ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಏನು ಹೇಳುತ್ತದೆ?

ಸ್ವಸ್ಥ ಬದುಕು
Last Updated 17 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಕಳೆದ ವಾರವಷ್ಟೇ ದೀಪಾವಳಿಯ ಸಂಭ್ರಮ ಮುಗಿದಿದೆ. ಆ ಹಬ್ಬದ ದೃಶ್ಯ ಎಷ್ಟು ಸುಂದರವಾಗಿತ್ತು. ಕತ್ತಲು ನಾಚಿಕೊಂಡು ಮರೆಯಾಗುತ್ತಿತ್ತು. ನೆರಳುಗಳಲ್ಲಿ ಬೆಳಕು ತುಂಬಿತ್ತು. ಹಬ್ಬ ಎಂಬುದು ಪಟಾಕಿ ಸಿಡಿಸುವುದರಲ್ಲಿ ಇಲ್ಲ. ಹಬ್ಬ ಹೊಸ ಬಟ್ಟೆಗಳಲ್ಲಿ ಇಲ್ಲ. ಹಬ್ಬ ಎಂಬುದು ಪ್ರೀತಿಸುವ ಹೃದಯದಲ್ಲಿ ಇರುತ್ತದೆ. ಶಾಂತಿ ಮತ್ತು ಒಳ್ಳೆಯ ಭಾವ ತುಂಬಿಕೊಂಡ ಮನಸ್ಸಿನಲ್ಲಿ ಇರುತ್ತದೆ. ನಮ್ಮ ನಗುವಿನಲ್ಲಿ, ಎಲ್ಲವನ್ನೂ ಸ್ವೀಕರಿಸುವ ಮನೋಭಾವದಲ್ಲಿ, ವಾತ್ಸಲ್ಯ ತುಂಬಿದ ನಡೆಯಲ್ಲಿ ಇರುತ್ತದೆ. ಬದುಕು ಎಂಬುದೇ ಹಬ್ಬ.

ಪುಟ್ಟ ಹುಡುಗಿಯೊಬ್ಬಳಿಗೆ ಸ್ಪಾಗೆಟ್ಟಿ (ಒಂದು ಬಗೆಯ ತಿನಿಸು) ಎಂದು ಉಚ್ಚರಿಸಲು ಬರುತ್ತಿರಲಿಲ್ಲ. ಆಕೆ ಉಚ್ಚರಿಸಲು ಪ್ರಯತ್ನಿಸಿದಂತೆಲ್ಲ ಆ ಶಬ್ದ ಮತ್ತಷ್ಟು ವಿಚಿತ್ರವಾಗಿ ಕೇಳುತ್ತಿತ್ತು. ಪಾಸ್ಗೆಟ್ಟಿ ಎಂದಾಗುತ್ತಿತ್ತು. ಅಳುತ್ತಿದ್ದ ಆಕೆಯನ್ನು ಅವಳ ಅಪ್ಪ ಸಂತೈಸಿದ. ಆ ಶಬ್ದ ಉಚ್ಚರಿಸಲು ಬರದಿದ್ದರೆ ಏನಂತೆ. ಸುಮ್ಮನೆ ನಕ್ಕುಬಿಡು ಎಂದ.

ಆ ಹುಡುಗಿ ಅಪ್ಪ ಹೇಳಿದ ಹಾಗೆಯೇ ಮಾಡಿದಳು. ರೆಸ್ಟೋರೆಂಟ್‌ನಲ್ಲಿ ಪಾಸ್ಗೆಟ್ಟಿ ಎಂದು ಹೇಳುತ್ತ ದೊಡ್ಡದಾಗಿ ನಕ್ಕುಬಿಟ್ಟಳು. ಆಕೆಯ ಕುಟುಂಬದವರು, ಸ್ನೇಹಿತರು ಸಹ ಜೋರಾಗಿ ನಕ್ಕುಬಿಟ್ಟರು. ಅಲ್ಲಿ ಎದ್ದ ಸಂತಸದ ಅಲೆಯನ್ನು ನೋಡಿ  ಆಕೆಗೇ ಖುಷಿಯಾಯಿತು. ದೀಪಾವಳಿ ಹೇಳುವುದು ಅದನ್ನೇ. ನಾವೆಲ್ಲ ಇಲ್ಲಿ ಹಂಚಿಕೊಳ್ಳಲು ಬಂದಿದ್ದೇವೆ. ನಮ್ಮ ಪ್ರೀತಿ, ಸಂತಸ, ನಗು ಎಲ್ಲವನ್ನೂ ಹಂಚಿಕೊಳ್ಳಬೇಕು.

ನೀವು ಮಾತನಾಡುವಾಗ ಹಾಡುತ್ತಿರುವಂತೆ ಕೇಳುತ್ತದಲ್ಲ. ನಿಮ್ಮ  ಕಣ್ಣುಗಳಲ್ಲಿ ಅಷ್ಟೊಂದು ಹೊಳಪು ಇರುತ್ತದೆಯಲ್ಲ ಎಂದು ಸಂತರೊಬ್ಬರನ್ನು ಪ್ರಶ್ನಿಸಲಾಯಿತು. ಓ, ನನ್ನ ದಾರಿ ಸರಳವಾಗಿದೆ. ನಾನು ತಿನ್ನುವಾಗ ನಗುತ್ತೇನೆ. ನಾನು ಕೆಲಸ ಮಾಡುವಾಗ ನಗುತ್ತೇನೆ. ನಾನು  ನಡೆಯುವಾಗ ನಗುತ್ತೇನೆ. ನಾನು ಅಡುಗೆ ಮಾಡುವಾಗ ನಗುತ್ತೇನೆ.

ಓ, ಎಷ್ಟು ನಿಜ ಎನ್ನುತ್ತ ಒಬ್ಬ ವ್ಯಕ್ತಿ ಹೇಳಿದ. ನಾನು ತಿನ್ನುತ್ತಿರುವಾಗ ಬೇಗನೇ ತಿಂದು ಮುಗಿಸಿ, ಕೆಲಸಕ್ಕೆ ಓಡಲು ಯತ್ನಿಸುತ್ತಿರುತ್ತೇನೆ. ಕೆಲಸ ಮಾಡುತ್ತಿರುವಾಗ ಕೆಲಸ ಮುಗಿಸಿ ಮನೆಗೆ ಹೋಗಲು ಯತ್ನಿಸುತ್ತಿರುತ್ತೇನೆ. ಮನೆಗೆ ಹೋದಾಗ ನನ್ನ ಬಳಿ ಕೇವಲ ದೂರುಗಳು ಇರುತ್ತವೆ  ಮತ್ತು ಇಡೀ ದಿನ ನಾನು ಮುಗುಳ್ನಕ್ಕಿರುವುದಿಲ್ಲ. ಯಾವಾಗಲೂ ನಗುತ್ತಲೇ ಇರಿ ಎಂದು ಬೆಳಕಿನ ಹಬ್ಬ ಹೇಳುತ್ತದೆ.

ನೀವು ತಿನ್ನುತ್ತಿರುವಾಗ ನಗುತ್ತ ಇದ್ದರೆ ತಿಂದ  ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಕೆಲಸ ಮಾಡುತ್ತಿರುವಾಗ  ನಿಮ್ಮ ಆತ್ಮಬಲದಿಂದ ನಗುತ್ತ ಕೆಲಸ ಮಾಡಿದರೆ   ಕೆಲಸದ ಗುಣಮಟ್ಟ ಹೆಚ್ಚುತ್ತದೆ. ನೀವು ನಗುತ್ತ ಇದ್ದರೆ ನಿಮ್ಮ ಒತ್ತಡ ಮರೆಯಾಗುತ್ತದೆ ಹಾಗೂ ಹೃದಯ ಸಂತಸದಿಂದ ಬಲಗೊಳ್ಳುತ್ತದೆ.

ಪ್ರಸಿದ್ಧ ಗಾಲ್ಫ್‌ ಆಟಗಾರನೊಬ್ಬನಿಗೆ ಪಂದ್ಯದಲ್ಲಿ ಗೆದ್ದಿದ್ದಕ್ಕೆ ದೊಡ್ಡ ಮೊತ್ತದ ಚೆಕ್‌ ದೊರಕಿತ್ತು. ಆತ ಕಾರಿನಿಂದ ಇಳಿಯುತ್ತಿದ್ದಂತೆ ಹರಿದ ಉಡುಪು ಧರಿಸಿದ್ದ ಬಡ ಮಹಿಳೆಯೊಬ್ಬಳು, ಅಭಿನಂದನೆಗಳು ಸರ್‌ ಎಂದಳು. ನನ್ನ ಮಗಳು ಆಸ್ಪತ್ರೆಯಲ್ಲಿದ್ದಾಳೆ. ವೈದ್ಯರು ಯಾವುದೇ ಭರವಸೆ ನೀಡುತ್ತಿಲ್ಲ. ಆಕೆಯ ಜೀವ ಉಳಿಸಿಕೊಳ್ಳಬೇಕಾದರೆ ಹಣ ಬೇಕು, ಸಹಾಯ ಮಾಡಿ ಎಂದು  ಗೋಗರೆದಳು. ಪಂದ್ಯದಲ್ಲಿ ಗೆದ್ದ ಹಣವನ್ನೆಲ್ಲ ತಕ್ಷಣವೇ ಆತ ಆಕೆಗೆ ನೀಡಿದ. ನಿನ್ನ ಮಗಳಿಗೆ ಗುಣವಾಗಲಿ ಎಂದು ಹಾರೈಸಿದ.

ಮಾರನೇ ದಿನ ಗಾಲ್ಫ್‌  ಕ್ಲಬ್‌ ಅಧಿಕಾರಿಯೊಬ್ಬ ಆ ಮಹಿಳೆ ನಿಮಗೆ ಮೋಸ ಮಾಡಿದ್ದಾಳೆ. ಆಕೆಗೆ ಮಗಳು ಇಲ್ಲ ಎಂದ. ಹಾಗಿದ್ದರೆ, ಸಾಯುತ್ತಿರುವ ಮಗು ಆಸ್ಪತ್ರೆಯಲ್ಲಿ ಇಲ್ಲವೇ. ಇದಕ್ಕಿಂತ ಒಳ್ಳೆಯ ಸುದ್ದಿ ಯಾವುದಿದೆ ಎಂದು  ಆಟಗಾರ ಪ್ರಶ್ನಿಸಿದ. ಅಪರಿಮಿತವಾದ ಪ್ರೀತಿಯನ್ನು ನೀಡಿ ಎಂದು ದೀಪಾವಳಿ ಹೇಳುತ್ತದೆ.

ನ್ಯೂಯಾರ್ಕ್‌ನ ಬೀದಿಯಲ್ಲಿ ಅನಾಥನೊಬ್ಬ ಒಣಗಿದ, ಬಾಡಿದ ಹೂ ಮಾರುತ್ತ ನಿಂತಿದ್ದ. ಸಿರಿವಂತ ಉದ್ಯಮಿಯೊಬ್ಬ ಆತನ ಡಬ್ಬಿಯಲ್ಲಿ ಒಂದು ಡಾಲರ್‌ ನೋಟು ಹಾಕಿ ಮುಂದಕ್ಕೆ ನಡೆದ. ಮತ್ತೇನೊ ನೆನಪಾದವನಂತೆ ವಾಪಸ್ಸು ಬಂದು. ಸಾರಿ, ನೀನು ಸಹ ನನ್ನಂತೆ ಉದ್ಯಮಿ. ನಿನ್ನ ಹೂವನ್ನು ನೀಡು ಎನ್ನುತ್ತ ಹೂವೊಂದನ್ನು ಎತ್ತಿಕೊಂಡ. ವರ್ಷ ಕಳೆದ ನಂತರ ಆ ಉದ್ಯಮಿ ರೆಸ್ಟೋರೆಂಟ್‌ಗೆ ತೆರಳಿದಾಗ ಚೆನ್ನಾಗಿ ಉಡುಪು ಧರಿಸಿದ ಯುವಕನೊಬ್ಬ ಆತನ ಬಳಿ ಬಂದ. ನೀವು ನನ್ನನ್ನು ಗುರುತಿಸದೇ ಇರಬಹುದು. ಆದರೆ, ಬೀದಿ ಬದಿಯಲ್ಲಿ  ಭಿಕ್ಷುಕನಂತೆ ಇದ್ದ ನನಗೆ ಆತ್ಮಗೌರವ ತಂದು ಕೊಟ್ಟಿದ್ದೀರಿ ಎಂದ. 

ವ್ಯಕ್ತಿಯೊಬ್ಬ ಸೂರ್ಯನ ಬಳಿ ನೋವು ತೋಡಿಕೊಂಡ, ನನ್ನ ಗೆಳೆಯ ಮನಸ್ಸಿಗೆ ನೋವು ಮಾಡಿದ್ದಾನೆ. ಅದನ್ನು ಮರೆಯಲಾಗುತ್ತಿಲ್ಲ ಎಂದ. ಸೂರ್ಯ ಹೇಳಿದ. ಸಮುದ್ರ ತೀರದ ಮೇಲೆ ಕಪ್ಪು ಬಣ್ಣದ ಗೋಲಿಗಳಲ್ಲಿ ನಿನ್ನ ಗೆಳೆಯನಿಗೆ ಪತ್ರ ಬರೆ. ನಿನ್ನ ಮನಸ್ಸಿನಲ್ಲಿ ಆತನ ಬಗ್ಗೆ ಇರುವ ಸಿಟ್ಟು, ಆಕ್ರೋಶ ಎಲ್ಲವನ್ನೂ ಮುಕ್ತವಾಗಿ ವ್ಯಕ್ತಪಡಿಸು. ಆ ವ್ಯಕ್ತಿ ಹಾಗೆಯೇ ಮಾಡಿದ. ಸೂರ್ಯನ ಬೆಳಕು ಆ ಕಪ್ಪು ಗೋಲಿಗಳ ಮೇಲೆ ಬಿದ್ದು, ಕ್ರಮೇಣ ಆ ಗೋಲಿಗಳೆಲ್ಲ ಬಣ್ಣ ಕಳೆದುಕೊಂಡು ಬೆಳ್ಳಗಾದವು. ಬಿಳಿಯ ಮರಳಿನಲ್ಲಿ ಒಂದಾದವು. ಆ ವ್ಯಕ್ತಿಯ ಮನಸ್ಸು ಮುಕ್ತವಾಯಿತು. ಇದು ಬೆಳಕಿನ ಶಕ್ತಿ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT