ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಬೆಳಕಿನಲ್ಲಿ ‘ಹ್ಯಾಪಿ ನ್ಯೂ ಇಯರ್‌’

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸಾಲಾಗಿ ಕುಳಿತಿದ್ದ ಪತ್ರಕರ್ತರು ಪದೇ ಪದೇ ವಾಚಿನತ್ತ ಕಣ್ಣಾಡಿಸುತ್ತಿದ್ದರು. ಇನ್ನು ಎರಡು ಮೂರು ಗಂಟೆ ಉರುಳಿದರೆ ಮುಂಗೋಳಿ ಕೂಗುವ ಹೊತ್ತು. ಕಣ್ಣೆವೆಗಳನ್ನು ನೋಯಿಸುವಂತೆ ನಿದ್ದೆ ಎಳೆಯುತ್ತಿದ್ದರೂ ನಿರೀಕ್ಷೆ ಮಾಸಿರಲಿಲ್ಲ. ನಿದ್ದೆಗೆಟ್ಟು ಕುಳಿತಿದ್ದ ಅವರಲ್ಲಿ ಹುರುಪು ಮೂಡಿಸುತ್ತಿದ್ದವರು ಟೀವಿ ಚಾನೆಲ್‌ಗಳ ಕ್ಯಾಮೆರಾಗಳೆದುರು ಹಾಡಿ ಕುಣಿಯುತ್ತಿದ್ದ ದೀಪಿಕಾ ಪಡುಕೋಣೆ. ತಾವೇ ಸಂದರ್ಶನ ಮಾಡುವವರಂತೆ ವರದಿಗಾರರಿಂದ ಮೈಕು ತೆಗೆದುಕೊಂಡು ಶಾರೂಖ್‌ ಖಾನ್‌, ಫರ್‍ಹಾ ಖಾನ್‌ರ ಮುಂದೆ ಮೈಕು ಹಿಡಿಯುತ್ತಿದ್ದರು ದೀಪಿಕಾ. ಕ್ಯಾಮೆರಾವನ್ನೂ ಕೈಗೆ ತೆಗೆದುಕೊಳ್ಳುತ್ತಾರೇನೋ ಎಂಬಂತೆ ಇತ್ತು ಅವರ ಉತ್ಸಾಹ. ನಡು ನಡುವೆ ಬಾಟಲಿಯೊಳಗೆ ಸ್ಟ್ರಾ ಹಾಕಿ ಎರಡು ಸಿಪ್‌ ನೀರು ಗುಟುಕರಿಸುವುದು, ಬೋಗುಣಿಯಲ್ಲಿದ್ದ ಹಣ್ಣಿನ ಎರಡು ತುಣುಕು ಬಾಯಿಗಿರಿಸುವುದು, ಒಂದೈದು ನಿಮಿಷ ವಿಶ್ರಾಂತಿ.

ಕನ್ನಡ, ತೆಲುಗು, ಪಂಜಾಬಿ, ಬಂಗಾಳಿ ಹೀಗೆ ಹತ್ತಾರು ಭಾಷೆಗಳ ಟೀವಿ ಚಾನೆಲ್‌ಗಳಿಗೆ ಒಂದೊಂದಾಗಿ ಚಿತ್ರತಂಡದೊಂದಿಗೆ ಸಂದರ್ಶನ ನೀಡುತ್ತಲೇ ಇದ್ದರು ಅವರು. ಸಮಯ ಮಧ್ಯರಾತ್ರಿ ಎರಡಾಯಿತು. ಆಯೋಜಕರು, ‘ಚಾನೆಲ್‌ಗಳದ್ದು ಮುಗಿಯಿತು, ಇನ್ನು ಮುದ್ರಣ ಮಾಧ್ಯಮದವರ ಸರದಿ’ ಎಂದ ಕೂಡಲೇ ದೀಪಿಕಾರ ಉತ್ಸಾಹ ಜರ್ರನೆ ಇಳಿಯಿತು. ‘ಓಹ್‌, ತುಂಬಾ ತಡವಾಗಿದೆ, ಬೇಗನೆ ಮುಗಿಸೋಣ’ ಎಂದು ಸಪ್ಪೆ ಮುಖದಲ್ಲಿ ನಗೆ ಅರಳಿಸಿಕೊಂಡು ಶಾರೂಖ್‌ ಪಕ್ಕದಲ್ಲಿ ಕುಳಿತರು.

ದೀಪಿಕಾ ಒಂಟಿಯಾಗಿ ಸಂದರ್ಶನಕ್ಕೆ ಸಿಗುತ್ತಾರೆ ಎಂದು ಆರೇಳು ಗಂಟೆಯಿಂದ ಕಾದಿದ್ದ ಪತ್ರಕರ್ತರ ಒಂದು ತಂಡಕ್ಕೆ ನಿರಾಸೆ. ಆಗಲೇ ಶಾರೂಖ್‌, ಫರ್‍ಹಾ ಖಾನ್, ಬೊಮನ್‌ ಇರಾನಿ ಅವರ ಸಂದರ್ಶನ ಮುಗಿಸಿದ್ದ ಅವರು ಒಂಟಿಕಾಲಿನಲ್ಲಿ ಕಾಯುತ್ತಿದ್ದ ದೀಪಿಕಾ ಹೀಗೆ ಕೈಕೊಡುತ್ತಾರೆ ಎಂದು ಎಣಿಸಿರಲಿಲ್ಲ. ಶಾರೂಖ್‌ ಸಹ ಒಬ್ಬರೇ ಸಂದರ್ಶನಕ್ಕೆ ಸಿಗಲಿಲ್ಲವೆಂದು ಪರಿತಪಿಸುತ್ತಿದ್ದ ಪತ್ರಕರ್ತರ ಇನ್ನೊಂದು ತಂಡವೂ ಇತ್ತು. ಇಬ್ಬರನ್ನೂ ಒಟ್ಟಿಗೆ ಸಂದರ್ಶನ ಮಾಡಲು ಅರೆಮನಸ್ಸಿನಿಂದಲೇ ಮುಂದಾಯಿತು ಸುದ್ದಿಮಿತ್ರರ ಗುಂಪು.

ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ‘ಹ್ಯಾಪಿ ನ್ಯೂ ಇಯರ್‌’ ಚಿತ್ರತಂಡ ದೇಶದ ಮೂಲೆ ಮೂಲೆಯಿಂದ ಬಂದಿದ್ದ ಪತ್ರಕರ್ತರೊಂದಿಗೆ ಮುಖಾಮುಖಿಯಾಗಿದ್ದ ಸಂದರ್ಭವಿದು. ತಮ್ಮದೇ ನಿರ್ಮಾಣದ ಚಿತ್ರವಾಗಿದ್ದರಿಂದ ಶಾರೂಖ್‌ ಖಾನ್‌ ಹೆಚ್ಚು ಆಸ್ಥೆ ವಹಿಸಿ ಮುಕ್ತವಾಗಿ ಬೆರೆತು ಮಾತನಾಡುತ್ತಿದ್ದರು.          

‘ಓಂ ಶಾಂತಿ ಓಂ’ ಚಿತ್ರದ ಬಳಿಕ ನಿರ್ದೇಶಕಿ ಫರ್‍ಹಾ ಖಾನ್‌, ಶಾರೂಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಜೋಡಿ ‘ಹ್ಯಾಪಿ ನ್ಯೂ ಇಯರ್‌’ನಲ್ಲಿ ಒಂದಾಗಿದೆ. ಇದು ಅಭಿಷೇಕ್‌ ಬಚ್ಚನ್‌, ಬೋಮನ್‌ ಇರಾನಿ, ಸೋನು ಸೂದ್‌, ಜಾಕಿ ಶ್ರಾಫ್‌ ಮತ್ತು ವಿವಾನ್‌ ಶಾರಂಥ ಪ್ರತಿಭೆಗಳ ಸಂಗಮ ಕೂಡ.

‘ದೀಪಾವಳಿ ನಮಗೆ ಹೊಸ ವರ್ಷವೂ ಹೌದು. ಹೀಗಾಗಿ ಹಣತೆ ಹಚ್ಚುತ್ತಲೇ ‘ಹ್ಯಾಪಿ ನ್ಯೂ ಇಯರ್‌’ ಎಂದು ಹೊಸ ವರ್ಷವನ್ನೂ ಸಂಭ್ರಮಿಸುತ್ತಿದ್ದೇವೆ’ ಎಂದರು ಫರ್‍ಹಾ ಖಾನ್‌. ಇಷ್ಟು ದೊಡ್ಡ ತಾರಾಬಳಗವನ್ನು ಕಲೆಹಾಕುವುದು ಮತ್ತು ನಿಭಾಯಿಸುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಆದರೆ ಎಲ್ಲವೂ ಸಲೀಸಾಗಿ ಸಾಗಿತು ಎನ್ನುವ ಖುಷಿ ಅವರದು. ‘ನನ್ನ ಸಿನಿಮಾಗಳೆಂದರೆ ಮನರಂಜನೆ. ಜನರು ಎರಡೂವರೆ ಮೂರು ಗಂಟೆ ಖುಷಿ ಪಡಬೇಕು. ಹೇಳಿಯೂ ಹೇಳದಂತೆ ಸಂದೇಶವೂ ಅದರಲ್ಲಿ ಇರುತ್ತದೆ’ ಎನ್ನುತ್ತಾರೆ ಅವರು. ‘ಓಂ ಶಾಂತಿ ಓಂ’ ಚಿತ್ರಕ್ಕೂ ಮೊದಲೇ ಸಿದ್ಧಪಡಿಸಿದ್ದ ಕಥೆ ಇದಂತೆ. ಇದನ್ನು ತಮ್ಮ ಕನಸಿನ ಸಿನಿಮಾ ಎಂದು ಬಣ್ಣಿಸುತ್ತಾರೆ ಫರ್‍ಹಾ.
‘ದೀಪಿಕಾ ಪಡುಕೋಣೆ ಪ್ರಬುದ್ಧ ನಟಿಯಾಗಿ ಬೆಳೆದಿರಬಹುದು. ಆಕೆಯ ಪಾತ್ರಗಳ ಆಯ್ಕೆ ಮತ್ತು ಅಭಿನಯ ಎರಡರಲ್ಲಿಯೂ ಮಾಗಿರಬಹುದು. ಆದರೆ ನನ್ನ ಸಿನಿಮಾ ಸೆಟ್‌ಗೆ ಬಂದಾಗ ಆಕೆ ಮೊದಲ ಚಿತ್ರದಲ್ಲಿ ಇದ್ದಂತೆಯೇ ಮಗುವಾಗುತ್ತಾಳೆ’ ಎಂದು ದೀಪಿಕಾರ ವ್ಯಕ್ತಿತ್ವವನ್ನು ಮತ್ತು ಅವರು ಬೆಳೆದ ರೀತಿಯನ್ನು ಹೊಗಳುತ್ತಾರೆ ಅವರು.

‘ರೇಸ್‌’, ‘ಧೂಮ್‌’ ಚಿತ್ರಗಳಲ್ಲಿ ಇರುವಂತೆ ನಾಯಕ–ನಾಯಕಿಯರ ತಂಡವೇ ದರೋಡೆ ನಡೆಸುವ ರೋಚಕ ಕಥನ ಇಲ್ಲಿದೆ. ಆದರೆ ಇತರೆ ಚಿತ್ರಗಳಿಗಿಂತ ಇದು ವಿಭಿನ್ನ ಎನ್ನುತ್ತಾರೆ ಶಾರೂಖ್‌. ಅತಿ ಕೆಟ್ಟದಾಗಿ ನರ್ತಿಸುವ ಆರು ಮಂದಿಯ ತಂಡ ಸ್ಪರ್ಧೆಯಲ್ಲಿ ಭಾಗವಹಿಸುವುದು ಇದರ ವಿಶೇಷತೆ. ನೃತ್ಯ ಪ್ರಧಾನವಾಗಿರುವುದರಿಂದ ಅದಕ್ಕೆ ಪೂರಕವಾದ ಸಂಗೀತದ ಅಗತ್ಯವೂ ಇದೆ. ನಮ್ಮ ಬಯಕೆಗೆ ತಕ್ಕಂತೆ ವಿಶಾಲ್‌–ಶೇಖರ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಪ್ರತಿ ಹಾಡಿಗೂ ಅದರದ್ದೇ ಕಾರಣವಿದೆ. ಸಿನಿಮಾ ನೋಡುವವರೆಗೂ ಅದು ನಿಮ್ಮನ್ನು ಅಷ್ಟಾಗಿ ಕಾಡದಿರಬಹುದು’ ಎಂದು ಅವರು ಹೇಳಿದರು.

ಇದೊಂದು ಮನೆ ಸಿನಿಮಾ ಎಂಬ ಭಾವನೆ ದೀಪಿಕಾ ಅವರಲ್ಲಿ ಮೂಡಿದೆಯಂತೆ. ನಿರ್ದೇಶಕಿ ಫರ್‍ಹಾ ಖಾನ್‌ ತಮಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದರು. ಈ ಚಿತ್ರ ‘ಓಂ ಶಾಂತಿ ಓಂ’ನ ದಿನಗಳನ್ನು ನೆನಪಿಸಿತು ಎಂದರು ಅವರು. ತಮ್ಮನ್ನು ಬಾಲಿವುಡ್‌ಗೆ ಪರಿಚಯಿಸಿದ ಫರ್‍ಹಾ ಮತ್ತು ಶಾರೂಖ್‌ ಮೇಲೆ ದೀಪಿಕಾ ಅವರಿಗೆ ಅಪಾರ ಗೌರವ ನಂಬಿಕೆ. ನನ್ನ ವೃತ್ತಿ ಬದುಕನ್ನು ಸೂಕ್ತ ದಿಕ್ಕಿನಲ್ಲಿ ನಡೆಸುವ ಹೊಣೆಯನ್ನು ಅವರೇ ತೆಗೆದುಕೊಂಡಿದ್ದಾರೆ ಎಂದು ಸಂತಸ ಹಂಚಿಕೊಂಡರು ಅವರು.

ಶಾರೂಖ್‌ ಖಾನ್‌ಗೂ ಮುನ್ನವೇ ಬೋಮನ್ ಇರಾನಿ ಅವರ ಕಾಲ್‌ಷೀಟ್‌ ಪಡೆದಿದ್ದರಂತೆ ಫರ್‍ಹಾ ಖಾನ್‌. ‘ಹ್ಯಾಪಿ ನ್ಯೂ ಇಯರ್‌’ ಜನರನ್ನು ರಂಜಿಸಲಿದೆ ಎನ್ನುವ ಭರವಸೆ ಬೋಮನ್‌ ಇರಾನಿ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT