ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂಳು ಹಿಡಿಯುತಿದೆ ಹಳ್ಳಿ ಲೈಬ್ರರಿ

Last Updated 21 ಜುಲೈ 2014, 19:30 IST
ಅಕ್ಷರ ಗಾತ್ರ

ಅದು ಸ್ವಾತಂತ್ರ್ಯ ಸಂಗ್ರಾಮದ ದಿನಗಳು. ಬ್ರಿಟಿಷರನ್ನು ಭಾರತದಿಂದ ಓಡಿಸುವ ಸಲುವಾಗಿ ಗುಪ್ತವಾಗಿ ಕರಪತ್ರಗಳನ್ನು, ದಿನಪತ್ರಿಕೆಗಳನ್ನು ಹಂಚುತ್ತಾ ಕ್ರಾಂತಿಕಾರಿ ಹೆಜ್ಜೆಯ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿತ್ತು ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಹೋರಾಟಗಾರರ ಗುಂಪು. ಬ್ರಿಟಿಷರ ವಿರುದ್ಧ ಸಿಡಿದೆದ್ದು ‘ಕಿಡಿಕಾರಿದ ಮೊರಬ’ ಎಂದೇ ಈ ಗ್ರಾಮಕ್ಕೆ ಬಿರುದು ತಂದುಕೊಟ್ಟಿತ್ತು ಈ ಗುಂಪು.

ಜನ ಸಾಕ್ಷರರಾದರಷ್ಟೇ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಅರಿತ ಈ ಹೋರಾಟಗಾರರು, ‘ಸಾಕ್ಷರ ಗ್ರಾಮ’ದ ಕನಸು ಕಂಡರು. ಅದರ ಫಲವಾಗಿ 1950ರಲ್ಲಿ ‘ಗೆಳೆಯರ ಬಳಗ’ದ ಸ್ಥಾಪನೆಯಾಯಿತು. ಅಂದು ಕೆಲವೇ ಕೆಲವು ದಿನಪತ್ರಿಕೆಗಳು ಚಾಲ್ತಿಯಲ್ಲಿದ್ದವು.

ಜ್ಞಾನದ ಹೆಬ್ಬಾಗಿಲು ಎಂದೇ  ಕರೆಸಿಕೊಳ್ಳುತ್ತಿದ್ದ ವೃತ್ತಪತ್ರಿಕೆಗಳನ್ನು ಊರ ಜನರೆಲ್ಲಾ ಓದಲಿ ಎಂಬ ಆಶಯ ಈ ಬಳಗದ್ದು. ಇದು ಸಾಧ್ಯವಾಗಬೇಕಾದರೆ ವಾಚನಾಲಯದ ಅವಶ್ಯಕತೆ ಇದೆ ಎಂದುಕೊಂಡರು. ತುಂಬಾ ಪ್ರಯತ್ನ ಪಟ್ಟು 1951ರಲ್ಲಿ ‘ಜ್ಞಾನೋದಯ ವಾಚನಾಲಯ’ ನಿರ್ಮಿಸಿದರು. ರಾಜ್ಯದ ಪ್ರಥಮ ಹಳ್ಳಿ ಲೈಬ್ರರಿ ಎಂಬ ಹೆಗ್ಗಳಿಕೆ ಇದರದ್ದು. ಇಷ್ಟೇ ಅಲ್ಲದೇ, ಜ್ಞಾನದ ವಿನಿಮಯಕ್ಕಾಗಿ, ಅಧ್ಯಾತ್ಮಿಕ ಚಿಂತನೆಗಾಗಿ ಊರ ಗುಡಿಗುಂಡಾರಗಳಲ್ಲಿ, ಛಾವಣಿಗಳಲ್ಲಿ ಸಭೆ ಸೇರಿ ಚಿಂತನ ಮಂಥನ, ಚರ್ಚೆ ನಡೆಸುತ್ತಿತ್ತು.

ಗ್ರಾಮ ಸ್ವರಾಜ್ಯದ ಕನಸು ಕಂಡಿತ್ತು ಈ ಬಳಗ. ಇದಕ್ಕಾಗಿ ಊರಿನಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿತು. ಹುಬ್ಬಳ್ಳಿ ಧಾರವಾಡದಿಂದ ವಿಷಯತಜ್ಞರನ್ನು ಕರೆಸಿ ಭಾಷಣ, ಚರ್ಚಾಗೋಷ್ಠಿ, ವಿಚಾರ ಸಂಕಿರಣ ನಡೆಸಿತು. ಇದರ ಫಲವಾಗಿಯೇ ಮಹಾತ್ಮಾ ಗಾಂಧೀಜಿಯವರ ಚರಕ ಸಂಸ್ಕೃತಿಯನ್ನು ಇಂದಿಗೂ ಇಲ್ಲಿ ಕಾಣಬಹುದು. 

ಮನೆಯೊಂದರ ಛಾವಣಿಯ ಒಂದು ಕೋಣೆಯಲ್ಲಿ ಚಿಮಣಿಯ ಬೆಳಕಿನಲ್ಲಿ ವಾಚನಾಲಯವನ್ನು ಪ್ರಾರಂಭಿಸಲಾಯಿತು. ಸ್ವಂತ ಕಟ್ಟಡದ ಅವಶ್ಯಕತೆ ಮನಗಂಡ ಬಳಗ ರೈತಸಂಘ ಚಳವಳಿಯ ನೇತಾರ ವಿಭಾಗೀಯ ಅಧಿಕಾರಿಯಾಗಿದ್ದ ಟಿ.ಜಿ.ರಾಮಕೃಷ್ಣ ಅವರ ಮೂಲಕ ಪಂಚಾಯಿತಿಯ ಪಕ್ಕದ ಖುಲ್ಲಾ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಪಡೆಯುವಲ್ಲಿ ಯಶಸ್ವಿಯಾಗಿ 1964ರಲ್ಲಿ ಗ್ರಂಥಾಲಯ ಆರಂಭ ಗೊಂಡಿತು. ಆ ದಿನ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ. ಗ್ರಾಮಕ್ಕೆ ಸರಿಯಾದ ರಸ್ತೆಯೇ ಇಲ್ಲದ ಆ ದಿನಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ, ಪ್ರಸಿದ್ಧ ಎಂಜಿನಿಯರ್‌ಗಳನ್ನು ಅತಿಥಿಯಾಗಿ ಆಮಂತ್ರಿಸಿದ್ದು ವಿಶೇಷ.

ಗ್ರಂಥಾಲಯಕ್ಕೆ ಅನುವಾದವರು
ಅನೇಕ ಜನ ಗ್ರಂಥಾಲಯದ ಅಭಿವೃದ್ಧಿಗೆ ನೆರವಾಗಿದ್ದಾರೆ. ಜ್ಞಾನೋದಯ ವಾಚನಾಲಯದ ಮೊದಲ ಗೌರವ ಕಾರ್ಯದರ್ಶಿಗಳಾಗಿದ್ದ ಪು.ರಾ. ಜಾಕೋಜಿ ಮಾಸ್ತರ ತಮ್ಮ ವೇತನದ ಕೆಲ ಭಾಗವನ್ನು ವಾಚನಾಲಯಕ್ಕೆ ಮೀಸಲಾಗಿಟ್ಟಿದ್ದರು. ಶಾಲೆಯನ್ನು ಬಿಟ್ಟರೆ ತಮ್ಮ ಜೀವನದ ಹೆಚ್ಚು ಕಾಲವನ್ನು ಅವರು ಕಳೆದದ್ದು ಈ ವಾಚನಾಲಯದಲ್ಲಿಯೇ. ಅನೇಕ ಮಂದಿ ಶಿಕ್ಷಕರು ಸೇರಿದಂತೆ ನೂರಾರು ಮಂದಿ ಇದಕ್ಕಾಗಿ ಶ್ರಮಿಸಿದರು.

ವಾಚನಾಲಯಕ್ಕೆ ನಿರಂತರ ಬಂಡವಾಳ ಬೇಕು. ಆದರೆ ಅದರ ಆದಾಯ ಶೂನ್ಯವಾಗಿತ್ತು. ಇದರಿಂದಾಗಿ 1966ರಲ್ಲಿ ವಾಚನಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಆ ವರ್ಷ ಮಳೆ ಬೆಳೆ ಚೆನ್ನಾಗಿತ್ತು. ಜೋಳದ ಫಸಲು ಬಂಪರ್ ಆಗಿತ್ತು. ಆ ಸಮಯದಲ್ಲಿ ಅಲ್ಲಿಯ ಕೆಲವು ಮುಖಂಡರು ಜೋಳಿಗೆ ಹಾಕಲು ನಿರ್ಧರಿಸಿದರು. ಗ್ರಂಥಾಲಯ ಉಳಿಸುವ ಪಣತೊಟ್ಟು ಮನೆ ಮನೆ ಸುತ್ತಿ ಜೋಳ ಸಂಗ್ರಹಿಸಿದರು.

ಚೀಲಕ್ಕೆ 80 ರೂಪಾಯಿಯಂತೆ ಸಂಗ್ರಹಿಸಿದ ಜೋಳ ಮಾರಿ 10 ಸಾವಿರ ರೂಪಾಯಿ ಸಂಗ್ರಹಿಸಿದ್ದರು. ಆ ಹಣದಿಂದ ಅದೇ ವರ್ಷ ವಾಚನಾಲಯದ ಮೇಲಿನ ಅಂತಸ್ತಿನ ಕಟ್ಟಡ ಕಟ್ಟಿಸಿ ಕೆಳಗಿನ ಕಟ್ಟಡವನ್ನು ಬ್ಯಾಂಕ್‌ ಒಂದಕ್ಕೆ 300ರೂ ಬಾಡಿಗೆ ನೀಡಿದರು. ಆ ಹಣದಿಂದ ವಾಚನಾಲಯ ನಿರಂತರ ನಡೆಯಬೇಕೆಂಬುದು ಅವರ ಆಶಯವಾಗಿತ್ತು. ನಿರಂತರ ಪ್ರಯತ್ನದ ನಂತರ 1970ರಲ್ಲಿ ಸರ್ಕಾರದಿಂದ 300 ರೂಪಾಯಿ ಅನುದಾನ ದೊರೆಯಿತು.

ಅಪರೂಪದ ಪತ್ರಿಕೆಗಳ ಸಂಗ್ರಹ
ನಾಲ್ಕು ಸಾವಿರಕ್ಕಿಂತಲೂ ಹೆಚ್ಚು ಅಪರೂಪದ ಪುಸ್ತಕ, ಪತ್ರಿಕೆಗಳು ಈ ವಾಚನಾಲಯದಲ್ಲಿವೆ. ಹಳೆಯ ಮಾಸಪತ್ರಿಕೆಗಳ ಸಂಗ್ರಹವೇ ಇಲ್ಲಿದೆ. ಹಲವಾರು ಪತ್ರಿಕಾ ಸಂಪಾದಕರು ತಮ್ಮ ಹಳೆಯ ಪತ್ರಿಕೆಗಳಿಗಾಗಿ ಈ ಗ್ರಂಥಾಲಯ ಸಂಪರ್ಕಿಸಿ ಪಡೆದುಕೊಂಡಿದ್ದಾರೆ. ಹಾಗೇ ಕರ್ನಾಟಕ ಸರ್ಕಾರ ಗ್ರಂಥಾಲಯ ಕಾನೂನುಗಳನ್ನು ಜಾರಿ ತರುವಾಗ, ಶುಲ್ಕ ಹೇರುವಾಗ ಈ ಗ್ರಂಥಾಲಯದ ಅಭಿಪ್ರಾಯ ಸಂಗ್ರಹಿಸಿದ್ದು ಇಲ್ಲಿನ ಪದ್ಧತಿಗಳನ್ನು ಅಭ್ಯಸಿಸಿದ್ದೂ ವಿಶೇಷ.

ವಾಚನಾಲಯದ ಸ್ಥಿತಿಗತಿ
ಜನರ ಬೌದ್ಧಿಕ ಮಟ್ಟ ಹೆಚ್ಚಿಸುವಲ್ಲಿ, ಜ್ಞಾನದ ಆಂದೋಲನ ರೂಪಿಸುವಲ್ಲಿ ಕಾರಣವಾಗಿದ್ದ ವಾಚನಾಲಯದ ಇಂದಿನ ಸ್ಥಿತಿ ಶೋಚನೀಯ. 2013 ರಲ್ಲಿ ಜಿಲ್ಲಾ ಪಂಚಾಯಿತಿ  ಅಧ್ಯಕ್ಷರಾಗಿದ್ದ ಅಡಿವೆಪ್ಪ ಮನಮಿಯವರು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ
1 ಲಕ್ಷ ನೀಡಿದ ಮೇಲೆ ಇದು ಹೊಸ ಪೀಠೋಪಕರಣಗಳನ್ನು ಕಂಡಿದೆ. ಆದರೆ ಕಟ್ಟಡಕ್ಕೆ ಜೀರ್ಣೋದ್ಧಾರದ ಅವಶ್ಯಕತೆ ಇದೆ.

ಸರ್ಕಾರದಿಂದ ಬರುತ್ತಿದ್ದ ರೂ. 10 ಸಾವಿರ ವಾರ್ಷಿಕ ಅನುದಾನವೂ ಎರಡು ವರ್ಷಗಳಿಂದ ನಿಂತು ಹೋಗಿದೆ.
ಗೆಳೆಯರ ಬಳಗದ ಕುಮಶೀಕರ ಮಾಸ್ತರ, ಹೂಲಿಯವರು, ಗದಿಗೆಪ್ಪಗೌಡ್ರು, ಭಾಂಡಲಕರವರು ಇಳಿವಯಸ್ಸಿನಲ್ಲಿದ್ದು, ಉಳಿದವರು ಈಗಿಲ್ಲ. ಇನ್ನು ಯುವಕರು ಗ್ರಂಥಾಲಯ ರಕ್ಷಣೆಗೆ ಮುಂದೆ ಬರುತ್ತಿಲ್ಲ.

ಸಾಲದು ಎಂಬುದಕ್ಕೆ ಸರ್ಕಾರ ಇದೇ ಗ್ರಂಥಾಲಯದ ಕೂಗಳತೆಯಲ್ಲಿ ಮತ್ತೊಂದು ಗ್ರಂಥಾಲಯ ಮಂಜೂರು ಮಾಡಿದ್ದು ಈ ಗ್ರಂಥಾಲಯವನ್ನು ಯಾರೂ ಕೇಳದಂತಾಗಿದೆ. 2 ದಿನಪತ್ರಿಕೆಗಳು, 3 ವಾರಪತ್ರಿಕೆಗಳು, 5 ಮಾಸಪತ್ರಿಕೆಗಳು ಮಾತ್ರ ಈ ಗ್ರಂಥಾಲಯಕ್ಕೆ ನಿರಂತರ ಬರುತ್ತಿವೆ. ಗ್ರಂಥಪಾಲಕನ ವೇತನ, ನಿರ್ವಹಣಾ ವೆಚ್ಚಕ್ಕೆ ಕೆಳಗಿನ ಕಟ್ಟಡದ ಬಾಡಿಗೆ ಹಣ ರೂ. 3ಸಾವಿರವನ್ನು ನೆಚ್ಚಿಕೊಳ್ಳುವಂತಾಗಿದೆ. ಗ್ರಂಥಪಾಲಕರಾದ ದೇವರಡ್ಡಿ ಕಿತ್ತೂರ ಕಡಿಮೆ ವೇತನದಲ್ಲೂ ಗ್ರಂಥಾಲಯ ಉಳಿಸಿಕೊಳ್ಳುವಲ್ಲಿ ಹೆಣಗುತ್ತಿದ್ದಾರೆ. ಈ ಎಲ್ಲ ಸಂದಿಗ್ಧ ಪರಿಸ್ಥಿತಿ ನಡುವೆಯೂ ಗ್ರಂಥಾಲಯದ ರೂ. 62 ಸಾವಿರ ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಇಟ್ಟಿದ್ದಾರೆ.

ಸರ್ಕಾರ ಈ ಪುರಾತನ, ಐತಿಹಾಸಿಕ ಗ್ರಂಥಾಲಯ ವನ್ನು ಕಣ್ತೆರೆದು ನೋಡಬೇಕಿದೆ. ಗ್ರಾಮಸ್ವರಾಜ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಈ ಗ್ರಂಥಾಲಯವನ್ನು ಸಂರಕ್ಷಿಸುವಲ್ಲಿ ಕ್ರಮ ಕೈಗೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT