ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಪೊಲೀಸರಿಂದ ಕುಂದ್ರಾ ವಿಚಾರಣೆ

Last Updated 5 ಜೂನ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ತಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿದ ದೆಹಲಿ ಪೊಲೀಸರು ಬುಧವಾರ ಮಾಹಿತಿ ಪಡೆದರು.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪ ಹೊತ್ತಿರುವ ರಾಯಲ್ಸ್ ತಂಡ ಶ್ರೀಶಾಂತ್, ಅಜಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಅವರ ಜೊತೆಗಿನ ಒಪ್ಪಂದದ ಬಗ್ಗೆ ಪೊಲೀಸರು ವಿವರ ಪಡೆದುಕೊಂಡರು. ಲೋಧಿ ರಸ್ತೆಯಲ್ಲಿರುವ ದೆಹಲಿ ಪೊಲೀಸ್‌ನ ವಿಶೇಷ ಘಟಕ ಕಚೇರಿಗೆ ಬುಧವಾರ ಬೆಳಿಗ್ಗೆ ಬಂದು ಕುಂದ್ರಾ ವಿಚಾರಣೆಗೆ ಒಳಗಾದರು.

ಕೆಲವು ವಾರಗಳ ಹಿಂದೆ ಪೊಲೀಸರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕಾರ್ಯದರ್ಶಿ ಸಂಜಯ್ ಜಗದಾಳೆ ಮತ್ತು ಐಪಿಎಲ್ ಸಿಇಒ ಸುಂದರ್ ರಾಮನ್ ಅವರಿಂದ ಐಪಿಎಲ್ ತಂಡಗಳ ಮತ್ತು ಆಟಗಾರರ ನಡುವಿನ ಕರಾರು ಮತ್ತು ಒಪ್ಪಂದಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಕುಂದ್ರಾರಿಂದ ಮಾಹಿತಿ ಪಡೆಯುವ ವೇಳೆ ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಹಾಗೂ ಸಾಕ್ಷಿದಾರ ಆಗಿರುವ ಸಿದ್ಧಾರ್ಥ್ ತ್ರಿವೇದಿ ಕೂಡಾ ದೆಹಲಿ ಪೊಲೀಸ್‌ನ ವಿಶೇಷ ಘಟಕ ಕಚೇರಿಗೆ ಬಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾದರು.

ಶ್ರೀಶಾಂತ್ ಮತ್ತು ಇತರೆ 22 ಮಂದಿ ವಿರುದ್ಧ ದೆಹಲಿ ಪೊಲೀಸರು ಮೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ವೇಗಿ ಶ್ರೀಶಾಂತ್, ಚಾಂಡಿಲಾ ಅವರನ್ನು ಜೂನ್ 18ರ ವರೆಗೆ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 26 ಜನರನ್ನು ಬಂಧಿಸಿದ್ದಾರೆ. ವಿವಾಹ ಕಾರಣಕ್ಕಾಗಿ ಅಂಕಿತ್‌ಗೆ ಜೂನ್ 6ರ ವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ಕೇರಳದ ಆಟಗಾರ ಶ್ರೀಶಾಂತ್ ಗೆಳೆಯ ಅಭಿಷೇಕ್ ಶುಕ್ಲಾ ಅವರಿಗೆ ಜಾಮೀನು ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT