ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಯೋಜನೆ ಬೇಕು

Last Updated 18 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕಾಡುಪ್ರಾಣಿಗಳು ಮತ್ತೆ ಮತ್ತೆ ಜನವಸತಿಯ ಹಾದಿ ಹಿಡಿ­ಯುತ್ತಿವೆ. ಗ್ರಾಮಸ್ಥರ ಮೇಲೆ ಆಕ್ರಮಣ ಮಾಡಿ ಪ್ರಾಣಹಾನಿ ಮಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ಪ್ರಾಣಿ ಮತ್ತು ಮನುಷ್ಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಮಧುಗಿರಿ ಬಳಿ ಶೋಭೇನಹಳ್ಳಿ­ಯಲ್ಲಿ ಕರಡಿ ದಾಳಿಯಿಂದ ವ್ಯಕ್ತಿ ಸತ್ತಿದ್ದಾನೆ. ಮತ್ತೊಬ್ಬ ಗಾಯ­ಗೊಂಡಿ­ದ್ದಾನೆ.

ಚಿಕ್ಕಮಗಳೂರು ಬಳಿ ಕಾರ್ಮಿಕ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ ನರ­ಹಂತಕ ಹುಲಿಯನ್ನು  ಸೆರೆ ಹಿಡಿಯಲಾಗಿದೆ. ಕೊಳ್ಳೇಗಾಲದ ಬಳಿಯೂ ಹುಲಿ­ಯೊಂದು ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ. ಬಿಳಿಗಿರಿರಂಗನಾಥಸ್ವಾಮಿ ಹುಲಿ ಅಭಯಾರಣ್ಯಕ್ಕೆ (ಬಿಆರ್‌ಟಿ) ಹೊಂದಿಕೊಂಡ ಬೂದಿಪುಡಗ ಗ್ರಾಮ­ದಲ್ಲಿ ಜಿಂಕೆಯನ್ನು ಅಟ್ಟಿಸಿಕೊಂಡು ಹೊರಟ ಹುಲಿ ಕಾಡಿನಿಂದ ಹೊರ­ಬಂದಿದೆ. 

ಕ್ರೂರ ವನ್ಯಮೃಗಗಳು ಕಾಡಿನಿಂದ ಈ ರೀತಿ ನಾಡಿಗೆ  ಬಂದ ಅನೇಕ ಘಟನೆಗಳು ವರದಿಯಾಗಿವೆ. ಸಾಕು ಪ್ರಾಣಿಗಳನ್ನು ತಿಂದ ಚಿರತೆಗಳನ್ನು ಗ್ರಾಮ­ಸ್ಥರೇ ವಿಷ ಹಾಕಿ ಅಥವಾ ಹೊಡೆದು ಸಾಯಿಸಿರುವ ಅನೇಕ ಉದಾ­ಹ­ರ­ಣೆಗಳಿವೆ. ಇದು ಪ್ರಾಣಿ ಪ್ರಭೇದಗಳ ಅಳಿವಿಗೆ ಕಾರಣವಾಗುತ್ತದೆ. ಬಿಆರ್‌ಟಿ ಕಾಡಿನಲ್ಲೇ ವಾಸಿಸುವ ಸೋಲಿಗರೊಬ್ಬರು ಕಳೆದ ತಿಂಗಳು ಹುಲಿ ಬಾಯಿಗೆ ಆಹುತಿಯಾದ ಘಟನೆಯೂ ನಡೆದಿದೆ.

ರಾಷ್ಟ್ರೀಯ ಸರಾಸರಿ­ಗಿಂತಲೂ ಕಡಿಮೆ ಪ್ರಮಾಣದಲ್ಲಿ ಕಾಡು ಉಳಿದಿರುವುದೇ ವನ್ಯಜೀವಿಗಳು ಊರಿನತ್ತ ಹೆಜ್ಜೆ ಇರಿಸುತ್ತಿರುವುದಕ್ಕೆ ಕಾರಣ. ಇದರಿಂದಲೇ ಮಾನವ– ವನ್ಯ­ಜೀವಿ ಸಂಘರ್ಷ ನಡೆಯುತ್ತಿದೆ.

ರೈತರು ಬೆವರು ಸುರಿಸಿ ತೆಗೆದ ಬೆಳೆ ಹಾನಿ, ಜಾನುವಾರು ಸಾವು, ಪ್ರಾಣ ಹಾನಿ­ಯನ್ನು ತಡೆಯಲು ರಾಜ್ಯ ಸರ್ಕಾರದಿಂದ ದೀರ್ಘಾವಧಿ ಯೋಜನೆ   ಅಗತ್ಯ. ಹುಲಿ ಅಭಯಾರಣ್ಯ ಮತ್ತು ವನ್ಯಜೀವಿಧಾಮದ ಸುತ್ತ ಒಂದರಿಂದ ಹತ್ತು ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸ­ಬೇಕು.

ನಾಗರಹೊಳೆ, ಬಂಡೀಪುರದಂತಹ ಕೆಲ ಹುಲಿ ಅಭಯಾರಣ್ಯಗಳ ವ್ಯಾಪ್ತಿಯಲ್ಲಿ ಈ ಕೆಲಸ ಪೂರ್ಣವಾಗಿದೆ. ೨೭ ವನ್ಯಜೀವಿಧಾಮಗಳಲ್ಲೂ ಈ ಕೆಲಸ ನಡೆಯಬೇಕಿದೆ. ಇದು ಘೋಷಣೆಯಾದರೆ ಕಾಡಿನ ಸುತ್ತ ಅಭಿವೃದ್ಧಿ ನಿಯಂತ್ರಿತ ಪ್ರದೇಶ ಘೋಷಣೆಯಾಗುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ, ವಾಣಿಜ್ಯ ಚಟುವಟಿಕೆ, ಹೋಟೆಲ್‌ ತಲೆ ಎತ್ತುವುದು ತಪ್ಪುತ್ತದೆ.

ಈ ವಲಯ ಒಂದು ರೀತಿಯಲ್ಲಿ ಕಾಡಿಗೆ ರಕ್ಷಣೆ ನೀಡುತ್ತದೆ. ಈ ಕೆಲಸ ಹತ್ತಾರು ವರ್ಷ­ಗಳಿಂದ ಆಗಿಲ್ಲ. ರಾಜ್ಯದ ಅರಣ್ಯ ಇಲಾಖೆಯಿಂದ ಆಗಿರುವ ಲೋಪವಿದು. ಕಾಡಿಗೆ ರಕ್ಷಣೆ ನೀಡಿದರೆ ಮಾತ್ರ ಕಾಡುಪ್ರಾಣಿಗಳು ಗ್ರಾಮದತ್ತ ಬರುವುದು ತಪ್ಪುತ್ತದೆ. ಇದರ ಜತೆಯಲ್ಲಿ ಕಾಡನ್ನು ಪಕ್ಕದ ಕಾಡಿನ  ಜತೆಯಲ್ಲಿ ಸೇರಿಸುವ ಕಾರಿಡಾರ್‌ ಸಹ ರಚನೆಯಾಗಬೇಕು. ಇಲಾಖೆಗೆ ಈ ಬಗ್ಗೆ ಕಾರ್ಯತಂತ್ರವೇ ಇಲ್ಲ. 

ಕಾರಿಡಾರ್‌ ಇದ್ದರೆ ಮಾತ್ರ ವಲಸೆ ಪ್ರಾಣಿಗಳಾದ ಆನೆಗಳು ಆಹಾರ ಹುಡು­ಕುತ್ತಾ ಇದೇ ಜಾಡಿನಲ್ಲಿ ನಡೆಯುತ್ತವೆ. ಇಲ್ಲವಾದರೆ ಬೆಳೆ ಹಾನಿ ಖಚಿತ. ಕಾಡು ಪ್ರಾಣಿಗಳು ನಾಡಿಗೆ ನುಗ್ಗಿದಾಗ ಯಾವ ರೀತಿ ನಡೆದು­ಕೊಳ್ಳ­ಬೇಕು ಎನ್ನುವ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡಲು ಇಲಾಖೆ ಮುಂದಾಗ-­ಬೇಕು. ವನ್ಯ ಪ್ರಾಣಿಗಳಿಗೆ ಅರಿವಳಿಕೆ ಮದ್ದು ನೀಡುವ ಬಗ್ಗೆ ಸ್ಥಳೀಯರಿಗೂ ತರ­ಬೇತಿಗಳನ್ನು  ನೀಡಬಹುದು. ಇಂತಹ  ಸನ್ನದ್ಧತೆ  ಇದ್ದಲ್ಲಿ ತುರ್ತಾಗಿ ಪ್ರತಿ­ಕ್ರಿ­ಯಿ­ಸಲು ಸಾಧ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನಾ­ಹುತ­ಗಳು ತಪ್ಪಿದ್ದಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT