ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ಗದ ದಸರಾ ನೆನೆಯುತ್ತಾ...

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದಸರಾ ಎಂದಾಕ್ಷಣ ಮೈಸೂರಿನೊಂದಿಗೆ ಚಿತ್ರದುರ್ಗದ ದಸರಾ ವೈಭವವೂ ಕಣ್ಣ ಮುಂದೆ ನಿಲ್ಲುತ್ತದೆ. ಅಷ್ಟೇ ಸಂಭ್ರಮ, ಸಡಗರದಿಂದ ಚಿತ್ರದುರ್ಗದಲ್ಲೂ ದಸರಾ ಹಬ್ಬ ಮೇಳೈಸುತ್ತಿದ್ದ ಕಾಲದ ನೆನಪು ಮರುಕಳಿಸುತ್ತದೆ. ಹಬ್ಬದ ಆಚರಣೆ ಈಗ ವಿಜೃಂಭಣೆಯಿಂದ ನಡೆದರೂ ರಾಜ ಮಹಾರಾಜರ ಕಾಲದಲ್ಲಿನ ದಸರಾ ಗಮ್ಮತ್ತೇ ಬೇರೆ.

ಮಲ್ಲಯುದ್ಧ, ಖಡ್ಗಕಾಳಗ, ಭರ್ಜಿಕಾಳಗ, ಕುದುರೆಸವಾರಿ ಈಜು ಪಂದ್ಯ, ದುರ್ಗಮ ಬೆಟ್ಟಗುಡ್ಡಗಳಲ್ಲಿ ಓಟ, ಮೆಟ್ಟಿಂಗಾಲಲ್ಲಿ ತುಪ್ಪದಕೊಣಾರೋಹಣ, ಏಕನಾಥಿಜ್ಯೋತಿ ಬೆಳಗುವ ಸ್ಪರ್ಧೆ ಇತ್ಯಾದಿ ಆಟೋಟ ಪೈಪೋಟಿಗಳ ಸುಗ್ಗಿ ಅದು. ಸ್ಪರ್ಧಾ ವಿಜೇತರಿಗೆ ದೊರೆಗಳು ಉದಾರವಾಗಿ ಹೊನ್ನು, ಕೇಳಿದೊಡೆ ಭೂಮಿಕಾಣಿಕೆ ನೀಡಿ ಉತ್ತೇಜಿಸುತ್ತಿದ್ದುದುಂಟು.

ದೇವಾಲಯಗಳಿಂದ ಹೊಮ್ಮುವ ಗಂಟೆ, ಢಮರು, ಢಕ್ಕೆ ತಾಳಮದ್ದಲೆ ಉರುಮೆಡೋಲು ಕಹಳೆಗಳ ನಿನಾದ... ಇವುಗಳಿಂದ ದುರ್ಗ ನಾದಮಯವಾಗುತ್ತಿತ್ತು. ಝಂಡಾ ಬತೇರಿಯಲ್ಲಿ ಪಟಪಟಿಸುವ ‘ಹನುಮದ್ಗರುಡಧ್ವಜ’ವು ನಾಯಕರ ಹಿರಿಮೆಯ ದ್ಯೋತಕವಾಗಿ ಕಂಗೊಳಿಸುತ್ತಿದ್ದವು. ವೀರೋಚಿತ ಸ್ಪರ್ಧೆಗಳಲ್ಲಿ ‘ಏಕನಾಥಿಜ್ಯೋತಿ ಬೆಳಗುವ ಸ್ಪರ್ಧೆ’, ‘ತುಪ್ಪದಕೊಣಾರೋಹಣ’ ಹಾಗೂ ‘ಖಡ್ಗಕಾಳಗ’ದಲ್ಲಿ ಅತ್ಯಂತ ಬಲಶಾಲಿಗಳು ಚಾಣಾಕ್ಷರು ಪ್ರಾಣಭೀತಿಯಿಲ್ಲದ ಶೂರಯುವಕರು ಮಾತ್ರವೇ ಭಾಗವಹಿಸುತ್ತಿದ್ದರು. ಸ್ಪರ್ಧಾ ವಿಜೇತರಿಗೆ ಬಹುಮಾನವಷ್ಟೇ ಅಲ್ಲದೇ, ಬಯಸಿದ ಹುದ್ದೆ ಪ್ರಾಪ್ತವಾಗುತ್ತಿದ್ದುದರಿಂದ ಈ ಸ್ಪರ್ಧೆಗಳಿಗೆ ಧೀರರು ವಿಶೇಷ ತರಬೇತಿ ಪಡೆದು ಹೆಚ್ಚಿನ ಆಸ್ಥೆ ವಹಿಸಿ ಪ್ರಾಣವನ್ನೇ ಪಣವಾಗಿಟ್ಟು ಕಣಕ್ಕಿಳಿಯುತ್ತಿದ್ದರು.

ಹೀಗಿತ್ತು ಆಟದ ವೈಭವ 
ಬೆಳಗಿನ ಸೂರ್ಯ ಇಳೆಗೆ ಬಿಸಿ ಮುಟ್ಟಿಸುವ ಸಮಯದಲ್ಲಿ ಮೇಲುದುರ್ಗದಲ್ಲಿರುವ ಏಕನಾಥೇಶ್ವರಿ ಆಲಯದ ಅಂಗಳದಲ್ಲಿ ನೆರೆವ ಸಹಸ್ರಾರು ಜನರ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ ಸ್ಪರ್ಧಾಳುಗಳು. ಸ್ಪರ್ಧಾಳು ನಲವತ್ತು ಅಡಿ ಎತ್ತರದ ಉಯ್ಯಾಲೆ ಕಂಬಕ್ಕೆ ಸರಪಳಿಗಳಿಂದ ಕಟ್ಟಿರುವ ಉಯ್ಯಾಲೆ ಮಣೆಯ ಮೇಲೆ ನಿಂತು ತೂಗಿ, ಜೀಕ್ ಹೊಡೆದು ಮಾರುದ್ದದ ಪಂಜಿನ ನೆರವಿನಿಂದ ಎದುರಿನಲ್ಲಿರುವ ಸರಿಸುಮಾರು ಐವತ್ತು ಅಡಿ ಎತ್ತರಕ್ಕೂ ನಿಂತಿರುವ ಬೃಹತ್ ದೀಪಸ್ತಂಭದ ತುದಿಯಲ್ಲಿರುವ ದೀಪದ ಬಟ್ಟಲಲ್ಲಿನ ದಪ್ಪನೆಯ ಬತ್ತಿಯನ್ನು ಬೆಳಗಿಸಬೇಕು. ಒಂದು ಕೈಯಲ್ಲಿ ಉಯ್ಯಾಲೆಯ ಸರಪಳಿಯನ್ನು ಹಿಡಿದು ತೂಗುತ್ತಾ ಜೀಕ್ ಹೊಡೆದು ಮೇಲೆ ಹೋಗಿ ಕ್ಷಣದಲ್ಲೇ ಮತ್ತೊಂದು ಕೈಯಲ್ಲಿರುವ ಉರಿವ ಮಾರುದ್ದದ ಪಂಜಿನ ಸಹಾಯದಿಂದ ದೀಪವನ್ನು ಬೆಳಗಿಸುವುದು ತುಂಬಾ ಕೌಶಲ್ಯವಿದ್ದವರಿಗೆ ಮಾತ್ರವೇ ಸಾಧ್ಯವಾಗುವಂತಹದ್ದು.    ದೃಷ್ಟಿ, ಕರ ಚಮತ್ಕಾರ, ಕಾಲುಗಳ ಬಲ ತೂಕ ಆಯ ತಪ್ಪದ ಜಾಣ್ಮೆಯೇ ಪ್ರಧಾನವಾಗಿರುವ ಸ್ಪರ್ಧೆಯಲ್ಲಿ ಎಷ್ಟೋ ಸಂವತ್ಸರಗಳಲ್ಲಿ ಯಾರೂ ವಿಜೇತರಾಗದೆ ಹೋದದ್ದೂ ಉಂಟಂತೆ.

ಅದರಲ್ಲೂ ಅಸಾಧ್ಯ ನಿಯಮಗಳು ಬೇರೆ. ಎರಡು ಜೀಕಿನೊಳಗೆ ದೀಪವನ್ನು ಬೆಳಗಿಸಬೇಕು. ಉಯ್ಯಾಲೆ ಕಂಬಗಳಿಗೆ ಸಮಾನಾಂತರವಾಗಿ ದೀಪದಸ್ತಂಭವಿದ್ದಿದ್ದರೆ ಕ್ರೀಡಾಳುಗಳಿಗೆ ಒಂದಿಷ್ಟು ಅನುಕೂಲವಾಗುತ್ತಿತ್ತೇನೋ. ಆದರೆ ದೀಪದ ಕಂಬ ಒಂದಿಷ್ಟು ಓರೆಯಾಗಿದ್ದು, ಉಯ್ಯಾಲೆ ಮೇಲೇರಿದಾಗ ತುದಿಗಾಲಲ್ಲಿ ನಿಂತು ಬಾಗಿ ಕೈಚಾಚಿ ಪಂಜನ್ನು ದೀಪಕಮಲದಲ್ಲಿರುವ ಬತ್ತಿಗೆ ಮುಟ್ಟಿಸಬೇಕು. ಕ್ಷಣ ತಡವಾದರೂ ಉಯ್ಯಾಲೆ ಏರಿದವನ ಮಾತುಕೇಳದೆ ಹಿಂದಿರುಗಿಬಿಡುತ್ತದೆ. ನೋಡುಗರಿಗೆ ಮೋಜು. ಕೇಕೆ ಸಿಳ್ಳೆ ಕೋಲಾಹಲಗಳ ನಡುವೆ ಕ್ರೀಡಾಳು ಕಡೆಕ್ಷಣದಲ್ಲಿ ಅಧೀರನಾಗಿ ಬಿಡುತ್ತಿದ್ದ. ದೀಪ ಮುಟ್ಟುವ ಭರದಲ್ಲಿ ಆಯತಪ್ಪಿದರೆ ಆಯಸ್ಸೇ ಬಲಿ.

ಯಾರೂ ಹೆಚ್ಚಾಗಿ ಪಾಲ್ಗೊಳ್ಳದ ಸ್ಪರ್ಧೆಯಲ್ಲಿ ಐದಾರು ಮಂದಿ ಮುಂದೆ ಬಂದರೆ ಅದೇ ದೊಡ್ಡ ಸುದ್ದಿ. ಕೆಲವೇ ನಿಮಿಷಗಳಲ್ಲಿ ಮುಗಿದುಬಿಡುವ ಸ್ಪರ್ಧೆಯನ್ನು ನೋಡಲು  ರಾಜಪರಿವಾರವೇ ಹಾಜರಿರುತ್ತಿದ್ದರು. ಕ್ರಮೇಣ, ಕ್ರೀಡಾಳುಗಳಿಗೆ ಅಪಾಯವಾಗದಿರಲೆಂದು ಕೆಳಗೆ ಬಲೆಯನ್ನು ಹರುವಲಾಯಿತು. ಯಾರೂ ಸ್ಪರ್ಧಿಗಳಿಲ್ಲದಿದ್ದರೆ ಮದಕರಿನಾಯಕರೇ ಸ್ಪರ್ಧೆಗಿಳಿದು ದೀಪ ಮುಡಿಸಿ ದೇವಿಯ ಕೃಪೆಗೆ, ಜನತೆಯ ಗೌರವಕ್ಕೆ ಪಾತ್ರರಾಗುವ ಸಾಹಸ ತೋರುತ್ತಿದ್ದರು.

ತುಪ್ಪದ ಕೊಣಾರೋಹಣ ಸ್ಪರ್ಧೆ: ಹೊತ್ತು ನೆತ್ತಿಯ ಮೇಲೆರಗಿದಾಗ ‘ತುಪ್ಪದ ಕೊಣಾರೋಹಣ ಸ್ಪರ್ಧೆ. ಕೆಳದುರ್ಗದಲ್ಲಿರುವ ರಾಜಾ ಉತ್ಸವಾಂಬ ದೇವಾಲಯದಿಂದ ಓಟವನ್ನು ಆರಂಭಿಸುವ ಸ್ಪರ್ಧಿ ಕಾಮಗೇತಿ ಬಾಗಿಲಿನ ಮಾರ್ಗವಾಗಿ ಕೋಟೆಯ ಬಾಗಿಲುಗಳನ್ನು ದಾಟಿ, ಗಣಪತಿ ಆಲಯವನ್ನು ಹಾದು ಬೆಟ್ಟದ ಹೃದಯದ ಭಾಗವಾದ ಏಕನಾಥಿ ಅಂಗಳದಲ್ಲಿ ಓಡಿ ಹನಮದ್ಗರುಡದ್ವಾರವನ್ನು ಪ್ರವೇಶಿಸಿ ಗೋಪಾಲಕೃಷ್ಣಸ್ವಾಮಿಯ ಹೊಂಡದ ಬಳಿ ಬಂದು ಕಪಿಲೆ ಇರುವ ಜಾಗದಲ್ಲಿಂದ ನೀರಿಗೆ ಜಿಗಿದು ಈಜುಬಿದ್ದು, ಗೋಪಾಲಸ್ವಾಮಿಯ ಆಲಯದ ಎದುರಿನಲ್ಲಿ ಬೃಹದಾಕಾರವಾಗಿ ಮೈಚಾಚಿರುವ ತುಪ್ಪದಕೊಣವನ್ನು ಮೆಟ್ಟಿಂಗಾಲಲ್ಲಿ ಏರಬೇಕು.
  
ನುಣಪಾದ, ನೆಟ್ಟಗೆ ಮಲಗಿರುವ ಕಪ್ಪಾದ ಬಂಡೆಗೆ ಕಾಲಿಟ್ಟರೇ ಜಾರುತ್ತದೆ. ಅಂಥದ್ದರಲ್ಲಿ ಬಂಡೆಯ ಮೇಲೆ ತುಪ್ಪ ಸುರಿಯುವುದು ಬೇರೆ. ಇಂಥ ಬಂಡೆಯನ್ನು ಏರಲು ಕೈಕಾಲುಗಳಲ್ಲಿ ಕಸುವಿರಬೇಕು! ಕಾಲು ಜಾರಿತೋ ಹೊಂಡದ ಪಾಲು. ಗಂಟೆಗಟ್ಟಲೆ ಪ್ರಯಾಸಪಟ್ಟು ಅದೂ ಮೆಟ್ಟಿಂಗಾಲಲ್ಲಿ ದೇಹದ ತೂಕವನ್ನು ಸಮತೋಲನ ಮಾಡುತ್ತಾ ಆಯತಪ್ಪದಂತೆ ದೇಹದ ಕಸುವನ್ನೆಲ್ಲಾ ಕಾಲುಗಳಿಗೆ ತುಂಬಿಕೊಂಡು ನಲವತ್ತು ಅಡಿ ಎತ್ತರದ ಕೊಣ ಏರುವವರು ಮಾತ್ರ ಎಲ್ಲೋ ಒಂದಿಬ್ಬರು. ಜೀವ ಹೈರಾಣವಾದರೂ ಕ್ರೀಡಾಳುಗಳಿಗೆ ಮೈಮೇಲೆ ಪರಿವೆಯಿಲ್ಲ. ಎದೆಯುಬ್ಬಿಸಿ ಕಾಲಿನ ಪಂಜದಿಂದ ಬಂಡೆಯನ್ನು ಒತ್ತಿಹಿಡಿದು ತೂಗುತ್ತಾ ಮೈಭಾರವನ್ನು ಆಗಾಗ ಸರಿದೂಗಿಸಿಕೊಳ್ಳುತ್ತಾ ನಿಧಾನವಾಗಿ ಮೈಬಲವನ್ನೆಲ್ಲಾ ತೊಡೆಗಳಿಗೆ ರವಾನಿಸಿ ತೊಡೆಗಳು ಅದರದಂತೆ ಹತೋಟಿಗೆ ತಂದುಕೊಳ್ಳುತ್ತಾ ಒಂದೊಂದೇ ಹೆಜ್ಜೆಗಳನ್ನು ಎತ್ತಿಡುತ್ತ ಅವಡುಗಚ್ಚಿ ಏರುತ್ತಾ, ನೀಳಬಾಹುಗಳನ್ನು ನಿಡಿದಾಗಿ ಚಾಚುತ್ತಾ ಮಡಚುತ್ತ ಆಯತಪ್ಪದಂತೆ ಎಚ್ಚರವಹಿಸುತ್ತಿದ್ದರು. ಮೇಲೆ ಸಿಂಹಾಸನದಲ್ಲಿ ಕೂತು ಕೆಳಗಿನಿಂದ ಮೇಲೇರಿ ಬರುವ ಸ್ಪರ್ಧಿಯನ್ನು ಸ್ವಾಗತಿಸಿ ಸನ್ಮಾನಿಸಲು ಸ್ವತಃ
ದೊರೆಗಳೇ ಕಾದು ಕುಳಿತಿರುತ್ತಿದ್ದರು!

ಖಡ್ಗಕಾಳಗ ಸ್ಪರ್ಧೆ: ಮುಸ್ಸಂಜೆ ಹೊತ್ತು ಗೋಪಾಲಸ್ವಾಮಿ ದೇವಸ್ಥಾನದ ಕಂಚಿನ ಗಂಟೆ ಮೊಳಗಿದಾಗ ಅರಮನೆ ಬಯಲಲ್ಲಿ ಖಡ್ಗಕಾಳಗ ಆರಂಭವಾಗುತ್ತಿತ್ತು. ನಾಡಿನ ಹೊರನಾಡಿನ ಸೇನೆಯವರು, ಯುವಕರೂ ಕಾಳಗದಲ್ಲಿ ಭಾಗವಹಿಸುತ್ತಿದ್ದರು.      ಖಡ್ಗಗಳ ಕಣಕಣಿ ಬಂಡೆಗಳಲ್ಲಿ ಪ್ರತಿಧ್ವನಿಸಿ ವಾತಾವರಣಕ್ಕೆ ವಿಚಿತ್ರ ಶೋಭೆ ನೀಡುತ್ತಿತ್ತು. ‘ಜೈಏಕನಾಥಿ, ಜೈ ಹುಚ್ಚಂಗಿ’ ಎಂದು ಖಡ್ಗಗಳನ್ನು ಝಳಪಿಸುತ್ತಾ ಒಬ್ಬರ ಮೇಲೊಬ್ಬರು ಖಡ್ಗಪ್ರಹಾರ ಮಾಡುತ್ತಿದ್ದರೆ ಅದರಿಂದ ಹೊರಸೂಸುವ ಕಿಡಿಗಳು ಕಣ್ಣು ಕೋರೈಸಿ ನೋಡುಗರಲ್ಲಿ ರೋಮಾಂಚನ. ತಾಸುಗಟ್ಟಲೆ ಜಿಗಿದು ಖಡ್ಗದ ಏಟನ್ನು ತಪ್ಪಿಸಿಕೊಂಡು ಮರುಪ್ರಹಾರ ಮಾಡುತ್ತಾ ಭುಜಗಳನ್ನು ಚಕ್ರದೋಪಾದಿಯಲ್ಲಿ ತಿರುಗಿಸುತ್ತಾ ಹದ್ದಿನಂತೆ ಮೇಲೆರಗುವ ಚಿರತೆಯಂತೆ, ಜಿಗಿವ ಹೆಬ್ಬುಲಿಯಂತೆ ಆರ್ಭಟಿಸಿ ಹಾರಿ ಪ್ರತಿಸ್ಪರ್ಧಿಗೆ ಉತ್ತರ ನೀಡುತ್ತಿದ್ದರು. ವೀರಶೌರ್ಯ ಪರಾಕ್ರಮಗಳ ಪ್ರತೀಕವಾದ ಖಡ್ಗಕಾಳಗದಲ್ಲಿ ರಾಜವಂಶದವರೂ ಭಾಗವಹಿಸಿ ತಮ್ಮ ಬಲಾಬಲವನ್ನು ಒರೆಗೆ ಹಚ್ಚುತ್ತಿದ್ದದ್ದುಂಟು. ಆದರೆ ಗುಡ್ಡಗಾಡು ಓಟದ ಸ್ಪರ್ಧೆ, ಚಾರಣ ಸ್ಪರ್ಧೆ ಮಲ್ಲಯುದ್ಧಗಳಂತೂ ಹಲವು ಮಾರ್ಪಾಡುಗಳೊಂದಿಗೆ ಉಳಿದುಕೊಂಡಿವೆ.

ವಿಜಯದಶಮಿಯ ದಿನ ಸಂಜೆ ಪಾಳೇಗಾರರು ತಮ್ಮ ರಾಜಪರಿವಾರದೊಂದಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟಗತ್ತಿ ಇತ್ಯಾದಿ ಲಾಂಛನಗಳಿಗೆ ಪೂಜೆಗೈದು ಪ್ರಧಾನಿಯಿಂದ ಪದಾತಿಯವರೆಗೂ ನಜರುಮುಜುರೆ ಗಳನ್ನು ಸ್ವೀಕರಿಸಿ ನಂತರ ಆನೆ ಮೇಲೆ ಅಲಂಕರಿಸಲಾಗಿದ್ದ ಸ್ವರ್ಣಮಯ ಅಂಬಾರಿಯನ್ನೇರಿದ ಕೂಡಲೇ ಹದಿನೆಂಟು ಕುಶಾಲತೋಪುಗಳು ಹಾರುತ್ತಿದ್ದವು. ಕಹಳೆ ಶಂಖಗಳ ನಿನಾದ ತಮಟೆ ಡೋಲು ಢಕ್ಕೆಗಳ ಮೊರೆತ. ಇಕ್ಕೆಲಗಳಲ್ಲಿ ಚಾಮರಗಳನ್ನು ಹಿಡಿದ ದಾಸಿಯರು. ಶ್ವೇತ ಛತ್ರಿಗಳನ್ನು ಹಿಡಿದ ಸುಭಟರೂ ನಿಂತು ಅಂದವನ್ನು ಹೆಚ್ಚಿಸುತ್ತಿದ್ದರು. ಗಜಸೈನ್ಯ ಅಶ್ವಸೈನ್ಯ ಪಿರಂಗಿಗಳ ಮಲ್ಲದಳ ಶಸ್ತ್ರದಳ ಪದಾತಿದಳ ಮೆರವಣಿಗೆಯಲ್ಲಿದ್ದು ಅವರ ಉಸ್ತುವಾರಿಗೆಂದೇ ಮಂತ್ರಿಯೊಬ್ಬ ರಾಜಾಶ್ವವವನ್ನೇರಿ ಮಂದಗತಿಯಲ್ಲಿ ಸಾಗುತ್ತಿದ್ದ. ನವಿಲು ಕುಣಿತ ಕುದುರೆ ಕುಣಿತ ತಾಫೆಯವರು ನಾಯಕಸಾನಿಯರ ನರ್ತನ ಮೆರವಣಿಗೆಯ ಶೋಭೆಯನ್ನು ದ್ವಿಗುಣಿಸುತ್ತಿದ್ದರೆ, ಚಂದ್ರಗಾವಿ ನಿಶಾನಿ, ಬೆಳ್ಳಿಯ ತೋರಣ, ಹನುಮದ್ಗರುಡಧ್ವಜ, ಛತ್ರಿಚಾಮರಗಳು ಬೆಳ್ಳಿಕೋಲಿನ ಭಟರು ಮುಂಚೂಣಿಯಲ್ಲಿರು ತ್ತಿದ್ದರು. ಹಿಂಭಾಗದಲ್ಲಿ ಸಾರೋಟು ಪಲ್ಲಕ್ಕಿಗಳಲ್ಲಿ ರಾಜಕುಟುಂಬದವರು ಹಿಂಬಾಲಿಸುತ್ತಿದ್ದರು. ನೂರಾರು ಪಂಜು ದೀವಟಿಗೆಗಳ ಸಾಲು ಸಾಲು ಕಂಗೊಳಿಸುತ್ತಿತ್ತು.

ಇಂದಿನ ದಸರಾ
ಈಗ ದೊರೆಗಳಿಲ್ಲ ಗುರುಗಳಿದ್ದಾರೆ. ದಸರಾದಲ್ಲಿ ಶ್ರೀಮುರುಘರಾಜೇಂದ್ರ ಮಹಾಸ್ವಾಮಿಗಳ ಚಿನ್ನದ ಪಲ್ಲಕ್ಕಿ ಉತ್ಸವವು ಬೃಹನ್ಮಠದಿಂದ ಸಾಗಿ ಸಕಲ ಗುರುಲಾಂಛನ, ಆನೆ ಕುದುರೆಗಳು ಬಗೆಬಗೆಯ ವೇಷಧಾರಿಗಳು ಪಾಳೇಗಾರ ಪಾತ್ರಧಾರಿಗಳ ಟ್ಯಾಬ್ಲೋಗಳು ನಾದಸ್ವರ ಬ್ಯಾಂಡು ರಣವಾದ್ಯಗಳ ಮೊರೆತ ಭಜನೆ, ವೀರಗಾಸೆ ತಂಡದವರು ಜನಪದ ತಂಡಗಳ ಮೆರಗು ಹೀಗೆ ಕಾಲಕ್ಕೆ ತಕ್ಕಂತೆ ಬದಲಾವಣೆಗಳಾಗಿವೆ.  ಡಾ.  ಶಿವಮೂರ್ತಿ ಮುರುಘಾ ಶರಣರಕಾಲದಲ್ಲಿ ಶರಣಸಂಸ್ಕೃತಿ ಉತ್ಸವವಾಗಿ ಮಾರ್ಪಾಡಾಗಿ ಅಷ್ಟೇ ವಿಜೃಂಭಣೆಯಿಂದ ನಡೆವ ನಾಡಹಬ್ಬ ಅನೇಕ ವೈಚಾರಿಕ ಮನೋರಂಜಕ ಕಾರ್ಯಕ್ರಮ ಗಳೊಡನೆ ನಡೆಯುತ್ತದೆ. ಪ್ರಾಚೀನ ಬೃಹನ್ಮಠದ ಆವರಣದಲ್ಲಿ ಭಕ್ತಸಭೆ ಆಶೀರ್ವಚನ ದೊಡ್ಡಮದಕರಿ ವಂಶಸ್ಥರಿಂದ ಗುರುಗಳಿಗೆ ಭಕ್ತಿಸಮರ್ಪಣೆ, ಗುರುಗಳಿಂದ ಅವರಿಗೆ ರಾಜಾಶೀರ್ವಾದ ಗೌರವ ಸಮರ್ಪಣೆ ದಾಸೋಹ ಹೀಗೆ ಹಳೆಬೇರು ಹೊಸಚಿಗುರು ನೋಡಲು ಸೊಬಗು ಎಂಬಂತೆ ಹಳೆ ಸಂಪ್ರದಾಯಕ್ಕೆ ವೈಚಾರಿಕ ಸೊಬಗನ್ನು ನೀಡಿರುವ ಶರಣರು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಮಾರನೆ ದಿನ  ಶರಣರು ರುದ್ರಾಕ್ಷಿಕಿರೀಟ ಧರಿಸಿ ಮರದಿಂದ ನಿರ್ಮಿಸಿದ ಸಾಂಕೇತಿಕ ಪೀಠವನ್ನು ಏರುವಲ್ಲಿಗೆ ದಸರಾ ವೈಭವಕ್ಕೆ ತೆರೆಬೀಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT