ನವದೆಹಲಿ (ಪಿಟಿಐ): ರಾಜಧಾನಿಯಲ್ಲಿ ಭಾನುವಾರ ಉಷ್ಣಾಂಶ ತೀವ್ರಮಟ್ಟಕ್ಕೆ ಏರಿಕೆಯಾಗಿದ್ದು, 45.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪಾಲಂ ವಿಮಾನ ನಿಲ್ದಾಣದಲ್ಲಿ 47.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು 62 ವರ್ಷಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ.
ಬಿಸಿಲಿನ ಝಳದಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಭಾನುವಾರ ಪದೇ ಪದೇ ವಿದ್ಯುತ್ ವ್ಯತ್ಯಯವಾಗಿ ಜನರು ಸೆಕೆಯಿಂದ ಪರಿತಪಿಸಿದರು. ಸೋಮವಾರ (ಜೂನ್ 9) ಕೂಡ ಉಷ್ಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
‘ನಗರದಲ್ಲಿ ಕಳೆದ ಐದು ವರ್ಷಗಳಲ್ಲಿ ಭಾನುವಾರದ ಉಷ್ಣಾಂಶ ಅತ್ಯಧಿಕವಾಗಿತ್ತು. ಶನಿವಾರ ಕೂಡ 44.9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಪಾಲಂ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಸೆಕೆಯ ಪ್ರಕೋಪ ಇನ್ನೂ ತೀವ್ರವಾಗಿತ್ತು. 1952ರ ನಂತರ ಇಲ್ಲಿ ಉಷ್ಣಾಂಶದ ಪ್ರಮಾಣ 47.8 ಡಿಗ್ರಿ ಸೆಲ್ಸಿಯಸ್‌ಗೆ ಮಟ್ಟಕ್ಕೆ ಏರಿಕೆ ಆಗಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ.
ಮಾಲ್‌ಗಳಿಗೆ ವಿದ್ಯುತ್ ಕಡಿತ
ದೆಹಲಿಯಲ್ಲಿ ರಾತ್ರಿ 10ರ ನಂತರ ಶಾಪಿಂಗ್ ಮಾಲ್‌ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸ ಲಾಗುವುದು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಭಾನುವಾರ ತಿಳಿಸಿದ್ದಾರೆ.
ವಿದ್ಯುತ್ ಪೂರೈಕೆ ಕುರಿತು ದೆಹಲಿಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಜಂಗ್ ಅವರು ವಿದ್ಯುತ್ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದಾರೆ. ವಿದ್ಯುತ್ ವ್ಯತ್ಯಯ ಉಂಟಾಗುವ ಬಗ್ಗೆ ಸಂಬಂಧಿಸಿದ ಪ್ರದೇಶಗಳ ಜನರಿಗೆ ಮುಂಚಿತವಾಗಿಯೇ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೂ ಅವರು ಸೂಚಿಸಿದ್ದಾರೆ.