ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಕ್ಕು ತಪ್ಪಿಸಬೇಡಿ

ಅಕ್ಷರ ಗಾತ್ರ

ಉತ್ತರ ಕರ್ನಾಟಕ ಭಾಗದಲ್ಲಿ ಕಳಸಾ-ಬಂಡೂರಿ ಹಾಗೂ ಮಹಾದಾಯಿ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ಒಂದೂವರೆ ತಿಂಗಳಿನಿಂದ ಚಳವಳಿ ನಡೆಸುತ್ತಿದ್ದಾರೆ. ನರಗುಂದ ಬಂಡಾಯದ ನಂತರ ಮತ್ತೊಂದು ದೊಡ್ಡ ಚಳವಳಿಯಾಗಿರುವ ಇದು ಈ ಭಾಗದ ಹಳ್ಳಿ ಹಳ್ಳಿಗೂ ವಿಸ್ತರಿಸಿ ರೈತರ ಆಳದ ಆಕ್ರೋಶ ಹೊರ ಹೊಮ್ಮಿಸುತ್ತಿದೆ. ಚಕ್ಕಡಿ ಮುಂಗಟ್ಟುಗಳೊಂದಿಗೆ ಬುತ್ತಿ ಕಟ್ಟಿಕೊಂಡು ಸ್ವಯಂ ಪ್ರೇರಣೆಯೊಂದಿಗೆ ರೈತರು ಚಳವಳಿಯ ನದಿಗೆ ತೊರೆಯಂತೆ ಹರಿದು ಬರುತ್ತಿದ್ದಾರೆ.

ಪಕ್ಷ, ರಾಜಕಾರಣಿಗಳನ್ನು ದೂರವಿಟ್ಟು ಪಕ್ಷಾತೀತವಾಗಿ ರೈತರೇ ಮುನ್ನಡೆಸುತ್ತಿರುವ ಹೋರಾಟವಿದು. ಬೆಂಬಲಿಸಲೆಂದು ವೇದಿಕೆಗೆ ಬರುವ ರಾಜಕಾರಣಿಗಳಿಗೆ ‘ನಿಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬರ್ರೀ...’ ಎಂದು ವೇದಿಕೆಗೆ ಸೇರಿಸಿಕೊಳ್ಳದೆ ವಾಪಸು  ಕಳಿಸುತ್ತಿದ್ದಾರೆ. ಜೊತೆಗೆ, ಎಲ್ಲ ಪಕ್ಷಗಳ ಹೊಣೆಗೇಡಿತನವನ್ನು ಪ್ರಶ್ನಿಸುತ್ತಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರ ಕೇಕೆ, ಚಪ್ಪಾಳೆಯ ಖುಷಿಯಲ್ಲೇ ಮೈಮರೆತು ಬೀಗುತ್ತಿದ್ದ ರಾಜಕಾರಣಿಗಳಿಗೆ ರೈತರ ನಡೆ ಇರಿಸುಮುರಿಸು ತಂದಿದೆ.

ಹಾಗಾಗಿಯೇ ಜನಪ್ರತಿನಿಧಿಗಳೆಂಬುವರು ಈ ಹೋರಾಟಕ್ಕೆ ರಾಜಕೀಯ ಬಣ್ಣ ಬಳಿದು ಹೋರಾಟ ಒಡೆಯುವ ಸನ್ನಾಹದಲ್ಲಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ರಾಜಕಾರಣಿಗಳು ಕಳಸಾ-ಬಂಡೂರಿ ಯೋಜನೆ, ಮಹಾದಾಯಿ ನದಿ ಜೋಡಣೆ ಹೆಸರು ಹೇಳಿಕೊಂಡೇ ಅಧಿಕಾರದ ಗದ್ದುಗೆ ಏರಿದ್ದಾರೆ.  ನಮ್ಮ ರೈತರಿಗೆ ಈಗೀಗ ಇದೆಲ್ಲಾ ಅರ್ಥವಾಗತೊಡಗಿದೆ.

ಜನಪ್ರತಿನಿಧಿಗಳಾದವರು ಈ ಚಳವಳಿಯ ದಿಕ್ಕು ತಪ್ಪಿಸದಿರಲಿ. ನೀರು, ಗಾಳಿ, ಅನ್ನದ ಜೊತೆ ರಾಜಕಾರಣ ಬೇಡ. ರೈತರು ನಡೆಸುತ್ತಿರುವ ಹೋರಾಟ ನ್ಯಾಯಯುತವಾಗಿದೆ. ಜನಪ್ರತಿನಿಧಿಗಳಿಗೆ  ಆತ್ಮಸಾಕ್ಷಿ ಇದ್ದರೆ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ರೈತರ ಜೊತೆ ನಿಲ್ಲಲಿ. ಬಣ್ಣ ಬದಲಿಸುವ, ಮಾತು ಬದಲಿಸುವ ಗುಣ ತೋರದಿರಲಿ. ಪಕ್ಷ ರಾಜಕಾರಣದಿಂದ ಹೊರಬಂದು, ಸಾಮುದಾಯಿಕ ಚೈತನ್ಯವನ್ನು ಬಡಿದೆಬ್ಬಿಸುವ ಶುದ್ಧ ಹೋರಾಟಗಳು ಮಾತ್ರ ಯಶಸ್ವಿಯಾಗಿರುವುದು ಮತ್ತೆ ಮತ್ತೆ ಸಾಬೀತಾಗಿದೆ. ಇದು ಕೂಡ ಅಂತಹ ಶುದ್ಧ ಹೋರಾಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT