ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿರಿಸು, ಗ್ರಹಿಕೆ ಮತ್ತು ಸ್ವಾತಂತ್ರ್ಯ

ಚರ್ಚೆ
Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬಿಂಡಿಗನವಿಲೆ ಭಗವಾನ್ ಅವರು ‘ದಿರಿಸು, ಸಂಸ್ಕೃತಿ ಮತ್ತು ಮನಸ್ಥಿತಿ’ಯ ಬಗ್ಗೆ ಹೇಳಿದ್ದರಲ್ಲಿ (ಸಂಗತ, ಮೇ 23) ಬಹುತೇಕ ಒಪ್ಪಬಹುದು. ನನ್ನದೊಂದು ಪುಟ್ಟ ಆಕ್ಷೇಪವೆಂದರೆ, ಈ ವಾದವನ್ನು ಅವರು ಮಂಡಿಸಿದ್ದು ‘ಚಡ್ಡಿಯಲ್ಲಿ ಬಂದಿದ್ದಕ್ಕೆ ಠಾಣೆಯಿಂದ ಹೊರಕ್ಕೆ’ ಎಂಬ ತಲೆಬರಹದ ವರದಿಯ ಹಿನ್ನೆಲೆಯಲ್ಲಿ ಎಂಬುದು.

‘ಈ ಘಟನೆಯನ್ನು ಸೂಕ್ಷ್ಮವಾಗಿ ನೋಡಿದರೆ ಪೊಲೀಸರು ಆಡಿದ ಮಾತು ಸಹಜತೆ, ಸೌಜನ್ಯದ ಮಿತಿಯೊಳಗೆ ಇದೆ ಎನಿಸುತ್ತದೆ’ ಎಂದಿದ್ದಾರೆ ಭಗವಾನ್. ಇದರ ಪರಿಣಾಮವಾಗಿ ಪೊಲೀಸರು ಮಾಡಿದ್ದೇ ಸರಿ ಎಂದು ಅನೇಕರು ಭಾವಿಸುವ ಅಪಾಯವಿದೆ. ಲೇಖಕರ ಉದ್ದೇಶ ಅದಲ್ಲದಿರಬಹುದು.

ಈ ವಿಷಯವನ್ನು ಬೇರೊಂದು ಕೋನದಲ್ಲಿ ನೋಡುವ ಅಗತ್ಯವಿದೆ. ಇಲ್ಲಿ, ವಿಷಯ ದಿರಿಸಿನದೋ? ಅಥವಾ ಪೊಲೀಸರ ದರ್ಪದ್ದೋ? ಪೊಲೀಸ್ ಠಾಣೆಯಿಂದ ಹೊರಹಾಕಿಸಿಕೊಂಡು ಅವಮಾನಿತರಾದವರ ಅನಿಸಿಕೆಗಳು ಮುಖ್ಯವೋ, ಅವರು ಹಾಕಿಕೊಂಡ ಚಡ್ಡಿ ಮುಖ್ಯವೋ? ಸರ್ಕಾರಿ ವ್ಯವಸ್ಥೆಯಿಂದ ಸೇವೆ ಕೇಳಲು ಬಂದವರೊಡನೆ ಪೊಲೀಸ್ ಅಧಿಕಾರಿ ದರ್ಪದಿಂದ ವರ್ತಿಸಿದ್ದು ಮುಖ್ಯವೋ, ಜನರ ತೆರಿಗೆಯಿಂದಲೇ ಸಂಬಳ ಪಡೆಯುವ ಅಧಿಕಾರಿಯಲ್ಲಿರುವ ದಿರಿಸಿನ ಕುರಿತ ವೈಯಕ್ತಿಕ ನಿಲುವು ಮುಖ್ಯವೋ?

ಮೊದಲನೆಯದಾಗಿ ಇದನ್ನು  ದಿರಿಸಿನ ವಿಷಯನ್ನಾಗಿ ಮಾತ್ರ ಗ್ರಹಿಸಿದರೆ ಅಪಾಯಗಳಿವೆ. ಹಾಗೆ ಮಾಡಿದರೆ, ಅಧಿಕಾರಿಗಳು ತಮ್ಮ ಬಳಿ ಬರುವ ಅಮಾಯಕರೊಡನೆ ಕೆಟ್ಟದಾಗಿ ನಡೆದುಕೊಂಡಿರುವುದನ್ನು ಮನ್ನಿಸಿದಂತಾಗುತ್ತದೆ. ಅವರಿಗೆ ಶಿಕ್ಷೆಯಾಗುವ ಬದಲು, ತಾನು ಮಾಡಿದ್ದೇ ಸರಿ ಎಂಬ ಭಾವನೆ ಬರುತ್ತದೆ. ಪ್ರಜೆಯೇ ಪ್ರಭು ಎನ್ನುವ ಪರಿಕಲ್ಪನೆಗೆ ತಿಲಾಂಜಲಿ ಇಟ್ಟು, ಜನ ಎರಡನೇ ದರ್ಜೆಯ ಪ್ರಜೆ ಎಂಬ ಗ್ರಹಿಕೆ ಮೂಡುವುದಿಲ್ಲವೇ? ದಿರಿಸಿನ ದೆಸೆಯಿಂದಾಗಿ ಪ್ರಜೆಗಳಿಗೆ ಸಿಗಬೇಕಾದ ಸೇವೆಗಳು ಸಿಗುವುದಿಲ್ಲವೆಂದಾದರೆ, ಅದು ಪ್ರಜಾಪ್ರಭುತ್ವದ ಸೋಲು ಎಂದೇ ಹೇಳಬೇಕಾಗುತ್ತದೆ. ಇಂತಹ ಘಟನೆಗಳು ಕೇವಲ ಒಂದೆರಡು ಕಡೆ ಆಗಿವೆ ಎಂದು ಲಘುವಾಗಿ ತೆಗೆದುಕೊಳ್ಳಲಾಗದು.

ಚಡ್ಡಿ ಹಾಕಿಕೊಂಡ ಗಣ್ಯ-ನಗಣ್ಯರು ವಿಮಾನ ನಿಲ್ದಾಣ, ಮಾಲ್‌ಗಳಲ್ಲಿ ಸುತ್ತಾಡಬಹುದು. ಆದರೆ ಅವರು ಠಾಣೆಗೆ ಬರಬಾರದು ಎಂದು ಹೇಳುವುದು ಸೌಜನ್ಯ ಹೇಗಾಗುತ್ತದೆ? ಜನರಿಗೆ ಏನು ತೊಂದರೆಯಾಗಿದೆ, ಅವರಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ನೋಡುವುದು ಅಧಿಕಾರಿಗಳ ಕರ್ತವ್ಯ. ಬಂದವರ ದಿರಿಸು ನೋಡಲು, ಅವರನ್ನು ಠಾಣೆಯಿಂದ ಹೊರಕ್ಕೆ ಹಾಕಲು ಯಾವ ಕಾನೂನಿನಲ್ಲಿ ಅವಕಾಶ ಇದೆ? ಠಾಣೆಯಿಂದ ಹೊರಹಾಕುವುದು ಕಾನೂನುಬಾಹಿರ, ಅಂಥ ಕೆಲಸ ಮಾಡಿದವರು ಶಿಕ್ಷೆಗೆ ಗುರಿಯಾಗಬೇಕು. ಸರ್ಕಾರಿ ಕಚೇರಿಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಯಾವುದೇ ಪ್ರಯತ್ನವನ್ನು ಒಪ್ಪಲಾಗದು.

ಎರಡನೆಯದಾಗಿ, ಅವಮಾನಿತರಾದವರ ಪಾಡೇನು? ಸೇವೆ ಪಡೆಯಲು ಬಂದು ಹೊರಹಾಕಿಸಿಕೊಂಡಾಗ ಆಗಬಹುದಾದ ಮಾನಸಿಕ ಆಘಾತ ಘೋರ ಎಂಬುದು ನನ್ನ ಅನಿಸಿಕೆ. ನನ್ನ ಮಟ್ಟಿಗೆ ಇದು ಕೂಡ ಒಂದು ಬಗೆಯಲ್ಲಿ ಅಸ್ಪೃಶ್ಯತೆಯ ಆಚರಣೆ. ಒಬ್ಬ ವ್ಯಕ್ತಿ ಇನ್ನೊಬ್ಬರ ಸಹಾಯ ಕೇಳಿ ‘ಆಗುವುದಿಲ್ಲ’ ಎಂದು ಹೇಳಿಸಿಕೊಳ್ಳುವುದೇ ದೊಡ್ಡ ಅವಮಾನ ಎಂಬ ಸಂಸ್ಕೃತಿ ನಮ್ಮದು. ಅಂಗೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳಬಾರದು ಎಂಬ ಗಾದೆ ಇದೆ.

ಸಹಾಯ ಕೇಳಿದಾಗ, ಸಹಾಯ ಮಾಡಬೇಕಾದವರು ಹೊರಹಾಕುವುದು ದೊಡ್ಡ ಅವಮಾನ. ಮನೆಯ ಉಡುಪಿನಲ್ಲಿ ಶಾಲೆಗೆ ಮಕ್ಕಳನ್ನು ಕರೆದು ತರಬಾರದು ಎನ್ನುವ ಆಡಳಿತ ಮಂಡಳಿಯ ಧೋರಣೆಯು ಸಹಜತೆ, ಸೌಜನ್ಯದ ಮಿತಿಯೊಳಗಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ಅದು ಅವರ ಅಸಹನೆ ಬಿಂಬಿಸುತ್ತದೆ ಎಂದೇ ಹೇಳಬೇಕಾಗುತ್ತದೆ.

ಮೂರನೆಯದು, ಅಧಿಕಾರಿಗಳ ನಡತೆಯ ಪ್ರಶ್ನೆ. ಹಿರಿಯ ಅಧಿಕಾರಿಗಳು, ಸಚಿವರು, ‘ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು, ಬೇಗ ಸೇವೆ ಕೊಡಬೇಕು’ ಎಂಬ ಬಗ್ಗೆ ತರಬೇತಿ ಕೊಡುತ್ತಿರುವುದಾಗಿ ಹೇಳುತ್ತಿರುತ್ತಾರೆ. ಇದರ ಪರಿಣಾಮ ಸ್ವಲ್ಪ ಆಗಿರಲೂಬಹುದು. ಜನರೊಡನೆ ಪೊಲೀಸರು ದರ್ಪದಿಂದ ವರ್ತಿಸಬಾರದೆಂದು ಈ ತರಬೇತಿಗಳಲ್ಲಿ ಹೇಳಿಕೊಡುತ್ತಿರಲೂಬಹುದು. ಗೃಹ ಇಲಾಖೆ ತನ್ನ ಇಮೇಜ್ ಬದಲಾವಣೆಗೆ ವರ್ಷಗಳಿಂದ ಪ್ರಯತ್ನಿಸುತ್ತಲೇ ಇದೆ. ಆದರೂ ಇಂತಹ ಘಟನೆ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಈ ನಿಟ್ಟಿನಲ್ಲಿ ಮಾಡಬೇಕಾದದ್ದು ಬೆಟ್ಟದಷ್ಟಿದೆ ಎಂದು ಅರಿತರೆ ವಿಷಯದ ಚರ್ಚೆಗೆ ಒಂದು ಮಹತ್ವ ಬರುತ್ತದೆ.

ವ್ಯಕ್ತಿಯೊಬ್ಬ ಸಂದರ್ಭಕ್ಕೆ ತಕ್ಕಂತೆ, ನೋಡಲು ಇತರರಿಗೆ ಇಷ್ಟವಾಗುವಂತೆ ಬಟ್ಟೆ ತೊಟ್ಟು ಬರಬೇಕೆಂಬುದನ್ನು ಶಿಷ್ಟಾಚಾರದ ವಿಷಯವಾಗಿ ಮಾತ್ರ ನೋಡಿದರೆ ಒಪ್ಪಬಹುದು. ಈ ಸಾಮಾಜಿಕ ಶಿಷ್ಟಾಚಾರ ಪಾಲಿಸಲು ಇಷ್ಟಪಡುವವರು, ಪೊಲೀಸ್ ಠಾಣೆಗೆ ವಿಧವಿಧವಾಗಿ ಸಿಂಗರಿಸಿಕೊಂಡೇ ಹೋಗಲಿ, ಸ್ವಾಮಿ. ಆದರೆ ಹಾಸನ, ಮಂಡ್ಯದ ರೈತನೊಬ್ಬನನ್ನು  ಕಲ್ಪಿಸಿಕೊಳ್ಳಿ. ಆತ ಸದಾ ಚಡ್ಡಿಯಲ್ಲೇ ಇರುವವ. ಇತ್ತೀಚೆಗೆ ಬಿಡುಗಡೆಯಾದ ‘ತಿಥಿ’ ಚಿತ್ರದಲ್ಲಿ ಇದರ ವಿಜೃಂಭಣೆ ನೋಡಿ. ಆತನಿಗೇನೋ ತಕ್ಷಣ ಪೊಲೀಸ್ ಠಾಣೆಗೆ ಹೋಗಬೇಕಿರುತ್ತದೆ ಎನ್ನಿ. ಆಗ, ಅವನು ರೂಢಿಗತವಾಗಿ ಧರಿಸುತ್ತಿದ್ದ ಚಡ್ಡಿ ಬಿಟ್ಟು ಇನ್ನೇನನ್ನು ಧರಿಸಬೇಕು? ಪ್ಯಾಂಟ್ ಬಟ್ಟೆ ತಂದು, ದರ್ಜಿ ಬಳಿ ಹೊಲಿಸಿ, ಧರಿಸಿಕೊಂಡು ಬರಬೇಕೆ?!

ಭಗವಾನ್ ಅವರು ಪ್ರಸ್ತಾಪಿಸಿದ ಮಾಸ್ತಿ ಮತ್ತು ವಿಶ್ವೇಶ್ವರಯ್ಯನವರ ದಿರಿಸಿನ ಕುರಿತ ಮಾತುಕತೆ ಈ ಹಿನ್ನೆಲೆಯಲ್ಲಿ ಸ್ವಾರಸ್ಯಕರವಾಗಿದೆ. ರುಮಾಲು, ಬೂಟುಧಾರಿ ವಿಶ್ವೇಶ್ವರಯ್ಯನವರಿಗೆ ‘ಟವೆಲ್ ಸುತ್ತಿ ಬಂದಿದ್ದರೆ ಆಗುತ್ತಿತ್ತು’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಹೇಳಿದ್ದಕ್ಕೆ ಅವರು ‘ಈ ದಿರಿಸು ನನಗಲ್ಲ ನಿಮಗಾಗಿ’ ಎಂದದ್ದು ಮಾರ್ಮಿಕವಾಗಿದೆ. ಸೇವೆ ಕೊಡುವವರು ಮಾಸ್ತಿಯವರಂತೆಯೂ, ಸೇವೆ ಪಡೆದುಕೊಳ್ಳುವವರು  ಬೇಕಾದರೆ ವಿಶ್ವೇಶ್ವರಯ್ಯನವರಂತೆ ಅಂದುಕೊಂಡರೆ ಆಯ್ತು. ಎಲ್ಲರೂ ಎಲ್ಲರ ದಿರಿಸನ್ನು ಗೌರವಿಸುತ್ತ ಬದುಕಬಹುದು.

ದಿರಿಸಿನ ವಿಷಯದಲ್ಲಿ ವಿಶ್ವವನ್ನೇ ದಂಗುಬಡಿಸಿದ ಮಹಾತ್ಮ ಗಾಂಧಿ ನಮ್ಮ ಮುಂದಿಲ್ಲವೆ? ದುಂಡು ಮೇಜಿನ ಪರಿಷತ್ತಿಗೂ ತಮ್ಮ ಲಂಗೋಟಿಯಲ್ಲಿ ಹೋಗಿದ್ದರು. ವಿಶ್ವದ ಯಾವ ವಸ್ತ್ರ ಸಂಹಿತೆಯೂ ಅವರಿಗೆ ಅನ್ವಯಿಸಲಿಲ್ಲ. ಅಕ್ಕಮಹಾದೇವಿಯ ದೃಷ್ಟಾಂತವೂ ನಮ್ಮ ಮುಂದಿದೆ.

ಪ್ರತಿಯೊಬ್ಬರಿಗೂ ತಮಗೆ ಇಷ್ಟವಾಗುವ ದಿರಿಸು ತೊಡುವ ಹಕ್ಕು ಇದೆ ಎಂದು ಮತ್ತೆ ಹೇಳಬೇಕಿದೆ.  ಮಹಿಳೆಯರು ನೈಟಿ ಧರಿಸುವುದೇ ಅಪರಾಧವೆಂಬಂತೆ  ಕೆಲವರು ಒಂದು ಕಾಲದಲ್ಲಿ ಮಾತಾಡುತ್ತಿದ್ದರು.  ಈಗ ಅದಕ್ಕೆ  ಮನ್ನಣೆ ಸಿಕ್ಕಿದೆ. ಮನೆಯ ಹತ್ತಿರದ ಶಾಲೆಗಳಿಗೆ ತಾಯಂದಿರು ನೈಟಿಯಲ್ಲಿಯೇ ಹೋಗಿ ಮಕ್ಕಳನ್ನು ಬಿಟ್ಟುಬರುವ ದೃಶ್ಯ ಎಲ್ಲೆಡೆ ಕಾಣಸಿಗುತ್ತದೆ. ಶಾಲಾ ಆಡಳಿತ ಮಂಡಳಿಗಳು, ಅದನ್ನು ತೊಡುವ ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಂಡರೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT