ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನವಿಡೀ ಶ್ರಮಿಸಿದ ಸಿಬ್ಬಂದಿ

Last Updated 29 ಜುಲೈ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಯಿಂದ ಜಲಾವೃತಗೊಂಡಿದ್ದ ಪ್ರದೇಶಗಳನ್ನು ಸಹಜ ಸ್ಥಿತಿಗೆ ತರಲು ಹಾಗೂ ಸ್ಥಳೀಯರನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲು ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪ್ರತಿಕ್ರಿಯಾ ಪಡೆಯ (ಎಸ್‌ಡಿಆರ್‌ಎಫ್‌) 300ಕ್ಕೂ ಹೆಚ್ಚು ಸಿಬ್ಬಂದಿ ದಿನವಿಡೀ ಶ್ರಮಿಸಿದರು.

110 ಅಗ್ನಿಶಾಮಕ ಸಿಬ್ಬಂದಿ, 75 ಪೊಲೀಸರು, 75 ಗೃಹರಕ್ಷಕರು, ಎಸ್‌ಡಿಆರ್‌ಎಫ್‌ನ 50 ಸಿಬ್ಬಂದಿ, 25 ಈಜುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ತಂಡಗಳ ಕಾರ್ಯವೈಖರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು.

‘ಕೋಡಿಚಿಕ್ಕನಹಳ್ಳಿ ಬಳಿ ಗೃಹರಕ್ಷಕ ದಳದ ಉಪ ನಿರ್ದೇಶಕ ವರದರಾಜು ಅವರ ನೇತೃತ್ವದಲ್ಲಿ 50 ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಐದು ದೋಣಿಗಳು, ಐದು ರಕ್ಷಣಾ ವಾಹನಗಳು, ನೀರನ್ನು ಹೊರ ಚೆಲ್ಲಲು ನಾಲ್ಕು ಪಂಪ್‌ಸೆಟ್‌ಗಳನ್ನು ಈ ಪ್ರದೇಶದಲ್ಲಿ ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು’ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವಂತಿದ್ದರೆ ಇಂಥ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಈಗಲೂ ಸಹ ರಾಜಕಾಲುವೆ ಸ್ವಚ್ಛವಾಗದ ಹೊರತು ನೀರನ್ನು ಖಾಲಿ ಮಾಡುವುದು ಕಷ್ಟ. ಈ ಬಗ್ಗೆ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

ಒಂಬತ್ತು ತಿಂಗಳ ಗರ್ಭಿಣಿ ರಕ್ಷಣೆ
ಕೋಡಿಚಿಕ್ಕನಹಳ್ಳಿಯ ಮನೆಯೊಂದರಲ್ಲಿ 9 ತಿಂಗಳ ಗರ್ಭಿಣಿ ಇದ್ದರು. ಅವರ ಕೋಣೆ ಕೂಡ ಜಲಾವೃತವಾಗಿತ್ತು. ಈ ಪ್ರದೇಶದಲ್ಲಿ ಮೂರು ಅಡಿಯಷ್ಟು ನೀರು ನಿಂತಿದ್ದರಿಂದ ಅವರನ್ನು ದೋಣಿಯಲ್ಲೇ ಕರೆದೊಯ್ದು, ಸಂಬಂಧಿಯೊಬ್ಬರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.

ಅದೇ ರೀತಿ ಬೊಮ್ಮನಹಳ್ಳಿಯ ಜಾನವಿ ಅಪಾರ್ಟ್‌ಮೆಂಟ್‌ನಲ್ಲಿ 90 ವರ್ಷದ ವೃದ್ಧೆ, ಮೂವರು ಮಕ್ಕಳು ಸೇರಿದಂತೆ 15 ಮಂದಿಯನ್ನು ರಕ್ಷಿಸಲಾಯಿತು.

ರಸ್ತೆಯಲ್ಲಿ ಮೀನು ಹಿಡಿದರು
ಬೆಂಗಳೂರು: ಕೆರೆ, ಸಮುದ್ರ, ನದಿಗಳಲ್ಲಿ ಮೀನು ಹಿಡಿಯುವುದು ಸಾಮಾನ್ಯ. ಆದರೆ, ರಸ್ತೆಯಲ್ಲಿ ಮೀನುಗಳನ್ನು ಹಿಡಿದ ಅಪರೂಪದ ಘಟನೆ ಶುಕ್ರವಾರ ಸಿಲ್ಕ್‌ಬೋರ್ಡ್‌ ಬಳಿ ವರ್ತುಲ ರಸ್ತೆಯಲ್ಲಿ ನಡೆಯಿತು.

ಮಡಿವಾಳ ಕೆರೆಯ ನೀರು ವರ್ತುಲ ರಸ್ತೆಯಲ್ಲಿ ಹರಿಯಿತು. ಈ ನೀರಿನಲ್ಲಿ ಅಪಾರ ಪ್ರಮಾಣದ ಮೀನುಗಳಿದ್ದವು. ಇವುಗಳನ್ನು ಹಿಡಿಯಲು ಸೋಮೇಶ್ವರ ಕಾಲೊನಿ ಹಾಗೂ ಬಿಟಿಎಂ ಬಡಾವಣೆಯ ಕೆಲ ನಿವಾಸಿಗಳು ಮುಗಿಬಿದ್ದರು.  ಸೊಳ್ಳೆಪರದೆ, ಸೀರೆಗಳನ್ನು ತಂದು ಮೀನುಗಳನ್ನು ಹಿಡಿದರೆ, ಕೆಲವರು ಬರಿಗೈಯಲ್ಲೇ ಮೀನುಗಳನ್ನು ಹಿಡಿದರು. ಮೀನುಗಳನ್ನು ಹಿಡಿಯುತ್ತಿದ್ದ ಸ್ಥಳದಲ್ಲಿ ಜನರು ಜಮಾಯಿಸ ತೊಡಗಿದರು.

ಇದರಿಂದ ಸಿಲ್ಕ್‌ಬೋರ್ಡ್‌ ಕಡೆಯಿಂದ ಬನಶಂಕರಿಗೆ ಹೋಗುವ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗಿತ್ತು. ಅಲ್ಲದೆ, ನೀರಿನ ಹರಿವಿನ ತೀವ್ರತೆ ಹೆಚ್ಚಿದ್ದರಿಂದ ಜನರು ಕೊಚ್ಚಿ ಹೋಗುವ ಸಾಧ್ಯತೆ ಇತ್ತು.  ಹೀಗಾಗಿ ಮೀನು ಹಿಡಿಯದಂತೆ ಪೊಲೀಸರು ಎಚ್ಚರಿಕೆ ನೀಡಿದರು. ಇದಕ್ಕೆ ಕಿವಿಗೊಡದ ಜನರು ಮೀನುಗಳನ್ನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದರು. ಇದರಿಂದ ಕೆರಳಿದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. 

ಲಾಠಿ ಏಟು ಬಿದ್ದರೂ ಮೀನುಗಳನ್ನು ಹಿಡಿಯುವ ಉತ್ಸಾಹ ಮಾತ್ರ ಜನರಲ್ಲಿ ಕಡಿಮೆಯಾಗಲಿಲ್ಲ. ಕೆಲವರು 5ರಿಂದ 10 ಕೆ.ಜಿ.ವರೆಗೆ ಮೀನುಗಳನ್ನು ಹಿಡಿದಿದ್ದರು. ಕೆಲ ಯುವಕರು ಸೀರೆಗಳಲ್ಲಿ ಮೀನುಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು.  ಆದರೆ, ಮೀನುಗಳು ಬಲೆಗೆ ಬೀಳುತ್ತಿರಲಿಲ್ಲ. ಬಾಲಕರಿಬ್ಬರು ನಿಂತ ನೀರಿನಲ್ಲಿ ಮೀನುಗಳನ್ನು ಹಿಡಿಯುತ್ತಿದ್ದರು. ಅದನ್ನು ಕಂಡ ಮಹಿಳೆಯೊಬ್ಬರು, ‘ಹಣ ನೀಡುತ್ತೇನೆ ಮೀನು ಕೊಡಿ’ ಎಂದು ಮನವಿ ಮಾಡಿದರು. ಆದರೆ, ಬಾಲಕರು ಮೀನುಗಳನ್ನು ನೀಡಲು ನಿರಾಕರಿಸಿದರು.

ಸಾಮಾಜಿಕ ಜಾಲ ತಾಣಗಳಲ್ಲಿ..
ಅತ್ತ ನದಿ ನೀರಿಗಾಗಿ ಹೋರಾಟ ನಡೆಯುತ್ತಿದ್ದರೆ, ಇತ್ತ ಕೆರೆ ನೀರೇ ರಸ್ತೆಗೆ ಬಂದಿದೆ
ಸುನೀಲ್‌ ಪವಾರ್‌

ಇನ್ನಾದರೂ ಎದ್ದೇಳು ಬಿಬಿಎಂಪಿ
ನಿಶಾಕಲಾ ರಘುನಾಥ್‌

ಗ್ರೇಟ್‌್ ಪ್ಲ್ಯಾನಿಂಗ್‌. ಜೈ ಬಿಬಿಎಂಪಿ!
ಈಶಾ ಇಂದೂರ್

ಈಗ ಬೆಂಗಳೂರಿಗೂ ದೋಣಿಗಳು ಅಗತ್ಯ
ಪೃಥ್ವಿರಾಜ್‌ ವೇದಪಾಠಕ್‌

ಬಿಬಿಎಂಪಿ ಏನು ಮಾಡುತ್ತಿದೆ? ಮೆಣಸಿನಕಾಯಿ ಭಜ್ಜಿ ತಿಂದು ಚಹಾ ಕುಡಿಯುತ್ತಿದೆ!
ಸಂಪ್ರೀತ ಸಿಂಗ್‌

ನಾಲ್ಕು ಅಂತಸ್ತಿಗಿಂತ ಹೆಚ್ಚಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬೇಡಿ. ನೀಡಿದರೆ ಪಾರ್ಕಿಂಗ್‌ ಜಾಗ  ಕೆರೆಯಾಗಿ ಮಹಡಿಗಳು ದೋಣಿಗಳಾಗುತ್ತವೆ
ಕೆ. ಶೀತಾ

ಅಯ್ಯೋ ದೇವರೇ! ಬೈಕ್‌ ಆಯ್ತು, ಕಾರು ಆಯ್ತು, ಈಗ ದೋಣಿಯನ್ನು ಬಳಸಬೇಕು
ಬಿ. ಭಾಗ್ಯ

ಮೂರ್ಖತನದ ನಗರ ಯೋಜನೆಯಿಂದ ರಸ್ತೆ ಮೇಲೆ ನೀರು ಹರಿಯುವಂತಾಗಿದೆ. ಇದರಲ್ಲಿ ಸಂಚರಿಸಲು ಬಿಬಿಎಂಪಿ ತೆರಿಗೆಯಲ್ಲಿ ಶೇ 15ರಷ್ಟು ವಿನಾಯಿತಿ ನೀಡಬೇಕು
ಸಿ.ಎಚ್‌. ಕಲ್ಯಾಣ್‌ 

ಕೆರೆ ಪಕ್ಕದಲ್ಲಿ ಮನೆ ನಿರ್ಮಿಸುವಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.  ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದು, ಬಿಬಿಎಂಪಿ ಹಾಗೂ ಬಿಡಿಎ  ಬುದ್ಧಿ ಕಲಿಯಬೇಕು
ತೇಜಸ್‌ ಲಾಡ್‌

ಒಂದೇ ದಿನಕ್ಕೆ ಈ ರೀತಿಯಾದರೆ, 3– 4 ದಿನ ಮಳೆಯಾದರೆ ಏನು ಗತಿ?
ರಾಬಿ ಮೊಹಂತಿ

ಕಳೆದ ವರ್ಷ ಚೆನ್ನೈ. ಈ ವರ್ಷ ಬೆಂಗಳೂರು!
ರಾಜ್‌ ನವೀನ್‌

ದೊಡ್ಡ ಕೆರೆ ಒತ್ತುವರಿ ಮಾಡಿಕೊಂಡು ಪರಿಸರ ಕೊಂದಿದ್ದೀರಿ.  ಇದು ತನ್ನ ಮೇಲಿನ ದಬ್ಬಾಳಿಕೆಗೆ ಪ್ರಕೃತಿಯ ಪ್ರತೀಕಾರ. ಅನುಭವಿಸಿ
ಜಯ್ ಶಾಂತಾರಾಮ್‌

ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಸಾಕ್ಷಿ
ವಿನಯ್‌್ ಕೊಪ್ಪದ

ಅಗತ್ಯ ಸೇವೆ ಒದಗಿಸಲು ವಿಫಲವಾಗಿರುವ ಬಿಬಿಎಂಪಿ ವಿರುದ್ಧ ಎಸ್ಮಾ ಪ್ರಕರಣ ದಾಖಲಿಸಿ
ಅಮೃತ್‌ ನೋರಾ

ಎಚ್‌ಎಸ್‌ಆರ್‌ ಬಡಾವಣೆಯ ಕೆಲ ನಿವಾಸಿಗಳ  ಮನೆಯ ಗೋಡೆಗಳು ಬಾಗಿದ್ದು, ಬೀಳುವ ಸಂಭವವಿದೆ. ಅವರಿಗೆ ಸಹಾಯ ಮಾಡಿ ಪ್ಲೀಸ್‌
ನೃತ್ಯಾ  ರಣಧೀರ್‌

ಸಾರ್ವಜನಿಕರೇ, ಕೆರೆ ಪಕ್ಕ ಹಾಗೂ ಕೆರೆಯ ಒತ್ತುವರಿ ಜಾಗದಲ್ಲಿ ಮನೆ ಕಟ್ಟುವುದನ್ನು  ಮೊದಲು ನಿಲ್ಲಿಸಿ. ಬರಿ ಸರ್ಕಾರದ ಇಲಾಖೆಗಳನ್ನು ತೆಗಳಬೇಡಿ
ಕುಶಾಲ್‌ ಮಕ್ಕಂ

ಬಿಬಿಎಂಪಿ ಅಧಿಕಾರಿಗಳೆಲ್ಲರೂ  ಅಪ್ರಯೋಜಕರು. ಸಾರ್ವಜನಿಕರು ಹಾಗೂ ಬಿಲ್ಡರ್‌ಗಳು ಕೆರೆ ಒತ್ತುವರಿ ಜಾಗದಲ್ಲಿ ಮನೆ ಕಟ್ಟುತ್ತಿರುವುದೇ ಸಮಸ್ಯೆಗೆ ಕಾರಣ. ಇನ್ನು ಮುಂದೆಯೂ ತಮಾಷೆ ಇದೆ ನೋಡಿ
ಬಿ. ಗುರು

ಬಿಬಿಎಂಪಿಗೆ ನಾಚಿಕೆ ಆಗಬೇಕು. ಕೊಳಚೆ ನೀರು ಸುಗಮವಾಗಿ ಹರಿದುಹೋಗಲು ವ್ಯವಸ್ಥಿತ ಯೋಜನೆ ಮಾಡಬೇಕು
ಎ. ಜಾಕೋಬ್‌ ಕಿರಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT