ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಿಕಾ ಕಾಮಯ್ಯ: ತಮಾಷೆನೇ ಅಲ್ಲ....

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ವೃತ್ತಿ ಜೀವನವನ್ನು ಗಂಭೀರವಾಗಿ ಪರಿಗಣಿಸಿರುವ ನಟಿ ದೀಪಿಕಾ ಕಾಮಯ್ಯ. ನಟನೆಗೆ ಅವಕಾಶವಿರುವ ಗಟ್ಟಿ ಪಾತ್ರಗಳ ನಿರೀಕ್ಷೆಯಲ್ಲಿ ಇರುವ ಅವರು, ಇದೀಗ ‘ಬಿಗ್‌ಬಾಸ್‌’ನಲ್ಲಿ ಕಳೆದುಕೊಂಡ ತೂಕವನ್ನು ಮರಳಿ ಗಳಿಸುವ ಪ್ರಯತ್ನದಲ್ಲಿದ್ದಾರೆ.

‘ನನಗೆ ಕ್ವಾಂಟಿಟಿಗಿಂತ ಕ್ವಾಲಿಟಿಯೇ ಮುಖ್ಯ. ಅದಕ್ಕಾಗಿಯೇ ಇಂಡಸ್ಟ್ರಿಗೆ ಬಂದು ಮೂರು ವರ್ಷಗಳೇ ಕಳೆದರೂ ನನ್ನ ಚಿತ್ರಗಳ ಸಂಖ್ಯೆ ಕಡಿಮೆ ಇರುವುದು’. ಇದು ‘ಚಿಂಗಾರಿ’ಯ ಮೂಲಕ ಕನ್ನಡ ಚಿತ್ರರಂಗದ ಪಯಣ ಆರಂಭಿಸಿದ ಚೆಲುವೆ ದೀಪಿಕಾ ಕಾಮಯ್ಯ ಅವರ ಗಟ್ಟಿ ನುಡಿ. ಚೆನ್ನಾಗಿ ಹೆಸರು ಮಾಡದ, ಪ್ರೇಕ್ಷಕರನ್ನು ತಲುಪದ ನೂರು ಸಿನಿಮಾ ಮಾಡುವುದಕ್ಕಿಂತ, ಒಳ್ಳೆಯ ನಾಲ್ಕಾರು ಚಿತ್ರಗಳು ನನ್ನ ಹೆಸರಲ್ಲಿದ್ದರೂ ಸಾಕು ಎನ್ನುತ್ತಾರವರು.

ಪಿಯು ಕಾಲೇಜು ದಿನಗಳಿಂದಲೇ ಬಣ್ಣದ ಬೆಡಗಿನ ಲೋಕಕ್ಕೆ ತೆರೆದುಕೊಂಡವರು ದೀಪಿಕಾ. ಕಾಲೇಜು ದಿನಗಳಲ್ಲಿ ಅವರು ಹಲವಾರು ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿರುವಾಗಲೇ ಚಿತ್ರಗಳ ಅವಕಾಶಗಳೂ ಅವರನ್ನು ಹುಡುಕಿಕೊಂಡು ಬಂದಿದ್ದವು. ಮಾಡೆಲಿಂಗ್ ಜಗತ್ತಿನ ಬಹುತೇಕ ರೂಪದರ್ಶಿಯರ ಬಯಕೆಯಂತೆ ದೀಪಿಕಾ ಅವರಿಗೇನು ಸಿನಿಮಾಗಳಲ್ಲಿ ಮಿಂಚುವ ಆಸೆಯಿರಲಿಲ್ಲ. ಆದರೆ ತುಂಬಾ ಒಳ್ಳೆಯ ಅವಕಾಶಗಳು ಪದೇ ಪದೇ ಹುಡುಕಿಕೊಂಡು ಬಂದಾಗ ನಿರಾಕರಿಸಲಾಗದೇ ಹೋದರು. ಆದರೂ ‘ಮೊದಲು ಶಿಕ್ಷಣ’ ಎಂಬ ನೀತಿಗೆ ಅಂಟಿಕೊಂಡು, ಶಿಕ್ಷಣ ಮುಗಿವವರೆಗೂ ಯಾವ ಚಿತ್ರವನ್ನೂ ಒಪ್ಪಿಕೊಂಡವರಲ್ಲ.

2009ರಲ್ಲಿ ‘ಫೆಮಿನಾ ಮಿಸ್ ಇಂಡಿಯಾ ಸೌಥ್ ಸ್ಪರ್ಧೆ’ಯ ಅಂತಿಮ ಸುತ್ತಿಗೆ ಪ್ರವೇಶ ಪಡೆದದ್ದು ಹಾಗೂ 2010ರಲ್ಲಿ ‘ಲೈಕ್ರಾ ಎಂ ಟಿವಿ ಸ್ಟೈಲ್ ಅವಾರ್ಡ್ ಸ್ಪರ್ಧೆ’ಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು ದೀಪಿಕಾ ಅವರಿಗೆ ಚಿತ್ರಲೋಕಕ್ಕೆ ಕಾಲಿಡಲು ಸಾಕಷ್ಟು ಪ್ರೋತ್ಸಾಹ ನೀಡಿತು. ಅವರ ಪ್ರತಿಭೆ ಹಾಗೂ ಸೌಂದರ್ಯವನ್ನು ಗಮನಿಸಿದ ತಮಿಳು ನಿರ್ದೇಶಕ ಕುಲೈಂದೈ ವೀರಪ್ಪನ್ ಅವರು ತಮ್ಮ ‘ಆನ್ಮೈ ತವರೇಲ್’ ಚಿತ್ರಕ್ಕೆ ಆಹ್ವಾನ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ದೀಪಿಕಾ ತಮಿಳು ಚಿತ್ರದ ಮೂಲಕ ತಮ್ಮ ಸಿನಿ ಬದುಕಿಗೆ ನಾಂದಿ ಹಾಡಿದರು.

ಮೊದಲ ಕನ್ನಡ ಚಿತ್ರ ‘ಚಿಂಗಾರಿ’ಯಲ್ಲೇ ಸಾಕಷ್ಟು ಭರವಸೆ ಮೂಡಿಸಿದ ದೀಪಿಕಾ ಮುಂದೆ ಆಟೊ ಏರಿದರು. ಗೋಲ್ಡನ್ ಸ್ಟಾರ್ ಗಣೇಶ್ ಜತೆ ‘ಆಟೊರಾಜ’ ಅವರ ಎರಡನೇ ಚಿತ್ರ. ಅದಾದ ನಂತರ ಕೆಲಕಾಲ ಕನ್ನಡದಿಂದ ನಾಪತ್ತೆಯಾಗಿಬಿಟ್ಟಿದ್ದ ದೀಪಿಕಾ, ಈಗ ‘ನೀನೆ ಬರಿ ನೀನೆ’ ಚಿತ್ರದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಗ್ಯಾಪಲ್ಲಿ ಬಾಲಿವುಡ್ ಬಾಗಿಲನ್ನೂ ತಟ್ಟಿ ಬಂದಿದ್ದಾರೆ. ಶಾಹಿದ್ ಕಪೂರ್ ಅಭಿನಯದ ‘ಫಟಾ ಪೋಸ್ಟರ್ ನಿಕ್‌ಲಾ ಹೀರೊ’ ಚಿತ್ರದಲ್ಲಿ ಹಳ್ಳಿಹುಡುಗಿಯ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡು ಬಂದರು. ಹಳ್ಳಿಯ ಹುಡುಗಿಯಾಗಿ ಕಾಣಿಸಿಕೊಳ್ಳುವುದು ಅವರಿಗೆ ತುಂಬಾನೇ ಇಷ್ಟವಂತೆ. ಅದು ಅವರ ‘ಕನಸಿನ ಪಾತ್ರ’ವಾಗಿದ್ದರಿಂದ ಈ ಸಣ್ಣ ಪಾತ್ರದಿಂದ ಅವರಿಗೆ ಅಷ್ಟು ತೃಪ್ತಿ ಇಲ್ಲ. ಇನ್ನೂ ಹೆಚ್ಚೆಚ್ಚು ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಅವರದು. ಹಿಂದಿಯ ಒಂದು ಚಿತ್ರದಿಂದಾಗಿ ಬಾಲಿವುಡ್‌ನಲ್ಲಿ ಕೆಲ ಅವಕಾಶಗಳು ಬಂದಿದ್ದರೂ ಒಪ್ಪಿಕೊಳ್ಳದ ದೀಪಿಕಾ, ‘ಅಲ್ಲಿ ಒಮ್ಮೆ ನೆಲೆಯೂರಿದರೆ ಮತ್ತೆ ಇಲ್ಲಿ ವಾಪಸಾಗುವ ಮನಸಾಗುವುದಿಲ್ಲ. ಹಾಗಾಗಿ ಹಿಂದಿಯಲ್ಲಿ ನೆಲೆಯೂರುವ ಯೋಜನೆ ಸದ್ಯಕ್ಕಂತೂ ಇಲ್ಲ. ಮೊದಲು ಕನ್ನಡದಲ್ಲಿ ಅತ್ಯುತ್ತಮ ಚಿತ್ರಗಳನ್ನು ಮಾಡಬೇಕು’ ಎನ್ನುತ್ತಾರೆ.

ಈ ಮೊದಲು ಮನೋಮೂರ್ತಿ, ಜಯಂತ ಕಾಯ್ಕಿಣಿ, ಸೋನು ನಿಗಂ ಕಾಂಬಿನೇಷನ್ನಿನಲ್ಲಿ ಹೆಸರು ಮಾಡಿದ್ದ ‘ನೀನೆ ಬರಿ ನೀನೆ’ ಆಲ್ಬಂ ಈಗ ಚಿತ್ರ ರೂಪದಲ್ಲಿ ಬರುತ್ತಿದೆ. ದೀಪಕ್ ತಿಮಯ್ಯ ಅವರ ನಿರ್ದೇಶನದಲ್ಲಿ, ಆಲ್ಬಂನ ಹಾಡುಗಳಿಗೆ ತಕ್ಕಂತೆ ಕಥೆ ಹೆಣೆದಿರುವ ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ. ಈ ಚಿತ್ರ ತನ್ನ ವೃತ್ತಿ ಜೀವನದಲ್ಲಿ ಹೊಸ ರೀತಿಯ ಫಲಿತಾಂಶ ನೀಡುವ ನಿರೀಕ್ಷೆ ದೀಪಿಕಾ ಅವರಿಗೆ. ‘ನೀನೆ ಬರಿ ನೀನೆ’ಯಲ್ಲಿ ಶ್ರೀಮಂತ ಕುಟುಂಬದ, ವಿದೇಶದಲ್ಲಿ ಓದಿ ಮತ್ತೆ ಹಳ್ಳಿಗೆ ವಾಪಸ್ ಬಂದು, ತನ್ನ ಕುಟುಂಬವನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ ದೀಪಿಕಾ.

‘ನಾನು ಸಿಕ್ಕಾಪಟ್ಟೆ ಚ್ಯೂಸಿ’ ಎನ್ನುವ ದೀಪಿಕಾ, ತುಂಬಾ ಮೆಚ್ಚಿಕೊಂಡಿದ್ದ ಪಾತ್ರ ‘ದೇವ್ರವ್ನೆ ಬಿಡು ಗುರು’ ಚಿತ್ರದ್ದು. ಆದರೆ ಅನಿವಾರ್ಯ ಕಾರಣದಿಂದಾಗಿ ಈ ಚಿತ್ರದಲ್ಲಿ ಅವರು ಅಭಿನಯಿಸುತ್ತಿಲ್ಲವಂತೆ. ದೀಪಿಕಾ ಮಾಡೆಲ್ ವೃತ್ತಿ ಹಿನ್ನೆಲೆಯವರೆಂದು ಅವರಿಂದ ಪ್ರೇಕ್ಷಕರಾಗಲಿ, ನಿರ್ದೇಶಕರಾಗಲಿ ಹೆಚ್ಚಿನ ಎಕ್ಸ್‌ಪೋಸ್ ನಿರೀಕ್ಷಿಸುವಂತಿಲ್ಲ. ‘ನನಗೆ ಹಿತ ಎನಿಸುವ ಪಾತ್ರಗಳನ್ನು ಮಾತ್ರ ಮಾಡುತ್ತೇನೆ’ ಎನ್ನುವ ಅವರಿಗೆ ಅತಿಯಾದ ರೊಮ್ಯಾಂಟಿಕ್ ಹಾಗೂ ಎಕ್ಸ್‌ಪೋಸ್ ದೃಶ್ಯಗಳು ಕಂಫರ್ಟ್ ಅನಿಸುವುದಿಲ್ಲವಂತೆ.
ಇತ್ತೀಚೆಗೆ ದೀಪಿಕಾ ಅಭಿನಯಿಸಿದ ಚಿತ್ರ ತೆರೆಕಾಣದಿದ್ದರೂ ಅವರು ಅಭಿಮಾನಿಗಳಿಂದೇನೂ ದೂರವಿಲ್ಲ. ‘ಬಿಗ್‌ಬಾಸ್’ ಎರಡನೇ ಆವೃತ್ತಿಯಲ್ಲಿ ‘ಬಾಸ್’ ಮನೆಗೆ ಎಂಟ್ರಿ ನೀಡಿದ ಅವರು ಅಂತಿಮ ಸುತ್ತಿನವರೆಗೂ ಅಲ್ಲಿಯೇ ಇದ್ದು ಪ್ರೇಕ್ಷಕರನ್ನು ರಂಜಿಸಿದರು. ಆ ಮೂಲಕ ಮನೆ ಮಾತಾದರು. ಇದು ಅವರ ವೃತ್ತಿ ಬದುಕಿನ ಮೇಲೆ ಒಳ್ಳೆಯ ಪರಿಣಾಮ ಬೀರಿ, ಇನ್ನೂ ಹೆಚ್ಚಿನ ಅವಕಾಶಗಳನ್ನು ತಂದುಕೊಡುವ ನಿರೀಕ್ಷೆ ಅವರದ್ದು. ‘ಬಿಗ್‌ಬಾಸ್’ ಕಾರಣಕ್ಕಾಗಿಯೇ ‘ಕೋಲಾರ’ ಚಿತ್ರದ ಅವಕಾಶವನ್ನೂ ತಪ್ಪಿಸಿಕೊಂಡರು. ಸದ್ಯ ‘ಬಿಗ್‌ಬಾಸ್’ ಮುಗಿದು ತಿಂಗಳೇ ಕಳೆಯುತ್ತಿದ್ದರೂ ದೀಪಿಕಾ ಯಾವ ಚಿತ್ರಕ್ಕೂ ಸಹಿ ಮಾಡಿಲ್ಲ. ಕಾರಣ ಇಷ್ಟೇ; ಬಿಗ್‌ಬಾಸ್‌ನಲ್ಲಿ ಬರೋಬ್ಬರಿ ಏಳು ಕೆಜಿ ತೂಕ ಕಳೆದುಕೊಂಡ ಅವರು ಮತ್ತೆ ಮೊದಲಿನ ಮೈಕಟ್ಟು ಪಡೆಯಲು ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

‘ಪಾತ್ರವೊಂದಕ್ಕೆ ಒಪ್ಪಿಕೊಳ್ಳುವಾಗ ಹಿಂದಿನ ಚಿತ್ರಗಳಿಗೆ ಹೋಲಿಸಿಕೊಳ್ಳುತ್ತೇನೆ. ಪ್ರತಿ ಬಾರಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಾಸೆ ನನಗೆ. ಈವರೆಗೆ ಕಾಣಿಸಿಕೊಂಡ ಎಲ್ಲ ಪಾತ್ರಗಳೂ ಭಿನ್ನವಾಗಿವೆ’ ಎನ್ನುವ ಅವರು, ‘ಧಮಾಲ್ ದುಮೀಲ್’ ಎಂಬ ತಮಿಳು ಚಿತ್ರದಲ್ಲಿ ಒಂದು ಹಾಡಿಗೆ ಕುಣಿದು ಬಂದಿದ್ದಾರೆ. ಕನ್ನಡದಲ್ಲಿ ಸುದೀಪ್, ಪುನೀತ್ ಅವರಂಥ ನಾಯಕರ ಜತೆ ತೆರೆ ಹಂಚಿಕೊಳ್ಳುವ ಆಸೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT