ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀನ್‌ ದಯಾಳ್‌: ಕಾಲವನ್ನು ಅಮೃತಗೊಳಿಸಿದ ಕಲೆಗಾರ

Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಲವನ್ನು ಹಿಡಿದಿಡುವ ಶಕ್ತಿ ಛಾಯಾಚಿತ್ರಗಳಿಗಿದೆ ಎಂಬ ಮಾತಿದೆ. ಗತಕ್ಕೆ ಸಂದ ಕಾಲವನ್ನು ವರ್ತಮಾನದಲ್ಲಿ ಕಣ್ಣೆದುರಿಗೆ ಕಟ್ಟಿಕೊಡುವ ಛಾಯಾಚಿತ್ರಗಳು ಕೇವಲ ಕಾಲದ ಪಳಯುಳಿಕೆಗಳಲ್ಲ; ಅವು ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಬೆಸೆಯುವ ಸೇತುಗಳು.

19ನೇ ಶತಮಾನದಲ್ಲಿ ಭಾರತೀಯ ಛಾಯಾಚಿತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ರಾಜಾ ದೀನ್‌ ದಯಾಳ್‌ ಅವರದು ಪ್ರಮುಖ ಹೆಸರು. ಭಾರತದಲ್ಲಿ ಛಾಯಾಚಿತ್ರ ಮಾಧ್ಯಮವನ್ನು ಪ್ರವರ್ಧಮಾನಕ್ಕೆ ತಂದ ದೀನ್‌ ದಯಾಳ್‌, ಈ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದವರು. ಉತ್ತರ ಪ್ರದೇಶದ ಮೀರಠ್‌ನ ಸರ್ಡಾನಾದ ಅಕ್ಕಸಾಲಿಗ ಕುಟುಂಬವೊಂದರಲ್ಲಿ 1844ರಲ್ಲಿ ಜನಿಸಿದ ದೀನ್‌ ದಯಾಳ್‌ ಅವರು ರೂರ್ಕಿಯ ಥಾಮ್ಸನ್‌ ಸಿವಿಲ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 1866ರಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು.

ರಕ್ತಗತವಾಗಿ ಬಂದಿದ್ದ ಕಲಾಸಕ್ತಿಯು ಮುಂದೆ ಅವರು ಭಾರತದ ಅಪ್ರತಿಮ ಛಾಯಾಚಿತ್ರಗಾರರಾಗಿ ಬೆಳೆಯುವಂತೆ ಮಾಡಿತು. ಪದವಿ ವ್ಯಾಸಂಗದ ಬಳಿಕ ದೀನ್‌ ದಯಾಳ್‌ ಇಂದೋರ್‌ನ ಲೋಕೋಪಯೋಗಿ ಇಲಾಖೆಯ ಕರಡು ವಿಭಾಗದ ಮುಖ್ಯಸ್ಥರಾಗಿ ಸರ್ಕಾರಿ ಸೇವೆಗೆ ಸೇರಿದರು. ಕಾಲೇಜಿನಲ್ಲಿ ಕಲಿತಿದ್ದ ಛಾಯಾಗ್ರಾಹಣ ಅವರೊಳಗೆ ಕಲೆಯ ಬಳ್ಳಿಯಾಗಿ ಬೆಳೆಯುತ್ತಿತ್ತು. ಅವರ ಆ ಆಸಕ್ತಿಯ ಬಳ್ಳಿಗೆ ನೀರೆದವರು ಇಂದೋರ್‌ನ ರಾಜ ಎರಡನೇ ತುಕೋಜಿರಾವ್.

ಮಧ್ಯ ಭಾರತದ ಪ್ರವಾಸ
1871ರಲ್ಲಿ ತುಕೋಜಿರಾವ್, ದೀನ್‌ ದಯಾಳ್‌ ಅವರನ್ನು ಅಂದಿನ ಮಧ್ಯ ಭಾರತದ ಗವರ್ನರ್ ಜನರಲ್ ಲಾರ್ಡ್ ಮೆಯೊ ಅವರ

ಪ್ರತಿನಿಧಿಯಾಗಿದ್ದ ಸರ್ ಹೆನ್ರಿ ಡಾಲಿ ಅವರಿಗೆ ಪರಿಚಯಿಸಿದರು. ಇದು ದೀನ್‌ ದಯಾಳ್‌ ಅವರ ಜೀವನದ ದಿಕ್ಕನ್ನೇ ಬದಲಿಸಿತು. ರಾಜಾಶ್ರಯದಿಂದ ದೀನ್‌ ದಯಾಳ್‌ ಅವರ ಕಲೆಗೆ ಪ್ರೋತ್ಸಾಹದ ಬಲ ಸಿಕ್ಕಿತು. ಡಾಲಿ ಅವರೊಂದಿಗೆ ಬುಂದೇಲ್‌ಖಂಡ, ಮಧ್ಯ ಭಾರತದ ಪ್ರವಾಸ ಕೈಗೊಂಡ ದೀನ್‌ ದಯಾಳ್‌ ಅಲ್ಲಿನ ಪರಿಸರವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಡಾಲಿ ಅವರ ನಿವೃತ್ತಿಯ ಬಳಿಕ ಅವರ ಜಾಗಕ್ಕೆ ನಿಯೋಜಿತರಾದ ಸರ್ ಲೆಫೆಲ್ ಗ್ರಿಫಿನ್ ಅವರು ಕೂಡ ದೀನ್‌ ದಯಾಳ್‌ ಅವರನ್ನು ಅಧಿಕೃತ ಛಾಯಾಗ್ರಾಹಕರನ್ನಾಗಿ ಮುಂದುವರಿಸಿದರು. ಗ್ರಿಫಿನ್ ಅವರ ಜತೆಗೆ ದೀನ್‌ ದಯಾಳ್‌ ಅವರು 1882ರಲ್ಲಿ ಮತ್ತೆ ಬುಂದೇಲ್‌ಖಂಡದ ಪ್ರವಾಸ ಕೈಗೊಂಡರು. ಅವರ ಛಾಯಾಚಿತ್ರಗಳು ಗ್ರಿಫಿನ್ ಅವರ ‘Famous monuments of Central India’ ಪುಸ್ತಕದಲ್ಲಿ ಪ್ರಕಟಗೊಂಡವು.

ಈ ಪುಸ್ತಕದಲ್ಲಿ ಪ್ರಕಟಗೊಂಡ ಛಾಯಾಚಿತ್ರಗಳು ದೀನ್‌ ದಯಾಳ್‌ ಅವರಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಹೆಸರು ತಂದುಕೊಟ್ಟವು. ಈ ಮಧ್ಯೆ 1870ರಲ್ಲಿ ದೀನ್‌ ದಯಾಳ್‌ ಅವರು ಸಿಕಂದರಾಬಾದ್, ಬಾಂಬೆ ಮತ್ತು ಇಂದೋರ್‌ನಲ್ಲಿ ‘ಲಾಲ ದೀನ್‌ ದಯಾಳ್‌ ಅಂಡ್ ಸನ್ಸ್’ ಸ್ಟುಡಿಯೊ ಆರಂಭಿಸಿದರು. 1876ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ವೇಲ್ಸ್‌ನ ಯುವರಾಜ ಮತ್ತು ಯುವರಾಣಿಯವರ ಪ್ರವಾಸದ ಛಾಯಾಚಿತ್ರಗಳನ್ನು ದೀನ್‌ ದಯಾಳ್‌ ಸೆರೆ ಹಿಡಿದರು.

1884ರಲ್ಲಿ ದೀನ್‌ ದಯಾಳ್‌ ಅವರು ಹೈದರಾಬಾದ್‌ನ ಆರನೇ ನಿಜಾಮ ಮಹಮ್ಮದ್‌ ಅಲಿ ಖಾನ್‌ ಅವರ ಆಸ್ಥಾನ ಛಾಯಾಗ್ರಾಹಕರಾಗಿ ನೇಮಕಗೊಂಡರು. 1894ರಲ್ಲಿ ನಿಜಾಮ, ದೀನ್ ದಯಾಳ್‌ ಅವರಿಗೆ ‘ರಾಜಾ’ ಬಿರುದು ಪ್ರದಾನ ಮಾಡಿದರು. ಅಲ್ಲಿಂದ ಮುಂದೆ ಅವರು ರಾಜಾ ದೀನ್ ದಯಾಳ್ ಎಂದೇ ಖ್ಯಾತರಾದರು. 1887ರಲ್ಲಿ ದೀನ್‌ ದಯಾಳ್‌ ಅವರು ಬ್ರಿಟನ್‌ ರಾಣಿ ವಿಕ್ಟೋರಿಯಾ ಅವರ ಛಾಯಾಗ್ರಾಹಕರಾಗಿ ನೇಮಕಗೊಂಡರು. ಛಾಯಾಗ್ರಾಹಕರೊಬ್ಬರು ಅತಿ ಹೆಚ್ಚು ರಾಜಾಶ್ರಯ, ರಾಜ ಮರ್ಯಾದೆ ಪಡೆದಿದ್ದರೆ ಬಹುಶಃ ಅದು ದೀನ್ ದಯಾಳ್ ಎನಿಸುತ್ತದೆ.

ಗಾಜಿನ ಫಲಕದ ನೆಗೆಟಿವ್
ಗಾಜಿನ ಫಲಕದ ಮೇಲೆ ಪಿಕ್ಚರ್ ಮೂಡಿಸಿ, ಕಂಪೋಸ್ ಮಾಡುವ ಅಂದಿನ ಕ್ಲಿಷ್ಟಕರ ಕಾರ್ಯ ದೀನ ದಯಾಳ್ ಅವರಿಗೆ ಇಷ್ಟದ ಕೆಲಸವಾಗಿತ್ತು. ಗಾಜಿನ ಫಲಕದ ನೆಗೆಟಿವ್ ಅನ್ನು ಜಿಂಕೆ, ಆಡು, ಕುರಿಯ ಒಣಚರ್ಮದ ಮೇಲೆ ಮೂಡಿಸಿ ಚಿತ್ರ ಅಚ್ಚು ಹಾಕುವ ಪ್ರಯೋಗಗಳು ಆ ದಿನಗಳಲ್ಲಿ ನಡೆಯುತ್ತಿದ್ದವು. ಡಿಜಿಟಲ್‌ ಕ್ಯಾಮೆರಾಗಳ ಮೂಲಕ ಒಂದು ಕ್ಲಿಕ್ಕಿಗೆ ಛಾಯಾಚಿತ್ರ ತೆಗೆಯುವ ಈ ಕಾಲಕ್ಕೆ ಹೋಲಿಸಿದರೆ, ಅವು ಛಾಯಾಗ್ರಹಣದ ಕಷ್ಟಕರ ದಿನಗಳೇ ಸರಿ.

ಕೇವಲ ತಾಂತ್ರಿಕತೆಯ ಕಡೆಗೆ ಮಾತ್ರ ಗಮನಕೊಡದೆ ಕಲಾವಂತಿಕೆಗೆ ಹೆಚ್ಚು ಒತ್ತು ಕೊಟ್ಟಿದ್ದು ದೀನ್ ದಯಾಳ್ ಅವರ ವೈಶಿಷ್ಟ್ಯ. ಅವರ ಕಪ್ಪು ಬಿಳುಪಿನ ಛಾಯಾಚಿತ್ರಗಳಲ್ಲಿ ನೆರಳು ಬೆಳಕಿನ ಸಂಯೋಜನೆ ಅವರ ಕಸುಬುಗಾರಿಕೆಯನ್ನು ಸಾಬೀತು ಪಡಿಸುತ್ತದೆ.
ಅದು 19ನೇ ಶತಮಾನ. ಭಾರತದಲ್ಲಿ ಛಾಯಾಗ್ರಹಣದ ಆರಂಭದ ದಿನಗಳವು. ಇಂಗ್ಲೆಂಡ್‌ನಲ್ಲಿ ಛಾಯಾಗ್ರಹಣ ತರಬೇತಿ ಪಡೆದ ಕೆಲವರು ಭಾರತದ ಕೆಲವೇ ಮಹಾನಗರಗಳಲ್ಲಿ ಸ್ಟುಡಿಯೊಗಳನ್ನು ತೆರೆದಿದ್ದರು. ಸ್ಟುಡಿಯೊಗಳನ್ನು ಹೊಂದಿದ್ದ ಬಹುಪಾಲು ಮಂದಿ ಬ್ರಿಟಿಷರೇ ಆಗಿದ್ದರು. ಆ ಕಾಲದಲ್ಲಿ ಬ್ರಿಟಿಷ್‌ ಛಾಯಾಗ್ರಾಹಕರಿಗಿಂತ ಹೆಚ್ಚು ಖ್ಯಾತಿ ಗಳಿಸಿದವರು ದೀನ್‌ ದಯಾಳ್‌.

ಜನ ಸಾಮಾನ್ಯರ  ಚಿತ್ರಪಟ
ದೀನ್‌ ದಯಾಳ್‌ ಅವರು ರಾಜ, ಮಹಾರಾಜರು, ಬ್ರಿಟಿಷ್‌ ಅಧಿಕಾರಿಗಳು, ಅರಮನೆಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದಿರುವಂತೆ ಜನ ಸಾಮಾನ್ಯರನ್ನೂ ತಮ್ಮ ಕ್ಯಾಮೆರಾದಲ್ಲಿ ಹಿಡಿದಿಡುವ ಮೂಲಕ ಅವರನ್ನೂ ಜೀವಂತವಾಗಿಸಿದ್ದಾರೆ. ಬೀದಿ ಬದಿಯ ಕೋತಿಯಾಟ, ದೊಂಬರಾಟ, ಕರಡಿಯಾಟ, ಕೂಲಿ ಕಾರ್ಮಿಕ ಮಹಿಳೆಯರು ಅವರ ಕ್ಯಾಮೆರಾದ ಮೂಲಕ ಚಿತ್ರಗಳಾಗಿದ್ದಾರೆ. 

ಹೈದರಾಬಾದ್‌ ನಿಜಾಮರ ಕೆಲಸಗಾರರು ಜಮೀನಿನಲ್ಲಿ ಎತ್ತುಗಳಂತೆ ದುಡಿಯುತ್ತಿರುವ ಚಿತ್ರವು ಅಂದಿನ ಗುಲಾಮಗಿರಿಯ ಕಷ್ಟಕರ ದಿನಗಳನ್ನು ಕಟ್ಟಿಕೊಟ್ಟಿದ್ದರೆ, ನದೀ ತೀರದಲ್ಲಿ ಕೂಲಿಯವರು ಆನೆ ಹಾಗೂ ಹಸುಗಳನ್ನು ತೊಳೆಯುತ್ತಿರುವ ಛಾಯಾಚಿತ್ರದಲ್ಲಿ ನೀರ ಮೇಲೆ ನೆರಳು ಹಾಗೂ ತರಂಗದಾಟಗಳನ್ನು ಕಲಾತ್ಮಕವಾಗಿ ಹಿಡಿದಿಟ್ಟಿರುವ ದೀನ್‌ ದಯಾಳ್‌ ಅವರ ಛಾಯಾಚಿತ್ರವು ಚಿತ್ರರೂಪಕವೇ ಆಗಿದೆ. ಐತಿಹಾಸಿ ಸ್ಮಾರಕ, ಅರಮನೆಗಳನ್ನು ಲಾಂಗ್‌ ಪ್ಯಾನ್‌ನಲ್ಲಿ, ಇಡೀ ಪರಿಸರ ಚೌಕಟ್ಟಿಗೆ ಸಿಗುವಂತೆ ಸೆರೆ ಹಿಡಿದಿರುವುದು ದೀನ್‌ ದಯಾಳ್‌ ಅವರ ಛಾಯಾಗ್ರಹಣದ ಮತ್ತೊಂದು ವೈಶಿಷ್ಟ್ಯ.

ಐತಿಹಾಸಿಕ ಕಟ್ಟಡಗಳ ಛಾಯಾಚಿತ್ರಗಳನ್ನು ತೆಗೆಯಲು ಇಂದಿಗೂ ಬಹುತೇಕ ಛಾಯಾಗ್ರಾಹಕರು ಬಳಸುವ ಲಾಂಗ್‌ ಶಾಟ್‌, ದೀನ್‌ ದಯಾಳ್‌ ಅವರ ಛಾಯಾಚಿತ್ರಗಳನ್ನು ನೆನಪಿಸುತ್ತವೆ. ದೀನ್‌ ದಯಾಳ್‌ ಅವರು ಕೇವಲ ಮಧ್ಯ ಭಾರತದ ಸ್ಮಾರಕಗಳನ್ನು ಮಾತ್ರ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿಲ್ಲ. ಕರ್ನಾಟಕದ ಮೈಸೂರು, ಶ್ರೀರಂಗಪಟ್ಟಣ, ಗುಲ್ಬರ್ಗ, ವಿಜಾಪುರ ಹಾಗೂ ತಮಿಳುನಾಡು, ಕೇರಳದ ಐತಿಹಾಸಿಕ ಕಟ್ಟಡಗಳು ಹಾಗೂ ದೇವಾಲಯಗಳನ್ನು ಅವರು ತಮ್ಮ ಕ್ಯಾಮೆರಾಗಳಲ್ಲಿ ಹಿಡಿದಿಟ್ಟಿದ್ದಾರೆ.

ಐತಿಹಾಸಿಕ ದಾಖಲೆಗಳು
ದೀನ್‌ ದಯಾಳ್‌ ಅವರು ಸೆರೆ ಹಿಡಿದಿರುವ ಬ್ರಿಟಿಷ್‌ ರಾಣಿ, ರಾಜಕುಮಾರರ ಪ್ರವಾಸದ ಚಿತ್ರಗಳು, ಹೈದರಾಬಾದ್‌ನ ನಿಜಾಮರು ಹಾಗೂ ಬ್ರಿಟಿಷ್ ಅಧಿಕಾರಿಗಳ ಹುಲಿ ಬೇಟೆಯ ಚಿತ್ರಗಳು, ಭಾರತದ ರಾಜ, ಮಹಾರಾಜರು, ರಾಜ ಕುಟುಂಬಗಳ ಛಾಯಾಚಿತ್ರಗಳು ಮಹತ್ವದ ಐತಿಹಾಸಿಕ ದಾಖಲೆಗಳಾಗಿವೆ. ಮೈಸೂರಿನ ಮಹಾರಾಜ ಹತ್ತನೇ ಚಾಮರಾಜೇಂದ್ರ ಒಡೆಯರ್‌ ಅವರೂ ದೀನ್‌ ದಯಾಳ್‌ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ!

ವಿಜಾಪುರದ ಬಾರಾ ಕಮಾನು, ಗುಲ್ಬರ್ಗದ ಕೋಟೆಬೀದಿ, ಮಹಾ ಕಮಾನಿನ ಛಾಯಾ­ಚಿತ್ರ­ಗಳು, ಹೈದರಾಬಾದ್‌ ನಿಜಾಮರ ಕುಟುಂಬ ಸದಸ್ಯರ ಛಾಯಾ­ಚಿತ್ರಗಳು, ಬ್ರಿಟಿಷ್‌ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರ ಛಾಯಾಚಿತ್ರಗಳು ­ಸೇರಿ ಅಪರೂಪದ ಛಾಯಾ­ಚಿತ್ರಗಳ ಸಂಗ್ರಹ ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿದೆ. 

1989ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾಕೇಂದ್ರವು ದೀನ್‌ ದಯಾಳ್‌ ಅವರ ಕುಟುಂಬ ಸದಸ್ಯರಿಂದ 2,857 ಗಾಜಿನ ಫಲಕದ ನೆಗೆಟಿವ್‌ಗಳು ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸಿದೆ. ಲಂಡನ್‌ನ ಬ್ರಿಟಿಷ್‌ ಮ್ಯೂಸಿಯಂನಲ್ಲೂ ದೀನ್‌ ದಯಾಳ್‌ ಅವರ ಅಪರೂಪದ ಛಾಯಾಚಿತ್ರಗಳ ಸಂಗ್ರಹವಿದೆ. ಇದಲ್ಲದೆ, ಬ್ರಿಟನ್‌ ಹಾಗೂ ಭಾರತದ ಅರಮನೆಗಳಲ್ಲಿ ರಾಜ, ಮಹಾರಾಜರು ದೀನ್‌ ದಯಾಳ್‌ ಅವರು ಸೆರೆ ಹಿಡಿದಿರುವ ಛಾಯಾಚಿತ್ರಗಳಲ್ಲಿ ಜೀವಂತವಾಗಿದ್ದಾರೆ!

ಐತಿಹಾಸಿಕ ಸ್ಮಾರಕಗಳು, ಅರಮನೆಗಳು, ರಾಜ ಪ್ರಮುಖರು, ಬ್ರಿಟಿಷ್ ಅಧಿಕಾರಿಗಳು, ಸೇನಾಧಿಕಾರಿಗಳ ಛಾಯಾಚಿತ್ರಗಳ ಮೂಲಕ ದೀನ್ ದಯಾಳ್ ಅವರು ನಿಜಕ್ಕೂ ಕಾಲವನ್ನು ಕಟ್ಟಿ ಹಾಕಿದ್ದಾರೆ. ಹೀಗೆ ಕಾಲವನ್ನು ಕಟ್ಟಿ ಹಾಕಿದ ಅಪರೂಪದ ಛಾಯಾಗ್ರಾಹಕ ದೀನ್‌ ದಯಾಳ್‌ ಅವರು 1905ರ ಜುಲೈ 5ರಂದು ಬಾಂಬೆಯಲ್ಲಿ ಕಾಲವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT