ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಎಎಪಿ ಶಾಸಕರ ಬಂಧನ, ಬಿಡುಗಡೆ

ಸಿಸೋಡಿಯಾ ವಿರುದ್ಧ ದೂರು: ಪ್ರಧಾನಿ ಮುಂದೆ ಶರಣಾಗಲು ಅತಿಕ್ರಮ ಪ್ರವೇಶ
Last Updated 26 ಜೂನ್ 2016, 22:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವಿರುದ್ಧ ದೂರು ದಾಖಲಾಗಿರುವುದನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಶರಣಾಗಲು ಹೊರಟಿದ್ದ ಎಎಪಿಯ 52 ಶಾಸಕರನ್ನು ದೆಹಲಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.

ದೆಹಲಿ 7 ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಪ್ರಧಾನಿ ನಿವಾಸ ನಿಷೇಧಿತ ಪ್ರದೇಶವಾಗಿದೆ. ಅಲ್ಲಿಗೆ ಅತಿಕ್ರಮ ಪ್ರವೇಶ ಮಾಡಿದ ದೆಹಲಿಯ ಏಳು ಸಚಿವರೂ ಸೇರಿ ಎಎಪಿಯ 52 ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಧಾನಿ ನಿವಾಸಕ್ಕೆ ಇನ್ನೂ ಒಂದು ಕಿ.ಮೀ ಇದ್ದಂತೆಯೇ ಶಾಸಕರನ್ನು ಬಂಧಿಸಿ  ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ  ಕರೆದೊಯ್ಯಲಾಗಿತ್ತು. ನಂತರ ಅಲ್ಲಿಂದ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಎಎಪಿ ಶಾಸಕ ದಿನೇಶ್ ಮೋಹನಿಯಾ ಅವರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದರು. ಜತೆಗೆ ಮನೀಷ್‌ ಸಿಸೋಡಿಯಾ ಬೆದರಿಕೆ ಹಾಕಿದ್ದಾರೆ ಎಂದು ಇಲ್ಲಿನ ಗಾಝಿಪುರ್‌ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ಶನಿವಾರ ದೂರು ದಾಖಲಿಸಿದ್ದರು.

ಇದು ಎಎಪಿ ಶಾಸಕರ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಕುತಂತ್ರ ಎಂದು ಆರೋಪಿಸಿ, ಶಾಸಕರು ಪ್ರಧಾನಿ ಮುಂದೆ ಶರಣಾಗಲು ತೀರ್ಮಾನಿಸಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ.

ಬೆದರಿಕೆ: ವರ್ತಕರ ಆರೋಪ
ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ದೆಹಲಿಯ ಗಾಝಿಪುರ್‌ ಮಾರುಕಟ್ಟೆಗೆ ದಿಢೀರ್‌ ಭೇಟಿ ನೀಡಿ, ಅಲ್ಲಿನ ವ್ಯವಹಾರಗಳನ್ನು ಪರಿಶೀಲಿಸಿದ್ದರು. ದಾಳಿ ವೇಳೆ ಕೆಲವು ವ್ಯಾಪಾರಿಗಳು ಮತ್ತು ಸಿಸೋಡಿಯಾ ನಡುವೆ ವಾಗ್ವಾದ ನಡೆದಿತ್ತು.

ಮಾರುಕಟ್ಟೆಯಲ್ಲಿ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಆರೋಪದಡಿ ದಾಳಿ ನಡೆಸಲಾಗಿತ್ತು ಎಂದು ಸಿಸೋಡಿಯಾ ಹೇಳಿದ್ದರು. ಕೆಲವು ವ್ಯಾಪಾರಿಗಳು, ‘ಮನೀಷ್ ಸಿಸೋಡಿಯಾ ನಮಗೆ ಬೆದರಿಕೆ ಹಾಕಿದ್ದಾರೆ. ನಮ್ಮನ್ನು ಏನು ಬೇಕಾದರೂ ಮಾಡಬಹುದು’ ಎಂದು ದೂರು ದಾಖಲಿಸಿದ್ದರು.

** *** **
‘ನಾವು ಶರಣಾಗಲಷ್ಟೇ ನಿಮ್ಮ ಮನೆಗೆ ಬರುತ್ತಿದ್ದೆವು. ನಮ್ಮನ್ನು ಜೈಲಿಗೆ ಅಟ್ಟಲೇಬೇಕು ಎಂದು ನೀವು ನಿರ್ಧಿರಿಸಿದ್ದರೆ,  ನಾವೆಲ್ಲಾ ಒಟ್ಟಿಗೇ ಜೈಲಿಗೆ ಹೋಗಲು ಸಿದ್ಧರಿದ್ದೇವೆ’.
-ಮನೀಷ್ ಸಿಸೋಡಿಯಾ,
ದೆಹಲಿ ಉಪ ಮುಖ್ಯಮಂತ್ರಿ

** *** **
‘ದೆಹಲಿ ಜನ ಕೆಲಸ ಮಾಡುವ ಸಲುವಾಗಿ ಎಎಪಿಗೆ ಅಧಿಕಾರ ನೀಡಿದ್ದಾರೆ. ಅದನ್ನು ಬಿಟ್ಟು, ಎಎಪಿ ಶಾಸಕರು ಇವತ್ತು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವ ನಾಟಕ ಮಾಡಿದ್ದಾರೆ’.
-ಕಿರಣ್ ರಿಜಿಜು, 
ಕೇಂದ್ರ ಗೃಹಖಾತೆ ರಾಜ್ಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT