ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಬಳಕೆ ವಸ್ತು ಕಂಡುಹಿಡಿದ ಸಂಶೋಧಕಿಯರು

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಿಶ್ವದ ಯಾವ ಮೂಲೆಗೆ ಹೋದರೂ ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ಅದೇ ರೀತಿಯಲ್ಲಿ ವಿಜ್ಞಾನ, ಸಂಶೋಧನೆ, ಸಾಹಸ ಇಂತಹ ಕ್ಷೇತ್ರಗಳಲ್ಲೂ ಆಕೆಯನ್ನು ಸರಿ ಗಟ್ಟುವವರು ಯಾರೂ ಇಲ್ಲ. ರೇಡಿಯಂ ಸಂಶೋಧಕಿ ಮೇರಿ ಕ್ಯೂರಿಯಾಗಲೀ, ಬಾಹ್ಯಾಕಾಶದಲ್ಲಿ ತೇಲಾಡಿದ ರಷ್ಯಾದ ವೆಲಂಟೀನಾ ತೆರೆಷ್ಕೋವ ಅಥವಾ ನಮ್ಮವರೇ ಆದ ಕಲ್ಪನಾ ಚಾವ್ಲಾ ಇವರೆಲ್ಲ ಈ ಸಾಲಿನಲ್ಲಿ ಯಾವಾಗಲೂ ಪ್ರಥಮರೇ.

ಅದೇ ರೀತಿ ನಾವು ಬಳಸುವ ಅನೇಕ ದಿನ ಬಳಕೆಯ ವಸ್ತು / ಉಪಕರಣಗಳು ಈಗ ನಮ್ಮ ಕೈಯಲ್ಲಿರುವುದಕ್ಕೆ ಕಾರಣರಾದ ಕೆಲವು ಮಹಿಳೆಯರ ಪರಿಚಯ ಇಲ್ಲಿದೆ. ಇವರ  ಹೆಸರು ಮತ್ತವರ ಸಂಶೋಧನೆ ನಮಗೆ ನಿತ್ಯ ಪಾರಾಯಣವಾಗಬೇಕು.

ಯಾವುದೇ ವಾಹನವಿರಲಿ (ದ್ವಿಚಕ್ರ ಹೊರತುಪಡಿಸಿ) ಅವುಗಳಲ್ಲಿ ಕಾಣ ಬರುವ ವಿಂಡ್ ಷೀಲ್ಡ್ ವೈಫರ್‌  ಕಂಡುಹಿಡಿದಾಕೆ ಅಮೆರಿಕನ್ ಮಹಿಳೆ ಮೇರಿ ಆ್ಯಂಡರ್‌ಸನ್  ಡೆನೊವೆನ.  
ಇನ್ನು ನಾವು ಬೆರಳಚ್ಚು ಯಂತ್ರಗಳ ಬಳಕೆಯಲ್ಲಿ ಮಾಡುವ ತಪ್ಪುಗಳನ್ನು ತಿದ್ದುವ ‘ಕರೆಕ್ಷನ್ ದ್ರವ’. ಈಗ ಬೆರಳಚ್ಚು ಯಂತ್ರಗಳ ಬಳಕೆ ಕಡಿಮೆಯಾಗಿದ್ದರೂ ಈ ದ್ರವದ ಬಳಕೆ ಅನೇಕ ಬಾರಿ ಕೈ ಬರಹದಲ್ಲಿನ ತಪ್ಪುಗಳನ್ನು ಮುಚ್ಚಿ ಹಾಕಲು ಸಹಾಯಕವಾಗಿದೆ. ಇದನ್ನು ಮೊದಲಿಗೆ ಬಳಸಿದಾಕೆ ಒಬ್ಬ ಬೆರಳಚ್ಚುಗಾರ್ತಿ ಬೆಟ್ಟಿ ನೆಸ್ಮಿತ್ ಗ್ರಹಾಂ. ಈಕೆ ತಾನು ಕೆಲಸ ಮಾಡುವಾಗ ಆಗುತ್ತ್ತಿದ್ದ ಅನೇಕ ತಪ್ಪುಗಳಿಂದ ರೋಸಿ ಇದರ ಹುಟ್ಟಿಗೆ ಕಾರಣ ಆದರು.

ಈಕೆ ಒಬ್ಬ ಹವ್ಯಾಸಿ ಚಿತ್ರ ಕಲಾವಿದೆಯಾಗಿದ್ದು, ಅದರಲ್ಲಿ ಬಳಸುವ ನೀರು ಮಿಶ್ರಿತ ಬಿಳಿ ಬಣ್ಣದ ಬಳಕೆ ಮಾಡಿ ‘ದ್ರವ ಕಾಗದದ ಜನನಿ’ ಎಂಬ ಹೆಸರು ಪಡೆದುಕೊಂಡರು.
ವಾಹನ ಟೈರುಗಳ ಧೀರ್ಘ ಬಾಳಿಕೆಗೆ ಒಂದು ಹಗುರ ವಸ್ತುವಿನ ಅವಶ್ಯಕತೆಯನ್ನು ಕಂಡು ಹಿಡಿದವರು ಸ್ಟಿಫಾನಿ ಕೋಲೆಕ್ ಎಂಬ ಪೋಲಿಷ್-ಅಮೆರಿಕನ್ ಮಹಿಳೆ. ಈಕೆ ‘ಕೆವ್ಲರ್’ ಎಂಬ ರಾಸಾಯನಿಕ ವಸ್ತುವನ್ನು ಕಂಡು ಹಿಡಿದು ಟೈರುಗಳ ತಯಾರಿಕೆಯಲ್ಲಿ ಬಳಸಲು ಅನುವು ಮಾಡಿದರು. ಇದರ ಮಿಶ್ರಣದಿಂದ ತಯಾರಾದ ಟೈರುಗಳು ಹಗುರ ಮತ್ತು ದೀರ್ಘ ಬಾಳಿಕೆ ಬರುವಂತಹುದಾಗಿದೆ. ಅದಲ್ಲದೇ, ಇದರ ಬಳಕೆ ವಿಶ್ವದೆಲ್ಲೆಡೆ ರಕ್ಷಣಾ ಪಡೆಯ ಯೋಧರಿಗೆ ಗುಂಡು ನಿರೋಧಕ ಕವಚದ ತಯಾರಿಕೆಯಲ್ಲೂ ಆಗುತ್ತಿದೆ.

ಹೆಡೀ ಲಾಮಾರ ಎಂಬ ಆಸ್ಟ್ರೀಯನ್-ಅಮೆರಿಕನ್ ಮಹಿಳೆ ಒಬ್ಬ ಉತ್ಕೃಷ್ಟ ಗಣಿತಜ್ಞೆ ಮತ್ತು ರಾಕೆಟ್ ವಿಜ್ಞಾನಿ. ಪ್ರಖ್ಯಾತ ನಟಿ ಮತ್ತು ಹಾಡುಗಾರ್ತಿ. ತನ್ನ ಸಹ ಸಂಗೀತಗಾರನೊಟ್ಟಿಗೆಎರಡನೇ ಮಹಾಯುದ್ಧದ ಸಮಯದಲ್ಲಿ ರೇಡಿಯೊ ಚಾಲಿತ ಟಾರ್ಪೆಡೋಗಳನ್ನು ತಯಾರಿಸಿದಳು. ಇದರಿಂದ ನೌಕಾಪಡೆಗಳಿಗೆ ಸಮುದ್ರ ಮಧ್ಯದಲ್ಲಿ ಶತ್ರುಗಳ ಇರವನ್ನು ತಿಳಿಯಲು ಸಹಾಯಕವಾಗುತ್ತಿತ್ತು. ಇದು ರೋಹಿತ ಹರಡುವಿಕೆಯಿಂದ ಮಾಡುವ ಸಂವಹನ ಕ್ರಿಯೆ. ಇದೇ ವಿಜ್ಞಾನ ಈಗಿನ ಬ್ಲೂ ಟೂಥ್, ವೈ-ಫೈ ಮತ್ತು ನಿಸ್ತಂತು ದೂರವಾಣಿಗಳ ಉಪಯೋಗದಲ್ಲೂ ಬಳಕೆಯಾಗುತ್ತಿದೆ.

ಅಮೆರಿಕಾದ ಮಾರ್ಥಾ ಕೋಸ್ಟನ್ ಪೈರೋಟೆಕ್ನಿಕ್ ಸಿಗ್ನಲ್‌ ಕಂಡು ಹಿಡಿದರು. ಇದು ವಿಶ್ವದೆಲ್ಲೆಡೆ ಸಮುದ್ರಯಾನದಲ್ಲಿ ಹೆಚ್ಚು ಬಳಕೆಯಾಗುತ್ತದೆ.

ಬೆಂಕಿ ಅನಾಹುತವಾದಾಗ ಸುಲಭವಾಗಿ ಹೊರಬರುವ ವಿಶೇಷ ಮಾರ್ಗವನ್ನು (ಫೈರ್ ಎಸ್ಕೇಪ್) ಬಹು ಮಹಡಿ ಕಟ್ಟಡಗಳಲ್ಲಿ ಅಳವಡಿಸಿರುತ್ತಾರೆ. ಇದರ ಮೂಲ ಕಾರಣ ಕರ್ತೆ ಅನ್ನಾ ಕಾನೊಲಿ.

ಮರಗೆಲಸದಲ್ಲಿ ಬಳಕೆಯಾಗುವ ದುಂಡನೆಯ ಬ್ಲೇಡುಗಳನ್ನು ಬಳಕೆಗೆ ತಂದವರು ತಾಬಿತಾ ಬಾಬಿಟ್. ತಾನು ಬಳಸುತ್ತಿದ್ದ ನೂಲುವ ಯಂತ್ರದ ಜ್ಞಾನದಿಂದ ಈಕೆ ಇಂತಹ ಬ್ಲೇಡುಗಳ ತಯಾರಿಕೆಗೆ ಶ್ರೀಕಾರ ಹಾಕಿದರು.

ಡಿಷ್ ವಾಷರ್ ಸಂಶೋಧನೆಯ ಹಿಂದಿರುವ ಮಹಿಳೆ ಒಬ್ಬ ಶ್ರೀಮಂತ ಗೃಹಿಣಿ. ಪಾತ್ರೆ ತೊಳೆಯುವುದಿರಲಿ ಅಡುಗೆ ಮಾಡಲೂ ಬರುತ್ತಿರಲಿಲ್ಲವಂತೆ. ಬರಿಗೈನಲ್ಲಿ ಪಾತ್ರೆ ತೊಳೆಯುವುದಕಿಂತ ಹೆಚ್ಚು ಸ್ವಚ್ಚವಾಗಿ ತೊಳೆಯಲು ಒಂದು ಯಂತ್ರ ತಯಾರಿಸುವ ಹುಚ್ಚಿನಲ್ಲಿ ಈ ಸಾಧನ ಕಂಡು ಹಿಡಿದರು. ಇದಕ್ಕೆ  ಮೊದಲು ಬಳಕೆ ಮಾಡಿದ್ದು ಒಂದು ದೊಡ್ಡ ತಾಮ್ರದ ಬಾಯ್ಲರ್. ಇದರ ಒಳಗೆ ಬೇರೆ ಬೇರೆ ಭಾಗಗಳಾಗಿ ವಿಭಜಿಸಿಕೊಂಡು ಅದರ ತಳಭಾಗದಲ್ಲಿ ಜೋಡಿಸಿರುವ ಮೋಟಾರ್ ಸಹಾಯದಿಂದ ತಿರುಗುವ ಚಕ್ರದ ಬಳಕೆ ಮಾಡಿ ಇದರ ಪ್ರಯೋಗದಲ್ಲಿ  ಯಶಸ್ವಿಯಾದರು. ಅತ್ಯುತ್ತಮ ಸಂಶೋಧಕಿ ಪ್ರಶಸ್ತಿ ಪಡೆದ ಜೋಸೆಫೀನ್ ಕೊಚ್ರೇನ್ ಮಹಿಳೆಯರ ಶ್ರಮ ಕಡಿಮೆ ಮಾಡಿದವರು.

ಮಕ್ಕಳ ಡೈಪರ್ ಇಲ್ಲದಿದ್ದರೆ ಈಗ ಚಿಕ್ಕ ಮಕ್ಕಳನ್ನು ಬೆಳೆಸುವುದೇ ಅಪ್ಪ-ಅಮ್ಮಂದಿರಿಗೆ ಸಮಸ್ಯೆಯಾಗುತ್ತಿತ್ತು. ಇದರ ಮೂಲ ಕರ್ತೆ ಮರಿಯನ್ ಡೆನೋವೆನ್ ಎಂಬ ಅಮೆರಿಕನ್ ಗೃಹಿಣಿ. ಇವರು ತನ್ನ ಮಗಳು, ಅವಳ ಸಣ್ಣ ಮಗುವನ್ನು ಸಂಭಾಳಿಸಲು ಪಡುತ್ತಿದ್ದ  ಶ್ರಮ ಅದರಲ್ಲೂ ಅದು ಗಲೀಜು ಮಾಡಿಕೊಂಡಾಗ ನೋಡಲಾಗದೇ ಒಂದು ಹೊಸ ವಸ್ತುವಿನ ತಯಾರಿಕೆಗೆ ಮುಂದಾದಳು. ಇದಕ್ಕೆ ಅವರು ಆಗ ಬಳಕೆ ಮಾಡಿದ್ದು ಸ್ನಾನ ಗೃಹದಲ್ಲಿ ಬಳಸುವ ನೈಲಾನ್ ಪರದೆ ಬಟ್ಟೆ ಮತ್ತು ಅದರಲ್ಲಿ ಸುತ್ತಲು ಹತ್ತಿ ಬಟ್ಟೆಗಳು. ಬಹುಶಃ ಇಂದಿನ ತಾಯಂದಿರು ಈ ಅಜ್ಜಿಗೆ ಎಷ್ಟು ದೀರ್ಘ ದಂಡ ನಮಸ್ಕಾರ ಹಾಕಿದರೂ ಕಡಿಮೆಯೇ.

ಬಾಯಿ ಸಿಹಿಯಾಗಿಸುವ ಚಾಕೊಲೆಟ್ ಕುಕೀಗಳದು. ಇದರ ತಯಾರಕಿ ರುತ್ ಗ್ರೇವ್ಸ್ ವೇಕ್ ಫೀಲ್ಡ್ . ಇವರು ‘ಟೋಲ್ ಹೌಸ್’ ಎಂಬ ಸಣ್ಣ ಹೆದ್ದಾರಿ ಉಪಹಾರ ಗೃಹ ನಡೆಸುತ್ತಿದ್ದರು. ಇಲ್ಲಿ ಆಕೆಯ ಗ್ರಾಹಕರು ದೂರದಿಂದ ಕುದುರೆ ಗಾಡಿಯಲ್ಲಿ ಬರುವ ಪ್ರಯಾಣಿಕರು. ಇಲ್ಲಿ ಅವರಿಗೆ ಕೆಲ ಸಮಯ ತಂಗಲು ಮತ್ತು ರುಚಿಯಾದ ತಿಂಡಿ ಪೂರೈಸುವುದು ಈಕೆಯ ಕಾರ್ಯವಾಗಿತ್ತು. ಇದರಲ್ಲಿ ಹೊಸತೇನಾದರೂ ಮಾಡಬೇಕೆಂಬ ಹಂಬಲ ಇವರನ್ನು ರುಚಿಯಾದ ಚಾಕೊಲೆಟ್ ಕುಕಿ ತಯಾರಿಸಲು ಪ್ರೇರೇಪಿಸಿತು. ಎಲ್ಲರಿಗೂ ತಿಳಿದಿರುವಂತೆ ಇದು ಅಬಾಲ ವೃದ್ಧರಾದಿಯಾಗಿ ಎಲ್ಲರ ಜಿಹ್ವಾ ಚಾಪಲ್ಯವನ್ನು ತೀರಿಸುವಂತಹುದಾಗಿದೆ.

ಇಲ್ಲಿ ಹೆಸರಿಸಿರುವುದು ಹತ್ತೇ ಆದರೂ ಇನ್ನೂ ಹಲವು ಹತ್ತು ಇಂತಹ ಮಹಿಳಾಮಣಿಗಳು ನಮ್ಮಲ್ಲಿಯೇ ಇದ್ದಾರೆ ಹುಡುಕಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT