲಿ ಬಂಧಿತನು ಸಯನೈಡ್‌ ಕಿಲ್ಲರ್ ಮೋಹನ್ ಕುಮಾರ್ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಗಲ್ಲುಶಿಕ್ಷೆಗೆ ಗುರಿಯಾದ ಮೋಹನ್ ಕುಮಾರ್ ಕರ್ನಾಟಕದ ಜೈಲಿನಲ್ಲಿ ಇರುವ ವಿಷಯ ಖಚಿತವಾದ ನಂತರ ಇಂಡೊನೇಷ್ಯಾ ಪೊಲೀಸರು ಬಂಧಿಸಿರುವುದು ಛೋಟಾ ರಾಜನ್ ಎಂಬ ವಿಷಯ ಖಚಿತಪಟ್ಟಿತು.

ಆರೋಗ್ಯವೂ ಕೈಕೊಟ್ಟಿದೆ: ಛೋಟಾ ರಾಜನ್‌ಗೆ ವಯಸ್ಸಾಗಿದೆ. ಜತೆಗೆ ಆರೋಗ್ಯವೂ ಕೈಕೊಟ್ಟಿದೆ. ಆತನ ಗ್ಯಾಂಗ್‌ ಕೂಡ ಮೊದಲಿನಷ್ಟು ಬಲಿಷ್ಠವಾಗಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಆತನ ತಂಡ ಅನೇಕ ಬಾರಿ ಹೋಳಾಗಿದೆ. ಹೆಚ್ಚುತ್ತಿರುವ ವಯಸ್ಸು ಮತ್ತು ಅನಾರೋಗ್ಯದಿಂದಾಗಿ ಗ್ಯಾಂಗ್ ನಿಯಂತ್ರಿಸುವ ಮತ್ತು ಮುನ್ನಡೆಸುವ ಮೊದಲಿನ ತಾಕತ್ತು ಆತನ ಬಳಿ ಉಳಿದಿಲ್ಲ ಎನ್ನುತ್ತಾರೆ ಮುಂಬೈ ಪೊಲೀಸ್‌ ಇಲಾಖೆಯ ನಿವೃತ್ತ ಅಧಿಕಾರಿ ಎಂ.ಎನ್‌. ಸಿಂಗ್‌.

ಮಂಡ್ಯದ ನಂಟು ಇಲ್ಲ(ಮಂಡ್ಯ ವರದಿ): ‘ಕುಖ್ಯಾತ ಭೂಗತ ಪಾತಕಿ ಛೋಟಾ ರಾಜನ್‌ ತನ್ನ ಪಾಸ್‌ಪೋರ್ಟ್‌ನಲ್ಲಿ ಮಂಡ್ಯ ಎಂದು ನಮೂದಿಸಿದ್ದ ಎನ್ನುವ ಸಂಗತಿ ಖಚಿತವಾಗಿಲ್ಲ’ ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಭೂಷಣ್‌ ಬೊರಸೆ ತಿಳಿಸಿದ್ದಾರೆ.

‘ನಮ್ಮ ಎಸ್ಪಿ ಕಚೇರಿಯಲ್ಲಿನ ಪಾಸ್‌ಪೋರ್ಟ್‌ ಕೌಂಟರ್‌ನಲ್ಲಿ ಮೋಹನಕುಮಾರ್‌ ಎಂಬ ಹೆಸರಿನಲ್ಲಿ ಛೋಟಾ ರಾಜನ್‌ ಪಾಸ್‌ಪೋರ್ಟ್‌ ಪಡೆದಿದ್ದ ಎನ್ನುವ ಮಾಹಿತಿ ನಿರಾಧಾರ. ಏಕೆಂದರೆ, 2008ರಿಂದ ಮೋಹನಕುಮಾರ್‌ ಹೆಸರಿನಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ. ಆದರೂ, ಈ ಕುರಿತು ವಿಚಾರಣೆ ನಡೆಸುತ್ತಿದ್ದೇವೆ. ಈ ಸಂಬಂಧ ಇಂಟರ್‌ಪೋಲ್‌ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಂಭಾವಿತ ಬಾಲಕನ ಗಿರ್ವಿ ಗುಡಿಸಲು ನಂಟು
ಗಿರ್ವಿ /ಮಹಾರಾಷ್ಟ್ರ (ಪಿಟಿಐ):
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಫಲ್ತಾನ್‌ ತಾಲ್ಲೂಕಿನ ಕುಗ್ರಾಮ ಗಿರ್ವಿಯಲ್ಲಿದ್ದ ಗುಡಿಸಲಿನ ಜಾಗದಲ್ಲೀಗ ತಲೆ ಎತ್ತಿರುವ ವೈಭವೋಪೇತ ಬಂಗಲೆ ‘ಸದಾ ಲಕ್ಷ್ಮಿ’ ಎಲ್ಲರ ಕಣ್ಣು ಸೆಳೆಯುತ್ತಿದೆ.

7 ಸುತ್ತಿನ ಭದ್ರಕೋಟೆಯಂತಿರುವ ಈ ಬಂಗಲೆ  ಛೋಟಾ ರಾಜನ್‌ಗೆ ಸೇರಿದ್ದು. ಹಿಂದೆ ಇಲ್ಲಿದ್ದ ಗುಡಿಸಲು ಕೂಡ ಆತನ ಪೂರ್ವಿಕರಿಗೆ ಸೇರಿದ್ದು. ಇಲ್ಲಿಯೇ ಆತ ತನ್ನ ಬಾಲ್ಯದ ಕ್ಷಣಗಳನ್ನು ಕಳೆದಿದ್ದಾನೆ. ಕುಟುಂಬದ ಸಮಾರಂಭ ಇದ್ದಾಗ ರಾಜನ್‌ ಸಹೋದರ ದೀಪಕ್‌ ನಿಕಾಲಜೆ ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಗ್ರಾಮದಲ್ಲಿ ರಾಜನ್‌ ತಂದೆ ಸದಾಶಿವ ನಿಕಾಲಜೆ ಅವರ ಮೂರ್ತಿಯನ್ನೂ ಸ್ಥಾಪಿಸಲಾಗಿದೆ. 50ರ ದಶಕದಲ್ಲಿ ಸದಾಶಿವ ನಿಕಾಲಜೆ ಅವರು ಮುಂಬೈಗೆ ವಲಸೆ ಹೋದರು.

‘ಅತ್ಯಂತ ಸಂಭಾವಿತನಾಗಿದ್ದ ರಾಜೇಂದ್ರ ಚಿಕ್ಕವನಾಗಿದ್ದಾಗ   ಆಗಾಗ ನನ್ನ ಅಂಗಡಿಗೆ ಬರುತ್ತಿದ್ದ. ಬೇಸಿಗೆ ಹಾಗೂ ದೀಪಾವಳಿ ರಜಾ ದಿನಗಳಲ್ಲಿ ಅವರ ಕುಟುಂಬ ತಪ್ಪದೇ ಹಾಜರಾಗುತಿತ್ತು. ಮುಂಬೈನಲ್ಲಿ ಕುಖ್ಯಾತನಾದ ನಂತರ ಗ್ರಾಮಕ್ಕೆ ಬರುವುದನ್ನು ನಿಲ್ಲಿಸಿದ’ ಎಂದು ಗ್ರಾಮದ ಅಂಗಡಿ ಮಾಲೀಕರೊಬ್ಬರು ಸ್ಮರಿಸಿಕೊಂಡರು.

1976ರಲ್ಲಿ  ತಂದೆ ಸದಾಶಿವ ಮರಣದ ಬಳಿಕ ರಾಜನ್‌ ಗ್ರಾಮಕ್ಕೆ ಭೇಟಿ ನೀಡುವುದು ಕಡಿಮೆಯಾಯಿತು ಎಂದು ಸ್ಮರಿಸುತ್ತಾರೆ ಗಿರ್ವಿ ಗ್ರಾಮಸ್ಥರು.

ವಾರದಲ್ಲಿ ಇಂಡೊನೇಷ್ಯಾದಿಂದ ಭಾರತಕ್ಕೆ ಪಾತಕಿ?
ನವದೆಹಲಿ:
ಛೋಟಾ ರಾಜನ್ ಹಸ್ತಾಂತರಕ್ಕೆ ಇಂಡೊನೇಷ್ಯಾ ಪೊಲೀಸರು ತರಾತುರಿಯಲ್ಲಿದ್ದು, ವಾರದಲ್ಲಿ

ಆತನನ್ನು  ಭಾರತಕ್ಕೆ ಕರೆತರುವಸಾಧ್ಯತೆ ಇದೆ. ರಾಜನ್‌ ವಶಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ವಿಳಂಬ ಬೇಡ ಎಂದು ಇಂಡೊನೇಷ್ಯಾ ಪೊಲಿಸರು ಸಿಬಿಐಗೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಎರಡು ದಿನದಲ್ಲಿ ಬಾಲಿಗೆ: ಬಾಲಿಯಲ್ಲಿ ಇಂಡೊನೇಷ್ಯಾ ಪೊಲೀಸರ  ವಶದಲ್ಲಿರುವ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆ ತರಲು ಇನ್ನೂ ಎರಡು ದಿನದಲ್ಲಿ ಭಾರತದ ಅಧಿಕಾರಿಗಳ ತಂಡ ಅಲ್ಲಿಗೆ ತೆರಳುವ ನಿರೀಕ್ಷೆ ಇದೆ. ಸಿಬಿಐ ಅಧಿಕಾರಿಗಳು ಕೂಡ ಹಸ್ತಾಂತರ ಪ್ರಕ್ರಿಯೆಗೆ ಅಗತ್ಯ ಸಿದ್ಧತೆ ನಡೆಸಿದ್ದಾರೆ.  ಸಿಬಿಐ ಅಧಿಕಾರಗಳ ಜತೆ  ಮುಂಬೈ ಪೊಲೀಸರ ತಂಡ ಸಹ ಅಲ್ಲಿಗೆ ತೆರಳಲಿದೆ.

ವಾರದೊಳಗೆ ಛೋಟಾ ರಾಜನ್‌ನನ್ನು ಭಾರತಕ್ಕೆ ಕರೆ ತರುವ ಸಾಧ್ಯತೆ ಇದೆ. ಇಲ್ಲಿಗೆ ಕರೆತಂದ ಬಳಿಕ ಆತನನ್ನು ಬಿಗಿ ಭದ್ರತೆ ಯೊಂದಿಗೆ ಮುಂಬೈ ಜೈಲಿನಲ್ಲಿಡಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಜನ್‌ ಮರಳಿ ತರಲು ಅಂತರರಾಷ್ಟ್ರೀಯ ಕಾನೂನಿನಲ್ಲಿರುವ ತೊಡಕುಗಳ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ರಾಜನ್ ಭಾರತಕ್ಕೆ ಕರೆ ತರುವ ವಿಷಯದ ಬಗ್ಗೆ ಹಿರಿಯ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ.

ಭೂಗತ ಪಾತಕಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಕೇಂದ್ರದೊಂದಿಗೆ ಹಂಚಿಕೊಳ್ಳುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸೋಮವಾರ ಹೇಳಿದ್ದಾರೆ.

ರಾಜನ್‌ನನ್ನು ತನ್ನ ವಶಕ್ಕೆ ಒಪ್ಪಿಸುವಂತೆ  ಕೇಂದ್ರ ಸರ್ಕಾರವನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.
ರಾಜನ್‌ ಬಂಧನದ ಬಗ್ಗೆ ಕೇಂದ್ರ ಸರ್ಕಾರ ತನಗೆ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT