ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಕೂನ

Last Updated 19 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ದೀಪಾವಳಿ ಕವನಸ್ಪರ್ಧೆ 2015: ತೀರ್ಪುಗಾರರ ಮೆಚ್ಚುಗೆ ಪಡೆದ ಕವನ

ಕೈಯಿಲ್ಲದ ಕುಂಬಾರ ಮಾಡಿಕೊಟ್ಟ ಮೂರು ಮಡಕಿ,
ಎರಡು ದದ್ದು, ಒಂದಕೆ ತಳವೆ ಇಲ್ಲ
ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕ,
ಎರಡು ನಕಲು, ಒಂದು ಸವುಕಲು
–ಕನಕದಾಸರು

ಎಲ್ಲ ನಗರಗಳ ಆಸುಪಾಸಲ್ಲೂ ಇರುವ ಅರೆಬೆಂದ ಊರುಗಳಂಥದೇ ಒಂದೂರು ‘ಬೋಕಿಪೇಟೆ’. ಬಹುಪಾಲು ಕುಂಬಾರಿಕೆಯ ಕುಲಮೂಲದವರು ವಾಸವಿದ್ದ ಆ ಊರಿಗೆ ಯಾವುದೋ ತಲೆಕೆಟ್ಟ ದೇವರೊಂದು ಸಿಟ್ಟಿಗೆದ್ದು ಎಂಥದೋ ಶಾಪವೊಂದನ್ನು ಬಿಸಾಕಿರಬಹುದೇ ಎಂಬ ಅನುಮಾನ ಆ ಊರಿನ ಕುಂಬಾರರಿಗೆ ಅವಾಗವಾಗ ಬರುವಷ್ಟು ಹದಗೆಟ್ಟಿತ್ತು. ಇಂಥದೊಂದು ಅನುಮಾನಕ್ಕೆ ಸಕಾರಣವೂ ಇದ್ದ ಊರಾಗಿತ್ತದು. ಕಾಲದಿಂದಲೂ ಕುಂಬಾರಿಕೆಗೆ ಹೇಳಿ ಮಾಡಿಸಿದ ಚಮಡಿಕೆರೆಯ ಕೊಜೆಮಣ್ಣು ಬಗೆದುಕೊಂಡು ಕೆಸರು ತುಳಿದು ಹಸನುಗೊಳಿಸಿ ಮಡಿಕೆ-ಕುಡಿಕೆ, ಹಣತೆ-ಪಣತೆ ಮಾಡಿಕೊಂಡು ಇದ್ದ ಬೋಕಿಪೇಟೆಯ ಜನರ ಎದೆಯ ಮೇಲೆ ಪ್ಲಾಸ್ಟಿಕ್ಕು, ಸ್ಟೀಲು-ಸಿಲ್ವಾರಗಳೆಂಬ ಆವಿಷ್ಕಾರಗಳು ಯಾವತ್ತು ಅಲಲಲಲೋ ಅಂತ ನುಗ್ಗಿಕೊಂಡು ತುಳಿಯುತ್ತ ಬಂದವೋ, ಆವತ್ತಿನಿಂದ ಅವರ ಕುಲಕಸುಬಿಗೆ ಕಂಟಕ ಶುರುವಾಗಿದ್ದು ಹಳೆಯ ಕತೆ. ಕೊನೆಗೆ ಮಣ್ಣುಹಣತೆ-ಬೆಲ್ಲದ ನೀರಿನ ಪಾತ್ರೆಗಳನ್ನು ಕೇಳುವ ಮೊಹರಮ್ಮು, ದೀಪಾವಳಿಯೆಂದು ವರ್ಷಕ್ಕೆ ಬರುವ ಇವೆರಡು ಹಬ್ಬಗಳನ್ನು ನಂಬಿಕೊಂಡು ಇಡೀ ವರ್ಷ ಕುಂಬಾರಿಕೆ ಮಾಡುತ್ತ ಇರುವುದು ಬೋಕಿಪೇಟೆಯ ಕುಂಬಾರರಿಗೆ ಅನಿವಾರ್ಯವಾಗಿತ್ತು.

ಯಾವುದಕ್ಕೂ ಇರಲೆಂದು ಪ್ಲಾಸ್ಟಿಕ್ಕು-ಸ್ಟೀಲು ಐಟಮ್ಮುಗಳ ತಿರುವಿದ ಮೀಸೆಯೆದುರು ನಲ್ಲಿ ಸಿಕ್ಕಿಸಿದ ನೀರುಮಡಕೆ, ಸಾವುಕಾರರ ಮನೆಯೆದುರು ಹೆಣಗಳಂತೆ ಜೋಡಿಸಲ್ಪಡುವ ಗಿಡಗಳಿಗೆಂದು ಕುಂಡಗಳನ್ನು ಕುಸ್ತಿಗೆ ಬಿಟ್ಟು ಚೂರುಪಾರು ಬದುಕುವ ಪ್ರತಿಭೆಗಳನ್ನು ಕುಂಬಾರರು ಕಂಡುಕೊಂಡಿದ್ದರು. ಇಂಥ ಒಂದು ವಿದ್ರಾವಕ ಕಾಲಮಾನದೊಳಗೆ ತನ್ನ ಕುಂಬಾರಿಕೆಗೇ ಅಂಟಿಕೊಂಡು ಹೆಂಗೆಂಗೋ ಬದುಕುತ್ತಿದ್ದ ‘ದುಕೂನ’ ಅನ್ನುವ ಗೂನುಬೆನ್ನಿನ ಯುವಕನೂ ತನ್ನ ಎಡವಟ್ಟು ಹೆಸರಿನೊಟ್ಟಿಗೆ ಏಗುತ್ತ, ಹೆಂಗಾದರೂ ಮಾಡಿ ತನ್ನ ಹೆಸರನ್ನು ‘ಅಜಿತ್ಕುಮಾರ್’ ಎಂದು ಬದಲಿಸಿಕೊಳ್ಳಲು ಒದ್ದಾಡುತ್ತಿದ್ದನು. ದುಕೂನ ಎಂಬ ಅಡ್ಡಹೆಸರು ಅವನನ್ನು ಇನ್ನಿಲ್ಲದ ಬೇಜಾರಿಗೆ ತಳ್ಳಿಬಿಟ್ಟಿತ್ತು. ತನ್ನ ಹೆಸರನ್ನು ಕಾನೂನುಪ್ರಕಾರವಾಗಿ ‘ಕೇಳಲು ಚಂದವಿರುವಂತೆ’ ಚೇಂಜು ಮಾಡಲು ನಡೆಸುತ್ತಿದ್ದ ಲೆಕ್ಕವಿರದಷ್ಟು ಸಾಹಸಗಳು ಅವನೊಬ್ಬನಿಗಷ್ಟೇ ತಿಳಿದಿತ್ತು. ಇಷ್ಟಕ್ಕೂ ಬೋಕಿಪೇಟೆಯೆಂಬ ಪುಡಿ ಊರೊಳಗೆ ತನ್ನಪಾಡಿಗೆ ತಾನು ಜೀವಿಸಿಕೊಂಡು ಹೋಗುತ್ತಿದ್ದ ದುಕೂನ ಅನ್ನೋ ಗೂನುಬೆನ್ನಿನ ಯುವಕನ ಆಸುಪಾಸೊಳಗೆ ಅದೇಕೆ ಅಷ್ಟೊಂದು ಕತೆಗಳು ಹುಟ್ಟಿ ನಡೆದಾಡುತ್ತಿದ್ದವೋ ಯಾರಿಗೂ ಗೊತ್ತಿರಲಿಲ್ಲ.

ಗೂನು ಬೆನ್ನಿನ ಕಾರಣಕ್ಕೆ ಕೂನ ಎಂಬುದು ಬಂದುದೇನೋ ಸರಿ. ಅದರ ಮುಂದೆ ದು.. ಎಂಬುದು ಹೇಗೆ ಬಂತೆಂಬ ಬಗ್ಗೆ ಒಂದು ಕತೆಯಿದೆ. ದುಕೂನ ತುಂಬ ಚಿಕ್ಕವನಿದ್ದಾಗ ಎಲ್ಲರಿಗಿದ್ದಂತೆ ಅವನಿಗೂ ಬೆನ್ನು ನೆಟ್ಟಗೇ ಇತ್ತಂತೆ. ಒಮ್ಮೆ ರಸ್ತೆಯಲ್ಲಿ ಯಾರೋ ಬೀಳಿಸಿಕೊಂಡು ಹೋಗಿದ್ದ ಐದು ರೂಪಾಯಿಯ ನೋಟು ಸಿಕ್ಕಿತ್ತಂತೆ. ಗಾಬರಿಯಿಂದಲೇ ಅದನ್ನು ಹೆಕ್ಕಿಕೊಂಡು ಮುಷ್ಠಿಯೊಳಗೆ ಬಿಗ್ಗಿಯಾಗಿ ಹಿಡಿದು ಮನೆಗೆ ಹೋದವನು ಕೈಯನ್ನು ಯಾವ ಕಾರಣಕ್ಕೂ ಸಡಲಿಸದೆ ಹೋಗಿ ಮಲಗಿಬಿಟ್ಟಿದ್ದನಂತೆ. ಮನೆಯವರಿಗೂ ಕಾಣದಂತೆ ಆ ಐದು ರೂಪಾಯಿಯನ್ನು ಖರ್ಚು ಮಾಡಲು ಪಡಬಾರದ ಪಾಡು ಬಿದ್ದು ಕೊನೆಗೆ ಆ ಐದು ರೂಪಾಯಿ ಹೇಗೋ ರಹಸ್ಯವಾಗಿ ಖರ್ಚಾಯಿತಂತೆ. ಆವತ್ತಿನಿಂದ ನೆಲ ನೋಡುತ್ತ ನಡೆಯುತ್ತಿದ್ದರೆ ಏನಾದರೂ ದುಡ್ಡುಪಟ್ಟು ಸಿಗುತ್ತದೆಂಬ ಆಸೆಯಲ್ಲಿ ಎಲ್ಲಿಗೆ ಹೋದರೂ, ಏನೇ ಮಾಡುತ್ತಿದ್ದರೂ ಬಗ್ಗಿ ನೆಲವನ್ನೇ ನೋಡುತ್ತ ದುಕೂನ ನಡೆಯುತ್ತಿದ್ದನಂತೆ, ಹೀಗೆ ನಡೆದೂ ನಡೆದೂ ಅವನ ಎಳೆಯ ಮೂಳೆಗಳು ಬಗ್ಗಿಬಗ್ಗಿ ಕುಡುಗೋಲಿನಂತೆ ಬಗ್ಗಿಕೊಂಡವೆಂಬುದು ಬಹಳಷ್ಟು ಜನ ಅನ್ನುತ್ತಾರೆ.

ಹೀಗೆ ಇವನು ಹುಡುಕುತ್ತಿದ್ದ ದುಡ್ಡಿಗೂ ಗೂನುಬೆನ್ನಿಗೂ ಕಾರ್ಯಕಾರಣ ಸಂಬಂಧ ಬೆಸೆದು ದುಡ್ಡುಕೂನ ಅನ್ನುವ ಅಡ್ಡಹೆಸರು ಇವನಿಗೆ ಅಂಟಿಕೊಂಡಿತೆಂದೂ, ನಂತರ ಆಡಿಕೊಳ್ಳುವವವರ ದವಡೆಯೊಳಗೆ ದುಡ್ಡುಕೂನ ಎಂಬ ಪದವು ಜಗಿಯಲ್ಪಟ್ಟು ದುಡ್ಕೂನವಾಗಿ ನಂತರ ಡೂ ಪದವೂ ಲೋಪವಾಗಿ ಕೊನೆಗೆ ದುಕೂನ ಎಂಬ ಹೆಸರೇ ಅವನಿಗೆ ಪರ್ಮನೆಂಟಾಗಿ ನಿಂತಿತೆಂಬುದು ದುಕೂನನ ಹೆಸರಿಗಿದ್ದ ಜನಪ್ರಿಯ ಇತಿಹಾಸವಾಗಿತ್ತು. ಇಂಥದೊಂದು ದರಬೇಸಿ ಹೆಸರು ತನಗೆ ಮೆತ್ತಿಕೊಂಡಿದ್ದು ಯಾಕೆಂದು ಬೋಕಿಪೇಟೆಯ ಕುಂಬಾರ ದುಕೂನನಿಗೆ ಅವಾಗವಾಗ ತಲೆಕೆರೆತ ಶುರುವಾಗುತ್ತಿತ್ತು. ಅವನ ಹೆಸರು ಹುಟ್ಟಿದ ಕುರಿತಾಗಿ ಊರಲ್ಲಿ ತಲೆಗೊಂದೊಂದು ಕತೆಗಳು ತೇಲಾಡುತ್ತಿದ್ದುದು ದುಕೂನನ ಕಿವಿಗೆ ತಲುಪುತ್ತಿದ್ದಾಗಲೆಲ್ಲ ನೊಂದುಕೊಂಡು ಕುಂತಲ್ಲಿ ಕೂತುಬಿಡುತ್ತಿದ್ದನು, ನಿಂತಲ್ಲಿ ನಿಂತುಬಿಡುತ್ತಿದ್ದನು. ಎಳವೆಯಲ್ಲಿ ಅವನ ಅಪ್ಪ ದೇವರಾಜಪ್ಪನು ಇದ್ದೊಬ್ಬ ಮಗನಿಗೆ ಕುಂಬಾರಿಕೆಯ ಕಸುಬುದಾರಿಕೆಯೆಲ್ಲವನ್ನೂ ತಲೆಗೆರೆದು ಅವನನ್ನು ರೆಡಿ ಮಾಡಿಟ್ಟೇ ಮಣ್ಣುಹೊದ್ದು ಮಲಗಿ ಇಲ್ಲಿಗೆ ಹನ್ನೊಂದು ವರ್ಷವಾಗಿತ್ತು. ಅಲ್ಲಿಂದ ದುಕೂನನಿಗೆ ಕುಂಬಾರಿಕೆ ಬಿಟ್ಟರೆ ಮತ್ತೇನೂ ಗೊತ್ತಿಲ್ಲವೆಂಬಷ್ಟು ಪಕ್ಕಾಕುಂಬಾರನಾಗಿ ಹಂಗೂ ಹಿಂಗೂ ತನ್ನ ತಟ್ಟಿಮನೆಯಲ್ಲಿ ಮತಿಭ್ರಮಿತ ಅವ್ವನೊಡನೆ ಬದುಕುತ್ತಿದ್ದನು.

ತನ್ನ ಹೆಸರನ್ನು ಚೇಂಜು ಮಾಡಿಕೊಳ್ಳುವ ಅವನ ಆಸೆ ಎಷ್ಟರ ಮಟ್ಟಿಗಿತ್ತೆಂದರೆ ಎರಡುಮೂರು ದಿನಕ್ಕೊಂದು ಸಾರಿಯಾದರೂ ತನ್ನನ್ನು ಅಜಿತ್ಕುಮಾರ್ ಎಂದು ಜನರು ಸುಂದರವಾದ ಹೆಸರು ಹಿಡಿದು ಕೂಗುವಂತೆ ದುಕೂನನಿಗೆ ಕನಸು ಬೀಳುತ್ತಿತ್ತು. ಬೇಜಾರಾದಾಗಲೆಲ್ಲ ತನ್ನ ಮತಿವಿಕಲ ಅವ್ವನ ಬಳಿ ಕುಂತು ‘ತನಗೆ ಹುಟ್ಟಿದಾಗ ಯಾವ್ದಾದರೂ ಹೆಸ್ರು ಪಸ್ರು ಇಟ್ಟಿದ್ರ, ಇಸ್ಕೂಲಿಗೇನರ ಸೇರಿಸಿದ್ರ ಅದ್ರ ದಾಕ್ಲುಮೆಂಟ್ ಚೀಟಿ ಎಲ್ಲಾರ ಮಡಗಿದೀಯ’ ಅಂತ ಕೇಳುತ್ತಿದ್ದ ಅವನು ಹೇಳುವಷ್ಟನ್ನೂ ಕೇಳಿಸಿಕೊಳ್ಳುತ್ತಿದ್ದ ದುಕೂನನ ಅವ್ವ ಬಾಯಿಕಳೆದುಕೊಂಡು ಅವನನ್ನೇ ಒಂದಷ್ಟು ಹೊತ್ತು ನೋಡಿ ಅಳುನಗು-ದುಕ್ಕಕೋಪ ಎಲ್ಲವೂ ಮಿಕ್ಸಾಗಿದ್ದ ಒಂದು ಕರ್ಕಶ ಸೌಂಡು ಮಾಡುತ್ತ ‘ಬ್ರಮ್ಮದೇವುರು ನಮ್ಮನ್ನ ರುಸ್ಮುನಿಗಳಿಗೆ ಬೇಕಿರೋ ಕುಡಕೆ ಮಾಡಕಂತ ಸುಷ್ಟಿ ಮಾಡವ್ನೆ.. ದ್ರವುಪದಿ ಸೊಯಂವರುಕ್ಕೆ ಪಾಂಡವ್ರು ಬಂದಾಗ ಕುಂಬಾರ್ರ ಕೊಟ್ಟಿಗೇಲೆ ಉಳಕಂಡಿದ್ರು.. ಮಣ್ಣೊಂಸ ಕಣೊ ನಮ್ದು ಮಣ್ಣೊಂಸ..’ ಅಂತ ಕಿರುಚಿಬಿಟ್ಟು ಸುಮ್ಮಕೆ ಕೂತುಬಿಡುತ್ತಿತ್ತು. ಅವ್ವನ ಪುರಾಣಕತೆ ಮುಗುದು, ಇವಾಗೇಳಬೋದು, ಅವಾಗೇಳಬೋದು ಅಂತ ಕಾಯ್ತಲೇ ಕುಂತಿರುತ್ತಿದ್ದ ದುಕೂನನಿಗೆ ಇಲ್ಲಿಯತನ ಅವನವ್ವ ಅವನ ಅಸಲಿ ಹೆಸರನ್ನು ಇನ್ನೂ ಹೇಳಿಲ್ಲ. 

ಒಂದೊಳ್ಳೆ ಹೆಸರು ಅಂತಲಾದರೂ ಆದರೆ ಆ ಹೆಸರನ್ನೇ ಮುಂದಿಟ್ಟುಕೊಂಡು; ತನ್ನ ಮಡಕೆ ಬ್ಯುಸಿನೆಸ್ಸು ಮುಂದೆ ಹೇಗೆಲ್ಲ ಡೆವಲಪ್ಪು ಆಗುತ್ತದೆಂದು ಹೆಣ್ಣು ಹೆತ್ತವರಿಗೆ ನಂಬಿಸಿ ಮದುವೆಯಾಗಿಬಿಡಬೇಕೆಂದು ಕಾಯುತ್ತಲೇ ಇರುವ ದುಕೂನನಿಗೆ; ಹೆಸರು ಚೇಂಜು ಮಾಡಿಕೊಳ್ಳುವ ಕಾನೂನುವಿಧಾನ ಏನು ಎತ್ತಲೆಂಬ ಘಮಲುಗಂಧ ಒಂದೂ ಇರಲಿಲ್ಲ. ಸುಟ್ಟಮಡಕೆಗೆ ಬಳಿಯಲೆಂದು ರೆಡ್‌ಆಕ್ಸೈಡ್ ತರಲೆಂದು ಹೋದವನು ಯಾವುದಕ್ಕೂ ಇರಲೆಂದು ತಾಲ್ಲೋಕಾಫೀಸಿನ ಮುಂದೆ ಖಾತೆಪಾಣಿ ಪತ್ರಗಳನ್ನು ಟೈಪು ಮಾಡಿಕೊಡುತ್ತಿದ್ದ ಮುದುಕ ಟೈಪಿಸ್ಟ್ ಬಂಡಪ್ಪನ ಮುಂದೆ ಕುಳಿತು ‘ತಾತ ಹೆಸ್ರುಚೇಂಜ್ ಮಾಡ್ಕಳದೆಂಗೆ?’ ಎಂದು ಜೀವ ತಿನ್ನುತ್ತ ಕುಂತುಬಿಟ್ಟಿದ್ದನು. ತಾಲ್ಲೋಕಾಫೀಸಿಗೆ ಸಂಬಂಧಪಟ್ಟಂತೆ ಇರುವ ಅಷ್ಟೂ ಪ್ರೊಸೀಜರುಗಳನ್ನು ನುಣ್ಣಗೆ ಅರೆದು ಕುಡಿದಂತಿದ್ದ ಬಂಡಪ್ಪ, ಇರುವ ಹೆಸರನ್ನು ಬದಲಿಸಿಕೊಳ್ಳಲು ಇರುವ ಕಾನೂನುಬದ್ಧ ಪ್ರಕ್ರಿಯೆಗಳೆಲ್ಲವನ್ನೂ ಹೇಳುತ್ತ, ‘ಮದ್ಲಿಗೆ ಒಬ್ರು ನೋಟ್ರಿ ವಕೀಲ್ ಹಿಡ್ಕಂಡು ಹಿಂಗಿಂಗೆ ನನ್ನೆಸ್ರು ಹಿಂಗದೆ, ಹಿಂಗೆ ಚೇಂಜ್ ಮಾಡ್ಕಳಣ ಅಂತಿದಿನಿ, ಗೌರ್ಮೆಂಟು ದೊಡ್ಮನಸು ಮಾಡಿ ನನ್ನೆಸ್ರು ಇಂಗಂಥ ಚೇಂಜ್ ಮಾಡಕಕ್ಕೆ ಅವ್ಕಾಸ ಮಾಡಿಕೊಡಬೇಕು, ನನ್ನಡ್ರೆಸ್ಸು ಹಿಂಗದೆ, ಅಪ್ಪ-ಅಮ್ಮ ಇಂತಿಂಥೋರು ಅಂತ ಒಂದು ಅಫಿಡವಿಟ್ ಮಾಡುಸ್ಕಬೇಕು,

ಆಮೇಲೆ ಒಂದೆಲ್ಡು ಪೇಪರಿನಾಗೆ ಸೇಂಟುಸೇಂ ಅಪಿಡವಿಟ್ಟಲ್ಲಿರೋದ್ನ ಪ್ರಿಂಟ್ ಮಾಡ್ಸಿ, ಅದ್ರ ಬಿಲ್ ಕೊಟ್ಟಿರೋ ಕಾಪಿ ತಗಂಡು ಎರಡ್ನೂ ಸೇರಿಸಿ ನಂಗೆ ತಂದ್ಕೊಟ್ರೆ, ಮಿಕ್ಕಿದಂಗೆ ಇನ್ನೊಂಚೂರು ಪ್ರೊಸೀಜರ್ ಇರ್ತವೆ ಅವನ್ನ ಮುಗಿಸಿಕಂಡು ಒಂದೆಲ್ಡು ತಿಂಗಳಾದ ಮ್ಯಾಲೆ ಗೆಜೆಟ್ ನೊಟಿಪಿಕೇಷನ್ ಬತ್ತದೆ, ಅವಾಗ ನಿನ್ನೆಸ್ರು ಚೇಂಜಾತದೆ.. ಬಲೇ ತಾರಾತಿಗಡಿ ಯವಾರ, ಹೆಸ್ರು ಚೇಂಜ್ ಮಾಡ್ಕಳಕೆ ಹೋಗದ್ಕಿಂತ ಒಂದ್ಸಲ ಸತೋಗ್ಬುಟ್ಟು ಮತ್ತೆ ಹೆಸ್ರಿಡೋ ಮಾತ್ಮರ ಹೊಟ್ಟೇಲಿ ಮತ್ತೆ ಹುಟ್ಟಿ ಬರೋದೇ ಒಳ್ಳೇದು’ ಎಂದು ಹೆದರಿಸಿಬಿಟ್ಟಿದ್ದ. ಊರು ಗುಬರಾಕಿಯಾದ್ರೂ ಸರಿ ನನ್ನ ಹೆಸರನ್ನ ಅಜಿತ್ಕುಮಾರ್ ಅಂತ ಮಾಡ್ಕಳ್ಳೇಬೇಕ್ ಅಂತ ಡಿಸೈಡು ಮಾಡಿಕೊಂಡಿದ್ದ ದುಕೂನನು– ‘ಒಂದೆಸ್ರಿಗೋಸ್ಕರ ಸತ್ತೋಗ್ಬುಟ್ಟು ಮತ್ತೆ ಎಲ್ಡನೆ ಸಲ ಹುಟ್ಟದು ತುಂಬ ಲೇಟಾತದೆ.. ಒಂಚೂರು ಅರ್ಜೆಂಟಾಗಿ ನನ್ನೆಸರನ್ನ ಅಜಿತ್ಕುಮಾರ್ ಅಂತ ಮಾಡಿಸ್ಕೊಡು. ಖರ್ಚೆಷ್ಟಾದ್ರೂ ಪರ್ವಾಗಿಲ್ಲ ಕೊಡಣ’ ಅಂದಿದ್ದ. ಅರ್ಜೆಂಟು ಅಂತ ಅಂದವರಿಗೆಲ್ಲ ಚೊರಚೊರನೆ ಜೇಬು ಕುಯ್ಯುವುದರಲ್ಲಿ ನಿಷ್ಣಾತನಾಗಿದ್ದ ಟೈಪಿಸ್ಟ್ ಬಂಡಪ್ಪನ ಎರಡೂ ಕಿವಿಗಳು ದುಕೂನನ ಮಾತು ಕೇಳಿ ಡೇರೆಹೂವಿನಂತೆ ಅರಳಿಕೊಂಡು ನಳನಳನಳ ಅಂದುಬಿಟ್ಟವು. ನೋಟ್ರಿ, ಬಾಂಡ್‌ಪೇಪರು, ಪೇಪರ್ ಅಡುವಿಟೈಜು, ತಾಸೀಲ್ದಾರ್ ಕಮಿಸನ್ನು ಅದೂ ಇದೆಂದು ದುಕೂನನ ಹೊಸ ಹೆಸರಿನ ರೇಟನ್ನು ೮ ಸಾವಿರಕ್ಕೆ ಟೈಪಿಸ್ಟ್ ಬಂಡಪ್ಪ ಫೈಸಲ್ ಮಾಡಿದನು.

ಬಂಡಪ್ಪ ಹೇಳಿದ ರೇಟಿಗೆ ತಲೆಯಾಡಿಸಿ ಬಂದ ದುಕೂನನು ೮ ಸಾವಿರ ಒಮ್ಮಕ್ಕೇ ಬರುವಂಥ ಆದಾಯದ ಮೂಲಗಳೇನಿವೆ ಎಂದು ತಿಳಿದುಕೊಳ್ಳಲು ತಾನು ಸುಟ್ಟು ಇಟ್ಟಿದ್ದ ಅಷ್ಟಿಷ್ಟು ಮಕಡೆಕುಡಿಕೆಗಳ ತಲೆಎಣಿಸಿ ಅವುಗಳ ರೇಟನ್ನು ಒಟ್ಟುಗೂಡಿಸಿ ಹತ್ತತ್ತಿರ ಒಂದೂವರೆ ಸಾವಿರಕ್ಕೆ ಬೆಲೆ ಬಾಳುವ ಐಟಮ್ಮುಗಳ ಒಡೆಯ ತಾನೆಂದು ಖುಷಿಪಟ್ಟುಕೊಂಡು ಆವತ್ತು ಖುಷಿಯಾಗಿ ನಿದ್ರೆಹೋಗಿದ್ದನು. ಬೆಳಗ್ಗೆ ಬೇಗ ಎದ್ದವನೇ ಅವ್ವನ ಹಲ್ಲುಜ್ಜಿ, ಮುಖತೊಳೆದು ಬೇಯಿಸಿದ್ದನ್ನು ಉಣ್ಣಲು ಕೊಟ್ಟು ತನ್ನ ಐಟಮ್ಮುಗಳನ್ನು ಖಾಯಮ್ಮಾಗಿ ಖರೀದಿಸುತ್ತಿದ್ದ ಬೋಕಿಪೇಟೆಯ ಮಸೂತಿಸಾಬರ ಬಳಿಗೆ ಬಿರಬಿರನೆ ನಡೆದುಬಂದನು. ಮೊಹ್ರಂ ತ್ಯೋಹಾರಿಗೆ ಇನ್ನೇನು ವಾರೊಪ್ಪತ್ತು ದಿನಗಳಿದ್ದುದರಿಂದ ಮಸೂತಿಸಾಬರಿಗೆ ಬೇಕಾದ ಮಣ್ಣಿನ ಹಣತೆ, ಲೋಬಾನದ ಚಿಪ್ಪು, ಬೆಲ್ಲದನೀರಿನ ಮಡಕೆಗಳ ಆರ್ಡರು ತೆಗೆದುಕೊಂಡು ಪಟಪಟನೆ ಸಪ್ಲೈ ಮಾಡಿದರೆ ಐದಾರು ಸಾವಿರಕ್ಕೆ ಮೋಸವಿಲ್ಲ. ಅಷ್ಟನ್ನು ಅಡ್ವಾನ್ಸೆಂದು ಟೈಪಿಸ್ಟ್ ಬಂಡಪ್ಪನಿಗೆ ಕೊಟ್ಟು ‘ಅಜಿತ್ಕುಮಾರ್’ ಎಂಬ ಹೆಸರಿನ ಸರ್ಟಿಫಿಕೇಟು ಬರುತ್ತಿದ್ದಂತೆ ಉಳಿದದ್ದನ್ನು ಕೊಟ್ಟರಾಯಿತೆಂಬುದು ದುಕೂನನ ಪ್ಲಾನಾಗಿತ್ತು. ಅದರಂತೆ ಮಸೂತಿ ಸಾಬರು ಆರ್ಡರೇನೋ ಕೊಟ್ಟರು.

ತಮ್ಮ ಮಸೂತಿಯ ಜೊತೆಗೆ ಸುತ್ತಮುತ್ತಲೂರಿನ ಮಸೂತಿಗಳ ಆರ್ಡರನ್ನೂ ಸೇರಿಸಿ ಹತ್ತತ್ತಿರ ೧೨ ಸಾವಿರದಷ್ಟು ಹಣತೆ, ಚಿಪ್ಪು, ಬೆಲ್ಲದನೀರಿನ ಮಡಕೆಗಳಿಗೆ ದುಕೂನನಿಗೆ ಯವಸ್ಥೆಯಾಯಿತು. ಬೆನ್ನೊಂದು ನೆಟ್ಟಗಿದ್ದಿದ್ದರೆ ಅಲ್ಲೇ ಕುಣಿದಾಡಿಬಿಡುತ್ತಿದ್ದನೇನೋ. ಅಷ್ಟೊಂದು ಖುಷಿಯಿಂದ ಮನೆಗೆ ಬಂದವನು ಅವನ ಬಳಿಯಿದ್ದ ಕೊಜೆಮಣ್ಣಿನ ಪ್ರಮಾಣವನ್ನು ನೋಡುತ್ತಿದ್ದಂತೆ ಗಾಬರಿಬಿದ್ದುಬಿಟ್ಟಿದ್ದ. ಇದ್ದ ಕೊಜೆಮಣ್ಣಿನಲ್ಲಿ ಹೆಚ್ಚೆಂದರೆ ೨೦ ಬೆಲ್ಲದ ನೀರಿನ ಮಡಕೆ ಮಾಡಬಹುದಿತ್ತಷ್ಟೇ. ಸರಿ ಎಂದಿನಂತೆ ತನ್ನ ಕಳ್ಳು ಕಸುಬು ಸಂಕುಲದ ಇನ್ನೊಂದೆರಡು ಕುಂಬಾರರನ್ನು ಕಂಡು ಪಾರ್ಟನರ್‌ಶಿಪ್ಪಲ್ಲಿ ಟ್ರಾಕ್ಟರಿ ಬಾಡಿಗೆಕೊಟ್ಟು ಚಮಡಿಕೆರೆಯಿಂದ ಕೊಜೆಮಣ್ಣು ತರಿಸಿಕೊಳ್ಳುವ ಪ್ರಸ್ತಾಪವನ್ನೆತ್ತಿದನು. ಇನ್ನೇನು ಬಂದೇಬಿಟ್ಟಿದ್ದ ಒಂದೆರಡು ದೇವರಜಾತ್ರೆಗಳಿಗೆ ಮಣ್ಣಿನ ಒಲೆಗಳನ್ನು ಬಾಡಿಗೆಗೆ ಕೊಡಲು ಮಣ್ಣಿನೊಲೆ ತಯಾರಿಸಲು ಕೊಜೆಮಣ್ಣಿನ ಕೊರತೆಯಿಂದ ಮಣ್ಣು ಹೊಡೆಸಲು ರೆಡಿಯಾಗಿದ್ದ ಉಳಿಕೆ ಕುಂಬಾರರು ಒಪ್ಪಿಕೊಂಡು ಟ್ರಾಕ್ಟರಿ ದೇವ್ರಾಜನಿಗೆ ಕೊಡಬೇಕಾದ ಗಾಡಿಬಾಡಿಗೆ-ಮಣ್ಣು ಅಗೆಯುವವರ ಕೂಲಿಯೂ ಸೇರಿದಂತೆ ಕೊಡಬೇಕಾದ ಹಣದಲ್ಲಿ ತಲೆಗಿಷ್ಟು ಪಾಲೆಂದು ಹಂಚಿಕೊಂಡು ಮಣ್ಣು ತರಿಸಿಕೊಳ್ಳಲು ಸಿದ್ಧವಾದರು.

ಇಂಥದೊಂದು ಪ್ರಹಸನದೊಳಗೆ ದುಕೂನ ಮತ್ತು ಉಳಿಕೆ ಕುಂಬಾರಮಂದಿಗಳು ಇರುವಾಗ; ಚಮಡಿಕೆರೆಯ ತಳಪಳವನ್ನೆಲ್ಲ ಬೋಕಿಪೇಟೆಯ ಕುಂಬಾರರು ಗೆಬರಿಗೆಬರಿ ಕೊಜೆಮಣ್ಣು ಎತ್ತಿದ್ದರಿಂದಲೇ ಕೆರೆ ಒಣಗಿ ಕೃಷಿಕಾಲುವೆಗೂ ಕೆರೆನೀರು ಬರದಂತಾಗಿದೆಯೆಂದು ಆಗಾಗ್ಗೆ ಗಲಾಟೆಯೆಬ್ಬಿಸುತ್ತಿದ್ದ ರೈತರು ಕೊನೆಗೊಂದು ತರ್ಲೆಕೆಲಸ ಮಾಡಿಟ್ಟಿದ್ದರು. ಚಮಡಿಕೆರೆಯ ಮಣ್ಣು–ಮರಳನ್ನು ಲಾರಿ ಟ್ರಾಕ್ಟರಿಗಳಲ್ಲಿ ಅಕ್ರಮವಾಗಿ ತುಂಬಿಕೊಂಡು ಪಟ್ಟಣಗಳಲ್ಲಿ ಮಾರಿಕೊಳ್ಳುವವರ ಹಾವಳಿಯಿಂದ ಕೆರೆಯನ್ನು ರಕ್ಷಿಸಬೇಕು ಅಂತ ರೈತರ ನಿಯೋಗವೊಂದು ಡೈರೆಕ್ಟಾಗಿ ತಾಸೀಲ್ದಾರನಿಗೆ ಕಂಪ್ಲೇಂಟು ಕೊಟ್ಟು ಬಂದಿತ್ತು. ಅಲ್ಲಿಯತನಕ ಕೆರೆ ಅನ್ನುವುದು ಮಳೆನೀರು ತುಂಬಿಸಿಟ್ಟುಕೊಳ್ಳುವ ಬಟ್ಟಲಿದ್ದಂಗೆ ಅಂತಲಷ್ಟೇ ತಿಳಿದಿದ್ದ ಬೋಕಿಪೇಟೆಯ ತಾಸೀಲ್ದಾರ ನಾಗರಾಜನಿಗೆ; ಮಣ್ಣುಲೋಡು ಮಾಡಿ ಮಾರಾಟ ಮಾಡುವವರು ಲೀಗಲ್‌ಪರ್ಮಿಷನ್ ಪಡೆಯಬೇಕೆಂಬ ಕಾನೂನೊಂದಿರುವುದು ಫಳ್ಳನೆ ಹೊಳೆದು; ಅದನ್ನು ಹಿಂಗೆತ್ತಿ ಹಂಗೆ ಚಮಡಿಕೆರೆಯತ್ತ ಹೇಯ್.. ಡುರ್ರಡುರ್ರ ಅಂತ ಚಲಾಯಿಸಿದನು.

ಇತ್ತ ದುಕೂನ ಮತ್ತು ಸಂಗಡಿಗರ ಕೊಜೆಮಣ್ಣಿನ ಡೀಲು ಒಪ್ಪಿಕೊಂಡು ಬಂದ ಟ್ರಾಕ್ಟರಿ ದೇವ್ರಾಜನಿಗೆ ಅಲ್ಲಿ ತಾಸೀಲ್ದಾರ್ ಹೆಸರಿನಲ್ಲಿದ್ದ ಬೋರ್ಡೊಂದು ಕಂಡು ಓದಲಾಗಿ; ಅಲ್ಲಿ.. ‘ಎಚ್ಚರಿಕೆ, ಸಾರ್ವಜನಿಕರ ಗಮನಕ್ಕೆ, ಜಿಲ್ಲಾಡಳಿತದ ಆದೇಶದಂತೆ ಚಮಡಿಕೆರೆಯೊಳಗೆ ಅಧಿಕೃತ ಲೈಸೆನ್ಸ್ ಇಲ್ಲದೆ ಮಣ್ಣು-ಮರಳು ಸಾಗಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗೆಯ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ಮೇಲೆ ನಿರ್ದಾಕ್ಷಿಣ್ಯವಾಗಿ ದಂಡ ಮತ್ತು ಜೈಲುವಾಸ ಎರಡೂ ಸೇರಿದಂತೆ ಕಾನೂನುಕ್ರಮ ತೆಗೆದುಕೊಳ್ಳಲಾಗುವುದು’ ಅಂತ ಬರೆಯಲಾಗಿತ್ತು. ಇನ್ನುಮುಂದೆ ತಾನು ಮತ್ತು ಮಣ್ಣುಕೂಲಿಗಳು ‘ಅಕ್ರಮ ಮಣ್ಣು ಕಳ್ಳಸಾಗಾಣಿಕೆದಾರರ’ ಪಟ್ಟಿಗೆ ಸೇರ್ಪಡೆಗೊಂಡಿರುವುದನ್ನು ಕಂಡು ಟ್ರಾಕ್ಟರಿ ದೇವ್ರಾಜ ಬಲುವಾಗಿ ನೊಂದುಕೊಂಡು ನೋಡಿದ್ದನ್ನು ನೋಡಿದಂತೆ ದುಕೂನ ಮತ್ತು ಕುಂಬಾರರಿಗೆ ವರದಿ ಒಪ್ಪಿಸಿ ನಿಟ್ಟುಸಿರಿಟ್ಟು ಟವೆಲ್ಲು ಕೊಡವಿಕೊಂಡು ಟ್ರಾಕ್ಟರಿ ಹತ್ತಿಕೊಂಡು ಎತ್ತಲೋ ಹೋಗಿಬಿಟ್ಟನು. ಟ್ರಾಕ್ಟರಿ ದೇವ್ರಾಜನ ಮಾತುಕೇಳಿ ಕರೆಂಟು ಪ್ಲಗ್ಗಿಗೆ ಕಿರುಬೆರಳಿಟ್ಟವರಂತೆ ಬಿಟ್ಟಕಣ್ಣು ಬಿಟ್ಟಂತೆ ನೋಡುತ್ತ ನಿಂತ ದುಕೂನ ಮತ್ತು ಇನ್ನಿತರೆ ಕುಂಬಾರರು ತಮ್ಮ ಕುಲಕಸುಬಿನ ಮರ್ಮಾಂಗಕ್ಕೆ ತಾಸೀಲ್ದಾರ್ ನಾಗ್ರಾಜನು ಎತ್ತಿ ಒದ್ದಂತೆ ಅನಿಸಿ ಬೋರ್ಡು ನೋಡಿಕೊಂಡು ಖಚಿತಪಡಿಸಿಕೊಳ್ಳಲು ಚಮಡಿಕೆರೆಗೆ ಬಂದರು.

ಅಲ್ಲಿ ಗದ್ದೆಗುಮ್ಮನ ಗೊಂಬೆಯಂತೆ ನೆಟ್ಟಗೆ ನಿಂತುಕೊಂಡಿದ್ದ ಬೋರ್ಡನ್ನೂ.. ಅದರಾಚೆಗೆ ತಮ್ಮ ಮಡಕೆಭಟ್ಟಿಯೊಳಗೆ ಕಾಲದಿಂದಲೂ ಬೆಂದು ಯಾರಯಾರದ್ದೋ ಮನೆಯೊಳಗೆ ನೀರುತುಂಬಿಕೊಂಡು ಕುಂತ ಕುಡಿಕೆ-ಮಡಿಕೆ ಮಾಡಲು ಕೊಜೆಮಣ್ಣು ಕೊಡುತ್ತಿದ್ದ ಚಮಡಿಕೆರೆಯನ್ನೂ ನೋಡುತ್ತ ಒದ್ದುಕೊಂಡು ಬರುತ್ತಿದ್ದ ಅಳುವನ್ನು ನಿಗ್ರಹಿಸಿಕೊಂಡು ಸುಮ್ಮನೆ ಮನೆಯತ್ತ ನಡೆಯತೊಡಗಿದರು. ದುಕೂನನ ಮನೆಯ ಮುಂದೆ ರವುಂಡಾಗಿ ಕುಂತ ಅಷ್ಟೂ ಜೀವಗಳು ವರ್ಷಕ್ಕೊಮ್ಮೆ ಬರುವ ಸೀಸನ್‌ಟೈಮಿನಲ್ಲೇ ಕೊಜೆಮಣ್ಣಿಗೆ ಇಂಥದೊಂದು ಅಡ್ಡಗಾಲು ಬಂದು ಕುಳಿತಿದ್ದರ ಬಗ್ಗೆ ತಲೆಗೊಂದು ಮಾತನಾಡುತ್ತ ಇರುವಾಗ ದುಕೂನನ ಅವ್ವ ಅವರತ್ತಲೇ ನೋಡುತ್ತ ‘ರುಸಿಮುನಿಗೋಳ್ಗೆ ಕುಡಕೆ ಮಾಡಕಂತ ಬ್ರಮ್ಮದೇವ್ರು ಸುಷ್ಟಿ ಮಾಡಿರೋ ಪರದೇಸಿಮಕ್ಕಳಾ.. ಮಡಕೆ ಮಾಡ್ರೋ.. ಕುಡಿಕೆ ಮಾಡ್ರೋ.. ನೆಲದ ಮ್ಯಾಗೆ ಕುಂತ್ಕಂಡು ಕುಂಡಿ-ನೆಲ ಎಲ್ಡನೂ ಯಾಕ್ರೋ ಸವುಸಿಕೊಂಡು ಕುಂತಿದೀರ..’ ಅಂತ ಕಿರುಚಿಕೊಂಡು ಕುಂತಿತ್ತು. ಅವ್ವನತ್ತ ಕೈಗೆ ಸಿಕ್ಕಿದ ಮಡಕೆಬೋಕಿಯೊಂದನ್ನು ಎಸೆದು ತನ್ನ ಸಿಟ್ಟು ತಣಿಸಿಕೊಳ್ಳಲು ಯತ್ನಿಸಿದ ದುಕೂನನನ್ನು ಉಳಿದ ಕುಂಬಾರರು ತಡೆದರು. ಅದೇ ಟೇಮಿಗೆ ಬೆರಳು ಮುಟ್ಟಿದರೆ ಟೇಂವ್‌ಟೇಂವ್ ಎನ್ನುತ್ತಿದ್ದ ಮೊಬೈಲಿನೊಳಗೆ ಏನೋ ನೋಡಿಕೊಂಡು ಬರುತ್ತಿದ್ದ ವಡಾರಿಬಾಬುವು ಈ ರವುಂಡು ಮೀಟಿಂಗಿನಲ್ಲಿದ್ದ ತನ್ನ ಕಳ್ಳುಬಳ್ಳಿ ಕುಂಬಾರರನ್ನು ನೋಡಿ ಅವರತ್ತ ಬಂದನು.

ಎಲ್ಲರ ಮುಖಕ್ಕೂ ಯಾರೋ ಮೆಣಸಿನಪುಡಿ ಹಾಕಿ ತಿಕ್ಕಿ ಕಳಿಸಿದಂತೆ ಒಂಥರಾ ಮಖ ಮಾಡಿಕೊಂಡು ಕುಳಿತಿದ್ದವರನ್ನು ಮ್ಯಾಟ್ರೇನೆಂದು ಕೇಳಲಾಗಿ.. ಹೇಳುವುದೋ ಬೇಡವೋ ಎಂಬಂತೆ ದುಕೂನನ ಮುಖವನ್ನು ಉಳಿದವರೆಲ್ಲ ನೋಡತೊಡಗಿದರು. ವಡಾರಿಬಾಬುವನ್ನು ಒಂದೇಟಿಗೆ ನಂಬಿ ಆಗಿದ್ದೇನೆಂದು ಹೇಳಲು ಯಾರೂ ಸಿದ್ಧರಿದ್ದುದರ ಹಿಂದೆ ಒಂದು ಪುಟ್ಟ ಹಿನ್ನೆಲೆಯೂ ಇತ್ತು. ಎಲ್ಲ ಕುಂಬಾರರ ಮನೆಗಳಂತೆ ತನ್ನ ಕುಲಕಸುಬು ಶುರುವಿಟ್ಟಿದ್ದ ವಡಾರಿಬಾಬುವಿಗೆ ಇದು ಬರಕತ್ತಾಗದ ಕಸುಬೆಂಬುದು ಬಹಳಬೇಗ ಅರಿವಿಗೆ ಬಂದಿತ್ತು. ಮೊಹ್ರಂ-ದೀಪಾವಳಿಗೆ ಹಣತೆ-ಕುಡಿಕೆ, ಜಾತ್ರೆಗಳಲ್ಲಿ ಮೇಕೆ-ಕೋಳಿ ಬೇಯಿಸಲು ಬೇಕಾದ ಮಣ್ಣೊಲೆಗಳನ್ನು ಸಪ್ಲೈ ಮಾಡಲು ಒಂದು ವರ್ಷವಿಡೀ ಕಾಯುತ್ತ ಕುಳಿತಿರಲು ಸಿದ್ಧವಿರದಿದ್ದ ವಡಾರಿಬಾಬುವು ಬಹಳಬೇಗ ಆಲ್ಟರನೇಟಿವ್ ಕಸುಬೊಂದನ್ನು ಹುಡುಕಿಕೊಂಡಿದ್ದನು. ಕಮ್ಮಿಖರ್ಚಿನಲ್ಲಿ ಮಾಡಬಹುದಾದ ಹಣೆಗೆ ಬಳಿದುಕೊಳ್ಳುವ ಇಬೂತಿಗಟ್ಟಿಗಳನ್ನು ವಡಾರಿಬಾಬು ತಯಾರಿಸುತ್ತಿದ್ದನು. ಸುತ್ತಮುತ್ತಲ ಊರುಗಳ ರೈತರ ಹಸು ಎಮ್ಮೆ ಕೋಣಗಳ ಸೆಗಣಿಯನ್ನು ಮಂಕರಿಗಿಷ್ಟೆಂದು ಕೊಟ್ಟು ಖರೀದಿಸುತ್ತಿದ್ದ ಅವನು, ಅವನ್ನು ತನ್ನ ಮನೆಯ ಮುಂದಿನ ಅಂಗಳದಲ್ಲಿ ರಾಶಿರಾಶಿ ಪೇರಿಸಿಟ್ಟುಕೊಳ್ಳುತ್ತಿದ್ದನು.

ಅವುಗಳನ್ನು ಬೆರಣಿತಟ್ಟಿ ಒಣಗಿಸಿ ರಟ್ಟು ಮಾಡಿ, ಒಣಹುಲ್ಲಿನ ಪೆಂಡಿಗಳನ್ನು ತಂದು, ಪಕ್ಕದ ಊದುಗಡ್ಡಿ ಫ್ಯಾಕ್ಟರಿಯಲ್ಲಿ ಮುರಿದ-ಮುಕ್ಕಾದ ಊದುಗಡ್ಡಿಗಳನ್ನು ಕೇಜಿ ಲೆಕ್ಕದಲ್ಲಿ ತಂದು ಪೇರಿಸಿಟ್ಟುಕೊಳ್ಳುತ್ತಿದ್ದನು. ಬೆರಣಿಗಳನ್ನು ನೆಲದಲ್ಲಿ ಜೋಡಿಸಿ ಅದರ ಮೇಲಿಷ್ಟು ಒಣಹುಲ್ಲುಹಾಸಿ, ಅದರ ಮೇಲೆ ಊದುಗಡ್ಡಿಗಳನ್ನು ಹರಡಿ, ಈ ಯವಸ್ಥೆಯ ಮೇಲೆ ಮತ್ತೆ ಬೆರಣಿಗಳಿಟ್ಟು ಅದರ ಮೇಲೆ ಹುಲ್ಲುಹಾಕಿ... ಹೀಗೆ ಒಂದು ಪೆಂಡಿ ಜೋಡಿ ಅದಕ್ಕೆ ಬೆಂಕಿಯಿಡುತ್ತಿದ್ದನು. ಇವೆಲ್ಲವೂ ಸುಟ್ಟು ಕೊನೆಗುಳಿಯುವ ಬೂದಿಯನ್ನು ನೀರಿನಲ್ಲಿ ಕಲೆಸಿ ಉಂಡೆಗಟ್ಟಿದರೆ ಘಮಘಮವೆನ್ನುವ ಇಬೂತಿಗಟ್ಟಿ ರೆಡಿಯಾಗುತ್ತಿದ್ದವು. ಈ ಗಟ್ಟಿಗಳನ್ನು ಊರೂರಿನ ಗ್ರಂಧಿಗೆ ಅಂಗಡಿಗಳು, ದೇವಸ್ಥಾನದ ಮುಂದಲ ಹಾರ-ಊದುಗಡ್ಡಿ ಕುಂಕುಮದ ಅಂಗಡಿಗಳಿಗೆ ಒಂದಕ್ಕೆರಡು ರೇಟಿಟ್ಟು ಮಾರಾಟ ಮಾಡುತ್ತ ಈ ಬೂದಿ ಯಾಪಾರದಲ್ಲಿ ಬರುತ್ತಿದ್ದ ಸಖತ್ತು ಆದಾಯದಿಂದ ಬೆರಳಲ್ಲಿ ಮುಟ್ಟಿದರೆ ಟೇಂವ್‌ಟೇಂವ್ ಅನ್ನುವ ೪೦ ಸಾವಿರದ ಸಾಮಸಂಗು ಮೊಬೈಲು ಖರೀದಿಸುವಷ್ಟು ವಡಾರಿಬಾಬು ನೆಗವಾಗಿ ಹೋಗಿದ್ದನು. ಕುಲಕಸುಬು ನಂಬಿಕೊಂಡಿದ್ದರೆ ಕಡೆಗೆ ‘ಮಡಕೆಬೋಕಿಗಳನ್ನೇ ಬೇಯಿಸಿಕೊಂಡು ತಿನ್ನೋ ಕಾಲ ಬತ್ತದೆ, ಇದ್ನ ಬಿಟ್ಟು ಮತ್ತೇನಾದ್ರೂ ಮಾಡ್ರೋ ಅಂತ’ ಇವನು ಉಳಿಕೆ ಕುಂಬಾರರ ಮನೆಯ ಹುಡುಗರ ತಲೆ ಕೆಡಿಸುವುದು,

ಆ ಮಕ್ಕಳು ಬಂದು ‘ಬೀಡಅಂಗಡಿ ಹಾಕ್ಕಂತಿನಿ, ಕುಂಭಕಾರ ಟ್ರಸ್ಟ್ ಬ್ಯಾಂಕಿಂದ ಲೋನ್ ತೆಗೆಸಿಕೊಡು, ಗ್ಯಾರೇಜ್ ಹಾಕ್ಕಂತಿನಿ ಲೋನ್ ತೆಗೆಸಿಕೊಡು’ ಅಂತ ಅವರ ಹೆತ್ತವರ ತಲೆ ತಿನ್ನುವುದು, ವಯಸ್ಸಲ್ಲಿರೋ ಈ ಐನಾತಿಮಕ್ಕಳಿಗೆ ಯಾವ ಗ್ಯಾರಂಟಿ ಮೇಲೆ ಲೋನು ತೆಗೆಸಿಕೊಡುವುದು, ದುಡ್ಡು ಬತ್ತಿದ್ದಂಗೆ ಮಜಾಮಾಡಿ ಉಡಾಯಿಸಿಬಿಟ್ರೆ ಕಂತು ಕಟ್ಟದೆಂಗೆ? ಅಂತ ತಲೆ ತಿನ್ನುತ್ತಿದ್ದ ಮಕ್ಕಳ ಯಾವ ಮಾತಿಗೂ ಸೊಪ್ಪು ಹಾಕದೆ ಕುಂಬಾರರು ನಿರ್ಲಿಪ್ತರಾಗಿ ಇದ್ದುಬಿಡುವುದು. ಇದರಿಂದ ಒಂದಷ್ಟು ತುಡುಗೈಕಳು ಪಟ್ಣಕ್ಕೋಗಿ ಬಿಸ್ಕತ್ ಫ್ಯಾಕ್ಟ್ರಿ ಸೇರ್ಕತಿನಿ ಅಂತ ಮನೆ ಬಿಟ್ಟು ಹೋಗಿದ್ದುದೂ ನಡೆದಿತ್ತು. ನೆಟ್ಟಗಿದ್ದ ಮಕ್ಕಳ ತಲೆಕೆಡಿಸಿ ಹಳ್ಳಕ್ಕೆ ಹಾಕಿದ ಅಂತ ವಡಾರಿಬಾಬುವಿನ ಮೇಲೆ ಬೋಕಿಪೇಟೆಯ ಕುಂಬಾರರು ಹಲ್ಲಲ್ಲು ಮಸೆಯುವಂತೆ ಆಗಿತ್ತು. ಇಂಥ ಹಿನ್ನೆಲೆಯ ವಡಾರಿಬಾಬು ಏನ್ ಮ್ಯಾಟ್ರು ಎಂಬಂತೆ ಬಂದು ನಿಂತಾಗ ‘ಹೇಳದೋ ಬಿಡದೋ’ ಎನ್ನುವ ಪ್ರಶ್ನೆ ದುಕೂನನ ಮನೆಯ ಮುಂದೆ ರವುಂಡಾಗಿ ಕುಂತಿದ್ದ ಕುಂಬಾರರೆಲ್ಲರಿಗೂ ಅಟ್ ಎ ಟೈಮ್ ಹಿಂಗೆ ಬಂದು ಹಂಗೆ ಪಾಸಾಗಿಹೋಯ್ತು. ಕೊನೆಗೆ ದುಕೂನ ಟ್ರಾಕ್ಟರಿ ದೇವರಾಜ ಬಂದು ತಮಗೆ ಹೇಳಿದ ಎಚ್ಚರಿಕೆ ಬೋರ್ಡಿನ ಸಮಾಚಾರದಿಂದ ಹಿಡಿದು ಇಲ್ಲಿಯತನಕದವರೆಗಿನ ಎಲ್ಲ ರಂಕಲನ್ನೂ ವಡಾರಿಬಾಬುವಿನ ಮುಂದಿಟ್ಟು ಸುಮ್ಮಗಾದ.

‘ಇಂಥದ್ದೊಂದು ಜವಾರಿಏಟು ಯಾವತ್ತಾದರೊಂದು ದಿನ ಬೀಳುತ್ತೆ ಅಂತನೇ ಇಬೂತಿಗಟ್ಟಿ ಯಾಪಾರಕ್ಕೆ ಇಳಿದಿದ್ದು ನಾನು’ ಅಂತ ಭಾಷಣ ಶುರು ಮಾಡಿದ ವಡಾರಿಬಾಬುವಿಗೂ ತನ್ನ ಕುಲದಬಳ್ಳಿಗಳು ಹೀಗೆ ಅಡಕತ್ತರಿಗೆ ಸಿಗೆಬಿದ್ದಿರುವ ಪ್ರಸಂಗದಲ್ಲಿ ಏನಾದರೂ ಮಾಡಬೇಕಲ್ಲ ಎಂಬುದು ಹೊಕ್ಕಳೊಳಗಿನಿಂದ ಹುಟ್ಟಿಬಂದಂತಾಗಿ, ರವುಂಡಿನ ನಡುವೆ ಜಾಗ ಮಾಡಿಕೊಂಡು ಕುಳಿತು ಯೋಚನೆ ಮಾಡತೊಡಗಿದನು. ಏನೇ ಪ್ಲಾನುಗಳು ಚಕಪಕ ಅಂತ ಹೊಳೆದರೂ ಅದು ಕಾನೂಬಾಹಿರ ಕೆಲಸವಾಗಿ ಇಡೀ ಊರಿಗೂರೇ ಜೈಲುಪಾಲಾಗುವಂಥ ದೂರಗಾಮಿ ಎಫೆಕ್ಟುಗಳನ್ನು ಒಳಗೊಂಡಿದ್ದವು. ಅರ್ಜೆಂಟಾಗಿ ಕುಲದಬಳ್ಳಿಗಳಿಗೆ ಬೇಕಿರುವ ಕೊಜೆಮಣ್ಣಿನ ಲೋಡುಗಳಿಗೆ ಚಮಡಿಕೆರೆಗೆ ಗೇಟು ತೆರೆಯುವ ಯಾವ ಪ್ಲಾನುಗಳೂ ಕಾಣದ ವಡಾರಿಬಾಬು; ಇದಕ್ಕೆ ಅದನ್ನು ತಗಲಾಕಿ, ಅದಕ್ಕೆ ಇದನ್ನು ತಗಲಾಕಿ ಮೆಜರುಮೆಂಟು ಮಾಡಿ ನೋಡಿ ಒಂದು ಪ್ಲಾನು ಹುಟ್ಟಿಸಿಯೇಬಿಟ್ಟನು. ಅದೇನು ಎತ್ತ ಕ್ಯಾರೆಕೆತ್ತ ಎಂದು ದುಕೂನನಾದಿಯಾಗಿ ಎಲ್ಲರೂ ಕೇಳಿದರೂ ಪ್ಲಾನೇನೆಂಬುದನ್ನು ಮಾತ್ರ ಹೇಳದೆ ಗುಟ್ಟಾಗಿಟ್ಟ ವಡಾರಿಬಾಬು, ‘ಮಿಕ್ಕಿದ್ದೇನೇ ಇದ್ರೂ ನಾಳೆಗೆ ಮಾತಾಡಣ. ನಾಳೆ ತಾಲ್ಲೋಕಾಫೀಸಿಂದ ಒಬ್ಬ ಆಫೀಸರು ಬರತಾವುನೆ ನನ್ನ ಹುಡಿಕ್ಕೆಂಡು.

ಅವನೇ ಮುಂದೆ ನಿಂತಕಂಡು ಚಮಡಿಕೆರೆಯಿಂದ ಕೊಜೆಮಣ್ಣು ತಂದು ಕುಂಬಾರ್ರ ಮನೆಗಳಿಗೆ ಹಂಚ್ತಾನೆ.. ತಮಾಸೆ ಮಾಡಕ್ಕೆ ಆ ನನ್ಮಕ್ಕಳಿಗೇನ ಬರದು.. ನಮ್ಗೂ ಬತ್ತದೆ..’ ಅಂತಂದು ರವುಂಡಿನಿಂದ ಮೇಲಕ್ಕೆದ್ದನು. ರವುಂಡಿನೊಳಗಿದ್ದ ಯಾರೊಬ್ಬರಿಗೂ ವಡಾರಿಬಾಬು ತಲೆಯೊಳಗೆ ಯಾವ ಸೀಮೆಣ್ಣೆಗಾಡಿ ಓಡುತ್ತಿದೆಯೆಂದು ತಿಳಿಯಲಿಲ್ಲ. ಆವತ್ತು ರಾತ್ರಿ ದುಕೂನನು ಅವ್ವನಿಗೆ ಬೇಯಿಸಿದ ಕಲ್ಲುಗಂಜಿಯನ್ನು ತಟ್ಟೆಗೆ ಸುರಿದು ಉಫ್ಫುಉಫ್ಫು ಊದಿ ತಿನ್ನಿಸುವಾಗ ಗಂಜಿತಟ್ಟೆಯೊಳಗೆ ಅವನ ಕಣ್ಣೀರೂ ತಟಗುಡುತ್ತಿತ್ತು. ವಡಾರಿಬಾಬುವಿನ ಪ್ಲಾನು ಏನಾದರೂ ಉಲ್ಟಾ ಹೊಡೆದು ಕೊಜೆಮಣ್ಣು ಸಿಗದಿದ್ದರೆ ಮಸೂತಿಸಾಬರಿಗೆ ಏನಂತ ಮುಖ ತೋರಿಸುವುದು? ಟೈಪಿಸ್ಟ್ ಬಂಡಪ್ಪನಿಗೆ ಹೆಸರು ಚೇಂಜು ಮಾಡಲು ಕೊಡಬೇಕಾದ ಅಡ್ವಾನ್ಸಿಗೆ ಏನು ಮಾಡುವುದು ಎಂಬ ಹುಳ ಅವನ ಕಣ್ಣೊಳಗೆ ಪುಳಪುಳನೆ ಓಡಾಡುತ್ತ ಇತ್ತು. ಯಾವ ಹೊತ್ತಿನಲ್ಲೋ ದುಕೂನನು ‘ಅಜಿತ್ಕುಮಾರು.. ಅಜಿತ್ಕುಮಾರು..’ ಎಂದು ಸ್ವಪ್ನದಲ್ಲಿ ಕನವರಿಸಿಕೊಳ್ಳುವುದನ್ನು ಅವನವ್ವ ವಿನಾಕಾರಣ ಕೇಳಿಸಿಕೊಂಡಿತು.  ಮಾರನೆ ಬೆಳಿಗ್ಗೆ ದುಕೂನ ಮತ್ತು ಉಳಿದ ಕುಂಬಾರಜನಗಳು ವಡಾರಿಬಾಬುವಿನ ಮನೆಯ ಬಳಿಗೆ ಹೋಗುವ ಹೊತ್ತಿಗೆ ಅಲ್ಲೇನೋ ಜೋರು ಮಾತಿನ ಕಸಮುಸು ವಾಗ್ವಾದ ನಡೆಯುತ್ತಿತ್ತು.

ತಾಲ್ಲೋಕಾಫೀಸಿನ ವ್ಯಕ್ತಿಯೊಡನೆ ವಡಾರಿಬಾಬು ಏನೋ ಜೋರಾಗಿ ಮಾತನಾಡುತ್ತಿದ್ದ. ಮೊದಲಿಗೆ ಇಲ್ಲೇನು ನಡೆಯುತ್ತಿದೆಯೆಂಬುದು ಯಾರಿಗೂ ತಿಳಿಯಲಿಲ್ಲ. ವಾಗ್ವಾದ ಮುಂದುವರೆದಂತೆ ದುಕೂನ ಮತ್ತು ಸಂಗಡಿಗರಿಗೆ ಹರಕುಮುರಕು ಅರ್ಥವಾದದ್ದು ಇಷ್ಟು. ಬೋಕಿಪೇಟೆಯಲ್ಲಿ ನಾಲ್ಕುದಿನಗಳ ನಂತರ ಉದ್ಘಾಟನೆಯಾಗಲಿರುವ ಹೊಸ ದೇವಸ್ಥಾನವೊಂದಕ್ಕೆ ರಾಜ್ಯಪಾಲರು ಮುಖ್ಯಅತಿಥಿಯಾಗಿ ಬರುವವರಿದ್ದರು. ಹೀಗೆ ಬೋಕಿಪೇಟೆಗೆ ಬರಲು ಇರುವ ರಸ್ತೆಮಾರ್ಗದಲ್ಲಿ ರಾಜ್ಯಪಾಲರೇನಾದರೂ ಕಾರಲ್ಲಿ ಬಂದರೆ ಆ ಮನುಷ್ಯನ ಬೆನ್ನುಮೂಳೆಯೆನ್ನುವುದು ಮೈದಾಹಿಟ್ಟಿನಂತೆ ನುಣ್ಣಗೆ ರುಬ್ಬಿಹೋಗುವಷ್ಟು ಕಳಪೆರಸ್ತೆಗಳನ್ನು ಕಟ್ಟಿಕೊಂಡಿದ್ದ ಸರ್ಕಾರಿ ಅಧಿಕಾರಿಗಳು ರಸ್ತೆಮಾರ್ಗವನ್ನು ಬಿಟ್ಟು ಹೆಲಿಕಾಪ್ಟರಿನಲ್ಲಿ ವಾಯುಮಾರ್ಗವಾಗಿ ಬರುವುದೊಳ್ಳೆಯದೆಂಬ ಸೂಚನೆಯನ್ನು ಬೆಂಗಳೂರಿನ ರಾಜಭವನದ ಅಧಿಕಾರಿಗಳಿಗೆ ರವಾನಿಸಿದ್ದರು. ಅದರಂತೆ ಅಲ್ಲಿ ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್ ಒಂದನ್ನು ನಿರ್ಮಿಸಲು ರಾಜಭವನದ ಅಧಿಕಾರಿಗಳಿಂದ ಬೋಕಿಪೇಟೆಯ ಅಧಿಕಾರಿಗಳಿಗೆ ಸಂದೇಶ ಬಂದಿತ್ತು. ಇವರೂ ಸರಿಯೆಂದಿದ್ದರು. ಆದರೆ ಸಮಸ್ಯೆ ಇಲ್ಲಿಂದಲೇ ಶುರುವಾಗಿತ್ತು. ಇರುವ ೪ ದಿನದಲ್ಲಿ ಸಿಮೆಂಟು ಜಲ್ಲಿಕಲ್ಲಿನ ಕಾಂಕ್ರೀಟಿನಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಇರಾದೆ ಇಲ್ಲಿನ ಅಧಿಕಾರಿಗಳಿಗಂತೂ ಇರಲಿಲ್ಲ.

ಯಾವ ವಿಐಪಿಯೂ ಇದುವರೆಗೆ ಹೆಲಿಕಾಪ್ಟರಿನಲ್ಲಿ ತಮ್ಮೂರಿಗೆ ಬಂದಿಳಿದು ಗೊತ್ತಿಲ್ಲದ ಅವರು, ರಾಜ್ಯಪಾಲರು ಬಂದು ಹೋಗುವ ಒಂದೇ ದಿನಕ್ಕಾಗಿ ಲಕ್ಷಗಟ್ಟಲೆ ಸುರಿದು ಹೆಲಿಪ್ಯಾಡ್ ನಿರ್ಮಿಸಲು ಯಾವ ಬಜೆಟರಿ ಅಲೋಕೇಷನ್ನುಗಳೂ ಇಲ್ಲಿನ ಅಧಿಕಾರಿಗಳಿಗೆ ಲಭ್ಯವಿರಲಿಲ್ಲ. ಹಾಗೆಂದು ಹೆಲಿಪ್ಯಾಡ್ ನಿರ್ಮಿಸದೆಯೂ ಇರುವಂತಿರಲಿಲ್ಲ. ಅದಕ್ಕಾಗಿ ಒಂದೆರಡು ಲಾರಿ ಸೆಗಣಿಯನ್ನು ತಂದು ಬಯಲಿನಲ್ಲಿ ನೆಲಸಾರಿಸಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲು ಆಫೀಸರುಗಳು ಜೈ ಅಂದಿದ್ದರು. ಸರಿ, ಬೇಕಿರುವ ಸೆಗಣಿಗೇನು ಮಾಡುವುದು? ತಾಲ್ಲೋಕಾಫೀಸಿನ ಜವಾನರೆಲ್ಲರನ್ನು ಕರೆದು ಲಾರಿಲೋಡು ಸೆಗಣಿ ಸಂಗ್ರಹಿಸಿ ತರಲು ಅಟ್ಟಿದ್ದರು. ಸುತ್ತಮುತ್ತಲ ಗೋಪಾಲಕ ರೈತರ ಮನೆಗಳ ಗೊಬ್ಬರದ ಗುಂಡಿಯನ್ನೆಲ್ಲ ಜಾಲಾಡಿದ್ದ ಜವಾನರು ಒಂದೆತ್ತಿನಗಾಡಿಯಷ್ಟೂ ಸೆಗಣಿ ಸಿಗದೆ ಯಾಕೆಂದು ವಿಚಾರಿಸಲಾಗಿ, ಇದ್ದಬದ್ದ ಸೆಗಣಿಯೆಲ್ಲ ಇಬೂತಿಗಟ್ಟಿ ಮಾಡುವ ಕುಂಬಾರಬೀದಿಯ ವಡಾರಿಬಾಬು ವಾರದ ಹಿಂದೆಯಷ್ಟೇ ಮಂಕರಿತೂಕಕ್ಕೆ ಕೊಂಡು ಹೋದನೆಂದು ಸೆಗಣಿತಿಪ್ಪೆಯ ಓನರುಗಳು ಜವಾನರಿಗೆ ತಿಳಿಸಿದ್ದರು. ಇದನ್ನು ಹಂಗೇ ಬಂದು ಇವರು ತಾಸೀಲ್ದಾರ ನಾಗ್ರಾಜನಿಗೆ ಬಂದು ಹೇಳಿದ್ದಾರೆ.

ಇತ್ತ ಹೆಲಿಪ್ಯಾಡು ನಿರ್ಮಿಸಲು ದುಡ್ಡೂ ಇಲ್ಲ, ಅತ್ತ ಟೆಂಪೊರೆರಿ ಹೆಲಿಪ್ಯಾಡು ನಿರ್ಮಿಸಲು ಒಂದು ಮಂಕರಿ ಸೆಗಣಿಯೂ ಇಲ್ಲದೆ ಗಾಬರಿಯಾದ ನಾಗ್ರಾಜನು ಹೇಗಾದರೂ ಮಾಡಿ ವಡಾರಿಬಾಬುವಿನ ಕೈಕಾಲಾದರೂ ಹಿಡಿದು ಅವನ ಬಳಿಯಿರುವ ಸೆಗಣಿತಂದು ಜವಾನರ ಕೈಲಿ ಹೆಲಿಪ್ಯಾಡು ನಿರ್ಮಿಸುವ ಸಾಹಸವನ್ನು ಶಿರಸ್ತೇದಾರ ಸೆಬಾಸ್ಟಿಯನ್ ತಲೆಗೆ ಕಟ್ಟಿ ನಿರುಮ್ಮಳನಾಗಿದ್ದನು. ವಡಾರಿಬಾಬುವಿನ ಬಳಿ ಬಂದು ಸೆಗಣಿ ಕೊಡುವಂತೆ ಬೇಡಿಕೊಂಡು ನಿಂತಿದ್ದ ಸೆಬಾಸ್ಟಿಯನ್‌ನನ್ನು ವಡಾರಿಬಾಬು ಹೆಂಗೆಬೇಕೋ ಹಂಗೆ ಉಗಿಯುತ್ತ ‘ಅಲ್ರೀ.. ಕುಂಬಾರರಿಗೆ ಚಮಡಿಕೆರೇಲಿ ಕೊಜೆಮಣ್ಣು ತಗಬಾರದು, ತಗಂಡ್ರೆ ಜೈಲಿಗಾಕ್ತೀವಿ ಅಂತ ಬೋರ್ಡ್ ಹಾಕಿ ನಮ್ಮ ಬುಡಕ್ಕೇ ತಂದಿಟ್ಟು ಇವಾಗ ಸೆಗಣಿ ಕೊಡು ಅಂತ ಕುಂಬಾರ್ರ ಹತ್ರನೇ ಬರಕೆ ಮಾನಮರ್ಯಾದೆ ಇಲ್ವೇನ್ರಿ..’ ಅಂತ ಕೂಗಾಡುತ್ತಿದ್ದ. ಸೆಬಾಸ್ಟಿಯನ್‌ನ ಪರಿಸ್ಥಿತಿ ಹೇಗಿತ್ತೆಂದರೆ ಇದ್ಯಾವನೋ ಇಬೂತಿ ಮಾಡೋನ ಹತ್ರ ಸೆಗಣಿ ಕೇಳ್ಕೊಂಡು ಅವನ ಕೈಲಿ ಅನ್ನಬಾರದ್ದೆಲ್ಲ ಅನ್ನಿಸಿಕೊಳ್ಳುವ ಸ್ಥಿತಿಗೆ ನನ್ನ ರೆಪ್ಯುಟೇಷನ್ ಬಂತಲ್ಲ ಅಂತ ಅವನಿಗೂ ರೇಗುಬಂದು ಹಾಹೂ ಅಂತ ಅವನೂ ಅನ್ನುತ್ತಿದ್ದ. ಅಷ್ಟೊತ್ತಿಗೆ ದುಕೂನ ಮತ್ತು ಕುಂಬಾರರು ವಡಾರಿಬಾಬುವನ್ನು ಹುಡುಕಿಕೊಂಡು ಅಲ್ಲಿಗೇ ಬಂದಿದ್ದರು.

ಒಂದಷ್ಟು ರೇಗಾಟಗಳೆಲ್ಲವೂ ಮುಗಿದ ನಂತರ ವಡಾರಿಬಾಬು ‘ಒಂದು ಬಟ್ಟಲು ಸೆಗಣೀನೂ ಕೊಡಲ್ಲ, ಅದೆಂಗೆ ಹೆಲಿಪ್ಯಾಡು ಕಟ್ತೀರೋ, ಅದೆಲ್ಲಿ ಹೆಲಿಕಾಪುಟ್ರು ಇಳಿಸ್ತೀರೋ ಇಳುಸ್ಕಳ್ರಿ’ ಅಂತ ವಾಗ್ವಾದಕ್ಕೆ ಪುಲ್‌ಸ್ಟಾಪಿಟ್ಟು ಆರಾಮಾಗಿ ಸಿಗರೇಟು ಸೇದುತ್ತ ಕುಳಿತುಕೊಂಡ. ಅಡಕತ್ತರಿಗೆ ಸಿಕ್ಕಿಹಾಕಿಕೊಂಡ ಸೆಬಾಸ್ಟಿಯನ್; ಕೊನೆಗೆ ತನ್ನ ಗೌರ್ಮೆಂಟು ವರಸೆಗಳು ವಡಾರಿಬಾಬುವಿನ ಮುಂದೆ ಮೂರುಕಾಸಿಗೆ ಬಾಳುವುದಿಲ್ಲವೆಂದು ಅರಿವಾದ ಮೇಲೆ ಬಾಬುವನ್ನು ನೈಸುಮಾಡುವ ಮಾತುಗಳಿಂದ ಮಾತುಕತೆಯನ್ನು ಮತ್ತೆ ಶುರು ಮಾಡಿದನು. ಯಾವುದಕ್ಕೂ ಜಗ್ಗದ ವಡಾರಿಬಾಬು ‘ಇವತ್ತಿಡೀ ಕೇಳಿದ್ರು ನಿಮಗೆ ಸೆಗಣಿ ಹುಟ್ಟಲ್ಲ, ಹೇಳದು ಕೇಳಂಗಿದ್ರೆ ಇಲ್ಲಿರೋ ಅಷ್ಟೂ ಸೆಗಣೀನೂ ಒಂದು ಲಾರಿತಂದು ಎತ್ಕಂಡೋಗಬಹುದು’ ಎಂದು ಶರತ್ತೊಂದನ್ನು ಮುಂದಿಟ್ಟ. ಸೆಬಾಸ್ಟಿಯನ್ ಅಳೆದುತೂಗಿ ಒಪ್ಪಿಕೊಂಡ. ಚಮಡಿಕೆರೆಯಲ್ಲಿ ತಾಸೀಲ್ದಾರ್ ಹಾಕಿಸಿರುವ ಬೋರ್ಡು ತೆಗೆದು ಕೊಜೆಮಣ್ಣು ತುಂಬೋಕೆ ಕುಂಬಾರರಿಗೆ ಬಿಟ್ಟುಕೊಡಬೇಕು, ನೀವೇನು ಮಣ್ಣನ್ನ ಫ್ಯಾಕ್ಟರೀಲಿ ಉತ್ಪಾದನೆ ಮಾಡಿ ತಂದಿಲ್ಲ.. ಏನಂತೀರ ಅಂದ. ಈ ಮಣ್ಣುಸೆಗಣಿ ಎಕ್ಸ್‌ಚೇಂಜ್ ಆಫರಿನ ಪ್ಲಾನು ಹೊಸೆದು ಸೆಬಾಸ್ಟಿಯನ್‌ನನ್ನು ಕುತ್ತಿಗೆಮಟ ಸಿಕ್ಕಿಹಾಕಿಸಿರುವ ವಡಾರಿಬಾಬುವಿನ ಪ್ಲಾನಿಗೆ ದುಕೂನ ಮತ್ತು ಕುಂಬಾರರು ಖುಷಿಯೆದ್ದು ಹೋಗಿದ್ದರು.

ಶಿರಸ್ತೇದಾರ ಯಾರ್ಯಾರಿಗೋ ಫೋನು ಮಾಡಿ ಏನನ್ನೋ ಕನ್ಫರ್ಮು ಮಾಡಿಕೊಂಡು ‘ಸರಿ ಆಗ್ಬೋದು..’ ಅಂದ. ‘ನಂಬದೆಂಗೆ ಬರ್ಕೊಡು’ ಅಂದ ವಡಾರಿಬಾಬು. ಹಂಗಂತ ಬರೆಸಿಕೊಂಡು ಅವನಿಂದ ಸೈನು ತೆಗೆದುಕೊಂಡ ಮೇಲೆಯೇ ಸೆಗಣಿಯನ್ನು ಡಬ್ಬಲ್‌ರೇಟಿಗೆ ಹೆಲಿಪ್ಯಾಡು ನಿರ್ಮಿಸಲು ಮಾರಿ, ಲಾರಿತಂದು ತುಂಬಿಕೊಂಡು ಹೋಗಲು ತಿಳಿಸಿದನು. ಸೆಬಾಸ್ಟಿಯನ್ ತಾಲ್ಲೋಕಾಫೀಸಿನ ಕಡೆಗೆ ಯುದ್ಧಗೆದ್ದ ಮುಖದಲ್ಲಿ ಹೋದ. ಕುಂಬಾರರಿಗೆ ಚಮಡಿಕೆರೆಯ ಗೇಟು ಓಪನ್ ಆದ ಖುಷಿಯಲ್ಲಿ ದುಕೂನ ಮತ್ತು ಕುಂಬಾರರು ಟ್ರಾಕ್ಟರಿ ದೇವ್ರಾಜನನ್ನು ಹುಡುಕಿ ಮಣ್ಣುಕೂಲಿಗಳನ್ನು ಗೊತ್ತುಮಾಡಲು ಹೇಳಬೇಕೆಂದು ಮಾತನಾಡಿಕೊಂಡರು. ವಡಾರಿಬಾಬು ದುಕೂನನ ಕಣ್ಣಿಗೆ ‘ಕಪ್ಪುದೇವರಂತೆ’ ಕಂಡನು. ಇದೆಲ್ಲವೂ ನಡೆದು ರಾಜ್ಯಪಾಲರು ಬೋಕಿಪೇಟೆಗೆ ಬರುವ ದಿನವೂ ಬಂತು. ವಡಾರಿಬಾಬು ಕೊಟ್ಟ ಸೆಗಣಿಯಲ್ಲಿ ಹೆಲಿಪ್ಯಾಡೂ ತಯಾರಾಗಿ ತಾಸೀಲ್ದಾರ, ಶಿರಸ್ತೇದಾರರ ಮುಖವೂ ಅರಳಿಕೊಂಡು ನಿಂತಿತ್ತು. ಎಲ್ಲ ಪ್ರಥಮದರ್ಜೆ ಸರ್ಕಾರಿ ಅಧಿಕಾರಿಗಳೂ ಹೆಲಿಪ್ಯಾಡಿನ ಸುತ್ತ ನೆರೆದಿದ್ದರು. ದುಕೂನ ಮತ್ತು ಹತ್ತಿಪ್ಪತ್ತು ಕುಂಬಾರಜನಗಳು ಹೆಲಿಕಾಪ್ಟರ್ ನೋಡಲು ಹೆಲಿಪ್ಯಾಡ್ ಬಳಿಯಲ್ಲೇ ಇದ್ದರು.

ಅಲ್ಲಿಯತನಕ ವಡಾರಿಬಾಬುವಿನ ಶರತ್ತಿನ ಬಗ್ಗೆ ತಾಸೀಲ್ದಾರ್ ಬಳಿ ಬಾಯಿ ಬಿಡದಿದ್ದ ಶಿರಸ್ತೆದಾರ್ ಸೆಬಾಸ್ಟಿಯನ್ ಇನ್ನು ಹೇಳದಿದ್ದರೆ ಕೆಲಸ ಕೆಟ್ಟು ತಾಶೀಲ್ದಾರನ ಕೈಲಿ ಉಗಿಸಿಕೊಳ್ಳಬೇಕಾಗುತ್ತದೆಂದು ನಡೆದದ್ದೆಲ್ಲವನ್ನೂ ಸಾದ್ಯಂತವಾಗಿ ವಿವರಿಸಿಬಿಟ್ಟು ನಾಗ್ರಾಜನ ಮುಖವನ್ನೇ ನೋಡಿದ. ತಾಸೀಲ್ದಾರ್ ನಾಗರಾಜ ‘ಬೇಕಿರೋದು ಸಿಕ್ಕಾಯ್ತಲ್ಲ.. ಬೋರ್ಡು ಚಮಡೀಕೆರೆಯಲ್ಲೇ ಇರಲಿ, ಅದ್ಯಾವ ಗಂಡುಮಗ ಕೆರೆಗಿಳಿದು ಮಣ್ಣು ತೆಗೀತಾನೋ ನೋಡಣ, ಅದೇನು ಬಾಂಡ್‌ಪೇಪರ್ ಮೇಲೆ ಬರೆದು ಸೈನಾಕಿ ಕೊಟ್ಟಿಲ್ವಲ್ಲ ನೀವು, ಅದು ನನ್ ಸೈನೇ ಅಲ್ಲ ಅಂದುಬಿಡಿ, ಮಿಕ್ಕಿದ್ದು ನಾನು ನೋಡ್ಕೋತೇನೆ’ ಅಂದು ಚೂರೇಚೂರು ನಕ್ಕ. ಸೆಬಾಸ್ಟಿಯನ್‌ಗೆ ಹೋದ ಜೀವ ತೆವಳಿಕೊಂಡು ವಾಪಸ್ಸು ಬಂದಂತಾಯಿತು. ಇವರ ಹಿಂದೆಯೇ ನಿಂತು ಹೆಲಿಕಾಪ್ಟರ್ ಯಾವಾಗ ಬರುತ್ತದೆಂದು ಆಕಾಶ ನೋಡಿಕೊಂಡು ನಿಂತಿದ್ದ ದುಕೂನನ ಕುಂಬಾರಿಕೆ ಕುಲಸ್ಥನಾದ ಓಬಳಪ್ಪನು ಇದಿಷ್ಟೂ ಮಾತುಕತೆಯನ್ನು ಸೋಸಿ ಕಿವಿಗೆ ಹಿಂಡಿಕೊಂಡು ಬಂದವನೇ ಹೆಲಿಕಾಪ್ಟರು ನೋಡಲು ನೆರೆದಿದ್ದ ದುಕೂನ ಮತ್ತು ಇತರರಿಗೆ ‘ತಾಸೀಲ್ದಾರ್ರು ನಮಗೆ ಮಣ್ಣು ಕೊಡಲ್ವಂತೆ. ಕೆಲ್ಸ ಆದ್ಮೇಲೆ ಕೈಯೆತ್ತಿದ್ರಾಯ್ತು ಅಂತ ನಮ್ ನೆತ್ತಿಗೆ ವಂಗೆಎಣ್ಣೆ ತಿಕ್ಕವ್ರೆ ಕಣ್ರಪ್ಪೋ’ ಅಂತ  ವದರಿಬಿಟ್ಟಿದ್ದ.

ಬುಂಡೆ ಹಿಡಿದು ಒಮ್ಮೆಗೇ ಮೇಲೆತ್ತಿ ನೆಲಕ್ಕೆ ತೊಪುಕ್ಕನೆ ಕುಕ್ಕರಿಸಿದಂತಾದ ದುಕೂನ ಮತ್ತು ಕುಂಬಾರರ ಪಿತ್ಥ ನೆತ್ತಿಯನ್ನೂ ದಾಟಿ ಮೇಲೆ ಏರಿಬಿಟ್ಟಿತ್ತು. ಆ ತಕ್ಷಣಕ್ಕೆ ದುಕೂನನ ತಲೆಯಲ್ಲಿ ಏನಿತ್ತೋ ಏನೋ... ಅಕ್ಕಪಕ್ಕ ಇದ್ದವರನ್ನು ದೂಕಿಕೊಂಡು ಜೊತೆಗಿದ್ದವರ ಸಮೇತ ಸೀದ ರಾಜ್ಯಪಾಲರ ಹೆಲಿಕಾಪ್ಟರ್ ಇಳಿಯಬೇಕಿದ್ದ ಸೆಗಣಿಸಾರಿಸಿದ ಹೆಲಿಪ್ಯಾಡ್ ಮಧ್ಯಕ್ಕೆ ಹೋಗಿ ಅಡ್ಡಡ್ಡಕ್ಕೆ ಮಲಗಿಬಿಟ್ಟನು. ಇಡೀ ಹೆಲಿಪ್ಯಾಡಿನ ಮಧ್ಯಭಾಗವನ್ನು ಆವರಿಸಿಕೊಂಡು ಬಾಯಿ ಬಡಿದುಕೊಳ್ಳುತ್ತ ಕೀರಲಾಡುತ್ತಿರುವ ಇವರನ್ನು ನೋಡಿ ಉಳಿದೆಲ್ಲರಿಗೂ ಗರಬಡಿದಂತಾಗಿತ್ತು. ಇಂಥಹದೊಂದು ಬೆಳವಣಿಗೆಯನ್ನು ನಿರೀಕ್ಷಿಸಿಯೇ ಇರದಿದ್ದ ಕೆಲವೇ ಮಂದಿ ಪೊಲೀಸರಿಗೆ ತಲೆಕೆಟ್ಟು ಉಪ್ಪಿಟ್ಟಾದಂತಾಗಿ ಸೀದ ಮಲಗಿದ್ದವರನ್ನು ಎಬ್ಬಿಸಲು ಮುನ್ನುಗ್ಗಿದರು. ಪೊಲೀಸರನ್ನು ಕಂಡೊಡನೆಯೇ ಮಲಗಿದಲ್ಲಿಂದ ಎದ್ದ ದುಕೂನನು; ತೊಟ್ಟಿದ್ದ ಚಡ್ಡಿಯ ಲಾಡಿದಾರವನ್ನು ಸೆಳೆದುಕೊಂಡು ಕುತ್ತಿಗೆಗೆ ಉರುಲು ಬಿಗಿದುಕೊಂಡ. ‘ಪೊಲೀಸರು ಇದ್ದಲ್ಲೇ ಇದ್ರೆ ಸರಿ, ಚಮಡಿಕೆರೆ ಮಣ್ಣು ತೆಗಿಯಕ್ಕೆ ಬಿಡ್ತೀವಿ ಅಂತೇಳಿ ಭಾಷೆಪ್ರಮಾಣ ಮಾಡಿ ಇವಾಗ ಕೊಡಕುಲ್ಲ ಅಂತಾವ್ರೆ.. ಕೊಜೆಮಣ್ಣು ತೆಗಿಯಕ್ಕೆ ಪರ್ಮಿಸನ್ ಕೊಟ್ರೆ ಸರಿ ಅಷ್ಟೆ, ಇಲ್ಲದಿದ್ದರೆ ಮೆಟ್ರೆ ಜೀರುಕತಿನಿ’ ಎಂದು ಲಾಡಿದಾರದಿಂದ ಕುತ್ತಿಗೆ ಬಿಗಿದುಕೊಂಡು ಕೂಗಿಬಿಟ್ಟ.

ಏನಾದರೂ ಹಂಗಾಗಿಬಿಟ್ಟರೆ ರಾಜ್ಯಪಾಲರ ಎದುರೇ ನೇಣಿಗೆ ಶರಣಾದ ಇಂತಿಂತೋನು ಎಂದು ಪೇಪರು ಟೀವಿಯವರು ಹರಿದು ಊರುಬಾಗಲು ಮಾಡುವುದಂತೂ ನಿಶ್ಚಿತ ಎಂದರಿತ ರಾಜ್ಯಪಾಲರ ಭದ್ರತೆಗೆ ಬಂದಿದ್ದ ಜಿಲ್ಲಾ ಎಸ್ಪಿಯು ನುಗ್ಗುತ್ತಿದ್ದ ಪೊಲೀಸರನ್ನು ತಡೆದನು. ಅಷ್ಟೊತ್ತಿಗೆ ರಾಜ್ಯಪಾಲರು ಹೆಲಿಕಾಪ್ಟರಿಂದ ಇಳಿಯುವುದನ್ನು ಶೂಟು ಮಾಡಲು ಬಂದಿದ್ದ ಟೀವಿ-ಪೇಪರಿನ ವರದಿಗಾರರು ಕೆಮೆರಾಮೆನ್ನುಗಳು ಫೋಟೋಗ್ರಫರುಗಳು ದುಕೂನನ್ನು ಇವನ್ಯಾರೋ ‘ಸ್ಥಳೀಯ ಅಂಗವಿಕಲ ಉಗ್ರಗಾಮಿ’ಯಿರಬೇಕೆಂದೆಣಿಸಿ ತಲೆಗೊಂದೊಂದು ಪ್ರಶ್ನೆ ಕೂಗತೊಡಗಿದರು. ತಾಸೀಲ್ದಾರ್ ನಾಗ್ರಾಜನು ಈ ಬೋಕಿಪೇಟೆ ಇವತ್ತೇನೋ ಒಂದು ಆಗಬಾರದ್ದು ಆಯ್ತದೆ ಅಂತ ಕನ್ಫರ್ಮ್ ಆದವನಂತೆ ಸೆಬಾಸ್ಟಿಯನ್‌ನತ್ತ ತಿರುಗಿ ಕೆಟ್ಟಕೊಳಕ ಉಗಿಯತೊಡಗಿದನು. ತಮ್ಮ ಲೀಡರಾಗಿ ಪರಿವರ್ತಿತಗೊಂಡು ಲಾಡಿಯಿಲ್ಲದ ಚಡ್ಡಿ ಉದುರಿಸಿಕೊಂಡು ಒಣಕಲು ತೊಡೆ ತೋರಿಸುತ್ತ ನಿಂತುಬಿಟ್ಟಿದ್ದ ದುಕೂನನ ಧೈರ್ಯಕ್ಕೆ ಹೆಲಿಪ್ಯಾಡಿನಲ್ಲಿ ಮಲಗಿದ್ದ ಕುಂಬಾರರೆಲ್ಲ ಜೈಕಾರ ಹಾಕುತ್ತ ಹುರಿದುಂಬಿಸತೊಡಗಿದ್ದರು.

ಕುತ್ತಿಗೆ ಬಿಗಿದುಕೊಂಡು ಒಮ್ಮೆ ಪೊಲೀಸರತ್ತ ತಿರುಗುತ್ತ, ಮತ್ತೊಮ್ಮೆ ತಾಸೀಲ್ದಾರನತ್ತ ತಿರುಗುತ್ತ ಎರಡೂ ಕಡೆಯ ಮಂದಿಯ ಎದೆಯನ್ನು ಧಸಕ್ಕು ಪುಸಕ್ಕು ಅನ್ನಿಸುತ್ತ ‘ಮಣ್ಣು ಕೊಟ್ರೆ ಸರಿ, ಇಲ್ಲ ನಿಮ್ ಹೆಲಿಕಾಪುಟ್ರು ನಮ್ ಹೆಣದ ಮ್ಯಾಲೆನೇ ಇಳಿಯದು ಬರೆದಿಟ್ಕಳಿ’ ಎಂದು ವಾರ್ನಿಂಗಿನ ಮೇಲೆ ವಾರ್ನಿಂಗು ಬಿಡುತ್ತಿದ್ದ ದುಕೂನನ ಚೀರಾಟದ ನಡುವೆಯೇ ಚಿಗ್ಗುಚಿಗ್ಗುಚಿಗ್ಗು ಅಂತ ಸೌಂಡು ಮಾಡುತ್ತ ರಾಜ್ಯಪಾಲರಿದ್ದ ಹೆಲಿಕಾಪ್ಟರು ಹೆಲಿಪ್ಯಾಡಿನತ್ತ ಬರುತ್ತಿರುವುದನ್ನು ಕಂಡ ಪೊಲೀಸ್ ಎಸ್.ಪಿ; ಅರ್ಜೆಂಟಾಗಿ ಮೂತ್ರ ವಿಸರ್ಜನೆ ಮಾಡುವಷ್ಟು ಗಾಬರಿ ಬಿದ್ದುಹೋದನು. ಇತ್ತ ಹೆಲಿಕಾಪ್ಟರು ಬರುತ್ತಿರುವುದನ್ನು ಮಲಗಿದ್ದಲಿಂದಲೇ ನೋಡಿದ ಓಬಳಪ್ಪ ಅಂಡ್ ಕುಂಬಾರರು ಮಲಗಿದ್ದಲ್ಲಿಂದ ಸಟಕ್ಕನೆದ್ದು ಕುಳಿತು ಹಣೆಗೆ ಕೈಯಿಟ್ಟು ಹೆಲಿಕಾಪ್ಟರನ್ನು ಆನಂದದಿಂದ ನೋಡತೊಡಗಿದರು. ಹೆಲಿಕಾಪ್ಟರ್ ಇಳಿಯಬೇಕಾದ ಹೆಲಿಪ್ಯಾಡಿನೊಳಗೆ ಲ್ಯಾಂಡ್ ಆಗಲು ಬೇಕಿದ್ದ ‘ಹೆಚ್’ ಮಾರ್ಕೇ ಕಾಣದೆ ಹೆಲಿಕಾಪ್ಟರು ಕಕ್ಕಾಬಿಕಿಯಾಗಿತ್ತು. ಜೊತೆಗೆ ಚಡ್ಡಿ ಉದುರಿಸಿಕೊಂಡಿದ್ದ ಗೂನುಬೆನ್ನಿನ ಆಕೃತಿಯೊಂದು ಇತ್ತಲೊಮ್ಮೆ ಅತ್ತಲೊಮ್ಮೆ ಓಡಾಡುತ್ತಿರುವ ದೃಶ್ಯವನ್ನು ಮೇಲಿಂದಲೇ ನೋಡಿದ ಹೆಲಿಕಾಪ್ಟರು ಇಳಿಯೋದೆಲ್ಲಿ ಎಂದು ಆಕಾಶದಲ್ಲಿ ನಿಂತಲ್ಲೇ ರೆಕ್ಕೆ ತಿರುಗಿಸಿಕೊಂಡು ನಿಂತುಬಿಟ್ಟಿತು.

ತಾನು ಅಷ್ಟು ಗಲಾಟೆ ಮಾಡುತ್ತಿದ್ದರೂ ಹೆಲಿಪ್ಯಾಡಿನ ಸುತ್ತ ನೆರೆದಿರುವ ಸಭಿಕರು ತನ್ನನ್ನು ಬಿಟ್ಟು ಹೆಲಿಕಾಪ್ಟರು ನೋಡುತ್ತ ನಿಂತದ್ದನ್ನು ಕಂಡು ರವಷ್ಟು ರಿಲೀಫಾದ ದುಕೂನನು ತನ್ನ ಕಳ್ಳುಬಳ್ಳಿಗಳು ಕುಳಿತಿದ್ದ ಕಡೆಗೆ ಸೆಂಟ್ರಲ್ಲಿ ನಿಲ್ಲಲು ಅವರ ನಡುವೆ ಜಾಗ ಮಾಡಿಕೊಂಡು ನಡೆಯತೊಡಗಿದ್ದನ್ನು ಮೊದಲು ಗಮನಿಸಿದ ಪೊಲೀಸು ಪೇದೆಯೊಬ್ಬ ರಪ್ಪನೆ ನುಗ್ಗಿದವನೇ ದುಕೂನನ್ನು ಮಗುವನ್ನು ಎತ್ತಿಕೊಂಡಂತೆ ಎತ್ತಿಕೊಂಡು ಹೆಲಿಪ್ಯಾಡಿನ ಹೊರಗೆ ಪೊಲೀಸರ ನಡುವಿಗೆ ತಂದುಬಿಟ್ಟನು. ತಮ್ಮ ಲೀಡರಿಗಾದ ಗತಿಯನ್ನು ಕಂಡು ಗೊಂದಲಕ್ಕೊಳಗಾದ ಓಬಳಪ್ಪ ಮತ್ತು ಉಳಿದ ಕುಂಬಾರರು ಕಣ್ಣಿಗೆ ಕಂಡ ದಿಕ್ಕಿನತ್ತ ದಿಕ್ಕಾಪಾಲಾಗಿ ಓಡಿಹೋದರು. ಅಲ್ಲಿಗೆ ದುಕೂನನ ಸುಸೈಡ್ ಅಟೆಂಪ್ಟು ಕೊಜೆಮಣ್ಣಿನ ಹೋರಾಟವು ಮಕಾಡೆಯಾಗಿ ಕವುಚಿಕೊಂಡು ಅಸುನೀಗಿತ್ತು. ಆಮೇಲೆ ರಾಜ್ಯಪಾಲರು ಹೆಲಿಪ್ಯಾಡಿನಲ್ಲಿ ಇಳಿದದ್ದು, ದೇವಸ್ಥಾನದ ಉದ್ಘಾಟನೆಯಾಗಿದ್ದು, ವಾಪಸ್ಸು ಹೋಗಿದ್ದು ಎಲ್ಲವೂ ಟಕಟಕನೆ ನಡೆದುಹೋಯಿತು. ದುಕೂನನ ಗೂನುಬೆನ್ನು, ಅಳುಮುಖವು ಪೊಲೀಸ್ ಎಸ್.ಪಿಯ ಕರುಳಿನ ಜೊತೆಗೆ ಮಾತನಾಡಿತೋ ಏನೋ..

ಕಾನೂನುಕ್ರಮಗಳನ್ನು ಅಡ್ಡದಾರಿ ಹಿಡಿಸಿದ ಎಸ್.ಪಿ ಅವನ ಜೀಪಿನಲ್ಲೇ ದುಕೂನನನ್ನು ತಟ್ಟಿಮನೆಯವರೆಗೆ ಬಿಟ್ಟು ರಾಜ್ಯಪಾಲರ ಭದ್ರತಾಡ್ಯೂಟಿಗೆ ಅವನ ಪಾಡಿಗವನು ಹೋದನು. ಆವತ್ತು ರಾತ್ರಿಪೂರ ಒಂದೂ ಮಾತನಾಡದೆ ಎದ್ದೇ ಕುಳಿತಿದ್ದ ದುಕೂನನ ಬಳಿ ಖಾಲಿತಟ್ಟೆಯೊಡನೆ ಕುಂತ ಅವನವ್ವ ಅವನ ಭುಜ ಅಲುಗಿಸುವುದು, ತಟ್ಟೆಯನ್ನು ನೆಲಕ್ಕೆ ಬಡಿಯುವುದು ಮಾಡುತ್ತ ಇತ್ತು. ಬೆಳಗಿನವರೆಗೂ ಇದು ನಡೆಯುತ್ತಲೇ ಇತ್ತು. ಬೆಳಗ್ಗೆ ವಡಾರಿಬಾಬುವಿನೊಡನೆ ಟೈಪಿಸ್ಟ್ ಬಂಡಪ್ಪ ದುಕೂನನ ಮನೆ ಹುಡುಕುತ್ತ ಬಂದವನು ಮನೆಯೊಳಗೆ ನಡೆಯುತ್ತಿದ್ದುದನ್ನು ನೋಡುತ್ತ ಏನೂ ಮಾತು ಹೊರಡದೆ ಹಾಗೆಯೇ ನಿಂತುಬಿಟ್ಟ. ಬಾಬುವಿನ ಕೈಯಲ್ಲಿದ್ದ ಲೋಕಲ್ ಪೇಪರೊಂದರಲ್ಲಿ ಕುತ್ತಿಗೆಗೆ ಲಾಡಿದಾರ ಬಿಗಿದುಕೊಂಡು ನಾಲಿಗೆ ಹೊರಗೆ ಚಾಚಿದ್ದ ದುಕೂನನ ಫೋಟೋ ಪ್ರಿಂಟಾಗಿತ್ತು. ಫೋಟೋ ಕೆಳಗೆ– ‘ಚಿತ್ರದಲ್ಲಿರುವವರು ದುಕೂನ’ ಅನ್ನೋ ಸಾಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT