ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಹಣತೆಗಳ ಮೆರುಗು

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ದೀಪಾವಳಿ ದೀಪಗಳ ಹಬ್ಬ. ಈ ಬೆಳಕಿನ ಹಬ್ಬದ ನಿಮಿತ್ತ ಪ್ರತಿ ಮನೆ­ಯಲ್ಲೂ ಬಣ್ಣಬಣ್ಣದ ತೂಗು­ದೀಪ, ಹಣತೆ, ಪಟಾಕಿ ಖರೀದಿ ಜೋರಾ­ಗಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಹೊಸದಾಗಿ ಮಾರು­ಕಟ್ಟೆಗೆ ಬಂದಿರುವ ವಿಭಿನ್ನ, ವಿಶಿಷ್ಟ ವಿನ್ಯಾಸದ ದೀಪ, ಹಣತೆಗಳನ್ನು ಖರೀದಿಸುವುದರಲ್ಲಿ ಗ್ರಾಹಕರು ಬ್ಯುಸಿಯಾಗುತ್ತಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಲ್ಲೇಶ್ವರದಲ್ಲಿರುವ ವರ್ಣ ಸಂಸ್ಥೆ ವಿವಿಧ ಬಗೆಯ, ವಿನ್ಯಾಸದ ದೀಪಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಏರ್ಪಡಿಸಿದೆ. ‘ವರ್ಣ’ ಕಳೆದ 13 ವರ್ಷಗಳಿಂದ ದೀಪಗಳ ಪ್ರದರ್ಶನ ನಡೆಸಿಕೊಂಡು ಬರುತ್ತಿದೆ. ಈ ವರ್ಷ ವಿಶೇಷವಾಗಿ ವಿವಿಧ ರಾಜ್ಯಗಳ ಕಲಾವಿದರು ತಯಾರಿಸಿದ ಹಲವು ಬಗೆಯ ದೀಪಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಹರಳು­ಗಳಿಂದ ಅಲಂಕರಿಸಿರುವ ದೀಪಗಳು, ಹೂವಿನ ಚಿತ್ರಗಳುಳ್ಳ ಆರತಿ ತಟ್ಟೆಗಳು, ಕುಸುರಿ ಕೆಲಸದ ಕುಂಕುಮ ಡಬ್ಬಿಗಳು ಎಲ್ಲರ ಕಣ್ಮನ ಸೆಳೆಯುತ್ತವೆ.

ಸುಮಾರು ನೂರು ರೀತಿಯ ದೀಪಗಳು ಈ ಪ್ರದರ್ಶನದ ಆಕರ್ಷಣೆ­­ಯಾಗಿದೆ. ರಾಜಸ್ತಾನ, ಕೊಲ್ಕತ್ತ, ಜೋಧ್‌ಪುರ, ಪಾಂಡಿಚೆರಿ, ಮಹಾ­ರಾಷ್ಟ್ರ, ಗುಜರಾತ್‌ ಕಲಾವಿದ­ರು ತಯಾ­ರಿಸಿದ ಹಣತೆಗಳನ್ನು ಇಲ್ಲಿ ಕಾಣಬಹುದು. ಪ್ರತಿವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಹಣತೆಗಳಿಗೆ ಇರುವ ಬೇಡಿಕೆಗೆ ಅನುಸಾರವಾಗಿ ವರ್ಣ ಸಂಸ್ಥೆ ವರ್ಷದ ಆರಂಭದಲ್ಲೇ ಕುಂಬಾರರಿಗೆ ವಿವಿಧ ವಿನ್ಯಾಸದ ಹಣತೆಗಳನ್ನು ತಯಾರಿಸಲು ತಿಳಿಸುತ್ತಾರೆ. ಬಳಿಕ ಇದಕ್ಕೆ ವಿವಿಧ ಬಣ್ಣ ಹಾಗೂ ಹರಳುಗಳಿಂದ ವಿಶೇಷ ಅಲಂಕಾರ ಮಾಡುತ್ತಾರೆ.

‘ಕುಂಬಾರರು ಉತ್ತಮ ರೀತಿಯ ಮಣ್ಣಿ­ನಿಂದ ಈ ದೀಪಗಳನ್ನು ತಯಾರಿ­ಸು­ತ್ತಾರೆ. ಅಲ್ಲದೇ ಹಬ್ಬಕ್ಕೆ ವಿಶಿಷ್ಟ ಕಳೆ ತರ­ಬೇಕೆಂದು ಆ ಹಣತೆಗಳಿಗೆ  ಬಣ್ಣಗಳಿಂದ, ಹರಳು­ಗಳಿಂದ ಅಲಂಕರಿಸು­ತ್ತಾರೆ. ಉತ್ತರ ಭಾರತೀ­ಯರು ಪ್ರತಿ­ವರ್ಷ ದೀಪಾ­­ವಳಿಗೆ ಹಣತೆಗಳನ್ನು ಬದಲಾಯಿ­ಸು­­ತ್ತಾರೆ. ಹೀಗಾಗಿ ಅವರು ಹಣತೆ ಅಥವಾ ದೀಪಗಳನ್ನು ಕೊಂಡುಕೊಳ್ಳು­ವಾಗ ಬದ­ಲಾವಣೆ ಬಯಸು­ತ್ತಾರೆ. ಅದಕ್ಕಾಗಿ ಪ್ರತಿ­ವರ್ಷ ವಿಶಿಷ್ಟ ಬಗೆಯ ದೀಪ ಮತ್ತು ಹಣತೆಗಳ ಸಂಗ್ರಹ ನಮ್ಮಲ್ಲಿರುತ್ತದೆ’ ಎಂದು ವರ್ಣ ಸಂಸ್ಥೆಯ ಅರುಣ್‌ ಹೇಳುತ್ತಾರೆ. 

ಪ್ರದರ್ಶನದಲ್ಲಿ ಟೆರಾಕೋಟಾ ದೀಪಗಳು, ಗೂಡು­­ದೀಪ, ಮೇಣದ ದೀಪಗಳು, ಬಣ್ಣ­ಬಣ್ಣದ ಹಣತೆ­ಗಳು, ಎಣ್ಣೆಯ ಬದಲಾಗಿ ಮೇಣದ ಬತ್ತಿ  ಇಟ್ಟು ತಯಾರಿಸಿರುವ ಹಣತೆ­ಗಳು, ನೀರಿನಲ್ಲಿ ತೇಲುವ ದೀಪ­ಗಳು ಸೇರಿದಂತೆ ಸುಮಾರು 100 ಬಗೆಯ ದೀಪಗಳು ಇಲ್ಲಿವೆ. ಜತೆಗೆ ಹಿತ್ತಾಳೆಯ ಚಿಕ್ಕ ದೀಪಗಳಿಂದ ಹಿಡಿದು ದೊಡ್ಡ ದೀಪಗಳು ಕೂಡ ಇಲ್ಲಿ ಲಭ್ಯ. 

‘ಹಣತೆಗಳಲ್ಲಿ ಎಣ್ಣೆಯ ಬದಲಾಗಿ ಬಣ್ಣ ಬಣ್ಣದ ಮೇಣದ ಬತ್ತಿ ಇಟ್ಟು ತಯಾರಿಸಿರುವ ಹಣತೆಗಳನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಇವುಗಳಿಂದ  ಎಣ್ಣೆ ಸೋರುವ, ಚೆಲ್ಲುವ ಆತಂಕವಿಲ್ಲ. ಒಮ್ಮೆ ಹಚ್ಚಿಟ್ಟರೆ ಈ ಹಣತೆಗಳು ಒಂದೆರಡು ಗಂಟೆಗಳ ಕಾಲ ಉರಿಯುತ್ತವೆ’ ಎಂದು ಹೇಳುತ್ತಾರೆ ಅರುಣ್‌.

ಪ್ರದರ್ಶನದಲ್ಲಿ ಆನೆ, ನವಿಲು, ಹಂಸ, ಲಕ್ಷ್ಮಿ, ಕಮಲ, ಮಾರ್ಕಂಡೇಯ ಹೀಗೆ ವಿವಿಧ ರೂಪಗಳುಳ್ಳ ದೀಪಗಳು ಪ್ರಮುಖ ಆಕರ್ಷಣೆಯಾಗಿವೆ. ಗಣಪತಿಯ ವಿವಿಧ ರೂಪಗಳುಳ್ಳ ಹಲವು ವಿನ್ಯಾ­ಸದ ದೀಪಗಳು ಇಲ್ಲಿವೆ. ಇವಲ್ಲದೇ ತೆಂಗಿನ ಕಾಯಿ ರೂಪವುಳ್ಳ ದೇವರ ಮೂರ್ತಿ­ಗಳನ್ನು ಹೊಂದಿದ ದೀಪಗಳು, ಗುಡಿ­ಸಲಿ­ನಂತಹ ದೀಪಗಳು ಕಣ್ಣು ಸೆಳೆ­ಯು­ತ್ತವೆ. ವಿವಿಧ ಬಗೆಯ ಹೂಗಳು, ಎಲೆ­ಗಳ ಆಕಾರದಲ್ಲೂ ದೀಪಗಳು ಲಭ್ಯ.

ದೀಪಾವಳಿಯಲ್ಲಿ ಲಕ್ಷ್ಮಿ ದೇವಿ ಮುಂದೆ ಹಾಕುವ ಮುತ್ತು, ಹರಳು­ಗಳಿಂದ ತಯಾ­ರಿಸಿದ ವಿಶೇಷ ರೆಡಿಮೇಡ್‌ ರಂಗೋಲಿಗಳು ಇಲ್ಲಿದ್ದು, ನೋಡು­ಗರ ಮನಸ್ಸಿಗೆ ಮುದ ನೀಡು­ತ್ತವೆ. ಇವು ಆನೆ, ಕಳಸ, ಸ್ವಸ್ತಿಕ್‌, ಲಕ್ಷ್ಮಿ­ದೇವಿ ರೂಪ­ದಲ್ಲಿ ಲಭ್ಯ.  ‘ಹಬ್ಬದ ಬಳಿಕ ಈ ರಂಗೋಲಿ­ಗ­ಳನ್ನು ಮನೆಯ ನಡು­ಮನೆ­ಯಲ್ಲಿ ಗೋಡೆಗೆ ಅಂಟಿಸಿದರೆ ಮನೆ ಅಂದ­ವಾಗಿ ಕಾಣುತ್ತದೆ’ ಎನ್ನುತ್ತಾರೆ ಅರುಣ್‌.

ಪ್ಲಾಸ್ಟಿಕ್‌ ಹಾಗೂ ಫೈಬರ್‌ಗಳಿಂದ ತಯಾರಿಸಿರುವ ಆರತಿ ತಟ್ಟೆಗಳನ್ನು ಮನೆಗೆ ಕೊಂಡೊಯ್ದು ಹಬ್ಬಕ್ಕೆ ಇನ್ನಷ್ಟು ಮೆರುಗು ತರಬಹುದು. ನೀರಿನಲ್ಲಿ ಹೂಗಳನ್ನು ತೇಲಿಬಿಟ್ಟು ದೀಪ­ ಬೆಳಗಿಸುವ ಆಕರ್ಷಕವಾದ ಮಣ್ಣಿನ ಅಥವಾ ಟೆರಾಕೋಟಾದ ಬಟ್ಟಲುಗಳು ಇಲ್ಲಿವೆ.
ದೀಪಾವಳಿ ಸಮಯದಲ್ಲಿ ನಮ್ಮ ಆಪ್ತರಿಗೆ ಉಡುಗೊರೆ ಕೊಡು­ವುದು ಸಾಮಾನ್ಯ. ಈ ಉಡುಗೊರೆ­ಗಳು ಸಂದರ್ಭೋಚಿತ­ವಾಗಿದ್ದರೆ ಎಲ್ಲರಿಗೂ ಖುಷಿಯಾಗುತ್ತದೆ. ಅದಕ್ಕಾಗಿ ವರ್ಣ ಪ್ರದರ್ಶನದಲ್ಲಿ ಹಣತೆಗಳುಳ್ಳ ಉಡುಗೊರೆ ಬಾಕ್ಸ್‌ ಇದೆ. ಈ ಪೆಟ್ಟಿಗೆಯಲ್ಲಿ 6ರಿಂದ 10 ಹಣತೆಗಳಿವೆ.ಪ್ರದರ್ಶನದಲ್ಲಿ ₨45 ರಿಂದ ₨10,­000­ವರೆಗಿನ ಬೆಲೆಯ ದೀಪಗಳು ಲಭ್ಯ.

ದೀಪಾವಳಿ ಹಬ್ಬಕ್ಕೆ ಮನೆಯನ್ನು ಸುಂದರವಾಗಿ ಅಲಂಕರಿಸಲು ಪ್ರದರ್ಶನದಲ್ಲಿ ವಿವಿಧ ಬಗೆಯ ರೆಡಿಮೇಡ್‌ ತೋರಣಗಳು ಲಭ್ಯ. ಪೋಡಿ ತೋರಣ, ಕ್ರಿಸ್ಟಲ್‌ ತೋರಣ, ರಾಜ­ಸ್ತಾನಿ ಕಸುರಿ ಕೆಲಸವುಳ್ಳ ತೋರಣಗಳು ಇವೆ. ಇವುಗಳ ಬೆಲೆ  ₨300ರಿಂದ ಆರಂಭವಾಗುತ್ತದೆ.ವರ್ಣ ದೀಪಾವಳಿ ದೀಪಗಳ ಪ್ರದರ್ಶನ ಹಾಗೂ ಮಾರಾಟ ಇಂದು ಕೊನೆಗೊಳ್ಳಲಿದ್ದು,  ಆಸಕ್ತರು ಪ್ರಣತಿ ಒಳಾಂಗಣ, ನಂ.97/3, 9ನೇ ಕ್ರಾಸ್‌, ಈಸ್ಟ್‌ ಪಾರ್ಕ್‌ ರಸ್ತೆ, ಅಂಚೆ ಕಚೇರಿ ಪಕ್ಕ, ಮಲ್ಲೇಶ್ವರಕ್ಕೆ ಭೇಟಿ ನೀಡಬಹುದು.
ಸಂಪರ್ಕಕ್ಕೆ: ಅರುಣ್‌: 9900108575

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT