ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿಯೆಂಬುದು ಬೇಕು ‘ತಂದುರಸ್ತಿ’ಯ ಬದುಕಿಗೆ

ಸಂಕ್ರಾಂತಿ ಸಂಭ್ರಮ 2016 ಮೆಚ್ಚುಗೆ ಪಡೆದ ಪ್ರಬಂಧ
Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಸುಮಾರು ಐದು ವರ್ಷಗಳ ಹಿಂದೆ ಅನಿಸುತ್ತೆ, ಬಹುದಿನಗಳಿಂದ ಬಳಸುತ್ತಿದ್ದ ನನ್ನ ಮೆಚ್ಚಿನ ಮಿಕ್ಸಿಯ ಗಾಜಿನ ಜಾಡಿ ಬಿದ್ದು ಫಳೀರೆಂದು ಸೀಳಿ ಪ್ರಾಣ ಬಿಟ್ಟಿತು. ಒಳ್ಳೆ ಗಟ್ಟಿಮುಟ್ಟಿನ ಮೋಟಾರು. ಬರೀ ಪಾತ್ರೆ ಕೊಂಡರೂ ಆದೀತೆಂದು ಎಷ್ಟು ಹುಡುಕಿದರೂ ಕೊನೆಗೆ, ರೊಕ್ಕದ ಲೆಕ್ಕಕ್ಕೆ ಬಂದರೆ ಹೊಸ ಮಿಕ್ಸಿ ಕೊಳ್ಳುವುದು ಪಾತ್ರೆಯನ್ನಷ್ಟೇ ಕೊಳ್ಳುವುದಕ್ಕಿಂತ ಮೇಲೆಂದು ತೀರ್ಮಾನಿಸಿದ್ದಾಯಿತು.  ಮೊನ್ನೆ ಆ ಜಾಡಿಯೂ ‘ಬೈ ಬೈ ಬೇಬಿ’ ಎನ್ನುತ್ತಾ ಬಾಯಿ ಬಡಕೊಂಡು ಬಿದ್ದೋಯ್ತು.

ಈ ಬಾರಿ ಎಲ್ಲ ಗುಡಿಸಿ ಎತ್ತಿ ಕಸಕ್ಕೆ ಹಾಕಿ ಅಯ್ಯೋ ಹೊಗ್ಲಿಬಿಡು ಎಂದು ನನಗೆ ನಾನು ಹೇಳಿಕೊಳ್ಳುತ್ತಾ ಹೊಸ ಮಿಕ್ಸಿ ತಂದೆ. ಎಲ್ಲವಕ್ಕೂ ಈ ರಿಪೇರಿ ಎಂಬುದಿಲ್ಲದ ಜಗತ್ತು ನನಗೀಗ ಒಗ್ಗಿ ಹೋಗಿದೆ. ಹೀಗೆ ನನ್ನ ಕೈಯಿಂದ ಅಷ್ಟಷ್ಟು ದಿವಸಕ್ಕೆ ಒಂದಷ್ಟು ಪಾತ್ರೆಗಳು ಭುವಿ ಸೇರಿ ಬರಬಾದಾಗುತ್ತವೆ.  ಪಾತ್ರೆಯ ವಿಷಯಕ್ಕೆ ಬಂದರೆ, ಅಮ್ಮನ ಮಿಕ್ಸಿಯ ಸ್ಟೀಲ್ ಪಾತ್ರೆ ಮಿಕ್ಸಿ ಸತ್ತ ಮೇಲೂ ಚಂದ ಹೊಳೆಯುತ್ತಿತ್ತು. ಪೀಯುಸಿಯಲ್ಲಿನ ಕೆಲ ದಿನ ಅಡುಗೆಮನೆಯಲ್ಲಿ ಗಸ್ತು ಹೊಡೆದದ್ದು ಬಿಟ್ಟರೆ ಯಾವ ದಿನಸಿ ವಸ್ತು ಹೇಗಿರುತ್ತದೆಂದು ಕೂಡ ನನಗೆ ತಿಳಿದಿರಲಿಲ್ಲ.

ಅಪರೂಪಕ್ಕೆ ಅಮ್ಮ ನನಗೆ ಚಾ ಮಾಡೇ ಅಂದಾಗಲೂ ಒಂದು ಕಪ್ಪು ಖಂಡಿತ ಮಸಣದ ಹಾದಿ ಹಿಡಿಯುತ್ತಿತ್ತು. ಮದುವೆಯಾದ ಹೊಸತರಲ್ಲಿ ಹುಡುಗಿಯರ ತಲೆಯಲ್ಲಿ ಅತ್ತೆ ಮನೆಯ ಬಗ್ಗೆ ಏನೆಲ್ಲಾ ಕಲ್ಪನೆ, ಭಯ ರೋಮಾಂಚನಗಳು ಗುಳುಗುಳಿಸುತ್ತವೆ. ನನ್ನ ತಲೆಯಲ್ಲಿ ಮಾತ್ರ ನಾನು ಅಲ್ಲಿ ಕಾಲಿಟ್ಟ ಹೊಸದರಲ್ಲಿ,ಇನ್ನೊಂದು ವಾರದಲ್ಲಿ ಏನೇನು ಒಡೆಯುತ್ತದೋ, ಇನ್ನು ನನ್ನ ಕೈಯಲ್ಲಿ  ಯಾವ ಯಾವ ಪಾತ್ರೆಗೆ ಮೋಕ್ಷ ಸಿಗುವುದೋ ಎಂಬ ಚಿಂತೆ.  ಅಂತಾದ್ದರಲ್ಲಿ ನಾನು ಅಕ್ಕಿತುಂಬಿದ ಚೊಂಬನ್ನು ಹೊಸ್ತಿಲಲ್ಲಿ ಒದೆದಕ್ಕಿಂತ ಸುಮಧುರವಾಗಿ ಮರುದಿನ ಬೆಳಿಗ್ಗೆ ಅತ್ತೆ ಅಡಿಗೆಮನೆಯಲ್ಲಿ  ಪಾತ್ರಾನಾದ ಮೊಳಗಿಸಿದರು.

ನನಗಿಂತ ಸಶಬ್ದವಾಗಿ ಪಾತ್ರೆ ಬೀಳಿಸುವ ಜೀವಿಯನ್ನೊಂದನ್ನು ನನಗೆ ಅತ್ತೆಯನ್ನಾಗಿ ದಯಪಾಲಿಸಿದೆಯಲ್ಲಾ ದೇವರೇ, ಕರುಣಾಮಯಿ ನೀನು ಎಂದು ಇಷ್ಟಗಲ ನಕ್ಕಿದ್ದೆ. ಕೆಲದಿನಗಳ ಮೇಲೆ ನಾನು ಅನ್ನ ಮಾಡಲು ಹೊರಟಾಗ ಅತ್ತೆ ಪಾತ್ರೆಯೊಂದನ್ನು ಕೈಗಿತ್ತರು. ಚಿಕ್ಕದಾಗಲ್ವಾ ಈಗ ನಾನೊಬ್ಬಳು ಹೆಚ್ಚಿಗೆ ಇದ್ದೀನಿ ಎಂದೆ. ನೀ ಮಾಡು ಇದರಲ್ಲಿ ಸರಿಯಾಗುತ್ತೆ ಎಂದರು. ಅದೀಗ ಮುಕ್ಕುಮುರುಡು ನಜ್ಜುಗುಜ್ಜಾದರೂ ಅತ್ತೆಯವರದೊಂದುಅದೇ ಅನ್ನದ ಪಾತ್ರೆಯಿದೆ. ಅದನ್ನು ನಾನು ಅಕ್ಷಯ ಪಾತ್ರೆಯೆಂದೆ ಕರೆಯೋದು.

ಯಾಕೆಂದರೆ ಇಬ್ಬರಿಗೆ  ಅನ್ನ ಮಾಡಿದರೂ ಇಪ್ಪತ್ತು ಜನರಿಗೆ ಅನ್ನ ಮಾಡಿದರೂ ಅದೇ ಪಾತ್ರೆ ಎಲ್ಲರ ಹೊಟ್ಟೆ ತುಂಬಿಸುತ್ತೆ. ಅದು ಹೇಗೆ ಆ ಚಿಕ್ಕ ಪಾತ್ರೆ ಅಷ್ಟೊಂದು ಅನ್ನ ಮಾಡುತ್ತೆ ಇನ್ನೂ ನನಗೆ ಅರ್ಥವಾಗಿಲ್ಲ. ಆ ಅನ್ನದ ಪಾತ್ರೆ ಬಹುಶ ಶತಮಾನಗಳಿಂದ ಅತ್ತೆ ಮನೆಯ ಭಂಡಾರದಲ್ಲಿದೆ. ಪಾತ್ರೆಯ ಮೇಲಿನ ಪ್ರೀತಿಗೋ, ಅತ್ತೆಯ ಮೇಲಿನ ಅಕ್ಕರೆಗೋ ಏನೋ ಅಕ್ಕಿಕಾಳು ಉಸಿರುಗಟ್ಟಿಸ್ಕೊಂಡಾದರೂ ಅರಳುತ್ತೆ ಅದರಲ್ಲಿ.

ಮೆಚ್ಚಿನ ವಸ್ತುವೊಂದು ಹಳತಾದಮೆಲೂ ಹಸಿರಾಗಿ ಉಸಿರಾಡುವುದು ಹೊಸತೇನಲ್ಲ ನನಗೆ. ಪಪ್ಪನ ಹಳೆ ರೇಡಿಯೋ, ಟೆಲಿಫೋನು, ಎಲ್ಲ ವೈರು ಕಿತ್ತು ಹೊರಬಂದರೂ ಹೊತ್ತಿಗೆ ಸರಿಯಾಗಿ ಹಾಡುತ್ತಿತ್ತು.ಇನ್ನು ಅಮ್ಮನ ಗ್ರೈಂಡರು, ಅದಕ್ಕೆ ಮಾಡಿರುವ ಉಪಚಾರ  ಬಹುಷಃ ಮದರ್ ತೆರೇಸಾ ನಡೆಸಿದ ಸೇವೆಗೆ ಸಮವೇನೋ. ಹೊಸದರಲ್ಲಿ ಹುಯ್ ಎಂದು ಹೊಯ್ದಾಡಿ ರುಬ್ಬಿದ ಕಲ್ಲುಗುಂಡಮ್ಮ ದಿನಗಳೆದಂತೆ ಅಷ್ಟಷ್ಟು ದಿವಸಕ್ಕೆ ಕೆಟ್ಟು ಕೂರುತ್ತಿತ್ತು. ಆ ವಿನಾಯಕ ಎಲೆಕ್ಟ್ರಿಕಲ್ಸ್- ನವನು ಬಂದು ರಿಪೇರಿ ಮಾಡಿ ಹೋಗುತ್ತಿದ್ದ. ಆಮೇಲೆ ನಮಗೆಲ್ಲ ವಿನಾಯಕನೆ ಗತಿ.  ಗ್ರೈಂಡರ್ನ ಆರಂಭಿಸಿದ ತಕ್ಷಣ ಮನೆಯ ಗೋಡೆ ಗೋಡೆಯೆಲ್ಲ ಜುಮ್ ಎಂದು ಶಾಕ್ ಹೊಡೆಯುತ್ತಿತ್ತು.  ಮತ್ತೆ ಬುಲಾವ್ ಅವನಿಗೆ.

ಆ ನಂತರ ಗೋಡೆಯ ಬದಲು ನಲ್ಲಿಯ ನೀರು, ಫ್ಯಾನಿನ ಸ್ವಿಚ್ಚು ಇತ್ಯಾದಿ ನಿರ್ಜೀವ ವಸ್ತುಗಳಿಗೆಲ್ಲ ಸಂಜೀವಿನಿ ಸಿಕ್ಕುತ್ತಿತ್ತು. ಇಷ್ಟಾದರೂ ಅಮ್ಮ ಆ ಗ್ರೈಂಡರ್ ಬದಲಿಸಲೊಲ್ಲಳು.  ಅಯ್ಯೋ ಹೊಸ ಗ್ರೈಂಡರ್ ಎಲ್ಲ ಇಷ್ಟು ಚೊಲೋ ಬೀಸೋದಿಲ್ಲ. ಚಟ್ನಿ ನುಣ್ಣಗಾಗೋದಿಲ್ಲ ಎಂಬೆಲ್ಲ ಖಾಯಂ ಇಂಗಿತಗಳು. ಕೊನೆಗೆ ನಮಗೆಲ್ಲ ಎಷ್ಟು ರೂಡಿಯಾಯಿತೆಂದರೆ.  ಎಲ್ಲೋ ಏನೋ ಸಣ್ಣಗೆ ಶಾಕ್ ಹೊಡೆದರೆ ಅಮ್ಮ, ಗ್ರೈಂಡರ್ ಆನ್ ಇದೆಯೇನೆ? ಎಂದು ಕೂಗುತ್ತಿದ್ದೆವು. ಇಲ್ಲವೋ, ಅಮ್ಮನೇ “ದೋಸೆಗೆ ರುಬ್ಬುತ್ತಿದ್ದೇನೆ, ಇನ್ನು ೧ ಗಂಟೆ ಯಾರೂ ನಲ್ಲಿ ತಿರುಗಿಸಬೇಡಿ” ಎನ್ನುತ್ತಿದ್ದರು.|

ಒಟ್ಟಿನಲ್ಲಿ ನಮ್ಮ ಪ್ರೀತಿಯ ಒಂದು ವಸ್ತು ಅದು ಹೇಗಿದ್ದರೂ ನಮ್ಮದು, ಉಪಯೋಗಿಸಲು ಬಂದರಾಯಿತು. ಹಾಳಾದರೆ ಅದರಅಂಗಾಂಗಗಳೆಲ್ಲ ಕಳಚಿಬೀಳುವವರೆಗೂ ಅದನ್ನು ರಿಪೇರಿ ಮಾಡಿಸಬೇಕು ಎನ್ನುವ ಒಂದು ತತ್ವದಲ್ಲಿ ನಾವೆಲ್ಲ ಬೆಳೆದು ಬಂದ ಕಾಲವದು.ತೀರ ಹಿಂದಿನದಲ್ಲ, ಒಂದು ಹದಿನೈದಿಪ್ಪತ್ತು ವರುಷಗಳದ್ದು ಅಷ್ಟೇ.

ಹಾಗೆಂದು ಪಪ್ಪ ಸದಾ ಹಳತನ್ನೇ ಬಳಸುತ್ತಿದ್ದರೆಂದಲ್ಲ. ಊರಿಗೊಂದು ಹೊಸ ವಸ್ತು ಬಂದಿದೆ ಎಂದಾದಲ್ಲಿ ಅಂಗಡಿಯವರೇ ಸ್ವತಹ ಫೋನಾಯಿಸಿ ಪಪ್ಪನಿಗೆ ತಿಳಿಸುತ್ತಿದ್ದರು. ತಿಂಗಳಿಗೊಮ್ಮೆ ಹೊಸತೇನಾದರೂ ಖಂಡಿತ ಅಂಗಡಿ ಮೆಟ್ಟಿಲಿಳಿದು ನಮ್ಮನೆ ಮೆಟ್ಟಿಲೇರುತ್ತಿತ್ತು. ಅವೆಲ್ಲವನ್ನೂ ಮುದ್ದಿಸಿ ಸ್ವಂತವಾಗಿಸಿಕೊಂಡ ಮೇಲೆ ಮತ್ತೆ ಮತ್ತೆ ರಿಪೇರಿ ಕೂಡ ತಾವೇ ಮಾಡುತ್ತಿದ್ದರು.ಒಂದು ರೀತಿಯಲ್ಲಿ ಈ ರಿಪೇರಿ ಎನ್ನುದೊಂದು ಬದುಕುವ ರೀತಿ. ಇದ್ದುದರಲ್ಲಿ ಹೊಸತನ್ನು ಹುಡುಕುವ ರೀತಿ, ಹೊಸತಾಗಿಸುವ ರೀತಿ. ಹಳೆಯದರ ಬದಲು ಹೊಸತನ್ನು ತಂದು ಬಿಟ್ಟರೆ ಎಲ್ಲ ಬದಲಾಗುವುದು, ನಿಜ, ಆದರೆ ಅದರೊಂದಿಗಿನ ಒಡನಾಟ, ನೆನಪನ್ನೂ ಸೇರಿ. 

ದುಡ್ಡೊಂದಿದ್ದರೆ ಹಾಳಾಗಿರುವುದನ್ನು ಎಸೆದು ಹೊಸತೊಂದನ್ನು ತಂದು ಬಿಡಬಹುದು. ಆದರೆ ಹಳೆಯ ವಸ್ತುವೊಂದನ್ನು ರಕ್ಷಿಸುವ ಕಾರ್ಯ ತಾಳ್ಮೆಯ ಬೇಡುವ ಕೆಲಸ, ಮನೆಯಾದರೇನು, ಮನುಷ್ಯರಾದರೇನು. ಬದುಕಲ್ಲಿ ಈ ರಿಪೇರಿ ಕೆಲಸ ಬಹಳಷ್ಟನ್ನು ಕಲಿಸುತ್ತೆ. ಹೊಸತನ್ನು ಕಂಡುಹಿಡಿಯುವ ಅನ್ವೇಷಣಾ ಮನೋಭಾವ ಹೇಗೆ ಮುಖ್ಯವೋ, ಬದುಕಿನಲ್ಲಿ ಜೊತೆಯಾಗಿ ಬಂದ ಬಂಧವೊಂದು ಹರಿದುಕೊಂಡರೆ ಆ ನಂಟನ್ನು ಬಿಡದೇ ಹೊಲಿಯುವುದು  ಅಷ್ಟೇ ಮುಖ್ಯ.

ಮುಂಚೆ ಹೊಸತನ್ನು ಕೊಳ್ಳುವುದೊಂದು ವೈಯಕ್ತಿಕ ಆಯ್ಕೆಯಾಗಿತ್ತು. ಈಗ ಇದು ಅನಿವಾರ್ಯ.  ಈ ಅನಿವಾರ್ಯತೆಯೇ ಇಂದಿನ ಬಹುತೇಕ ಹೊಟ್ಟೆಬಾಕ ಮನುಕುಲವನ್ನು ವೇಗವಾಗಿ ಸಂವೇದನಾರಹಿತ ಪೀಳಿಗೆಯಾಗಿ ನಿರ್ಮಿಸುತ್ತಿದೆ. ಹೊಸ ತಲೆಮಾರಿನ ಮಕ್ಕಳಿಗೆ ಈ ತನ್ನದೊಂದು ಸ್ವಂತದ್ದೇ ಆದ ವಸ್ತುವೊಂದು ಇರಬೇಕೆಂಬ ಬಯಕೆಯೇ ಕಡಿಮೆಯಾಗುತ್ತಿದೆಯಂತೆ. ಹಿಂದೆಲ್ಲ ವಸ್ತುವೊಂದನ್ನು ಕೊಂಡರೆ ಅದೊಂದು ಪ್ರತಿಷ್ಠೆಯ ಸಂಕೇತವೋ, ಪ್ರೀತಿಯ ಉಡುಗೊರೆಯೂ, ಅಪರೂಪದ ಆಟಿಗೆಯೋ, ನಿತ್ಯಬಳಕೆಯ ಉಪಯುಕ್ತ ಆಪದ್ಬಾಂಧವನೋ ಹೀಗೆ ಮಹತ್ವದ್ದೊಂದು ಪಾತ್ರ ವಹಿಸುತ್ತಿತ್ತು.

ದಿನಕ್ಕೊಂದು ಹಸತು ಬರುವ, ಹಳತು ಬೋರ್ ಆಗಿ ಮೂಲೆ ಸೇರುವ  ಇಂದಿನ ಯುಗದಲ್ಲಿ ಒಂದು ನಿರ್ಜೀವ ವಸ್ತು, ಜೀವನದ ಸಜೀವ ಬಡಿತವಾಗುವ ಸಂಬಂಧ ಬೆಳೆಯುವುದಾದರೂ ಹೇಗೆ? ಇಂದು ಮೆಚ್ಚಿನ ವಸ್ತುವೊಂದು ಬಿದ್ದು ಒಡೆದರೆ, ಮುರಿದರೆ, ಅದನ್ನು ರಿಪೇರಿ ಮಾಡಿಸಬೇಕೆಂದರೂ ಮಾಡಲು ಕೂಡ ಬರದಂತಹ ಒಂದು ಕೊಳ್ಳುಬಾಕ ಮಾರುಕಟ್ಟೆ ಸಂಸ್ಕೃತಿಯ ಹಿನ್ನೆಲೆಯಲ್ಲಿ, ಸಮಾಜದಲ್ಲಿ ನಮ್ಮ ಮಕ್ಕಳು ಬೆಳೆಯುತ್ತಿರುವಾಗ, ನಿತ್ಯ ಹಳತಾಗುವ ಬದುಕಿಗೆ ಯಾವ ತತ್ವ ಕಲಿಸುವುದು? ಪುಟ್ಟ ಆಟಿಗೆ ಮುರಿದರೂ ಕೂಡಿಸಲು ಬರದ ಮೇಲೆ ಮುರಿದ ಸಂಬಂಧಗಳನ್ನೂ ಕೂಡ ರಿಪೇರಿ ಮಾಡಲು ಸಾಧ್ಯ, ಒಡೆದ ಮನಸ್ಸಿಗೆ ಕೂಡ ತೇಪೆ ಹಚ್ಚಲು ಸಾಧ್ಯ ಎಂದರೆ ಅರ್ಥವಾದರೂ ಅಗಬಲ್ಲುದೆ?

ಇನ್ನೊಂದು ಅಂಥದ್ದೇ ತಂದರಾಯಿತು ಬಿಡು ಎನ್ನುವಷ್ಟು ಸುಲಭವೇ ಜೀವನದ ಮೂಲನೋಟ??  ಬದುಕಿನ ಎಲ್ಲ ನಂಟುಗಳಿಗೂ ಅಂಟಿಕೊಂಡು ಗಂಟಾಗದಂತೆ ಮೋಹಿಸುವ ಬಗೆ ಬರದಿದ್ದರೆ ಬದುಕು ಆಪ್ತವಾಗುವುದಾದರೂ ಹೇಗೆ? ಕಳಕೊಂಡಾಗ ಸಂಕಟವೇ ಆಗದಿದ್ದಲ್ಲಿ, ಅದನ್ನು ಹಿಡಿದಿಟ್ಟುಕೊಳ್ಳುವ ಬಗೆಯೇ ತಿಳಿಯದಿದ್ದಲ್ಲಿ,   ಮುಂದೊಂದು ದಿನ ಏನನ್ನು ಕಳಕೊಂಡರೂ ನಿರ್ಲಿಪ್ತವಾಗಿಬಿಡುವುದೇ ಮನ? ಬದುಕುವ ಹುಮ್ಮಸ್ಸಿಗೆ ಸದಾ ಹೊಸತನ್ನು ತಂದು ತುಂಬುವುದೇ ರೂಡಿಯಾಗಿಬಿಟ್ಟಲ್ಲಿ ಹಳತಾದ ಅನುಬಂಧಗಳ ಹಂಗಿದ್ದೀತೆ?

ಹೊಸತೊಂದು ಹಳತಾಗುವ ಹೊತ್ತಲ್ಲಿ ಅದರ ಪುನರುಜ್ಜೀವನವೂ ಆಪ್ತ ಎನಿಸುವ ಕ್ಷಣ ಕೈಗೆಟುಕದೆ ಹೋಗಬಹುದೇ? ಪ್ರಾಪಂಚಿಕ  ವಸ್ತುಗಳ ವಾರಸುದಾರಿಕೆಯ ಪ್ರೇಮವಿಲ್ಲದ ಮಾತ್ರಕ್ಕೆಭಾವನಾತ್ಮಕ ಸಂಬಂಧಗಳ ಮೋಹಪಾಶಗಳ ಬೆಲೆಯಿರದೆಂಬ ವಾದವಲ್ಲ ಇದು. ಆದರೆ ಚಿಕ್ಕಂದಿನಿಂದಲೂ “ದುರಸ್ತಿ” ಎಂಬುದನ್ನು ಕಂಡೇ ಇಲ್ಲದ ಕಣ್ಣಿಗೆ ಹಳತಾದ ಹೆಣಿಗೆಯನ್ನು ಹೊಸದಾಗಿಸುವ ವ್ಯವಧಾನವಾದರೂ ಎಲ್ಲಿಂದ ಬಂದೀತು? ದುರಸ್ತಿ ಎಂಬುದು ಬೇಕು ತಂದುರಸ್ತಿಯ ಬದುಕಿಗೆ.

ಹಾಗಿದ್ದರೆ  ಬರೀ ತೇಪೆ ಹಾಕಿಟ್ಟುಕೊಂಡು ಹೊದ್ದುಕೊಳ್ಳುವ ದುಪ್ಪಟಿಯಾಗಿಬಿಡಬೇಕೆ ಜೀವನ? ಖಂಡಿತ ಅಲ್ಲ. ನಟ್ಟುಬೋಲ್ಟು ಹೋದವುಗಳನ್ನು ನಾವು ಮುರಿದದ್ದೆಂದು ಭಾವಿಸಿ ಎಸೆಯುವ ಧಾವಂತದ ಪೀಳಿಗೆಯಾಗಿಬಿಡಬಾರದೆಂಬ ಕಳಕಳಿಯಷ್ಟೇ.  ಬಿದ್ದರೆ ಚೂರುಚೂರಾಗಿಬಿಡುವ ಮಿಕ್ಸಿಯ ಜಾರಲ್ಲ ನಮ್ಮ ಮನಸ್ಸು. ಚಿಕ್ಕಪುಟ್ಟ ನೋವುಗಳನು ಬಹುದೊಡ್ಡ ಪೆಟ್ಟುಗಳೆಂದು ಬಗೆದು ಕೂರುವ  ಸೂಕ್ಷ್ಮ ಮನಸ್ಸಿನ  ಗಾಜಿನ ಗೊಂಬೆಗಳನ್ನು ನಾವು ತಯಾರಿಸಿಬಿಡುವುದು ಬೇಡ. ತಂತಿ ಮುರಿದಿದೆಯೆಂದು ವೀಣೆಯನೆಸೆಯುವ ಹುಚ್ಚುತನ ಬೇಡ.

ಹಾಗೆಂದು ಕ್ಷಣ ಕ್ಷಣವೂ ತೇಪೆ ಹಾಕಿ ಹೊಲಿಯುವುದೇ  ಒಲವಾಗಿಬಿಟ್ಟರೆ  ಮನೆಯೆಲ್ಲ ಶಾಕ್ ಹೊಡೆಯುವ ಅಮ್ಮನ ಗ್ರೈಂಡರ್ ಆದೀತು ಜೀವನ. ಎಲ್ಲಿದೆ ಈ ಇಡುವ, ಬಿಡುವ ನಡುವಿನ ತಕ್ಕಡಿಯ ಮೊನೆ? ಆ ಸಮತೋಲನವನ್ನು ಹುಡುಕುವ ಕನಿಷ್ಟ ಆಸಕ್ತಿಯಾದರೂ ಇದ್ದಲ್ಲಿ ಒಲವಿನ ತಕ್ಕಡಿ ಬದುಕ ತೂಗೀತು.

ತೀರ್ಪುಗಾರರ ಮಾತು : 
ದುರಸ್ತಿಯೆಂಬುದು ಬೇಕು ತಂದುರಸ್ತಿಯ ಬದುಕಿಗೆ’ ಬಹಳ ಒಳ್ಳೆಯ ಶೀರ್ಷಿಕೆ.  ಹಳೆಯದಾದ ವಸ್ತುಗಳನ್ನು ಸಾಧ್ಯವಾದಷ್ಟು ಬದುಕಿನಲ್ಲಿ ಉಪಯೋಗಿಸಬೇಕೆನ್ನುವ ಮಾಗಿದ ಜೀವನಾನುಭವವು ಇದರಲ್ಲಿದೆ. 

ಹಳೆಯ ವಸ್ತು, ಹೊಸ ವಸ್ತುಗಳ ಹೊಂದಾಣಿಕೆ, ಬೇಡಿಕೆಗಳ ಬಗೆಗಿನ ಗಟ್ಟಿಯಾದ ಜಿಜ್ಞಾಸೆ ಈ ಪ್ರಬಂಧದಲ್ಲಿದೆ.  ಬದುಕಿನ ಪ್ರಬುದ್ಧವಾದ ತಿಳುವಳಿಕೆಯ ಪುಟ್ಟಪುಟ್ಟ ಘಟನೆಗಳ ನಿರೂಪಣೆಗಳೂ ಇಲ್ಲಿವೆ. 

ತರ್ಕದ (Dialectical) ಪ್ರಬಂಧಗಳು ಲೋಹದ ಕವಚ ಧರಿಸಿ ಶಸ್ತ್ರಾಭ್ಯಾಸಕ್ಕೆ ತೊಡಗಿದಂತಿರುತ್ತವೆ. ಅದು ಒಳ್ಳೆಯ ಸಾಹಸವೂ ಹೌದು!  ಹಾಗು ಅದು ಒಂದು ಮಿತಿಯೂ ಕೂಡ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT