ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರ್ವಾಸನೆ ನಡುವೆಯೇ ತಿನ್ನಬೇಕು ನಿತ್ಯ ಕೂಳು!

ಹಂದಿಗಳ ಬೀಡು 5ನೇ ವಾರ್ಡ್‌; ಮಳೆ ಬಂದರೆ ಬದುಕು ಮೂರಾಬಟ್ಟೆ
Last Updated 28 ಜೂನ್ 2016, 11:16 IST
ಅಕ್ಷರ ಗಾತ್ರ

ದಾವಣಗೆರೆ:  ‘ಇಲೆಕ್ಷನ್ ಬಂದಾಗ ಎಲ್ಲ ಪಕ್ಷದವರು ಮನೆ ಬಾಗಿಲಿಗೇ ಬಂದು ವೋಟ್ ಹಾಕಿ ಎಂದು ಕೈ ಮುಗಿಯುತ್ತಾರೆ; ಮಕ್ಕಳನ್ನೂ ಎತ್ತಿ ಮುದ್ದಾಡಿ ಹೋಗುತ್ತಾರೆ. ಗೆದ್ದ ಮೇಲೆ ಇತ್ತ ಸುಳಿಯುವುದೇ ಇಲ್ಲ. ನಮ್ಮ ನಿತ್ಯದ ಗೋಳನ್ನು ಕೇಳುವವರೇ ಇಲ್ಲ. ಈ ದುರ್ವಾಸನೆಯ ನಡುವೆಯೇ ಕುಳಿತು ನಿತ್ಯ ಕೂಳು ತಿನ್ನಬೇಕಾಗಿದೆ...’

ಮುದ್ದಾಬೋವಿ ಕಾಲೊನಿ ಯಲ್ಲಿರುವ ತಮ್ಮ ಮನೆ ಎದುರಿನ ಐದಡಿ ಅಗಲದ ರಸ್ತೆ ಮೇಲೆಯೇ ಮೊಮ್ಮಗಳಿಗೆ ಸ್ನಾನ ಮಾಡಿಸುತ್ತಿದ್ದ ವೃದ್ಧೆ ಲಕ್ಕಮ್ಮ ಆಂಜಿನಪ್ಪ ಅವರು ಮಹಾನಗರ ಪಾಲಿಕೆಯ ಐದನೇ ‘ವಾರ್ಡ್‌ ಬೀಟ್‌’ಗೆ ತೆರಳಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಬಳಿ ತಮ್ಮ ಸಂಕಟವನ್ನು ತೋಡಿಕೊಂಡರು.

‘ಮನೆಯೊಳಗೆ ಜಾಗ ಇಲ್ಲ ಅಂತ ಚರಂಡಿ ಮೇಲೆ ಚಪ್ಪಡಿ ಕಲ್ಲು ಹಾಕಿ ಬಚ್ಚಲು ಮನೆ ಕಟ್ಟಿಕೊಂಡಿದ್ದೆವು. ಚರಂಡಿ ದುರಸ್ತಿ ಮಾಡಲು ಈಗ ಇದನ್ನೂ ಒಡೆಯುತ್ತೇವೆ ಎನ್ನುತ್ತಿದ್ದಾರೆ. ಮನೆಯ ಹಿಂಭಾಗದಲ್ಲೇ ಸಾರ್ವಜನಿಕ ಶೌಚಾಲಯ ಇದೆ. ಅದರ ನಿರ್ವಹಣೆ ಯನ್ನೂ ಮಾಡುತ್ತಿಲ್ಲ. ದೊಡ್ಡ ಮೋರಿ ದಾಟಿ ಅಲ್ಲಿಗೆ ಹೋಗುವುದೇ ಒಂದು ಸಾಹಸ. ನೀರಿನ ಸೌಲಭ್ಯವೂ ಇಲ್ಲ. ಸುತ್ತಲೂ ದುರ್ವಾಸನೆ. ಮಳೆ ಬಂದರೆ ಕೊಳಚೆ ನೀರು ಮನೆಯೊಳಗೇ ನುಗ್ಗುತ್ತಿದೆ. ಜೊತೆಗೆ ಹಂದಿಗಳ ಕಾಟ ವನ್ನೂ ಸಹಿಸಿಕೊಳ್ಳಬೇಕಾಗಿದೆ’ ಎಂದು ಲಕ್ಕಮ್ಮ ತಮ್ಮ ಬದುಕಿನ ವ್ಯಥೆಯನ್ನು ಹೇಳಿಕೊಂಡರು.

‘ಎಂಟು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಾರೆ. ಬೋರ್‌ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಚರಂಡಿ ಯನ್ನು ಸ್ವಚ್ಛಗೊಳಿಸಲು ಯಾರೂ ಬರುತ್ತಿಲ್ಲ. ಹೀಗಾಗಿ ಮನೆಯ ಎದುರಿಗೇ ಕೊಳಚೆ ನೀರು ಚರಂಡಿಯಲ್ಲಿ ತುಂಬಿ ಕೊಂಡಿರುತ್ತದೆ’ ಎಂದು ಅಖಿಲಾ ಬಾನು ಧ್ವನಿಗೂಡಿಸಿದರು.

ಐದನೇ ವಾರ್ಡ್‌ ವ್ಯಾಪ್ತಿಯ ಕೊರಚರಹಟ್ಟಿ, ಅಣ್ಣಿಗೆರೆ, ವೀರಭದ್ರಪ್ಪ ನಗರ, ಕಾರ್ಲ್‌ ಮಾರ್ಕ್ಸ್‌ ನಗರ, ದೇವರಾಜ ಕ್ವಾಟರ್ಸ್‌ಗಳ ನಿವಾಸಿ ಗಳಿಂದಲೂ ಇಂಥ ದೂರುಗಳು ಕೇಳಿ ಬರುತ್ತಿವೆ. ಈ ವಾರ್ಡ್‌ನಲ್ಲಿ ಸಂಚರಿ ಸಿದಾಗ ಆಹಾರ ಪದಾರ್ಥ ತಿನ್ನಲು ಹಂದಿ, ಬೀದಿ ನಾಯಿಗಳ ಕಚ್ಚಾಟ; ರಸ್ತೆಯ ಪಕ್ಕದಲ್ಲೇ ಕೊಳೆತು ನಾರುವ ತ್ಯಾಜ್ಯ, ಅವುಗಳ ಮೇಲೆಯೇ ಹೊರಳಾಡುತ್ತಿರುವ ಹಂದಿಗಳ ಗುಂಪು; ಚರಂಡಿಯಲ್ಲಿ ತುಂಬಿ ತುಳುಕುವ ಸ್ಥಿತಿಗೆ ಬಂದ ಕೊಳಚೆ ನೀರು; ದುರ್ವಾಸನೆ ನಡುವೆ ಬದುಕುತ್ತಿರುವ ಜನರ ನರಕಯಾತನೆಯ ದರ್ಶನವಾಗುತ್ತದೆ. ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನ ದಿನ ಕಳೆಯುತ್ತಿದ್ದಾರೆ.

‘ಬೇತೂರು ರಸ್ತೆಯ ಚಾಮ ರಾಜ ಪೇಟೆ ‘ಸಿ’ ಬ್ಲಾಕ್‌ನ 1ನೇ ಕ್ರಾಸ್‌ನಲ್ಲಿ ಚರಂಡಿ ಕೆಲಸ ಆಗಿಲ್ಲ. ಮಳೆ ಬಂದಾಗ ಚೇಂಬರ್‌ ಕಟ್ಟಿ ಕೊಂಡು ಕೊಳಚೆ ನೀರು ಮನೆಗಳಿಗೆ ಹರಿದು ಬರುತ್ತಿದೆ. ಪ್ಲಾಸ್ಟಿಕ್‌ ಬ್ಯಾಗ್‌, ತ್ಯಾಜ್ಯಗಳಿಂದ ಚರಂಡಿ ತುಂಬಿ ಹೋಗಿ ದ್ದರೂ ಸ್ವಚ್ಛ ಗೊಳಿಸುತ್ತಿಲ್ಲ. ಹಂದಿಗಳ ಉಪಟಳ ತೀವ್ರವಾಗಿದೆ. ಮಕ್ಕಳು ಹೊರಗಡೆ  ಆಟವಾಡಲು ಆಗುತ್ತಿಲ್ಲ’ ಎನ್ನುತ್ತಾರೆ   ನಿವಾಸಿ ಶೇಖ್‌ ಅಹ್ಮದ್‌.

ಹಂದಿಗಳ ಕಾಟ:  ‘ಹಂದಿಗಳನ್ನು ತಂದು ಇಲ್ಲಿಗೆ ಬಿಟ್ಟು ಹೋಗುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆ ಮಗನಿಗೆ ಹಂದಿ ಕಚ್ಚಿ ಗಾಯಗೊಳಿಸಿತ್ತು. ಆಹಾರ ಹುಡುಕಿ ಕೊಂಡು ಮನೆಯೊಳಗೇ ಹಂದಿ ಬರುತ್ತಿದೆ. ನಾವು ಕೂಲಿ ಕೆಲಸಕ್ಕೆ ಹೋಗುತ್ತೇವೆ. ಮನೆಯಲ್ಲಿರುವ ಮಕ್ಕಳು ಸುರಕ್ಷಿತವಾಗಿದ್ದಾರೋ ಇಲ್ಲವೋ ಎಂಬ ಆತಂಕ ಕಾಡು ತ್ತಿರುತ್ತದೆ.

ಜೀವನ ಮಾಡು ವುದೇ ಕಷ್ಟ ವಾಗಿದೆ. ಕೊಳಚೆ ಯಿಂದಾಗಿ ರೋಗ ಬಂದೀತು ಎಂಬ ಆತಂಕ ಕಾಡು ತ್ತಿದೆ’ ಎಂದು ಬೇಸರ ದಿಂದ ನುಡಿದ ಅಣ್ಣಿಗೆರೆ ವೀರ ಭದ್ರಪ್ಪ ನಗರದ ನಿವಾಸಿ ಶೈನಾ ಬಾನು, ತಾವು ತೊಳೆ ಯುತ್ತಿದ್ದ ಪಾತ್ರೆ ಯನ್ನೇ ಕಿತ್ತುಕೊಳ್ಳಲು ಬಂದ ಹಂದಿಗಳನ್ನು ಓಡಿಸತೊಡಗಿದರು.

‘ವಾರಕ್ಕೆ ಒಮ್ಮೆ ಕುಡಿಯುವ ನೀರು ಬಿಡುತ್ತಾರೆ. ಇಲ್ಲಿ ಒಳಚರಂಡಿ ವ್ಯವಸ್ಥೆಯೇ ಇಲ್ಲ. ಹೀಗಾಗಿ ಶೌಚಾಲ ಯವನ್ನು ನಾವು ಯಾರೂ ಕಟ್ಟಿಸಿಕೊಂಡಿಲ್ಲ. ಸಮೀಪದಲ್ಲಿ ಜಾಲಿಗಿಡ ಬೆಳೆದಿರುವ ಪೊದೆಯ ಮರೆಯಲ್ಲಿ ಬಹಿರ್ದೆಸೆಗೆ ತೆರಳುತ್ತೇವೆ. ಮುಜುಗರ ತಪ್ಪಿಸಿಕೊಳ್ಳಲು ಮಹಿಳೆಯರು ನಸುಕಿ ನಲ್ಲೇ ಎದ್ದು ಹೋಗುತ್ತಿದ್ದಾರೆ’ ಎಂದು  ನಿವಾಸಿ ಮಂಜುನಾಥ ತಿಳಿಸಿದರು.

ಸಾರ್ವಜನಿಕ ಶೌಚಾಲಯಕ್ಕೆ ಬೀಗ: ಕಾರ್ಲ್‌ ಮಾರ್ಕ್ಸ್‌ ನಗರದ ಮುಖ್ಯ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾ ಲಯಕ್ಕೆ ಕಳೆದ ಎಂಟು ತಿಂಗಳಿನಿಂದ ಬೀಗ ಹಾಕಿರುವುದರಿಂದ ಸ್ಥಳೀಯ ನಿವಾಸಿಗಳು ಬಹಿರ್ದೆಸೆಗೆ ಹೋಗಲು ಪರದಾಡುವಂತಾಗಿದೆ.

‘ಬಿಲ್‌ ಹಣ ಪಾವತಿಸಿಲ್ಲ ಎಂಬ ಕಾರಣಕ್ಕೆ ಶೌಚಾಲಯದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಟ್ಯಾಂಕ್‌ಗೆ ನೀರು ಏರಿಸಲು ಸಾಧ್ಯವಾಗ ದಿರುವುದರಿಂದ ಶೌಚಾಲಯಕ್ಕೇ ಬೀಗ ಹಾಕಲಾಗಿದೆ. ಇದರ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದ ಸಾಮೂಹಿಕ ಶೌಚಾಲಯವನ್ನೂ ಬಂದ್‌ ಮಾಡ ಲಾಗಿದೆ. ಹೀಗಾಗಿ ಶೌಚಕ್ಕೆ ಬಯಲಿಗೆ ಹೋಗುತ್ತಿದ್ದೇವೆ’ ಎಂದು ಹಸೀನಾ ಅಳಲು ತೋಡಿಕೊಂಡರು.

ಪಾಲಿಕೆ ಸದಸ್ಯರು ಏನಂತಾರೆ?
ವಾರ್ಡ್‌ 5ರ ಕಾಲೊನಿಗಳಲ್ಲಿ ಬಹುತೇಕ ಕಡೆ ಸಿಸಿ ರಸ್ತೆ ನಿರ್ಮಿಸಲಾಗಿದೆ.ಅಂದಾಜು ₹ 2 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೆಡೆ ಚರಂಡಿ ನಿರ್ಮಿಸಬೇಕಾಗಿದ್ದು, ಆದ್ಯತೆ ಮೇಲೆ ಅವುಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಮ್ಮ ವಾರ್ಡ್‌ನಲ್ಲಿ 186 ಮನೆಗಳನ್ನು ನಿರ್ಮಿಸಿ ಬಡವರಿಗೆ ವಿತರಿಸುವ ಕಾರ್ಯವೂ ಪ್ರಗತಿಯಲ್ಲಿದೆ. ವಾಲ್ವ್‌ಮನ್‌ ಸರಿಯಾಗಿ ಕೆಲಸ ಮಾಡದಿರುವುದರಿಂದ ಐದಾರು ದಿನಗಳಿಗೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಆತನನ್ನು ಬದಲಾಯಿಸುವಂತೆ ಅಧಿಕಾರಿಗಳನ್ನು ಕೋರಿದ್ದೇನೆ. ಕಾರ್ಲ್ ಮಾರ್ಕ್ಸ್‌ನಗರದ ಸಾರ್ವಜನಿಕ ಶೌಚಾಲಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಮಧ್ಯದಲ್ಲೇ ಬಿಟ್ಟು ಹೋಗಿದ್ದಾನೆ.ಬೇರೆಯವರಿಗೆ ಗುತ್ತಿಗೆ ನೀಡಿ, ಅದನ್ನು ಪುನಃ ಆರಂಭಿಸಲು ಯತ್ನಿಸಲಾಗುವುದು.
– ಬಿ. ಪರಸಪ್ಪ,ಪಾಲಿಕೆಯ 5ನೇ ವಾರ್ಡ್‌ ಸದಸ್ಯ

5ನೇ ವಾರ್ಡ್‌ ವಿಶೇಷ
5ನೇ ವಾರ್ಡ್‌ನಲ್ಲಿ ಮುಸ್ಲಿಮರು ಹಾಗೂ ಪರಿಶಿಷ್ಟ ಜಾತಿಯ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಅರಳಿಮರದ ಬಳಿಯ ಮಂಡಕ್ಕಿ ಭಟ್ಟಿಯ 1ನೇ ಕ್ರಾಸ್‌ನಿಂದ ಬೇತೂರು ರಸ್ತೆಯ ಎಡಭಾಗದಲ್ಲಿ ಹರಡಿಕೊಂಡಿರುವ ಈ ವಾರ್ಡ್‌ನಲ್ಲಿ ಸುಮಾರು 10 ಸಾವಿರ ಮತದಾರರಿದ್ದಾರೆ. ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳಿವೆ. ಮುದ್ದಾಬೋವಿ ಕಾಲೊನಿ, ಕಾರ್ಲ್‌ ಮಾರ್ಕ್ಸ್‌ ನಗರ, ಕೊರಚರಹಟ್ಟಿ, ದೇವರಾಜ ಕ್ವಾಟರ್ಸ್‌, ಅಣ್ಣಿಗೆರೆ ವೀರಭದ್ರಪ್ಪ ನಗರ ಈ ವಾರ್ಡ್‌ ವ್ಯಾಪ್ತಿಗೆ ಬರುತ್ತವೆ. ಬಡತನದಿಂದಾಗಿ ಇಲ್ಲಿನ ಹೆಚ್ಚಿನ ಜನರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT