ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀನಾನಗರ ದಾಳಿ: ಪಾಕ್‌ನಿಂದ ಬಂದಿದ್ದ ಉಗ್ರರು–ರಾಜನಾಥ್‌

Last Updated 30 ಜುಲೈ 2015, 19:34 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬಿನ ಗುರುದಾಸಪುರದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಪಾಕಿಸ್ತಾನ ಪ್ರಚೋದನೆ ನೀಡಿದೆ. ಈ ಆರೋಪವನ್ನು ಪುಷ್ಟೀಕರಿಸುವ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿವೆ ಎಂದು ಸರ್ಕಾರ ಗುರುವಾರ ಹೇಳಿದೆ.

ಪಾಕ್‌ ಕಡೆಯಿಂದ ಗಡಿಯೊಳಗೆ ನುಸುಳಿರಬಹುದಾದ ಮೂವರು ಭಯೋತ್ಪಾದಕರು ಗುರುದಾಸ್‌ಪುರದಲ್ಲಿ ದಾಳಿ ನಡೆಸಿದ್ದಾರೆಂದು ಗೃಹ ಸಚಿವ ರಾಜನಾಥ್‌ ಸಿಂಗ್‌ ರಾಜ್ಯಸಭೆಗೆ ತಿಳಿಸಿದರು. ಕಾಂಗ್ರೆಸ್‌ ಸದಸ್ಯರ ಗದ್ದಲ– ಪ್ರತಿಭಟನೆ ನಡುವೆ ಅವರು ಹೇಳಿಕೆ ನೀಡಿದರು.

ಗಡಿಯಾಚೆಗಿನ ಪ್ರಚೋದನೆಯಿಂದ ನಡೆಯುವ ಭಯೋತ್ಪಾದನೆಯನ್ನು ಬಗ್ಗು ಬಡಿಯಲು ಸರ್ಕಾರ ಸತತ ಪ್ರಯತ್ನ ಮಾಡುತ್ತಿದೆ. ಶತ್ರು ರಾಷ್ಟ್ರಗಳು ನಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳದೆ ದೇಶದ ಐಕ್ಯತೆ– ಸಮಗ್ರತೆ ಅಥವಾ ನಾಗರಿಕರ ಸುರಕ್ಷತೆಗೆ ಭಂಗ ಉಂಟುಮಾಡಿದರೆ ಭದ್ರತಾ ಪಡೆಗಳು ತಕ್ಕ ಉತ್ತರ ಕೊಡುತ್ತವೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು. ರಾವಿ ನದಿ ಪಾಕಿಸ್ತಾನ ಪ್ರವೇಶಿಸುವ ಗುರುದಾಸ್‌ಪುರ ಬಳಿಯ ತಾಸ್‌ ಸಮೀಪ ಭಯೋತ್ಪಾದಕರು ನುಸುಳಿ ಬಂದಿದ್ದಾರೆಂದು ‘ಜಿಪಿಎಸ್‌’ ದಾಖಲೆಗಳಿಂದ ಗೊತ್ತಾಗಿದೆ. ನಮ್ಮ ಪಡೆಗಳು ಗಡಿಯೊಳಗೆ ಎಚ್ಚರಿಕೆಯಿಂದಿವೆ ಎಂದು ಅವರು ವಿವರಿಸಿದರು.

ಈಚೆಗೆ ಸುರಿದ ಭಾರಿ ಮಳೆಯಿಂದ ನಿರ್ಮಾಣವಾಗಿರುವ ದುರ್ಗಮ ಹಾದಿಗಳ ಮೂಲಕ ಭಯೋತ್ಪಾದಕರು  ಪ್ರವೇಶಿಸಿದ್ದಾರೆಂದು ಅವರು ವಿವರಿಸಿದರು. ಈ ಭಯೋತ್ಪಾದಕರೇ ದೀನಾನಗರ ಸಮೀಪದ ತಳವಂಡಿ ಗ್ರಾಮದ ಬಳಿ ರೈಲ್ವೆ ಹಳಿ ಮೇಲೆ ಸ್ಫೋಟಕಗಳನ್ನು ಇಟ್ಟಿರಬಹುದೆಂದು ಶಂಕಿಸಿದರು. ಭದ್ರತಾ ಪಡೆಗಳು ಸ್ಫೋಟಕಗಳನ್ನು ನಿಷ್ಕ್ರೀಯಗೊಳಿಸಿದೆ. ಸ್ಫೋಟಕಗಳನ್ನು ರಾತ್ರಿ ಸಮಯದಲ್ಲಿ ಇಡಲಾಗಿದೆ. ಅದಕ್ಕಾಗಿ ರಾತ್ರಿ ಕಾಣುವಂಥ ಉಪಕರಣಗಳನ್ನು ಬಳಸಲಾಗಿದೆ. ಈ ಉಪಕರಣಗಳು ಸ್ಥಳದಲ್ಲಿ ಸಿಕ್ಕಿವೆ ಎಂದು ಸಚಿವರು ಹೇಳಿದರು.

ಭಯೋತ್ಪಾದನೆಯನ್ನು ಬುಡ ಸಹಿತ ಕಿತ್ತೊಗೆಯಲು ಸರ್ಕಾರ ಬದ್ಧವಾಗಿದೆ ಎಂದು ರಾಜನಾಥ್‌ ಸದಸ್ಯರಿಗೆ ಭರವಸೆ ನೀಡಿದರು. ಕಳೆದ ಒಂದು ತಿಂಗಳಲ್ಲಿ ಐದು ಸಲ ಭಯೋತ್ಪಾದಕರು ನಮ್ಮ ಗಡಿಯೊಳಗೆ ನುಸುಳಲು ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ನಾಲ್ಕು ಪ್ರಯತ್ನಗಳನ್ನು ತಡೆಯಲಾಗಿದೆ. ಒಂದು ಪ್ರಕರಣದಲ್ಲಿ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿ ಭಯೋತ್ಪಾದಕರನ್ನು ಹಿಮ್ಮೆಟ್ಟಿಸಿವೆ ಎಂದು ರಾಜನಾಥ್‌ ಸಿಂಗ್‌ ನುಡಿದರು.

ಪಂಜಾಬ್‌ ಪೊಲೀಸರು ಅತ್ಯುತ್ತಮವಾದ ಕೆಲಸ ಮಾಡಿದ್ದಾರೆ. ಭಯೋತ್ಪಾದಕರು ಪರಾರಿಯಾಗಲು ಬಿಡದೆ, ಯಶಸ್ವಿಯಾಗಿ ಹತ್ತಿಕ್ಕಿದ್ದಾರೆ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ಜಾಣ್ಮೆಯಿಂದ ನಡೆಸುವ ಮೂಲಕ ಹೆಚ್ಚಿನ ಅನಾಹುತ ಆಗದಂತೆ ನೋಡಿಕೊಂಡಿದ್ದಾರೆಂದು ಗೃಹ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ವೇಳೆ ತಾವು ಖುದ್ದು ಮುಖ್ಯಮಂತ್ರಿ ಪ್ರಕಾಶ್‌ಸಿಂಗ್‌ ಬಾದಲ್‌ ಅವರ ಜತೆ ಮಾತನಾಡಿ ರಾಜ್ಯ ಸರ್ಕಾರಕ್ಕೆ ಕೇಂದ್ರ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದೆ. ಈ ಕಾರ್ಯಾಚರಣೆ ವೇಳೆ ಗಡಿ ಉದ್ದಕ್ಕೂ ಗಡಿ ಭದ್ರತಾ ಪಡೆ ನಿಯೋಜನೆ ಮಾಡಲಾಗಿತ್ತು ಎಂದೂ ತಿಳಿಸಿದರು.

ರಾಜನಾಥ್‌ ಸಿಂಗ್‌ ಸದನದಲ್ಲಿ ಹೇಳಿಕೆ ನೀಡುವಾಗ ಕಾಂಗ್ರೆಸ್‌ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್‌ಡಿಎ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಉಪ ಸಭಾಪತಿ ದೇಶದ ಮೇಲೆ ನಡೆದಿರುವ ದಾಳಿ ಕುರಿತು ಗೃಹ ಸಚಿವರು ಹೇಳಿಕೆ ನೀಡುವ ಸಮಯದಲ್ಲಿ ಗದ್ದಲ ಎಬ್ಬಿಸುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT