ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Analysis | ದೆಹಲಿಯಲ್ಲಿ ಹೊಸ ಸಿದ್ಧಾಂತದ ತಂಗಾಳಿ

Last Updated 11 ಫೆಬ್ರುವರಿ 2020, 7:31 IST
ಅಕ್ಷರ ಗಾತ್ರ

(ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮೊದಲಬಾರಿಗೇ ಗಮನಾರ್ಹ ಸಾಧನೆ ಮಾಡಿದ್ದ ಅರಂವಿದ ಕೇಜ್ರಿವಾಲ್‌ ಅವರ ಕುರಿತು ಡಿ. 9, 2013ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ಲೇಖನ)

ಹೌದು, 2013ರ ಕೊನೆಯ ಚುನಾವಣೆಗಳು ಅಪರಿಮಿತ ಕುತೂಹಲ, ನವ–ನವೀನ ತಂತ್ರ, ಬಗೆ–ಬಗೆಯ ಲೆಕ್ಕಾಚಾರ­ಗಳ ಆಗರ. ಫಲಿತಾಂಶ ಹೊರಹೊಮ್ಮಿದ ಮೇಲೆ ದೆಹಲಿಯ ಚಳಿಗಾಲದ ಮುಂಜಾವಿನಲ್ಲೂ ಸ್ವಾಗತಾರ್ಹವಾದ ಹೊಸ ಸಿದ್ಧಾಂತದ ಹಿತವಾದ ಗಾಳಿಯೊಂದು ಬೀಸಿದೆ.


ರಾಜಸ್ತಾನ, ಮಧ್ಯ ಪ್ರದೇಶ ಮತ್ತು ಛತ್ತೀಸಗಡದ ಮತದಾರರು ತಮ್ಮ ಮುಂದೆ ನಡೆದ ರಾಜಕೀಯ ಸ್ಪರ್ಧೆಯಲ್ಲಿ ತಮ್ಮದೇ ಆದ ತೀರ್ಪಿನ ಭಾಷ್ಯವನ್ನು ಬರೆದು ತಮ್ಮ ನಿರೀಕ್ಷೆಗಳಿಗೆ ಧ್ವನಿ ನೀಡಿದ್ದಾರೆ. 2014ರ ಲೋಕಸಭಾ ಚುನಾವಣೆ ಸಮರದ ದಿಕ್ಸೂಚಿಯೂ ಅದರಲ್ಲಿ ಮೂಡಿದೆ.

ಭಾನುವಾರದ ತೀರ್ಪು ಹಲವು ಸಂದೇಶಗಳನ್ನು ನೀಡಿದೆ. ಮೊದಲನೆಯದಾಗಿ, ಕೆಲಸ ಮಾಡಿದ ಸರ್ಕಾರಗಳಿಗೆ ಮತದಾರರು ಬೆನ್ನು ತಟ್ಟಿದ್ದಾರೆ. ಎರಡನೆಯದಾಗಿ, ಕೆಲಸ ಮಾಡದವರಿಗೆ ತಕ್ಕ ಪಾಠವನ್ನೇ ಕಲಿಸಿದ್ದಾರೆ. ಮೂರನೆಯದಾಗಿ, ರಾಜಕಾರಣದಲ್ಲೂ ಸಿದ್ಧಾಂತಗಳಿಗೆ, ಆದರ್ಶಗಳಿಗೆ, ಪರ್ಯಾಯ ವ್ಯವಸ್ಥೆಗೆ ಅವಕಾಶವಿದೆ ಎನ್ನುವುದೂ ವೇದ್ಯವಾಗಿದೆ.

ನಾಲ್ಕು ರಾಜ್ಯಗಳ ಚುನಾವಣೆಗಳ ಪೈಕಿ ದೆಹಲಿ ಸಮರ ಹಲವು ಕಾರಣಗಳಿಗಾಗಿ ಹೆಚ್ಚಿನ ಗಮನ ಸೆಳೆದಿತ್ತು. ಅದು ರಾಜಧಾನಿ ನಗರ. ಅಲ್ಲಿದ್ದ ಸರ್ಕಾರ ಮೂರು ಅವಧಿಯನ್ನು ಯಶಸ್ವಿಯಾಗಿ ಪೂರೈಸಿತ್ತು. 15 ವರ್ಷಗಳ ಹಳೆಯದಾದ ಸರ್ಕಾರದ ವಿರುದ್ಧ ಎದ್ದಿದ್ದ ಆಡಳಿತ ವಿರೋಧಿ ಅಲೆಯನ್ನು ಯಶಸ್ಸಿನ ಮೆಟ್ಟಿಲಾಗಿ ಬಳಸಿಕೊಳ್ಳಲು ಬಲಿಷ್ಠ ವಿರೋಧ ಪಕ್ಷವೂ ಹವಣಿಸಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಹೊಸ ರಾಜಕೀಯ ಶಕ್ತಿ ಪ್ರವೇಶ ಮಾಡಿದ್ದು ಕದನ ಕುತೂಹಲ ಹೆಚ್ಚುವಂತೆ ಮಾಡಿತ್ತು. ಭ್ರಷ್ಟಾಚಾರ ಮುಕ್ತ ಆಡಳಿತದ ಕನಸನ್ನು ಆ ಪಕ್ಷ ತೇಲಿ ಬಿಟ್ಟಿತ್ತು. ಆಮ್‌ ಆದ್ಮಿ ಪಕ್ಷ (ಎಎಪಿ), ತಾನು ಇತರ ರಾಜಕೀಯ ಪಕ್ಷಗಳಂತಲ್ಲ ಎನ್ನುವುದನ್ನು ಬಲವಾಗಿ ಪ್ರತಿಪಾದಿಸಿತ್ತು.

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಸೆಣಸಾಟ ಏರ್ಪಟ್ಟಾಗ, ಮದಗಜಗಳ ಮಧ್ಯೆ ಎಎಪಿ ಯುದ್ಧ ಭೂಮಿಗೆ ಧುಮುಕಿತು. ಮುಖ್ಯ ವಾಹಿನಿಯಲ್ಲಿದ್ದ ಎರಡೂ ಪಕ್ಷಗಳನ್ನು ಬಲವಾಗಿ ವಿರೋಧಿಸಿದ ಎಎಪಿ, ಆ ಎರಡೂ ಪಕ್ಷಗಳಿಗಿಂತ ಭಿನ್ನವಾಗಿರುವ ತನ್ನಿಂದ ಮಾತ್ರ ಭಿನ್ನವಾದ ಆಡಳಿತ ನೀಡಲು ಸಾಧ್ಯ ಎಂದು ಪ್ರತಿಪಾದಿಸಿತು.

ಅಭ್ಯರ್ಥಿಗಳ ಆಯ್ಕೆ, ಪ್ರಚಾರ ಮತ್ತು ಚುನಾವಣೆ ವಿಷಯ.. ಪ್ರತಿಯೊಂದರಲ್ಲೂ ವಿಭಿನ್ನ ಹಾದಿ ಹಿಡಿದ ಎಎಪಿ, ಆ ದೃಷ್ಟಿಯಲ್ಲಿ ರಾಜಕೀಯಕ್ಕೆ ಹೊಸ ವ್ಯಾಖ್ಯಾನ ನೀಡಿತು. ಪ್ರಮುಖ ಪಕ್ಷಗಳು ತಮ್ಮ ತಂತ್ರಗಾರಿಕೆ­ಯನ್ನು ಮರು ಅವಲೋಕನ ಮಾಡುವಂತಹ ಅನಿ­ವಾರ್ಯತೆಗೆ ನೂಕಿತು. ಎರಡು ಸಮಬಲದ ಸ್ಪರ್ಧಿಗಳಲ್ಲಿ ತೂರಿ­ಕೊಂಡ ಎಎಪಿ, ಪ್ರಧಾನ ವಿರೋಧ ಪಕ್ಷವಾಗಿ ಹೊರಹೊಮ್ಮುವ ಮಟ್ಟಿಗೆ ಬೆಳೆದು ನಿಂತಿತು.

ರಾಜಧಾನಿಯಲ್ಲಿ ಬಿಜೆಪಿಯೇ ಸರ್ಕಾರವನ್ನು ರಚಿಸಬಹುದು. ಆದರೆ, ಎಎಪಿಯೇ ಹೆಚ್ಚಿನ ಗಮನ ಸೆಳೆಯಲಿದೆ ಎನ್ನುವಲ್ಲಿ ಯಾವ ಸಂಶಯವೂ ಇಲ್ಲ. ದೆಹಲಿಯಲ್ಲಿ ನಡೆದ ಬೆಳವಣಿಗೆ­ಗಳು, ರಾಜಕೀಯ ಜಗತ್ತಿನಲ್ಲಿ ಇನ್ನೂ ಸಿದ್ಧಾಂತಗಳಿಗೆ ಸ್ಥಾನ ಇದೆ ಎನ್ನುವುದನ್ನು ಸಂದೇಹಕ್ಕೆ ಎಡೆ ಇಲ್ಲದಂತೆ ನಿರೂಪಿಸಿವೆ. ಆದರ್ಶದ ರಾಜಕೀಯ ಬಯಸುವವರಿಗೆ ಕಾರ್ಮೋಡದ ಅಂಚಿನಲ್ಲಿ ಬೆಳ್ಳಿಗೆರೆ ಕಂಡಿರಲಿಕ್ಕೂ ಸಾಕು.

ಅಭಿಯಾನದ ಸಮಯದಲ್ಲಿ ಹೊಸ ‘ಚಿಂತಕ’ ಪ್ರಯೋಗಿಸಿದ ತಂತ್ರಗಳು ಹೇಗಿದ್ದವೆಂದರೆ ಬಲವಂತವಾಗಿ ಪ್ರತಿಕ್ರಿಯಿಸುವ ಅನಿವಾರ್ಯತೆ ಉಳಿದ ಪಕ್ಷಗಳಿಗೆ ಬಂದೊದಗಿತ್ತು. ಅಂದಹಾಗೆ, ಎಎಪಿಯ ನೈಜ ಪರೀಕ್ಷೆ ಈಗ ಆರಂಭವಾಗಲಿದೆ. ಪ್ರಧಾನ ವಿರೋಧ ಪಕ್ಷವಾಗಿ ಅದರ ಕಾರ್ಯನಿರ್ವಹಣೆ ಮೇಲೆ ಎಲ್ಲರೂ ಹದ್ದುಗಣ್ಣು ಇಡಲಿದ್ದಾರೆ.

ತನ್ನ ರೆಕ್ಕೆಗಳನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿರುವ ಎಎಪಿ, ಲೋಕಸಭಾ ಚುನಾವಣೆಯಲ್ಲೂ ಇಂತಹದ್ದೇ ಪ್ರದರ್ಶನ ನೀಡಬಹುದು ಎನ್ನುವ ಭರವಸೆ ಮೂಡಿಸಿದೆ. ಎಎಪಿಯ ಈ ಚಮತ್ಕಾರ ಒಂದೇ ರಾಜ್ಯಕ್ಕೆ ಸೀಮಿತವೇ ಅಥವಾ ದೇಶದ ರಾಜಕೀಯ ಕ್ಯಾನ್ವಾಸ್‌ನಲ್ಲೂ ತನ್ನ ಬಲವನ್ನು ಪ್ರದರ್ಶಿಸಲಿದೆಯೇ ಎನ್ನುವುದಕ್ಕೆ ಮುಂದಿನ ಕೆಲವು ತಿಂಗಳುಗಳಲ್ಲಿ ಉತ್ತರ ಸಿಗಲಿದೆ.

ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳ ಬಿಜೆಪಿ ಸರ್ಕಾರಗಳು ಮೂರನೇ ಅವಧಿಗೆ ಜನಾದೇಶ ಪಡೆದಿವೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಜಯಭೇರಿಯನ್ನೇ ಬಾರಿಸಿದರೆ, ಛತ್ತೀಸ್‌ಗಡದಲ್ಲಿ ತೆವಳುತ್ತಾ ಬಂದು ಅಧಿಕಾರದ ಗದ್ದುಗೆ ತಲುಪಿದೆ. ಮಧ್ಯಪ್ರದೇಶದ ಯಶಸ್ಸಿಗೆ ಅಲ್ಲಿನ ಸರ್ಕಾರ ಮತ್ತು ಮುಖ್ಯಮಂತ್ರಿ ಗಳಿಸಿದ ಜನಮನ್ನಣೆಯೇ ಕಾರಣ ಎಂದು ವ್ಯಾಖ್ಯಾನಿಸಲಾಗಿದೆ.

ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಸಣ್ಣ ಬಣವಾಗಿ ಉಳಿದಿದೆ. ಸ್ಥಳೀಯ ಮಟ್ಟದ ಪ್ರಶ್ನಾತೀತ ನಾಯಕನನ್ನು (ಶಿವರಾಜ್‌ ಸಿಂಗ್‌ ಚೌಹಾಣ್‌) ಅವಲಂಬಿಸಿದ್ದು ಬಿಜೆಪಿಗೆ ಫಲ ನೀಡಿದೆ. ಕಾಂಗ್ರೆಸ್‌ ತನ್ನ ನಾಯಕನನ್ನಾಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪಟ್ಟ ಕಟ್ಟಿದಾಗ ತುಂಬಾ ತಡವಾಗಿತ್ತು. ಜ್ಯೋತಿರಾದಿತ್ಯ ಸಹ ಸ್ಥಳೀಯ ನಾಯಕನೆನಿಸದೆ ದೆಹಲಿ ವ್ಯಕ್ತಿಯಾಗಿ ಗೋಚರಿಸಿದರು.

ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಾಧ್ಯತೆ ಗೋಚರಿಸಿತ್ತು. ಬುಡಕಟ್ಟು ಪ್ರದೇಶದಲ್ಲಿ ರಾಜಕೀಯ ವಾತಾವರಣ ಬದಲಾದಂತೆ ಕಾಣುತ್ತಿತ್ತು. ಕಾಂಗ್ರೆಸ್‌ ನಾಯಕನ ಹತ್ಯೆ ಪ್ರಕರಣ ರಾಜ್ಯದಲ್ಲಿ ಆ ಪಕ್ಷದ ಪರ ಅನುಕಂಪದ ಅಲೆ ಎಬ್ಬಿಸುವ ವಿಶ್ವಾಸ ಇತ್ತು. ಇದೇ ಕಾರಣಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಸ್ಪರ್ಧೆ ಅಷ್ಟೊಂದು ತುರುಸಿನಿಂದ ಕೂಡಿತ್ತು.

ದಕ್ಷಿಣದ ಬುಡಕಟ್ಟು ಭಾಗದಲ್ಲಿ ಕಳೆದುಕೊಂಡ ಸೀಟುಗಳನ್ನು, ರಾಜ್ಯದ ಕೇಂದ್ರ ಮತ್ತು ಉತ್ತರದ ಭಾಗಗಳಲ್ಲಿ ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಜಯದಲ್ಲೂ ಸ್ಥಳೀಯ ನಾಯಕರೇ ಮಿಂಚಿದ್ದಾರೆ. ಬಿಜೆಪಿಯ ಎಲ್ಲ ಬಣಗಳು ರಮಣ್‌ ಸಿಂಗ್‌ ನಾಯಕತ್ವದಲ್ಲಿ ಒಂದಾಗಿದ್ದರೆ, ಕಾಂಗ್ರೆಸ್‌ನ ಛಿದ್ರವಾಗಿದ್ದ ಬಣಗಳನ್ನು ಒಗ್ಗೂಡಿಸುವಲ್ಲಿ ಅಜಿತ್‌ ಜೋಗಿ ಸಫಲರಾಗಲಿಲ್ಲ.

ರಾಜಸ್ತಾನ ಮತ್ತು ದೆಹಲಿ ರಾಜ್ಯಗಳಲ್ಲಿ ಎದ್ದ ಆಡಳಿತದ ವಿರೋಧಿ ಅಲೆಯಲ್ಲಿ ತೇಲಲು ಸಾಧ್ಯವಾಗದೆ, ಕಾಂಗ್ರೆಸ್‌ ಸೋಲಿನ ಮಡುವಿನಲ್ಲಿ ಮುಳುಗಿದೆ. ಕೇಂದ್ರದ ಯುಪಿಎ ಸರ್ಕಾರ ವಿರುದ್ಧದ ಅಸಮಾಧಾನ ಒಂದೆಡೆಯಾದರೆ, ನಿಷ್ಕ್ರಿಯವಾಗಿದ್ದ ಸ್ಥಳೀಯ ಸರ್ಕಾರದ ಮೇಲಿನ ಸಿಟ್ಟು ಮತ್ತೊಂದೆಡೆ.

ಜನರ ಅಸಮಾಧಾನ ಯಾವ ಪ್ರಮಾಣದಲ್ಲಿತ್ತು ಎನ್ನುವುದು ಚುನಾವಣೆಯಲ್ಲಿ ವ್ಯಕ್ತವಾಗಿದೆ. ರಾಜಸ್ತಾನದಲ್ಲಿ ಮತದಾರರ ಆಕ್ರೋಶವನ್ನೇ ಬಿಜೆಪಿ ಬಂಡವಾಳ ಮಾಡಿಕೊಂಡಿದೆ. ದೆಹಲಿಯಲ್ಲಿ ಅದರ ಲಾಭ ಎಎಪಿ ಮತ್ತು ಬಿಜೆಪಿಗೆ ಸಮವಾಗಿ ತಟ್ಟಿದೆ. ರಾಜಧಾನಿಯಲ್ಲಿ ಬಿಜೆಪಿ ‘ಮಾಯಾ ಸಂಖ್ಯೆ’ಗೆ ಹತ್ತಿರವಾಗಲು ಅದರ ಸಾಂಪ್ರದಾಯಿಕ ಮತ ಬ್ಯಾಂಕ್‌ ಸಹ ಕಾರಣವಾಗಿದೆ.

ಭಾನುವಾರದ ತೀರ್ಪು ಹಲವು ಮಹತ್ವದ ಗುರುತುಗಳನ್ನು ಹಾಕಿದೆ. ಜನಮನ್ನಣೆ ಗಳಿಸಿದ ರಾಜ್ಯಮಟ್ಟದ ನಾಯಕರು ಚಮತ್ಕಾರ ಮಾಡಬಲ್ಲರು ಎನ್ನುವುದು ನಿರೂಪಿತವಾಗಿದೆ. ಸಿದ್ಧಾಂತಗಳಿಗೆ ವ್ಯವಸ್ಥಿತವಾದ ಚೌಕಟ್ಟು ಸಿಕ್ಕಾಗ ಅದು ಸಹ ಮತದಾರರನ್ನು ಸೆಳೆಯಬಲ್ಲುದು ಎಂಬುದೂ ಸಿದ್ಧವಾಗಿದೆ. ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ವ್ಯಕ್ತವಾದ ಸಂದೇಶ ಸ್ಪಷ್ಟವಾಗಿದೆ. ಕಾಂಗ್ರೆಸ್‌ ಅತ್ಯಂತ ಹೀನಾಯ ಸೋಲು ಅನುಭವಿಸಿದೆ.

ಒಳ್ಳೆಯ ಪ್ರದರ್ಶನ ನೀಡುವ ಸಾಮರ್ಥ್ಯವಿದ್ದರೂ ಕಾಂಗ್ರೆಸ್‌ ಮಣ್ಣು ಮುಕ್ಕಿರುವುದು, ಈ ರಾಜ್ಯಗಳಲ್ಲಿ ಅನುಸರಿಸಬೇಕಾದ ತಂತ್ರಗಳ ಕುರಿತು ಪುನರವಲೋಕನಕ್ಕೆ ಅವಕಾಶ ಒದಗಿಸಿದೆ. ಕಾಂಗ್ರೆಸ್‌ನ ‘ಹೈಕಮಾಂಡ್‌’ ಸಂಸ್ಕೃತಿಗೆ ತೆರೆ ಎಳೆದು, ಸ್ಥಳೀಯ ನಾಯಕತ್ವಕ್ಕೆ ಬಲ ತುಂಬಬೇಕಿದೆ. ಬಿಜೆಪಿ ಗೆದ್ದಿರುವ ರಾಜ್ಯಗಳೆಲ್ಲ ಅದರ ಶಕ್ತಿಕೇಂದ್ರಗಳಾಗಿವೆ. ಮುಂದಿನ ಲೋಕಸಭಾ ಚುನಾವಣೆ­ಯಲ್ಲೂ ಇಂತಹದ್ದೇ ಫಲಿತಾಂಶ ಹೊರಹೊಮ್ಮಬಹುದು ಎಂದು ನಿರೀಕ್ಷಿಸಿದರೆ ಕೈಸುಟ್ಟುಕೊಂಡಂತೆ.

ಬಿಜೆಪಿ, ತನ್ನ ಪ್ರಧಾನ ಮಂತ್ರಿ ಅಭ್ಯರ್ಥಿಗೆ ಗೆಲುವಿನ ಎಲ್ಲ ‘ಕ್ರೆಡಿಟ್‌’ ಕೊಟ್ಟಿದೆ. ಸ್ಥಳೀಯ ನಾಯಕತ್ವ ಮತ್ತು ಇತರ ವಿಷಯಗಳು ಅಲ್ಲಿ ಗೌಣವಾಗಿವೆ. ವಾಯವ್ಯ ‘ಮಾರುತ’ ಬಿಜೆಪಿ ಪಾಲಿಗೆ ಉತ್ತಮ ಮಳೆಯನ್ನು ತಂದಿದೆ ನಿಜ. ಆದರೆ, ಆಗ್ನೇಯ ಭಾಗದ ಸಂಭಾವ್ಯ ಬರದ ಬಗೆಗೆ ಅದು ತುರ್ತಾಗಿ ಆಲೋಚಿಸಬೇಕಿದೆ!

(ಲೇಖಕರು: ಜೈನ್‌ ವಿಶ್ವವಿದ್ಯಾಲಯದ ಸಹ ಕುಲಪತಿ, ಲೋಕನೀತಿ ನೆಟ್‌ವರ್ಕ್‌ನ ರಾಷ್ಟ್ರೀಯ ಸಮನ್ವಯಕಾರರು ಮತ್ತು ರಾಜಕೀಯ ವಿಶ್ಲೇಷಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT