ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಶಿ ವುಲ್ಫ್

Last Updated 9 ಜುಲೈ 2016, 19:30 IST
ಅಕ್ಷರ ಗಾತ್ರ

ದೀರ್ಘಕಾಲ ಪಶ್ಚಿಮಘಟ್ಟದ ಕಾಡುಗಳಲ್ಲಿ ನೆಲೆಸಿದ್ದ ನಮಗೆ ದಕ್ಷಿಣ ಪ್ರಸ್ಥಭೂಮಿಯ ಬಯಲುಗಳ ಬಗ್ಗೆ ಅರಿವೇ ಇರಲಿಲ್ಲ. ಅಲ್ಲಿಯವರೆಗೆ, ಅರವತ್ತು–ಎಪ್ಪತ್ತು ಮಿಲಿಯನ್ ವರ್ಷಗಳ ಹಿಂದೆ ಇಲ್ಲಿ ಉಕ್ಕಿ ಹರಿದ ಲಾವಾರಸ, ಅದರಿಂದ ಮರುವಿನ್ಯಾಸಗೊಂಡ ಬಯಲು, ಬದಲಾದ ನೆಲೆಯಲ್ಲಿ ಕಣ್ಮರೆಯಾದ ಜೀವಿಗಳು, ಬದುಕುಳಿದ ಜೀವಿಗಳಲ್ಲಿ ಕವಲೊಡೆದ ಭಿನ್ನತೆಗಳನ್ನು ಓದಿ ತಿಳಿದಿದ್ದೆವಷ್ಟೆ.

ಇದರ ಜೊತೆಗೆ ಚರಿತ್ರೆಯುದ್ದಕ್ಕೂ ಮನುಕುಲದೊಂದಿಗೆ ಒಡನಾಟವಿರಿಸಿಕೊಂಡು ಸಾಗಿದ ತೋಳಗಳು ಇದೇ ಪ್ರಸ್ಥಭೂಮಿಯಲ್ಲಿ ಹುಟ್ಟಿ ವಿಕಾಸ ಹೊಂದಿರಬಹುದು, ಬಳಿಕ ಇಲ್ಲಿಂದ ಪ್ರಪಂಚದ ಬೇರೆಡೆಗೆ ಪಸರಿಸಿರಬಹುದು, ಎಂಬ ವಿಜ್ಞಾನಿಗಳ ಊಹೆ ನಮ್ಮಲ್ಲಿ ಕುತೂಹಲ ಮೂಡಿಸಿತ್ತು. ಈ ಊಹೆ ಮಾಸಿದ ತೋಳಗಳ ಜಾಡನ್ನು ಭೇದಿಸುವ ನಮ್ಮ ಪ್ರಯತ್ನಕ್ಕೆ ಪ್ರೇರಣೆಯಾಗಿತ್ತು.

ವಾಲ್ಕೆನಿಕ್ ಸ್ಫೋಟದ ಬಳಿಕ ರೂಪುಗೊಂಡ ಈ ಭೂವಲಯ ಮುಂಚಿನಂತಿಲ್ಲ. ಹುಲ್ಲುಗಾವಲುಗಳನ್ನು ಹೊದ್ದು ಮಲಗಿದ್ದ ಮೈದಾನಗಳೆಲ್ಲ ಇಂದು ಸಾಗುವಳಿ ಭೂಮಿಯಾಗಿ ಪರಿವರ್ತನೆಗೊಂಡಿವೆ.

ಮೈಲು ಮೈಲುಗಳವರೆಗೆ ಹಬ್ಬಿರುವ ಈ ಅನಂತ ಬಯಲುಗಳ ನಡುವೆ ಚದುರಿದಂತೆ ಅಲ್ಲೊಂದು ಇಲ್ಲೊಂದು ಹಳ್ಳಿಗಳು, ಹಳ್ಳಿಗಳ ಮುಂದಿನ ಡಾಂಬರು ರಸ್ತೆಯ ಮೇಲೆ ಗೋಲಿಗಳು ಉರುಳಿದಂತೆ ಓಡಾಡುವ ಅಸಂಖ್ಯಾತ ಮಕ್ಕಳು, ಮೋಡಗಳಂತೆ ಚಲಿಸುವ ಕುರಿಮಂದೆಗಳು, ನಾಯಿ–ಕುದುರೆಗಳೊಂದಿಗೆ ಮಂದೆಯನ್ನು ಹಿಂಬಾಲಿಸುವ ಅಲೆಮಾರಿ ಕುರಿಗಾಹಿಗಳು, ಧ್ವನಿವರ್ಧಕಗಳನ್ನು ಅಳವಡಿಸಿಕೊಂಡು ಚಿತ್ರಗೀತೆಗಳನ್ನು ಮೈಲು ಮೈಲು ದೂರಕ್ಕೆ ಪುಕ್ಕಟ್ಟೆಯಾಗಿ ಬಿತ್ತರಿಸುತ್ತಾ ಉಳುಮೆ
ಯಲ್ಲಿ ತೊಡಗಿಸಿಕೊಂಡ ಟ್ರಾಕ್ಟರ್‌ಗಳು,

ಟ್ರಾಕ್ಟರ್‌ನ ಮೈಮೇಲೆ ಗುಡ್ಡವನ್ನು ಎಡಗೈಯಲ್ಲಿರಿಸಿ ಗಾಳಿಯಲ್ಲಿ ಹಾರುತ್ತಿರುವ ಹನುಮಂತನ, ಟ್ರಾಕ್ಟರ್‌ನ ಉಳಿದ ಭಾಗದಲ್ಲಿ ಮಾಲೀಕನ ಹೆಸರು, ಹುದ್ದೆ, ಮೊಬೈಲ್ ನಂಬರ್, ಇನಿಷಿಯಲ್‌ಗಳೊಂದಿಗೆ ಮಕ್ಕಳ–ಮೊಮ್ಮಕ್ಕಳ ಹೆಸರು, ಅಳಿದುಳಿದ ಜಾಗದಲ್ಲಿ ತಿಮ್ಮಪ್ಪನ ನಾಮ, ನಾಲ್ಕಾರು ಮಂದಿ ಸುಖಾಸೀನರಾಗಿ ಕುಳಿತು ಓಡಾಡುವ ಮೋಟಾರ್ ಸೈಕಲ್‌ಗಳು... ಇದಿಷ್ಟು ಈ ಅನಂತ ಬಯಲಿನ ಪುಟ್ಟ ಚಿತ್ರಣ.

ತೋಳಗಳನ್ನು ಹುಡುಕಿ ಅಲೆದಾಡುವಾಗ ಈ ಬಯಲುಗಳು ಹೊಸ ಸವಾಲುಗಳನ್ನು ತೆರೆದಿಟ್ಟವು. ಕಾಡಿನ ಹಾದಿಯಲ್ಲಿ ಮೂಡಿದ ಹೆಜ್ಜೆ, ತೇಲಿಬರುವ ಸದ್ದು, ಸಿಕ್ಕ ವಾಸನೆಗಳನ್ನೆಲ್ಲ ಮಾಹಿತಿಗಳನ್ನಾಗಿ ಪರಿವರ್ತಿಸಿಕೊಂಡು ಜೀವಿಗಳ ಜಾಡನ್ನು ಭೇದಿಸುವುದನ್ನು ಅರಿತಿದ್ದ ನಮಗೆ ಈ ವಿಭಿನ್ನ ಪರಿಸರದಲ್ಲಿ ಹೇಗೆ ಮುಂದುವರೆಯಬಹುದೆಂದು ತಿಳಿಯಲಿಲ್ಲ.

ಹಲವಾರು ವರ್ಷಗಳ ಕಾಲ ದಟ್ಟ ಕಾಡುಗಳಲ್ಲಿ ಸುತ್ತಾಡಿ ಗಳಿಸಿದ್ದ ಜ್ಞಾನ ತಿಳಿವಳಿಕೆಗಳೆಲ್ಲ ಇಲ್ಲಿ ಕೆಲಮಟ್ಟಿಗೆ ನಿರುಪಯುಕ್ತವಾದವು. ಹಾಗಾಗಿ, ಅವರಿವರಲ್ಲಿ ವಿಚಾರಿಸುತ್ತಾ ತೋಳಗಳ ಮಾಹಿತಿ ಪಡೆಯುವುದು ಅನಿವಾರ್ಯವಾಯಿತು.

ಊರಿಂದ ಊರಿಗೆ ಸಾಗುತ್ತಾ, ಸಿಕ್ಕ ಹಳ್ಳಿಗಳಲ್ಲಿ ಮಾತನಾಡುತ್ತಾ, ಟೀ ಅಂಗಡಿಗಳಲ್ಲಿ ಕುಳಿತು ಚರ್ಚಿಸುತ್ತಾ ತೋಳಗಳ ಬಗ್ಗೆ ವಿಚಾರಿಸುವಾಗ...
‘ತೋಳಕ್ಕೇನ್ರೀ ಜಗ್ಗಿದವ್ರೀ...’
‘ತೋಳ ಹಿಡಯಾಕ್ ಬಂದವರೇನ್ರಿ...?’
‘ತೋಳ ಹಿಡ್ದು ಏನ್ ಮಾಡ್ತೀರ್ರೀ...?’
‘ಸರ್ಕಾರದೋರು ರೊಕ್ಕ ಕೊಟ್ಟೋರೇನ್ರೀ...?’

ಇಂತಹ ಅನೇಕ ಅಸಂಬದ್ಧ ಪ್ರಶ್ನೆಗಳೊಂದಿಗೆ ಮಾತು ಮುಂದುವರಿದರೆ ತೋಳಗಳ ಕುರಿತು ಹರಿದಾಡುವ ನೂರಾರು ಕತೆಗಳು, ದಂತಕತೆಗಳು, ನಂಬಿಕೆಗಳು ಸಹಜವಾಗಿ ತೆರೆದುಕೊಳ್ಳುತ್ತಿದ್ದವು. ಟೀ ಅಂಗಡಿಗಳಲ್ಲಿ ಸಾಗುತ್ತಿದ್ದ ಹರಟೆಯನಡುವೆ ಬಿಸಿ ಬಿಸಿಯಾದ ಮೆಣಸಿನಕಾಯಿ ಬಜ್ಜಿ ನಮ್ಮ ಮುಂದಿರುತ್ತಿತ್ತು. ನಾಲಗೆಗೆ ವಿದ್ಯುತ್ ಸ್ಪರ್ಶ ನೀಡಿದ ಬಜ್ಜಿಯ ಖಾರಕ್ಕೆ ತತ್ತರಿಸಿದಾಗ ಸಕ್ಕರೆ ಪಾಕದ ಟೀ ಎದುರಾಗುತ್ತಿತ್ತು.

ಅಲೆಮಾರಿಗಳಂತೆ ನಿಶ್ಚಿತ ಗುರಿ ಇಲ್ಲದ, ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಬೇಕಾದ ಯಾವ ಕೆಲಸ ಕಾರ್ಯಗಳು ಇಲ್ಲದಿದ್ದರಿಂದ ನಮಗೆ ಎಲ್ಲವೂ ಕುತೂಹಲಕರವೆನಿಸಿತು. ಹಾಗಾಗಿ ಮೊದಲ ವರ್ಷದಲ್ಲೇ ನಾವು ಕ್ರಮಿಸಿದ ಇಪ್ಪತ್ತು ಸಾವಿರ ಕಿ.ಮೀ. ಪ್ರಯಾಣ ದಣಿವೆನಿಸಲಿಲ್ಲ.

ಸದಾ ಚಲಿಸುತ್ತಲೇ ಇದ್ದ ನಮ್ಮ ಪ್ರಯಾಣ ಕತ್ತಲಾದಾಗಲಷ್ಟೆ ಅಂತ್ಯಗೊಳ್ಳುತ್ತಿತ್ತು. ರಾತ್ರಿ ಕಳೆಯಲು ಹಾದಿಯ ಮಗ್ಗುಲಿನ ಮೈದಾನಗಳಲ್ಲಿ, ಬೆಳೆ ಇಲ್ಲದ ಹೊಲಗಳಲ್ಲಿ ಬಿಡಾರ ಹೂಡುವುದು ವಾಡಿಕೆಯಾಯಿತು. ನೆರಳು ನೀಡುವ ಒಂದೆರಡು ಮರಗಿಡಗಳಿದ್ದರೆ ಆ ಸ್ಥಳ ಹೆಚ್ಚು ಸೂಕ್ತವೆನಿಸುತ್ತಿತ್ತು. ನಂತರ ಅಡುಗೆ. ಬಳಿಕ ಮಲಗುವುದು ಬಯಲಿನಲ್ಲೇ.

ನಾಗರೀಕತೆಯ ಬೆಳಕಿಲ್ಲದ ವಿಸ್ತಾರವಾದ ಈ ಅಪರಿಚಿತ ಬಯಲುಗಳಲ್ಲಿ ರಾತ್ರಿ ಕಳೆಯುವುದೇ ಒಂದು ಅದ್ಭುತ ಅನುಭವ. ಮಿನುಗುವ ಲಕ್ಷ ಲಕ್ಷ ನಕ್ಷತ್ರಗಳನ್ನು ಹೊದ್ದು ಮಲಗಿ ಇನ್ನೇನು ನಿದ್ರೆ ಆವರಿಸಿತ್ತೆನ್ನುವಾಗ, ಚೆಲ್ಲಿದ ನಕ್ಷತ್ರಗಳನ್ನು ಪಶ್ಚಿಮಕ್ಕೆ ಅಟ್ಟುತ್ತಾ ಚಂದ್ರ ಉದಯಿಸಿದರೆ ಅದು ಇನ್ನಷ್ಟು ಸುಂದರ. ಕಣ್ಣು ಮುಚ್ಚಿದರೆ ಆಕಾಶದ ಮತ್ತಷ್ಟು ಕೌತುಕಗಳನ್ನು ನೋಡುವ ಭಾಗ್ಯ ತಪ್ಪಿ ಹೋದೀತೆಂಬ ಭಯ.

ಈ ಹುಡುಕಾಟದ ಮಧ್ಯೆ ನಾನು ‘Wolf Totem’ ಪುಸ್ತಕ ಓದುತ್ತಿದ್ದೆ. ಇದು ಚೀನಾದ ಸಾಂಸ್ಕೃತಿಕ ಕ್ರಾಂತಿಯ ಹಿನ್ನೆಲೆಯಲ್ಲಿ ಮಂಗೋಲಿಯಾದ ಬುಡಕಟ್ಟು ಜನಾಂಗ ಮತ್ತು ತೋಳಗಳ ನಡುವಣ ಸಂಬಂಧವನ್ನು ಕುರಿತು ಹೆಣೆದಿರುವ ಮಹಾಕಾದಂಬರಿ.

ತೋಳಗಳ ಸುತ್ತ ಹುಟ್ಟಿಕೊಂಡ ನೂರಾರು ದಂತಕತೆಗಳನ್ನು ಸತ್ಯ ಘಟನೆಗಳಂತೆ ಲೇಖಕ ಇಲ್ಲಿ ನಿರೂಪಿಸುತ್ತಾ ಸಾಗುತ್ತಾನೆ. ಎಲ್ಲ ವಿಷಯಗಳನ್ನು ವೈಜ್ಞಾನಿಕ ತರ್ಕದಡಿಯಲ್ಲಿ ಚಿಂತಿಸುವ ಮನೋಭಾವವನ್ನು ಮೈಗೂಡಿಸಿಕೊಂಡಿದ್ದರಿಂದ, ಲೇಖಕನ ದೃಷ್ಟಿಕೋನ ನನ್ನಲ್ಲಿ ನಿರಾಶೆ ಮೂಡಿಸಿತ್ತು. ಓದುವುದನ್ನು ಮಧ್ಯದಲ್ಲೇ ನಿಲ್ಲಿಸಿದೆ. ಆದರೆ ಮುಂದೊಂದು ದಿನ ಇಂತಹ ದಂತಕಥೆಗಳಲ್ಲಿ ನಾವೂ ಸಹ ಭಾಗವಾಗಿಹೋಗಬಹುದೆಂದು ಅಂದಾಜಿಸಿರಲಿಲ್ಲ.

ನಿತ್ಯ ಚಲಿಸುತ್ತಿದ್ದ ನಮ್ಮ ಬಿಡಾರಗಳ ಹತ್ತಿರದಲ್ಲಿ ಎಲ್ಲಾದರೂ ತೋಳದ ಕುರುಹುಗಳು ದೊರೆತರೆ ಶಿಬಿರ ಮರುದಿನಕ್ಕೆ ಮುಂದುವರೆಯುತ್ತಿತ್ತು. ಹೀಗೆ ಶಿಬಿರ ಮುಂದುವರೆದಾಗ ಮಾತ್ರ, ನಿರೀಕ್ಷಿಸದ ಅನೇಕ ಸಮಸ್ಯೆಗಳು ಉದ್ಭವಗೊಳ್ಳುತ್ತಿದ್ದವು. ಅಲ್ಲಿಯವರೆಗೆ ಸಮಸ್ಯೆಗಳು ನಮ್ಮನ್ನು ಹಿಂಬಾಲಿಸುತ್ತಿರುವ ಸುಳಿವು ನಮಗಿರಲಿಲ್ಲ.

ತೆರೆದ ಬಯಲಿನಲ್ಲಿ ಒಮ್ಮೆಗೆ ಅವತರಿಸಿ ಮುಂಜಾನೆಯ ಹೊತ್ತಿಗೆ ನಾವು ಮಾಯವಾಗುತ್ತಿದ್ದುದು ಹಳ್ಳಿಗರ ಸಂಶಯಕ್ಕೆ ಎಡೆಮಾಡಿಕೊಡುತ್ತಿತ್ತು. ಈ ಸುದ್ದಿ ಹಳ್ಳಿಹಳ್ಳಿಗಳಲ್ಲಿ ಗುಸುಗುಸು ಸುದ್ದಿಯಾಗಿ ಹರಡುವುದರ ಹೊತ್ತಿಗೆ ನಾವು ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಿರುತ್ತಿದ್ದೆವು.

ಆಗಷ್ಟೆ ಸೂರ್ಯ ಮರೆಯಾಗಿದ್ದ. ಎಂದಿನಂತೆ ಅಡುಗೆಯ ಸಿದ್ಧತೆ ಆರಂಭಗೊಂಡಿತ್ತು. ದಿನಸಿ ತರಲು ಪಕ್ಕದ್ದ ಹಳ್ಳಿಗೆ ಹೋಗಿದ್ದ ಸಹಾಯಕ ಶಿವಪ್ಪ ಬಿಕ್ಕಟ್ಟಿನ ಸುದ್ದಿಯೊಂದಿಗೆ ವಾಪಸಾದ. ಏದುಸಿರು ಬಿಡುತ್ತಾ ‘ಲಕ್ಷ್ಮೀಪತಿ ಸಾರ್‌ನ ಹಳ್ಳಿಯವರು ಹಿಡಿದಿಟ್ಟುಕೊಂಡಿದ್ದಾರೆ’ ಎಂದು ತಿಳಿಸಿದ. ಕ್ಯಾಂಪ್‌ನಿಂದ ಅರವತ್ತು ಕಿಲೋಮೀಟರ್ ದೂರವಿದ್ದ ಲಕ್ಷ್ಮೀಪತಿ ಅವರ ಮನೆಯಲ್ಲಿ ಚಾರ್ಜ್‌ಗೆ ಇರಿಸಿದ್ದ ಕ್ಯಾಮೆರಾ ಬ್ಯಾಟರಿಯನ್ನು ನಮಗೆ ತಲುಪಿಸುವ ಹಾದಿಯಲ್ಲಿ ಅವರು ಹಳ್ಳಿಗರಿಗೆ ಸಿಕ್ಕಿಬಿದ್ದಿದ್ದರು. ಅಸಹಾಯಕ ಸ್ಥಿತಿಯಲ್ಲಿ ನಮಗೆ ಪರಿಚಯವಿದ್ದ ಸ್ಥಳೀಯ ಮಾಜಿ ಎಂ.ಎಲ್.ಎ, ಮತ್ತು ಜಿಲ್ಲಾ ಪೊಲೀಸ್ ವರಿಷ್ಠರಿಗೂ ಕರೆ ಮಾಡಿದೆವು.

ಆದರೆ ಪೊಲೀಸ್‌ನವರು ಬರುವ ಮುನ್ನವೇ ಸಮಸ್ಯೆ ಬಗೆಹರಿದು ಲಕ್ಷ್ಮೀಪತಿ ಶಿಬಿರಕ್ಕೆ ವಾಪಸ್ಸಾಗಿದ್ದರು. ಭಯದಿಂದ ತತ್ತರಿಸಿದ್ದ ಅವರು ತುಸು ಹೊತ್ತು ಚೇತರಿಸಿಕೊಂಡು, ಜರುಗಿದ ಘಟನೆಯನ್ನು ವಿವರಿಸಿದರು.

ಆ ಊರಿನ ಓಣಿಯಲ್ಲಿ ನಾಲ್ಕಾರು ಜನ ಕುಡಿದು ಗಲಾಟೆ ಮಾಡುತ್ತಿದ್ದರಂತೆ. ಬೈಕ್ ನಿಲ್ಲಿಸಿದ ಅವರು ಲಕ್ಷ್ಮೀಪತಿ ಅವರನ್ನು ತಡೆದು ವಿಚಾರಣೆ ಆರಂಭಿಸಿದರಂತೆ. ಊರು ಪರಿಚಯಗಳನ್ನೆಲ್ಲಾ ತಿಳಿದು ಶಾಂತರಾದರೂ, ಊರ ಹೊರಗಿದ್ದ ನಮ್ಮ ಶಿಬಿರಕ್ಕೆ ಹೋಗುತ್ತಿರುವುದಾಗಿ ತಿಳಿಸಿದಾಗ ಪರಿಸ್ಥಿತಿ ಬಿಗಡಾಯಿಸಿತಂತೆ. ಹೆಂಗಸರು ಸೇರಿದಂತೆ ಊರಿನ ಮಂದಿಯೆಲ್ಲಾ ಜಮಾಯಿಸಿ ಎಮ್ಮೆಗಳ ಕೊರಳಲ್ಲಿದ್ದ ಹಗ್ಗಗಳನ್ನು ಬಿಚ್ಚಿ ಲಕ್ಷ್ಮೀಪತಿಯವರನ್ನು ಕಂಬಕ್ಕೆ ಕಟ್ಟಲು ತಯಾರಿ ನಡೆಸುತ್ತಿದ್ದರಂತೆ. ತಬ್ಬಿಬ್ಬಾದ ಲಕ್ಷ್ಮೀಪತಿ ತನ್ನ ರಾಜಮನೆತನದ ಸಂಬಂಧಗಳನ್ನು ಬಿಚ್ಚಿಟ್ಟಾಗ, ‘ಅಷ್ಟು ದೊಡ್ಡವರು ಮೋಟಾರ್ ಸೈಕಲ್‌ನಲ್ಲಿ ತಿರುಗಾಡುತ್ತಾರಾ?’ ಎಂಬ ಮರುಪ್ರಶ್ನೆ.

ಬೆವರುತ್ತಾ, ಶಿಬಿರದಲ್ಲಿರುವವರು ದರೋಡೆಕೋರರಲ್ಲ, ನನ್ನ ಸ್ನೇಹಿತರು. ಬಹಳ ಗೌರವಾನ್ವಿತ ಜನ. ಇಲ್ಲಿ ತೋಳಗಳನ್ನು ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಅವರಿಗೆ ತುರ್ತಾಗಿ ಈ ವಸ್ತುವನ್ನು ತಲುಪಿಸುವ ಉದ್ದೇಶದಿಂದ ಬಂದಿರುವುದಾಗಿ ಬ್ಯಾಗಿನಲ್ಲಿದ್ದ ಕ್ಯಾಮೆರಾ ಬ್ಯಾಟರಿಯನ್ನು ತೋರಿ... ಹೆಸರು, ಪರಿಚಯ, ವಿವರಗಳನ್ನೆಲ್ಲಾ ತಿಳಿಸಿದಾಗ... ಯಾರ ಯಾರದೋ ಹೆಸರುಹೇಳಿ ಬಚಾವಾಗಲು ಪ್ರಯತ್ನಿಸುತ್ತಾದ್ದಾನೆಂದು ಕೂಗಾಡುತ್ತ– ‘ಬಂಡೀಪುರ, ನಾಗರಹೊಳೆಗಳಂತಹ ದೊಡ್ಡ ಕಾಡುಗಳಲ್ಲಿ ತೋಳಗಳು ಸಿಕ್ಕುವುದಿಲ್ಲವೇ? ಅವರೇಕೆ ಈ ನಮ್ಮ ಹಳ್ಳಿಗೆ ಬರಬೇಕು?’ ಎಂದು ನೂರಾರು ಪ್ರಶ್ನೆಗಳನ್ನು ಕೇಳಲಾರಂಭಿಸಿದರಂತೆ.

ಅಷ್ಟರಲ್ಲಿ ಗುಂಪಿನಿಂದ ಓಡಿಬಂದವನೊಬ್ಬ, ‘ಅಯ್ಯೋ... ಧಣಿಗಳು... ಬಿಟ್ಟು ಬಿಡಿ’ ಎಂದು ಚೀರುತ್ತಾ... ‘ದೊಡ್ಡ ಧಣಿಗಳು... ಅವರಿಗೆ ಇಂತಹ ಅವಮಾನ ಮಾಡಬಾರದಿತ್ತು.

ಕತ್ತಲಲ್ಲಿ ಗೊತ್ತಾಗಲೇ ಇಲ್ಲ’ ಎಂದು ಕಣ್ಣೀರು ಹಾಕುತ್ತಾ ಲಕ್ಷ್ಮೀಪತಿಯವರ ಮನೆತನದ ಹಿರಿಮೆಗಳನ್ನೆಲ್ಲಾ ವಿವರಿಸಿದಾಗ ಗಲಿಬಿಲಿಗೊಂಡ ಗುಂಪು ಚದುರಿತಂತೆ. ಹಿಂದೊಮ್ಮೆ ಲಕ್ಷ್ಮೀಪತಿಯವರ ಪ್ರಭಾವ ಬಳಸಿ ಅರಣ್ಯ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿದ್ದ ರಾಮಪ್ಪ, ಆ ಊರಿನಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದುದು ನೆರವಿಗೆ ಬಂದು, ತಾವು ಜೀವದ ಅಪಾಯದಿಂದ ಪಾರಾಗಿದ್ದಾಗಿ ತಿಳಿಸಿದರು.

ಜರುಗಿದ ಘಟನೆಯ ವಿವರಗಳನ್ನೇಲ್ಲಾ ಕೇಳಿ ದಿಗ್ಭ್ರಮೆಗೊಂಡು ಯೋಚಿಸುತ್ತಾ ಕುಳಿತೆವು. ಆಗ ಸಂಜೆಯಾಗಿತ್ತು, ಸೂರ್ಯ ಮುಳುಗಲು ಸಿದ್ಧತೆ ನಡೆಸಿದ್ದ. ಒಮ್ಮಿಂದೊಮ್ಮೆಗೆ ದೊಣ್ಣೆ ಮಚ್ಚುಗಳನ್ನು ಹಿಡಿದ ಹಲವಾರು ಮಂದಿ ನಮ್ಮತ್ತ ಆಗಮಿಸುತ್ತಿದ್ದ ದೃಶ್ಯ ಎದುರಾಯಿತು. ಒಂದೆರೆಡು ಟ್ರಾಕ್ಟರ್‌ಗಳು, ಮೋಟಾರ್ ಸೈಕಲ್‌ಗಳು ಅವರನ್ನು ಹಿಂಬಾಲಿಸಿದ್ದವು. ಕೆಲ ನಿಮಿಷದಲ್ಲಿ ಗುಂಪು ನಮ್ಮನ್ನು ಸುತ್ತುವರಿಯಿತು.

ಒಮ್ಮೆಗೇ ಹತ್ತಾರು ಮಂದಿ ಏರುದನಿಯಲ್ಲಿ ಕೂಗಾಡಲಾರಂಭಿಸಿದರು. ಆ ಗದ್ದಲದಲ್ಲಿ ಅವರು ಏನು ಮಾತನಾಡುತ್ತಿದ್ದಾರೆಂದು ತಿಳಿಯಲಿಲ್ಲ. ಗುಂಪಿನಲ್ಲಿನ ಅನೇಕರು ಮದ್ಯದ ಅಮಲಿನಲ್ಲಿದ್ದರು. ಅವರ ಮುಖದಲ್ಲಿ ಭಯ–ಆತಂಕ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆ ಕ್ಷಣ ಇದು ನಮ್ಮ ಬದುಕಿನ ಅಂತಿಮ ಕ್ಷಣವೆಂಬಂತೆ ಭಾಸವಾಯಿತು.

ಗೊಂದಲದ ವಾತವಾರಣದಲ್ಲಿ ಆರಂಭಗೊಂಡ ಮಾತುಕತೆ ಮುಕ್ತಾಯಗೊಳ್ಳುವಂತೆ ಕಾಣಲಿಲ್ಲ. ಏರಿದ ಧ್ವನಿಯಲ್ಲಿ ಕೇಳುತ್ತಿದ್ದ ಅವರ ಪ್ರಶ್ನೆಗಳಿಗೆ ನೀಡುತ್ತಿದ್ದ ನಮ್ಮ ಉತ್ತರಗಳಲ್ಲಿ ಯಾವ ಸ್ಪಷ್ಟತೆಯೂ ಇರಲಿಲ್ಲ. ನಾವು ಸಾಗುತ್ತಿದ್ದ ದಿಕ್ಕು ಉದ್ದೇಶ ಮತ್ತು ಗುರಿಗಳ ಬಗ್ಗೆ ನಮಗೇ ಖಚಿತತೆ ಇರಲಿಲ್ಲವಾದ್ದರಿಂದ ನಮ್ಮ ಪರ್ಯಟನೆಯ ಉದ್ದೇಶಗಳನ್ನು ವಿವರಿಸಿ ಹೇಳುವ ಸ್ಥಿತಿಯಲ್ಲಂತೂ ನಾವಿರಲಿಲ್ಲ.

ಹಾಗಾಗಿ ನಾವು ನೀಡಿದ ಉತ್ತರಗಳಿಂದ ಅವರ ಸಂಶಯಗಳು ಸಂಪೂರ್ಣವಾಗಿ ಪರಿಹಾರಗೊಂಡಂತೆ ಕಾಣಲಿಲ್ಲ. ಒಟ್ಟಿನಲ್ಲಿ ಗದ್ದಲ ತಣ್ಣಗಾಗುತ್ತಾ ಬಂತು. ವಿಚಾರಣೆಯಿಂದ ಅವರು ತೃಪ್ತರಾದರೋ ಅಥವಾ ಅಮಾಯಕರೆಂದು ಮನವರಿಕೆ ಮಾಡಿಕೊಡುವಲ್ಲಿ ನಾವು ಸಫಲರಾದೆವೋ ಅಥವಾ ಅಲ್ಲಿಯವರೆಗೆ ಅವರಿಗೆ ಧೈರ್ಯ ತುಂಬಿ ಉತ್ತೇಜಿಸುತ್ತಿದ್ದ ಅಮಲು ತನ್ನ ಕೆಲಸ ಮುಗಿಸಿ ಮಾಯವಾಗಿತ್ತೋ ತಿಳಿಯಲಿಲ್ಲ.

ಒಟ್ಟಿನಲ್ಲಿ ಮುಂಜಾನೆ ವೇಳೆಗೆ ಊರು ಬಿಡಬೇಕೆಂಬ ಗಡುವು ನೀಡಿ ಗುಂಪು ಚದುರಿತು. ಒಮ್ಮೆಲೇ ಯಾವ ಸುಳಿವೂ ಇಲ್ಲದೆ ಸ್ಫೋಟಗೊಂಡ ಗದ್ದಲ ಏಕೆಂದು ತಿಳಿಯಲು ದೀರ್ಘಸಮಯವೇ ಹಿಡಿಯಿತು. ನಾವು ನಿಧಿ ಹುಡುಕಲು ಬಂದಿರುವ ಕಳ್ಳರೆಂದು ಅವರು ತೀರ್ಮಾನಿಸಿದ್ದರು. ಈ ಸುದ್ದಿ ಎಲ್ಲೆಡೆ ಹರಡಿ ಮುಂಜಾನೆಗೆ ಸುದ್ದಿವಾಹಿನಿಯ ಪ್ರತಿನಿಧಿಗಳು ಮೈಕ್ ಹಿಡಿದು ಪ್ರತ್ಯಕ್ಷರಾದರು.

ರಾತ್ರಿಯ ಅನುಭವಗಳನ್ನು ಹೇಳಿ... ‘ನಿಧಿ ಸಿಕ್ತಾ? ಗಲಾಟೆ ಹೇಗಾಯ್ತು?’ ಎಂಬ ಹಲವಾರು ಪ್ರಶ್ನೆಗಳಿಗೆ ಉತ್ತರಿಸದೆ ಮೌನವಾದದ್ದನ್ನು ಕಂಡು, ‘ಹೋಗಲಿ ಒಂದು ಬೈಟ್ ಆದರೂ ಕೊಡಬಹುದಿತ್ತಲ್ಲ’ ಎಂದು ಬೇಸರದಿಂದ ಹಿಂದಿರುಗಿದರು. ಹೋಗುವಾಗ ‘ಇವರು ಮಕ್ಕಳ ಕಳ್ಳರೇ ಇರಬೇಕು. ಒಂದೆರೆಡು ಏಟು ಬಿದ್ದಿದ್ದರೆ ಬಾಯಿ ಬಿಡುತ್ತಿದ್ದರು.ಒಳ್ಳೆಯ ಸುದ್ದಿಯಾದರೂ ಆಗುತ್ತಿತ್ತು’ ಎಂದು ಅವರು ಮಾತನಾಡಿಕೊಳ್ಳುತ್ತಿದ್ದದ್ದು ನಮ್ಮ ಜೊತೆಯವರ ಕಿವಿಗೆ ಬಿತ್ತು.

ಆದರೆ ನಾವು ನಿಧಿ ಕಳ್ಳತನಕ್ಕೆ ಬಂದಿದ್ದರೂ ಹಳ್ಳಿಯವರು ಇಷ್ಟು ದಿಗಿಲುಗೊಂಡಿದ್ದೇಕೆ ಎಂದು ಅರ್ಥವಾಗಲಿಲ್ಲ. ಆರು ಮಂದಿ ನಿರಾಯುಧರನ್ನು ಹಿಡಿಯಲು ದೊಣ್ಣೆ ಮಚ್ಚುಗಳನ್ನು ಹಿಡಿದ ಇಡೀ ಹಳ್ಳಿಯೇ ಬರಬೇಕಿದ್ದ ಅವಶ್ಯಕತೆ ಖಂಡಿತವಾಗಿಯೂ ಇರಲಿಲ್ಲ. ನೂರಾರು ವರ್ಷಗಳ ಹಿಂದೆ ರಾಜಮಹಾರಾಜರ, ಪಾಳೆಗಾರರ, ದರೋಡೆಕೋರರ ದಾಳಿಗೆ ಬೆದರಿ ಭೂಮಿಯಲ್ಲಿ ಹುದುಗಿಸಿಟ್ಟಿರುವ ಸಂಪತ್ತನ್ನು ನಾವು ಹುಡುಕುತ್ತಿರುವುದಾಗಿ ಅವರು ತಿಳಿದಿದ್ದರು.

ಆದರೆ, ವಾರಸುದಾರರಿಲ್ಲದ ಈ ನಿಧಿಯನ್ನು ಎಚ್ಚರಿಕೆಯಿಂದ ಕಾಪಾಡಬೇಕೆಂಬ ಸಾಮಾಜಿಕ ಹೊಣೆಗಾರಿಕೆ, ಕಳಕಳಿ, ಜವಬ್ದಾರಿಗಳು ಈ ಹಳ್ಳಿಯವರಿಗೆ ಬಂದುದಾದರೂ ಹೇಗೆಂದು ತಿಳಿಯಲಿಲ್ಲ. ಅಲ್ಲಿಯವರೆಗೆ ಈ ನಿಧಿಪ್ರಪಂಚದ ಬಗ್ಗೆ ನಮಗೆ ಏನೊಂದೂ ತಿಳಿವಳಿಕೆಯಿರಲಿಲ್ಲ. ನಿಧಿ ಎಂಬುದು ಯಾವ ರೂಪದಲ್ಲಿರಬಹುದು? ಈ ಸುವಿಸ್ತಾರ ಬಯಲಿನ ಯಾವ ನಿರ್ದಿಷ್ಟ ಸ್ಥಳದಲ್ಲಿ ಅದನ್ನು ಅಡಗಿಸಿರಬಹುದು. ಇದನ್ನು ಪತ್ತೆ ಹಚ್ಚಲು ಯಾವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು? ಎಂದು ಚಿಂತಿಸಿದಾಗ ನಿಧಿ ಹುಡುಕುವುದು Quantum computingಗಿಂತಲೂ ಸಂಕೀರ್ಣವಾದ ವಿಷಯವೆನಿಸಿತು.

ಅಲ್ಲಿಯವರೆಗೆ ನಿಧಿ ಹುಡುಕುವ ಮುನ್ನ ಅನುಸರಿಸಬೇಕಾದ ಆಚಾರಗಳ ಬಗ್ಗೆ ನಮಗೆ ತಿಳಿದಿರಲಿಲ್ಲ. ನಿಧಿ ಹುಡುಕುವ ಮುನ್ನ ಮಕ್ಕಳನ್ನು ಬಲಿಕೊಡಬೇಕೆಂಬುದು ಹಳ್ಳಿಗರ ದೃಢವಾದ ನಂಬಿಕೆಯಾಗಿತ್ತು. ಹಾಗಾಗಿ ಮಕ್ಕಳನ್ನು ಕದ್ದೊಯ್ಯಲು ನಾವು ಸಂಚು ಹೂಡಿದ್ದೇವೆಂಬುದು ಅವರ ಆತಂಕಕ್ಕೆ ಕಾರಣವಾಗಿತ್ತು.

ಹೀಗೆ ಮುಂದುವರೆದಿದ್ದ ಪ್ರಯಾಣದಲ್ಲಿ ತೆರೆದುಕೊಳ್ಳುತ್ತಿದ್ದ ಹೊಸ ಸನ್ನಿವೇಶಗಳಿಗೆ ನಾವು ಹೊಂದಿಕೊಳ್ಳಲಾರಂಭಿಸಿದೆವು. ಆದರೂ ಹಲವು ಘಟನೆಗಳು ನಿಜಕ್ಕೂ ಅಪಾಯಕಾರಿಯಾಗಿದ್ದವು. ಕೆಲವೆಡೆ ಕಿಡ್ನಿ ಕಳ್ಳತನ ಮಾಡಲು ಬಂದಿರುವವರೆಂದು ಅಥವ ಹುಡುಗಿಯರನ್ನು ಹಾರಿಸಿಕೊಂಡು ದುಬೈಗೆ ಸಾಗಿಸುವವರಿರಬಹುದೆಂದು ಅನುಮಾನಿಸಿದ್ದರು. ಕೆಲವೊಮ್ಮೆ ಅವರು ನಮ್ಮನ್ನು ಕೊಂದುಹಾಕುವ ಆಲೋಚನೆಯನ್ನು ಕೂಡ ಮಾಡಿದ್ದರು ಎಂದು ನಂತರ ತಿಳಿದುಬಂದಿತ್ತು.

ಈ ಎಲ್ಲಾ ಸಮಸ್ಯೆಗಳ ನಡುವೆ ನಮ್ಮ ಸುತ್ತಾಟ ಮುಂದುವರೆದಿತ್ತು. ಆದರೆ ನಾವು ಶೋಧಿಸಲು ಹೊರಟ ತೋಳಗಳು ಮಾತ್ರ ಕಾಣಿಸಿಕೊಂಡಿರಲಿಲ್ಲ. ವಾಸ್ತವಿಕವಾಗಿ ತೋಳಗಳ ಸ್ಥಿತಿಗತಿಗಳನ್ನು ಅಧ್ಯಯಿಸಿ ನಾವು ರೂಪಿಸಲು ಯೋಚಿಸಿದ್ದ ಸಾಕ್ಷ್ಯಚಿತ್ರಕ್ಕೆ ಮಾಹಿತಿಗಳನ್ನು ಕಲೆಹಾಕುವುದು ಈ ಪರ್ಯಟನೆಯ ಮೂಲ ಉದ್ದೇಶವಾಗಿತ್ತು.ಞ

ಮುಂದೊಂದು ದಿನ ನಮ್ಮ ಕ್ಯಾಂಪಿನಿಂದ ಮೈಲು ದೂರದಲ್ಲಿದ್ದ ಕಲ್ಲುಗುಡ್ಡಗಳ ಬಳಿ ತೋಳದ ಹೆಜ್ಜೆಗಳು ಕಂಡುಬಂದವು. ನಿರ್ದಿಷ್ಟ ದಿಕ್ಕಿಗೆ ಖಚಿತವಾಗಿ ಸರಿದಿದ್ದ ಹೆಜ್ಜೆಗಳು ಭರವಸೆ ಮೂಡಿಸಿದವು. ಯಾವುದೋ ಬಂಡೆಗಳ ನಡುವೆ ತೋಳ ಮರಿಮಾಡಿರಬಹುದೆಂಬ ಅನಿಸಿಕೆ ದಟ್ಟವಾಯಿತು.

ಮರುದಿನ ಮುಂಜಾನೆ ಸುಮಾರು ಮೂರುಗಂಟೆಯ ನಸುಕಿನಲ್ಲಿ ಗುಡ್ಡದತ್ತ ಹೊರಟೆ. ಆ ಕಪ್ಪುಮಣ್ಣಿನ ಬಯಲಿನ ನಡುವೆ ನಾಲ್ಕಾರು ಕರಿಯ ಬಂಡೆಗಳು ಚಿಮ್ಮಿದ್ದವು. ಚಳಿ ಕೊರೆಯುತ್ತಿತ್ತು. ಗಡಗಡ ನಡುಗುತ್ತಾ ಬಂಡೆಗಳ ನಡುವೆ ಕಾದು ಕುಳಿತೆ. ಕತ್ತಲಲ್ಲಿ ನುಸುಳಿ, ಗೂಡಿಗೆ ಮರಳಿ ಬರಬಹುದಾದ ಹೆಣ್ಣು ತೋಳಕ್ಕೆ ಕಣ್ಣಾಯಿಸುತ್ತಿದ್ದೆ. ತೋಳ ಬರುವ ಯಾವ ಕುರುಹುಗಳೂ ಕಾಣಲಿಲ್ಲ.

ಸಮಯ ಸ್ತಬ್ಧಗೊಂಡ ಅನುಭವವಾಗತೊಡಗಿತು. ಸೆಕೆಂಡುಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಯಾದಂತೆ ಅನಿಸತೊಡಗಿತು. ಆದರೂ, ಕಾಣದ ಆ ತೋಳಕ್ಕೆ ಕಾಯ್ದು ಕುಳಿತಿದ್ದಾಗ, ಬೆಳದಿಂಗಳ ನೆಳಲು ಬೆಳಕಿನಲ್ಲಿ ರೂಪುಗೊಳ್ಳುವ ಕ್ರಿಯಾಸರಣಿ ರೋಮಾಂಚನಕಾರಿಯಾಗಿತ್ತು.

ಸ್ವಲ್ಪ ಹೊತ್ತಿನಲ್ಲಿ ಟಿಟ್ಟಿಭ ಹಕ್ಕಿ ಕೂಗಿತ್ತು. ಅದನ್ನು ಹಿಂಬಾಲಿಸಿ ಬೆದರಿ ಹಾರಿದ ನೈಟ್‌ಜಾರ್ ಹಕ್ಕಿಯ ಸದ್ದು ಕೇಳಿಬಂತು. ಕೆಲವೇ ನಿಮಿಷದಲ್ಲಿ ತೋಳ ಊಳಿಡುವ ಸದ್ದು.ಇಡೀ ಸನ್ನಿವೇಶವೆ ನನ್ನ ಆಕಾಂಕ್ಷೆಗಳನ್ನು ನೆರವೇರಿಸಲು ಸಜ್ಜಾದಂತೆ ಕಂಡಿತು. ಪ್ರತಿಮೆಯಂತೆ ಅಲುಗದೆ ಕುಳಿತು ಕಣ್ಣನ್ನು ಮತ್ತಷ್ಟು ಅಗಲಿಸಿ ಅತ್ತಿತ್ತ ದೃಷ್ಟಿ ಹರಿಸಿದೆ. ಏನೂ ಕಾಣಿಸಲಿಲ್ಲ.

ಆಗ ಪಶ್ಚಿಮದಲ್ಲಿ ಪೂರ್ಣಚಂದ್ರ ಅಸ್ತಂಗತಗೊಳ್ಳಲು ಸಿದ್ಧತೆ ನಡೆಸಿದ್ದ. ಪೂರ್ವದಲ್ಲಿ ಸೂರ್ಯೋದಯವಾಗುತ್ತಿತ್ತು. ನಾನೆಂದೂ ಕಂಡರಿಯದ ಅದ್ಭುತ ದೃಶ್ಯವದು. ಸಮಸ್ತ ಜೀವಕೋಟಿಗಳ ಅಸ್ತಿತ್ವಕ್ಕೆ, ಚೈತನ್ಯಕ್ಕೆ ಕಾರಣೀಭೂತರಾದ ಇಬ್ಬರು ಮಹಾನುಭಾವರ ಮುಖಾಮುಖಿ. ಇಡೀ ಜಗತ್ತನ್ನೆಲ್ಲ ಬೆಳಗುವ ದಿಗ್ಗಜರಿಬ್ಬರು ನನ್ನ ಎಡಕ್ಕೂ ಬಲಕ್ಕೂ ನಿಂತಿರುವಾಗ ನಾನು ಮಾತ್ರ ಕತ್ತಲೆಯಲ್ಲಿದ್ದೆ. ಹೆಣ್ಣು ತೋಳ ತನ್ನ ಇರುವಿಕೆಯನ್ನು ಖಚಿತಪಡಿಸಿತ್ತಾದರೂ ಕಾಣಿಸಿಕೊಳ್ಳಲೇ ಇಲ್ಲ.

ನಿರಾಶೆಯಿಂದ ಶಿಬಿರಕ್ಕೆ ವಾಪಾಸಾದಾಗ ಅಲ್ಲಿ ಅಚ್ಚರಿ ಕಾದಿತ್ತು. ಬಯಲಿನಲ್ಲಿ ನಾನು ರಾತ್ರಿ ಮಲಗಿದ್ದ ಮಂಚದಿಂದ ಕೇವಲ ಹತ್ತು ಅಡಿ ದೂರದಲ್ಲಿ ತೋಳದ ಹೆಜ್ಜೆಗಳು ಮೂಡಿದ್ದವು. ನಮ್ಮ ಸುತ್ತಲು ನಿಗೂಢ ಪ್ರಪಂಚವೊಂದು ನಮಗರಿವಿಲ್ಲದಂತೆ ರೂಪುಗೊಳ್ಳುತ್ತಿರುವ ಅನುಭವವಾಗತೊಡಗಿತು.

ನಿಗೂಢವಾಗಿ ಉಳಿದ ನೆನಪುಗಳೊಂದಿಗೆ ರಾತ್ರಿ ಸ್ನಾನಕ್ಕೆ ತೆರಳಿದೆ. ಶಾಶ್ವತ ನೆಲೆ ಇಲ್ಲದೆ ಅಲೆಮಾರಿಗಳಂತೆ ಚಲಿಸುತ್ತಿದ್ದ ನಮಗೆ ಬಯಲುಗಳೆ ಸ್ನಾನದ ಮನೆಗಳಾಗಿದ್ದವು. ಹಾಗಾಗಿ ಕತ್ತಲಾದಾಗಲಷ್ಟೆ ನಮ್ಮ ಸ್ನಾನ.

ಆದರೆ, ಈ ಶಿಬಿರದ ಸ್ನಾನದ ಮನೆ ವಿಶೇಷವಾಗಿತ್ತು. ಬಯಲಿನಲ್ಲಿ ಎರಡು ಅಡಿ ಎತ್ತರಕ್ಕೆ ಚಿಮ್ಮಿದ್ದ ಮೂರು ಪುಟ್ಟ ಬಂಡೆಗಳು. ಆ ಬಂಡೆಗಳಲ್ಲಿ ಸಹಜವಾಗಿ ರೂಪುಗೊಂಡಿದ್ದ ಉಬ್ಬು ತಗ್ಗುಗಳು ಬಟ್ಟೆ, ಸೋಪು, ಬಕೆಟ್‌ಗಳನ್ನಿಡಲು ವಿನ್ಯಾಸಗೊಂಡಂತಿದ್ದವು. ಅರ್ಧ ಚಂದ್ರಾಕೃತಿಯಲ್ಲಿದ್ದ ಆ ಮೂರು ಬಂಡೆಗಳ ನಡುವೆ ಸ್ನಾನ ಮಾಡಲು ಹಾಸಿದಂತೆ ನುಣುಪಾದ ಚಪ್ಪಡಿ ಕಲ್ಲಿತ್ತು. ದೀಪವಿಲ್ಲದ ಆ ಸ್ನಾನದ ಮನೆಗೆ ಮಿನುಗುವ ನಕ್ಷತ್ರಗಳು ಬೆಳಕು ಚೆಲ್ಲುತ್ತಿದ್ದವು. ಯಾವ ವಿನ್ಯಾಸಕರೂ ಕಲ್ಪಿಸಿಕೊಳ್ಳಲಾಗದ ಸೃಜನಶೀಲತೆ ಆ ಸ್ನಾನದ ಮನೆಯಲ್ಲಿತ್ತು.

ಆ ರಾತ್ರಿ ಸ್ನಾನಕ್ಕೆ ತೆರಳಿದಾಗ ಇನ್ನು ಚಂದ್ರೋದಯವಾಗಿರಲಿಲ್ಲ. ಸ್ನಾನದ ನಡುವೆ ಯಾರೋ ಮರೆಯಲ್ಲಿ ನಿಂತು ಕದ್ದುನೋಡಿದ ಅನುಭವವಾಯಿತು. ಕತ್ತಲಲ್ಲಿ ನೆರಳು ಸರಿದಂತಾಯಿತೇ ಹೊರತು ಯಾವುದೂ ಸ್ಪಷ್ಟವಾಗಿ ಗೋಚರಿಸಲಿಲ್ಲ.

ಅದು ಕೇವಲ ಭ್ರಮೆ ಇರಬಹುದೆಂದು ಮರುದಿನ ಟಾರ್ಚ್ ಹಿಡಿದು ಸ್ನಾನಕ್ಕೆ ತೆರಳಿದೆ. ಸ್ನಾನದ ನಡುವೆ ಮತ್ತೆ ಅದೇ ಅನುಭವ. ಕೂಡಲೇ ಟಾರ್ಚ್ ಬೆಳಕನ್ನು ಹರಿಸಿದೆ.ಬೆಳಕಿಗೆ ಬೆಂಕಿಯ ಕೆಂಡಗಳಂತೆ ಎರಡು ಕಣ್ಣುಗಳು ಪ್ರಜ್ವಲಿಸಿ ಕ್ಷಣಮಾತ್ರದಲ್ಲಿ ಇಲ್ಲವಾದವು. ಕಾಡು ಬೆಕ್ಕೋ ಅಥವಾ ನರಿಯೋ ಇರಬಹುದೆಂದುಕೊಂಡೆ. ಹೊಳೆದು ಮಾಯವಾದ ಕಣ್ಣುಗಳು ರಾತ್ರಿಯ ನಿದ್ರೆಯಲ್ಲೂ ಕಾಡಿದವು.

ಕಂಡ ದೃಶ್ಯವನ್ನು ವಿವರಿಸಿದಾಗ ನಮ್ಮ ಸಹಾಯಕರು ದಿಗಿಲುಗೊಂಡರು. ನಮ್ಮ ಸ್ನಾನದ ಮನೆಗೆ ತೀರ ಹತ್ತಿರದಲ್ಲಿ ಹುಣಸೆ ಮರವೊಂದಿತ್ತು. ಅಲ್ಲಿ ಮೋಹಿನಿ ವಾಸವಾಗಿರಬಹುದೆಂಬ ಅನಿಸಿಕೆ ಅವರಲ್ಲಿ ದಟ್ಟವಾಗಿತ್ತು. ಈಗ ಅದೇ ಮೋಹಿನಿ ನನ್ನನ್ನು ಕಾಡುತ್ತಿರುಬಹುದೆಂಬ ಸಂದೇಹಕ್ಕೆ ಒಳಗಾದರು.

ರಾತ್ರಿಯಲ್ಲಿ ನನ್ನನ್ನು ಕಾಡಿದ ಆ ಅಪರಿಚಿತ ಕಣ್ಣುಗಳ ಸತ್ಯಾಸತ್ಯತೆಗಳನ್ನು ಅರಿಯಲು ಬೆಳಕುಮೂಡುವ ಮುನ್ನವೆ ಎಚ್ಚರಗೊಂಡು ಸ್ನಾನದ ಮನೆಯತ್ತ ತೆರಳಿ ಬಿಟ್ಟು ಹೋಗಿರಬಹುದಾದ ಕುರುಹುಗಳಿಗಾಗಿ ಹುಡುಕಿದೆ. ಹತ್ತಿರದ ಪೊದರಿನ ಬಳಿ ತೋಳವೊಂದರ ಹೆಜ್ಜೆಯ ಗುರುತಿತ್ತು. ಬಹುಶಃ ಅದು ಹಿಂದಿನ ಮುಂಜಾನೆ ನಾನು ಹುಡುಕಿಹೋಗಿದ್ದ ಹೆಣ್ಣು ತೋಳವಿರಬಹುದು. ತನ್ನ ಗೂಡಿನ ಬಳಿ ಸುಳಿದಾಡಿದವನು ಯಾರೆಂದು ಪರೀಕ್ಷಿಸಿರಬಹುದು... ಎಂದೆಲ್ಲಾ ಅನಿಸತೊಡಗಿತು. ನನಗರಿವಿಲ್ಲದಂತೆ ನಾನು ಸಹ ಯಾವುದೋ ನಂಬಿಕೆಯಲ್ಲಿ ಕಳೆದುಹೋಗುತ್ತಿರುವಂತೆ ಅನಿಸತೊಡಗಿತ್ತು.

ಆ ಹೆಣ್ಣು ತೋಳ ನನ್ನ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಆರಂಭಿಸಿತ್ತು. ದೀರ್ಘಕಾಲದ ಸುತ್ತಾಟದಲ್ಲಿ ತೋಳಗಳನ್ನು ನೋಡಲಾಗದಿದ್ದರೂ ಬೇರೊಂದು ಬಗೆಯಲ್ಲಿ ಅವು ಆಗಲೇ ನಮ್ಮನ್ನು ಆವರಿಸುತ್ತಿರುವ ಅನುಭವವಾಗತೊಡಗಿತು. ಮಿಥ್ಯೆ, ನಂಬಿಕೆ, ದಂತಕಥೆಗಳಿಂದ ಬೇರ್ಪಡಿಸಿ ತೋಳಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನಗಳೇ ನಿರರ್ಥಕವೆನೊ?  ಮತ್ತೆ ‘Wolf Totem’ ಪುಸ್ತಕವನ್ನು ಕೈಗೆತ್ತಿಕೊಂಡೆ. ನಂಬಿಕೆಗಳಲ್ಲಿ ಅಡಗಿ ಕುಳಿತು, ರೂಪಕದ ಸ್ವರೂಪ ಪಡೆಯುವ ತೋಳಗಳ ಚೈತನ್ಯ ಮತ್ತೆ ಇಷ್ಟವಾಗತೊಡಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT